ಶುಕ್ರವಾರ, ಜೂನ್ 26, 2026

ಮಹಾತ್ಮನ ಭಾರತ ಮತ್ತು ಇಂದಿನ ಮೋದಿಯ ಭಾರತ

 


ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಇಬ್ಬರು ಉದ್ಯಮಿಗಳು ಮಹಾತ್ಮನ ಬೆಂಗಲಿಗರಾಗಿ, ಸೇವಕರಾಗಿ ಜೀವನ ಪೂರ್ತಿ ನಿಂತದ್ದನ್ನು ಗಮನಿಸಿದರೆ ಆಶ್ಚರ್ಯ ವಾಗುತ್ತದೆ.
ವ್ಯಾಪಾರ ಮತ್ತು ಉದ್ದಿಮೆಗಳ ಜೊತೆ ಲಾಭವನ್ನು ಗುರಿಯಾಗಿಸಿಕೊಂಡ ಈ ವ್ಯಕ್ತಿಗಳ ಮೇಲೆ ಪರಿಣಾಮ ಬೀರಿದ ಮಹಾತ್ಮನ ಪ್ರಭಾವ ಎಂತಹದ್ದು ಎಂಬುದನ್ನು ಕೊಲ್ಕತ್ತಾ ನಗರದ ಜಿ.ಡಿ. ಬಿರ್ಲಾ ಮತ್ತು ವಾರ್ಧಾ ಮೂಲದ ಜಮ್ನಾಲಾಲ್ ಬಜಾಜ್ ಅವರ ಸೇವೆಯನ್ನು ನಾವು ಗಮನಿಸಬೇಕು.
ಗುಡಿ ಕೈಗಾರಿಕೆಗಳ ತರಬೇತಿ ಕೇಂದ್ರ ಮತ್ತು ಗ್ರಾಮ ಭಾರತದ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಲು ಸೇವಾ ಗ್ರಾಮ ಸ್ಥಾಪಿಸಲು ಮಧ್ಯಭಾರತದ ನಾಗಪುರದಿಂದ ಅರವತ್ತು ಕಿಲೊಮೇಟರ್ ದೂರದ ವಾರ್ಧಾನಗರವನ್ನು ಗಾಂಧೀಜಿಯವರು ಆಯ್ಕೆ ಮಾಡಿಕೊಂಡಾಗ, ಅವರು ಕೇಳಿದಷ್ಟು ಭೂಮಿ, ಹಣ, ಮತ್ತು ಮೂಲಭೂತ ಸೌಕರ್ಯವನ್ನು ಜಮ್ನಾಲಾಲ್ ಬಜಾಜ್ ಒದಗಿಸಿಕೊಟ್ಟರು.
ಆರಂಭದಲ್ಲಿ ವಾರ್ಧಾ ನಗರದಲ್ಲಿ ಗುಡಿಕೈಗಾರಿಕೆಗಳ ತರಬೇತಿ ಕೇಂದ್ರವು ಜೆ.ಸಿ.ಕುಮಾರಪ್ಪನವರ ನೇತೃತ್ವದಲ್ಲಿ ಆರಂಭವಾಯಿತು. ನಂತರ ವಾರ್ಧಾದಿಂದ ಎಂಟು ಕಿಲೊಮೀಟರ್ ದೂರದ ಹಳ್ಳಿಯಲ್ಲಿ ಸೇವಾಗ್ರಾಮ ಮತ್ತು ನಯಾ ತಾಲೀಮ್ ಹೆಸರಿನಲ್ಲಿ ನೂತನ ಶಿಕ್ಷಣ ಶಾಲೆ ಆರಂಭವಾದವು.
ಇಂದು ದೊಡ್ಡ ನಗರ ಹಾಗೂ ಜಿಲ್ಲಾ ಕೇಂದ್ರವಾಗಿ ಬೆಳೆದಿರುವ ವಾರ್ಧಾ ನಗರದಲ್ಲಿ ರಾಷ್ಟ್ರೀಯ ಹೈನುಗಾರಿಕೆ ಕೇಂದ್ರ,ಮತ್ತು ದೆಹಲಿಯ ಐ.ಐ.ಟಿ. ಸಂಸ್ಥೆಯ ಒಡೆತನದಲ್ಲಿ ಇರುವ ಸಣ್ಣ ಮತ್ತು ಗುಡಿ ಕೈಗಾರಿಕೆಯ ಕೇಂದ್ರದ ವಿಸ್ತೀರ್ಣ ಸುಮಾರು ಅರವತ್ತು ಎಕರೆಗೂ ಮಿಗಿಲಾಗಿದೆ. ಇವೆಲ್ಲವೂ ಗಾಂಧಿ ಸ್ಥಾಪುಸಿದ ಸಂಸ್ಥೆಗಳು.
ಅದೇ ರೀತಿ ಸೇವಾಗ್ರಾಮಕ್ಕೆ ಹೋಗುವಾಗ, ಮಹಾತ್ಮಗಾಂಧಿ ಆಸ್ಪತ್ರೆ, ಕಸ್ತೂರಬಾ ನರ್ಸಿಂಗ್ ಕಾಲೇಜ್ ಮತ್ತು ಹಾಸ್ಟಲ್ ಪ್ರದೇಶ ಮುವತ್ತು ಎಕರೆಗಿಂತ ದೊಡ್ಡದಾಗಿದೆ. ಸೇವಾಗ್ರಾಮ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ನಯಾ ತಾಲೀಮ್ ಶಿಕ್ಣಣ ಹತ್ತು ಎಕರೆ ಒಳಗೊಂಡಿದೆ. ಇವೆಲ್ಲವನ್ನು ಉಚಿತವಾಗಿ ನೀಡಿದ ಜಮ್ನಾಲಾಲ್ ಬಜಾಜ್ ಅವರ ನಿವಾಸದ ಬಳಿ ಹೋಗಿ ಅವರ ಭಾವಚಿತ್ರಕ್ಕೆ ತಲೆ ಬಾಗಿ ನಮಿಸಿ ಬಂದಿದ್ದೆ.( ಟೋಪಿ ಧರಿಸಿರುವವರು) ಇವರ ಕುರಿತು ನನ್ನ ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ಸವಿವರವಾಗಿ ಒಂದು ಅಧ್ಯಾಯವನ್ನು ಬರೆದಿದ್ದೀನಿ.

ಕೊಲ್ಕತ್ತಾ ಮೂಲದ ಜಿ.ಡಿ. ಬಿರ್ಲಾರವರು ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಕಾಂಗ್ರೇಸ್ ಸಮಿತಿಗೆ ಆರ್ಥಿಕವಾಗಿ ಆಧಾರ ಸ್ಥಂಭವಾಗಿದ್ದರು ಕಾಂಗ್ರೇಸ್ ಅಧಿವೇಶನದ ವೆಚ್ಚವನ್ನು ಭರಿಸುತ್ತಿದ್ದರು.. ಶಾಂತಿ ನಿಕೇತನದಲ್ಲಿ ವಿಶ್ವ ವಿದ್ಯಾನಿಲಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ರವೀಂದ್ರನಾಥ್ ಟ್ಯಾಗೂರ್, ಒಮ್ಮೆ ಆರ್ಥಿಕವಾಗಿ ಕಷ್ಟದಲ್ಲಿದ್ದರು.
ಗಾಂಧೀಜಿಯವರು ಟ್ಯಾಗೋರ್ ಗೆ ಐದು ಸಾವಿರ ನೆರವು ನೀಡಿ ಎಂದು ಹೇಳಿದಾಕ್ಷಣ, ಜಿ.ಡಿ. ಬಿರ್ಲಾರವರು, ಟ್ಯಾಗೂರ್ ಅವರಿಗೆ ನಲವತ್ತೈದು ಸಾವಿರ ಹಣವನ್ನು ನೀಡಿ, ಇದನ್ನು ಮಹಾತ್ಮರು ಸಾರ್ವಜನಿಕವಾಗಿ ಸಂಗ್ರಹಿಸಿ, ನನ್ನ ಮುಖಾಂತರ ನಿಮಗೆ ಕಳಿಸಿಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು.
ನೌಖಾಲಿ ಪ್ರದೇಶದ ಕೋಮು ಗಲಭೆ ನಿಯಂತ್ರಿಸಲು ಗಾಂಧೀಜಿಯವರು ನಾಲ್ಕು ತಿಂಗಳ ಕಾಲ ಅಲ್ಲಿ ಪಾದಯಾತ್ರೆ ಮಾಡಿದಾಗ, ಗಾಂಧಿ ಮತ್ತು ಸಂಗಡಿಗರಿಗೆ ಪ್ರತಿ ಹಳ್ಳಿಗಳಲ್ಲಿ ನೆಲೆಸಲು ತಾತ್ಕಾಲಿಕ ಗುಡಾರಗಳು, ಆಹಾರದ ವ್ಯವಸ್ಥೆ ಮತ್ತು ಗಾಂಧೀಜಿಯವರಿಗೆ ಕಿತ್ತಲೆ, ದ್ರಾಕ್ಷಿ, ಹಾಲು, ಮೊಸರು , ಸರಬರಾಜು ಮಾಡುವುದರ ಜೊತೆಗೆ ಸಾಮಾನುಗಳನ್ನು ಹಳ್ಳಿಯಿಂದ ಹಳ್ಳಿಗೆ ಸಾಗಿಸಲು ಸೇವಕರ ವ್ಯವಸ್ಥೆ ಮಾಡಿದ್ದರು.
ಗಲಭೆಯಲ್ಲಿ ನೊಂದವರ ಕುಟುಂಬಕ್ಕೆ ನೆರವಾಗುವ ದೃಷ್ಡಿಯಿಂದ ಗಾಂಧೀಜಿಯವರು ನಿಧಿಯೊಂದನ್ನು ಸ್ಥಾಪಿಸಿದಾಗ, ತಮ್ಮ ಉದ್ದಿಮೆಗಳ ಎಲ್ಲಾ ನೌಕರರಿಂದ ಹಣವನ್ನು ಸಂಗ್ರಹಿಸಿ, ಎರಡೂವರೆ ಸಾವಿರ ಹಣವನ್ನು ನಿಧಿಗೆ ನೀಡಿದ್ದರು.
ಕೊಲ್ಕತ್ತ ನಗರದಲ್ಲಿ ತಾವು ವಾಸಿಸುತ್ತಿದ್ದ ಅರಮನೆಯಂತಹ ಬೃಹತ್ ಬಂಗಲೆಯನ್ನು ಸ್ವಾತಂತ್ರ್ಯಾನಂತರ, ಕೇಂದ್ರ ಸರ್ಕಾರಕ್ಕೆ ದಾನ ಮಾಡಿ, ಈ ಮನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮ್ಯೂಸಿಯಂ ಮಾಡಲು ನೆರವಾದರು.
ಇಂತಹ ಮಹನೀಯರು ಗಾಂಧಿ ಮಹಾತ್ಮನ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಸೇವೆ ಕೂಡ ದೇಶ ಸೇವೆ ಎಂದು ನಂಬಿಕೊಂಡಿದ್ದರು.

ಈಗ ಮೋದಿ ಮಹಾತ್ನನ ಪ್ರಭಾವದಿಂದ ಅದಾನಿ ಮತ್ತು ಅಂಬಾನಿ ಇಬ್ಬರೂ ದೇಶದ ತೈಲ ಉದ್ದಿಮೆ, ಕಲ್ಲಿದ್ದಲು ಘಟಕಗಳು ಒಳಗೊಂಡಂತೆ, ಇಡೀ ಭಾರತದ ಬಂದರು, ವಿಮಾನ ನಿಲ್ದಣಗಳನ್ನು ತಮ್ಮ ವಶಕ್ಕೆ ಪಡೆದು ದೇಶ ಸೇವೆ ಮಾಡುತ್ತಿದ್ದಾರೆ. ಈಗ ಸಧ್ಯಕ್ಕೆ ಉಳಿದಿರುವುದು ದೆಹಲಿಯ ರಾಷ್ಟ್ರಪತಿ ಭವನ ಮತ್ತು ಹಳೆಯ ಪಾರ್ಲಿಮೆಂಟ್ ಭವನಗಳು ಮಾತ್ರ.
ಇವೆರೆಡೂ ಕಟ್ಟಡಗಳು ಮೋದಿ‌ ಮಹಾತ್ಮನ ಕೃಪೆಯಿಂದ ಅದಾನಿ ಅಥವಾ ಅಂಭಾನಿ ಒಡೆತನದಲ್ಲಿ ಪಂಚತಾರಾ ಹೋಟೆಲ್ ಗಳಾಗುವ ದಿನಗಳು ದೂರವಿಲ್ಲ.
ಕೊನೆಯ ಚಿತ್ರ, ಈಗ ಮ್ಯೂಸಿಯಂ ಆಗಿರುವ ಬಿರ್ಲಾ ನಿವಾಸ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ