ನಮ್ಮ
ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ
ಜೊತೆಗೂಡಿ ನಿರ್ಮಿಸಿರುವ ರೈತರ , ವಿಶೇಷವಾಗಿ ರೈತರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು,
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಯಾರಿಸಿರುವ ಸುಮಾರು 29 ನಿಮಿಷಗಳ ಸಾಕ್ಷ್ಯ
ಚಿತ್ರ “ ಧರೆ ಹೊತ್ತಿ ಉರಿದೊಡೆ” ನಮ್ಮೆಲ್ಲರ ಕಣ್ಣು ತೆರೆಸುವಂತಿದೆ.
ಈ
ತಲೆ ಮಾರಿನ ಪತ್ರಕರ್ತರಿಗೆ ವಾಸುಕಿಯವರು ಅಪರಿಚಿತರಾಗಿ ಉಳಿದಿದ್ದಾರೆ. ಆದರೆ ಅವರು ಕಳೆದ ಮೂರು
ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದುಕೊಂಡು, ಸುಮಾರು ಎರಡು ದಶಕಗಳ ಕಾಲ ಏಷ್ಯಾ ನ್ಯೂಸ್ ಇಂಟರ್
ನ್ಯಾಷನಲ್ ಎಂಬ ಜಗತ್ ಪ್ರಸಿದ್ಧ ರಾಯಿಟರ್ ಸುದ್ಧಿ ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಅಂಗ ಸಂಸ್ಥೆಯಾದ ದ ಏಷ್ಯಾ
ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಕಾರ್ಯ
ನಿರ್ವಹಿಸಿದವರು. (ಇದೀಗ ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಯ ಕರ್ನಾಟಕದ ಪ್ರತಿನಿಧಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದಾರೆ.) ಹೀಗೆ ಅಂತರಾಷ್ರೀಯ ಮಟ್ಟದ ದೃಶ್ಯ ಮಾಧ್ಯಮದಲ್ಲಿ ಸೇವೆ
ಸಲ್ಲಿಸಿರುವ ವಾಸುಕಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿರುವ ಮಾಯಾ ಜಗದೀಪ್ ಇಬ್ಬರೂ ತಮ್ಮ
ಅನುಭವ, ಮತ್ತು ನೆಲದ ಸಂಸ್ಕೃತಿಯ ಕುರಿತು ತಮಗಿರುವ ಅಪಾರ ಕಾಳಜಿ ಪ್ರೀತಿ ಮತ್ತು ಬದ್ಧತೆಯನ್ನು ಈ ಸಾಕ್ಷ್ಯ
ಚಿತ್ರದ ಮೂಲಕ ಸಾಭೀತು ಪಡಿಸಿದ್ದಾರೆ. ಸಾಕ್ಷ್ಯ ಚಿತ್ರಕ್ಕೆ ನೀಡಿರುವ “ ಧರೆ ಹೊತ್ತಿ ಉರಿದೊಡೆ”
ಎಂಬ ವಚನದ ಸಾಲೊಂದರ ಶೀರ್ಷಿಕೆ ಹಾಗೂ ಸಂದರ್ಭಾನುಸಾರವಾಗಿ ಬಳಕೆಯಾಗಿರುವ ಇತರೆ ವಚನಗಳು,
ಕುವೆಂಪು ಗೀತೆ, ಕುಮಾರವ್ಯಾಸ ಕಾವ್ಯ ಹೀಗೆ ತಮ್ಮ ಕನ್ನಡದ ಮೇಲಿನ ಪ್ರೀತಿಯನ್ನು ರೈತರ
ಸಮಸ್ಯೆಯನ್ನು ಕಟ್ಟಿಕೊಡುವಾಗ ಪರಿಣಾಮಕಾರಿಯಾಗಿ ಬಳಸಿದ್ದಾರೆ.
ವಾಸುಕಿ
ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ್ ಮಾಧ್ಯಮದ ಪತ್ರಕರ್ತರಾಗಿ ಇವೊತ್ತಿಗೂ ನನ್ನ ತಲೆ ಮಾರಿಗೆ
ಮಾದರಿಯಾದವರು. ಭಾರತದ ಪತ್ರಿಕೋದ್ಯಮದಲ್ಲಿ ಗ್ರಾಮೀಣ ಭಾರತದ ಬವಣೆಗಳಿಗೆ ಅವಕಾಶ ಕಲ್ಪಿಸಿಕೊಟ್ಟು
ಅದನ್ನು ಜಾಗತಿಕ ಸಮಸ್ಯೆಯಾಗಿ ಪರಿಗಣಿಸುವಂತೆ, ತಮ್ಮ ನಿರಂತರ ಅಧ್ಯಯನ ಮತ್ತು ಲೇಖನಗಳ ಮೂಲಕ
ಪರೋಕ್ಷ ಒತ್ತಡ ಹೇರಿದ ಪಿ. ಸಾಯಿನಾಥ್ ರವರ ಜೊತೆ ನಿರಂತರ ಒಡನಾಡಿರುವ ಕೆ.ಜಿ. ವಾಸುಕಿಯವರಯ
ಕರ್ನಾಟಕ ರೈತರ ಸಮಸ್ಯೆಗಳ ಕುರಿತಂತೆ ಅವರ ಜೊತೆಯಲ್ಲಿ
ಕರ್ನಾಟಕವನ್ನು ಸುತ್ತಿದವರು. ಹಾಗಾಗಿ ಈ ಸಾಕ್ಷ್ಯ ಚಿತ್ರದಲ್ಲಿ ನಿಖರವಾದ ಅಧ್ಯಯನ, ಆಳವಾದ
ಸಂಶೋಧನೆ ಮತ್ತು ಸಮಸ್ಯೆಯನ್ನು ನಿಖರವಾಗಿ ಗುರುತಿಸುವ ಬೌದ್ಧಿಕ ಶಕ್ತಿ ಎಲ್ಲವೂ ಎದ್ದು
ಕಾಣುತ್ತವೆ.
ನನಗಿನ್ನೂ
ನೆನಪಿದೆ. 2002 ರ ಶ್ರಾವಣ ಮಾಸದ ಸಮಯ. ಎಸ್.
ಎಂ. ಕೃಷ್ಣ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದರು. ಹುಬ್ಬಳ್ಳಿಯ ಉದಯ ಟಿ.ವಿ.ಯ ಪ್ರಾದೇಶಿಕ ಕಛೇರಿಯ
ಮುಖ್ಯಸ್ಥನಾಗಿ ವರ್ಗವಾಗಿ ಬಂದಿದ್ದೆ. ನನ್ನ
ಕುಟುಂಬ ಮಂಡ್ಯ ನಗರದಲ್ಲಿ ವಾಸವಾಗಿತ್ತು. ಪ್ರತಿ ಹದಿನೈದು ದಿನ ಅಥವಾ ತಿಂಗಳಿಗೆ ಎರಡು ದಿನ ರಜೆ ಹಾಕಿ ಮಂಡ್ಯಕ್ಕೆ
ಹೋಗುತ್ತಿದ್ದೆ. ಒಂದು ದಿನ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಈ ಟಿ.ವಿ.ಯ ವರದಿಗಾರರಾಗಿದ್ದ ಇಳೆಕಾನ್
ಶ್ರೀಕಂಠ ಎಂಬ ಹಿರಿಯ ಪತ್ರಕರ್ತರ ಜೊತೆ ಕಾಫಿ ಕುಡಿಯುತ್ತಾ ಹರಿಪ್ರಿಯ ಹೋಟೆಲ್ ನಲ್ಲಿ ಕುಳಿತಿದ್ದೆ. ಅದು ಸುಮಾರು
ಬೆಳಗಿನ ಒಂಬತ್ತು ಗಂಟೆಯ ಸಮಯ. ಆ ದಿನ ಮದ್ದೂರು ಪಟ್ಟಣದ ಸುಮಾರು ಮೂರು ಮೈಲಿ ದೂರವಿರುವ
ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತ ಆತ್ಮ ಹತ್ಯೆ ಮಾಡಿಕೊಂಡಿದ್ದ.
ವಾಸುಕಿಯವರಿಂದ ಶ್ರೀಕಂಠ ರವರಿಗೆ ಪೋನ್ ಬಂತು. ನಾನು ಮಂಡ್ಯಕ್ಕೆ ಬಂದಿರುವುದಾಗಿ ಶ್ರೀಕಂಠ
ವಾಸುಕಿಗೆ ತಿಳಿಸಿದರು. ನನ್ನ ಜೊತೆ ಮಾತನಾಡಿದ ಅವರು ಸಾಯಿನಾಥ್ ಬೆಂಗಳೂರಿನಲ್ಲಿದ್ದಾರೆ.
ನಾವಿಬ್ಬರೂ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರೈತನ ಅಂತ್ಯ ಕ್ರಿಯೆಗೆ ಬರುವುದಾಗಿ ತಿಳಿಸಿದರು.
ನಾನು
ಮತ್ತು ಕೂಡಲೇ ವರಗೇರಳ್ಳಿಯ ರೈತ ಮುಖಂಡನಾಗಿದ್ದ ವಿ.ಅಶೋಕ್ ಗೆ ವಿಷಯ ತಿಳಿಸಿ ಅವರು ಬರುವವರೆಗೂ
ಅಂತ್ಯಕ್ರಿಯೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದೆವು. ಆ ದಿನ ಜಿಟಿ.ಜಿಟಿ ಮಳೆ. ವಾಸುಕಿ ಮತ್ತು
ಸಾಯಿನಾಥ್ ಮದ್ದೂರು ತಲುಪುವುದು ಮೂರು ಗಂಟೆಯಾಯಿತು. ಆದರೆ. ಮಧ್ಯಾಹ್ನ ಎರಡು ಗಂಟೆಯವರೆಗೆ
ಕಾದಿದ್ದ ಊರಿನ ಜನತೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ದೇಹವನ್ನು ಒಣಗಿದ ಕಟ್ಟಿಗೆಗಳ
ನಡುವೆ ಇಟ್ಟು. ಮಳೆಯ ಕಾರಣ ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ವರಗೇರಹಳ್ಳಿ
ಗ್ರಾಮಕ್ಕೆ ಬರುವದರೊಳಗೆ ಚಿತೆ ಹೊತ್ತಿ ಉರಿದು ಬೂದಿಯಾಗಿತ್ತು. ನಂತರ ವಾಸುಕಿ, ಸಾಯಿನಾಥ್
ಇಬ್ಬರೂ ಮೃತ ರೈತನ ಮನೆಗೆ ತೆರಳಿ, ವಿಧವೆ ಪತ್ನಿಯ ಚಿತ್ರ ತೆಗೆದುಕೊಂಡು, ರೈತನ ಜಮೀನಿನ ವಿವರ,
ಮಾಡಿದ್ದ ಸಾಲದ ವಿವರ ಇವುಗಳನ್ನು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡು ವಾಪಸ್ ಬೆಂಗಳೂರಿಗೆ
ತೆರಳಿದರು.
ಈ
ಘಟನೆ ನಡೆದ ಎರಡು ವರ್ಷಗಳ ನಂತರ ಒಮ್ಮೆ ಸಾಯಿನಾಥ್ ರವರು ಬೆಂಗಳೂರಿನಿಂದ ಮೈಸೂರಿಗೆ
ತೆರಳುತ್ತಿರುವಾಗ ಮದ್ದೂರಿನ ಎಳನೀರು ಮಾರುಕಟ್ಟೆಯ ಬಳಿ ಎಳನೀರು ಕುಡಿಯಲು ನಿಂತಾಗ ಅವರಿಗೆ ವರಗೇರಳ್ಳಿ
ಗ್ರಾಮ ನೆನಪಾಗಿ ಮತ್ತೇ ಮೃತ ರೈತನ ಮನೆಗೆ ಬೇಟಿ ಕೊಟ್ಟರು. ಆದಿನ ಮೃತ ರೈತನ ಪತ್ನಿ ಮನೆಗೆ ಬೀಗ
ಹಾಕಿ ಊರಾಚೆಗಿನ ಬಯಲಿನಲ್ಲಿ ಇದ್ದ ಹಸುವೊಂದನ್ನು ಮೇಯಿಸುತ್ತಾ ಕುಳಿತಿದ್ದಳು. ಕಾರಿನ ಚಾಲಕನ
ನೆರವಿನಿಂದ ಆಕೆಯನ್ನು ಬೇಟಿಮಾಡಿ ಸ್ಥಿತಿಗತಿ
ವಿಚಾರಿಸಿಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣ ಬಂದಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ
ಸಿಗುತ್ತಿದ್ದ ತಿಂಗಳಿಗೆ ಒಂದು ಕೇಜಿ ಸಕ್ಕರೆ, ಮೂರು ಕೆ,ಜಿ, ಗೋಧಿ ಮತ್ತು ಐದು ಕೆ.ಜಿ. ಅಕ್ಕಿ
ಆಕೆಗೆ ಆಸರೆಯಾಗಿದ್ದವು. ಈ ಕುರಿತು ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಸುಧೀರ್ಘ ಲೇಖನ ಬರೆದ
ಪಿ.ಸಾಯಿನಾಥ್ ರವರು, ಮೃತ ರೈತನ ಪತ್ನಿಗೆ ಸರ್ಕಾರ ನಿಗದಿ ಪಡಿಸಿರುವ ದಿನ ನಿತ್ಯದ ಪಡಿತರ ಅಂದರೆ,
ದಿನಕ್ಕೆ 33 ಗ್ರಾಂ ಸಕ್ಕರೆ, 67 ಗ್ರಾಂ ಗೋಧಿ, 167 ಗ್ರಾಂ ಅಕ್ಕಿಯ ಜೊತೆ ಜೈಲುಗಳಲ್ಲಿ ಕೊಲೆ
ಸುಲಿಗೆ ಮಾಡಿರುವ ಖೈದಿಗಳಿಗೆ ನಿಗದಿ ಪಡಿಸಿರುವ ಪಡಿತರ ದಿನವೊಂದಕ್ಕೆ 60 ಗ್ರಾಂ ಬೇಳೆ, 80
ಗ್ರಾಂ ತರಕಾರಿ, 200 ಗ್ರಾಂ ಅನ್ನ, ವಾರಕ್ಕೆ 120 ಗ್ರಾಂ ಮಾಂಸ, ಮತ್ತು ಒಂದು ಮೊಟ್ಟೆ ಹಾಗೂ
ತಲೆಗೆ 10 ಗ್ರಾಂ ಎಣ್ಣೆ ಈ ಸವಲತ್ತುಗಳ ಜೊತೆಗೆ ಹೋಲಿಕೆ ಮಾಡಿ ಅನ್ನದಾತನ ಪತ್ನಿ ಹೇಗೆ
ನಿರ್ಗತಿಕಳಾಗಿ ಬದುಕುತ್ತಿದ್ದಾಳೆ ಎಂಬುದನ್ನು ನಾವು ಈವರೆಗೆ ಗ್ರಹಿಸಲಾಗದ ಸತ್ಯ ಸಂಗತಿಗಳೊಂದಿಗೆ
ದಾಖಲಿಸಿದ್ದರು.
ರೈತರ
ಜ್ವಲಂತ ಸಮಸ್ಯೆಗಳ ಕುರಿತು ಇಂತಹ ಆಳವಾದ
ಒಳನೋಟಗಳನ್ನು ಸಾಯಿನಾಥ್ ಮೂಲಕ ದಕ್ಕಿಸಿಕೊಂಡಿರುವ ಪತ್ರಕರ್ತ ವಾಸುಕಿಯವರು ಸಾಕ್ಷ್ಯ
ಚಿತ್ರದಲ್ಲಿ ಸಮಸ್ಯೆಯ ಮೂಲಕ್ಕೆ ಕೈ ಹಾಕಿದ್ದಾರೆ. ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೆ,
ಅದರ ಪ್ರತಿಫಲವನ್ನು ಮಾರುಕಟ್ಟೆಯ ದಲ್ಲಾಳಿಗಳು ಮತ್ತು ವರ್ತಕರು ನುಂಗಿ ನೀರು ಕುಡಿಯುತ್ತಿರುವುದನ್ನು
ಸಮರ್ಥವಾಗಿ ದಾಖಲಿಸಿದ್ದಾರೆ. ಇದಕ್ಕಾಗಿ ಬಾಗಲಕೋಟೆಯ ಮಹಾಲಿಂಗ ಪುರದ ಬೆಲ್ಲದ ಮಾರುಕಟ್ಟೆ,
ಮದ್ದೂರಿನ ಎಳನೀರಿನ ಮಾರುಕಟ್ಟೆ, ರಾಮನಗರದ ರೇಷ್ಮೆ ಮಾರುಕಟ್ಟೆ ಇಲ್ಲಿಗೆ ಬೇಟಿ ನೀಡಿ ಎಲ್ಲಾ
ಬಗೆಯ ರೈತರ ಬವಣೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ರೈತರ ಆತ್ಮಹತ್ಯೆ ಕುರಿತಂತೆ ಮನರೋಗ
ತಜ್ಞರು, ಬೆಲೆ ಏರಿಳಿತ ಕುರಿತಂತೆ ಮಾರುಕಟ್ಟೆಯ ತಜ್ಞರ ಸಂದರ್ಶನ ನಡೆಸಿದ್ದಾರೆ. ರೈತರ
ಫಲವತ್ತಾದ ಭೂಮಿ ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿರುವ
ಸನ್ನಿವೇಶವನ್ನು ಇಲ್ಲಿ ಪ್ರಸ್ತಾಪಿಸಿರುವುದು ಈ ಸಾಕ್ಷ್ಯ ಚಿತ್ರದ ವಿಶೇಷ.
ರೈತರ
ಸಮಸ್ಯೆಗೆ ಹೆಗಲಿಗೆ ಕೇವಲ ಹಸಿರು ಟವಲ್
ಹಾಕಿಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಲದು ಇಡೀ ವ್ಯವಸ್ಥೆ ಎಲ್ಲಿ ಎಡವಿದೆ
ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗಿರುವ ಈ
ಸಾಕ್ಷ್ಯ ಚಿತ್ರವನ್ನು ನಾವೆಲ್ಲರೂ ನೋಡಲೇ ಬೇಕಿದೆ. ಇಂತಹ ಒಂದು ಅಪರೂಪದ ಸಾಕ್ಷ್ಯ ಚಿತ್ರ
ನಿರ್ಮಾಣ ಮಾಡಿರುವ ವಾಸುಕಿ ಮತ್ತು ಮಾಯಾ ಅವರಿಗೆ
ರೈತರ ಪರವಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳು.
ಇದೇ ಅಕ್ಟೋಬರ್ 30 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ
ಸ್ಪೀಕರ್ ಶ್ರೀ ಕಾಗೂಡು ತಿಮ್ಮಪ್ಪನವರಿಂದ ಈ ಸಾಕ್ಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಆಸಕ್ತರು
ಸಾಕ್ಷ್ಯ ಚಿತ್ರದ ಮಾಹಿತಿಗಾಗಿ ಕೆ.ಜಿ.ವಾಸುಕಿ. ಮೊಬೈಲ್. ನಂ.9845032321 ಮತ್ತು ಮಾಯಾಜಗದಿಪ್
-94484900006 ಇವರನ್ನು ಸಂಪರ್ಕಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ