Tuesday, 19 November 2013

ವಸುಧೇಂದ್ರರ ಕಥೆಗಳು ಮತ್ತು ವಿಮರ್ಶೆಯ ವಿದೂಷಕತನಗಳುಈ ದಿನ ಬೆಳಿಗ್ಗೆ ನನ್ನ ಫೇಸ್ ಬುಕ್ ಗೆ ಬಂದ  ಕಿರಿಯ ಮಿತ್ರ ವಸುದೇಂಧ್ರ ಅವರ ಕತೆಗಳ ಕುರಿತ ವಿಚಾರ ಗೋಷ್ಟಿಯ ವರದಿ ಮತ್ತು ಆ ವರದಿಗೆ ಬಂದ ಕೆಲವು ಪ್ರತಿಕ್ರಿಯೆಗಳನ್ನು ಗಮನಿಸಿದೆ. ಓದಿದಾಗ  ಮನಸ್ಸಿಗೆ ಕಸಿವಿಸಿಯಾದರೂ ಏನನ್ನೂ ಪ್ರತಿಕ್ರಿಯಿಸಬಾರದೆಂದು ನಿರ್ಧಾರ ಮಾಡಿದ್ದೆ. ಕಛೇರಿಯಿಂದ ಸಂಜೆ ಮನೆಗೆ ಬಂದಾಗ ನನ್ನ ಸಂದೇಶದ ಪೆಟ್ಟಿಗೆಗೆ ಮೂರು ಸಂದೇಶಗಳು ಗೆಳೆಯರಿಂದ ಬಂದು ಕೂತಿದ್ದವು. ವಸುದೇಂಧ್ರರ ಕಥೆಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕೆಂದು ಅನೇಕ ಗೆಳೆಯರು ಒತ್ತಾಯಿಸಿದ್ದರು. ಅವರ ಕಾಳಜಿಯಲ್ಲಿ  ಅರ್ಥವಿದೆ ಎಂದು ನಾನು ಭಾವಿಸಿದ್ದೇನೆ.
ನಾನು ಮೂಲತಃ ಕನ್ನಡದ ವಿದ್ಯಾರ್ಥಿಯಲ್ಲದಿದ್ದರೂ, ಈ ನಾಡು ಗುರುತಿಸುವಷ್ಟು ಲೇಖಕನಲ್ಲದಿದ್ದರೂ ಸಹ, ಈ ನಾಡಿನಲ್ಲಿ ಯಾರಿಗೂ ಕಡಿಮೆಯಿಲ್ಲದಷ್ಟು ಓದಿಕೊಂಡಿರುವ ಒಬ್ಬ ಪ್ರಬುದ್ಧ ಓದುಗ  ಎಂದು ಎದೆ ತಟ್ಟಿಕೊಂಡು ಹೇಳಬಲ್ಲೆ.
ನನ್ನಕಿರಿಯ ಮಿತ್ರ , ಹಾಗೂ ನಾನು ಪ್ರೀತಿಯಿಂದ ಏಕ ವಚನದಲ್ಲಿ ವಸು ಎಂದು ಕರೆಯುವ ವಸುದೇಂಧ್ರ ತನ್ನದಲ್ಲದ ತಪ್ಪಿಗೆ ಈಗ ಎರಡನೇಯ ಬಾರಿಗೆ ವಿನಾಃಕಾರಣ ಚರ್ಚೆಗೆ ಗುರಿಯಾಗಿದ್ದಾನೆ. ಸುಮಾರು ಮೂರು ವರ್ಷಗಳ ಹಿಂದೆ ಹಿರಿಯ ವಿಮರ್ಶಕರೆಂದು ಗುರುತಿಸಲ್ಪಟ್ಟಿರುವ ಮಿತ್ರರಾದ ಟಿ.ಪಿ. ಅಶೋಕ್, ವಸುದೇಂದ್ರನ ಕತೆಗಳ ಬಗ್ಗೆ ವಿಮರ್ಶಿಸುತ್ತಾ, ಮಾಸ್ತಿಗೆ ಹೋಲಿಸಿದ್ದರು. ಈ ಕುರಿತು ತೀವ್ರ ಆಕ್ಷೇಪಣೆ ವ್ಯಕ್ತ ಪಡಿಸಿದ್ದ ನನ್ನ ಇನ್ನೊಬ್ಬ ಮಿತ್ರ ಎಸ್. ಆರ್. ವಿಜಯ ಶಂಕರ್ ಈ ಕುರಿತು ದೇಶಕಾಲದಲ್ಲಿ ಒಂದು ಲೇಖನ ಬರೆದು ಇದೊಂದು ಅವಸರದ ತೀರ್ಪು ಎಂದು ಪ್ರತಿಕ್ರಿಯಿಸಿದ್ದರು ಎಂದು ನೆನಪು. ಇದೆಲ್ಲಾ ನಡೆಯುವಾಗ 1998 ರಿಂದ 2010 ರವರೆಗೆ ನಾನು ಸುಮಾರು ಹನ್ನೆರೆಡು ವರ್ಷಗಳ ಕಾಲ ಈ ತಲೆಮಾರಿನ ಯಾವೊಬ್ಬ ಕತೆಗಾರರ ಕತೆಗಳನ್ನು ಓದಿರಲಿಲ್ಲ.  ನನ್ನ ಓದನ್ನು ನನ್ನ ತಲೆಮಾರಿನ ಕೆ.ಸತ್ಯನಾರಾಯಣ, ಜಯಂತಕಾಯ್ಕಿಣಿ, ವಿವೇಕ ಶ್ಯಾನುಭೋಗ್, ಕೇಶವರೆಡ್ಡಿ ಹಂದ್ರಾಳ, ಕುಂ,ವಿ, ಇವರಿಗೆ ಸೀಮಿತಗೊಳಿಸಿಕೊಂಡಿದ್ದೆ. ಈ ನಡುವೆ ಹುಬ್ಬಳ್ಳಿ ಸಹೋದರಿ, ಸುನಂದಾ ಕಡಮೆಯವರ ಕತೆಗಳು, ಮತ್ತು ರಾಮನಗರದ ಬಳಿ ಈಗ ಬಡಾವಣೆಯಾಗಿ ವಿಲೀನಗೊಂಡಿರುವ ಐಜೂರು ಎಂಬ ಪುಟ್ಟ ಗ್ರಾಮದ ಚಂದ್ರಶೇಖರ್ ಐಜೂರು ಎಂಬ ಯುವಕ ಸುಮಾರು ನಾಲ್ಕು ವರ್ಷದ ಹಿಂದೆ ತನ್ನೂರಿನ ಅವಸಾನದ ಕಥೆಗಳನ್ನು “ ನನ್ನ ಹಳ್ಳಿಯ ಚಿತ್ರಗಳು” ಎಂಬ ಪ್ರಬಂಧಗಳ ಮೂಲಕ ದಾಖಲಿಸಿದ್ದನ್ನು ನೋಡಿ ನಿಜಕ್ಕೂ ನಾನು ತಲ್ಲಣಿಸಿಹೋದೆ. ನನ್ನ ವೈಯಕ್ತಿಕ ಬದುಕಿನ ಬವಣೆಗಳ ನಡುವೆ ಎಲ್ಲೋ ಒಂದು ಕಡೆ ಈ ತಲೆಮಾರನ್ನು ಹಾಗೂ ಅವರ ಬರಹಗಳನ್ನು  ನಾನು ಕಡೆಗಣಿಸುತ್ತಿದ್ದೇನೆ ಎಂಬ ಪ್ರಾಪ ಪ್ರಜ್ಙೆ ಕಾಡತೊಡಗಿತು.

ಧಾರವಾಡದ ನವಕರ್ನಾಟಕ ಪುಸ್ತಕದ ಅಂಗಡಿಗೆ ಹೋಗಿ ಕಳೆದೊಂದು ದಶಕದಲ್ಲಿ ನಿರಂತರ ಕತೆ ಬರೆದು ಕತ್ತಿ ಝಳಪಿಸಿತ್ತಿದ್ದವರ  ತಲಾ ಒಂದೊಂದು ಕಥಾ ಸಂಕಲಗಳಂತೆ ಒಟ್ಟು 22 ಕಥಾ ಸಂಕಲನಗಳನ್ನು ಹೊತ್ತು ಮನೆಗೆ ತಂದೆ. ಅವುಗಳನ್ನು ಓದಿದಾಗ ಮನಸ್ಸಿನಲ್ಲಿ ಉಳಿದ್ದದ್ದು ಕೇವಲ ನಾಲ್ಕು ಕಥಾ ಸಂಕಲನಗಳು. ಒಂದು ವಸುಧೇಂದ್ರನ “ ಹಂಪಿ ಎಕ್ಸ್ ಪ್ರಸ್”  ಎರಡು-ಲೋಕೇಶ್ ಅಗಸನಕಟ್ಟೆಯ “ ಹಟ್ಟಿಯೆಂಬ ಭೂಮಿಯ ತುಣುಕು” ಮತ್ತು ಮೂರನೆಯದು-ಸಂದೀಪ್ ನಾಯಕರ “ ಗೋಡೆಗೆ ಬರೆದ ನವಿಲು, ಹಾಗೂ ನಾಲ್ಕು- ಎಲ್.ಸಿ. ಸುಮಿತ್ರಾ ಅವರ “ ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ”  ಇವುಗಳನ್ನು ಹೊರತು ಪಡಿಸಿ, ಇತ್ತೀಚೆಗೆ ಓದಿದ ಕಥೆಗಳೆಂದರೇ, ಮಹಾಂತೇಶ್ ನವಕಲ್ ಅವರ ಕತೆಗಳು ಮಾತ್ರ. (ಈ ಕುರಿತು. ನನ್ನ ಅನಿಸಿಕೆಯನ್ನು ಕೃತಿಗಳನ್ನು ಓದಿದಾಕ್ಷಣ, ವಸುಧೇಂದ್ರ, ಚಂದ್ರಶೇಖರ್ ಐಜೂರ್, ಸಂಧೀಪ್ ನಾಯಕ ಜೊತೆ ಖಾಸಾಗಿಯಾಗಿ ಹಂಚಿಕೊಂಡಿದ್ದೇನೆ.)


ಮೊದಲ ಓದಿನಲ್ಲಿ ನನ್ನನ್ನು ಗಾಡವಾಗಿ ಕಾಡಿದ ಕತೆಗಾರ ಎಂದರೆ, ವಸುದೇಂದ್ರ. ಈ ಕಾರಣಕ್ಕಾಗಿ ಮತ್ತೇ ಅಂಗಡಿಗೆ ಹೋಗಿ ವಸುವಿನ ಎಲ್ಲಾ ಕೃತಿಗಳನ್ನು ಕೊಂಡು ತಂದು ಆಸಕ್ತಿಯಿಂದ ಓದಿದೆ. ನಮ್ಮಮ್ಮ ಅಂದ್ರೆ ನಂಗಿಷ್ಟ. ಪ್ರಬಂಧಗಳಲ್ಲಿ  ಕಾಣುವ ಲೇಖಕನ ಮುಗ್ದ ಮನಸ್ಸು, ನಿರ್ಮಲ ಪ್ರೀತಿ, ಹಾಗೂ ಹಂಪಿ ಎಕ್ಸ್ ಪ್ರಸ್ ಕತೆಗಳಲ್ಲಿ, ಎಲ್ಲಿಯೂ ಕಥೆಗಾರನ ವೈಯಕ್ತಿಕ ಹಿತಾಸಕ್ತಿಗಗಳು ಅಥವಾ ತೀಟೆ ತೆವಲುಗಳು ಮಧ್ಯ ಪ್ರವೇಶವಾಗದೆ, ಪಾತ್ರಗಳು ಮತ್ತು ಸನ್ನಿವೇಶಗಳು ತನ್ನಷ್ಟಕ್ಕೆ ತಾನೇ  ಸೃಷ್ಟಿಯಾಗಿರುವ ವೈಖರಿ ನಿಜಕ್ಕೂ ನನ್ನಲ್ಲಿ ವಸು ಬಗ್ಗೆ ಬೆರಗು ಮೂಡಿಸಿದವು. ವಸುದೇಂಧ್ರನಲ್ಲಿ  ತಾನು ಹುಟ್ಟಿ ಬೆಳೆದ ಸೊಂಡೂರು ಮತ್ತು ಬಳ್ಳಾರಿಯ ಚಿತ್ರಗಳನ್ನು ಕಥಾನಕಗಳ ಮೂಲಕ ಕಟ್ಟಿಕೊಡುವಾಗ ಕಾಣುವ ಪ್ರಭುದ್ದ ಕತೆಗಾರ, ನಗರ ಕೇಂದ್ರಿತ ವಸ್ತುಗಳುಳ್ಳ ಕಥೆಗಳಲ್ಲಿ ಕಾಣುವುದಿಲ್ಲ. ಆದರೆ, ತಾನು ಕಂಡುಂಡ ವರ್ತಮಾನದ ಬದುಕನ್ನು ರಾಗದ್ವೇಶವಿಲ್ಲದ, ನಿರ್ಲಿಪ್ತ ಮನಸ್ಸಿನಿಂದ ಕಟ್ಟಿಕೊಡುವ ವಸುಧೇಂದ್ರ ಸಮಕಾಲೀನ ಕಥೆಗಾರರಿಗಿಂತ ಭಿನ್ನವಾಗುತ್ತಾರೆ.
ಕತೆಗಾರ ವಸುಧೆಂದ್ರನ ಬರೆವಣಿಗೆಯ ಈ ವಿಶಿಷ್ಟ ಶೈಲಿ ಅಥವಾ ಕಸುಬನ್ನು ತುರ್ತಾಗಿ ಹಠಕ್ಕೆ ಬಿದ್ದವರಂತೆ  ಮಾಸ್ತಿಗೆ ಅಥವಾ ತೇಜಸ್ವಿಗೆ ಹೋಲಿಸಿ ಮಾತನಾಡುವುದು ವಿಮರ್ಶೆಯಾಗಲಾರದು. ಅದು ವಿಮರ್ಶೆಯ ವಿದೂಷಕತನವಾಗುತ್ತದೆ. ಇಂತಹ ಮಾತುಗಳು ಬೆಳೆಯುವ ಕಥೆಗಾರನನ್ನು ದಾರಿ ತಪ್ಪಿಸುವ ಹುನ್ನಾರ ಎಂದು ನಾನು ಭಾವಿಸುತ್ತೇನೆ. ವಿಭಿನ್ನ ನೆಲೆಯ ತೇಜಸ್ವಿ ಮತ್ತು ವಸುಧೇಂಧ್ರನ ನಡುವೆ ಕಥೆಗಳಲ್ಲಿ ಸ್ವಾಮ್ಯ ಇರುವುದು ಕತೆಗಳಲ್ಲಿ ಅಲ್ಲ, ಪಾತ್ರಗಳ ಸೃಷ್ಟಿಯಲ್ಲಿ ಇರುವ ಬೋಳೆತನ. ಇವರಿಬ್ಬರ ಪಾತ್ರಗಳು ಯಾವುದೇ ಮುಲಾಜಿಲ್ಲದೆ ತಾವಾಡುವ ಮಾತ್ರಗಳನ್ನು ಸಹಜವಾಗಿ ಹೊರಹಾಕುತ್ತವೆ. ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಮಂದಣ್ಣ ಅವಳನ್ನು ಏಕೆ ಮದುವೆಯಾದ ಎಂಬುದರ ಬಗ್ಗೆ ಅವನ ಗೆಳೆಯ ಲಕ್ಷ್ಮಣ ವರ್ಣಿಸುವ “ ಗಡಿಗೆ ಗಾತ್ರದ ಮೊಲೆಗಳನ್ನು  ನೋಡಿ ಮದುವೆಯಾದ ಸಾರ್” ಎಂದು ಕರ್ವಾಲೋಗೆ ಹೇಳುವ ಮಾತುಗಳಾಗಲಿ, ವಸುದೇಂಧ್ರನ “ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ 22 ಬಾರಿ ಜಾಗಟೆ ಭಾರಿಸಿದ ಪುರೋಹಿತ ಎಷ್ಟು ಬಾರಿ ಬಾರಿಸಿದೆ ಹೇಳು ಎಂದು ನಾಯಕಿಯನ್ನು ವಧು ಪರೀಕ್ಷೆಯಲ್ಲಿ ಕೇಳಿದಾಗ, “ ನೀನು ಹೂಸಿದ್ದು ಸೇರಿ ಒಟ್ಟು 23 “ ಎಂದು ಹೇಳುವ ನಾಯಕಿ ಇಂತಹ ಚಿತ್ರಣಗಳು ಓದುಗರನ್ನು ಆಪ್ತವಾಗಿಸುತ್ತವೆ.

ಒಬ್ಬ ಕತೆಗಾರ, ಅಥವಾ ಕಾದಂಬರಿಗಾರ, ಓದುಗರು ಮತ್ತು ವಿಮರ್ಶಕರನ್ನು ಮೀರಿ ಪರೀಕ್ಷೆಗೆ ಒಳಗಾಗಬೇಕಿರುವುದು ಕಾಲನ ತಕ್ಕಡಿಯಲ್ಲಿ ಮಾತ್ರ. ಯಾವೊಬ್ಬ ವಿಮರ್ಶಕ ಒಬ್ಬ ಲೇಖಕನನ್ನು ಸೃಷ್ಟಿಸಲಾರ, ಬದಲಾಗಿ ಕೇವಲ ಪರಿಚಯಿಸಬಲ್ಲ ಅಷ್ಟೇ, ಕನ್ನಡದ ಸಾಹಿತ್ಯದ ಲೋಕದಲ್ಲಿ ತನಗೆ ಬೇಕಾದ ಬರಹಗಾರರ ಬೆನ್ನು ಕೆರೆಯುವ ಪ್ರವೃತ್ತಿ ಇಂದಿ ನಿನ್ನೆಯದಲ್ಲ, ಇದು, ನವೋದಯ ಕಾಲದಲ್ಲಿ ಅರಂಭಗೊಂಡು,ನವ್ಯದ ಕಾಲದಲ್ಲಿ ಉತ್ತುಂಗಕ್ಕೇರಿತು.  ( ಬೇಂದ್ರೆ ಭಜನೆಯ ನೆಪದಲ್ಲಿ ಕುವೆಂಪು ಅವರನ್ನು ಒಂದೇ ಸಮನೆ  ಜೀವನ ಪೂರ್ತಿ ಟೀಕಿಸಿದ ಕುರ್ತು ಕೋಟಿ ಎಂಬ ಮಹಾಶಯನ ವಿಮರ್ಶೆಯ ಬರಹಗಳನ್ನು ಗಮನಿಸಿದರೆ, ಭಟ್ಟಂಗಿತನ ಏನೂ ಎಂಬುದು ಅರ್ಥವಾಗುತ್ತದೆ.)  ಹಾಗೆ ನೋಡಿದರೆ, ವಸ್ತು ನಿಷ್ಟ ವಿಮರ್ಶೆ ನಮಗೆ ಕನ್ನಡದಲ್ಲಿ ಗೋಚರವಾಗುವುದು, ಜಿ,ಹೆಚ್, ನಾಯಕ, ಹೆಚ್. ಎಸ್, ರಾಘವೇಂದ್ರರಾವ್, ನರಹಳ್ಳಿ ಬಾಲಸುಬ್ರಮಣ್ಯಂ, ಲಂಕೇಶ್ ಮತ್ತು ಡಿ.ಅರ್ ನಾಗರಾಜ್ ಮುಂತಾದವರ ಬರಹಗಳಲ್ಲಿ ಮಾತ್ರ. ಇನ್ನುಳಿದ ಬಹುತೇಕ ಮಂದಿ ತಮ್ಮ ಇಡೀ ಜೀವಿತವನ್ನು ತಮಗೆ ಬೇಕಾದ ಲೇಖಕರ ಭಜನೆಯಲ್ಲಿ ಸೆವೆಸಿದ್ದಾರೆ. ಇಲ್ಲಿ ಯಾರೋ ಒಬ್ಬರು ವಸುಧೇಂದ್ರನನ್ನು ಹೊಗಳಿ ಅಟ್ಟಕ್ಕೆರಿಸಿದರು ಎಂದು ನೊಂದುಕೊಳ್ಳುವುದು, ಅಥವಾ ವಸುಧೆಂದ್ರನನ್ನು ಟೀಕಿಸಿದರು ಎಂದು ವಿನಾಃ ಕಾರಣ ಫೆಸ್ ಬುಕ್ ನಲ್ಲಿ ಸಮರ್ಥಿಸಿಕೊಳ್ಳುವುದರಿಂದ ಒಬ್ಬ ಲೇಖಕನ ಸ್ಥಾನ ಮಾನ ನಿರ್ಧಾರವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಫೇಸ್ ಬುಕ್, ಬ್ಲಾಗ್ ಇತ್ಯಾದಿಗಳು ಹದಿ ಹರೆಯದವರ ಹಸ್ತ ಮೈಥುನದಂತೆ ಬರೆವಣಿಗೆಯ ಹಸ್ತ ಮೈಥುನದ ಒಂದು ಕ್ರಿಯೆ  ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
( ಕೊನೆಯ ಮಾತು- ಇದು ಕನ್ನಡ ಕಥೆಗಳ ವಿಮರ್ಶೆಯಲ್ಲ, ನಾನು ಓದಿದ ಈ ತಲೆಮಾರಿನ ಬರಹಗಾರರ ಬಗೆಗಿನ ನನ್ನ ವೈಯಕ್ತಿಕ ಅನಿಸಿಕೆ ಮಾತ್ರ.)


No comments:

Post a Comment