ಭಾನುವಾರ, ಸೆಪ್ಟೆಂಬರ್ 6, 2026

ಅಕ್ಷರ ಕಲಿಸಿದ ದಲಿತ ಗುರು ಮಾದಪ್ಪ ನವರ ನೆನಪುಗಳು.

 


ಅದು 1962 ನೇ ಇಸವಿ. ನನ್ನೂರಿನ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಯಾರದೋ ಹಳೆಯ ನಾಡಹೆಂಚಿನ ಬೃಹತ್ತಾದ ಮನೆಯಲ್ಲಿ ಪಾಠ ನಡೆಯುತ್ತಿತ್ತು.
ನನ್ನೂರು ಪಕ್ಕದ ಆಬಲವಾಡಿ ಗ್ರಾಮದಲ್ಲಿ ದಲಿತ ಸಮುದಾಯದ ಮಾದಿಗರ ಎಂಟತ್ತು ಕುಟುಂಬಗಳು ಊರಾಚೆ ಕೆರೆ ಬದಿಯಲ್ಲಿ ವಾಸಿಸುತ್ತಿದ್ದವು. ಅಂತಹ ಕುಟುಂಬದಲ್ಲಿ ಮಾದಪ್ಪನವರು ಜನಿಸಿ ಎಲ್.ಎಸ್. ಎಂದು ಕರೆಯಲಾಗುತ್ತಿದ್ದ ಏಳನೆಯ ತರಗತಿ ಓದಿ ಶಿಕ್ಷಕರಾಗಿದ್ದರು.
ಬ್ರಾಹ್ಮಣ ಶ್ರೀಮಂತ ಕುಟುಂಬದ ಗೋವಿಂದಪ್ಪನವರು ನೀಡಿದ್ದ ಆ ಹಳೆಯ ಹೆಂಚಿನ ಮನೆಯ ಕಿಟಿಕಿಗಳಿಗೆ ಮತ್ತು ಬಾಗಿಲುಗಳಿಗೆ ಕದಗಳಿರಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಸಹಪಾಠಿಗಳು ಸದಾ ಕಿಟಿಕಿಯ ಮೂಲಕ ತರಗತಿಗೆ ಹಾಜರಾಗುತ್ತಿದ್ದೆವು. ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಾ ಕ್ಲಾಸ್ ಗಳು ವಿಶಾಲ ವಾಗಿದ್ದ ಹಾಲ್ ನಲ್ಲಿ ನಡೆಯುತ್ತಿದ್ದವು. ದಲಿತ ಹುಡುಗರನ್ನು ಬಾಗಿಲಿನಿಂದ ಹೊರಗಡೆ ಕೂರಿಸಲಾಗುತ್ತಿತ್ತು. ಅವರು ಜಗುಲಿಯ ಆವರಣದಲ್ಲಿ ಕುಳಿತು, ಬಾಗಿಲು ಮತ್ತು ಕಿಟಕಿಯ ಮೂಲಕ ಪಾಠ ಕೇಳುತ್ತಿದ್ದರು.
1961 ರಲ್ಲಿ ಶಾಲೆಗೆ ಸೇರಿದ್ದ ನನಗೆ 1962 ರಲ್ಲಿ ಮಾದಪ್ಪನವರು, ಬೋರ್ಡ್ ಮೇಲೆ ಅ, ಆ, ಇ. ಈ. ಅಕ್ಷರಗಳನ್ನು ಬರೆದು, ತಮ್ಮ ಕೈಯಲ್ಲಿ ಇದ್ದ ಕೋಲನ್ನು ಅಕ್ಷರಗಳ ಮೇಲೆ ಇಡುತ್ತಿದ್ದರು. ನಾವು ಅಕ್ಷರವನ್ನು ಗುರುತಿಸಿ ಹೇಳಬೇಕಾಗಿತ್ತು. ಸರಿಯಾಗಿ ಅಕ್ಷರ ಗುರುತಿಸಿದ ನನ್ನ ಮುಂದೆ ಮಾದಪ್ಪನವರು ಕೋಲನ್ನು ನೀಡಿ, ತುದಿ ಹಿಡಿದುಕೊಳ್ಳಲು ಹೇಳಿದರು ಅದನ್ನು. ಹಿಡಿದುಕೊಂಡಾಗ, ನನ್ನನ್ನ ಕರೆದುಕೊಂಡು ಹೋಗಿ ಎರಡನೇ ತರಗತಿ ಗುಂಪಿನಲ್ಲಿ ಕೂರಿಸಿದರು.
ಶಿಕ್ಷಕರಾಗಿದ್ದರೂ ಸಹ, ಮಾದಪ್ಪನವರು ಮೇಲ್ಜಾತಿಯ ಹುಡುಗರನ್ನು ಮುಟ್ಟಲು ಅಂಜುತ್ತಿದ್ದರು. ಇಂತಹ ಮಹಾನ್ ದಲಿತ ಗುರುವಿನಿಂದ ಅಕ್ಷರ ಕಲಿತ ನಾನು, ಬಾಲ್ಯದಿಂದಲೂ ದಲಿತರ ನೋವು, ಅಪಮಾನಗಳಿಗೆ ಸಾಕ್ಷಿಯಾದ ಕಾರಣದಿಂದ ಇಂದಿನವರೆಗೂ ಜಾತಿಯ ಎಲ್ಲೆಯನ್ನು ಮೀರಿ ಬದುಕಲು ಸಾಧ್ಯವಾಗಿದೆ. ಅಂತಹ ಶಿಕ್ಷಕರಿಂದ ಅ,ಆ. ಕಲಿತ ನನ್ನ ಬದುಕು ಸಾರ್ಥಕ ಎನಿಸಿದೆ.
2002 ರಲ್ಲಿ ಹುಬ್ಬಳ್ಳಿಯಿಂದ ಹಬ್ಬದ ನಿಮಿತ್ತ ಊರಿಗೆ ಬಂದಾಗ, ಬಸ್ ಇಳಿಯುತ್ತಿದ್ದಂತೆ, ಸಂತೆಮೈದಾನದ ಅರಳಿ ಕಟ್ಟೆಯ ಬಳಿ ಆಬಲವಾಡಿಗೆ ಹೋಗಲು ಕುಳಿತಿದ್ದ ಹಾಗೂ ವಯಸ್ಸಾಗಿದ್ದ ಮಾದಪ್ಪನವರನ್ನು ನೋಡಿ, ತಕ್ಷಣ ಅವರ ಬಳಿ ಹೋಗಿ ಕಾಲು ಮುಟ್ಟಿ ನಮಸ್ಕರಿಸಿದೆ. ಅವರಿಗೆ ಶಾಕ್ ಆಯಿತು. ಯಾರು ಸ್ವಾಮಿ ನೀವು? ಏಕೆ ನನ್ನ ಕಾಲಿಗೆ ಬೀಳುತ್ತಿದ್ದೀರಿ? ಎಂದರು.
ಅವರ ಕೈ ಹಿಡಿದು, ಪಕ್ಕದಲ್ಲಿದ್ದ‌ ನಂಜುಂಡನ ಟೀ ಅಂಗಡಿಗೆ ಕರೆದೊಯ್ದು, ಚಹಾ ಕುಡಿಸಿ, ಬಾಲ್ಯದಲ್ಲಿ ಅಕ್ಷರ ಕಲಿಸಿದ ಕಥೆ ಹೇಳಿದೆ. ಈಗ ಉದಯ ಟಿವಿಯಲ್ಲಿ ಉದ್ಯೋಗದಲ್ಲಿ ಇರುವುದಾಗಿ ತಿಳಿಸಿದೆ. ಮೇಷ್ಟ್ರು, ಎಷ್ಟೋಂದು ಭಾವುಕರಾದರೆಂದರೆ, ನನ್ನ ಕೈಗಳನ್ನು ಹಿಡಿದು, ತಮ್ಮ ಹಣೆಗೆ ಒತ್ತುಕೊಂಡು, ನನ್ನ ಜನ್ಮ ಸಾರ್ಥಕವಾಯ್ತು ಬುಡಪ್ಪಾ ಎಂದರು.
ಅವರೂರಿನ ಮಂದಿ ಮೇಸ್ಟೇ ಬಸ್ ಬಂತು ಬನ್ನಿ ಎಂದು ಕರೆಯಲು ಬಂದಾಗ, ಅವರೆಲ್ಲರಿಗೂ ಹೆಮ್ಮೆಯಿಂದ ನನ್ನನ್ನು ಪರಿಚಯಿಸಲು ಹೋದಾಗ, ಅವರ ಕಣ್ಣುಗಳು ಒದ್ದೆಯಾಗಿದ್ದವು. ಜಗಣ್ಣಾ, ನಮಗೆಲ್ಲಾ ಗೊತ್ತು, ನಿಮ್ಮ ಶಿಷ್ಯ ಎಂದು ಗೊತ್ತಿರಲಿಲ್ಲ ಎಂದು ಅವರೆಲ್ಲಾ ಹೇಳಿದಾಗ, ಮಾದಪ್ಪ ಮೇಷ್ಟ್ರ ಮುಖದ ಮೇಲೆ ಮೂಡಿದ ಹೆಮ್ಮೆಯ ಭಾವನೆ ನೋಡಿ, ಇಂತಹ ಗುರುವಿನ ಬಳಿ ಶಿಕ್ಷಣ ಕಲಿತದ್ದು ನನ್ನ ಜನ್ಮ ಸಾರ್ಥಕ ಎನಿಸಿತು.
ಶಿಕ್ಷಕರ ದಿನಾಚರಣೆಯ ಇಂದು ನನಗೆ ಅಕ್ಷರ ಧಾರೆಯೆರೆದ ಆ ಮಹಾನ್ ಗುರು ನೆನಪಾದರು.
ಚಿತ್ರಸೌಜನ್ಯ- ವಿಜಯ ಕರ್ನಾಟಕ

ಸೋನಿಯಾ ಗಾಂಧಿ ಎಂಬ ಹಿರಿಯ ಜೀವವೊಂದರ ಬದುಕಿನ ಒಳನೋಟಗಳು.



ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಚುಕ್ಕಾಣಿಯಾಗಿರುವ ಸೋನಿಯಾ ಗಾಂಧಿಯವರ ಮೊದಲ ಆತ್ಮಕಥೆ 2009 ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತ್ತು. ಇದೀಗ ಎಂಬತ್ತು ವರ್ಷ ಪೂರೈಸಿರುವ ಈ ಹಿರಿಯ ಜೀವ ತಮ್ಮ ಪೂರ್ಣಪ್ರಮಾಣದ ಆತ್ಮ ಚರಿತ್ರೆಯನ್ನು ಬರೆದಿದ್ದು, ಅಮೇರಿಕಾದ ಪ್ರಕಾಶನ ಸಂಸ್ಥೆಯೊಂದು ನವಂಬರ್ ಹತ್ತರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸೋನಿಯಾ ಅವರ ನೂತನ ಆತ್ಮಚರಿತ್ರೆ ಬಿಲಾಂಗಿಗ್ ಕೃತಿಯನ್ನು ಪ್ರಕಟಿಸಲು ಒಪ್ಪಿಕೊಂಡಿದ್ದ ಪೆಂಗ್ವಿನ್ ಇಂಡಿಯಾ ಸಂಸ್ಥೆ ಇದೀಗ ಹಲವು ನೆಪಗಳನ್ನು ಹೇಳುತ್ತಾ ಹಿಂದೇಟು ಹಾಕಿದೆ. ಸೋನಿಯಾ ಗಾಂಧಿಯವರು ತಮ್ಮ ಎರಡನೇ ಕೃತಿಯಲ್ಲಿ ದಾಖಲಿಸಿರುವ ರಾಜಕೀಯ ಚಿಂತನೆಗಳು ಮತ್ತು ಬಿ.ಜೆ.ಪಿ. ಸರ್ಕಾರಗಳ ವೈಫಲ್ಯ ಕುರಿತಾದ ದೃಷ್ಟಿಕೋನಗಳು ಪೆಂಗ್ವಿನ್ ಪ್ರಕಾಶನಕ್ಕೆ ತೊಡಕಾಗಿವೆ.

ಪೆಂಗ್ವಿನ್ ಅಥವಾ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು, ಯಾವುದೇ ಕೃತಿಯನ್ನು ಪ್ರಕಟಿಸುವ ಮುನ್ನ, ಲೇಖಕ ಅಥವಾ ಲೇಖಕಿ ಎಷ್ಟೇ ಪ್ರಸಿದ್ಧರಾಗಿದ್ದರೂ ಸಹ, ತಾವು ನೇಮಕ ಮಾಡಿಕೊಂಡಿರುವ ಸಂಪಾದಕರ ಮೂಲಕ ಕೃತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತವೆ. ಅಲ್ಲಿ, ಭಾಷೆ, ನಿರೂಪಣೆಯ ಶೈಲಿ ಮತ್ತು ಕೃತಿಯ ವಿಷಯಗಳು ಪರಿಷ್ಕರಣೆಗೆ ಕೃತಿಯ ಲೇಖಕರ ಸಹಮತದೊಂದಿಗೆ ಒಳಪಡುವುದು ಸಹಜ ಕ್ರಿಯೆ. ಕಳೆದ ಒಂದೂವರೆ ದಶಕದಿಂದ, ದೇಶದ ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ, ಬ್ಯಾಂಕಿಂಗ್, ಮತ್ತು ಇ.ಡಿ ಹಾಗೂ ಸಿ.ಬಿ.ಐ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಮೂಗು ತೂರಿಸುವುದನ್ನು ಕಾಯಕ ಮಾಡಿಕೊಂಡಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರವು, ಪ್ರಕಾಶನ ಸಂಸ್ಥೆಯ ಮೇಲೆ ಪ್ರಭಾವ ಬೀರಿರುವುದನ್ನು ತಳ್ಳಿಹಾಕುವಂತಿಲ್ಲ.
ಇಟಲಿ ಮೂಲದ ಸೋನಿಯಾ ಗಾಂಧಿಯವರು ಆರಂಭದ ಇಪ್ಪತ್ತು ವರ್ಷಗಳನ್ನು ತಾಯ್ನಾಡಿನಲ್ಲಿ ಕಳೆದದ್ದನ್ನು ಹೊರತು ಪಡಿಸಿದರೆ, ಉಳಿದ ಅರವತ್ತು ವರ್ಷಗಳನ್ನು, ಭಾರತದ ಸೊಸೆಯಾಗಿ, ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿ, ಇಬ್ಬರು ಮಕ್ಕಳ ತಾಯಿಯಾಗಿ ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಬದುಕಿದ ಅವರ ಬದುಕು ನಿಜಕ್ಕೂ ಮಾದರಿಯಾಗುವಂತಹದ್ದು. ನನಗೆ ಅವರ ಆತ್ಮ ಚರಿತ್ರೆಯನ್ನು ಓದುವುದು ಬೇಕಿಲ್ಲ. ಅವರ ಬದುಕಿನ ಬಹುತೇಕ ಘಟನೆಗಳಿಗೆ ನಾನು ಮತ್ತು ನನ್ನ ತಲೆಮಾರು ಸಾಕ್ಷಿಯಾಗಿದ್ದೀವಿ. 1975 ರಿಂದಲೂ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಮತ್ತು ಕೌಟುಂಬಿಕ ಬದುಕನ್ನು ಸೂಕ್ಷಮವಾಗಿ ಗಮನಿಸಿಕೊಂಡು ಬಂದಿರುವ ನನಗೆ, ಸೋನಿಯಾ ಗಾಂಧಿಯವರು ಇಂದಿರಾ ಅವರಿಗೆ ಕೇವಲ ಸೊಸೆ ಮಾತ್ರವಲ್ಲದೆ, ಮಗಳಂತೆ ಇದ್ದರು. ಎರಡನೇ ಪುತ್ರ ಸಂಜಯ್ ಗಾಂಧಿಯವರ ಪತ್ನಿ ಮನೇಕಾ ಗಾಂಧಿ ಎಂದಿಗೂ ಇಂದಿರಾ ಕುಟುಂಬದ ಜೊತೆ ಭಾಂದವ್ಯದಿಂದ ಇರಲು ಸಾಧ್ಯವಾಗಲಿಲ್ಲ. ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಥವಾ ಸಿದ್ಧಾಂತಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಹಲವಾರು ಭಿನ್ನಾಭಿಪ್ರಾಯಗಳಿವೆ. ಆದರೆ, ದೇಶದ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಸೊಸೆಯಾಗಿ, ಅವರು ನೋಡಿದ ಮತ್ತು ಅನುಭವಿಸಿದ ದುರಂತ ಘಟನೆಗಳನ್ನು ತಣ್ಣನೆಯ ಭಾವದಿಂದ ಮೌನವಾಗಿ ಸಹಿಸಿಕೊಂಡ ಅವರ ಕುರಿತಾಗಿ ಅಪಾರ ಗೌರವವಿದೆ.
ದೆಹಲಿಯಲ್ಲಿ1980 ರಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಮೈದುನ ಸಂಜಯ್ ಗಾಂಧಿಯ ಸಾವು, 1984 ರ ಅಕ್ಟೋಬರ್ ತಿಂಗಳಲ್ಲಿ ತನ್ನ ಸ್ವಂತ ಅಂಗರಕ್ಷಕರ ಗುಂಡೇಟಿಗೆ ಬಲಿಯಾದ ಅತ್ತೆ ಇಂದಿರಾಗಾಂಧಿ ಹಾಗೂ 1991ರ ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀ ಪೆರಬಂದೂರು ಪಟ್ಟಣದಲ್ಲಿ ಶ್ರೀ ಲಂಕಾದ ಎಲ್.ಟಿ.ಟಿ. ಉಗ್ರರ ಬಾಂಬ್ ದಾಳಿಗೆ ಪ್ರಾಣತೆತ್ತ ಪತಿ . ರಾಜೀವ್ ಗಾಂಧಿಯವರ ಸಾವು ಇಂತಹ ಅಘಾತಕಾರಿ ಘಟನೆಗಳ ನಡುವೆಯೂ ಸೋನಿಯಾ ಗಾಂಧಿ ಭಾರತದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಅವರ ಜೀವನದಲ್ಲಿ ಬಹು ದೊಡ್ಡ ಸಾಧನೆ. ಬೇರೆ ಯಾರೇ ಆಗಿದ್ದರೂ ತನ್ನ ಇಬ್ಬರು ಮಕ್ಕಳಾದ ರಾಹುಲ್, ಮತ್ತು ಪ್ರಿಯಾಂಕರನ್ನು ಕರೆದುಕೊಂಡು, ಭವಿಷ್ಯದ ದೃಷ್ಟಿಯಿಂದ ದೇಶ ತ್ಯೆಜಿಸಿ ಹೊರ ಹೋಗುತ್ತಿದ್ದರು. ನನಗೆ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಕೆಲವು ಚಿತ್ರಗಳು ನೆನಪಿವೆ. 1984 ರಲ್ಲಿ ಇಂದಿರಾಗಾಂಧಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆಯುತ್ತಿರುವಾಗ, ಹತ್ತು ಅಥವಾ ಹನ್ನೆರಡು ವರ್ಷದ ರಾಹುಲ್, ತನ್ನ ತಂದೆ ರಾಜೀವ್ ಗಾಂಧಿಯವರ ಎದೆಗೆ ಮುಖ ಹುದುಗಿಸಿಕೊಂಡು ಅಳುತ್ತಿರುವ ದೃಶ್ಯವನ್ನು ಇಂಡಿಯ ಟುಡೆ ಪತ್ರಿಕೆಯ ಖ್ಯಾತ ಛಾಯಾಚಿತ್ರಕಾರ ರಘುರಾಯ್ ಅದ್ಭುತವಾಗಿ ಸೆರೆ ಹಿಡಿದಿದ್ದರು.

ಖಲಿಸ್ತಾನ್ ಉಗ್ರರ ನಿಯಂತ್ರಣಕ್ಕೆ ಅಮೃತ್ ಸರದ ಸ್ವರ್ಣದೇವಾಲಯದ ಯಾತ್ರಿಗಳ ನಿವಾಸದಲ್ಲಿ ಅಡಗಿದ್ದ ಬಿಂದ್ರನ್ ವಾಲೆ ಹಾಗೂ ಸಹಚರರನ್ನು ಆಪರೇಶನ್ ಬ್ಲೂಸ್ಟಾರ್ ಹೆಸರಿನಲ್ಲಿ1984 ರ ಜನವರಿ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ, ಹುಟ್ಟಡಗಿಸಿದ ಇಂದಿರಾಗಾಂಧಿಯವರು, ಅದೇ ಸಿಖ್ ಸಮುದಾಯ ಅಂಗರಕ್ಷರ ಗುಂಡಿಗೆ ಜೀವತೆತ್ತರು. ಈ ಕಾರ್ಯಾಚರಣೆ ನಡೆದ ನಂತರ, ನಿಮ್ಮ ನಿವಾಸದಲ್ಲಿ ಸಿಖ್ ಸಮುದಾಯದ ಒಬ್ಬ ಸಿಬ್ಬಂದಿಯೂ ಇರಕೂಡದು ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ತಿರಸ್ಕರಿಸಿದ್ದ ಅವರು ನನ್ನ ರಕ್ಷಣೆಗೆ ಇರುವ ಹಿಂದೂ-ಮುಸ್ಲಿಂ ಅಥವಾ ಎರಡು-ಸಿಕ್ ಸಮುದಾಯದ ಯೋಧರನ್ನು ನಾನು ಸಂದೇಹ ಪಡಲಾರೆ ಎಂದು ಘೋಷಿಸಿಕೊಂಡಿದ್ದರು. ಇಂತಹ ಉದಾತ್ತ ನಂಬಿಕೆ ಮತ್ತು ವಿಶ್ವಾಸ ಇಂದಿರಾ ಗಾಂಧಿಯವವರನ್ನು ಬಲಿ ತೆಗೆದುಕೊಂಡಿತು. ಇದೀಗ ಬಿ.ಜೆ.ಪಿ. ಪಕ್ಷವು ಮುಂಬರುವ ಪಂಜಾಬ್ ವಿಧಾನ ಸಭೆಯ ಚುನಾವಣೆಗೆ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್ ಸಿಂಗ್ ಪುತ್ರನಿಗೆ ಟಿಕೇಟ್ ಘೋಷಣೆ ಮಾಡಿದೆ.
ರಾಜೀವ್ ಗಾಂಧಿಯವರು ಪ್ರಬಲ ಬಾಂಬ್ ಸ್ಪೋಟಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಇಡೀ ದೇಹವು ಗುರುತು ಸಿಗಲಾರದಷ್ಟು ಛಿದ್ರವಾಗಿತ್ತು. ಎಡಗಾಲಿನ ಶೋ ಧರಿಸಿದ್ದ ಪಾದವೊಂದು ಮಾತ್ರ ಅವರ ಗುರುತಾಗಿ ಉಳಿದುಕೊಂಡಿತ್ತು ಇಂತಹ ಕೌಟುಂಬಿಕ ದುರಂತಗಳನ್ನು ಸಹಿಸಿಕೊಂಡು, ನೆಹರು ಮತ್ತು ಇಂದಿರಾ ಪೋಷಿಸುಕೊಂಡು ಬಂದಿದ್ದ ಕಾಂಗ್ರೇಸ್ ಪಕ್ಷವನ್ನು ಜೀವಂತವಾಗಿಟ್ಟ ಸೋನಿಯಾ ವರ ಬದ್ಧತೆಯು ಯಾವುದೇ ರಾಜಕೀಯ ನಾಯಕರಿಗೆ ಇಂದಿಗೂ ಮಾರ್ಗದರ್ಶಿಯಾಗಬಲ್ಲದು ಪದೇ ಪದೇ ಸೋನಿಯಾಗಾಂಧಿಯವರ ಇಟಲಿ ಮೂಲವನ್ನು ಪ್ರಸ್ತಾಪಿಸುವ ಸಂಘಪರಿವಾರದ ಅವಿವೇಕಿಗಳು ಒಮ್ಮೆ ಕಳೆದ ನಾಲ್ಕು ದಶಕಗಳ ಭಾರತದ ರಾಜಕೀಯ ಇತಿಹಾಸವನ್ನು ಗಂಭೀರವಾಗಿ ಕುಳಿತು ಓದುವದು ಒಳಿತು. 2004 ರ ಮೇ ತಿಂಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಕೂಡಿ ಬಂದಿತು. ಆದರೆ, ಅವರು ಅದನ್ನು ತಿರಸ್ಕರಿಸಿ, ಈ ನೆಲದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದು, ಸೋನಿಯಾ ಗಾಂಧಿಯವರು ಭಾರತಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಎಂಬುದು ನನ್ನ ಅಚಲವಾದ ನಂಬಿಕೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಮನಮೋಹನ್ ಸಿಂಗ್ ಅವರ ಚಿಂತನೆಗಳು ಮೂಲ ಕಾರಣ. ಇಂದಿರಾಗಾಂಧಿಯವರ ಸಾವಿನ ನಂತರ ಅನಿರೀಕ್ಷಿತವಾಗಿ ಪ್ರಧಾನಿಯಾದ ರಾಜೀವ್ ಗಾಂಧಿಯವರಿಗೆ ರಾಜಕೀಯ ಅನುಭವ ಇರಲಿಲ್ಲ. ಅವರು ಆರಂಭದಿಂದಲೂ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಅವಧಿಯಲ್ಲಿ ನಡೆದ ಮೂರು ಐತಿಹಾಸಿಕ ತಪ್ಪುಗಳಲ್ಲಿ ಒಂದನ್ನು ಸಂಘಪರಿವಾರ ದುರಪಯೋಗಿಸಿಕೊಂಡಿದ್ದನ್ನು ಯಾರೂ ಮರೆಯಲಾಗದು. ರಾಜಕೀಯ ಅನುಭವವಿಲ್ಲದ ರಾಜೀವ್ ಗಾಂಧಿಯವರ ಬಳಿ ಸುತ್ತುವರಿದ ಹಾಗೂ ಬೌದ್ಧಿಕ ಕೊರತೆಯಿಂದ ನರಳುತ್ತಿದ್ದ ಮತ್ತು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಆಡಳಿತದುದ್ದಕ್ಕೂ ದಿಕ್ಕು ತಪ್ಪಿಸಿದರು. 1978ರಲ್ಲಿ ಐದು ಮಕ್ಕಳ ತಾಯಾಗಿದ್ದ ಮಧ್ಯಪ್ರದೆಶದ ಇಂದೂರಿನ ಶಾ ಬಾನು ಬೇಗಂ ಎಂಬಾಕೆಯನ್ನು ವಕೀಲನಾಗಿದ್ದ ಪತಿಯು ನಲವತ್ತಾರು ವರ್ಷ ದಾಂಪತ್ಯ ಜೀವನ ನಡೆಸಿ, ತಲಾಖ್ ನೀಡುವುದರ ಮೂಲಕ ಮನೆಯಿಂದ ಹೊರದಬ್ಬಿದ್ದ.
ಜೀವನ ನಿರ್ವಹಣೆಗೆ ನ್ಯಾಯಾಲಯದ ಮೆಟ್ಟಿಲೇರಿದ 62 ವರ್ಷದ ಆಕೆಗೆ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು, 1985 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ನಿಯಮಗಳನ್ನು ತಿರಸ್ಕರಿಸಿ, ಮಾಸಾಶನ ನೀಡುವಂತೆ ಐತಿಹಾಸಿಕ ತೀರ್ಪು ನೀಡಿತು. ಆದರೆ, ಈ ತೀರ್ಪಿನ ವಿರುದ್ಧ ಇಸ್ಲಾಂ ಧರ್ಮದ ಮೌಲ್ವಿಗಳು ಪ್ರತಿಭಟನೆ ನಡೆಸಿ, ಮಹಿಳೆಯರನ್ನು ಶೋಷಿಸುವುದು ನಮ್ಮ ಧಾರ್ಮಿಕ ಹಕ್ಕು ಎಂಬಂತೆ ನಡೆದುಕೊಂಡರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿಯವರು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸುವುದರ ಬದಲಾಗಿಗೆ ಮಸೂದೆಗೆ ತಿದ್ದುಪಡಿ ತಂದು ಐತಿಹಾಸಿಕ ತಪ್ಪನ್ನು ಎಸಗಿದರು.
ಎರಡನೆಯದಾಗಿ ಅಯೋಧ್ಯೆಯ ಬಾಬರಿ ಮಸೀದಿಗೆ ತಂದು ಇಡಲಾಗಿದ್ದ ರಾಮಲಲ್ಲಾ ವಿಗ್ರಹಗಳನ್ನು ದರ್ಶನ ಮಾಡದಂತೆ ಫೈಜಾಬಾದ್ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಗೆ ಬೀಗ ಹಾಕಲಾಗಿತ್ತು. ಆದರೆ, 1986 ರ ಪೆಬ್ರವರಿ ತಿಂಗಳಲ್ಲಿ ರಾಜೀವ್ ಗಾಂಧಿಯವರು ಬಾಬರಿ ಮಸೀದಿಯ ಬಾಗಿಲು ತೆಗೆಸಿ, ರಾಮನ ವಿಗ್ರಹದ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟರು. ಇದು ಪರೋಕ್ಷವಾಗಿ , ಬಾಬರಿ ಮಸೀದಿಯ ಧ್ವಂಸದ ಜೊತೆಗೆ ರಥಯಾತ್ರೆ ನಡೆದು ಅಂತಿಮವಾಗಿ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ನನ್ನ ದೃಷ್ಟಿಯಲ್ಲಿ ಇದು ರಾಜೀವ್ ಗಾಂಧಿಯವರು ಎಸೆಗಿದ ಎರಡನೆಯ ಐತಿಹಾಸಿಕ ತಪ್ಪು .
ಶ್ರೀಲಂಕಾದ ಭಾರತೀಯ ಮೂಲದ ತಮಿಳರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ, ಹೋರಾಟ ನಡೆಸುತ್ತಿದ್ದಾಗ, ಅವರನ್ನು ಸದೆ ಬಡೆಯಲು 1988 ರಲ್ಲಿ ಭಾರತದ ಸೇನೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟಿದ್ದು ಅವರ ಮೂರನೇ ತಪ್ಪು. ಅಂತಿಮವಾಗಿ ತಾವು ಮಾಡಿದ ತಪ್ಪಿಗೆ ಪ್ರಾಣ ತೆತ್ತರು. ಯಾವೊಂದು ದೋಷ ಎಸಗದೆ ಎಲೆ ಮರೆಯ ಕಾಯಿಯಂತೆ ಬದುಕಿದ್ದ ಸೋನಿಯಾ ಗಾಂಧಿ ಅಂತಿಮವಾಗಿ ಎಲ್ಲಾ ಹೊರೆಗಳನ್ನು ತಮ್ಮ ಹೆಗಲ ಮೇಲೆ ಹೊತ್ತು, ಮಕ್ಕಳನ್ನು ಸಾಕಿ ಬೆಳೆಸಿದರು. ಇಂತಹ ಮಹಾನ್ ತಾಯಿಯೊಬ್ಬಳ ಆತ್ಮಕಥನ ಪ್ರಕಟವಾಗುವ ಮುನ್ನವೇ ಅಡ್ಡಿಪಡಿಸುವುದು ನ್ಯಾಯ ಸಮ್ಮತವಲ್ಲ. ಒಂದು ಕೃತಿ ಲೋಕಾರ್ಪಣೆಗೊಂಡನಂತರ ಅದು ಈ ಸಮಾಜದ ಕೃತಿಯಾಗುತ್ತದೆ. ಅದನ್ನು ವಿಮರ್ಶಿಸಲು ನಮಗೆ ಹಕ್ಕಿದೆ. ಕನಿಷ್ಠ ಈ ಜ್ಞಾನ ನಮ್ಮಲ್ಲಿರಬೇಕು.