ಮಂಗಳವಾರ, ಜುಲೈ 9, 2013

ಪ್ಲಾಸ್ಟಿಕ್ ಎಂಬ ಪಾಷಾಣ



ವರ್ತಮಾನದ ಕಲುಷಿತ ಜಗತ್ತನ್ನು ಕಾಡುತ್ತಿರುವ ನೀರು ಮತ್ತು ಗಾಳಿಯ ಜೊತೆಗೆ ಕಳೆದ ಎರಡು ದಶಕಗಳ ಹಿಂದೆ ಮುಂಚೂಣಿಗೆ ಬಂದ ಪ್ಲಾಸ್ಟಿಕ್ ಕೈಚಿಲಗಳು ಮತ್ತು ಪೌಚ್ ಗಳು ( ಪಾಕೇಟ್)  ಹಾಗೂ ನೀರಿನ ಬಾಟಲುಗಳು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿವೆವೆ.
ಸರ್ವವು ಪ್ಲಾಸ್ಟಿಕ್  ಮಯವಾಗಿರುವ  ಈ ಜಗತ್ತಿನಲ್ಲಿ ನಾವು ತಿನ್ನುವ ಅನ್ನ, ಕುಡಿಯುವ ನೀರು, ಕಾಫಿ, ಚಹಾ ಮತ್ತು  ದಿನಸಿ ಅಂಗಡಿಗಳಿಂದ ತರುವ ಆಹಾರ ಪದಾರ್ಥಗಳು, ತರಕಾರಿ, ಮಾಂಸ, ಮೊಟ್ಟೆ, ಬ್ರೆಡ್, ಬಿಸ್ಕೆಟ್ ಹೀಗೆ ಎಲ್ಲವೂಗಳೊಂದಿಗೆ ಪ್ಲಾಸ್ಟಿಕ್ ವಸ್ತುಗಳು ತಳುಕು ಹಾಕಿಕೊಂಡು ನಮ್ಮ ಮನೆಗಳಿಗೆ ಜಮೆಯಾಗುತ್ತಿವೆ. ಮೇಲು ನೋಟಕ್ಕೆ ಸಾಮಾನುಗಳ ಸಾಗಾಣಿಕೆಗೆ ಪ್ಲಾಸ್ಟಿಕ್ ಕೈಚೀಲಗಳು  ಅತಿ ಸುಲಭ ವ್ಯವಸ್ಥೆ ಎಂದು ಅನಿಸಿದರೂ ಕೂಡ, ಪರಿಸರಕ್ಕೆ ಉಂಟು ಮಾಡುತ್ತಿರುವ ಹಾನಿ ಮಾತ್ರ ಅಗಣಿತವಾದುದು.


ಪ್ರತಿ ಮಳೆಗಾಲದ ದಿನಗಳಲ್ಲಿ ದೇಶದ ಮಹಾನಗರಗಳ ರಸ್ತೆಗಳು ಮಳೆನೀರಿನಿಂದ ತುಂಬಿ ತುಳುಕುತ್ತವೆ. ಒಳಚರಂಡಿ ಕಟ್ಟಿಕೊಂಡಿರುವುದು ಇದಕ್ಕೆ ಕಾರಣ ಎಂದು ಮಾಧ್ಯಮಗಳು ಬೊಬ್ಬಿರಿಯುತ್ತವೆ. ಜನಗಳು ಸಹ ಇದನ್ನು ನಂಬುತ್ತಾರೆ. ಮಳೆಗಾಲ ಎಂಬುವುದು ಹಿಂದೆಯೂ ಇತ್ತು, ಈಗಲೂ ಇದೆ. ಆದರೆ, ಎರಡು ದಶಕಗಳ ಹಿಂದೆ ಕಟ್ಟಿಕೊಳ್ಳದ ನಗರದ ಒಳಚರಂಡಿಗಳು ಇತ್ತೀಚೆಗೆ ಏಕೆ ಕಟ್ಟಿಕೊಳ್ಳುತ್ತಿವೆ? ಬಿದ್ದ ಮಳೆನೀರಿನ ಸುಗುಮ ಚಲನೆಗೆ ಅಡ್ಡಿಯಾಗಿರುವ ಅಂಶಗಳು ಏನು? ಎಂಬುದನ್ನು ಯಾರೂ ಗಹನವಾಗಿ ಚಿಂತಿಸುವುದಕ್ಕೆ ಹೊಗುವುದಿಲ್ಲ ಏಕೆಂದರೆ, ಮನೆಗೆ ಬೆಂಕಿ ಬಿದ್ದಾಗ ಮಾತ್ರ ಬಾವಿ ತೋಡುವ ಸಂಸ್ಕೃತಿಗೆ ನಾವು ಒಗ್ಗಿಕೊಂಡಿದ್ದೇವೆ. ಮುಚ್ಚಿರುವ ಚರಂಡಿಯ ಕಲ್ಲು ಚಪ್ಪಡಿಯನ್ನು ಪಕ್ಕಕ್ಕೆ ಸರಿಸಿ ನೋಡಿದರೆ, ಗಟಾರದ ತುಂಬಾ, ಗುಟ್ಕಾ ತಿಂದು ಬಿಸಾಡಿದ ಪಾಕೇಟ್ ಗಳು, ಚಹಾ, ಕಾಫಿ ಕುಡಿದು ಚೆಲ್ಲಿದ ಕಪ್ ಗಳು ಮತ್ತು ಹರಿದ ಪ್ಲಾಸ್ಟಿಕ್ ಕೈಚೀಲಗಳು ತುಂಬಿಕೊಂಡಿರುತ್ತವೆ.
ಹಿಂದೆ ನಮ್ಮ ಗಳ ನಡುವೆ ಬಳಕೆಯಲ್ಲಿದ್ದ ಪೇಪರ್ ಕವರ್ ಗಳಾಗಲಿ, ಹತ್ತಿ, ಅಥವಾ ಸೆಣಬಿನಿಂದ ತಯಾರಿಸಿದ ಕೈ ಚೀಲಗಳು, ಒಂದು ಬೆಸಿಗೆಯ ಕಾಲದಲ್ಲಿ ನಲುಗಿ, ಗೆದ್ದಲು ಹಿಡಿದು, ಮಳೆಗಾಲದಲ್ಲಿ ಕರಗಿ ಭೂಮಿಯಲ್ಲಿ ಲೀನವಾಗುತ್ತಿದ್ದವು. ಅತಿ ಸುಲಭದ ಬದುಕಿಗೆ ನಾವು  ಒಗ್ಗಿಕೊಂಡ ಫಲವಾಗಿ  ಬಳಸುತ್ತಿರುವ ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ ಕರಗಲು ಮುನ್ನೂರು ವರ್ಷಗಳು ಬೇಕು ಅಲ್ಲಿಯವರೆಗೆ ಈ ತಾಜ್ಯವನ್ನು ಜಗತ್ತು ಸಹಿಸಿಕೊಳ್ಳುವ ಬಗೆಯಾದರೂ ಹೇಗೆ? ಈ ದಿನ ಪ್ಲಾಸ್ಟಿಕ್ ಕೈ ಚೀಲಗಳು ಮತ್ತು ನೀರಿನ ಬಾಟಲ್ ಗಳು ಜಾಗತಿಕ ಪರಿಸರಕ್ಕೆ ಅತಿ ದೊಡ್ಡ ಅಪಾಯವನ್ನು ತಂದೊಡ್ಡಿವೆ. ಜಾಗತಿಕವಾಗಿ ಪ್ರತಿವರ್ಷ 500 ಬಿಲಿಯನ್ ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಶೇಖರವಾಗುತ್ತಿದೆ. 
ಅಮೇರಿಕಾದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದನ್ನು ಧೃಡಪಡಿಸಿರುವ ವಿಶ್ವಸಂಸ್ಥೆ 20009 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅತಿ ಮಹತ್ವ ಎನಿಸುವ ಅಂಕಿ ಅಂಶಗಳನ್ನು ಪ್ರಕಟಿಸಿದೆ. ವಾರ್ಷಿಕವಾಗಿ ಪ್ರತಿ ಅಮೇರಿಕನ್ ಪ್ರಜೆ 1200 ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುತ್ತಾನೆ ಎಂಧಿರುವ ಸಮೀಕ್ಷೆ, ಅಮೆರಿಕಾ ದೇಶವೊಂದರಲ್ಲಿ ವರ್ಷವೊಂದಕ್ಕೆ 380 ಬಿಲಿಯನ್ ಪ್ಲಾಸ್ಟಿಕ್ ಬ್ಯಾಗ್ ಗಳು ಬಳಕೆಯಾಗುತ್ತಿವೆ ಎಂದಿದೆ, ಪ್ಲಾಸ್ಟಿಕ್ ಚೀಲ ಮತ್ತು ಬಾಟಲ್ ಗಳ ತಯಾರಿಕೆಗಾಗಿ ಒಂದುಕೊಟಿ, ಹತ್ತು ಲಕ್ಷ ಬ್ಯಾರಲ್ ತೈಲ ಉಪಯೋಗಿಸಲ್ಪಡುತ್ತಿದೆ ಎಂದು ಲೆಕ್ಕ ಹಾಕಿದೆ. ಹೀಗೆ ಜಗತ್ತಿನಾದ್ಯಂತ ಜನರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು ಗಟಾರದ ಮೂಲಕ ನದಿ, ಕಾಲುವೆ ಸೇರಿ ಅಲ್ಲಿಂದ ನೇರವಾಗಿ ಸಮುದ್ರಕ್ಕೆ ಸೇರುತ್ತಿವೆ, ಕಡಲಿನಲ್ಲಿ ಮುಳಗದ ಅಥವಾ ಕರಗದ ಪ್ಲಾಸ್ಟಿಕ್ ತಾಜ್ಯ ನೀರಿನಲ್ಲಿ ತೇಲಿ ನಂತರ ಕಡಲಿನ ತೀರದುದ್ದಕ್ಕೂ ಶೇಖರಗೊಳ್ಳುತ್ತಿದೆ. ಇಂತಹ ಅಪಾಯಕಾರಿ ಹಾಗೂ ವಿಷಯುಕ್ತ ತ್ಯಾಜ್ಯದಿಂದಾಗಿ ಪ್ರತಿ ವರ್ಷ ಜಗತ್ತಿನಲ್ಲಿ ಹತ್ತು ಲಕ್ಷ ವಿವಿಧ ಬಗೆಯ ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂದು ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ. 267 ವಿವಿಧ ಬಗೆಯ ಕಡಲ ಜೀವಿಗಳ ( ಆಮೆ, ಡಾಲ್ಪಿನ್, ತಿಮಿಂಗಿಲ, ಇತ್ಯಾದಿ) ಸಹಜ ಬದುಕಿಗೂ ಸಹ ಪ್ಲಾಸ್ಟಿಕ್ ಅಪಾಯವೊಡ್ಡಿದೆ ಎಂದು ವಿಜ್ಙಾನಿಗಳು ಗುರುತಿಸಿದ್ದಾರೆ. ಸಮುದ್ರದ ಒಂದು ಚದುರ ಮೈಲು ವಿಸ್ತಾರದಲ್ಲಿ 46 ಸಾವಿರ ಪ್ಲಾಸ್ಟಿಕ್ ನ ವಿವಿಧ ಬಗೆಯ ವಸ್ತುಗಳು ತೇಲಾಡುತ್ತಿರುವುದನ್ನು ಸಹ  ಅವರು ದಾಖಲಿಸಿದ್ದಾರೆ.
, ಒಮ್ಮೆ ನಾವು ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ದಿನ ನಿತ್ಯ ಜರುಗುತ್ತಿರುವ ಸಂಗತಿಗಳನ್ನು ಒಮ್ಮೆ ಗಮನಿಸಿದರೆ ಸಾಕು, ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಮನದಟ್ಟಾಗುತ್ತದೆ, ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೆ ಹತ್ತು ನಿಮಿಷಗಳ ಕಾಲ  ರೈಲ್ವೆ ಹಳಿಗಳ ಇಕ್ಕೆಲಗಳಲ್ಲಿ ಉದ್ದಕ್ಕು ಬಿದ್ದಿರುವ ಕಸದ ರಾಶಿಯನ್ನು ಒಮ್ಮೆ ಅವಲೋಕಿಸಿ ನೋಡಿ, ನಿಮಗೆ ಸ್ವತಃ  ತಿಳಿಯುತ್ತದೆ. ನಮ್ಮ ಪರಿಸರ ಪ್ರಜ್ಙೆ ಯಾವ ಮಟ್ಟದಲ್ಲಿದೆ ಎಂಬುದು.
 ಇಂತಹ ಅನಾಹುತಕಾರಿ ಹವ್ಯಾಸದಿಂದಾಗಿ ಇಂದು ನಮ್ಮ ಭಾರತದ ಯಾವೊಂದು ಸುಂದರ ಕಡಲಕಿನಾರೆಗಳು, ಗಿರಿಧಾಮಗಳು, ಅಥವಾ ಪುಣ್ಯಕ್ಷೇತ್ರಗಳು ಶುಚಿಯಾಗಿ ಉಳಿದಿಲ್ಲ. ಪರಿಸರವನ್ನು ಕುಲಗೆಡಿಸುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಪರಿಭಾವಿಸಿಕೊಂಡಿರುವ ನಮ್ಮಿಂದಾಗಿ ಈ ದೇಶದ ಯಾವುದೇ ಪ್ರಸಿದ್ಧ ಸ್ಥಳಗಳಾಗಲಿ, ನೀರಿನ ತಾಣಗಳಾಗಲಿ, ಪರಿಶುದ್ದವಾಗಿ ಉಳಿದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜಾನುವಾರುಗಳು ಈ ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳಲಾರದೆ ಅಸುನೀಗುತ್ತಿವೆ.
2006 ಮತ್ತು 2008 ನೇ ಇಸವಿಯಿಂದ ಭಾರತದಲ್ಲಿ ಈ ಬಗ್ಗೆ ಜಾಗೃತಿ ಉಂಟಾಗಿದೆ. ಹಾಗಾಗಿ ದೇಶದ ಹಲವು ರಾಜ್ಯಗಳು ವಿಶೇಷವಾಗಿ, ದೆಹಲಿ, ಪಂಜಾಬ್,ಕೇರಳ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ,ರಾಜಸ್ಥಾನ್, ಹಿಮಾಚಲ ಪ್ರದೇಶ, ಇತ್ತೀಚೆಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪ್ಲಾಸ್ಟಿಕ್ ಕೈ ಚೀಲಗಳ ಬಳಕೆ ಕುರಿತಂತೆ ನಿಷೇಧ ಜಾರಿ ಮಾಡಿವೆ. ಆದರೆ, ಎಲ್ಲಿಯೂ ಸಹ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. 8 ಸೆ.ಮಿ. ಅಗಲ ಮತ್ತು 12 ಸೆ.ಮಿ ಉದ್ದ ಅಳತೆಯುಳ್ಳ ಚೀಲಗಳಿಗಿಂತ , ಕಡಿಮೆ ಅಳತೆಯ ಚೀಲಗಳನ್ನು ಉತ್ಪಾದಿಸಬಾರದು ಎಂದು ಸ್ಪೃಷ್ಟ ಸೂಚನೆ ಇದ್ದರೂ ಸಹ ಯಾರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಪ್ಲಾಸ್ಟಿಕ್ ಚೀಲಗಳು ಯಾವ ಗುಣಮಟ್ಟದಲ್ಲಿ ಇರಬೇಕೆಂಬುದರ ಕುರಿತು ದೇಶದಲ್ಲಿ ಏಕರೂಪದ ಕಾಯ್ದೆ ಇಲ್ಲವಾಗಿದೆ. ಕೆಲವು ರಾಜ್ಯಗಳಲ್ಲಿ 30  ಮೆಕ್ರಾನ್ ಕಡಿಮೆ ಗುಣವುಳ್ಳ ಚೀಲ ತಯಾರಿಸಬಾರದು ಎಂಬ ನಿಯಮವಿದ್ದರೆ, ಈ ಪ್ರಮಾಣ, 40, 50. ಹಾಗೂ 60 ಮೆಕ್ರಾನ್ ಗೆ ವಿಸ್ತರಣೆಗೊಂಡಿದೆ. ಇದ್ದುದರಲ್ಲಿ ಕೇರಳ ಮತ್ತು ರಾಜಸ್ಥಾನ್ ರಾಜ್ಯಗಳು ಪ್ಲಾಸ್ಟಿಕ್ ಚೀಲಗಳ ಬಳಕೆ ಕುರಿತು ಕಟ್ಟು ನಿಟ್ಟಿನ ಆದೇಶ ಹೊರಡಿಸಿವೆ. ಜಗತ್ತಿನಾದ್ಯಂತ ಮರುಬಳಕೆಯಾಗುತ್ತಿರುವ ಪ್ಲಾಸ್ಟಿಕ್ ವಸ್ತುಗಳ ಪ್ರಮಾಣ ಶೇಕಡ ಎರಡರಿಂದ ಮೂರರಷ್ಟು ಮಾತ್ರ. ಉಳಿದ ತ್ಯಾಜ್ಯವನ್ನು ಹಳ್ಳ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಬಳಕೆಯಾಗುತ್ತಿದ್ದು, ಇದು ಅಂತರ್ಜಲದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ.
ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಮೇಲೆ ನಾವು ಸ್ವತಃ ಮಿತಿ ಹೇರಿಕೊಳ್ಳದಿದ್ದರೆ, ಭವಿಷ್ಯದ ಅನಾಹುತಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಮುದಾಯ ತೆಗೆದುಕೊಳ್ಳುವ ತೀರ್ಮಾನಕ್ಕಿಂತ ಪ್ರತಿಯೊಬ್ಬ ಪ್ರಜೆ ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗಿರುತ್ತದೆ. ನಾನು ತರಕಾರಿಗೆ ಅಥವಾ ದಿನಸಿ ಅಂಗಡಿಗೆ ಹೋಗುವಾಗಲೆಲ್ಲಾ ಕೈಯಲ್ಲಿ ತಮಿಳುನಾಡಿನಿಂದ ತಂದಿರುವ ವಿವಿಧ ಬಗೆಯ ಹತ್ತಿ ಬಟ್ಟೆಯ ಕೈಚೀಲಗಳನ್ನು  ತೆಗೆದುಕೊಂಡು ಹೋಗುತ್ತೇನೆ. ಹಳದಿ ಬಣ್ಣದ ಆ ಚೀಲಗಳಲ್ಲಿ ಸಾಮಾನು. ತರಕಾರಿ, ಅಥವಾ ಮಾಂಸ , ಮೊಟ್ಟೆ, ಮೀನು ಇವುಗಳನ್ನು ತರುವಾಗ ನನಗೆ ಅಪಮಾನ ಎನಿಸುವುದಿಲ್ಲ. ಬದಲಾಗಿ ಎಂಟತ್ತು ಪ್ಲಾಸ್ಟಿಕ್ ಬ್ಯಾಗುಗಳ ಬಳಕೆಯನ್ನು ತ್ಯೆಜಿಸಿದೆ ಎಂಬ ಹೆಮ್ಮೆಯುಂಟಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ