ಕನ್ನಡ ಸಾಹಿತ್ಯದ ಪ್ರಾಧ್ಯಾಪಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೂ ಕುವೆಂಪು ಸಾಹಿತ್ಯ ಕುರಿತಾಗಿ ಆಳವಾದ ಅಧ್ಯಯನ ಮಾಡಿರುವ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ಹಾಗೂ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ ‘’ಕನ್ನಡ ಸಾಹಿತ್ಯ, ಪರಂಪರೆ ಮತ್ತು ವರ್ತಮಾನ’’ ಎಂಬ ಕೃತಿಯು ಕನ್ನಡ ಸಾಹಿತ್ಯದ ಇತಿಹಾಸ ಕುರಿತು ಸಂಕ್ಷಿಪ್ತ ಒಳನೋಟವನ್ನು ನೀಡುವ ಮಹತ್ವದ ಕೃತಿ.
ವರ್ತಮಾನದಲ್ಲಿ ಕನ್ನಡ ಭಾಷಾ ಉಪನ್ಯಾಸ ಮತ್ತು ಪ್ರಾದ್ಯಾಪಕ ವೃತಿಯಲ್ಲಿ ಮೂರು ನಾಲ್ಕು ದಶಕ ಕಾಲವನ್ನು ಸೆವೆಸಿರುವ ಬಹುತೇಕ ಮಹನೀಯರು ( ಎಲ್ಲರೂ ಅಲ್ಲ) ಕನ್ನಡ ಭಾಷೆ ಮತ್ತು ಅದರ ಘನವಾದ ಇತಿಹಾಸವನ್ನು ಆಧುನಿಕ ತಲೆಮಾರಿಗೆ ತಲುಪಿವುದನ್ನು ಮರೆತು, ಬಾಢೂಟವನ್ನು ಒಳಗೊಂಡಂತೆ ಇಡೀ ಜಗತ್ತಿನ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಿದ್ದಾರೆ. ಇಂತಹವರು ಒಮ್ಮೆ ನರಹಳ್ಳಿ ಅವರ ಈ ಕೃತಿಯನ್ನು ಗಮನಿಸಬೇಕು. ವರ್ತಮಾನ ಜಗತ್ತಿಗೆ ಬಾಡೂಟ ಸಂಸ್ಕೃತಿ ಮುಖ್ಯವೋ, ಜ್ಞಾನ ಸಂಸ್ಕೃತಿ ಮುಖ್ಯವೋ ಎಂಬುದು ಅರ್ಥವಾಗುತ್ತದೆ.
ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಅಭಿನವ ಪ್ರಕಾಶನ ಈವರೆಗೆ ಪ್ರಕಟಿಸಿರುವ ಮಹತ್ವದ ಕೃತಿಗಳಲ್ಲಿ ಸಾವಿರ ಪ್ರಕಟಣೆಯಾಗಿ ಈ ಕೃತಿಯು ಪ್ರಕಟವಾಗಿದೆ. 182 ಪುಟಗಳ ಈ ಕೃತಿಯಲ್ಲಿ ನರಹಳ್ಳಿ ಸರ್ ಅವರು ಹಲ್ಮಿಡಿ ಶಾಸನ, ಕವಿರಾಜ ಮಾರ್ಗ, ವಡ್ಡರಾಧನೆ, ಪಂಪ, ನಾಗವರ್ಮ, ದುರ್ಗಸಿಂಹ, ಬಸವಣ್ಣ, ಅಲ್ಲಮ, ಅಕ್ಕಮಹಾಧೇವಿ, ಹರಿಹರ, ರಾಘವಾಂಕ, ಜನ್ನ, ಕುಮಾರ ವ್ಯಾಸ, ಕನಕದಾಸ, ರತ್ನಾಖರವರ್ಣಿ, ಸರ್ವಜ್ಞ, ಲಕ್ಷ್ಮೀಶ ಮತ್ತು ಮುದ್ದಣ್ಣ ಹೀಗೆ ನಮ್ಮ ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರೇಕ್ಕಿರಿಸಿದ ಮಹಾನ್ ರತ್ನಗಳ ಸೃಜನಶೀಲತೆಯನ್ನು ಇಲ್ಲಿ ಹಲವು ಆಯಾಮಗಳಿಂದ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ರನ್ನ ದಾಖಲಾಗದೆ ಉಳಿದದ್ದು ಈ ಕೃತಿಯ ಒಂದು ಸಣ್ಣ ಕೊರತೆ. ಏಕೆಂದರೆ, ಬಿ.ಎಂ.ಶ್ರೀ ಅವರ ರನ್ನನ ಗದಾಯುದ್ಧ ನಾಟಕ ಮೂಲಕ ನನ್ನಂತಹವನಿಗೆ ರನ್ನ ಪರಿಚಯವಾದವನು. ಆತನ ಕುರಿತಾಗಿ ನನಗಿನ್ನೂ ಮೋಹ ಇಂಗಿಲ್ಲ. ಐವತ್ತು ವರ್ಷಗಳ ಹಿಂದೆ ಪಿ.ಯು.ಸಿ.ಯಲ್ಲಿ ಓದಿದ ದುರ್ಯೋಧನನ ವಿಲಾಪಂ ಭಾಗದ ಪ್ರತಿ ಸಾಲುಗಳನ್ನು ಮರೆತಿಲ್ಲ.
ಏಕೆಂದರೆ, ಕನ್ನಡ ಸಾಹಿತ್ಯವನ್ನು ಅಧಿಕೃತವಾಗಿ ಓದಲಾಗದೆ, ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡ ನನ್ನಂತಹವರಿಗೆ ಇಂದಿಗೂ ಸಹ ಹಳಗನ್ನಡ ಎಂದರೆ ಕಬ್ಬಿಣದ ಕಡಲೆ ಎಂಬ ಭಾವನೆ ನೆಲೆಯೂರಿದೆ. ಈ ಕಾರಣಕ್ಕಾಗಿ ನನ್ನಂತಹವರು ಪಂಪ, ರನ್ನ, ಜನ್ನ, ಇಂತಹವರನ್ನು ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ತೀನಂಶ್ರೀ, ಡಿ.ಎಲ್. ನರಸಿಂಹಚಾರ್, ಮುಂತಾದ ಸಾಹಿತ್ಯ ದಿಗ್ಗಜರ ಮೂಲಕ ಸರಳ ಕನ್ನಡದಲ್ಲಿ ಓದಲು ಸಾಧ್ಯವಾಯಿತು ಮತ್ತು ಪಂಪ ಮಹಾಭಾರತ, ರನ್ನನ ಗಧಾಯುದ್ಧ, ಜನ್ನನ ಯಶೋಧರ ಚರಿತೆ, ರತ್ನಾಕರನ ಭರತೇಶ ವೈಭವ ಈ ಎಲ್ಲಾ ಕೃತಿಗಳು ಮತ್ತು ಕೃತಿಕಾರ ದಾರ್ಶನಿಕ ಒಳನೋಟಗಳು ನಮಗೆ ದಕ್ಕಿದವು. ಈ ಕೃತಿಯ ಬರೆವಣಿಗಾಗಿ ಅವರು ಒಟ್ಟು 114 ಕೃತಿಗಳನ್ನು ಅವಲೋಕಿಸಿದ್ದಾರೆ. ಅವರ ಅಧ್ಯನಯದ ಶ್ರದ್ಧೆ ಮತ್ತು ತಲ್ಲೀನತೆ ಎಂತಹದ್ದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.
ಕಳೆದ ಡಿಸಂಬರ್ ನಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ ಕೃತಿಯನ್ನ ನಲವತ್ತು ದಿನಗಳ ಕಾಲ ನಿಧಾನವಾಗಿ ಓದಿ ಜೀರ್ಣಿಸಿಕೊಂಡೆ. ಇಲ್ಲಿನ ಪ್ರಾಚೀನ ಕೃತಿಕಾರರ ಕುರಿತಾಗಿ ನರಹಳ್ಳಿಯವರು ಅಪರೂಪದ ಒಳನೋಟಗಳನ್ನು ನೀಡುತ್ತಾ, ಕನ್ನಡ ವಿಮರ್ಶಾ ಲೋಕದ ತಜ್ಞರು ನೀಡಿರುವ ವ್ಯಾಖ್ಯಾನವನ್ನು ಸಹ ಪ್ರಸ್ತಾಪಿಸಿದ್ದಾರೆ. ಕುವೆಂಪು, ಜಿ.ಎಸ್.ಎಸ್, ಜಿ.ಹೆಚ್.ನಾಯಕ, ಕುರ್ತುಕೋಟಿ, ಅಮೂರ್, ಡಿ.ಆರ್. ನಾಗರಾಜ ಹೀಗೆ ಹಲವರ ಚಂತನೆಗಳು ಸಹ ಈ ಕೃತಿಯಲ್ಲಿ ನಮಗೆ ದೊರೆಯುತ್ತವೆ. ವಚನಕಾರರ ಬಗ್ಗೆ ಬರೆಯುವಾಗ, ಪ.ಗು.ಹಳಖಟ್ಟಿ, ಎಲ್.ಬಸವರಾಜು ಮುಂತಾದವರ ಚಿಂತನೆಯೂ ಸಹ ಒಳಗೊಂಡಿದೆ. ಕುವೆಂಪು ಕುರಿತಾದ ಡಾ.ನರಹಳ್ಳಿ ಅವರ ಚಿಂತನೆಗಳಿಂದ ಪ್ರಭಾವಿತನಾದ ನಾನು ಅವರ ಕೃತಿಗಳ ಶ್ರದ್ಧಾವಂತ ಓದುಗರಲ್ಲಿ ನಾನೂ ಒಬ್ಬ. ಈ ಕೃತಿಗಾಗಿ ಅವರು ಅಧ್ಯಯನ ಮಾಡಿದ 114 ಕೃತಿಗಳ ವಿವರ ನೀಡಿದ್ದಾರೆ. ಅಷ್ಟು ಸಾಕು. ಅವರ ಬದ್ಧತೆ ಮತ್ತು ಶ್ರದ್ಧೆ ನಮಗೆ ಅರಿವಾಗುತ್ತದೆ.
ಕನ್ನಡ ಸಾಹಿತ್ಯ ಪರಂಪರೆಯ ಕುರಿತಾಗಿ ತಮ್ಮ ಪ್ರಸ್ತಾವನೆಯಲ್ಲಿ ಲೇಖಕರು ನವ್ಯಕಾಲದ ನಂಬಿಕೆಯನ್ನು ಪ್ರಸ್ತಾಪಿಸಿದ್ದಾರೆ. ಹೌದು 1970 ರ ದಶಕದಲ್ಲಿ ನವ್ಯರು ಪ್ರಾಚೀನ ಸಾಹಿತ್ಯದ ಓದಿನ ಅವಶ್ಯಕತೆ ಇಲ್ಲ ಎಂದು ನಂಬಿದ್ದರು. ಆದರೆ, ನರಹಳ್ಳಿಯವರು ಬರೆದಿರುವ ‘’ ವಾಗ್ವಾದ ಪರಂಪರೆಯ ವಾರಸುದಾರರು ನಾವು’’ ಎಂಬ ಅಧ್ಯಾಯವು ಏಕಕಾಲಕ್ಕೆ ನಮಗೆ ಲೇಖಕರ ಚಿಂತನೆಯೊಂದಿಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುತ್ತದೆ. ಸಾಹಿತ್ಯ ಪರಂಪರೆ ಏಕೆ ಮುಖ್ಯ ಎಂಬುದಕ್ಕೆ ಮುದ್ದಣ್ಣನ ಮುದ್ದಣ್ಣ ಮನೋರಮೆಯ ಪ್ರಸಂಗದ ಬರೆಯುತ್ತಾ, ಆತನ ಕಾಲಘಟ್ಟದಲ್ಲಿ ಬದುಕಿದ್ದ ಸೇಡಿಯಾಪು ಕೃಷ್ಣಭಟ್ಟರು, ಪಂಜೆ ಮಂಗೇಶರಾಯರು, ಗೋವಿಂದ ಪೈ, ಗುಲ್ವಾಡಿ ವೆಂಖಟರಾಯರು, ಮುಂತಾದ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಚೇತನಗಳನ್ನು ಸ್ಮರಿಸುವುದರ ಮೂಲಕ ಅವರ ಕೃತಿಗಳ ಕುರಿತಾಗಿ ಸ್ಮರಿಸಿದ್ದಾರೆ.
ಈ ಕೃತಿಯಲ್ಲಿ ಶಿವಕೋಟ್ಯಾಚಾರ್ಯನ ವಡ್ಡರಾಧನೆ ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯದ ಬರೆಯುವಾಗ ನರಹಳ್ಳಿ ಬಾಲಸುಹ್ಮಣ್ಯ ಅವರು ನಮಗೆ ಅನೇಕ ಒಳನೋಟಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಇತಿಹಾಸದ ವಿವಿಧ ಮಗ್ಗುಲುಗಳನ್ನು ನಮಗೆ ಪರಿಚಯಿಸಿದ್ದಾರೆ. ಹದಿನೈದನೇ ಶತಮಾನದಲ್ಲಿ ರಾಘವಾಂಕನು ತನ್ನ ಸೋದರ ಮಾವ ಹರಿಹರನಿಂಗಿಂತ ಭಿನ್ನ ಪ್ರಕಾರದಲ್ಲಿ ಕಾವ್ಯ ಸೃಷ್ಟಿಗೆ ತೊಡಗಿಕೊಂಡ ಪರಿಯನ್ನು ದಾಖಲಿಸುವುದರ ಜೊತೆಗೆ ಹರಿಶ್ಚಂದ್ರ ಕಾವ್ಯದ ಬರೆಯುತ್ತಾ ಲೇಖಕರು
‘’ ಹರಿಶ್ಚಂದ್ರಕಾವ್ಯ ಅನೇಕ ದೃಷ್ಟಿಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ವೀರೇಶ ಚರಿತೆಯಂತೆ ಇದು ಪುರಾಣದ ಅವತಾರ ಕಲ್ಪಿತ ಕಥೆಯಲ್ಲ, ಸೋಮನಾಥ ಚರಿತೆಯಂತೆ ವೀರ ಮಾಹೇಶ್ವರ ನಿಷ್ಟೆಯನ್ನು ಪ್ರದರ್ಶಿಸುವ ಕಥಾನಕವೂ ಅಲ್ಲ, ಸಿದ್ಧರಾಮ ಪುರಾಣದಂತೆ ಶಿವನ ಅಂಶಾವಾತಾರ ಭೂಲೋಕದಲ್ಲಿ ಶರಣನಾಗಿ ಜನಿಸಿ ಶೈವಧರ್ಮವನ್ನು ಪ್ರತಿಪಾದನೆ ಮಾಢಿದ ಕಥೆಯೂ ಅಲ್ಲ, ಯಾವ ಮತ ಮತ್ತು ಜಾತಿಗಳ ಹಂಗಿಲ್ಲದೆ ಸಾರ್ವಕಾಲಿಕ ಮೌಲ್ಯವೊಂದನ್ನು ಅಂದರೆ, ಸತ್ಯವನ್ನು ಪ್ರತಿಪಾದಿಸುವ ಕನ್ನಡದ ಮೊದಲ ಕೃತಿ ಸತ್ಯಹರಿಶ್ಚಂದ್ರ’’ ಎಂದು ಹೇಳುವುದರ ಮೂಲಕ ಅನ್ಯವಾದ ಒಳನೋಟವನ್ನು ಓದುಗರ ಮುಂದೆ ಇರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ ಎಂಬ ಈ ಕೃತಿಯು ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಅಧ್ಯಾಪಕರಿಗೆ ಕೈ ದೀವಿಗೆ ರೂಪದಲ್ಲಿದೆ. ಕನ್ನಡದ ಸಾಹಿತ್ಯ ಮತ್ತು ಕೃತಿಗಳನ್ನು ಪ್ರತಿ ದಶಕಕ್ಕೆ ಒಮ್ಮೆ ವಿಮರ್ಶೆಯ ಒರೆಗಲ್ಲಿಗೆ ಹಚ್ಚಬೇಕಿದೆ. ಅಂತಹ ಸನ್ನಿವೇಶದಲ್ಲಿ ಮಾತ್ರ ನಮಗೆ ಹೊಸ ಹೊಸ ದೃಷ್ಟಿಕೋನ ಲಭ್ಯವಾಗಬಲ್ಲದು. ಇಂದು ಕನ್ನಡದ ಕಾವ್ಯ ಲೋಕದಲ್ಲಿ ತೊಡಗಿಸಿಕೊಂಡಿರುವ ಎಷ್ಟು ಮಂದಿ ಡಾ.ಕೆಪ್ರಭುಶಂಕರ ಅವರ ‘’ ಭಾವಗೀತ’’ ಮತ್ತು ಡಾ.ಜಿ.ಎಸ್.ಶಿವರುದ್ರಪ್ಪನವರ ‘’ ಸೌಂಧರ್ಯ ಸಮೀಕ್ಷೆ’’ ಓದಿದ್ದಾರೆ ಎಂಬುದು ಗೊತ್ತಿಲ್ಲ. ಕುವೆಂಪು ಅವರ ಮಾರ್ಗದರ್ಶನದಲ್ಲಿ ಅವರ ಹೆಮ್ಮೆಯ ಶಿಷ್ಯರ ಪಿ,ಹೆಚ್.ಡಿ. ಪ್ರಬಂಧ ರೂಪದ ಕೃತಿಗಳು ಇವು. ಇಂದಿಗೂ ಸಹ ಕಾವ್ಯದ ಸೃಷ್ಟಿಗೆ ಮತ್ತು ಸೃಜನಶೀಲತೆಗೆ ಮಾರ್ಗದರ್ಶಕ ಕೃತಿಗಳಾಗಿವೆ. ಅಲ್ಲಮಪ್ರಭು ಹೇಳಿದ ಹಾಗೆ ‘’ ಹಿಂದಣ ಹೆಜ್ಜೆಯ ಕಂಡನಲ್ಲದೆ, ನಿಂದಣ ಹೆಜ್ಜೆಯನರಿಯಬಾರದು’’ ಎಂಬ ಮಾತಿನ ಹಿನ್ನಲೆಯಲ್ಲಿ ಡಾ. ನರಹಳ್ಳಿಯವರು ಕನ್ನಡಿಗರ ಮುಂದೆ ಇಂತಹ ಅಪರೂಪದ ಕೃತಿಯನ್ನು ಇರಿಸಿದ್ದಾರೆ.
ಧನ್ಯವಾದಗಳು ಸರ್. ಖಾಲಿಯಾಗಿದ್ದ ನಾನು ನಿಮ್ಮ ಚಿಂತನೆಗಳಿಂದ ಮತ್ತೊಮ್ಮೆ ಮೈದುಂಬುವಂತಾಯಿತು.
ಎನ್.ಜಗದೀಶ್ ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ