ಗುರುವಾರ, ಮೇ 16, 2013

ಮಾನ್ಸಂಟೊ ಮಹಾ ಮಾರಿಯ ಕಥನ-2


1948ರಲ್ಲಿ ಹೈಬ್ರಿಡ್ ತಳಿಗಳ ಸಂಶೋಧನೆ ಮತ್ತು ತಯಾರಿಕೆಗೆ ಮುಂದಾದ ಮಾನ್ಸಂಟೊ ಕಂಪನಿ, 1975 ರಲ್ಲಿ ಜೀವಶಾಸ್ತ್ರದ ಸಂಶೋಧನಾ ಕೇಂದ್ರವೊಂದನ್ನು ಅಮೇರಿಕಾದಲ್ಲಿ  ಆರಂಭಿಸಿತು. 1987ರಲ್ಲಿ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇಳಿದು,  1994ರಲ್ಲಿ ಪ್ರಥಮವಾಗಿ ಕುಲಾಂತರಿ ತಳಿಯ ಮೆಕ್ಕೆಜೋಳವನ್ನು ಬಿಡುಗಡೆಮಾಡಿತು. ಅಲ್ಲಿಂದ ಇಲ್ಲಿಯವರೆಗೆ ವಿವಾದಗಳು ಹಾಗೂ ಸೃಷ್ಟಿಯಾದ ಅನೇಕ ಅವಾಂತರಗಳು ಕಂಪನಿಯನ್ನು ಬೆನ್ನಟ್ಟಿಕೊಂಡು ಬಂದಿವೆ.
ಕೆನಡಾದ ಕೃಷಿ ವಿಭಾಗದಲ್ಲಿ ತಜ್ಞರಾಗಿ ಸುಧೀರ್ಘ 35 ವರ್ಷಗಳ ಸೇವೆ ಸಲ್ಲಿಸಿದ, ಡಾ. ಥಿಯನೆ ವ್ರೈನ್ ಎಂಬುವರು, ಕುಲಾಂತರಿ ತಳಿಗಳು ಹೊರಬಿದ್ದಾಗ, ಜಾಗತಿಕ ಮಟ್ಟದಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ, ವಿಶೇಷವಾಗಿ ಇವುಗಳ ಆಹಾರ ತಿಂದ ಮನುಷ್ಯರು ಮತ್ತು ಪ್ರಾಣಿಗಳ ದೇಹದಲ್ಲಿ ಆಗಬಹುದಾದ ವೆತ್ಯಾಸಗಳ ಕುರಿತು ಬಯೋಟೆಕ್ನಾಲಜಿ ಎಂಬ ಪತ್ರಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅವರು ನೀಡಿದ್ದ ಎಚ್ಚರಿಕೆಗಳು ಈಗ ನಿಜವಾಗತೊಡಗಿವೆ. ಪ್ರಾಣಿಗಳಲ್ಲಿ ವಿಶೇಷವಾಗಿ ಹಸುಗಳ ಗರ್ಭಧಾರಣೆಯಲ್ಲಿ ವೆತ್ಯಾಸವಾಗಿದೆ. ಮನುಷ್ಯನ ಕಿಡ್ನಿ, ಲಿವರ್,ಹಾಗೂ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಇನ್ಸುಲಿನ್ ಉತ್ಪಾದನಾ ಪ್ರಮಾಣದಲ್ಲಿ ವೆತ್ಯಯ ಉಂಟಾಟಾಗಿರುವುದು ಸಂಶೋಧನೆಯಿಂದ ಕಂಡು ಬಂದಿದೆ. 2011 ರಲ್ಲಿ ಕೆನಡಾದ ಶೇರ್ ಬ್ರೂಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದ 93 ಗರ್ಭಿಣೆಯರಲ್ಲಿ 82 ಮಂದಿ ಸ್ತ್ರೀಯರ ರಕ್ತದಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ.


ಇವರೆಲ್ಲಾ G.M Foods ಎಂದು ಕರೆಯಲಾಗುವ ಕುಲಾಂತರಿ ಬೆಳೆಗಳ ತರಕಾರಿ ಹಾಗೂ ಜೋಳವನ್ನು ತಿಂದವರಾಗಿದ್ದರು.( ಕೆಲ್ಲಾಗ್ಸ್ ಕಾರ್ನ್ ಪ್ಲೇಕ್ಸ್) ಈ ಕಾರಣದಿಂದಾಗಿ ಅಮೇರಿಕಾದ “ ಅಮೇರಿಕನ್ ಅಕಾಡೆಮಿ ಆಫ್ ಎನ್ವಿರಾನ್ಮೆಂಟಲ್ ಅಂಡ್ ಮೆಡಿಸನ್ ಎಂಬ ಸಂಸ್ಥೆ ಕುಲಾಂತರಿ ತಳಿಯ ಆಹಾರ ಮತ್ತು ತರಕಾರಿ, ಹಣ್ಣುಗಳನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಇಂತಹ ಆಹಾರ ಪದಾರ್ಥಗಳ ಮೇಲೆ ಲೇಬಲ್ ಅಂಟಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ಮಾನ್ಸಂಟೊ ಕಂಪನಿ ಇಂತಹ ಪರೀಕ್ಷಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದೆ.
ಇಂತಹ ಕಪ್ಪು ಇತಿಹಾಸ ಇರುವ ಮಾನ್ಸಂಟೊ ಕಂಪನಿ ಭಾರತಕ್ಕೆ ಬಂದು ತಳವೂರಿ 64 ವರ್ಷಗಳು ಸಂದಿವೆ. 1949ರಲ್ಲಿ ಸಣ್ಣ ಮಟ್ಟದಲ್ಲಿ ಹೈಬ್ರಿಡ್ ತಳಿಯ ಬೀಜಗಳನ್ನು ಮಾರಾಟ ಮಾಡುವುದರ ಮೂಲಕ ಭಾರತಕ್ಕೆ ಕಾಲಿಟ್ಟ ಮಾನ್ಸಂಟೊ ಕಂಪನಿಯ ವಹಿವಾಟು 1990 ದಶಕದಲ್ಲಿ 250 ಕೋಟಿ ರೂಪಾಯಿ ಇದ್ದದ್ದು, 2012 ರ ವೇಳೆಗೆ 1400 ಕೋಟಿ ರೂಪಾಯಿಗೆ ತಲುಪಿದೆ. ಆರಂಭದಲ್ಲಿ  26 ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆ 800 ಮಂದಿಗೆ ಹೆಚ್ಚಿದೆ.

ಬಿ.ಟಿ. ತಳಿಯ ಬೀಜಗಳಾದ ಹತ್ತಿ ಮತ್ತು ತರಕಾರಿ ಬೀಜಗಳ ಮೇಲೆ ಸ್ವಾಮ್ಯ ಸಾಧಿಸುವ ನಿಟ್ಟಿನಲ್ಲಿ 1975 ರಲ್ಲಿ ಮಾನ್ಸಂಟೊ ಹೋಲ್ಡಿಂಗ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ಪ್ರಾರಂಭಿಸಿದ ಕಂಪನಿ, ಆನಂತರ ಭಾರತದಲ್ಲಿ ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ದ ಜಾಲ್ನ ಎಂಬ ಜಿಲ್ಲಾ ಕೇಂದ್ರದಲ್ಲಿದ್ದ ಮಹಿಕೊ ಎಂಬ ಸಂಸ್ಥೆಯನ್ನು ಖರೀದಿಸಿ, ಭಾರತದ ಬೀಜ ಸಾಮ್ರಾಜ್ಯದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತು.
2002 ರಲ್ಲಿ ಭಾರತದಲ್ಲಿ ಬಿ.ಟಿ. ಹತ್ತಿಬೆಳೆಯನ್ನು ಪರಿಚಯಿಸಿದ ಮಾನ್ಸಂಟೊ ಕಂಪನಿ ದೇಶಾದ್ಯಂತ ಲಕ್ಷಾಂತರ ಹತ್ತಿ ಬೆಳೆಗಾರರನ್ನು ಸಾಲದ ಸುಳಿಗೆ ಸಿಲುಕಿಸಿ ಸಾವಿಗೆ ಕಾರಣವಾಯಿತು. ಸದ್ಯ ಸ್ಥಿತಿಯಲ್ಲಿ ತಾನೇ ಸ್ವತಃ ಬೀಜ ತಯಾರಿಕೆಯಲ್ಲಿ ತೊಡಗಿರುವುದರ ಜೊತೆಗೆ ಭಾರತದಲ್ಲಿ 45 ಬೀಜ ಕಂಪನಿಗಳಿಗೆ ತನ್ನ ತಂತ್ರಜ್ಙಾನವನ್ನು ವರ್ಗಾಯಿಸಿ, ಅದರಿಂದ ಬರುವ ಲಾಭದಲ್ಲಿ ಶೇಕಡ 80 ರಷ್ಟನ್ನು ರಾಜಧನ (ರಾಯಲ್ಟಿ) ರೂಪದಲ್ಲಿ ಪಡೆಯುತ್ತಿದೆ. ಈ ಕಾರಣದಿಂದ ಭಾರತದ ಬಿತ್ತನೆ ಬೀಜಗಳ ದರ ಶೇಕಡ 200 ರಷ್ಟು ದುಬಾರಿಯಾಗಿದೆ. 2002 ರಲ್ಲಿ ಬಿಡುಗಡೆಯಾದ  ಭಾರತದಲ್ಲಿ ಮಾನ್ಸಂಟೊ ಇಂಡಿಯ ಕಂಪನಿಯ ಹತ್ತು ರೂ. ಮುಖಬೆಲೆಯ  ಶೇರುಗಳು ಆರಂಭದಲ್ಲಿ 438 ರೂಪಾಯಿಗೆ ಮಾರಾಟವಾಗಿದ್ದವು. ನಂತರ ಶೇರಿನ ಬೆಲೆ 2008 ರಲ್ಲಿ 2037 ರೂಪಾಯಿಗೆ ತಲುಪಿತ್ತು. ಇತ್ತೀಚೆಗಿನ ದಿನಗಳಲ್ಲಿ ಕಂಪನಿ ವಿವಾದಕ್ಕೀಡಾದ ಪರಿಣಾಮ, ಪ್ರತಿ ಶೇರಿನ ಬೆಲೆ 582 ರೂಪಾಯಿಗೆ ಕುಸಿದಿದೆ.
ಭಾರತದಲ್ಲಿ 2002ರಲ್ಲಿ ಬಿ.ಟಿ. ಹತ್ತಿ ಬೆಳೆಯನ್ನು ಪರಿಚಯಿಸುವ ಮುನ್ನ  65 ರಿಂದ 70ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ದೇಶಿ ಬಿತ್ತನೆ ಬೀಜಗಳ ಮೂಲಕ ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಈಗ ಒಂದು ಕೊಟಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ. ಹತ್ತಿ ಬೆಳೆಯಲಾಗುತ್ತಿದೆ. ಮೊದಲು ಹೆಕ್ಟೇರ್ ಒಂದಕ್ಕೆ 300 ಕೆ.ಜಿ. ಇಳುವರಿ ಇದ್ದದ್ದು, ಉತ್ಪಾದನೆ, ಬಿ.ಟಿ. ಹತ್ತಿಯಿಂದಾಗಿ 500 ಕೆ.ಜಿ.ಗೆ ಏರಿಕೆಯಾಗಿದೆ. ಆದರೆ ಕೃಷಿವೆಚ್ಚ ಮಾತ್ರ ನಾಲ್ಕು ಪಟ್ಟು ದುಪ್ಪಟ್ಟಾಗಿದೆ.
 ಪರಸ್ಪರ ಬೀಜ ವಿನಿಮಯದಿಂದ ಪುಕ್ಕಟೆಯಾಗಿ ಸಿಗುತ್ತಿದ್ದ ಹತ್ತಿ ಬೀಜಕ್ಕೆ ರೈತ ತಲಾ ಒಂದು ಕೆ.ಜಿ.ಗೆ ಒಂದೂವರೆ ಸಾವಿರ ರೂಪಾಯಿ ತೆರಬೇಕಾಗಿದೆ. ಜೊತೆಗೆ ಕಂಪನಿ ತಿಳಿಸಿದ ರೀತಿಯಲ್ಲಿ ಕರಾರುವಕ್ಕಾಗಿ ರಸಾಯನಿಕ ಗೊಬ್ಬರ, ಕೀಟನಾಶಕವನ್ನು ಬಳಸಬೇಕು. ವಿಶೇಷವೆಂದರೇ, ಕಂಪನಿ ಶಿಫಾರಸ್ಸು ಮಾಡುವ ಗೊಬ್ಬರ ಮತ್ತು ರಸಾಯನಿಕ ಔಷಧಗಳೆಲ್ಲವೂ ಮಾನ್ಸಂಟೊ ಕಂಪನಿಯ ಅಂಗಸಂಸ್ಥೆಗಳ ಉತ್ಪನ್ನಗಳಾಗಿರುತ್ತವೆ. ತಾನು ಹೆಚ್ಚುವರಿಯಾಗಿ ಬೆಳೆದ ಇಳುವರಿ ಬೆಳೆಯ ಲಾಭದ ಜೊತೆಗೆ, ಬೆಳೆದ ಫಸಲಿನ ಲಾಭವನ್ನು ಕಂಪನಿಗೆ ತೆರಬೇಕಾದ ಸ್ಥಿತಿ ರೈತನದು. ಇದಕ್ಕೆ ಒಂದು ಉದಾಹರಣೆಯೆಂದರೆ, ಒಂದು ಹೆಕ್ಟೇರದ ಪ್ರದೇಶದ ಕೀಟನಾಶಕಕ್ಕೆ ಮಾನ್ಸಂಟೊ ಕಂಪನಿ ಲೀಟರ್ ಗೆ 800 ರೂಪಾಯಿ ಬೆಲೆಯ ಔಷದವನ್ನು ಶಿಫಾರಸ್ಸು ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಆಂಧ್ರದಲ್ಲಿ ಸಹಜ ಕೃಷಿಗೆ ಪ್ರೋತ್ಸಾಹ ಕೊಡುತ್ತಿರುವ ಕೃಷಿ ತಜ್ಞ ರಾಮಾಂಜನೆಯಲು ಎಂಬುವರು, ಸುಮಾರು 2 ಅಡಿ ಅಗಲ-2 ಅಡಿ  ರಟ್ಟಿನ ಮೇಲೆ ಹಳದಿ ಬಣ್ಣದ ಕಾಗದವನ್ನು  ಅಂಟಿಸಿ, ಅದರ ಮೇಲೆ ಬಳಸಿ ಬಿಸಾಡಿದ ವಾಹನಗಳ ಇಂಜಿನ್ ಆಯಿಲ್ ಮತ್ತು ಗ್ರೀಸ್ ಲೇಪಿಸಿ. ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಸಾಧನವನ್ನು ಕಂಡು ಹಿಡಿದಿದ್ದಾರೆ. ಇದರ ಬೆಲೆ ಕೇವಲ 12 ರೂಪಾಯಿ. ಇಂತಹ ರಟ್ಟುಗಳನ್ನು ಹೊಲದಲ್ಲಿ ಬಳಸಿದ  ರೈತರು ಹತ್ತಿಗೆ ಕಾಂಡ ಕೊರೆಯುವ ಕೀಟವನ್ನು ತಡೆಗಟ್ಟುವಲ್ಲಿ ಶೇಕಡ 85 ರಷ್ಟು ಯಶಸ್ವಿಯಾಗಿದ್ದಾರೆ. ಇಂತಹ ದೇಶಿ ತಂತ್ರಜ್ಞಾನದ ನಡುವೆಯೂ,  ಮತ್ತು  ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯ ಮತ್ತು ಅಂಧ್ರದ ಅದಿಲಾಬಾದ್ ಪ್ರಾಂತ್ಯದಲ್ಲಿ ಹತ್ತಿ ಬೆಳೆದ ಲಕ್ಷಾಂತರ ರೈತರು ಕೈ ಸುಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ, ನಮ್ಮ ರೈತರಿಗೆ ಮಾತ್ರ ಬುದ್ದಿ ಬಂದಂತೆ ಕಾಣುವುದಿಲ್ಲ.
ರೈತರನ್ನು ಬಿ.ಟಿ. ಬೆಳೆಗಳತ್ತ ಸೆಳೆಯಲು ಮಾನ್ಸಂಟೊ ಕಂಪನಿ ಇದೀಗ  ‘ ಡಾ. ದೆಕ್ಲಟ್ ಫಾರಂ ಕೇರ್ “ ಎಂಬ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದು, ಈ ಸಂಸ್ಥೆಯೊಂದಿಗೆ ಭಾರತದ 10 ಲಕ್ಷ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ,
ಭಾರತದಲ್ಲಿ ಬೆಳೆಯಲಾಗುತ್ತಿರುವ ಬಿ.ಟಿ. ಹತ್ತಿ ಬೆಳೆಯಿಂದಾಗಿ, ಗಾಳಿಯ ಮೂಲಕ ಸಸ್ಯ ಪ್ರಭೇದಗಳಲ್ಲಿ ಏರ್ಪಡುವ ಸ್ವಪರಾಗಸ್ಪರ್ಶ ಮತ್ತು ಜೇನು ನೊಣ ಮುಂತಾದವುಗಳಿಂದ ಏರ್ಪಡುವ ಪರಾಮಸ್ಪರ್ಶದಿಂದಾಗಿ ದೇಶಿಯ ಬೆಳೆಗಳು ಮತ್ತು ಇತರೆ ಸಸ್ಯಗಳಿಗೆ ಕುಲಾಂತರಿ ಸಸ್ಯದ ಜೀವಾಣುಗಳು ಸೇರಿಕೊಂಡು ಸಸ್ಯ ಸಂಪತ್ತು ಮತ್ತು ದೇಶಿ ಅಹಾರ ಬೆಳೆಗಳ ಬಿತ್ತನೆ ಬೀಜಗಳು ಕಲುಷಿತವಾಗಲು ಕಾರಣವಾಗಿವೆ. ಇಂತಹ ಒಂದು ಕಾರಣಕ್ಕಾಗಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಕುಲಾಂತರಿ ತಳಿ ಮತ್ತು ಆಹಾರಗಳಿಗೆ ಅವಕಾಶ ಕೊಡಬಾರದೆಂದು ತಕರಾರು ಸಲ್ಲಿಸಿದ್ದವು. ಆದರೆ, ಈ ಅರ್ಜಿಯನ್ನು ವಿಶ್ವ ವಾಣಿಜ್ಯ ಮಂಡಳಿ( W.T.O.) ತಿರಸ್ಕರಿಸಿತು. ಇಂತಹ ಆಹಾರ ತಿಂದ ಹಸುಗಳು ಹುಚ್ಚು ರೋಗಕ್ಕೆ ಬಲಿಯಾದವು. ಜಗತ್ತಿನ ರಾಷ್ಟ್ರಗಳನ್ನು ತನ್ನ ಹಣದಿಂದ ಮಣಿಸಿರುವ ಮಾನ್ಸಂಟೊ ಕಂಪನಿಯ ಪ್ರತಿ ಹೆಜ್ಜೆ ಗುರುತುಗಳನ್ನು ಗಮನಿಸುವಾಗ, 1955 ರಲ್ಲಿ “ ಟಾಪ್ ಸಾಯಿಲ್ ಅಂಡ್ ಸಿವಿಲೈಜೇಷನ್ ‘ ಎಂಬ ಕೃತಿ ಬರೆದಿರುವ ಟಾಮ್ ಡೆಲ್ ಮತ್ತು ವೆರ್ನಾನ್ ಗಿಲ್ ಕಾರ್ಟರ್ ಎಂಬ ಪ್ರಖ್ಯಾತ ಪರಿಸರ ತಜ್ಞರು, ಹೇಳಿರುವ’ Civilised man was nearly always able to become master of his environment temporarily. His Chief troubles came from his delusions that is temporary master ship was permanent.He thought of him self as “ master of the world’ while failing to understand fully the law of nature.” ಎಂಬ ಮಾತುಗಳು ನೆನಪಾಗುತ್ತಿವೆ,
       ( ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ