ನನ್ನೂರು ಪಕ್ಕದ ಆಬಲವಾಡಿ ಗ್ರಾಮದಲ್ಲಿ ದಲಿತ ಸಮುದಾಯದ ಮಾದಿಗರ ಎಂಟತ್ತು ಕುಟುಂಬಗಳು ಊರಾಚೆ ಕೆರೆ ಬದಿಯಲ್ಲಿ ವಾಸಿಸುತ್ತಿದ್ದವು. ಅಂತಹ ಕುಟುಂಬದಲ್ಲಿ ಮಾದಪ್ಪನವರು ಜನಿಸಿ ಎಲ್.ಎಸ್. ಎಂದು ಕರೆಯಲಾಗುತ್ತಿದ್ದ ಏಳನೆಯ ತರಗತಿ ಓದಿ ಶಿಕ್ಷಕರಾಗಿದ್ದರು.
ಬ್ರಾಹ್ಮಣ ಶ್ರೀಮಂತ ಕುಟುಂಬದ ಗೋವಿಂದಪ್ಪನವರು ನೀಡಿದ್ದ ಆ ಹಳೆಯ ಹೆಂಚಿನ ಮನೆಯ ಕಿಟಿಕಿಗಳಿಗೆ ಮತ್ತು ಬಾಗಿಲುಗಳಿಗೆ ಕದಗಳಿರಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಸಹಪಾಠಿಗಳು ಸದಾ ಕಿಟಿಕಿಯ ಮೂಲಕ ತರಗತಿಗೆ ಹಾಜರಾಗುತ್ತಿದ್ದೆವು. ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಾ ಕ್ಲಾಸ್ ಗಳು ವಿಶಾಲ ವಾಗಿದ್ದ ಹಾಲ್ ನಲ್ಲಿ ನಡೆಯುತ್ತಿದ್ದವು. ದಲಿತ ಹುಡುಗರನ್ನು ಬಾಗಿಲಿನಿಂದ ಹೊರಗಡೆ ಕೂರಿಸಲಾಗುತ್ತಿತ್ತು. ಅವರು ಜಗುಲಿಯ ಆವರಣದಲ್ಲಿ ಕುಳಿತು, ಬಾಗಿಲು ಮತ್ತು ಕಿಟಕಿಯ ಮೂಲಕ ಪಾಠ ಕೇಳುತ್ತಿದ್ದರು.
1961 ರಲ್ಲಿ ಶಾಲೆಗೆ ಸೇರಿದ್ದ ನನಗೆ 1962 ರಲ್ಲಿ ಮಾದಪ್ಪನವರು, ಬೋರ್ಡ್ ಮೇಲೆ ಅ, ಆ, ಇ. ಈ. ಅಕ್ಷರಗಳನ್ನು ಬರೆದು, ತಮ್ಮ ಕೈಯಲ್ಲಿ ಇದ್ದ ಕೋಲನ್ನು ಅಕ್ಷರಗಳ ಮೇಲೆ ಇಡುತ್ತಿದ್ದರು. ನಾವು ಅಕ್ಷರವನ್ನು ಗುರುತಿಸಿ ಹೇಳಬೇಕಾಗಿತ್ತು. ಸರಿಯಾಗಿ ಅಕ್ಷರ ಗುರುತಿಸಿದ ನನ್ನ ಮುಂದೆ ಮಾದಪ್ಪನವರು ಕೋಲನ್ನು ನೀಡಿ, ತುದಿ ಹಿಡಿದುಕೊಳ್ಳಲು ಹೇಳಿದರು ಅದನ್ನು. ಹಿಡಿದುಕೊಂಡಾಗ, ನನ್ನನ್ನ ಕರೆದುಕೊಂಡು ಹೋಗಿ ಎರಡನೇ ತರಗತಿ ಗುಂಪಿನಲ್ಲಿ ಕೂರಿಸಿದರು.
ಶಿಕ್ಷಕರಾಗಿದ್ದರೂ ಸಹ, ಮಾದಪ್ಪನವರು ಮೇಲ್ಜಾತಿಯ ಹುಡುಗರನ್ನು ಮುಟ್ಟಲು ಅಂಜುತ್ತಿದ್ದರು. ಇಂತಹ ಮಹಾನ್ ದಲಿತ ಗುರುವಿನಿಂದ ಅಕ್ಷರ ಕಲಿತ ನಾನು, ಬಾಲ್ಯದಿಂದಲೂ ದಲಿತರ ನೋವು, ಅಪಮಾನಗಳಿಗೆ ಸಾಕ್ಷಿಯಾದ ಕಾರಣದಿಂದ ಇಂದಿನವರೆಗೂ ಜಾತಿಯ ಎಲ್ಲೆಯನ್ನು ಮೀರಿ ಬದುಕಲು ಸಾಧ್ಯವಾಗಿದೆ. ಅಂತಹ ಶಿಕ್ಷಕರಿಂದ ಅ,ಆ. ಕಲಿತ ನನ್ನ ಬದುಕು ಸಾರ್ಥಕ ಎನಿಸಿದೆ.
2002 ರಲ್ಲಿ ಹುಬ್ಬಳ್ಳಿಯಿಂದ ಹಬ್ಬದ ನಿಮಿತ್ತ ಊರಿಗೆ ಬಂದಾಗ, ಬಸ್ ಇಳಿಯುತ್ತಿದ್ದಂತೆ, ಸಂತೆಮೈದಾನದ ಅರಳಿ ಕಟ್ಟೆಯ ಬಳಿ ಆಬಲವಾಡಿಗೆ ಹೋಗಲು ಕುಳಿತಿದ್ದ ಹಾಗೂ ವಯಸ್ಸಾಗಿದ್ದ ಮಾದಪ್ಪನವರನ್ನು ನೋಡಿ, ತಕ್ಷಣ ಅವರ ಬಳಿ ಹೋಗಿ ಕಾಲು ಮುಟ್ಟಿ ನಮಸ್ಕರಿಸಿದೆ. ಅವರಿಗೆ ಶಾಕ್ ಆಯಿತು. ಯಾರು ಸ್ವಾಮಿ ನೀವು? ಏಕೆ ನನ್ನ ಕಾಲಿಗೆ ಬೀಳುತ್ತಿದ್ದೀರಿ? ಎಂದರು.
ಅವರ ಕೈ ಹಿಡಿದು, ಪಕ್ಕದಲ್ಲಿದ್ದ ನಂಜುಂಡನ ಟೀ ಅಂಗಡಿಗೆ ಕರೆದೊಯ್ದು, ಚಹಾ ಕುಡಿಸಿ, ಬಾಲ್ಯದಲ್ಲಿ ಅಕ್ಷರ ಕಲಿಸಿದ ಕಥೆ ಹೇಳಿದೆ. ಈಗ ಉದಯ ಟಿವಿಯಲ್ಲಿ ಉದ್ಯೋಗದಲ್ಲಿ ಇರುವುದಾಗಿ ತಿಳಿಸಿದೆ. ಮೇಷ್ಟ್ರು, ಎಷ್ಟೋಂದು ಭಾವುಕರಾದರೆಂದರೆ, ನನ್ನ ಕೈಗಳನ್ನು ಹಿಡಿದು, ತಮ್ಮ ಹಣೆಗೆ ಒತ್ತುಕೊಂಡು, ನನ್ನ ಜನ್ಮ ಸಾರ್ಥಕವಾಯ್ತು ಬುಡಪ್ಪಾ ಎಂದರು.
ಅವರೂರಿನ ಮಂದಿ ಮೇಸ್ಟೇ ಬಸ್ ಬಂತು ಬನ್ನಿ ಎಂದು ಕರೆಯಲು ಬಂದಾಗ, ಅವರೆಲ್ಲರಿಗೂ ಹೆಮ್ಮೆಯಿಂದ ನನ್ನನ್ನು ಪರಿಚಯಿಸಲು ಹೋದಾಗ, ಅವರ ಕಣ್ಣುಗಳು ಒದ್ದೆಯಾಗಿದ್ದವು. ಜಗಣ್ಣಾ, ನಮಗೆಲ್ಲಾ ಗೊತ್ತು, ನಿಮ್ಮ ಶಿಷ್ಯ ಎಂದು ಗೊತ್ತಿರಲಿಲ್ಲ ಎಂದು ಅವರೆಲ್ಲಾ ಹೇಳಿದಾಗ, ಮಾದಪ್ಪ ಮೇಷ್ಟ್ರ ಮುಖದ ಮೇಲೆ ಮೂಡಿದ ಹೆಮ್ಮೆಯ ಭಾವನೆ ನೋಡಿ, ಇಂತಹ ಗುರುವಿನ ಬಳಿ ಶಿಕ್ಷಣ ಕಲಿತದ್ದು ನನ್ನ ಜನ್ಮ ಸಾರ್ಥಕ ಎನಿಸಿತು.
ಶಿಕ್ಷಕರ ದಿನಾಚರಣೆಯ ಇಂದು ನನಗೆ ಅಕ್ಷರ ಧಾರೆಯೆರೆದ ಆ ಮಹಾನ್ ಗುರು ನೆನಪಾದರು.
ಚಿತ್ರಸೌಜನ್ಯ- ವಿಜಯ ಕರ್ನಾಟಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ