ಅಂದಿನ ಹೈದರಾಬಾದ್ ಸಂಸ್ಥಾನಕ್ಕೆ ನಮ್ಮ ಕರ್ನಾಟಕದ ಗುಲ್ಬರ್ಗಾ, ಬೀದರ್, ರಾಯಚೂರು ಜಿಲ್ಲೆಗಳು ಸೇರಿದಂತೆ ಅನೇಕ ಭಾಗಗಳು ಸೇರಿದ್ದವು. ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಯ ಜನರ ನಡುವೆ ಅಧಿಕಾರ ಮಾತ್ರ ಮುಸ್ಲಿಂ ದೊರೆಗಳ ಕೈಯಲ್ಲಿತ್ತು. ಹದಿನೈದನೇ ಶತಮಾನದಿಂದ ಬಿಜಾಪುರದ ಆದಿಲ್ ಶಾಹಿ, ಗುಲ್ಬರ್ಗದ ಬಹುಮನಿ ಸುಲ್ತಾನರು, ಗೊಲ್ಕಂಡಾದ ನಿಜಾಮರು ಹಾಗೂ ಮೊಗಲರ ಆಳ್ವಿಕೆಯಲ್ಲಿ ಅಲ್ಲಿನ ಜನತೆ ಆಳಿಸಿಕೊಂಡಿದ್ದಾರೆ. ಆದರೆ, ಇಪ್ಪತ್ತನೇ ಶತಮಾನದ ಅವಧಿಯಲ್ಲಿ ಹೈದರಾಬಾದ್ ನಿಜಾಮನಾಗಿದ್ದ ಮೀರ್ ಉಸ್ಮಾನ್ ಆಲಿಖಾನ್ ಆಳ್ವಿಕೆಯಲ್ಲಿ ಆತನು ಸ್ವತಂತ್ರ ಭಾರತಕ್ಕೆ ಸೇರಲು ಇಚ್ಚಿಸದೆ, ಹೈದರಾಬಾಧ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವಾಗಿಸಲು ನಡೆಸಿದ ಹೋರಾಟ ಅತ್ಯಂತ ಅಮಾನುಷವಾದುದು.
ದಕ್ಷಿಣ ಕರ್ನಾಟಕದ ಜನತೆಗೆ ರಜಾಕೋರ ದಾಳಿ, ಲೂಟಿ, ಕೊಲೆ ಮತ್ತು ಅತ್ಯಾಚಾರದ ಬಗ್ಗೆ ತಿಳಿದಿರುವುದು ಅತ್ಯಲ್ಪ. ರಜಾಕೋರರ ಹಾವಳಿ ಎಂದಷ್ಟೇ ಓದಿಕೊಂಡಿರುವ ನಾವು ಇಂದಿನ ಹೈದರಾಬಾದ್ ಕರ್ನಾಟಕದ ಜನತೆ 1947 ಆಗಸ್ಟ್ 15 ರಿಂದ 1948 ಸೆಪ್ಟಂಬರ್ 18 ರವರೆಗೆ ನಡೆಸಿರುವ ಹೋರಾಟ, ಜೀವ ತೆತ್ತ ಪರಿ ಇವೆಲ್ಲವೂ ಈ ಜಗತ್ತಿನ ಯಾವುದೇ ಹೋರಾಟಕ್ಕೆ ಮಿಗಿಲಾಗಿ ನಿಲ್ಲುವಂತಹದ್ದು. ಇಪ್ಪತ್ತೈದು ವರ್ಷಗಳ ಹಿಂದೆ ಉದಯ ಟಿ.ವಿ. ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಹುಬ್ಬಳ್ಳಿಗೆ ಹೋದನಂತರ ಇಪ್ಪತ್ತುವರ್ಷಗಳ ಕಾಲ ಧಾರವಾಡದಲ್ಲಿ ನೆಲೆ ನಿಂತು ಕಾಯಾ, ವಾಚಾ, ಮನಸಾ, ಅಲ್ಲಿನ ಮಣ್ಣಿನ ಮಗನಂತೆ ಬದುಕಿದೆ.
ಬೀದರ್, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳು ನನ್ನ ವ್ಯಾಪ್ತಿಗೆ ಬರುತ್ತಿದ್ದ ಕಾರಣ, ಅತ್ತ ಕಡೆ ಹೋದಾಗ, ಅಲ್ಲಿನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಮಿತ್ರರ ಮಾತುಗಳಿಗೆ ಇಡೀ ರಾತ್ರಿ ಕಿವಿಗೊಟ್ಟು ಕೇಳುತ್ತಿದ್ದೆ, ಬೀದರ್ ಜಿಲ್ಲೆಯಲ್ಲಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದು ನಂತರ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದ ದೇವು ಪತ್ತಾರ್ ಹಾಗೂ ಬೀದರ್ ಜಿಲ್ಲೆಯ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ಹೃಷಿಕೇಶ್ ಬಹದ್ದೂರ್ ಹಾಗೂ ಉತ್ತರ ಕರ್ನಾಟಕದ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಮದನ್ ಮೋಹನ್, ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮೋಹನ ಹೆಗ್ಡೆ ಇವರೆಲ್ಲರೂ ನನ್ನ ಪಾಲಿಗೆ ಮಾಹಿತಿ ಕಣಜವಾಗಿದ್ದರು.
ಇಪ್ಪತ್ತು ವರ್ಷದ ಹಿಂದೆ ಒಮ್ಮೆ ಕಾರ್ಯನಿಮಿತ್ತ ರಾಯಚೂರಿಗೆ ಹೋಗಿದ್ದಾಗ, ಅಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ದಸ್ತಗೀರ್ ಸಾಬ್ ದಿನ್ನಿ ಎಂಬ ಮಿತ್ರ (ಈಗ ಬಳ್ಳಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ) ನನ್ನನ್ನು ನನ್ನ ಪ್ರೀತಿಯ ಕವಿ ಜಂಬಣ್ಣ ಅಮರಚಿಂತ ಅವರ ಮನೆಗೆ ಕರೆದೊಯ್ದರು. ಅಂದಿನಿಂದ ಅತ್ತಕಡೆ ಹೋದಾಗಲೆಲ್ಲಾ ಅವರ ಬಾಯಲ್ಲಿ ಅವರು ತಮ್ಮ ತಂದೆ ಮತ್ತು ತಾಯಿ ಹಾಗೂ ಹಿರಿಯರಿಂದ ಕೇಳಿಸಿಕೊಂಡ ರಜಾಕೋರರ ದಾಳಿಯ ಕಥನವನ್ನು ನನಗೆ ವಿವರಿಸುತ್ತಿದ್ದರು. ಶಾಂತರಸ, ಚಂದ್ರಕಾಂತ ಕುಸನೂರು, ಜಂಬಣ್ಣ ಅಮರಚಿಂತ ಮೂವರು ಬಾಲ್ಯದಲ್ಲಿ ಉರ್ದು ಮಾಧ್ಯಮದಲ್ಲಿ ಓದಿದವರು. ಮೂವರನ್ನೂ ಭೇಟಿಯಾಗಿ ಅವರ ಬಾಲ್ಯದ ಕಥೆಗಳನ್ನು ಮತ್ತು ರಜಾಕೋರರ ಕ್ರೌರ್ಯದ ಕಥನವನ್ನು ಕೇಳಿದ ಭಾಗ್ಯ ನನ್ನದು. ಜಂಬಣ್ಣನವರು ತಮ್ಮ ಆಥ್ಮ ಕಥನವನ್ನು ಕಾದಂಬರಿಯ ರೂಪದಲ್ಲಿ ‘’‘’ಬೂಟುಗಾಲಿನ ಸದ್ದು’’ ಎಂಬ ಶೀರ್ಷಿಕೆಯಡಿ ಬರೆದಿದ್ದಾರೆ.
1947 ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಖಚಿತವಾಗುತ್ತಿದ್ದಂತೆ, ಹೈದರಾಬಾದ್ ನಿಜಾಮನು ತನ್ನ ಸೈನಿಕರಿಗೆ ಬ್ರಿಟೀಷರಿಂದ ತರಬೇತಿ ಕೊಡಿಸುವುದರ ಜೊತೆಗೆ ಹೇರಳವಾಗಿ ಹಣವನ್ನು ನೀಡಿ ಅವರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದನು. ಜೊತೆಗೆ ಹೈದರಾಬಾದ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವಂತೆ ಆಮೀಷವೊಡ್ಡಿದ್ದನು. 1947 ರ ಆಗಸ್ಟ್ 15 ರಂದು ಪಾಕಿಸ್ತಾನ ರಾಷ್ಟ್ರ ಘೋಷಣೆಯಾಗುತ್ತಿದ್ದಂತೆ, ಹೈದರಾಬಾದ್ ಸಂಸ್ಥಾನವು ತುರ್ಕಿಸ್ತಾನ ಎಂದು ತನ್ನದೇ ರೇಡಿಯೋ ಕೇಂದ್ರವಾದ ಡೆಕ್ಕನ್ ರೇಡಿಯೋ ಮೂಲಕ ಘೋಷಿಸಿಕೊಂಡನು. ಪಾಕಿಸ್ತಾನಕ್ಕೆ ಇಪ್ಪತ್ತುಕೋಟಿ ರೂಪಾಯಿ ಹಣವನ್ನು ನೀಡಿ, ಮಹಮದ್ ಜಿನ್ನಾ ಅವರ ಮೂಲಕ ಸ್ವತಂತ್ರ ರಾಷ್ಟ್ರ ಎಂಬ ಮಾನ್ಯತೆಯನ್ನು ಘೋಷಿಸಿ, ಇತರೆ ಮುಸ್ಲಿಂ ರಾಷ್ಟ್ರಗಳು ವಿಶ್ವಸಸಂಸ್ಥೆಯ ಮೇಲೆ ಒತ್ತಡ ತರುವಂತೆ ನೋಡಿಕೊಂಡನು.
ಹೈದರಾಬಾದ್ ನಿಜಾಮನ ಹುಚ್ಚಾಟಕ್ಕೆ ಆಸರೆಯಾಗಿ ನಿಂತದ್ದು ರಜಾಕೋರರ ಸಂಘಟನೆ. ಪರ್ಷಿಯನ್ ಭಾಷೆಯಲ್ಲಿ ರಜಾಕೋರ್ ಎಂದರೆ, ಸ್ವಯಂ ಸೇವಕರು ಎಂದರ್ಥ. 1938-40 ರ ನಡುವೆ ಕೌನ್ಸಿಲ್ ಆಫ್ ಮುಸ್ಲಿಂ ಯೂನಿಟಿ ಹೆಸರಿನಲ್ಲಿ ಬಹದ್ದೂರ್ ಯಾರ್ ಜಂಗ್ ಎಂಬುವವನ ನೇತೃತ್ವದಲ್ಲಿ ರೂಪುಗೊಂಡ ಈ ಸಂಘಟನೆಯು 1947 ರ ಸಮಯಕ್ಕೆ ಮಹಾರಾಷ್ಟ್ರದ ಲಾತೂರ್ ಮೂಲದ ಕಾಸಿಂ ರಿಜ್ವಿ ಎಂಬ ಹಲಾಲುಕೋರನ ನೇತೃತ್ವದಲ್ಲಿ ನಿಜಾಮನ ಪರ್ಯಾಯ ಸೇನೆಯಾಗಿ ಪರಿವರ್ತನೆಗೊಂಡಿತು. ನಿಜಾಮನ ಹೇರಳವಾದ ಸಂಪತ್ತಿನ ಬೆಂಬಲ, ಕುದುರೆ, ಪಿರಂಗಿಗಳು, ಬಂದೂಕಗಳು ರಜಾಕೋರರ ಕೈಗೆ ದೊರೆತವು.
ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ಭಾರತಕ್ಕೆ ಸೇರಿಸಬೇಕೆಂದು ಆಂಧ್ರ ಮಹಾಸಭಾ ಸಂಘಟನೆ, ಕಮ್ಯೂನಿಸ್ಟ್ ಕಾರ್ಯಕರ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯನ್ನು ರೂಪಿಸಿದಾಗ, ನಿಜಾಮನು ಸ್ಥಳೀಯ ಜಮೀನ್ದಾರರುಗಳು ಮತ್ತು ರಜಾಕೋರರ ಸೇನೆಯ ಮೂಲಕ ಇಡೀ ಹೈದರಾಬಾದ್ ಸಂಸ್ಥಾನದಲ್ಲಿ ಹೋರಾಟಗಾರರ ರುಂಡಗಳನ್ನು ಚಂಡಾಡಿದನು. ಇಂದಿನ ಗುಲ್ಬರ್ಗಾ ಜಿಲ್ಲೆಯ 98 ಗ್ರಾಮಗಳ ಮೇಲೆ ದಾಳಿ ನಡೆಸಿ, 42 ಮಂದಿಯನ್ನು ಹತ್ಯೆಗೈದು, 36 ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರವೆಸಗಲಾಯಿತು. ಬೀದರ್ ಜಿಲ್ಲೆ 176 ಗ್ರಾಮಗಳ ಮೇಲೆ ದಾಳಿ ಹಾಗೂ 120 ಹೋರಾಟಗಾರ ಕೊಲೆ ಮತ್ತು 23 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೆ, ರಾಯಚೂರು ಜಿಲ್ಲೆಯ 94 ಗ್ರಾಮಗಳ ಮೇಲೆ ದಾಳಿ ನಡೆಸಿ, 25 ಮಂದಿಯನ್ನು ಹತ್ಯೆಗೈದು, 63 ಮಂದಿ ಮಹಿಳೆಯರ ಮೇಲೆ ರಜಾಕೋರರು ಅತ್ಯಾಚಾರ ನಡೆಸಿದ್ದಾರೆ. ಕನ್ನಡದ ನೆಲೆದಲ್ಲಿ ಈ ಬಗೆಯ ಕ್ರೌರ್ಯವಾದರೆ, ಅಂದಿನ ಅವಿಭಜಿತ ಆಂಧ್ರದಲ್ಲಿ ಏನು ನಡೆದಿರಬಹುದು ಊಹಿಸಿ.
ರಜಾಕೋರರು ಬರುತ್ತಿದ್ದಾರೆ ಎಂದರೆ ಸಾಕು ಜನತೆ ಗ್ರಾಮಗಳನ್ನು ತೊರೆದು ಕಾಡು ಮತ್ತು ಹಳ್ಳ, ಕೊಳ್ಳಗಳಲ್ಲಿ ಅವಿತುಕೊಳ್ಳುತ್ತಿದ್ದರು. ಮನೆಯಲ್ಲಿದ್ದ ದವಸ, ಧಾನ್ಯ, ಜಾನುವಾರು, ಮೇಕೆ ಎಲ್ಲವೂ ರಜಾಕೋರರ ಪಾಲಾಗುತ್ತಿದ್ದವು. ನಿರಂತರ ಒಂದು ವರ್ಷ ನಡೆದ ಈ ಅಮಾನುಷ ಕೃತ್ಯಕ್ಕೆ ಅಂದಿನ ಕೇಂದ್ರ ಗೃಹಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಸ್ಪಂದಿಸದಿದ್ದರೆ, ದಕ್ಷಿಣ ಭಾರತದಲ್ಲಿ ಮತ್ತೊಂದು ತುರ್ಕಿಸ್ತಾನ ಸೃಷ್ಟಿಯಾಗುತ್ತಿತ್ತು. ಪ್ರಧಾನಿ ನೆಹರೂ ಅವರ ಮಾತನ್ನು ಮೀರಿ, ಅವರು ಕಾಶ್ಮೀರದಿಂದ ಸೇನೆಯನ್ನ ಕರೆಸಿ ಹೈದರಾಬಾದಿಗೆ ರವಾನಿಸಿದರು. ಏಕೆಂದರೆ, ಹೈದರಾಬಾದ್ ನಿಜಾಮನ ಪೋಲಿಸರು ಹಳ್ಳಿಗಳ ಹೋರಾಟಗಾರರ ಕೊಡಲಿ, ಮಚ್ಚು ಇವುಗಳನ್ನು ವಶಪಡಿಸಿಕೊಂಡು ಅವುಗಳನ್ನು ರಜಾಕೋರಿಗೆ ಒಪ್ಪಿಸುತ್ತಿದ್ದರು. ಈ ವಿಷಯ ತಿಳಿದ ವಲ್ಲಬಾಯ್ ಪಟೇಲ್ ಅವರು ಮೇಜರ್ ಜನರರ್ ಚೌಧುರಿ ನೇತೃತ್ವದಲ್ಲಿ ಸೇನೆಯನ್ನು ಕಳಹಿಸಿ, ನಿಜಾಮನಿಗೆ ಗೃಹಬಂಧನ ವಿಧಿಸಿದಾಗ, ಅಂತಿಮವಾಗಿ ನಿಜಾನಮನು ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವುದಾಗಿ 1948 ಸೆಪ್ಟಂಬರ್ 18 ರಂದು ರೇಡಿಯೋ ಮೂಲಕ ಅಂತಿಮವಾಗಿ ಘೋಷಿಸಿದನು.
ಆ ವೇಳೆಗಾಲೇ ತನ್ನ ಹೇರಳವಾದ ಸಂಪತ್ತನ್ನು ವಜ್ರ, ಚಿನ್ನ, ಹಣ ಎಲ್ಲವನ್ನೂ ಇಂಗ್ಲೇಂಡ್ ಗೆ ಸಾಗಿಸಿದ್ದನು. ಕಾಸಿಂ ರಿಜ್ವಿ ನಿಜಾಮನಿಂದ ಹಣ ಪಡೆದು ಪಾಕಿಸ್ತಾನದ ಕರಾಚಿಗೆ ಪಲಾಯನಗೈದನು. ಆದರೆ, ಈ ನೆಲದಲ್ಲಿ ನೆಮ್ಮದಿಯ ಸ್ವತಂತ್ರ್ಯದ ಬದುಕಿಗೆ ನೂರಾರು ಪುರುಷರು, ಮಹಿಳೆಯರು ಪ್ರಾಣತೆತ್ತರು. ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ನಾಗಮ್ಮ, ಹಟ್ಟಿ ಗುರುಬಸವ್ವ ಈ ಮಹಿಳಾಮಣಿಗಳು ತಂಡವನ್ನು ಕಟ್ಟಿಕೊಂಡು ಹೋರಾಡಿದ ಪರಿಯು ಒಂದು ಕಾದಂಬರಿಯಾಗಬಲ್ಲದು.
ಕಳೆದ ವರ್ಷ ಯಾಟ ಸತ್ಯನಾರಾಯಣ ಎಂಬ ವ್ಯಕ್ತಿ ಕಥೆ, ಚಿತ್ರಕಥೆ ಬರೆದು ರಜಾಕೋರ್ ಎಂಬ ಹೆಸರಿನಲ್ಲಿ ಹಿಂದಿ, ತೆಲುಗು, ತಮಿಳುಭಾಷೆಯನ್ನು ಚಿತ್ರ ನಿರ್ದೇಶನ ಮಾಡಿದ್ದಾನೆ. ಇತಿಹಾಸಕ್ಕೆ ನಿಷ್ಠನಾಗಿದ್ದರೂ ಸಹ ಬಲಪಂಥೀಯ ಧೋರಣೆಯ ಹಿನ್ನಲೆಯಲ್ಲಿ ರಜಾಕೋರರ ಹಿಂಸೆಯನ್ನು ವೈಭವೀಕರಿಸಿದ್ದಾನೆ ಎಂದು ನನಗೆ ಅನಿಸಿತು.
ಪ್ರಥಮ ಪ್ರಯತ್ನದಲ್ಲಿ ಆತ ಇಂತಹ ಸಿನಿಮಾ ಮಾಡುಬಹುದೆ? ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾನೆ. ಸರ್ದಾರ್ ವಲ್ಲಬಾಯ್ ಪಟೇಲ್ ಪಾತ್ರದಲ್ಲಿತೇಜ್ ಸಪ್ರು ಮತ್ತು ಕಾಸಿಂ ರಿಜ್ವಿ ಪಾತ್ರದಲ್ಲಿ ರಾಜು ಅರ್ಜುನ್ ಗಮನ ಸೆಳೆಯುತ್ತಾರೆ. ಟಿಪ್ಪು ಸುಲ್ತಾನ್ ಕುರಿತು ವಿಷ ಕಕ್ಕುವ ವಿಷ ಜಂತುಗಳು ಒಮ್ಮೆ ಈ ಸಿನಿಮಾವನ್ನು ಒಮ್ಮೆ ನೋಡಬೇಕು. ನಿಜಾಮ ಮತ್ತು ಟಿಪ್ಪುವಿನ ವ್ಯಕ್ತಿತ್ವದ ಅರಿವಾಗುತ್ತದೆ.
ಎನ್.ಜಗದೀಶ್ ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ