ಭಾರತದ ಇತಿಹಾಸದ ಅಧ್ಯಯನ ಮತ್ತು ಗ್ರಹಿಕೆಗೆ ಪ್ರತಿಯೊಬ್ಬ ಸಂಶೋಧಕನಿಗೆ ಹಾಗೂ ಓದುಗನಿಗೆ ಮುಕ್ತವಾದ ಮನಸ್ಸು ಇದ್ದರೆ ಮಾತ್ರ ನೈಜ ಇತಿಹಾಸವನ್ನು ಗ್ರಹಿಸಲು ಸಾಧ್ಯ ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ಪುನರ್ ವ್ಯಾಖ್ಯಾನಿಸುವ ನೆಪದಲ್ಲಿ ಹುಸಿ ಇತಿಹಾಸಕಾರರು ಆಧುನಿಕ ಭಾರತದ ಯುವ ತಲೆಮಾರಿನ ಎದೆಗೆ ವಿಷವನ್ನು ತುಂಬುತ್ತಿದ್ದಾರೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, ಟಿಪ್ಪು ಸುಲ್ತಾನ್ ಆಡಳಿತ ಕುರಿತಂತೆ ಹಬ್ಬಿಸಲಾಗುತ್ತಿರುವ ಸುಳ್ಳು ವದಂತಿ. ಟಿಪ್ಪು ಸುಲ್ತಾನ್ ಕನ್ನಡ ಭಾಷೆಯ ವಿರೋಧಿಯಾಗಿದ್ದನು. ಆತನ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು ಎಂದು ಹೇಳಲಾಗುತ್ತಿದೆ. ಕಚೇರಿ, ಟಪಾಲು, ಅಮುಲ್ದಾರ್, ತಹಸಿಲ್ದಾರ್, ಶಿರಸ್ತೆದಾರ್ ಇವೆಲ್ಲವೂ ಪರ್ಷಿಯನ್ ಶಬ್ದಗಳು ಎಂದು ಹೇಳುವ ಅವಿವೇಕಿಗಳು ಒಮ್ಮೆ ಮರಾಠಿ ಶಬ್ದಕೋಶವನ್ನು ಸಹ ಅವಲೋಕಿಸಿದರೆ ಒಳಿತು. ಮೊಗಲರ ಆಳ್ವಿಕೆಯ ಕಾಲದಿಂದಲೂ ಉರ್ದು, ದೇವನಾಗರಿ ಲಿಪಿ ಅಥವಾ ಹಿಂದಿ, ಮರಾಠಿ ಈ ಭಾಷೆಗಳ ಶಬ್ದಗಳು ಆಡಳಿತದಲ್ಲಿ ಮಿಳಿತಗೊಂಡು ಅವುಗಳು ಬ್ರಿಟೀಷರ ಕಾಲದಿಂದಲೂ ಎಲ್ಲಾ ಸಂಸ್ಥಾನಗಳ ನಡುವೆ ಸಂವಹನದ ಭಾಷೆಯಾಗಿದ್ದವು.
ಟಿಪ್ಪುವಿನ ಆಡಳಿತದಲ್ಲಿ ಸ್ಥಳೀಯ ಭಾಷೆಯಾಗಿ ಕನ್ನಡವೂ ಸಹ ಅಸ್ತಿತ್ವದಲ್ಲಿತ್ತು. ಇದಕ್ಕೆ ಉದಾಹರಣೆಯಾಗಿ ಟಿಪ್ಪು ಸುಲ್ತಾನನು ಶೃಂಗೇರಿ ಶಾರದಾಂಬೆಯ ಪೀಠಕ್ಕೆ ಕನ್ನಡದಲ್ಲಿ ಬರೆದಿರುವ ಹದಿನೇಳು ಪತ್ರಗಳನ್ನು ನೋಡಬಹುದು. ಅದೇ ರೀತಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ನೀಡಿರುವ ಕಾಣಿಕೆಗಳ ಮೇಲೆ ಕನ್ನಡದ ಹೆಸರುಗಳಿವೆ. ಟಿಪ್ಪು ಸುಲ್ತಾನನ್ನು ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವ ಅರೆ ತಿಳುವಳಿಕೆಯ ಇತಿಹಾಸಕಾರರು ಟಿಪ್ಪುವಿನ ಆಸ್ಥಾನದಲ್ಲಿ ಆರು ಮಂದಿ ಕನ್ನಡ ಮಾತೃಭಾಷೆಯ ಬ್ರಾಹ್ಮಣ ಸಚಿವರಿದ್ದರು ಜೊತೆಗೆ ದಿವಾನರಾಗಿದ್ದ ಪೂರ್ಣಯ್ಯನವರು ಸಹ ಬ್ರಾಹ್ಮಣರಾಗಿದ್ದರು ಎಂಬುದನ್ನು ಮರೆಯುತ್ತಾರೆ. ಇಂದು ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಮಸೀದಿಗಳು ನಿರ್ಮಾಣವಾಗಿದೆ ಎಂದು ಮಧ್ಯಕಾಲೀನ ಇತಿಹಾಸವನ್ನು ತಿರುಚಲು ಹೊರಟಿರುವ ನವಭಾರತದ ಇತಿಹಾಸಕಾರರು ಅದಕ್ಕೂ ಮುನ್ನ ಅಂದರೆ ಕ್ರಿಸ್ತಪೂರ್ವ ಮತ್ತು ನಂತರದ ಕ್ರಿಸ್ತಶಕ ಭಾರತದಲ್ಲಿ ಬೌದ್ಧ ಧರ್ಮದ ಸ್ತೂಪಗಳು ಮತ್ತು ಜೈನ ಮಂದಿರಗಳನ್ನು ನಾಶಗೊಳಿಸಿ, ಅವುಗಳ ಮೇಲೆ ಹಿಂದೂ ದೇವಾಲಯಗಳನ್ನು ನಿರ್ಮಿಸಿರುವ ಇತಿಹಾಸ ಕುರಿತು ಏಕೆ ಮಾತನಾಡುವುದಿಲ್ಲ. ಈ ಘಟನೆಗಳ ಕುರಿತಾಗಿ ಇಂದಿಗೂ ಸಹ ಸಾಕ್ಷಾಧಾರಗಳು ಲಭ್ಯವಿವೆ. ಮಸೀದಿಗಳ ಕೆಳಗೆ ಹಿಂದೂ ದೇವಾಲಯಗಳು ಇದ್ದವು ಎನ್ನುವುದಾದರೆ, ಹಿಂದೂ ದೇವಾಲಯಗಳ ಕೆಳಗೆ ಬೌದ್ಧ ಸ್ತೂಪಗಳು ಮತ್ತು ಜೈನ ಮಂದಿರಗಳು ಇದ್ದವು ಎಂಬುದಕ್ಕೆ ಸಾಜ್ಷಾಧಾರಗಳು ಇರುವಾಗ, ದೇವಾಲಯಗಳನ್ನು ಕೆಡವಿ ಬೌದ್ಧ ಮತ್ತು ಜೈನ ಮಂದಿರಗಳನ್ನು ಈಗ ನಿರ್ಮಾಣ ಮಾಡಲು ಸಾಧ್ಯವೆ? ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುವುದಿಲ್ಲ ಏಕೆ?
ಬಹುತೇಕ ಹಿಂದೂತ್ವ ಸಿದ್ಧಾಂತಗಳು ಭಾರತೀಯ ಇತಿಹಾಸದ ಪುರಾತನ ಕಾಲವನ್ನು ಸಾಮಾಜಿಕ ಸಾಮರಸ್ಯದಿಂದ ಗುರುತಿಸಲ್ಪಟ್ಟ ಸುವರ್ಣಯುಗವೆಂದು ಮಾತ್ರ ನೋಡುತ್ತವೆ, ಹಿಂದೂ ಧರ್ಮವು ಯಾವುದೇ ಧಾರ್ಮಿಕ ಹಿಂಸಾಚಾರದಿಂದ ದೂರವಿತ್ತು ಎಂದು ಹೇಳುವ ಇವರು, ಮಧ್ಯಯುಗವನ್ನು ಮುಸ್ಲಿಂ ಆಡಳಿತಗಾರರು ಹಿಂದೂಗಳ ಮೇಲೆ ದಾಳಿ ಮಾಡಿದ ಭಯೋತ್ಪಾದನೆಯ ಆಳ್ವಿಕೆಯ ಹಂತ ಎಂದು ಚಿತ್ರಿಸುತ್ತಾರೆ. ಮುಸ್ಲಿಂ ಆಡಳಿತಗಾರರು ವಿವೇಚನೆಯಿಲ್ಲದೆ ಹಿಂದೂ ದೇವಾಲಯಗಳನ್ನು ಕೆಡವಿದರು ಮತ್ತು ಹಿಂದೂ ವಿಗ್ರಹಗಳನ್ನು ಭಗ್ನಗೊಳಿಸಿದರು ಎಂಬ ನಂಬಿಕೆ ಅವರ ಗ್ರಹಿಕೆಗೆ ಮೂಲ ಕೇಂದ್ರವಾಗಿದೆ. ಮುಸಲ್ಮಾನರ ಆಳ್ವಿಕೆಯಲ್ಲಿ ಅರವತ್ತು ಸಾವಿರ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ, ಆದರೆ ಅವುಗಳಲ್ಲಿ ಶೇಕಡಾ ಎಂಬತ್ತಕ್ಕೂ ಹೆಚ್ಚು ದೇವಾಲಯಗಳ ನಾಶಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಮತ್ತೊಂದೆಡೆ, ಐತಿಹಾಸಿಕ ಪುರಾವೆಗಳ ಮೇಲ್ನೋಟದ ಸಮೀಕ್ಷೆಯು ಇಸ್ಲಾಂ ಧರ್ಮದ ಆಗಮನದ ಮೊದಲು ಭಾರತದಲ್ಲಿ ಪ್ರತಿಸ್ಪರ್ಧಿ ಧಾರ್ಮಿಕ ಸಂಸ್ಥೆಗಳ ಕೆಡವುವಿಕೆ ಮತ್ತು ಅಪವಿತ್ರಗೊಳಿಸುವಿಕೆ ಮತ್ತು ಅವುಗಳ ವಿಗ್ರಹಗಳ ಸ್ವಾಧೀನವು ಇರಲಿಲ್ಲ ಎಂದು ಆಧುನಿಕ ಇತಿಹಾಸಕಾರರು ತೋರಿಸುತ್ತಿದ್ದಾರೆ.
ಪ್ರಾಚೀನ ಭಾರತದಲ್ಲಿ ಬ್ರಾಹ್ಮಣ ಅಥವಾ ಪುರೋಹಿತಶಾಹಿಗಳು ಹಾಗೂ ಅವರು ನಂಬಿಕೊAಡಿದ್ದ ಹಿಂದೂ ಧರ್ಮದ ವೇದ, ಉಪನಿಷತ್ತುಗಳು ಅಸ್ತಿತ್ವದಲ್ಲಿ ಇದ್ದ ಮಾದರಿಯಲ್ಲಿ ಬ್ರಾಹ್ಮಣೇತರ ಧರ್ಮಗಳು ಮತ್ತು ತಳ ಸಮುದಾಯದ ಪಂಗಡಗಳು ಸಹ ಅಸ್ತಿತ್ವದಲ್ಲಿದ್ದವು. ಈ ಸಮುದಾಯಗಳ ನಡುವೆ ಯಾವುದೇ ಸಾಮರಸ್ಯ ಇರಲಿಲ್ಲ. ಜೊತೆಗೆ ಎರಡು ಬ್ರಾಹ್ಮಣ ಪಂಗಡಗಳಾದ ವೈಷ್ಣವ ಮತ್ತು ಶೈವ ಧರ್ಮಗಳ ನಡುವೆ ಕೂಡಾ ಒಮ್ಮತವಿರಲಿಲ್ಲ. ಇಷ್ಟು ಮಾತ್ರವಲ್ಲದೆ ಕ್ರಿಸ್ತ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಬೌದ್ಧ ಮತ್ತು ಜೈನ ಧರ್ಮಗಳ ಅನುಯಾಯಿಗಳು ಸಹ ನಿರಂತರವಾಗಿ ಜಗಳವಾಡುತ್ತಿದ್ದರು. ಬುದ್ಧನ ಮರಣಾ ನಂತರ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಅನುಸರಿಸಿ, ವಿಶ್ವ ವ್ಯಾಪಿ ಪ್ರಚಾರ ಮಾಡಿದನು. ನಂತರದ ದಿನಗಳಲ್ಲಿ ಅಶೋಕನ ಪುತ್ರರು ವಿಭಿನ್ನ ಧರ್ಮಗಳನ್ನು ಅನುಕರಿಸಿದ ಬಗ್ಗೆ ನಮಗೆ ಸಾಕ್ಷಾಧಾರಗಳು ದೊರೆಯುತ್ತವೆ.
ಹನ್ನೆರಡನೆಯ ಶತಮಾನದ ಕಾಶ್ಮೀರಿ ಪಠ್ಯದಲ್ಲಿ ದಾಖಲಾಗಿರುವ ಪಠ್ಯದಲ್ಲಿ ಅಂದರೆ, ಕಲ್ಹಣನ ರಾಜತರಂಗಿಣಿ ಕೃತಿಯಲ್ಲಿ ಅಶೋಕನ ಪುತ್ರರಲ್ಲಿ ಒಬ್ಬನಾದ ಜಲೌಕನನ್ನು ಕುರಿತಾಗಿ ಉಲ್ಲೇಖಿಸಲಾಗಿದೆ. ಅವನು ತಂದೆಗಿಂತ ಭಿನ್ನವಾಗಿ, ಶೈವ ಧರ್ಮವನ್ನು ಅಪ್ಪಿಕೊಂಡಿದ್ದನು ಮತ್ತು ಬೌದ್ಧ ಮಠಗಳನ್ನು ನಾಶಪಡಿಸಿದನು. ಬೌದ್ಧ ಸಂಸ್ಕೃತ ಕೃತಿಯಾದ ದಿವ್ಯವದನಾದಲ್ಲಿ ಬ್ರಾಹ್ಮಣ ಆಡಳಿತಗಾರ ಪುಷ್ಯಮಿತ್ರ ಶುಂಗನನ್ನು ಬೌದ್ಧರ ಮಹಾನ್ ಶೋಷಕ ಎಂದು ವಿವರಿಸುತ್ತದೆ. ಅವನು ದೊಡ್ಡ ಸೈನ್ಯದೊಂದಿಗೆ ಸ್ತೂಪಗಳನ್ನು ಧ್ವಂಸಗೊಳಿಸಿದನು, ಮಠಗಳನ್ನು ಸುಟ್ಟುಹಾಕಿದನು ಶುಂಗರ ಸಮಕಾಲೀನನಾದ ವ್ಯಾಕರಣಕಾರ ಪತಂಜಲಿಯ ಬರಹಗಳಲ್ಲಿ ಈ ಪುರಾವೆ ಸಿಗುತ್ತದೆ. ಪತಾಂಜಲಿಯು ತನ್ನ ಮಹಾಭಾಷ್ಯದಲ್ಲಿ ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮತ್ತು ಮುಂಗುಸಿಗಳAತೆ ಶಾಶ್ವತ ಶತ್ರುಗಳು ಎಂದು ಹೇಳಿರುವುದು ಸಹ ದಾಖಲಾಗಿದೆ. ಮೌರ್ಯರ ನಂತರದ ಅವಧಿಯಲ್ಲಿ ಬೌದ್ಧಧರ್ಮದ ಮೇಲೆ ಬ್ರಾಹ್ಮಣ ಆಕ್ರಮಣಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಯಿತು, ವಿಶೇಷವಾಗಿ ಪುಷ್ಯಮಿತ್ರ ಶುಂಗನ ಅಡಿಯಲ್ಲಿ, ಅಶೋಕನ ಅವಧಿಯಲ್ಲಿ ಪಾಟಲಿಪುತ್ರದಲ್ಲಿ ನಿರ್ಮಿಸಲಾಗಿದ್ದ ಕುಕುಟಾರಾಮ ಮಠವನ್ನು ನಾಶಪಡಿಸಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ.
ಮಧ್ಯಪ್ರದೇಶವು ಸೇರಿದಂತೆ ಉತ್ತರ ಭಾರತದಲ್ಲಿ ಬೌದ್ಧ ಸ್ಥಳಗಳು ಮತ್ತು ಸ್ಮಾರಕಗಳ ನಾಶ ಮತ್ತು ಸ್ವಾಧೀನವು ಮೌರ್ಯ ಸಾಮ್ರಾಜ್ಯದ ನಂತರದ ಶತಮಾನಗಳಲ್ಲಿ ನಡೆದಂತೆ ತೋರುವ ಅನೇಕ ಸ್ಥಳಿಗಳಿವೆ. ಉದಾಹರಣೆಗೆ, ಕುಶಾನರ ಕಾಲದಲ್ಲಿ ಪಶ್ಚಿಮ ಭಾಗದ ಉತ್ತರ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಪಟ್ಟಣವಾದ ಮಥುರಾದಲ್ಲಿ, ಭೂತೇಶ್ವರ ಮತ್ತು ಗೋಕರ್ಣೇಶ್ವರದಂತಹ ಕೆಲವು ಇಂದಿನ ಹಿಂದೂ ದೇವಾಲಯಗಳು ಪ್ರಾಚೀನ ಕಾಲದಲ್ಲಿ ಬೌದ್ಧ ಸ್ಥಳಗಳಾಗಿದ್ದವು. ಕುಶಾನರ ಕಾಲದಲ್ಲಿ ಬೌದ್ಧ ಕೇಂದ್ರವಾಗಿದ್ದ ಕತ್ರಾ ದಿಬ್ಬವು ಮಧ್ಯಕಾಲೀನ ಅವಧಿಯಲ್ಲಿ ಹಿಂದೂ ಧಾರ್ಮಿಕ ಸ್ಥಳವಾಯಿತು. ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ವಾರಣಾಸಿ ಬಳಿಯ ಸಾರನಾಥ ಬ್ರಾಹ್ಮಣರ ಆಕ್ರಮಣಕ್ಕೆ ಗುರಿಯಾಯಿತು. ಇದರ ನಂತರ ಪ್ರಾಯಶಃ ಗುಪ್ತರ ಕಾಲದಲ್ಲಿ, ಮುಖ್ಯ ದೇಗುಲ ಎಂದು ಕರೆಯಲ್ಪಡುವ ಮುಂಭಾಗದಲ್ಲಿ ಮೌರ್ಯರು ಅಲ್ಲಿನ ಕಟ್ಟಡದ ಅವಶೇಷಗಳನ್ನು ಮರುಬಳಕೆ ಮಾಡುವ ಮೂಲಕ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಿದರು. ಈ ದೇವಾಲಯವನ್ನು ದೊಡ್ಡ ಅಶೋಕನ ಸ್ತೂಪದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಗುಪ್ತರ ಅವಧಿಯ ಅಂತ್ಯದ ವೇಳೆಗೆ ಈ ಸ್ಥಳವನ್ನು ಬೌದ್ಧರು ಆಕ್ರಮಿಸಿಕೊಂಡರು ನಂತರ ಮತ್ತೆ ಬೌದ್ಧರಲ್ಲದವರು ಪುನಃ ಆಕ್ರಮಿಸಿಕೊಂಡರು.
ಅAತರಾಷ್ಟ್ರೀಯ ಪುರಾತತ್ತ್ವ ಶಾಸ್ತ್ರಜ್ಞ ಅಲೋಯಿಸ್ ಆಂಟನ್ ಫ್ಯೂರರ್ ಅವರು ತಮ್ಮ ಒಂದು ಲೇಖನದಲ್ಲಿ ಹೀಗೆ ವಿವರಿಸಿದ್ದಾರೆ. "ಬೌದ್ಧ ಧರ್ಮದ ಮೇಲೆ ಬ್ರಾಹ್ಮಣ ಧರ್ಮವು ತನ್ನ ಅಂತಿಮ ವಿಜಯವನ್ನು ಗಳಿಸಿತು." ಉತ್ತರ ಬಿಹಾರದಲ್ಲಿನ ವೈಶಾಲಿಯು ಬುದ್ಧನಿಗೆ ಸಂಬAಧಿಸಿದ ಪ್ರಮುಖ ನಗರವಾಗಿತ್ತು, ಅಲ್ಲಿನ ಉದ್ಯಾನವನದಲ್ಲಿ ಅವನು ಕುಶಿನಗರಕ್ಕೆ ತೆರಳುವ ಮುನ್ನ ಕೆಲವು ವರ್ಷಗಳನ್ನು ಕಳೆದಿದ್ದನು. ಪಾಹ್ಸಿಯಾನ್ ಎಂಬ ಚೀನಿ ಯಾತ್ರಿಕನು ವೈಶಾಲಿ ನಗರದ ವೇಶ್ಯೆ ಅಮ್ರಪಾಲಿ ನಿರ್ಮಿಸಿದ ಸ್ತೂಪದ ಅಸ್ತಿತ್ವವನ್ನು ಮಾತ್ರ ಉಲ್ಲೇಖಿಸುತ್ತಾನೆ. ಆದರೆ, ಮತ್ತೊಬ್ಬ ಸಮಕಾಲೀನ ಚೀನೀ ಯಾತ್ರಿಕ ಜೀ ಸೆಂಗ್ಜೈ ಎಂಬಾತನ ದಿನಚರಿಯಲ್ಲಿ ವೈಶಾಲಿಯಲ್ಲಿ ಬೌದ್ಧ ಉಪಾಸಕ ವಿಮಲಕೀರ್ತಿಯ ನಿವಾಸವು ವೈದಿಕರಿಂದ ನಾಶವಾಯಿತು ಎಂದು ದಾಖಲಾಗಿದೆ. ಗುಪ್ತರ ಕಾಲದ ನಂತರದ ಶತಮಾನಗಳಲ್ಲಿ, ಹಲವಾರು ಬ್ರಾಹ್ಮಣ ಚಿಂತಕರು ಮತ್ತು ದೇಶದ ವಿವಿಧ ಭಾಗಗಳ ತತ್ವಜ್ಞಾನಿಗಳು ಬೌದ್ಧರ ವಿರುದ್ಧ ಬೃಹತ್ ಸೈದ್ಧಾಂತಿಕ ಆಕ್ರಮಣವನ್ನು ಪ್ರಾರಂಭಿಸಿದರು, ಹರ್ಷವರ್ಧನನ ಆಳ್ವಿಕೆಯಲ್ಲಿ ಕ್ರಿಸ್ತಶಕ 630 ಮತ್ತು 645 ರ ನಡುವೆ ಭಾರತಕ್ಕೆ ಭೇಟಿ ನೀಡಿದ ಚೀನೀ ಬೌದ್ಧ ಯಾತ್ರಿಕ ಮತ್ತು ಪ್ರವಾಸಿ ಹ್ಯೂಯೆನ್ ತ್ಸಾಂಗ್, ಆರನೇ ಶತಮಾನದ ಅವಧಿಯಲ್ಲಿ ಹೂಣರ ದೊರೆ ಮಿಹಿರಾಕುಲ ಎಂಬಾತನು ಶಿವನ ಭಕ್ತನಾಗಿದ್ದು ಒಂದು ಸಾವಿರದ ಆರನೂರು ಬೌದ್ಧ ಸ್ತೂಪಗಳು ಮತ್ತು ಮಠಗಳನ್ನು ನಾಶಪಡಿಸಿದನು ಮತ್ತು ಸಾವಿರಾರು ಜನರನ್ನು ಕೊಂದನು ಎಂದು ದಾಖಲಿಸಿದ್ದಾನೆ.
ದೇಶದ ಕೆಲವು ಭಾಗಗಳಲ್ಲಿ, ಕಾಶ್ಮೀರದಲ್ಲಿರುವಂತೆ, ಆಡಳಿತಗಾರರು ವೈಯಕ್ತಿಕ ದ್ವೇಷ ಮತ್ತು ನೀತಿಯ ವಿಷಯವಾಗಿ ದೇವಾಲಯಗಳು ಮತ್ತು ಬೌದ್ಧ ಸಂಸ್ಥೆಗಳನ್ನು ಕೆಡವಲು ಆದೇಶಿಸಿದರು. ಕಲ್ಹಣನು ರಾಜ ನಾರದನ ಬಗ್ಗೆ ಆಸಕ್ತಿದಾಯಕ ಉಲ್ಲೇಖವನ್ನು ಮಾಡುತ್ತಾನೆ, ಅವನು ತನ್ನ ಹೆಂಡತಿಯನ್ನು ಮೋಹಿಸಿದ ಬೌದ್ಧ ಸನ್ಯಾಸಿಯಿಂದ ಕೋಪಗೊಂಡ ಪರಿಣಾಮವಾಗಿ ಸೇಡು ತೀರಿಸಿಕೊಳ್ಳಲು "ಸಾವಿರಾರು ವಿಹಾರಗಳನ್ನು ಸುಟ್ಟುಹಾಕಿದನು" ಎಂದು ಹೇಳುವುದರ ಜೊತೆಗೆ ಹತ್ತನೇ ಶತಮಾನದ ರಾಜ ಕ್ಷೇಮಗುಪ್ತನ ಬಗ್ಗೆಯೂ ದಾಖಲಿಸಿದ್ದಾನೆ. ಕ್ಷೇಮಗುಪ್ತನು ಶ್ರೀನಗರದಲ್ಲಿರುವ ಜಯೇಂದ್ರವಿಹಾರದ ಬೌದ್ಧ ಮಠವನ್ನು ನಾಶಪಡಿಸಿದನು ಮತ್ತು ಕ್ಷೇಮಗೌರೀಶ್ವರ ದೇವಾಲಯದ ನಿರ್ಮಾಣಕ್ಕೆ ಅದರ ವಸ್ತುಗಳನ್ನು ಬಳಸಿದನು ಎಂದು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಪಠ್ಯದಲ್ಲಿ ಉಲ್ಲೇಖಿಸಲಾದ ಕಾಶ್ಮೀರಿ ರಾಜರಲ್ಲಿ, ಕ್ರಿಸ್ತಶಕ 1089 ರಿಂದ 1111 ರವರೆಗೆ ಆಳಿದ ಹರ್ಷದೇವ ಅತ್ಯಂತ ಕುಖ್ಯಾತನಾಗಿದ್ದನು. ಅವನು ವ್ಯವಸ್ಥಿತವಾಗಿ ಹಿಂದೂ ಮತ್ತು ಬೌದ್ಧ ದೇವಾಲಯಗಳನ್ನು ಸಂಪತ್ತಿಗಾಗಿ ಲೂಟಿ ಮಾಡಿದನು ಮತ್ತು ಕೆಡವಿದನು ಮತ್ತು ದೇವಾಲಯಗಳ ನಾಶ ಮತ್ತು ವಿಗ್ರಹಗಳನ್ನು ಕೆಡುವುವ ಸಲುವಾಗಿ ಭಕ್ತಪತಣ್ಣ ನಾಯಕ ಎಂಬಾತನನ್ನು ವಿಶೇಷ ಅಧಿಕಾಯಾಗಿ ನೇಮಕ ಮಾಡಿದ್ದನು. ಎಂದು ರಾಜರಂಗಿಣಿಯಲ್ಲಿ ಉಲ್ಲೇಖಿಸಲಾಗಿದೆ.
ಬುದ್ಧನ ಜ್ಞಾನೋದಯದ ಸ್ಥಳವಾದ ಬಿಹಾರದ ಬೋಧಗಯಾದಲ್ಲಿ ಶಿವನ ಆರಾಧಕನಾಗಿದ್ದ ದೊರೆ ಶಶಾಂಕನು ಬೋಧಿ ವೃಕ್ಷವನ್ನು ಕಡಿದು ಸ್ಥಳೀಯ ದೇವಾಲಯದಿಂದ ಬುದ್ಧನ ಪ್ರತಿಮೆಯನ್ನು ತೆಗೆದುಹಾಕಿದನು, ಅದನ್ನು ಮಹೇಶ್ವರನ ಪ್ರತಿಮೆಯಿಂದ ಬದಲಾಯಿಸುವಂತೆ ಆದೇಶಿಸಿದನು ಎಂದು ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಈ ಸ್ಥಳವು ಭಾರತೀಯ ಇತಿಹಾಸದುದ್ದಕ್ಕೂ ಧಾರ್ಮಿಕ ಸ್ಪರ್ಧೆಯ ತಾಣವಾಗಿ ಉಳಿದಿದೆ. ಸಾಂಪ್ರದಾಯಿಕ ದಾಖಲೆಗಳು ಮತ್ತು ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಪ್ರಕಾರ ಅಲ್ಲಿನ ಮಹಾಬೋಧಿ ದೇವಾಲಯವನ್ನು ಪದೇ ಪದೇ ನಾಶಪಡಿಸಲಾಯಿತು ಮತ್ತು ಪುನರ್ನಿರ್ಮಿಸಲಾಯಿತು. ಆರಂಭಿಕ ಮಧ್ಯಕಾಲೀನ ಪುರಾಣ ಗ್ರಂಥಗಳಲ್ಲಿ ಹನ್ನೊಂದನೆಯ ಶತಮಾನದ ಮಧ್ಯಭಾಗದಲ್ಲಿ ವಿಷ್ಣು ದೇವಾಲಯವನ್ನು ಸ್ಥಾಪಿಸಲು ಒಂದು ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ವಿಷ್ಣು ದೇವಾಲಯದ ನಿರ್ಮಾಣಕ್ಕೆ ಬೌದ್ಧ ಸ್ಮಾರಕಗಳ ಅವಶೇಷಗಳನ್ನು ಬಳಸಿಕೊಳ್ಳಲಾಯಿತು. ಆಧುನಿಕ ವಿಷ್ಣುಪಾದ ದೇವಾಲಯವನ್ನು ಇಂದೋರ್‌ನ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಎಂಬಾಕೆ ಹದಿನೆಂಟನೇ ಶತಮಾನದ ಕೊನೆಯಲ್ಲಿ ನಿರ್ಮಿಸಿದಳು.
ಗಯಾದಿಂದ ಈಶಾನ್ಯಕ್ಕೆ ಎಂಬತ್ತು ಕಿಲೋಮೀಟರ್‌ಗಳ ದೂರದಲ್ಲಿ ನಳಂದದಲ್ಲಿ ಅಂತಾರಾಷ್ಟ್ರೀಯವಾಗಿ ಹೆಸರಾಂತ ಬೌದ್ಧ ವಿಶ್ವವಿದ್ಯಾನಿಲಯವಿದ್ದು, ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗಿಂತ ಹೆಚ್ಚು ಕಾಲ ಈ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದನು. ವಿಶಾಲವಾದ ಸನ್ಯಾಸಿಗಳ ಸಂಕೀರ್ಣವನ್ನು ಹೊಂದಿದ್ದ ಈ ಜಾಗದಲ್ಲಿ ಶೈವ ಧರ್ಮದ ಬ್ರಾಹ್ಮಣ ದೇವಾಲಯವನ್ನು ಏಳನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾಯಿತು ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನ ಕಾಂಚಿಪುರಂ ಪಟ್ಟಣದ ಕಾಮಾಕ್ಷಿ ದೇವಸ್ಥಾನವು ಸಹ ನಿರ್ಮಾಣವಾಯಿತು. ಈ ಸ್ಥಳದ ಸುತ್ತಲೂ ಹಲವಾರು ಬುದ್ಧನ ಚಿತ್ರಗಳ ಆವಿಷ್ಕಾರವು ಇದನ್ನು ಬೌದ್ಧ ಕಟ್ಟಡದ ಮೇಲೆ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ ಒಡಿಸ್ಸಾದ ಪುರಿ ಜಿಲ್ಲೆಯ ಪೂರ್ಣೇಶ್ವರ, ಕೇದಾರೇಶ್ವರ, ಕಂಠೇಶ್ವರ, ಸೋಮೇಶ್ವರ ಮತ್ತು ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ನಿರ್ಮಿಸಲಾಗಿದೆ ಅಥವಾ ಅವುಗಳಿಂದ ಪಡೆದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಆಂಧ್ರಪ್ರದೇಶದಲ್ಲಿ ಅನೇಕ ಬೌದ್ಧ ಸ್ಥಳಗಳನ್ನು ಬ್ರಾಹ್ಮಣರು ಸ್ವಾಧೀನಕ್ಕೆ ಪಡೆದ ಹಲವಾರು ನಿದರ್ಶನಗಳಿವೆ. ಗುಂಟೂರು ಜಿಲ್ಲೆಯ ಚೆಜೆರ್ಲಾದಲ್ಲಿ ಮಧ್ಯಕಾಲೀನ ಅವಧಿಯಲ್ಲಿ ಬೌದ್ಧ ಮಠವನ್ನು ಕಪೋತೇಶ್ವರ ದೇವಾಲಯವಾಗಿ ಪರಿವರ್ತಿಸಲಾಗಿದೆ. ನಾಗಾರ್ಜುನಕೊಂಡದಲ್ಲಿ ಬೌದ್ಧ ಸ್ತೂಪ ಮತ್ತು ವಿಹಾರಗಳನ್ನು ನಾಶಪಡಿಸಿದ್ದು ಗುಪ್ತರ ಕಾಲದಲ್ಲಿ ನಡೆದ ಈ ಘಟನೆಯು "ನಿರ್ದಯ" ಮತ್ತು "ಭಯಾನಕ" ಕೃತ್ಯ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಕೂಡಾ ಅಮರಾವತಿಯಲ್ಲಿ ಕೃಷ್ಣಾ ನದಿಯ ದಂಡೆಯ ಮೇಲೆ ಮಹಾ ಸ್ತೂಪದಿಂದ ಕೆಲವು ಮೀಟರ್ ದೂರದಲ್ಲಿ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ ಇದು ಬಹುಶಃ ಬೌದ್ಧ ಸ್ಥಳವನ್ನು ಅತಿಕ್ರಮಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಶಂಕರ ಚಾರ್ಯರ ನೇತೃತ್ವದ ಬ್ರಾಹ್ಮಣ ಚಳುವಳಿಯ ಪರಿಣಾಮವಾಗಿ ದಕ್ಷಿಣ ಪ್ರದೇಶದಲ್ಲಿ ಬೌದ್ಧಧರ್ಮವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು.
ಅಶೋಕನ ಕಾಲದಿಂದಲೂ ಬೌದ್ಧ ಧರ್ಮದ ಕೇಂದ್ರವಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬೌದ್ಧ ವಿಹಾರಗಳನ್ನು ಶೈವರು ಸ್ಪಷ್ಟವಾಗಿ ಸ್ವಾಧೀನಪಡಿಸಿಕೊಂಡ ಎರಡು ಪ್ರಮುಖ ಸ್ಥಳಗಳನ್ನು ನಾವು ನೋಡಬಹುದಾಗಿದೆ. ಉತ್ತರ ಕರ್ನಾಟಕದ ಐಹೊಳೆಯು ಚಾಲುಕ್ಯರ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇಲ್ಲಿ ಆರನೆಯ ಶತಮಾನಕ್ಕೆ ಸೇರಿದ ಲಾಡ್ ಖಾನ್ ದೇವಾಲಯವು ಮೂಲತಃ ಸರಳ ಚೌಕಾಕಾರದ ಸಭಾಂಗಣವಾಗಿತ್ತು ಮತ್ತು ಬೌದ್ಧ ವಿಹಾರದ ಕೇಂದ್ರ ಸಭಾಂಗಣವಾಗಿತ್ತು. ನಂತರ ಇದು ಗೋಡೆಗಳು, ಕಿಟಕಿಗಳು, ನೆಲಮಾಳಿಗೆ ಮತ್ತು ಛಾವಣಿಯ ದೇಗುಲಗಳೊಂದಿಗೆ ಸೂರ್ಯ-ನಾರಾಯಣನಿಗೆ ಮೀಸಲಾದ ದೇವಾಲಯವಾಗಿ ರೂಪಾಂತರಗೊoಡಿತು. ಇನ್ನೊಂದು ಉದಾಹರಣೆಯು ದಕ್ಷಿಣ ಕರ್ನಾಟಕದ ಮಂಗಳೂರಿನ ಕದ್ರಿಯ ಮಂಜುನಾಥ ದೇವಾಲಯಕ್ಕೆ ಸಂಬಂಧಪಟ್ಟಿದೆ. ಅಲ್ಲಿದ್ದ ಕದರಿಕಾ ವಿಹಾರ ಎಂಬ ಬೌದ್ಧ ಮಠವನ್ನು 1068 ರಲ್ಲಿ ಶೈವ ದೇವಾಲಯವಾಗಿ ಪರಿವರ್ತಿಸಲಾಯಿತು. ಇದಕ್ಕೆ ಈಗ ಪರಶುರಾಮನ ಪುರಾಣ ಕಥೆಯನ್ನು ಜೋಡಿಸಲಾಗಿದೆ.
ಮಾಹಿತಿ ಸೌಜನ್ಯ- ದ್ವಿಜೇಂದ್ರ ನಾರಾಯಣ್ ಜಾ ಅವರ ‘’ಎಗೇನೆಸ್ಟ್ ದಿ ಗ್ರೈನ್: ನೋಟ್ಸ್ ಆನ್ ಐಡೆಂಟಿಟಿ, ಇನ್ ಟಾಲರೆನ್ಸ್ ಅಂಡ್ ಹಿಸ್ಟರಿ’’ ಕೃತಿಯಿಂದ.
( ಹೊಸತು ಮಾಸಪತ್ರಿಕೆಯ ಬಹು ಸಂಸ್ಕೃತಿ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ