ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಒಬ್ಬ ನಾಯಕನ ಅನಿವಾರ್ಯತೆ ತಾತ್ಕಾಲಿಕವೇ ಹೊರತು, ಆತನನ್ನು ಶಾಶ್ವತವಾಗಿ ಬಿಂಬಿಸಲಾಗದು. ಈ ದೇಶದ ದುರಂತವೆಂದರೆ ಒಬ್ಬ ರೈತ ಎನಿಸಿಕೊಂಡವನಿಗೆ ಕನಿಷ್ಠ ನೇಗಿಲು, ಗುದ್ದಲಿ ಹಿಡಿಯುವ ಅರ್ಹತೆ ಇರುತ್ತದೆ. ಅದೇ ರೀತಿಯಲ್ಲಿ ಚಮ್ಮಾರನಿಗೆ ಚರ್ಮದ ಹದ ಮಾಡುವ ಮತ್ತು ಪಾದರಕ್ಷೆಗಳನ್ನು ಹೊಲಿಯುವ ಅರ್ಹತೆ ಇರುತ್ತದೆ. ಆದರೆ, ಇಲ್ಲಿ ರಾಜಕಾರಣಿ ಮತ್ತು ಪತ್ರಕರ್ತ ಎನಿಸಿಕೊಂಡ ವ್ಯಕ್ತಿಗಳಿಗೆ ಯಾವ ಅರ್ಹತೆಯ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲದೆ ನಿವೃತ್ತಿಯ ಪ್ರಶ್ನೆಯೇ ಇಲ್ಲ. ಅವನ ಹೆಣ ಕೊಳೆಯದಿದ್ದರೆ, ಅದನ್ನು ಅಧಿಕಾರದ ಕುರ್ಚಿಯಲ್ಲಿಟ್ಟು ಅಧಿಕಾರ ನಡೆಸಲು ಇಂದಿನ ರಾಜಕಾರಣದ ಅಯೋಗ್ಯರು ಸಿದ್ಧರಿದ್ದಾರೆ.
ಇಂದಿನ ದಿನಗಳಲ್ಲಿ ಪಕ್ಷಗಳಲ್ಲಿ ಮತ್ತು ಅಧಿಕಾರದಲ್ಲಿ ಮಿಂಚುವುದು ಎಂದರೆ, ತಮ್ಮ ನಾಲಿಗೆಯನ್ನು ಹಳೆಯ ಎಕ್ಕಡಗಳಾಗಿ ಪರಿವರ್ತಿಸಿಕೊಂಡು ಪಕ್ಷದ ಶಿಸ್ತನ್ನು ಮೀರಿ ವರ್ತಿಸುವುದು ಎಂಬಂತಾಗಿದೆ. ಇದಕ್ಕೆ ಉದಾಹರಣೆ ಎಂದರೆ, ಈಗಿನ ಕಾಂಗ್ರೇಸ್ ಪಕ್ಷದ ಸಚಿವ ಕೆ.ಎನ್. ರಾಜಣ್ಣ ಮತ್ತು ಬಿ.ಜೆ.ಪಿ.ಯ ಬಸವನಗೌಡ ಯತ್ನಾಳ್ ಎಂಬ ಅಯೋಗ್ಯ ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರದ 34 ಸಚಿವರಲ್ಲಿ ಐದಾರು ಮಂದಿ ಹೊರತು ಪಡಿಸಿದರೆ, ಉಳಿದವರು ನಡೆದಾಡುವ ಶವಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈಶ್ವರ ಖಂಡ್ರೆ, ಹೆಚ್.ಕೆ.ಪಾಟೀಲ್, , ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳಕರ. ಸಂತೋಷ್ ಲಾಡ್ ಇಂತಹವರು ತಮ್ಮ ನಡೆ ನುಡಿ ಮತ್ತು ವಹಿಸಿದ ಖಾತೆಗಳಲ್ಲಿ ಕ್ರಿಯಾಶೀಲರಾಗಿರುವುದನ್ನು ಹೊರತು ಪಡಿಸಿದರೆ, ಉಳಿದವರು ಅಧಿಕಾರಕ್ಕೆ ಜಾತಿ ಬೆಂಬಲವನ್ನು ನೆಚ್ಚಿ ಕೂತಿದ್ದಾರೆ. ಮುಖ್ಯಮಂತ್ರಿಯ ಹುದ್ದೆಗೆ ಹಾತೊರೆಯುವ ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಇಲ್ಲ ಸಲ್ಲದ ಹೇಳಿಕೆ ನೀಡುವ ಈ ದಂಡಪಿಂಡಗಳು ಒಮ್ಮೆ ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಬೇಕು.
ಕರ್ನಾಟಕದ ಅತಿ ಕಡಿಮೆ ಇರುವ ಜಾತಿ ಸಮುದಾಯದಿಂದ ಬಂದ ದೇವರಾಜ ಅರಸು, ಧರ್ಮಸಿಂಗ್, ವೀರಪ್ಪಮೊಯ್ಲಿ ಇಂತಹವರು ಕಾಂಗ್ರೇಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾದರೆ, ರಾಮಕೃಷ್ಣ ಹೆಗ್ಡೆ ಜನತಾ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಇವರು ಜಾತಿ ಸಂಘಟನೆಯ ಬಲದಿಂದ ಮುಖ್ಯಮಂತ್ರಿಯಾದವರಲ್ಲ.
ತಾವು ಪ್ರತಿನಿಧಿಸುವ ಕ್ಷೇತ್ರದಿಂದ ಜಾತಿ ಮತ್ತು ಹಣ ಹಾಗೂ ತೋಳ್ಬಲದಿಂದ ಗೆದ್ದು ಬಂದವರೆಲ್ಲಾ ನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲು ಅರ್ಹರಾಗುವುದಿಲ್ಲ. ಕೆ.ಎನ್.ರಾಜಣ್ಣ, ಜಿ.ಪರಮೇಶ್ವರ, ಕೆ.ಹೆಚ್. ಮುನಿಯಪ್ಪ ಇವರ ಸಾಧನೆ ಮತ್ತು ವಹಿಸಿದ ಖಾತೆಗಳಲ್ಲಿ ತೋರಿದ ನೈಪುಣ್ಯತೆಯನ್ನು ಯಾರಾದರೂ ಬಲ್ಲವರು ಹೇಳಲಿ ನೋಡೋಣ.
ಬಸ್ ಡ್ರೈವರ್ ಆಗಿದ್ದವನು ಕ್ಲೀನರ್ ಹುದ್ದೆ ಬಯಸಿದಂತೆ, ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಹೆಚ್. ಮುನಿಯಪ್ಪ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮಗೆ ಮತ್ತು ಪುತ್ರಿಗೆ ಟಿಕೇಟ್ ಪಡೆದುದಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಳಿಯನಿಗೆ ಕೋಲಾರ ಕ್ಷೇತ್ರದಿಂದ ಟಿಕೇಟ್ ಗಾಗಿ ಹೋರಾಟ ನಡೆಸಿದ್ದರು. ಇವರ ಯೋಗ್ಯತೆ ಏನೆಂಬುದನ್ನು ಅಲ್ಲಿನ ಮತದಾರರು ಜೆ.ಡಿ.ಎಸ್. ನ ಹೊಸ ಯುವಕ ಮಹೇಶ್ ಬಾಬುವನ್ನು ಆಯ್ಕೆ ಮಾಡುವುದರ ಮೂಲಕ ತೋರಿಸಿಕೊಟ್ಟರು.
ಕಾಂಗ್ರೇಸ್ ಪಕ್ಷದ ಕುರಿತಾಗಿ ಭಜನೆ ಮಾಡುವುದು ಚಿಂತನೆಯ ಲಕ್ಷಣ ಎಂದುಕೊಂಡಿರುವ ವೈಚಾರಿಕ ಹಾಗೂ ಪ್ರಗತಿಪರರು ಎಂಬ ಬೃಹಸ್ಪತಿಗಳಿಗೆ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿ ಕಾಂಗ್ರೇಸ್ ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೆ ಸಚಿವ ಸ್ಥಾನ ಏಕೆ ದೊರೆಯಲಿಲ್ಲ ಎಂಬುದು ಗೊತ್ತಿಲ್ಲವೆ? ಈಡಿಗ ಜಾತಿಯ ಕೋಟಾದಲ್ಲಿ ನೀಡಿದ ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಅವರಿಗಿಂತ, ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪ ಹೇಗೆ ಅರ್ಹರಾದರು ಎಂಬುದರ ಬಗ್ಗೆ ಇವರು ಉತ್ತರಿಸಬೇಕಾಗಿದೆ ಮತ್ತು ಈವರೆಗೆ ಅತ್ಯಂತ ಕಳಪೆಯಾಗಿ ನಿರ್ವಹಿಸಿದ ಪ್ರಾಥಮಿಕ ಶಿಕ್ಷಣ ಖಾತೆಯ ಬಗ್ಗೆ ಇವರೆಲ್ಲರೂ ಯೋಚಿಸಬೇಕಾಗಿದೆ.
ಈಗಾಗಲೇ ಇಪ್ಪತ್ತು ತಿಂಗಳು ಮುಗಿಸಿದ ಸಿದ್ಧರಾಮಯ್ಯನವರ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಹೊರತು ಪಡಿಸಿದರೆ, ಅಭಿವೃದ್ಧಿ ಮತ್ತು ಇತರೆ ಯೋಜನೆಗಳಲ್ಲಿ ಸಾಧನೆ ಶೂನ್ಯ. ಇಂದಿನ ಮಾಧ್ಯಮಗಳು ಈಗಿನ ಸರ್ಕಾರದ ಸಚಿವರ ಖಾತೆಗಳ ಪ್ರಗತಿ ಕುರಿತು ಸರಣಿಯೋಪಾದಿಯಲ್ಲಿ ಸಮೀಕ್ಷಾ ವರದಿ ಪ್ರಕಟಿಸಿದರೆ, ಸಚಿವರೆಂಬ ಗುಜರಿ ಮಾಲುಗಳ ಬಣ್ಣ ಸಾರ್ವಜನಿಕವಾಗಿ ಬಯಲಾಗಬಲ್ಲದು. ಪ್ರಜಾವಾಣಿ ಬಳಗ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ.
ಅಯೋಗ್ಯರು ತುಂಬಿ ತುಳುಕಾಡುವ ಕಾಂಗ್ರೇಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಎಂಬ ನಿಷ್ಠಾವಂತ ಪ್ರತಿಬೆಗಳು ಅವಕಾಶ ವಂಚಿತರಾಗಿದ್ದಾರೆ. ಬಿ.ಎಲ್. ಶಂಕರ್ ಮತ್ತು ಕೋಲಾರ ಮೂಲದ ವಿ.ಆರ್. ಸುದರ್ಶನ್ ಅವರನ್ನು ಕಳೆದ ನಲವತ್ತು ವರ್ಷಗಳಿಂದ ತೀರಾ ಹತ್ತಿರದಿಂದ ನೋಡಿದವನು ನಾನು. ಅವರ ಓದು, ವಿದ್ವತ್ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಯ ನಡೆ ನುಡಿ ಹೇಗಿರಬೇಕೆಂದು ತೋರಿಸಿಕೊಟ್ಟವರು ಅವರು. ಇಬ್ಬರೂ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಹುದ್ದೆಯನ್ನು ಅತ್ಯಂತ ಘನತೆಯಿಂದ ನಿರ್ವಹಿಸಿದವರು. ಇವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆ ಕಾಂಗ್ರೇಸ್ ಗೆ ಇಲ್ಲವಾಗಿದೆ.
ಇದು ಕರ್ನಾಟಕ ಕಾಂಗ್ರೇಸ್ ಕಥೆಯಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿಯೂ ಇದೆ ಧಾರುಣ ಕಥೆ ಇದೆ. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಎಂಬ ಮುದಿ ಗೂಬೆಗಾಗಿ ಸಚಿನ್ ಪೈಲೆಟ್ ಎಂಬ ಯುವಕನ ಭವಿಷ್ಯವನ್ನು ಹಾಳುಗೆಡವಲಾಯಿತು. ಮಧ್ಯಪ್ರದೇಶದಲ್ಲಿ ದಿಗ್ವಿಜಯ ಸಿಂಗ್ ಮತ್ತು ಕಮಲನಾಥ್ ಎಂಬ ಗುಜರಿ ಸರಕುಗಳಿಗಾಗಿ ಜ್ಯೋತಿರಾಧ್ಯ ಸಿಂಧೆ ಭವಿಷ್ಯ ಮಸುಕಾದಾಗ, ಆ ಯುವಕ ಪಕ್ಷ ತ್ಯೆಜಿಸಿ ಬಿ.ಜೆ.ಪಿ. ಸೇರುವುದರೊಂದಿಗೆ ಕೇಂದ್ರ ಸಚಿವರಾದರು. ಒಂದು ಕಾಲದಲ್ಲಿ ಕಾಂಗ್ರೇಸ್ ಪಕ್ಷದ ರಾಜ್ಯವಾಗಿದ್ದ ಮಧ್ಯಪ್ರದೇಶವನ್ನು ಈ ಶತಮಾನದಲ್ಲಿ ಬಿ.ಜೆ.ಪಿ.ಯಿಂದ ವಶಪಡಿಸಿಕೊಳ್ಳುವುದು ಕಾಂಗ್ರೇಸ್ ಗೆ ಕಷ್ಟ.
ದೆಹಲಿ ಜವಹರಲಾಲ್ ವಿ.ವಿ.ಯ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಪ್ರಚಂಡ ವಾಗ್ಮಿಯಾಗಿ ಮೋದಿಯನ್ನು ಮತ್ತು ಬೆ.ಜೆ.ಪಿ. ಸರ್ಕಾರವನ್ನು ತರ್ಕಬದ್ಧವಾಗಿ ಮಾಧ್ಯಮಗಳ ಮುಂದೆ ತರಾಟೆಗೆ ತಗೆದುಕೊಳ್ಳುವ ಕನ್ಹಯ ಕುಮಾರ್ ನಂತಹ ಪ್ರತಿಭಾವಂತ ಯುವಕ ಇಂದು ರಾಜ್ಯಸಭೆಯಲ್ಲಿ ಇರಬೇಕಿತ್ತು. ಮೋದಿಯವರನ್ನು ನಿರ್ಧಾಕ್ಷಿಣ್ಯವಾಗಿ ಎದುರಿಸುವ ತಾಕತ್ತು ಇಂದು ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಮತ್ತು ಪ್ರಿಯಾಂಕ ವಾರ್ಧಗೆ ಮಾತ್ರ ಇದೆ. ಅವರಿಗೆ ಪರ್ಯಾಯವಾಗಿ ರಾಜ್ಯಸಭೆಯಲ್ಲಿ ಕನ್ಹಯ್ಯ ಕುಮಾರ್ ಎಂಬ ಬಿಹಾರ ಮೂಲದ ದಲಿತ ಹುಡುಗ ಇರಬೇಕಿತ್ತು ಎಂದು ಕಾಂಗ್ರೇಸ್ ಪಕ್ಷಕ್ಕೆ ಏಕೆ ಅನಿಸುತ್ತಿಲ್ಲ? ಆ ಯುವಕ ಇಂದು ದೆಹಲಿಯ ಹಿಂದುಳಿದ ಪ್ರದೇಶವೊಂದರ ಕೊಠಡಿಯೊಂದರಲ್ಲಿ ವಾಸ ಮಾಡುತ್ತಿದ್ದಾನೆ. ಭಾರತ ಜೋಡೋ ಯಾತ್ರೆಯ ನಂತರ ಪಕ್ಷ ಈತನನ್ನು ಮರೆತಂತಿದೆ.
ಒಂದು ಪಕ್ಷಕ್ಕೆ ಹಿನ್ನಡೆ ಅಥವಾ ಮುನ್ನಡೆ ಎಲ್ಲವೂ ತಾತ್ಕಾಲಿಕ. ಪಕ್ಷ ಬಲಿಷ್ಠವಾಗಬೇಕಾದರೆ ತಳಮಟ್ಟದ ಸಂಘಟನೆ ಮುಖ್ಯವಾಗಿರಬೇಕು. ಎಪ್ಪತ್ತು ತುಂಬಿದ ಮುದಿ ಹೋರಿಗಳನ್ನು ಕಸಾಯಿಖಾನೆಗೆ ಅಟ್ಟುವುದರ ಮೂಲಕ ಯುವ ಪ್ರತಿಭಾವಂತರಿಗೆ ಮತ್ತು ಸಜ್ಜನರಿಗೆ ಕಾಂಗ್ರೇಸ್ ಪಕ್ಷದಲ್ಲಿ ಸ್ಥಾನ ದೊರೆಯಬೇಕಿದೆ. ಇಂದಿನ ಯುವ ತಲೆಮಾರು ಕಾಂಗ್ರೇಸ್ ಪಕ್ಷದತ್ತ ಆಸಕ್ತಿ ತೋರುತ್ತಿಲ್ಲ. ಏಕೆಂದರೆ, ಅವರು ಪಕ್ಷ ಸೇರಿದರೆ, ಸಾಯುವತನಕ ಸಾಮ್ ( ವ್ಯಾಯಾಮ) ಮಾಡಬೇಕೇ ಹೊರತು ಭೀಮನಾಗಲು ಸಾಧ್ಯವಿಲ್ಲ.ಇಂದಿನ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ನಿಗಮ ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲು ಈವರೆಗೂ ಸಾಧ್ಯವಾಗಿಲ್ಲ.
ಕತ್ತೆ ಕಾಯುವ ವೃತ್ತಿಯ ಹೆಸರು ಈಗ ಕರ್ನಾಟಕ ರಾಜಕೀಯದಿಂದ ಬದಲಾಗಿದೆ. ಅದನ್ನು ಮುಖ್ಯಮಂತ್ರಿಗಳ ಸಲಹೆಗಾರರು ಎಂದು ಕರೆಯಲಾಗುತ್ತದೆ. ಹದಿನಾರು ಮಂದಿ ಸಲಹೆಗಾರರು ಏನನ್ನು ಕಿಸಿದು ಕಟ್ಟೆ ಹಾಕುತ್ತಿದ್ದಾರೆ ಎಂಬುದಕ್ಕೆ ಸಿದ್ಧರಾಮಯ್ಯನವರು ಉತ್ತರಿಸಬೇಕು. ಕಾಂಗ್ರೇಸ್ ಪಕ್ಷಕ್ಕೆ ದಲಿತರು, ಅಲ್ಪಸಂಖ್ಯಾರು, ಹಿಂದುಳಿದವರು ಆಸ್ತಿ ಎನ್ನುವ ಪರಿಕಲ್ಪನೆ ಈಗ ಬದಲಾಗಿದೆ. ದೆಹಲಿಯಲ್ಲಿ ನಡೆದ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಲಿತರು ಮತ್ತು ಮುಸ್ಲಿಂರು ಪ್ರಾಬಲ್ಯವಿದ್ದ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಅಮ್ ಆದ್ಮಿ ಪಕ್ಷ, ಹಾಗೂ ಒಂದನ್ನು ಬಿ.ಜೆ.ಪಿ. ವಶಪಡಿಸಿಕೊಂಡಿವೆ. ಎಪ್ಪತ್ತು ಸ್ಥಾನಗಳ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಗ್ರೇಸ್ ಪಕ್ಷ ಶೂನ್ಯ. ಶತಮಾನದ ಗುಜರಿ ಅಂಗಡಿಯನ್ನು ವಿಸರ್ಜಿಸಿ ಹೊಸದಾಗಿ ಪಕ್ಷವನ್ನು ಸಂಘಟಿಸಬೇಕಿದೆ
ದೇಶದ ಹಿಂದುಳಿದ ಹಾಗೂ ಅತ್ಯಂತ ಹೆಚ್ಚು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗ ಇರುವ ಉತ್ತರ ಪ್ರದೇಶ ರಾಜ್ಯದಲ್ಲಿ ಮೇಲ್ಜಾತಿ ಸಂಘಟಕರಿಂದ ಕೂಡಿದ ಬಿ.ಜೆ.ಪಿ. ಹೇಗೆ ಒಂದು ದಶಕದಿಂದ ಅಧಿಕಾರದಲ್ಲಿದೆ ಹಾಗೂ ಗದ್ದುಗೆಯನ್ನು ಶಾಶ್ವತವಾಗಿರಿಸಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಕುರಿತು ಚಿಂತಿಸಬೇಕಿದೆ. ಇದಕ್ಕೆ ವೈಚಾರಿಕ ಚಿಂತನೆಯ ಹೆಸರಿನಲ್ಲಿ ತೌಡು ಕುಟ್ಟುವ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಗ್ಗೆ ನಮ್ಮ ವಿರೋಧವಿದ್ದರೂ ತಳ ಮಟ್ಟದ ಸಂಘಟನೆ ಹೇಗಿರಬೇಕು ಎಂಬುದನ್ನು ಸಂಘ ಪರಿವಾರದಿಂದ ಕಾಂಗ್ರೇಸ್ ಒಳಗೊಂಡು ಇತರೆ ಎಲ್ಲಾ ಪಕ್ಷಗಳು ಕಲಿಯಬೇಕಿದೆ.
ಎನ್.ಜಗದೀಶ್ ಕೊಪ್ಪ