Saturday, 6 July 2013

ಲೋಕೇಶ್ ಮೊಸಳೆಯೆಂಬ ವನ್ಯಲೋಕದ ವಿಸ್ಮಯ

ಇಂದಿನ ದಿನಗಳಲ್ಲಿ ವನ್ಯಲೋಕದ ಛಾಯಾಗ್ರಹಣ ಹಲವು ಯುವ ಮನಸ್ಸುಗಳಿಗೆ ಪ್ರೀತಿಯ ಹವ್ಯಾಸವಾಗಿದೆ. ಇಂದಿನ ಮುಂದುವರಿದ ತಂತ್ರ ಜ್ಙಾನದಿಂದಾಗಿ ಸುಧಾರಿತ ಡಿಜಿಟಲ್ ಕ್ಯಾಮರಾಗಳು ನಮ್ಮ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಇದಲ್ಲದೆ, ಛಾಯಾಚಿತ್ರ ತೆಗೆಯುವ ಸಮಯದಲ್ಲಿ ಎದುರಾಗುತ್ತಿದ್ದ ಅಡ್ಡಿ ಆತಂಕಗಳನ್ನು ನಿವಾರಿಸಿಬಿಟ್ಟಿವೆ. ಜೊತೆಗೆ ಅಪಾಯಕಾರಿ ಪ್ರಾಣಗಳಿಂದ ದೂರನಿಂತು ಜೂಮ್ ಲೆನ್ಸ್ ಬಳಸಿ ಅವುಗಳ ಚಿತ್ರ ತೆಗೆಯಬಹುದಾದ ವ್ಯವಸ್ಥೆಯನ್ನೂ ಸಹ ಕಲ್ಪಿಸಿಕೊಟ್ಟಿವೆ.ಹಾಗಾಗಿ ನಮ್ಮ ಯುವ ಚೇತನಗಳು ಇದನ್ನು ಹವ್ಯಾಸ ಮಾಡಿಕೊಳ್ಳುತ್ತಿರುವುದು ಒಂದು ರೀತಿಯಲ್ಲಿ ನಮಗೆ ಸ್ವಸ್ಥ ಸಮಾಜದ ಸಂಕೇತ.ಕಾಣುತ್ತಿದೆ.
ಅತ್ಯಾಧುನಿಕ ಕ್ಯಾಮರಾಗಳ ನೆರವಿಲ್ಲದೆ, ವನ್ಯಮೃಗಗಳ ಚಿತ್ರ ತೆಗೆಯುವುದನ್ನು ವೃತ್ತಿಯ ಜೊತೆಗೆ ಉಸಿರಾಗಿಸಿಕೊಂಡ ಅನೇಕ ಛಾಯಾಚಿತ್ರಗ್ರಾಹಕರು ನಮ್ಮ ನಡುವೆ ಇದ್ದಾರೆ. ಭಾರತದಲ್ಲಿ ಬೇಡಿ ಸಹೋದರರು ಹೆಸರು ಮಾಡಿದ್ದರೆ, ಕರ್ನಾಟಕದಲ್ಲಿ ಇವರದೊಂದು ಪ್ರತಿಭಾವಂತರ ದೊಡ್ಡ ಪಡೆಯೇ ಇದೆ. ಮಾಜಿ ಸಚಿವ ಎಂ.ವೈ.ಘೋರ್ಪಡೆ, ಪೆರುಮಾಳ್, ಕೃಪಾಕರ್ ಸೇನಾನಿ, ಮಾಜಿ ಅರಣ್ಯಾಧಿಕಾರಿ ಬಸಪ್ಪನವರ್ ಹೀಗೆ ಹಲವರನ್ನು ಹೆಸರಿಸುತ್ತಾ ಹೋಗಬಹುದು. ಇವರ ಸಾಲಿಗೆ ಇತ್ತೀಚೆಗೆ ಸೇರಬಹುದಾದ ಗಮನಾರ್ಹವಾದ ಹೆಸರು, ಮೈಸೂರಿನ ಲೋಕೇಶ್ ಮೊಸಳೆ. ಓದಿದ್ದು, ಮತ್ತು  ಬೋಧಿಸಿದ್ದು ಪತ್ರಿಕೋದ್ಯಮವಾದರೂ ಅಂತಿಮವಾಗಿ ಲೋಕೇಶ್ ಕೈಹಿಡಿದಿದ್ದು ವನ್ಯಲೋಕದ ಛಾಯಾಗ್ರಹಣ ವೃತ್ತಿಯನ್ನು.. ಕಳೆದ ಒಂದು ದಶಕದಿಂದ ಇದನ್ನೇ ಉಸಿರಾಗಿಸಿಕೊಂಡು ಈ ಹವ್ಯಾಸದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡಿರುವ ಲೋಕೇಶರ ಸಾಧನೆ ನಿಜಕ್ಕೂ  ಬೆರಗು ಮೂಡಿಸುವಂತಹದ್ದು.ಮೇಲುನೋಟಕ್ಕೆ ನಮಗೆಲ್ಲಾ ವನ್ಯಲೋಕದ ಛಾಯಾಗ್ರಹಣ ಆಕರ್ಷಣೀಯವಾಗಿ ಕಂಡರೂ ಅದು ಬೇಡುವ, ಏಕಾಂತ, ತಾಳ್ಮೆ, ಜೀವದ ಹಂಗು ತೊರೆದು ಎದುರಿಸಬೇಕಾದ ಅನಿರೀಕ್ಷಿತ ಅವಘಡಗಳು, ಮಳೆ, ಚಳಿ, ಹಸಿವು, ನೀರಡಿಕೆ ಎನ್ನದೆ, ಅರಣ್ಯದಲ್ಲಿ ಇರಬೇಕಾದ ಒತ್ತಡ ಹಾಗೂ ಅರಣ್ಯಲೋಕದ ವ್ಯವಹಾರಗಳ ತಿಳುವಳಿಕೆ, ಅಲ್ಲಿನ ಪ್ರಾಣಗಳ ನಡುವಳಿಕೆ ಕುರಿತಾದ ಅಧ್ಯಯನ ಇವೆಲ್ಲವನ್ನೂ ಅರಿತ ವ್ಯಕ್ತಿ ಮಾತ್ರ ಒಬ್ಬ ಶ್ರೇಷ್ಟ ಛಾಯಾಚಿತ್ರಗ್ರಾಹಕನಾಗಬಲ್ಲನು. ನಾವು ಅರಣ್ಯದಲ್ಲಿ ವಿಸರ್ಜಿಸಿದ ಮೂತ್ರದ ವಾಸನೆಯಿಂದ ಸುಳಿವು ಪಡೆಯುವ ಪ್ರಾಣಿಗಳು ನಮ್ಮ ಸನೀಹ ಸುಳಿಯುವಿದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಛಾಯಾಚಿತ್ರಗ್ರಾಹಕನಿಗೆ ಇರಬೇಕಾಗುತ್ತದೆ. ಇಂತಹ ವಿಷಯಗಳನ್ನು ಕರಗತ ಮಾಡಿಕೊಂಡವರಲ್ಲಿ ಲೋಕೇಶ್ ಮೊಸಳೆ ಸಹ ಒಬ್ಬರು.

ಇಂತಹ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಬಲ್ಲ ಲೋಕೇಶ್ ಮೊಸಳೆ ತಾವು ಭೋಧಿಸುತ್ತಿದ್ದ ಪತ್ರಿಕೋದ್ಯಮದ ವೃತ್ತಿಯನ್ನು ಬಿಟ್ಟು ಹೆಗಲಿಗೆ ಕ್ಯಾಮರಾ ತಗುಲಿಸಿಕೊಂಡು, ನಾಗರಹೊಳೆ, ಬಂಡಿಪುರ, ಮತ್ತು ಹೆಗ್ಗಡದೇವನಕೋಟೆಯತ್ತ ಹೊರಟಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ, ಹಾಸನದ ಬಳಿಯ ಮೊಸಳೆ ಎಂಬ ಗ್ರಾಮದಿಂದ ಬಂದಿದ್ದ ಲೋಕೇಶ್ ಗೆ ನಿಸರ್ಗದ ನಂಟು ತಾನು ಹುಟ್ಟಿ ಬೆಳೆದ ಹಳ್ಳಿಯಿಂದಲೇ ಬೆಳೆದು ಬಂದಿತ್ತು. ಹಾಗಾಗಿ ಅದರ ಮೇಲಿನ  ಮೋಹವನ್ನು ಹರಿದುಕೊಳ್ಳಲಾರದೆ, ಕೈತುಂಬಾ ಹಣ ತರುವ ಉದ್ಯೋಗವನ್ನು ಬಿಟ್ಟು, ದುಬಾರಿ ಮತ್ತು ಸವಾಲು ಎನ್ನಬಹುದಾದ ವನ್ಯಲೋಕದ ಬೆನ್ನುಹತ್ತಿದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯದಲ್ಲಿ ಪದವಿ ಮತ್ತು ಮೈಸೂರು ವಿ.ವಿ.ಯಲ್ಲಿ ಅದೇ ಪತ್ರಿಕೋದ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿ, ಪತ್ರಿಕೋದ್ಯಮ ವೃತ್ತಿಗೆ ಇರಬೇಕಾದ ಘನತೆ, ನಿಷ್ಟುರತೆ, ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಲೋಕೇಶ್,  ವೃತ್ತಿಯ ಜೊತೆ ಜೊತೆಗೆ ಮೈಸೂರು ವಿ.ವಿ.ಯ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ದುಡಿದರು. ಲಂಕೇಶರು ನಿಧನರಾದ ನಂತರ ಮೈಸೂರಿನಲ್ಲಿ ಒಂದಿಷ್ಟು ಕಾಲ ಜನಾಂಧೋಲನ ಎಂಬ ವಾರಪತ್ರಿಕೆಯನ್ನು ನಡೆಸಿ, ನಂತರ ಛಾಯಾಗ್ರಹಣದತ್ತ ವಾಲಿದರು. ಲೋಕೇಶ್ ಮೊಸಳೆಯ ಬಹುತೇಕ ಗೆಳೆಯರೆಲ್ಲಾ ಇಂದು ಭಾರತದ ಪ್ರಸಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಆದರೆ, ಲಂಕೇಶರ ಬಳುವಳಿಯೇನೊ ಎಂಬಂತೆ ಇರುವ ಒಂದಿಷ್ಟು ನೇರನುಡಿ ಮತ್ತು ನಿಷ್ಟುರತೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಲೋಕೇಶ್ ಗೆ ಸದ್ದುಗದ್ದಲದ ಲೋಕಕ್ಕಿಂತ ನಿಸರ್ಗದ ಏಕಾಂತ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಲೋಕೇಶ್ ಸೆರೆಹಿಡಿದಿರುವ ವನ್ಯಮೃಗಗಳ ಚಿತ್ರಗಳು ವಿಸ್ಮಯವನ್ನು ಮೂಡಿಸುವಂತಿವೆ. ಪ್ರಾಣಿಗಳ ಮತ್ತು ಪಕ್ಷಿಗಳ ಚಲನ ವಲನ ಕುರಿತು ಚಿತ್ರದಲ್ಲಿ ದಾಖಲಿಸುವುದು ನಿಜಕ್ಕೂ ಸವಾಲಿನ ಕೆಲಸ. 1974 ರಲ್ಲಿ ಮಣಿಪಾಲ್ ಗ್ರೂಪ್ ನ ಉದಯವಾಣಿ ಪತ್ರಿಕೆಯವರು ಈಶ್ವರಯ್ಯ ನವರ ಸಂಪಾದಕತ್ವದಲ್ಲಿ ಆರಂಭಿಸಿದ ತುಷಾರ ಮಾಸಪತ್ರಿಕೆಗೆ ಪೂರ್ಣಚಂದ್ರ ತೇಜಸ್ವಿಯವರು ಕಪ್ಪು ಬಿಳುಪು ಚಿತ್ರಗಳಲ್ಲಿ ಸೆರೆಹಿಡಿಯುತ್ತಿದ್ದ ಚಿತ್ರಗಳು ಚಿತ್ರಸಂಪುಟ ಎಂಬ ಅಂಕಣದಲ್ಲಿ ಪ್ರಕಟವಾಗುತ್ತಿದ್ದವು. ತಾವು ಸೆರೆ ಹಿಡಿದ ಚಿತ್ರಗಳನ್ನು ತೆಗೆಯುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ತೇಜಸ್ವಿಯವರು ಸ್ವಾರಸ್ಯಕರವಾಗಿ ಎಂಟರಿಂದ ಹತ್ತು ಪುಟಗಳಲ್ಲಿ ಚಿತ್ರಗಳ ಸಮೇತ ವಿವರಿಸಿ ಬರೆಯುತ್ತಿದ್ದರು
1980 ರ ದಶಕದಲ್ಲಿ ಈ ಲೋಕಕ್ಕೆ ಇಳಿದ ಅಪರೂಪದ ಗೆಳಯರಾದ ಕೃಪಾಕರ್ ಮತ್ತು ಸೇನಾನಿ ಕೂಡ ಕಾಡು ಮೇಡು ಅಲೆದು ತೆಗೆದ ಚಿತ್ರಗಳ ಬಗ್ಗೆ ಬರೆದ ಅನೇಕ ಲೇಖನಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವ ಕೃತಕ ಬೆಳಕಿನ ಸಹಾಯವಿಲ್ಲದೆ, ನಿಸರ್ಗದ ಬೆಳಕಿನಲ್ಲಿ ಪ್ರಾಣಿಗಳ ಮತ್ತು ಪಕ್ಷಿಗಳ ಚಿತ್ರ ತೆಗೆಯುವುದು ಪ್ರತಿಯೊಬ್ಬ ಛಾಯಾಗ್ರಾಹಕನಿಗೆ ಬೌದ್ಧಿಕ ಸವಾಲು. ಇಂದಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳ ನೆರವಿಲ್ಲದೆ ಅಂದಿನ ಪ್ರತಿಭಾವಂತರು ತೆಗೆದ ಚಿತ್ರಗಳು ಇವೊತ್ತಿಗೂ ನಿಸರ್ಗ ಪ್ರೇಮಿಗಳ ಮನದಲ್ಲಿ ಹಸಿರಾಗಿವೆ.
ಇಲ್ಲಿ ಲೋಕೇಶ್ ತೆಗೆದ ಜಿಂಕೆಯ ಚಿತ್ರದ ನೆಳಲು-ಬೆಳಕಿನಾಟ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಲೋಕೇಶ್ ಮೊಸಳೆಯವರ ಚಿತ್ರಗಳು ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಪ್ರದರ್ಶನಗೊಂಡಿವೆ. ಹಲವಾರು ಸಂಸ್ಥೆಗಳು ತಮ್ಮ ವಾರ್ಷಿಕ ಕ್ಯಾಲೆಂಡರ್ ಗಳಿಗಾಗಿ ಇವರ ಚಿತ್ರಗಳನ್ನು ಬಳಸಿಕೊಂಡಿವೆ. ಇವರ ದೊಡ್ಡತನವೆಂದರೆ, ಎಂದೂ ತಮ್ಮ ಚಿತ್ರಗಳ ಕುರಿತಂತೆ ವ್ಯವಹಾರಿಕವಾಗಿ ಜಿಪುಣತನ ತೋರದ ಲೋಕೇಶ್ ಯಾರಾದರೂ ನನ್ನ ಚಿತ್ರ ಬಳಸಿಕೊಳ್ಳಲಿ, ಕನಿಷ್ಟ ಚಿತ್ರದ ಜೊತೆ ನನ್ನ ಹೆಸರಿದ್ದರೆ ಸಾಕು ಎಂಬ ಉಧಾರತನವನ್ನು ತೋರುತ್ತಾರೆ. ಲೋಕೇಶರ ಪ್ರತಿಭೆ ನಿಮಗೆ  ಇಷ್ಟವಾದರೆ ಒಮ್ಮ ಇವರ’ lokeshmosale.com ಅಂತರ್ಜಾಲ ಪುಟಕ್ಕೆ ಬೇಟಿ ನೀಡಿ. ಅಲ್ಲಿನ ಚಿತ್ರಗಳು ನಿಮಗೆ ಖುಷಿ ನೀಡಿದರೆ, ಈ ಗೆಳಯನಿಗೆ ಒಮ್ಮೆ ಅಭಿನಂದನೆ ಸಲ್ಲಿಸಿ. ಮೊಬೈಲ್ ನಂಬರ್,9448434448.

ಪರಿಸರ ಕುರಿತು ಮಾತನಾಡುವುದು, ಬರೆಯುವುದಷ್ಟೇ ಸಮಾನವಾಗಿ  ವನ್ಯಲೋಕದ ಚಿತ್ರಗಳ ಮೂಲಕವೂ ಸಹ ಜಾಗೃತಿ ಮೂಡಿಸಬಹುದು ಎಂಬುದನ್ನ ಸಾಧಿಸುತ್ತಿರುವ ಈ ನನ್ನ ಕಿರಿಯ ಮಿತ್ರನಿಗೆ ತುಂಬು ಹೃದಯದ ಅಭಿನಂದನೆಗಳು.

1 comment:

  1. ತಾಂತ್ರಿಕ ಸೌಲಬ್ಯಗಳು ಹೆಚ್ಚಿದಷ್ಟೂ ಸೃಜನಶೀಲತೆ ಸೊರಗುತ್ತದೆ.ಮೊಸಳೆಯಂಥವರ ಕಣ್ಣುಗಳು ಕಾಣುವ
    ಅದ್ಭುತಗಳನ್ನು ಯಾವ ತಾಂತ್ರಿಕ ಪರಿಣತಿಯೂ ತೋರಿಸಲಾರದು.
    ಟೆಂಟ್ಗಳಲ್ಲಿ ಕುಳಿತು ಕಪ್ಪು ಬಿಳುಪಿನ ಚಲನಚಿತ್ರಗಳು ಕಾಣಿಸುತ್ತಿದ್ದ ವಿಸ್ಮಯಲೋಕವನ್ನು ಕಂಡವರಲ್ಲವೇ ನಾವು!

    ReplyDelete