ಶುಕ್ರವಾರ, ನವೆಂಬರ್ 1, 2013

ಪ್ರತಿಮೆ ಮತ್ತು ಭವನಗಳೆಂಬ ಹುಸಿ ಬಸುರಿನ ಸಂಭ್ರಮಗಳು


ಭಾರತದ ಮುಂದಿನ ಭಾವಿ ಪ್ರಧಾನಿ ಎಂದು ಸಂಘಪರಿವಾರದಿಂದ ಪ್ರತಿಬಿಂಬಿಸಲ್ಪಡುತ್ತಿರುವ ನರೇಂದ್ರಮೋದಿಯವರು ಕಳೆದ ಅಕ್ಟೋಬರ್ 31 ರಂದು ಭಾರತದ ಅತಿ ದೊಡ್ಡ ಪ್ರತಿಮೆಯಾಗಿ ಗುಜರಾತ್ ನರ್ಮದಾ ಸರೋವರದ ಬಳಿ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಪ್ರತಿಮೆಗಳ ನಿರ್ಮಾಣದಲ್ಲೂ ಸಹ ಪೈಪೋಟಿ ಏರ್ಪಟ್ಟಿದೆ. ಗದಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗ ಇರುವ ಕೆರೆಯೊಂದರಲ್ಲಿ ಬೃಹತ್ ಬಸವೇಶ್ವರ ಪ್ರತಿಮೆ ಕೂಡ ನಿರ್ಮಾಣವಾಗುತ್ತಿದೆ. ಈಗ ಚಿತ್ರದುರ್ಗದ ಮುರುಘಾಮಠದ ಶರಣರು ಕೂಡ ಇಂತಹದ್ದೇ ಒಂದು ಕಾರ್ಯಕ್ಕೆ ಮುಂದಾಗಿದ್ದಾರೆ.

ದೇಶದ ಹಲವಾರು ನಗರಗಳಲ್ಲಿ ಈಗಾಗಲೇ ಎದ್ದು ನಿಂತಿರುವ ನಾಯಕರ ಪ್ರತಿಮೆಗಳಿಂದಾಗಿ ದಿನೇ ದಿನೇ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟುಗಳಿಗೆ,  ಮತ್ತು ಸಂಘರ್ಷಗಳಿಗೆ  ಲೆಕ್ಕವಿಲ್ಲ. ಇಡೀ ದೇಶಾದ್ಯಂತ ಕಿಡಿಗೇಡಿಗಳ ಮತ್ತು ಮತಾಂಧರ ದುಷ್ಕøತ್ಯಕ್ಕೆ ಅತಿ ಹೆಚ್ಚು ಬಲಿಯಾದ ನಾಯಕರುಗಳ ಪ್ರತಿಮೆಗಳಿಂದರೆ, ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳು. ( ತಮಿಳುನಾಡಿನಲ್ಲಿ ಹಲವೆಡೆ ಅಂಬೇಡ್ಕರ್ ಪ್ರತಿಮೆಗೆ ಕಬ್ಬಿಣದ ಸಲಾಕೆಗಳ ಪಂಜರದ ರಕ್ಷಣೆ ಒದಗಿಸಲಾಗಿದೆ.) ನಾವು ಬದುಕುತ್ತಿರುವ ಈ ಇಪ್ಪತ್ತೊಂದನೇಯ ಶತಮಾನದಲ್ಲಿ ತಮ್ಮ ತ್ಯಾಗ ಮತ್ತು ಬಲಿದಾನಗಳ ಮೂಲಕ ಚಿರಸ್ಮರಣೀಯರಾದ ಮಹಾತ್ಮರನ್ನು ನೆನಯಲು ಪ್ರತಿಮೆಗಳು ಅವಶ್ಯಕವೆ? ಅವರನ್ನು ನೆನೆಯಲು, ಅವರ ಆದರ್ಶ ಮತ್ತು ಚಿಂತನೆಗಳನ್ನು ಜೀವಂತವಿಡಲು ನಮಗೆ ಪರ್ಯಾಯ ಮಾರ್ಗಗಳಿಲ್ಲವೆ? ಇವು ನಾವೀಗ ಪ್ರಶ್ನಿಸಿಕೊಳ್ಳಲೇಬಾಕಾದ ಪ್ರಶ್ನೆಗಳಿವು.



ಇತಿಹಾಸದಲ್ಲಿ ತಮ್ಮ ಭೂಮಿ, ನೆಲದ ಸಂಸ್ಕøತಿ, ಅಥವಾ ತಮ್ಮನ್ನಾಳಿದ ದೊರೆಯ ರಕ್ಷಣೆಗಾಗಿ, ತಮ್ಮ ಜೀವವನ್ನು ಬಲಿದಾನ ಮಾಡಿದ ಮಹಾತ್ಮರ ನೆನಪಿಗಾಗಿ, ಅಕ್ಷರ ಸಂಸ್ಕøತಿ ಇಲ್ಲದಿದ್ದ ಆ ಕಾಲದಲ್ಲಿ ಅವರ ಸಾಧನೆಗಳನ್ನು ಕೊಂಡಾಡಲು ಮತ್ತು ನೆನಪಿನಲ್ಲಿಡಲು ವೀರಗಲ್ಲು, ಮಾಸ್ತಿ ಕಲ್ಲು ಗಳು ಅಸ್ತಿತ್ವಕ್ಕೆ ಬಂದವು. ಆನಂತರ ಸ್ಮಾರಕಗಳು, ಸಮಾಧಿಗಳ ಪರಿಕಲ್ಪನೆ ಮೂಡಿಬಂದಿತು. ಭಾರತಕ್ಕೆ ಬ್ರಿಟೀಷರು ಆಗಮನವಾದ ನಂತರ ಒಂದು ರೀತಿಯಲ್ಲಿ ಅವರ ಕೊಡುಗೆಯಂತಿರುವ ಪ್ರತಿಮೆಗಳ  ಸಂಸ್ಕøತಿ ನಮ್ಮನ್ನು ಆವರಿಸಿಕೊಂಡಿತು. ಇದು ಎಲ್ಲಿಯವರೆಗೆ ತಲುಪಿದೆಯೆಂದರೆ, ಮುಂದಿನ ದಿನಗಳಲ್ಲಿ ಇಡೀ ದೇಶದ ನಗರಗಳು ಪ್ರತಿಮೆಗಳಿಂದಾಗಿ, ಮುಸ್ಲಿಮರ ಅಥವಾ ಕ್ರೈಸ್ತ ಸಮುದಾಯದ  ರುದ್ರಭೂಮಿಯಂತೆ ಕಂಡರೂ ಆಶ್ಚರ್ಯವೇನಿಲ್ಲ.
ಇತ್ತೀಚೆಗೆ ನಮ್ಮ ಸರ್ಕಾರಗಳಿಗೆ ಮತ್ತು ರಾಜಕೀಯ ನಾಯಕರಿಗೆ ಪ್ರತಿಮೆಗಳ ಜೊತೆಗೆ, ಹಲವು ನಾಯಕರ  ನೆನಪಿನಲ್ಲಿ ಭವನಗಳನ್ನು ರೂಪಿಸುವ ಮಾನಸಿಕ ಕಾಯಿಲೆಯೊಂದು ಅಂಟಿಕೊಂಡಿದೆ. ಜಿಲ್ಲೆಗೊಂದು ಗಾಂಧಿಭವನ, ಅಂಬೇಡ್ಕರ್ ಭವನ, ಕನ್ನಡಭವನಗಳಾದವು, ಈಗ ಜಾತಿ ಸಮುದಾಯಗಳನ್ನು ಒಲೈಸುವ ನಿಟ್ಟಿನಲ್ಲಿ ಅನೇಕ ಭವನಗಳನ್ನು ನಿರ್ಮಿಸುವ ಯೋಜನೆಗಳು ಜಾತಿಯ ಸಮಾವೇಶಗಳಲ್ಲಿ ಘೋಷಿಸಲ್ಪಡುತ್ತಿವೆ. ಈವರೆಗೆ ಜಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಭವನಗಳು ಮತ್ತು ಕಲಾಭವನಗಳ ಸ್ಥಿತಿ ಗತಿ ಹೇಗಿವೆ ಎಂಬುದನ್ನು ಮತ್ತು ಅವುಗಳ ನಿರ್ವಹಣೆ ಹಾಗೂ ದುರಸ್ತಿಗಾಗಿ ಸರ್ಕಾರ ಖರ್ಚು ಮಾಡುತ್ತಿರುವ ಹಣವನ್ನು ಒಮ್ಮೆ ಗಮನಿಸಿದರೆ, ಮತ್ತೊಂದು ಸಮೃದ್ಧ ಕರ್ನಾಟಕವನ್ನು ನಾವು ನಿರ್ಮಾಣ ಮಾಡಬಹುದಿತ್ತು.



ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಕಲಾ ಭವನಗಳು, ಅಂಬೇಡ್ಕರ್ ಭವನಗಳು, ಹಾಗೂ ಇತರೆ ಸಾಂಸ್ಕøತಿಕ ಸಮುಚ್ಛಯಗಳು ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಇವುಗಳ ದುರಸ್ತಿ ಕಾರ್ಯವೆಂಬುದು ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಲಾಭದಾಯಕ ವೃತ್ತಿಯಾಗಿ ಪರಿಣಮಿಸಿದೆ. ಧಾರವಾಡದ ಮಲ್ಲಿಕಾರ್ಜುನ ಮನ್ಸೂರು ಕಲಾಭವನ ಆರು ವರ್ಷದ ಹಿಂದೆ ಸುಮಾರು ಒಂದು ಮುಕ್ಕಾಲು ಕೋಟಿ ವೆಚ್ಚದಲ್ಲಿ ದುರಸ್ತಿಯಾಗಿತ್ತು. ಈಗ ಮತ್ತೇ ಕಳೆದ ಒಂದೂವರೆ ವರ್ಷದಿಂದ ಐದು ಕೋಟಿ ವೆಚ್ಚದಲ್ಲಿ ದುರಸ್ತಿಯಾಗುತ್ತಿದೆ. ಇದೇ ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣವಾದ ಆಲೂರು ವೆಂಕಟರಾಯರ ಭವನ ಹಾಗೂ ಸುವರ್ಣ ಕರ್ನಾಟಕ ಸಾಂಸ್ಕøತಿಕ ಸಮುಚ್ಛಯ ಭವನಗಳು ವರ್ಷದಲ್ಲಿ ಮುವತ್ತು ದಿನಗಳ ಕಾಲ ಕಾರ್ಯಕ್ರಮಕ್ಕೂ ಬಳಕೆಯಾಗದೆ ಪಾಳುಬಿದ್ದಿವೆ. ಕಳೆದ ವರ್ಷ ಹುಬ್ಬಳ್ಳಿ ನಗರದಲ್ಲಿ  ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕನ್ನಡ ಭವನ ಇತ್ತೀಚೆಗೆ ತರಾತುರಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಬಂದರು ಎಂಬ ಕಾರಣಕ್ಕಾಗಿ ಉದ್ಘಾಟನೆಯಾಯಿತೆ ವಿನಃ ಯಾವುದೇ ಕಾರ್ಯಕ್ರಮಕ್ಕೆ ಬಳಕೆಯಾಗಿಲ್ಲ. ಇದು ಕೇವಲ ಹುಬ್ಬಳ್ಳಿ- ಧಾರವಾಡದ ಕಥೆ ಮಾತ್ರವಲ್ಲ.ಕರ್ನಾಟಕದ  ಎಲ್ಲಾ ಜಿಲ್ಲಾ ಕೇಂದ್ರಗಳ ಕಥೆಯೂ ಹೌದು.
ಈಗ ಪ್ರತಿ ಮಹಾನಗರ ಪಾಲಿಕೆ ಮತ್ತು ನಗರ ಸಭೆಗಳಲ್ಲಿ ಆಯಾ ನಗರಗಳು ಮತ್ತು ಜಿಲ್ಲೆಗಳ  ರಾಜಕೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವ ಕಾರ್ಯ ಭವಿಷ್ಯದ  ಮುಂದಾಲೋಚನೆ ಇಲ್ಲದೆ ನಡೆಯುತ್ತದೆ. ಇದು ಮುಂದಿನ ದಿನಗಳಲ್ಲಿ ಸಮುದಾಯಗಳ ನಡುವೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘóರ್ಷಕ್ಕೆ  ಹಾದಿ ಮಾಡಿಕೊಡಬಲ್ಲದು.
 ಕನ್ನಡ ಚಿತ್ರ ರಂಗದ ಮೇರು ನಟ ಡಾ. ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿ  ಅವರ ಸ್ಮಾರಕಾರ್ಥ ಕಂಠೀರವ ಸ್ಟುಡಿಯೊ ಆವರಣದಲ್ಲಿ ಸರ್ಕಾರ ಸುಮಾರು ಎರಡು ಎಕರೆ ಜಾಗ ನೀಡಿತು. ಇದು ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ ಒಬ್ಬ ಶ್ರೇಷ್ಟ ಕಲಾವಿದನಿಗೆ ಸಲ್ಲಬೇಕಾದ ನಿಜವಾದ ಗೌರವ, ಇದರ ಬಗ್ಗೆ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಇಂತಹದ್ದೇ ಅಪೇಕ್ಷೆ ಮತ್ತು ಬೇಡಿಕೆ   ವಿಷ್ಣುವರ್ಧನ್ ನಿಧಾನಾನಂತರ ಅವರ ಅಭಿಮಾನಿಗಳಿಂದ ವ್ಯಕ್ತವಾಯಿತು. ವಿಷ್ಣು ಅಭಿಮಾನಿಗಳ ಬೇಡಿಕೆ ಕೂಡ ಅರ್ಥಪೂರ್ಣವಾಗಿದೆ. ಆದರೆ, ಕರ್ನಾಟಕ ಸರ್ಕಾಕ್ಕೆ ಈವರೆಗೆ ವಿಷ್ಣು ವರ್ಧನ್ ಸ್ಮಾರಕಕ್ಕೆ ಸೂಕ್ತ ಜಾಗ ನೀಡಲು ಅಥವಾ ಗುರುತಿಸಲು  ಸಾಧ್ಯವಾಗಿಲ್ಲ. ಈಗಲೇ ಸರ್ಕಾರಕ್ಕೆ ಇಂತಹ ಸಮಸ್ಯೆಗಳು ಎದುರಾದರೆ, ಮುಂದಿನ ದಿನಗಳಲ್ಲಿ , ರಾಜ್ ಮತ್ತು ವಿಷ್ಣು ನಂತರದ ನಟರುಗಳ  ಅಭಿಮಾನಿಗಳ ಆಸೆ ಪೂರೈಸುವ ಬಗೆ ಹೇಗೆ?



ಪಶ್ಚಿಮ ಬಂಗಾಳ ಸರ್ಕಾರ ವಿಶ್ವ ವಿಖ್ಯಾತ ಸಿನಿಮಾ ನಿರ್ಧೇಶಕ ಸತ್ಯಜಿತ್ ರಾಯ್ ತೀರಿ ಹೋದ ಸಂದರ್ಭದಲ್ಲಿ , ಕೊಲ್ಕತ್ತ ನಗರದಲ್ಲಿ ಅವರ  ಹೆಸರಿನಲ್ಲಿ ಒಂದು ಫಿಲಂ ಇನ್ಸಿಟ್ಯೂಟ್ ಸ್ಥಾಪನೆ ಮಾಡಿತು. ರಾಯ್ ಅವರ ಸಮಗ್ರ ಸಿನಿಮಾಗಳು, ಅವರ ಚಿತ್ರಕತೆ, ಸಿನಿಮಾ ದೃಶ್ಯಕ್ಕೆ ಸಿದ್ದ ಪಡಿಸಿದ್ದ ರೇಖಾ ಚಿತ್ರಗಳು ಎಲ್ಲವನ್ನೂ ಅಲ್ಲಿ ಸಂಗ್ರಹಿಸಿ ಇಡಲಾಗಿದೆ. ಇಂತಹ ಕೆಲಸಗಳು, ಯಾವುದೇ ಸಾಂಸ್ಕøತಿಕ ಅಥವಾ ಇತರೆ ವಲಯದ ಧೀಮಂತ ನಾಯಕರ ನೆನಪಿಗೆ ನಾವು ಹಾಕಿಕೊಳ್ಳಬಹುದಾದ ಯೋಜನೆಗಳಿಗೆ ಮಾರ್ಗದರ್ಶಿಯಾಗಿದೆ.

ಈ ದಿನಗಳಲ್ಲಿ ಜಾತಿಯ ಸಮಾವೇಶಗಳಿಗೆ ಹೋಗಿ  ಆವೇಶದಿಂದ ಪ್ರತಿಮೆಗಳ ಕುರಿತು ಮತ್ತು  ಭವನಗಳ ಕುರಿತು  ಮಾತನಾಡುವ ಮುನ್ನ ನಮ್ಮ ಜನಪ್ರತಿನಿಧಿಗಳು ನೂರು ಬಾರಿ ಯೋಚಿಸಬೇಕಿದೆ. ಜಾತಿಗೊಂದು, ಮಠ, ಭವನ, ಒಬ್ಬ ಮಠಾಧೀಶ ಇಂತಹ ಓಲೈಕೆ ರಾಜಕಾರಣದಿಂದ  ಯಾವುದೇ ಸಮುದಾಯ ಬೌದ್ಧಿಕವಾಗಿ, ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಉದ್ಧಾರವಾಗಲಾರದು. ಇಂತಹ ಸಮುದಾಯದ ಜನರು ರಾಜಕೀಯ ಪಕ್ಷಗಳ ಪಾಲಿಗೆ ನಡೆದಾಡುವ ಜೀವಂತ ಮತಗಳಾಗಬಲ್ಲರೆ ಹೊರತು ಮನುಷ್ಯರಾಗಲು ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ