Saturday, 10 October 2015

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜಾಗತಿಕ ಮನ್ನಣೆ ದೊಕಿಸಿಕೊಟ್ಟ ಪತ್ರಕರ್ತ ; ವೆಬ್ ಮಿಲ್ಲರ್ತಾನು ನೋಡುವ ಜಗತ್ತು ಮತ್ತು ಗ್ರಹಿಸುವ ಒಳನೋಟಗಳ ಮೂಲಕ  ಒಬ್ಬ ಪತ್ರಕರ್ತ ಜಗತ್ತಿನ ಗ್ರಹಿಕೆಗಳನ್ನು  ಹೇಗೆ ಬದಲಿಸಬಲ್ಲ ಎಂಬುದಕ್ಕೆ  ಅಮೇರಿಕಾದ ಪತ್ರಕರ್ತ ವೆಬ್ ಮಿಲ್ಲರ್ ನ ಸಾಹಸದ ಬದುಕು ಇಂದಿಗೂ ನಮಗೆ ಮಾದರಿಯಾಗಿದೆ. 1930 ರಲ್ಲಿ ಭಾರತದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು “The Marchers Simply Walked  Forward Until Struck Down” ಎಂಬ ಒಂದು ವರದಿಯ ಮೂಲಕ ಭಾರತ ಸ್ವಾತಂತ್ರ್ಯ ಚಳುವಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ. ಇದಕ್ಕಿಂತ ಮುಖ್ಯವಾಗಿ ತಾನು ವಶಪಡಿಸಿಕೊಂಡ ವಸಹಾತು ದೇಶಗಳಲ್ಲಿ ಇಂಗ್ಲೇಂಡ್ ದೇಶವು ಅಲ್ಲಿನ ನಾಗರೀಕರ ಮೇಲೆ  ಹೇಗೆ ಕ್ರೌರ್ಯದಿಂದ ಮೆರೆಯುತ್ತಿದೆ ಎಂಬುದನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿ, ಅಪರಾಧ ಪ್ರಜ್ಞೆಯಿಂದ ತಲೆ ತಗ್ಗಿಸುವಂತೆ ಮಾಡಿದ.
ವೆಬ್ ಮಿಲ್ಲರ್ ಅಮೇರಿಕಾದ ಮಿಚಿಗನ್ ನಲ್ಲಿ 1891 ರಲ್ಲಿ ಜನಿಸಿದವನು. ವಿದ್ಯಾಭ್ಯಾಸ ನಂತರ ಬರಹಗಾರನಾಗಬೇಕೆಂಬ ಹಂಬಲದಿಂದ ಚಿಕಾಗೋ ನಗರದಕ್ಕೆ ಬಂದು ಸೌತ್ ಬೆಂಡ್ ಟ್ರಿಬ್ಯೂನ್ ಮತ್ತು ಸೌತ್ ಬೆಂಡ್ ಇಂಡಿಯಾನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಆನಂತರ ಮಿಚಿಗನ್ ಡೈಲಿ ಎಂಬ ಪ್ರಸಿದ್ಧ ದಿನಪತ್ರಿಕೆಗೆ ಯುದ್ಧ ಕುರಿತ ವರದಿಗಳಿಗಾಗಿ ವಿಶೇಷ ವರದಿನಾಗನಾಗಿ ನೇಮಕಗೊಂಡ. ಪ್ರಥಮ ವಿಶ್ವ ಮಹಾಯುದ್ಧ. ಸ್ಪೇನ್ ದೇಶದ ಆಂತರೀಕ ಯುದ್ಧ, ರಷ್ಯಾ-ಫಿನ್ಲೆಂಡ್ ಯುದ್ಧ ಮತ್ತು ಇಟಲಿಯು ಪಶ್ಚಿಮ ಆಫ್ರಿಕಾದ ಇಥಿಯೋಫಿಯಾವನ್ನು ವಶಪಡಿಸಿಕೊಂಡ ಯುದ್ಧದ ವರದಿಗಳನ್ನು ರೋಚಕವಾಗಿ ಬರೆದು ಅಮೇರಿಕಾ ಮಾತ್ರವಲ್ಲದೆ, ಜಗತ್ತಿನಾದ್ಯಂತ ಪ್ರಸಿದ್ಧ ಯುದ್ಧ ವರದಿಗಾರನಾಗಿ ಹೆಸರು ಮಾಡಿದವನು. 1922 ರಲ್ಲಿ ಪ್ರಾನ್ಸ್ ದೇಶದ ಪ್ರಸಿದ್ಧ ಸರಣಿ ಹಂತಕ ಹೆನ್ರಿ ಡಿಸೈರ್ ಎಂಬಾತನಿಗೆ ಅಲ್ಲಿನ ಸರ್ಕಾರ ಮರಣ ದಂಡನೆ ವಿಧಿಸಿದಾಗ, ಅಪರಾಧಿಯನ್ನು ಸಂದರ್ಶಿಸಿ, ಆತನ ಕೃತ್ಯಗಳ ಕುರಿತು ಸರಣಿ ಲೇಖನಗಳನ್ನು ಬರೆದ. ಈ ಸರಣಿ ಲೇಖನಗಳ ಮಾಲೆಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಸಹ ದೊರೆಯಿತು.

1930 ರಲ್ಲಿ ಭಾರತದ ಗುಜರಾತಿನ ಸೂರತ್ ಬಳಿಯ ದಂಡಿ ಎಂಬ ಕಡಲ ಕಿನಾರೆ ಬಳಿ ಗಾಂಧೀಜಿಯವರು ಹಮ್ಮಿಕೊಂಡಿದ್ದ ಉಪ್ಪಿನ ಸತ್ಯಾಗ್ರಹವನ್ನು ವರದಿ ಮಾಡಲು ವೆಬ್ ಮಿಲ್ಲರ್ ಭಾರತಕ್ಕೆ ಆಗಮಿಸಿದ. ದುರಾದೃಷ್ಟವಶಾತ್ ಅವನು ಭಾರತಕ್ಕೆ ಬರುವ ವೇಳೆಗೆ ಗಾಂಧೀಜಿಯವರು ಅಹಮದಾಬಾದಿನ ಸಬರ ಮತಿ ಆಶ್ರಮದಿಂದ 130 ಮೈಲುಗಳ ದಂಡಿಯಾತ್ರೆಯನ್ನು ಆರಂಭಿಸಿ, ದಂಡಿಯಲ್ಲಿ ಒಂದು ಹಿಡಿ ಉಪ್ಪನ್ನು ಎತ್ತಿ ಹಿಡಿಯುವುದರ ಮೂಲಕ ಬ್ರಿಟೀಷರಿಂದ ಬಂಧನಕ್ಕೆ ಒಳಗಾಗಿದ್ದರು. ಆದರೆ, ಅವರ ಅನುಯಾಯಿಗಳು ಸತ್ಯಾಗ್ರಹವನ್ನು ಮುಂದುವರಿಸಿದ್ದರು.
ಸರೋಜಿನಿ ನಾಯ್ಡು ನೇತೃತ್ವದಲ್ಲಿ ದರುಶನ ಎಂಬ ಪ್ರದೇಶದಲ್ಲಿ  ತಂಡೋಪ ತಂಡವಾಗಿ ಸತ್ಯಾಗ್ರಹಿಗಳು ಚಳುವಳಿಯಲ್ಲಿ ಪಾಲ್ಗೊಂಡು ಯಾವೊಂದು ಪ್ರತಿರೋಧ ಒಡ್ಡದೆ ಪೊಲೀಸರ ಲಾಠಿಯೆಟು ಹಾಗೂ ಬೂಟಿನೇಟು ತಿಂದು, ತಲೆ ಬುರುಡೆ ಒಡೆಸಿಕೊಂಡು ನೆಲಕ್ಕುರುಳವ ದೃಶ್ಯಗಳಿಗೆ ಸಾಕ್ಷಿಯಾದ ವೆಬ್ ಮಿಲ್ಲರ್ ಅಕ್ಷರಶಃ ನಡುಗಿ ಹೋದ. ಆತ ಅಲ್ಲಿಯವರೆಗೆ ಅಹಿಂಸೆ ಕುರಿತು ಮಾತ್ರ ಕೇಳಿ ತಿಳಿದಿದ್ದ ಆದರೆ, ಗಾಂಧೀಜಿಯವರು ಅಹಿಂಸೆಯನ್ನು  ಆಚರಣೆಗೆ ತಂದು, ಈ ರೀತಿಯಲ್ಲಿ ತಮ್ಮ ಅನುಯಾಯಿಯಗಳ ಪಡೆಯನ್ನು ಸಜ್ಜುಗೊಳಿಸಿದ್ದಾರೆ ಎಂದು ಅವನು ಊಹಿಸಿರಲಿಲ್ಲ. ಅಂದಿನ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಚಳುವಳಿ ಕುರಿತ ವರದಿಗಳ ಮೇಲೆ ವಿಶೇಷವಾಗಿ ಭಾರತದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು. ಆದರೆ, ವಿದೇಶಿ ಮಾಧ್ಯಮಗಳ ಮೇಲೆ ನಿರ್ಬಂಧ ಇರದಿದ್ದರೂ ವರದಿಗಳ ಮೇಲೆ ಕಣ್ಗಾವಲು ಇರಿಸಿತ್ತು. ಆದರೆ, ಇವೆಲ್ಲವನ್ನೂ ಮೀರಿ ವೆಬ್ ಮಿಲ್ಲರ್ ಚಿತ್ರಗಳ ಸಮೇತ ವರದಿಯನ್ನು  ಅಮೇರಿಕಾದ ತನ್ನ ಮಿಚಿಗನ್ ಡೈಲಿ ಪತ್ರಿಕೆಗೆ ಕಳಿಹಿಸುವಲ್ಲಿ ಯಶಸ್ವಿಯಾಗಿದ್ದ. ಈ ವಿಷಯವನ್ನು ತಿಳಿದ ಬ್ರಿಟೀಷ್ ಸರ್ಕಾರ ವರದಿಯನ್ನು ತಡೆಯಲು ಶತ ಪ್ರಯತ್ನ ಮಾಡಿತು. ಆದರೆ, ಪತ್ರಿಕೆಯು ತನಗೆ ಎದುರಾದ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಭಾರತದಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವನ್ನು ಪ್ರಕಟಿಸಿತು. ಆ ಕಾಲದಲ್ಲಿ ಈ ವರದಿಯನ್ನು ಜಗತ್ತಿನ 1350 ಪತ್ರಿಕೆಗಳು ಮರು ಮುದ್ರಣ ಮಾಡಿದವು. ಅಮೇರಿಕಾದ ನಾಗರೀಕರು ಈ ವರದಿಯನ್ನು ಎರಡು ಲಕ್ಷದ ಐವತ್ತು ಸಾವಿರ  ಕರಪತ್ರಗಳ ಮೂಲಕ  ಮುದ್ರಿಸಿ ಅಮೇರಿಕಾದ್ಯಂತ ಹಂಚಿದರು. ಪ್ರಪಥಮಬಾರಿಗೆ ಸೂರ್ಯ ಮುಳಗದ ಸಾಮ್ರಾಜ್ಯವೆಂಬ ಇಂಗ್ಲೇಂಡ್ ದೇಶವು ಜಗತ್ತಿನೆದುರು ತಲೆ ತಗ್ಗಿಸಿ ನಿಂತಿತು. ಗಾಂಧೀಜಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಜಗತ್ತಿನಾದ್ಯಂತ ವಿಶೇಷವಾದ ಅನುಕಂಪ ಮತ್ತು ಗೌರವ ಬೆಳೆಯಿತು.

1931 ರಲ್ಲಿ ಗಾಂಧೀಜಿಯವರು ದುಂಡು ಮೇಜಿನ ಸಭೆಗಾಗಿ ಲಂಡನ್ ನಗರಕ್ಕೆ ಹೋದಾಗ, ವೆಬ್ ಮಿಲ್ಲರ್ ನನ್ನು ಬೇಟಿಯಾದ ಸಂದರ್ಭದಲ್ಲಿ ಈ ವರದಿಯಿಂದ ಭಾರತಕ್ಕೆ ಆಗಿರುವ ಅನಕೂಲವನ್ನು ಸ್ವತಃ ಒಪ್ಪಿಕೊಂಡರು. ವೆಬ್ ಮಿಲ್ಲರ್ ಗೆ ಒಂದು ಅಬ್ಯಾಸವಿತ್ತು. ಜಗತ್ತಿನ ಯಾವುದೇ ನಾಯಕರನ್ನು ಬೇಟಿಯಾದಾಗ ತನ್ನ ಸಿಗರೇಟ್ ಪ್ಯಾಕಿನ ಮೇಲೆ ಅವರ ಹಸ್ತಾಕ್ಷರ ಪಡೆಯುತ್ತಿದ್ದ. ಜೊತೆಗೆ ಅವುಗಳನ್ನು ಸಂಗ್ರಹಿಸಿ ಇಡುತ್ತಿದ್ದ, ಇಟಲಿಯ ಮುಸಲೋನಿ, ರಷ್ಯಾದ ಸ್ಟಾಲಿನ್ , ಅಮೇರಿಕಾದ ರೂಸ್ ವೆಲ್ಟ್, ಜರ್ಮನಿಯ ಹಿಟ್ಲರ್ ಹೀಗೆ ಅನೇಕ ನಾಯಕರ ಸಹಿಗಳನ್ನು ಸಂಗ್ರಹಿಸಿದ್ದ. ಗಾಂಧೀಜಿಯವರನ್ನು ಬೇಟಿಯಾದ ಸಂದರ್ಭದಲ್ಲಿ ಸಿಗರೇಟ್ ಪ್ಯಾಕ್ ಮೇಲೆ ಸಹಿ ಮಾಡಲು ಕೋರಿದಾಗ, ಗಾಂಧೀಜಿಯವರು ವೆಬ್ ಮಿಲ್ಲರ್ ಗೆ ಒಂದು ಷರತ್ತನ್ನು ವಿಧಿಸಿದರು. “ ಇನ್ನು ಮುಂದೆ ನೀನು ಸಿಗರೇಟ್ ತ್ಯೆಜಿಸುವುದಾದರೆ ಮಾತ್ರ ನಾನು ಸಹಿ ಮಾಡುತ್ತೇನೆ” ಎನ್ನುತ್ತಾ, ನಗುತ್ತಲೇ ಆತನ ಪ್ರತಿಕ್ರಿಯೆಗೆ ಕಾಯದೆ ಹಸ್ತಾಕ್ಷರ ಹಾಕಿದರು. ಆಶ್ಚರ್ಯವೆಂದರೆ, ಆನಂತರ ವೆಬ್ ಮಿಲ್ಲರ್ ಸಿಗರೇಟ್ ಗೆ ವಿದಾಯ ಹೇಳಿದ್ದ. ಇಂತಹ ಅಪ್ರತಿಮ ಪತ್ರಕರ್ತ ತನ್ನ 49 ನೇ ವಯಸ್ಸಿನಲ್ಲಿ ಅಂದರೆ, 1940 ರಲ್ಲಿ ಲಂಡನ್ ನಗರದ ಸುರಂಗ ಮಾರ್ಗದಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ.

ಭಾರತದ ಸ್ವಾತಂತ್ರ್ಯ ಹೊರಾಟವನ್ನು ನಾವು ಕೇವಲ ಘಟನೆಗಳಾಗಿ ಗ್ರಹಿಸಿ, ಇತಿಹಾಸ ರಚಿಸಿರುವುದಕ್ಕೂ, ಪಾಶ್ಚಿಮಾತ್ಯ ವಿದ್ವಾಂಸರು ಅವುಗಳನ್ನು ಚಾರಿತ್ರಿಕ ಘಟನೆಗಳೆಂದು ಭಾವಿಸುವುದರ ಮೂಲಕ ವಿವಿಧ ಆಯಾಮಗಳಿಂದ ಪರಿಶೀಲಿಸಿ ಗ್ರಹಿಸುವುದಕ್ಕೂ ಏನೆಲ್ಲಾ ವೆತ್ಯಾಸಗಳಿವೆ ಎಂಬುದಕ್ಕೆ ವೆಬ್ ಮಿಲ್ಲರ್ ಉಪ್ಪಿನ ಸತ್ಯಾಗ್ರಹ ಕುರಿತ ಒಂದು ವರದಿ ( The Marchers Simply Walked Forward Until Struck Down)   ಹಾಗೂ ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಪ್ರೊ. ಥಾಮಸ್ ವೆಬರ್ ರವರ     “ On The salt March Historigraphy Of Gandhi March to Dandi” ಕೃತಿಯನ್ನು ನಾವು ಓದಬೇಕು.

No comments:

Post a Comment