ಶನಿವಾರ, ಜುಲೈ 13, 2013

ಇ-ತ್ಯಾಜ್ಯವೆಂಬ ತಲ್ಲಣ ಭಾಗ-ಎರಡು

ಭಾರತದಲ್ಲಿ ಅಧಿಕೃತವಾಗಿ ಎಲೆಕ್ಟ್ರಾನಿಕ್ ವಸ್ತುಗಳ ಯುಗ 1980 ರ ದಶಕದಲ್ಲಿ ಆರಂಭಗೊಂಡಿತು. 1984 ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿವರು ಅನಿರೀಕ್ಷಿತವಾಗಿ ತಮ್ಮ ಬೆಂಗಾವಲು ಪಡೆಯ ಸದಸ್ಯರಿಂದ ಹತ್ಯೆಯಾದ ನಂತರ ಪ್ರಧಾನಿ ಪಟ್ಟಕ್ಕೆ ಬಂದ ರಾಜೀವ್ ಗಾಂಧಿಯವರ ಅವಧಿಯಲ್ಲಿ ಭಾರತದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಙಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾದವು. ಸ್ಯಾಮ್ ಪಿಟ್ರೊಡ ಮತ್ತು ಶಿವು ನಾಡರ್, ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಮೇಧಾವಿಗಳು ಈ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದಕ್ಕೂ ಮೊದಲು  ಎಲೆಕ್ಟ್ರಾನಿಕ್ ವಸ್ತುಗಳು ಕಳ್ಳಸಾಗಾಣಿಕೆಯ ಮೂಲಕ ಭಾರತಕ್ಕೆ ತಲುಪುತ್ತಿದ್ದವು. 1991 ರಿಂದ ದೇಶದಲ್ಲಿ ಜಾರಿಗೆ ಬಂದ ಜಾಗತೀಕರಣ ವ್ಯವಸ್ಥೆಯಿಂದಾಗಿ ನಂತರ ಎಲ್ಲಾ  ವಿಧವಾದ ವಸ್ತುಗಳು ಮುಕ್ತ ಮಾರುಕಟ್ಟೆಯಲ್ಲಿ  ಜನಸಾಮಾನ್ಯರ ಕೈಗೆ ಸಿಗುವಂತಾದವು.
ಭಾರತದ ಆಡಳಿತ ವ್ಯವಸ್ಥೆಯಲ್ಲಿ, 1990 ರ ದಶಕದಲ್ಲಿ ಅನೇಕ ಬದಲಾವಣೆಗಳಾದವು.ವಿಶೇಷವಾಗಿ, ಬ್ಯಾಂಕ್ ಗಳು, ಇನ್ಸೂರೆನ್ಸ್ ಕಂಪನಿಗಳು. ಭಾರತೀಯ ರೈಲ್ವೆ ಇಲಾಖೆ ಗಣಕೀರಣ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ಆಡಳಿತದ ವೇಗಕ್ಕೆ ಚಾಲನೆ ದೊರಕಿತು, ಜೊತೆಗೆ ಕಂಪ್ಯೂಟರ್ ಗಳ ಬೇಡಿಕೆಯೂ ಬೆಳೆಯತೊಡಗಿತು. ನಂತರದ ದಿನಗಳಲ್ಲಿ ರಾಜ್ಯ ಸರ್ಕಾರಗಳ ಕಛೇರಿಗಳು ಸೇರಿದಂತೆ ಖಾಸಾಗಿ ಕಂಪನಿಗಳಲ್ಲಿ ಮತ್ತು ಪ್ರತಿ ಕುಟುಂಬದಲ್ಲಿ ಈಗ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು  ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಇತ್ತೀಚೆಗೆ ಬಳಕೆಗೆ ಬಂದಿರುವ ಅತ್ಯಾಧುನಿಕ ಮೊಬೈಲ್ ಗಳು ಕಂಪ್ಯೂಟರ್ ಮತ್ತು ಕ್ಯಾಮರಾ ಕೆಲಸಗಳನ್ನು ಸಹ ಸಮರ್ಥವಾಗಿ ನಿಭಾಯಿಸುತ್ತಿವೆ. ಹೀಗೆ ದೇಶದಲ್ಲಿ ಜಾರಿಗೆ ಬಂದ ನೂತನ ತಂತ್ರಜ್ಙಾನದ ಸಂಕೇತಗಳಾದ ಕಂಪ್ಯೂಟರ್ ಮತ್ತು ಟಿ.ವಿ. ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ನಿರುಪಯೋಗಗೊಂಡು, ಇ-ತ್ಯಾಜ್ಯವಾಗಿ ಪರಿವರ್ತನೆಗೊಂಡಾಗ ಇವುಗಳ ಮರುಬಳಕೆಯ ಸಂಸ್ಕರಣೆ ಅಥವಾ ವಿಲೆವಾರಿ ದೇಶಕ್ಕೆ ಸಮಸ್ಯೆಯಾಗಿರಲಿಲ್ಲ. ಆದರೆ, ಜಗತ್ತಿನ ಮುಂದುವರಿದ ಶ್ರೀಮಂತ ರಾಷ್ಟ್ರಗಳಿಂದ ಅಪಾರ ಪ್ರಮಾಣದಲ್ಲಿ ಗುಜರಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಭಾರತದ ಪರಿಸರಕ್ಕೆ ಧಕ್ಕೆಯುಂಟಾಗಿದೆ. ಭಾರತದ ಬಂದರುಗಳಿಗೆ ಅಕ್ರಮವಾಗಿ ಪ್ರತಿದಿನ 5.500 ಸಾವಿರ ಟನ್ ಗುಜರಿ ವಸ್ತುಗಳು ಭಾರತಕ್ಕೆ ಬಂದು ತಲುಪುತ್ತಿವೆ. ವಿಶ್ವ ವಾಣಿಜ್ಯ ಸಂಘಟನೆಯ ಒಪ್ಪಂಧದ ಅನುಸಾರ ಇವುಗಳಿಗೆ ಆಮದು ಸುಂಕವಿರುವುದಿಲ್ಲ.
ಎಲೆಕ್ಟ್ರಾನಿಕ್ ಕಸವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಏಷ್ಯಾ ರಾಷ್ಟ್ರಗಳಲ್ಲಿ ಪಿಲಿಫೈನ್ಸ್, ಥಾಯ್ಲೆಂಡ್, ಇಂಡೋನೆಷಿಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದು ಭಾರತ ದೇಶ ನಂಬರ್ ಒಂದರ ಸ್ಥಾನದಲ್ಲಿದೆ, ಅಮೇರಿಕಾ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರಗಳ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಒಂದು ಟನ್ ಇ-ತ್ಯಾಜ್ಯ ವಿಲೆವಾರಿ ಮಾಡಲು ಸರಾಸರಿ 12 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಇದೇ ವಸ್ತುಗಳನ್ನು  ಏಷ್ಯಾ ರಾಷ್ಟ್ರಗಳಿಗೆ ಪುಕ್ಕಟೆಯಾಗಿ ನೀಡಲು ಆ ರಾಷ್ಟ್ರಗಳಿಗೆ ತಗುಲುವ ಹಡಗು ಸಾಗಾಣಿಕೆ ವೆಚ್ಚ ಕೇವಲ 2.800 ರೂಪಾಯಿ ಮಾತ್ರ. ಹಾಗಾಗಿ ಜಪಾನ್, ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್ ಸೇರಿದಂತೆ ಬಹುತೇಕ ರಾಷ್ಟ್ರಗಳು ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಏಷ್ಯಾ ರಾಷ್ಟ್ರಗಳಿಗೆ ನೀಡುತ್ತಿವೆ.
ಭಾರತದಲ್ಲಿ 2009 ರಲ್ಲಿ 59 ಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗಿದ್ದರೆ, 64 ಲಕ್ಷ ಟನ್ ತ್ಯಾಜ್ಯವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಇ-ತ್ಯಾಜ್ಯ ವಿಲೆವಾರಿ ಕುರಿತಂತೆ 2007 ರಲ್ಲಿ ಸುಪ್ರೀಂ ಕೋರ್ಟ್ ಸ್ಪೃಷ್ಟ ಆದೇಶವನ್ನು ನೀಡಿ, ಹಂತ ಹಂತವಾಗಿ ನಿಯಮಗಳನ್ನು ಹತ್ತು ವರ್ಷಗಳಲ್ಲಿ ಜಾರಿಗೆ ತರಬೇಕೆಂದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಯಾವುದೇ ಕಾರಣಕ್ಕೂ ಅಪಾಯಕಾರಿಯಾದ ಇ-ತ್ಯಾಜ್ಯ ವಸ್ತುಗಳನ್ನು ಬಯಲಿನಲ್ಲಿ ಸಂಗ್ರಹಿಸಿ ಇಡಬಾರದು, ಅವುಗಳನ್ನು ಸಂಸ್ಕರಿಸುವಾಗ, ತಜ್ಞರ ನೇತೃತ್ವದಲ್ಲಿ ಸಂಸ್ಕರಿಸಬೇಕು. ಹಾಗೂ ದೇಶದ ನೀರು, ಗಾಳಿ, ಸೇರಿದಂತೆ ಪರಿಸರಕ್ಕೆ ಧಕ್ಕೆಯಾಗುವಂತಹ ಯಾವುದೇ ತ್ಯಾಜ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಸಹ , ವಿದೇಶಗಳಿಂದ ಅಲ್ಯೂಮಿನಿಯಂ, ಕಬ್ಬಿಣ, ತಾಮ್ರ ದ ಗುಜರಿ ವಸ್ತುಗಳು ಎಂಬ ಹೆಸರಿನಲ್ಲಿ ಇ-ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬಂದರಿನ ಅಧಿಕಾರಿಗಳು ತಮಗೆ ಸಿಗುವ ಲಂಚದ ಆಸೆಯಿಂದ ಇವುಗಳತ್ತ ಗಮನ ಹರಿಸಲಾರದೆ, ಕಣ್ಮುಚ್ಚಿ ಕುಳಿತಿದ್ದಾರೆ
ದೇಶದಲ್ಲಿ ಇ-ತ್ಯಾಜ್ಯವನ್ನು ಅತಿ ಹೆಚ್ಚು ಸೃಷ್ಟಿಸುತ್ತಿರುವ ರಾಜ್ಯವೆಂದರೆ, ಮಹಾರಾಷ್ಟ್ರ. ನಂತರ ತಮಿಳುನಾಡು ಎರಡನೇಯ ಸ್ಥಾನದಲ್ಲಿದೆ. ಪ್ರತಿವರ್ಷ ಮಹಾರಾಷ್ಟ್ರದಲ್ಲಿ 20.270 ಟನ್, ತಮಿಳುನಾಡಿನಲ್ಲಿ 13.486 ಟನ್, ಆಂಧ್ರಪ್ರದೇಶದಲ್ಲಿ 12.780 ಟನ್, ಪಶ್ಚಿಮ ಬಂಗಾಳದಲ್ಲಿ 10.059 ಟನ್, ಉತ್ತರ ಪ್ರದೇಶ 10.038 ಟನ್, ದೆಹಲಿ 9729 ಟನ್, ಕರ್ನಾಟಕ 9.118 ಟನ್ ಗುಜರಾತ್ 8.794 ಟನ್ ಹಾಗೂ ಪಂಜಾಬ್ 6.958 ಟನ್ ಇ-ತ್ಯಾಜ್ಯವನ್ನು ಉತ್ಪಾದಿಸುತ್ತಿವೆ. ( 2010 ರ ಸಮೀಕ್ಷೆ) ಹೀಗೆ ಉತ್ಪಾದನೆಯಾಗುವ  ಶೇಕಡ 70 ರಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತು, ದೇಶದ ಅಸಂಘಟಿತ ವಲಯದಲ್ಲಿ ಯಾವುದೆ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಸಂಸ್ಕರಣಗೊಳ್ಳುತ್ತಿದೆ.
ಇಂದಿನ ದಿನಗಳಲ್ಲಿ ಮನೆಗಳಿಂದ ಹೊರಬೀಳುತ್ತಿರುವ ಕಸದ ರಾಶಿಯನ್ನು ವಿಲೆವಾರಿ ಮಾಡುವುದು ಮಹಾನಗರಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವಾಗ ಇದರ ಜೊತೆಗೆ ಈಗ ಇ-ತ್ಯಾಜ್ಯ ಮತ್ತೊಂದು ತಲೆನೋವಾಗಿದೆ. 2012 ರ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರವೊಂದರಲ್ಲಿ 97 ಸಾವಿರದ 310 ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್  ಗಳು, 16 ಸಾವಿರದ 240 ಟಿ.ವಿ.ಗಳು, ಮತ್ತು 16 ಲಕ್ಷ ಮೊಬೈಲ್ ಗಳು ಇ-ತ್ಯಾಜ್ಯವಾಗಿ ಗುಜರಿ ಅಂಗಡಿಗೆ ಜಮಾವಣೆಗೊಂಡಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರಿಸರ ನಿಯಂತ್ರಣ ಮಂಡಳಿಗಳು ಈಗಲಾದರೂ ತಮ್ಮ ನಿದ್ದೆಯಿಂದ ಎಚ್ಚೆತ್ತು ಇ-ತ್ಯಾಜ್ಯ ವಿಲೆವಾರಿ ಕುರಿತು ಕಠಿಣ ನಿಯಾಮಾವಳಿಗನ್ನು ರೂಪಿಸಬೇಕು. ನಗರಗಳ ಕೊಳಚಗೇರಿಗಳಲ್ಲಿ ವಾಸಿಸುವ ಅಮಾಯಕ ಅನಕ್ಷರಸ್ತರು ಕೂಲಿಯಾಸೆಗಾಗಿ ಪ್ರತಿದಿನ ಇ-ತ್ಯಾಜ್ಯ ಸಂಸ್ಕರಣೆಯಲ್ಲಿ ಹೊರಬೀಳುವ ವಿಷದ ಹೊಗೆಗೆ ತಮ್ಮ ಜೀವವನ್ನು ಒಡ್ಡುತ್ತಿದ್ದಾರೆ. ತಾಮ್ರದ ತಂತಿಗಳಿಗಾಗಿ, ಪಿ,ವಿ.ಸಿ. ಕೇಬಲ್ ಗಳನ್ನು ಸುಡುವಾಗ ಅತ್ಯಂತ ವಿಷಕಾರಿಯಾದ ಹೊಗೆ ಉತ್ಪತ್ತಿಯಾಗುತ್ತದೆ ಎಂದು ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ.

                                (ಮುಗಿಯಿತು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ