ಶುಕ್ರವಾರ, ಜನವರಿ 31, 2025

ವ್ಯಾಖ್ಯಾನಕ್ಕೆ ನಿಲುಕದ ಮಹಾತ್ಮನ ಬದುಕು.



ದಿನಾಂಕ 25 ಶನಿವಾರ ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಕರ್ನಾಟಕ ಸಂಗೀತದ ಮೇರು ಪ್ರತಿಭೆಗಳಾದ ವೀಣಾ ಧನಮ್ಮಾಳ್ ಮತ್ತು ಧನಕೋಟಿ ಅಮ್ಮಾಳ್ ಕುರಿತು ಬರೆದ ಎರಡು ಅಧ್ಯಾಯಗಳ ಮಾಹಿತಿ ಕುರಿತು ಮರು ಪರಿಶೀಲನೆಗಾಗಿ ಸಂಗೀತದ ಇತಿಹಾಸ ಕುರಿತ ಪುಸ್ತಕಗಳಿಗಾಗಿ ನನ್ನ ಲೈಬ್ರರಿಯಲ್ಲಿ ತಡಕಾಡುತ್ತಿದ್ದೆ. ಇಂಗ್ಲೀಷ್ ಪುಸ್ತಕಗಳ ಕಪಾಟಿನಲ್ಲಿ ಕೈ ಬೆರಳುಗಳಿಗೆ ತಾಕಿದ ಕಸ್ತೂರ ಬಾ ಅವರ ‘’ಅನ್ ಟೋಲ್ಡ್ ಸ್ಟೋರಿ ಆಫ್ ಕಸ್ತೂರಬಾ’’ ಕೃತಿಯ ಮುಂದಕ್ಕೆ ಬೆರಳುಗಳು ಚಲಿಸಲಿಲ್ಲ. ಪುಸ್ತಕ ಎಳೆದುಕೊಂಡು ದೂಳು ಒರೆಸಿ, 26 ರ ಭಾನುವಾರದಿಂದ ಮತ್ತೇ ಕೃತಿಯ ಮೇಲೆ ಕಣ್ಣಾಡಿಸಿದೆ. ನನ್ನ ಮೇಲೆ ಪ್ರಭಾವ ಬೀರಿದ ಕೃತಿಗಳಲ್ಲಿ ಇದೂ ಸಹ ಒಂದಾಗಿತ್ತು.

ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಗಾಂಧಿಯ ದುರಂತಗಾಥೆ ಕುರಿತು ಸಪ್ನ ಬುಕ್ ಹೌಸ್ ಪ್ರಕಾಶನ ಸಂಸ್ಥೆಗಾಗಿ 2019 ರಲ್ಲಿ ‘’ ಮಹಾತ್ಮನ ಪುತ್ರ’’ ಎಂಬ ಹೆಸರಿನಲ್ಲಿ ಪುಸ್ತಕ ಬರೆಯುವಾಗ, ಈ ಕೃತಿಯನ್ನು ತರಿಸಿಕೊಂಡು ಓದಿದ್ದೆ. ಕಸ್ತೂರ ಬಾ ಮತ್ತು ಗಾಂಧೀಜಿ ಇಬ್ಬರೂ ತಂದೆ ತಾಯಿಯಾಗಿ ಅನುಭವಿಸಿದ ಮಾನಸಿಕ ವೇದನೆಗಳ ಬಗ್ಗೆ ತಳಮಳಗೊಂಡಿದ್ದೆ. ಕಸ್ತೂರ ಬಾ ಕುರಿತಾಗಿ ಇಂಗ್ಲೀಷ್ ಭಾಷೆಯಲ್ಲಿ ಐದಾರು ಕೃತಿಗಳು ಪ್ರಕಟವಾಗಿದ್ದರೂ ಸಹ, ಅವರ ಮೊಮ್ಮಗ ಹಾಗೂ ಮಣಿಲಾಲ್ ಗಾಂಧಿ ಅವರ ಪುತ್ರ ಅರುಣ್ ಗಾಂಧಿಯವರು ತಮ್ಮ ಪತ್ನಿ ಸುನಂದಾ ಅವರ ಜೊತೆಗೂಡಿ ರಚಿಸಿರುವ ಈ ಕೃತಿಗೆ ನಾನು ಪ್ರಥಮ ಆದ್ಯತೆಯನ್ನು ನೀಡಿದ್ದೆ. ಏಕೆಂದರೆ, ನೊಂದವರ ನೋವನ್ನು ನೊಂದವರಷ್ಟೇ ಬಲ್ಲರು. ಈ ಕೃತಿಯ ಪ್ರಸ್ತಾವನೆಯಲ್ಲಿ ಅರುಣ್ ಅವರು ತನ್ನ ಅಜ್ಜ ಮತ್ತು ಅಜ್ಜಿಯ ಕುರಿತಾಗಿ ಬರೆಯುತ್ತಾ, ‘’ ವಿಶಾಲವಾಗಿ ಹರಡಿದ ಬೃಹತ್ ಆಲದ ಮರದ ಕೆಳಗೆ ಏನೂ ಬೆಳೆಯುವುದಿಲ್ಲ’’ ಎಂಬ ಮಾತನಾಡಿದ್ದಾರೆ.

ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಜೀವನ ಗಾಥೆಯನ್ನು ಗಮನಿಸಿದಾಗ, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಭಾರತದ ಸಾರ್ವಜನಿಕ ಬದುಕಿನಲ್ಲಿ ಅನಾಮಿಕರಾಗಿ ಉಳಿದುಕೊಂಡರು. ರಾಜಕಾರಣಿಯ ಮಗ ರಾಜಕಾರಣಿಯಾಗಿ, ಸಿನಿಮಾ ನಟನ ಮಗ ನಟನಾಗಿ, ಕ್ರಿಕೇಟ್ ತಾರೆಯರ ಮಕ್ಕಳು ಆಟಗಾರಾಗಿ, ಉದ್ಯಮಿ ಮಕ್ಕಳು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಲೋಕದಲ್ಲಿ ಗಾಂಧೀಜಿಯ ಸಂತಾನದಲ್ಲಿ ಯಾರೊಬ್ಬರು ಏನೂ ಆಗಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕಾಗಿ ಇಡೀ ಬದುಕನ್ನು ತೆತ್ತುಕೊಂಡ ಮಹಾತ್ಮ ಎಂದಿಗೂ ತನ್ನ ವೈಯಕ್ತಿಕ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಗಾಂಧೀಜಿ ಕುರಿತಾಗಿ ಸಿದ್ಧಾಂತಗಳ ನೆಪದಲ್ಲಿ ವಿಷ ಕಕ್ಕುವ ವಿಷಜಂತುಗಳು ಒಮ್ಮೆ ತಣ್ಣಗೆ ಕುಳಿತು ಈ ಬಗ್ಗೆ ಯೋಚಿಸಬೇಕಾಗಿದೆ. ತನ್ನ ಮೇಲಿನ ಆರೋಪ ಅಥವಾ ದೂರನ್ನು ನನ್ನ ಜಾತಿಯ ಮೇಲಿನ ಹಲ್ಲೆ, ನಮ್ಮ ಸಮುದಾಯದ ಮೇಲಿನ ಹಲ್ಲೆ ಎಂದು ಬೊಬ್ಬಿರಿಯುವ ಇಂದಿನ ರಾಜಕಾರಣದ ಬಬ್ರುವಾಹನರು ಮತ್ತು ಮಹಾತ್ಮನ ಬದುಕಿನ ನಡುವೆ ಎಷ್ಟೊಂದು ಅಂತರವಿದೆ ಎಂಬುದು ಅರ್ಥವಾಗುತ್ತದೆ.
ಗುಜರಾತಿನ ರಾಜ್ ಕೋಟ್ ನಗರದ ಪ್ರಸಿದ್ಧ ವ್ಯಾಪಾರಿಯೊಬ್ಬರ ಪುತ್ರಿಯಾಗಿ ಜನಿಸಿದ ಕಸ್ತೂರ ಬಾ ಅವರು ವೃತ್ತಿಯಲ್ಲಿ ವಕೀಲರಾಗಿದ್ದ ಗಾಂಧಿಯವರನ್ನು ಕೈ ಹಿಡಿದು , ಒಡಲಾಳದ ನೋವುಗಳನ್ನು ನುಂಗುತ್ತಾ, ದಾಂಪತ್ಯ ಬದುಕಿನುದ್ದಕ್ಕೂ ಸಂತನೊಬ್ಬನ ಪತ್ನಿಯಾಗಿ ಅಕ್ಷರಶಃ ಸಂತಳಂತೆ ಬದುಕಿದುರು. ಅವರ ಬದುಕಿನ ಒಂದೊಂದು ಅಧ್ಯಾಯವು ಓದುಗರ ಮನಕರಗಿಸುತ್ತದೆ. 1942 ರಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿ ಘೋಷಿಸಿದಾಗ ಅವರ ಜೊತೆ ಬಂಧಿತರಾಗಿ ಪುಣೆಯ ಆಗಖಾನ್ ಅರಮನೆಯ ಗೃಹ ಬಂಧನದಲ್ಲಿ ಜೀವಿಸುತ್ತಾರೆ. 1942 ರ ಆಗಸ್ಟ್ ಮೊದಲ ವಾರ ಬಂಧಿತರಾದ ಮಹಾದೇವ ದೇಸಾಯಿ ಅವರು ಬಂಧನಕ್ಕೊಳಗಾದ ವಾರದಲ್ಲಿ ಅಂದರೆ, 1942 ರ ಆಗಸ್ಟ್ 15 ರಂದು ತಮ್ಮ ಐವತ್ತನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರೆ, 1944 ರ ಪೆಬ್ರವರಿ 22 ರಂದು ಅದೇ ಆಗಖಾನ್ ಅರಮನೆಯಲ್ಲಿ ಕಸ್ತೂರ ಬಾ ಅವರು ಹೃದಯಾಘಾತದಿಂದ ನಿಧನ ಹೊಂದಿದರು.
ಈಗ ಗಾಂಧಿ ಟ್ರಸ್ಟ್ ಆಗಿ ಪರಿವರ್ತನೆ ಹೊಂದಿರುವ ಆಗಖಾನ್ ಅರಮನೆಯ ಹಿಂಭಾಗ, ಮಹಾದೇವದಾಸಾಯಿ ಮತ್ತು ಕಸ್ತೂರಬಾ ಇಬ್ಬರ ಸಮಾಧಿಗಳಿವೆ. 320 ಪುಟಗಳ ಈ ಕೃತಿಯಲ್ಲಿ ಕೊನೆಯ ಎರಡು ಅಧ್ಯಾಯಗಳು ಓದುಗರ ಕಣ್ಣಲ್ಲಿ ನೀರು ತರಿಸುತ್ತವೆ, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ತೆತ್ತುಕೊಂಡ ನಂತರ ಅವರು ಮತ್ತು ಕಸ್ತೂರ ಬಾ ಇಬ್ಬರೂ ತಮ್ಮ ನಾಲ್ವರು ಮಕ್ಕಳನ್ನು ಒಟ್ಟಿಗೆ ನೋಡಲು ಸಾಧ್ಯವಾಗಲಿಲ್ಲ. ಕಸ್ತೂರ ಬಾ ನಿಧನರಾದಾಗ, ಮಣಿಲಾಲ್ ದಕ್ಷಿಣ ಆಫ್ರಿಕಾದಲ್ಲಿ ಇದ್ದ ಕಾರಣ ಬರಲಾಗಲಿಲ್ಲ. ಹಿರಿಯ ಪುತ್ರ ಹರಿಲಾಲ್ ಮದ್ಯ ವ್ಯಸನಿಯಾಗಿ ಪುಣೆ ಮತ್ತು ಬಾಂಬೆ ನಗರದಲ್ಲಿ ಬೀದಿ ಬೀದಿ ಅಲೆಯುತ್ತಿದ್ದ ಕಾರಣ ಆತನು ತಾಯಿ ಮತ್ತು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಂತಿಮವಾಗಿ ರಾಮದಾಸ್ ಮತ್ತು ದೇವದಾಸ್ ಇಬ್ಬರು ಪುತ್ರರು ತಾಯಿಯ ಅಂತ್ಯಕ್ರಿಯೆ ನೆರವೇರಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೆ ಭಾರತದ ನೆಲದಲ್ಲಿ ತನ್ನದು ಎಂಬ ಒಂದು ಮನೆಯಿರಲಿಲ್ಲ. ಒಂದು ಅಥವಾ ಎರಡು ಅವಧಿಗೆ ಜನಪ್ರತಿಯಾದರೆ ಸಾಕು, ಮಿನಿ ಸಾಮ್ರಾಜ್ಯವನ್ನು ನಿರ್ಮಿಸುವ ಇಂದಿನ ರಾಜಕಾರಣಿಗಳನ್ನು ಇಂದ್ರ, ಚೆಂದ್ರ ಎಂದು ಹೊಗಳುವ ಮುನ್ನ ನಮ್ಮ ಆತ್ಮ ಸಾಕ್ಷಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ.
ಗಾಂಧೀಜಿಯವರ ಜೊತೆ ಅವರ ಎಲ್ಲಾ ಬಗೆಯ ಹೋರಾಟಗಳಿಗೆ ತನು ಮನುವನ್ನು ತೆತ್ತ ಕಸ್ತೂರಬಾ ಅವರಿಗೆ ತಮ್ಮ ಹಿರಿಯ ಮಗ ಹರಿಲಾಲ್ ದುರಂತ ಬದುಕು ತೀವ್ರವಾಗಿ ಕಾಡಿತ್ತು. ಗಾಂಧೀಜಿಯ ಅನುಪಸ್ಥಿತಿಯಲ್ಲಿ ತಮ್ಮ ಮೊದಲ ಪುತ್ರ ಹರಿಲಾಲ್ ಮಗುವಾಗಿದ್ದಾಗ ಆತನ ಮೂಲಕ ನೆಮ್ಮದಿಯನ್ನು ಕಂಡಿದ್ದ ಕಸ್ತೂರ ಬಾ ಅವರು ನಂತರದ ದಿನಗಳಲ್ಲಿ ಬದುಕಿನುದ್ದಕ್ಕೂ ಒಳಗೊಳಗೆ ಅತ್ತು ದುಃಖ ನೀಗಿಸಿಕೊಂಡಿದ್ದರು. 1944 ರ ಜನವರಿ ತಿಂಗಳಿನಲ್ಲಿ ಎರಡು ಬಾರಿ ಹೃದಾಪಾಘಾತಕ್ಕೆ ಅವರು ಒಳಗಾದಾಗ, ಬ್ರಿಟಿಷ್ ಸರ್ಕಾರ ಅವರ ಮಕ್ಕಳಿಗೆ ಯಾವುದೇ ಅಡೆತಡೆ ಇಲ್ಲದೆ ತಂಧೆ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಕಸ್ತೂರ ಬಾ ಹರಿಲಾಲ್ ನನ್ನು ನೋಡಬೇಕು ಎಂದು ಇಚ್ಚಿಸಿದಾಗ, ಪುಣೆ ಪೊಲೀಸರು ಹರಿಲಾಲ್ ಗಾಗಿ ಹುಡುಕಾಟ ನಡೆಸಿ ನಂತರ ಬಾಂಬೆ ನಗರದಲ್ಲಿ ಪತ್ತೆ ಮಾಡಿ ಆತನನ್ನು ಕರೆತಂದು ಅಮ್ಮನ ಎದುರು ನಿಲ್ಲಿಸಿದರು.
ಅತ್ಯಂತ ಕೊಳಕಾದ ವಸ್ತ್ರಗಳನ್ನು ಧರಿಸಿದ್ದ ಹರಿಲಾಲ್ ಕಂಠಪೂರ್ತಿ ಕುಡಿದು ಹೆತ್ತ ತಾಯಿಯ ಎದುರು ನಿಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದನು. ತಾನು ಹೆತ್ತ ಪ್ರೀತಿಯ ಮಗನನ್ನು ಈ ಸ್ಥಿತಿಯಲ್ಲಿ ಕಣ್ಣಾರೆ ನೋಡಿದ ಕಸ್ತೂರ ಬಾ ಅವರು ಏನೊಂದು ಮಾತನಾಢದೆ, ಹಣೆ ಚಚ್ಚಿಕೊಂಡು ಸೆರಗಿನಲ್ಲಿ ಮುಖಮುಚ್ಚಿಕೊಂಡು ಗಳ ಗಳನೆ ಅತ್ತರು. ಅಂದಿನಿಂದ ಅವರು ಊಟ, ಔಷಧ ಎಲ್ಲವನ್ನೂ ತ್ಯೆಜಿಸಲು ನಿರ್ಧರಿಸಿದರು. ಪೆಬ್ರವರಿ 19 ರಂದು ಗಾಂಧಿ ಮತ್ತು ವೈದ್ಯರು ಕಸ್ತೂರ ಬಾ ಅವರಿಗೆ ಒತ್ತಾಯ ಮಾಡಬಾರದು ಎಂದು ನಿರ್ಧರಿಸಿದರು. ದೇವದಾಸ್ ಮತ್ತು ರಾಮದಾಸ್ ಅವರಿಗೆ ಸುದ್ದಿ ಮುಟ್ಟಿಸಲಾಯಿತು. ಕಿರಿಯ ಪುತ್ರ ದೇವದಾಸ್ ಪೆಬ್ರವರಿ 21 ರಂದು ತಾನು ಜೊತೆಯಲ್ಲಿ ತಂದಿದ್ದ ಗಂಗಾ ಜಲವನ್ನು ಅಮ್ಮನ ಬಾಯಿಗೆ ಹಾಕಿದರು. ಅಂದು ನೀರು ಕುಡಿದು ಮಲಗಿದ ಕಸ್ತೂರ ಬಾ 22 ರಂದು ಶಾಶ್ವತವಾಗಿ ಕಣ್ಣು ಮುಚ್ಚಿದರು.
ಕಸ್ತೂರ ಬಾ ಸಾವಿನ ನಂಥರ ರಾಷ್ಟ್ರದ ಗಣ್ಯರಿಗೆ ಮಾತ್ರ ಅರಮನೆಗೆ ಪ್ರವೇಶವಿತ್ತು. ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಅರಮನೆಯ ಆವರಣದಲ್ಲಿಅಂತ್ಯ ಸಂಸ್ಕಾರಕ್ಕೆ ಗಾಂಧೀಜಿ ನಿರ್ಧರಿಸಿದರು. ಬಾಂಬೆ ನಗರದ ಗಣ್ಯ ಉದ್ಯಮಿಗಳು ಶ್ರೀಗಂಧದ ಕಟ್ಟಿಗೆ ತರಲು ಆಲೋಚನೆ ಮಾಡುತ್ತಿದ್ದಂತೆ, ಸಾಮಾನ್ಯ ಕಟ್ಟಿಗೆ ಸಾಕು ನಾನು ಬಡವ ಅಂತಹುಗಳಿಗೆ ಖರ್ಚು ಮಾಡುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಗಾಂಧಿ ನುಡಿದರು. ಆ ಸಮಯದಲ್ಲಿ ಅಲ್ಲೇ ಇದ್ದ ಬ್ರಿಟಿಷ್ ಮೇಲಾಧಿಕಾರಿ ಗಾಂಧೀಜಿ ಬಳಿ ತೆರಳಿ ನೀವು ಒಪ್ಪಿಗೆ ಕೊಟ್ಟರೆ ಯರವಾಡ ಜೈಲಿನಿಂದ 800 ಕೆ.ಜಿ. ಶ್ರೀಗಂಧ ಕಟ್ಟಿಗೆ ಇದೆ ತರಿಸುತ್ತೇನೆ ಎಂದನು. ಜೈಲಿಗೆ ಶ್ರೀಗಂಧ ಕಟ್ಟಿಗೆ ಹೇಗೆ ಬಂದಿತು ಎಂದು ಗಾಂಧೀಜಿ ವಿಚಾರಿಸಿದರು. ಆ ಅಧಿಕಾರಿ ಯಾವುದೇ ಮುಚ್ಚು ಮರೆ ಇಲ್ಲದೆ ‘’ ನೀವು 21 ದಿನ ಉಪವಾಸ ಸತ್ಯಾಗ್ರಹ ಮಾಡಿದಾಗ, ಬದುಕುವುದಿಲ್ಲ, ಸಾಯುತ್ತೀರಿ ಎಂದು ನಿರ್ಧರಿಸಿ ಸರ್ಕಾರ ಶ್ರೀಗಂಧವನ್ನು ತರಿಸಿ ಇಟ್ಟಿತ್ತು ಸರ್’ ಎಂದು ನುಡಿದನು.
ಗಾಂಧೀಜಿಯವರಿಗೆ ಪತ್ನಿ ಕಳೆದುಕೊಂಡ ದುಃಖದ ನಡುವೆ ಮುಖದಲ್ಲಿ ಮಂದಹಾಸ ಮಿಂಚಿತು. ‘’ಓಹ್, ಹಾಗಾದರೆ ಅದು ನನ್ನ ಆಸ್ತಿ’’ ಎಂದರು. ಜೊತೆಗೆ ಒಪ್ಪಿಗೆ ನೀಡಿದರು. ಮುಂಬೈ ನಗರದಲ್ಲಿದ್ದ ಸುಶೀಲಾ ನಯ್ಯರ್ ಮತ್ತು ಮೀರಾ ಬೆಹನ್ ಪುಣೆ ನಗರಕ್ಕೆ ಆಗಮಿಸ ಕಸ್ತೂರ ಬಾ ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ ಹೊಸ ಖಾದಿ ಸೀರೆ ತೊಡಿಸಿ, ಮಲ್ಲಿಗೆ ಹೂ ಮುಡಿಸಿ ಮಲಗಿಸಿದರು. ಗಾಂಧೀಜಿಯವರ ಅನೇಕ ಸಹವರ್ತಿಗಳ ನಡುವೆ ಅರಮನೆಯ ಹಿಂಭಾಗದಲ್ಲಿ ದೇವದಾಸ್ ತನ್ನ ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪತ್ನಿಯ ಚಿತೆ ಉರಿಯುತ್ತಿರುವಾಗ ಅದರ ಎದುರು ನಿಂತಿದ್ದ ಗಾಂಧೀಕಿಯವರು ದುಃಖ ತಡೆಯಲಾರದೆ ‘’ ಇಂದು ನನ್ನ ದೇಹದ ಮತ್ತು ಆತ್ಮದ ಅರ್ಧ ಭಾಗ ಸುಟ್ಟುಹೋಯಿತು’’ ಎಂದು ಎಲ್ಲರಿಗೂ ಕೇಳಿಸುವಂತೆ ಹೇಳಿ ಬಿಕ್ಕಿ ಬಿಕ್ಕಿ ಅತ್ತರು. ಆ ರಾತ್ರಿ ಮಕ್ಕಳಾದ ರಾಮದಾಸ್ ಮತ್ತು ದೇವದಾಸ್ ಇಬ್ಬರಿಗೂ ಆಗಖಾನ್ ಅರಮನೆಯಲ್ಲಿ ತಂಗಲು ಬ್ರಿಟಿಷ್ ಅಧಿಕಾರಿಗಳು ಅವಕಾಶ ನೀಡಿದರು. ಮರುದಿನ ತಾಯಿಯ ಚಿತಾಭಸ್ಮವನ್ನು ಸಂಗ್ರಹಿಸಿಕೊಂಡು ಅಲಹಾಬಾದಿನ ತ್ರಿವೇಣಿ ಸಂಗಮದತ್ತ ಅವರು ಹೋದರು.

1944 ರ ಪೆಬ್ರವರಿ 23 ರಂದು ದೇಶದ ಎಲ್ಲಾ ಪತ್ರಿಕೆಗಳು ಸಂಪಾದಕೀಯ ಲೇಖನ ಬರೆಯುವುದರ ಮೂಲಕ ಕಸ್ತೂರ ಬಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದವು. ಬಾಂಬೆಯ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ಆ ದಿನ ಅರ್ಥಪೂರ್ಣವಾದ ಸಂಪಾದಕೀಯ ಲೇಖನವನ್ನು ಪ್ರಕಟಿಸಿತು. ( ಕೃತಿಯಲ್ಲಿ ಅದು ಸಹ ದಾಖಲಾಗಿದೆ.) ಕಸ್ತೂರ ಬಾ ಅವರ ಸಾವಿನೊಂದಿಗೆ ಗಾಂಧೀಜಿಯವರ ಸಾರ್ವಜನಿಕ ಹೋರಾಟದ ಬದುಕು ಅಂತ್ಯಗೊಂಡಿತು. ಅವರು ಸೆರೆಮನೆಯಿಂದ ಅನಾರೋಗ್ಯದ ನಿಮಿತ್ತ ಬಿಡುಗಡೆಯಾಗುವ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದು ಖಚಿತವಾಗಿತ್ತು. ಅವರು ಸ್ವಾತಂತ್ರ್ಯದ ಹೋರಾಟವನ್ನು ಬದಿಗೊತ್ತು ಬುಗಿಲೆದ್ದ ಕೋಮುವಾದದ ದಳ್ಳುರಿಯನ್ನು ನಂದಿಸಲು ಶ್ರಮಿಸುತ್ತಾ , ಪತ್ನಿಯ ಸಾವಿನ ಜೊತೆ ಅರ್ಧ ಬೆಂದು ಹೋಗಿದ್ದ ಅವರು ಕೋಮು ದಳ್ಳುರಿಯಲ್ಲಿ ಪೂರ್ಣ ಬೆಂದು ಹೋದರು. ಗೋಡ್ಸೆ ಎಂಬ ಹಂತಕ ಮತ್ತು ಕ್ರೂರ ಮೃಗ ತನ್ನ ಪಿಸ್ತೂಲಿನಿಂದ ಹಾರಿಸಿದ ಮೂರು ಗುಂಡುಗಳು ಮಹಾತ್ಮ ಗಾಂಧಿ ಅವರ ದೇಹಕ್ಕೆ ತಾಗಲಿಲ್ಲ. ಬದಲಾಗಿ ತಾನು ಕನಸಿದ ಭಾರತದ ನನಗೆ ಧಕ್ಕಲಿಲ್ಲವಲ್ಲ ಎಂದು ಕೊರಗಿ ನಿರ್ಜೀವವಾಗಿದ್ದ ಗಾಂಧಿಯವರ ದೇಹಕ್ಕೆ. ಇದು ನಾವು ಅರಿಯಬೇಕಾದ ನೈಜ ಇತಿಹಾಸ.
ಇಂದು ಗಾಂಧೀಜಿಯವರನ್ನು ಟೀಕಿಸುವುದನ್ನು ವೃತ್ತಿ ಅಥವಾ ಹವ್ಯಾಸ ಮಾಡಿಕೊಂಡಿರುವ ಅವಿವೇಕಿಗಳು ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಇದು. ಈ ಜಗತ್ತಿನಲ್ಲಿ ದಾರ್ಶನೀಕರಿಗೆ ದೇಶ, ಭಾಷೆ ಮತ್ತು ಧರ್ಮದ ಹಂಗಿಲ್ಲ. ಅವರು ಆಕಾಶದುದ್ದಕ್ಕೂ ಬೆಳೆದು ನಿಂತವರು. ಭಾರತದ ಬುದ್ಧ, ಬಸವಣ್ಣ, ಗಾಂಧಿ ಅವರಿಗೆ ಮತ್ತು ಅವರ ಚಿಂತನೆಗಳಿಗೆ ಎಂದಿಗೂ ಸಾವಿಲ್ಲ. ನೀವು ಟೀಕಿಸುವುದು ಎಂದರೆ, ಆಕಾಶಕ್ಕೆ ಉಗುಳಿದಂತೆ. ಅದು ಅಂತಿಮವಾಗಿ ನಿಮ್ಮ ಮುಖದ ಮೇಲೆ ಬೀಳುತ್ತದೆ.
( ಇಂದಿಗೆ ಗಾಂಧಿ ನಮ್ಮನ್ನು ಅಗಲಿ ಎಪ್ಪತ್ತಳು ವರ್ಷಗಳಾದವು. ಅವರ ನೆನಪಿಗಾಗಿ ಬರೆದ ಲೇಖನ. ಇಂತಹ ಲೇಖನಗಳನ್ನು ಇಂದಿನ ದಿನಪತ್ರಿಕೆಗಳಿಗೆ 400 ಅಥವಾ 500 ಶಬ್ದಗಳ ಮಿತಿಯಲ್ಲಿ ಚೌ ಚೌ ಬಾತ್ ಶೈಲಿಯಲ್ಲಿ ಬರೆಯಲಾಗದು)
ಎನ್.ಜಗದೀಶ್ ಕೊಪ್ಪ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ