ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ.
ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಹುದ್ದೆಯಲ್ಲಿದ್ದುಕೊಂಡು, ನೀವು ನಂಬಿರುವ ಸಿದ್ಧಾಂತಕ್ಕೂ, ನಾನು ನಂಬಿಕೊಂಡು ಬಂದಿರುವ ಸಿದ್ಧಾಂತಕ್ಕೂ ಏಳು ಸಮುದ್ರಗಳ ಅಂತರವಿದೆ. ಆದರೂ ಸಹ ನಿಮ್ಮ ಬಗ್ಗೆ ಗೌರವ ಇಟ್ಟುಕೊಂಡಿದ್ದೀನಿ. ಕನ್ನಡಿಗರಾದ ನಿಮ್ಮ ಜೊತೆ ಇಂದಿಗೂ ಸಹ ಸಂವಾದ ಸಾಧ್ಯವಿದೆ ಎಂಬುದು ಮೊದಲನೆಯ ಕಾರಣವಾದರೆ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿಮ್ಮ ಜೊತೆ ಸಂವಹನ ಸಾಧ್ಯ ಎಂದು ನಂಬಿದ್ದೀನಿ. ನೀವು ಕುವೆಂಪು, ಲಂಕೇಶ್, ಅನಂತಮೂರ್ತಿ ಹಾಗೂ ಜೆ.ಹೆಚ್.ಪಟೇಲ್, ಕಾಗೋಡು ತಿಮ್ಮಪ್ಪ ಮತ್ತು ಬಂಗಾರಪ್ಪ ಇಂತಹ ಮಹನೀಯರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದವರು.
ಈ ದಿನ ನೀವು ಗುಲ್ಬರ್ಗಾ ಜಿಲ್ಲೆಯ ಸೇಡಂ ನಲ್ಲಿ ನಿಮ್ಮ ಸಂಘಟನೆಯ ವತಿಯಿಂದ ನಡೆಸುತ್ತಿರುವ ಭಾರತೀಯ ಸಂಸ್ಕೃತಿ ಎಂಬ ಶಿಬಿರದಲ್ಲಿ ಯುವಕರ ಕೈಗೆ ಬಂದೂಕ ನೀಡಿ ನಕ್ಸಲರನ್ನಾಗಿ ಮಾಡಲಾಗುತ್ತಿದೆ ಎಂದು ಈ ದೇಶದ ಪ್ರಜ್ಞಾವಂತರ ಬಗ್ಗೆ ಆರೋಪಿಸಿದ್ದೀರಿ. ನೀವು ಮತ್ತು ನಿಮ್ಮ ಸಂಘಟನೆಯ ನಾಯಕರು ಹಿಂದೂ ಧರ್ಮದ ಭಜನೆ ಮತ್ತು ಹಿಂದುತ್ವ ಕುರಿತಾದ ಪುರಾಣ ಓದುವಿಕೆಯನ್ನು ಬದಿಗೊತ್ತಿ ಪ್ರಸಕ್ತ ಭಾರತದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ತೆರೆದ ಹೃದಯದಿಂದ ನೋಡುವುದನ್ನು ಕಲಿಯಬೇಕಿದೆ.
ನೀವು ಪ್ರತಿನಿಧಿಸುತ್ತಿರುವ ಆರ್.ಎಸ್.ಎಸ್. ಸಂಘಟನೆ ಮತ್ತು ಭಾರತೀಯ ಕಮ್ಯೂನಿಷ್ಟ್ ಪಕ್ಷ ಈ ಎರಡು ಸಂಘಟನೆಗಳಿಗೆ ಈಗ ಶತಮಾನೋತ್ಸವ. 1925 ರಲ್ಲಿ ಕೇವಲ ಎರಡು ಮೂರು ತಿಂಗಳ ಅವಧಿಯಲ್ಲಿ ಈ ಸಂಸ್ಥೆಗಳು ಜನ್ಮತಾಳಿದವು. ನಿಮಗಿಂತ ಮುಂಚೆ ಅಂದರೆ, 1921 ರಲ್ಲಿ ಆಂಧ್ರ ಮಹಾಸಭಾ ಎಂಬ ಸಂಘಟನೆಯು ಜನ್ಮತಾಳಿದ ಬಗ್ಗೆ ನಿಮಗೆ ಮಾಹಿತಿಯಿಲ್ಲ. ಮುಂದಿನ ಮಾರ್ಚ್ ತಿಂಗಳ ಹೊಸತು ಮಾಸ ಪತ್ರಿಕೆಗೆ ನಾನು ಬರೆಯುತ್ತಿರುವ ಬಹು ಸಂಸ್ಕೃತಿ ಎಂಬ ಅಂಕಣ ಬರಹಕ್ಕೆ ನೆರೆಯ ಆಂಧ್ರದ ಈ ಸಂಘಟನೆಯ ಇತಿಹಾಸ ಮತ್ತು 1944 ರಿಂದ 1955 ರ ವರೆಗೆ ನಡೆದ ತೆಲಂಗಾಣ ಹೋರಾಟ ಕುರಿತ ಕೃತಿಗಳನ್ನು ಓದುತ್ತಿದ್ದೀನಿ.
ದೆಹಲಿಯ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ನಿಂದ 1083 ರಲ್ಲಿ ಪ್ರಕಟಿಸಿರುವ ‘’ಭಾರತದಲ್ಲಿ ರೈತ ಚಳುವಳಿ 1920-50’’ ಹಾಗೂ 1981 ರಲ್ಲಿ ದೆಹಲಿಯ ವಿಕಾಸ್ ಪಬ್ಲಿಷಿಂಗ್ ಹೌಸ್ ನಿಂದ 1981 ರಲ್ಲಿ ಪ್ರಕಟವಾಗಿರುವ ‘’ ದ ತೆಲಂಗಾಣ ಮೂವ್ ಮೆಂಟ್’’ ಎಂಬ ಇಂಗ್ಲೀಷ್ ಕೃತಿಗಳನ್ನು ಓದಿರಿ. ಇವುಗಳ ಜೊತೆ 2013 ರಲ್ಲಿ ನಾನು ರಚಿಸಿರುವ ‘’ ಎಂದೂ ಮುಗಿಯದ ಯುದ್ಧ’’ ಎಂಬ ಭಾರತದ ನಕ್ಸಲ್ ಇತಿಹಾಸ ಕುರಿತ ಕೃತಿಯನ್ನೂ ಓದಿರಿ. ಸಪ್ನ ಬುಕ್ ಹೌಸ್ ನಿಂದ ಪ್ರಕಟವಾದ ಈ ಕೃತಿಯು ನನಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದುಕೊಡುವುದರ ಜೊತೆಗೆ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ನಾವು ನೋಡುವ ಮತ್ತು ಗ್ರಹಿಸುವ ಜಗತ್ತನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಬೇಕು ಎಂಬ ನಂಬಿಕೆಯಲ್ಲಿ ವಿಶ್ವಾಸ ಇಟ್ಟವನು ನಾನು.
ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ದೇಶದ ಬಹುತೇಕ ಪ್ರದೇಶಗಳಲ್ಲಿ ವಿಶೇಷವಾಗಿ, ಬಂಗಾಳ, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಅವಿಭಜಿತ ಆಂಧ್ರಪ್ರದೇಶದಲ್ಲಿ ಶೇಕಡ ಎಂಬತ್ತರಷ್ಟು ಭೂಮಿಯ ಒಡೆತನವು ಸಿರಿವಂತರ ಕೈಯಲ್ಲಿತ್ತು. ಅವರ ಕಪಿಮುಷ್ಟಿಯಲ್ಲಿ ನಲುಗುತ್ತಿದ್ದ ರೈತರು, ಕೃಷಿ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ನಕ್ಸಲ್ ಸಂಘಟನೆಗಳು ಉದ್ಭವಾದವು. ವಿದ್ಯಾವಂತರು ಕೈಗೆ ಬಂದೂಕ ತೆಗೆದುಕೊಂಡರು ಮತ್ತು ಯುವಕರಿಗೆ ನೀಡಿದರೇ ಹೊರತು, ಯಾವ ಹಿಂದೂ ಸಾಮ್ರಾಜ್ಯದ ಸ್ಥಾಪನೆ ಅವರ ಕನಸಾಗಿರಲಿಲ್ಲ. ಆ ಕಾಲಘಟ್ಟದಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಲು ಅಂಥಹ ಹೋರಾಟ ಅನಿವಾರ್ಯವಾಗಿತ್ತು. ಈ ಆಧುನಿಕ ಜಗತ್ತಿನಲ್ಲಿ ಅಂತಹ ಹೋರಾಟ ಅಗತ್ಯವಿಲ್ಲ. ಈ ಕಾರಣದಿಂದಾಗಿ ನಕ್ಸಲ್ ಹೋರಾಟ ತನ್ನ ಅಸ್ತಿತ್ವನ್ನು ಕಳೆದುಕೊಂಡು 25 ವರ್ಷವಾಯಿತು. ಈಗ ಅಂತಹ ಹೋರಾಟಗಳ ಕುರಿತಗಿ ಯಾರಿಗೂ ನಂಬಿಕೆಯಿಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಡಲು ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆ ವೇದಿಕೆಯನ್ನು ಕಲ್ಪಿಸಿದೆ.
ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನೀವು ಈ ದೇಶದ ಅರೆ ವಿದ್ಯಾವಂತ ಯುವಕರ ಕೈಗೆ ಧರ್ಮ ರಕ್ಷಣೆಯ ನೆಪದಲ್ಲಿ ತ್ರಿಶೂಲದ ಹೆಸರಿನಲ್ಲಿ ಮಾರಕ ಆಯುಧ ಮತ್ತು ಕತ್ತಿಗಳನ್ನು ನೀಡುತ್ತಿದ್ದೀರಲ್ಲಾ ಇದನ್ನು ಏನೆಂದು ಕರೆಯೋಣಾ? ನೀವು ಉದ್ಯೋಗವಿಲ್ಲದ ಯುವಕರ ಕೈಗೆ ನೀಡಬೇಕಾಗಿರುವುದು ಕತ್ತಿ, ಕುಡುಗೋಲು ಅಥವಾ ತ್ರಿಶೂಲ ಇವುಗಳಲ್ಲ, ಉದ್ಯೋಗವನ್ನು ನೀಡಬೇಕಾಗಿರುವುದು ನಿಜವಾದ ಹಾಗೂ ಮಾನವೀಯ ಧರ್ಮ. ನಿಮ್ಮನ್ನು ಪ್ರಶ್ನಿಸುವವರು ನಗರದ ನಕ್ಸಲರು. ಸರಿ ಒಪ್ಪೋಣ. ಹಾಗಾದರೆ, ನೀವು ಯಾರು? ಅಗ್ರಹಾರದ ನಕ್ಸಲರೇ?
ದತ್ತಾತ್ರೆಯ ಅವರೇ, ಉಳಿದ ರಾಜ್ಯಗಳ ವಿವರ ಬೇಡ. ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಕೇಂದ್ರ ಸರ್ಕಾರವು ಉತ್ತರ ಪ್ರದೇಶಕ್ಕೆ ನೀಡಿರುವ ಹಣ ಮತ್ತು ಕಾಶಿ, ಅಯೋಧ್ಯೆ, ಅಲಹಾಬಾದ್ ನ ಧಾರ್ಮಿಕ ಉತ್ಸವಗಳು ಹಾಗೂ ದೇಗುಲ ನಿರ್ಮಾಣಕ್ಕೆ ವಿನಿಯೋಗಿಸಿರುವ ಹಣವನ್ನು ಲೆಕ್ಕ ಹಾಕಿ ಮತ್ತು ನಿಮ್ಮದೇ ಸರ್ಕಾರದ ಆರ್ಥಿಕ ಅಂಕಿ ಅಂಶಗಳ ಸೂಚ್ಯಂಕವನ್ನು ತೆಗೆದು ನೋಡಿ. ಬಡತನ ನಿವಾರಣೆ ಅಥವಾ ಉದ್ಯೋಗ ಸೃಷ್ಟಿಯಾಗಿದೆಯಾ?
ದೇಶದ ಅಭಿವೃದ್ಧಿಗೆ ನೆರವಾಗುವುದು ಧರ್ಮ ಅಥವಾ ಧರ್ಮಾಧಾರಿತ ಕಟ್ಟು ಕತೆಗಳಲ್ಲ. ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮಾತ್ರ. ನಮಗಿಂತ ಅಧಿಕ ಜನಸಂಖ್ಯೆ ಇರುವ ಚೀನಾ ದೇಶವು ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಈಗ ಮಾದರಿಯಾಗಿದೆ.
ಇಂತಿ
ಎನ್.ಜಗದೀಶ್ ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ