ಮಹಾ ಕುಂಭಮೇಳದ ವರದಿ
ಮತ್ತು
ಮಾಧ್ಯಮಗಳ ಕೂಪ ಮಂಡೂಕಗಳು.
ಉತ್ತರಪ್ರದೇಶದ ಪ್ರಯಾಗ್ ರಾಜ್ ಎಂದು ಕರೆಸಿಕೊಳ್ಳುತ್ತಿರುವ ಅಲಹಾಬಾದ್ ನ ಗರದ ಹೊರವಲಯದ ತ್ರಿವೇಣಿ ಸಂಗಮ ಎಂದು ಕರೆಯುವ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಸ್ಥಳದಲ್ಲಿ ಕುಂಭ ಮೇಳ ನಡೆಯುತ್ತಿದೆ. ಈ ಮೂರು ನದಿಗಳಲ್ಲಿ ಸರಸ್ವತಿ ನದಿ ಈಗ ಅಸ್ತಿತ್ವದಲ್ಲಿ ಇದ್ದಂತೆ ಕಾಣುವುದಿಲ್ಲ. ಅದು ಭೂಮಿಯೊಳೆಗೆ ಹರಿದುಬಂದು ಸಂಗಮ ಸೇರುತ್ತದೆ ಎಂಬ ಕಾಗಕ್ಕನ, ಗೂಬಕ್ಕನ ಕಥೆಯನ್ನು ಚಾಲ್ತಿಯಲ್ಲಿಡಲಾಗಿದೆ.
ನಲವತ್ತೈದು ಕೋಟಿ ಜನ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಲಿದ್ದಾರೆ ಎಂಬ ಹೇಳಿಕೆಯಿಂದ ಹಿಡಿದು ಪ್ರತಿ ದಿನ ಒಂದು ಕೋಟಿಯಿಂದ ಮೂರು ಕೋಟಿ ಭಕ್ತರು ಸ್ನಾನ ಮಾಡಿದರು ಎಂಬ ವರದಿಯನ್ನು ಪ್ರಕಟಿಸುವ ಮುನ್ನ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು ಈಗ ಅದು ಇಲ್ಲವಾಗಿದೆ. ಹೇಳಿಕೆ ನೀಡುವ ಸರ್ಕಾರಗಳಿಗೆ ಮತ್ತು ಪ್ರಕಟಿಸುತ್ತಿರುವ ಮಾಧ್ಯಮಗಳಿಗೆ ಸಾವಿರ, ಲಕ್ಷ ಮತ್ತು ಕೋಟಿ ಸಂಖ್ಯೆಗಳ ನಡುವಿನ ಅಂತರ ಮರೆತು ಹೋಗಿದೆ. ಇದಕ್ಕೆ ಯಾವ ಅರ್ಥಶಾಸ್ತ್ರದ ಪರಿಣಿತಿ ಬೇಕಾಗಿಲ್ಲ. ಸಾಮಾನ್ಯ ಲೆಕ್ಕಾಚಾರ ಸಾಕು.
ಅಲಹಾಬಾದ್ ನಗರದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಿವೆ. ಈ ನಿಲ್ದಾಣಗಳಲ್ಲಿ ಮುಖ್ಯ ನಿಲ್ದಾಣದಲ್ಲಿ ಎಂಟು ಪ್ಲಾಟ್ ಪಾರಂ ಹೊರತು ಪಡಿಸಿದರೆ, ಉಳಿದ ನಿಲ್ದಾಣಗಳಲ್ಲಿ ಮೂರರಿಂದ ಐದು ಮಾತ್ರ ಪ್ಲಾಟ್ ಫಾರಂಗಳಿವೆ. ಒಂದು ದಿನಕ್ಕೆ ಕುಂಬ ಮೇಳಕ್ಕೆ ಐನೂರು ರೈಲುಗಳು ಆಗಮಿಸಿದವು ಎಂದು ಕೊಂಡು ಲೆಕ್ಕ ಹಾಕಿದರೆ, ಒಂದು ಲೈಲಿನಲ್ಲಿ ಒಂದು ಸಾವಿರ ಎಂದರೆ, ಐದು ಲಕ್ಷ. ಇದಕ್ಕೆ ಬೇಕಾದರೆ ಎಕ್ಟ್ರಾ ಮೂರು ಲಕ್ಷ ಸೇರಿಸಿ.
ಅಲಹಬಾದ್ ಗೆ ದಿನ ನೂರು ವಿಮಾನಗಳು ಆಗಮಿಸಿದರೆ, ಸರಾ ಸರಿ, ಇನ್ನೂರು ಪ್ರಯಾಣಿಕರಂತೆ ಇಪ್ಪತ್ತು ಸಾವಿರ ಪ್ರಯಾಣಿಕರು. ಇದಕ್ಕೆ ಐದು ಸಾವಿರ ಸೇರಿಸಿಕೊಳ್ಳಿ.
ಇನ್ನು ಅಲಹಬಾದ್ ನಗರವನ್ನು ರಸ್ತೆ ಮೂಲಕ ಸಂಪರ್ಕಿಸುವ ಲಕ್ನೋ, ಕಾನ್ಪುರ, ವಾರಣಾಸಿ, ಗ್ವಾಲಿಯರ್ ಹೆದ್ದಾರಿಗಳ ಮೂಲಕ ಒಂದು ಲಕ್ಷ ಕಾರುಗಳು. ಅಂದರೆ, ಐದು ಲಕ್ಷ ಪ್ರವಾಶಿಗರು ಮತ್ತು ಹತ್ತು ಸಾವಿರ ಬಸ್ ಗಳು ಅಂದರೆ ಸರಾಸರಿ ಐವತ್ತು ಮಂದಿಯಂತೆ ಐದು ಲಕ್ಷ. ಒಟ್ಟಾರೆ. ರೈಲು, ವಿಮಾನ, ಕಾರು, ಬಸ್ ಗಳಲ್ಲಿ ಆಗಮಿಸುವ ಭಕ್ತರ ಸಂಖ್ಯೆ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ದಾಟುವುದಿಲ್ಲ. ಕೋಟಿ ಜನ ಭಕ್ತರು ಎಂದು ಪುಂಗುವುದಕ್ಕೆ ಕನಿಷ್ಠ ಜ್ಞಾನ ಬೇಡವೆ?
ನಗರಕ್ಕೆ ಬರುತ್ತಿರುವ ರೈಲು, ವಿಮಾನಗಳ ಸಂಖ್ಯೆಗಳ ನಿಖರ ಮಾಹಿತಿ ದೊರೆಯುತ್ತದೆ. ಅದೇ ರೀತಿ ರಸ್ತೆಯಲ್ಲಿ ಆಗಮಿಸಿದ ಪ್ರತಿಯೊಂದು ವಾಹನದ ಮಾಹಿತಿಗಳೂ ಸಹ ದೊರೆಯುತ್ತವೆ. ಸರ್ಕಾರ ಹೇಳುವ ಸಂಖ್ಯೆ ಮತ್ತು ವಾಸ್ತವವಾಗಿ ಆಗಮಿಸುತ್ತಿರುವ ಜನರ ಸಂಖ್ಯೆಯ ಕುರಿತಾಗಿ ನೈಜ ಮಾಹಿತಿ ನೀಡಬೇಕಾದುದು ಮಾಧ್ಯಮಗಳ ಕರ್ತವ್ಯ ಎಂದು ಏಕೆ ಅನಿಸುತ್ತಿಲ್ಲ.?
ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಮುವತ್ತು ಅಥವಾ ನಲವತ್ತು ಲಕ್ಷ ಎಂದು ಹೇಳಲಾಗುತ್ತದೆ. ಇದರಲ್ಲಿ ಒಂದು ಕೋಟಿ ಜನರನ್ನು ಒಂದೆಡೆ ಸೇರಿಸಲು ಸಾಧ್ಯವೆ? ಊಹಿಸಿ ನೋಡಿ. ತ್ರಿವೇಣಿ ಸಂಗಮದ ವಿಸ್ತೀರ್ಣ ಮತ್ತು ಉದ್ದವನ್ನು ನಾನು ಸ್ವತಃ ಗಮನಿಸಿದ್ದೀನಿ. ಮೂರು ಕಿಲೊಮೀಟರ್ ಉದ್ದದಲ್ಲಿ ಗರಿಷ್ಠ ಮುವತ್ತು ಲಕ್ಷ ಜನ ಸೇರಬಹುದು. ಒಂದು ಕೋಟಿ ಎಂದು ಹೇಳುವ ಸರ್ಕಾರದ ಮಾತಿಗೆ ಕಿವಿಗೊಡುವ ಮುನ್ನ ಅಲ್ಲಿ ಹಾಕಿರುವ ತಾತ್ಕಾಲಿಕ ಗುಡಾರಗಳನ್ನು ಗಮನಸಿದರೆ, ಮಾಧ್ಯಮಗಳಿಗೆ ಒಂದು ಅಂದಾಜು ದೊರೆಯುತ್ತದೆ.
ಇಂತಹ ಸ್ಥಿತಿಯಲ್ಲಿ ಅಲ್ಲಿ ನಡೆಯುತ್ತಿರುವ ಕಾಲ್ತುಳಿತ, ಅಗ್ನಿ ದುರಂತ ಇವುಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಮರೆ ಮಾಚುವುದು, ಅಲ್ಲಿನ ವಕ್ತಾರರು ಹೇಳುವುದೇ ಸುದ್ದಿಯಾಗುವುದಾದರೆ, ಮಾಧ್ಯಮಗಳು ಏಕಿರಬೇಕು? ಇಡೀ ಕುಂಭಮೇಳದಲ್ಲಿ ಭಾಗವಹಿಸುವವರ ಸಂಖ್ಯೆ ನನ್ನ ಅಂದಾಜಿನ ಪ್ರಕಾರ ಹತ್ತು ಕೋಟಿ ದಾಟುವುದಿಲ್ಲ. ಇನ್ನು ನಲವತ್ತೈದು ಕೋಟಿ ಎನ್ನುವುದು ಅಗ್ರಹಾರದ ಹೊಸ ಪುರಾಣ. ಈಗಗಲೂ ಕಾಲ ಮಿಂಚಿಲ್ಲ. ನಗರಕ್ಕೆ ಆಗಮಿಸುವ ವಾಹನ, ರೈಲು, ವಿಮಾನಗಳ ಸಂಖ್ಯೆಯ ಮೂಲಕ ಅಧಿಕೃತ ದಾಖಲೆಯನ್ನು ಪ್ರಕಟಿಸಬಹುದು.
ಎನ್. ಜಗದೀಶ್ ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ