Saturday, 18 May 2013

ಮಾನ್ಸಂಟೊ ಮಹಾ ಮಾರಿಯ ಕಥನ-3

 1. ಕಳೆದ ಆರು ತಿಂಗಳಿಂದ  ಪಾಶ್ಚಿಮಾತ್ಯ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳ ಮೇಲೆ ಶತಮಾನಗಳ ಕಾಲ ನಡೆಸಿದ ದೌರ್ಜನ್ಯ ಕುರಿತಂತೆ ಅಧ್ಯಯನ ಮಾಡುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಲೇಖಕ ಹಾಗೂ ನ್ಯೂಯಾರ್ಕ್ ಟೈಮ್ಸ್ ಮತ್ತು ಗಾರ್ಡಿಯನ್ ಪತ್ರಿಕೆಗಳಿಗೆ ಅಂಕಣಕಾರರಾಗಿರುವ ಪಂಕಜ್ ಮಿಶ್ರಾ ಬರೆದಿರುವ “ From The Ruins Of Empire’ ( The Revolt Against The West And The Remaking of Asaia) ಎಂಬ ಕೃತಿ ಪಶ್ಚಿಮದ ಜಗತ್ತು ನಮ್ಮ ಏಷ್ಯಾ ರಾಷ್ಟ್ರಗಳ ಸಂಸ್ಕೃತಿ ,ಇಲ್ಲಿನ ಸಂಪತ್ತು ಮತ್ತು ಜೀವ ಜಗತ್ತನ್ನು ದೋಚಿದ ಬಗ್ಗೆ ಲೇಖಕ ತುಂಬಾ ರೋಚಕವಾಗಿ  ಬರೆದಿದ್ದಾನೆ.  ಈ ಕೃತಿಯಲ್ಲಿ 18 ನೇ ಶತಮಾನದಲ್ಲಿ ಪ್ರಾನ್ಸಿನ ನೆಪೋಲಿಯನ್, ಈಜಿಪ್ತ ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಇಸ್ಲಾಂ ಧರ್ಮವನ್ನು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಲುಷಿತಗೊಳಿಸಿದ ಬಗ್ಗೆ ಕೂಡ ಒಂದು ಅಧ್ಯಾಯವಿದೆ. ಈ ಸಂಗತಿಯನ್ನು ಪಂಕಜ್ ಮಿಶ್ರಾ, ನಮ್ಮ ನಡುವಿನ ಪ್ರಖ್ಯಾತ ಚಿಂತಕ ಎಡ್ವರ್ಡ್ ಸೈಯದ್ ರವರ “ ಓರಿಯಂಟಲಿಸಂ” ಕೃತಿಯಿಂದ ಚರ್ಚೆಗೆ ಎತ್ತಿಕೊಂಡಿದ್ದಾನೆ. ಎಡ್ವರ್ಡ್ ಸೈಯದ್ ಎಲ್ಲಾ ಸಂಗತಿಗಳನ್ನು ಅತ್ಯಂತ  ತಣ್ಣನೆಯ ಧ್ವನಿಯಲ್ಲಿ ಚರ್ಚೆ ಮಾಡಿದರೆ, ಪಂಕಜ್ ಮಿಶ್ರಾ ಅತ್ಯಂತ ಭಾವಾವೇಶದಿಂದ ಚರ್ಚಿಸಿದ್ದಾನೆ. ಈಸ್ಟ್ ಇಂಡಿಯಾ ಕಂಪನಿ, ಪೋರ್ಚುಗೀಸರು, ಡಚ್ಚರು, ಪ್ರೆಂಚರು ಏಷ್ಯಾವನ್ನು ದೋಚಿದ ಸಂಗತಿಯ ವಿವರಗಳನ್ನು ಕೊಡುತ್ತಾ ಹೋಗುವ ಪರಿ ನಮ್ಮನ್ನು ಬೆರುಗುಗೊಳಿಸುತ್ತದೆ.. ಈ ಇಪ್ಪತ್ತೊಂದನೇ ಶತಮಾನದಲ್ಲಿ ನಿಂತು ಅಂದಿನ ಚರಿತ್ರೆಯ ದುರಂತಗಳನ್ನು ಅವಲೋಕಿಸಿದಾಗ, ನನಗೆ ಏನೇನೂ ಬದಲಾವಣೆ ಕಾಣುವುದಿಲ್ಲ. ಅಂದು ಬ್ರಿಟೀಷರು, ಪ್ರೆಂಚರು, ಪೋರ್ಚುಗೀಸರು, ಡಚ್ಚರು ಇದ್ದರು ಇಂದು ಅವರ ಮುಂದುವರಿದ ಸಂತತಿಯ ಹಾಗೆ ಅಥವಾ ಪ್ರತಿನಿಧಿಗಳ ಹಾಗೆ ಬಹುರಾಷ್ಟ್ರೀಯ ಕಂಪನಿಗಳು ಇವೆ ಅಷ್ಟೆ.

  ಬಹು ರಾಷ್ಟ್ರೀಯ ಕಂಪನಿಗಳ ಹುನ್ನಾರಗಳು ಅರ್ಥ ನಾವು ಮಾಡಿಕೊಳ್ಳಲು ಸಾಧ್ಯವಾಗದಷ್ಟು ಸಂಕೀರ್ಣವಾಗಿವೆ. ಉದಾಹರಣೆಗೆ ಮಾನ್ಸಂಟೊ ಅಥವಾ ಇನ್ನಿತರೆ ಕಂಪನಿಗಳು ತಮ್ಮ ಬೀಜ ಸಾಮ್ರಾಜ್ಯದ ವಿಸ್ತಾರಕ್ಕಾಗಿ  ಹೊರಡಿಸಿರುವ ಹೇಳಿಕೆಗಳನ್ನು ಗಮನಿಸಿ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಬೆಳೆಯಬೇಕು. ಸಾಂಪ್ರದಾಯಕ ಬೀಜಗಳಿಂದ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಟರ್ಮಿನೇಟರ್ ತಂತ್ರಜ್ಙಾನ ದಿಂದ ( ನಿರ್ಬೀಜಿಕರಣ) ತಯಾರಿಸಿದ ಹೈಬ್ರಿಡ್ ಬೀಜಗಳು ಮತ್ತು ಜೈವಿಕ ತಂತ್ರಜ್ಞಾನದಿಂದ ತಯಾರಿಸಲಾದ ಕುಲಾಂತರಿ ತಳಿಗಳ ಬೀಜ ಗಳಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಜಗತ್ತಿನ ಹಸಿವನ್ನು ನೀಗಿಸುವುದು ನಮ್ಮ ಗುರಿ ಎಂದು ಬಹುತೇಕ ಕಂಪನಿಗಳು ಹೇಳಿಕೊಂಡಿವೆ, ( ಇವುಗಳಲ್ಲಿ ಮಾನ್ಸಂಟೊ, ಕಾರ್ಗಿಲ್ ಪಿಪ್ಜರ್ ಕಂಪನಿಗಳು ಮುಂಚೂಣಿಯಲ್ಲಿವೆ)
  ಈ ಕಂಪನಿಗಳ ಆಶಯ ನಿಜವೇ ಆಗಿದ್ದರೆ, ಹಸಿವನ್ನು ನೀಗಿಸಲು, ಭತ್ತ, ಗೋಧಿ, ಮೆಕ್ಕೆಜೋಳ ಬೆಳೆಗಳ ಮೇಲೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿತ್ತು. ತರಕಾರಿ ಬೆಳೆಗಳು, ಎಣ್ಣೆಕಾಳು ಬೆಳೆಗಳ ಬೀಜಗಳನ್ನು ಕುಲಾತರ ಗೊಳಿಸುವ ಅಗತ್ಯವೇನಿತ್ತು?

  ಜಗತ್ತಿನ ಕೃಷಿಲೋಕದ ಸರಪಳಿಯ ಕೊಂಡಿಯಾಗಿರುವ ಮತ್ತು ರೈತರ ಜೀವನಾಡಿಯಾಗಿರುವ ಬೀಜ ಸ್ವಾತಂತ್ರ್ಯವನ್ನು ಹರಣ ಮಾಡಿದರೆ, ಈ ಕಂಪನಿಗಳು ಇಡೀ ವಿಶ್ವವನ್ನು ಗೆದ್ದಂತೆ. ಹಾಗಾಗಿ ಜಗತ್ತಿನ ಎಲ್ಲಾ ವಿಧವಾದ ಸಾಂಪ್ರದಾಯಿಕ ಬೀಜಗಳಿಗೆ ಇತರೆ ಪ್ರಾಣಿ ಇಲ್ಲವೆ ಸಸ್ಯ ಪ್ರಭೇದಗಳ ವಂಶವಾಹಿಗಳನ್ನು  ಜೋಡಿಸಿ, ಬೀಜಗಳನ್ನು ನಿರ್ಬೀಜಿಕರಣಗೊಳಿಸುವುರ ಮೂಲಕ ಅವುಗಳ ಪುನರತ್ಪತ್ತಿಯ ಶಕ್ತಿಯನ್ನು ಕೊಲ್ಲಲಾಗುತ್ತಿದೆ.
  ಮಾನ್ಸಂಟೊ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳದು ಒಂದೇ ಅಜೆಂಡಾ. ಅದು ಜಗತ್ತಿನೆಲ್ಲೆಡೆ, ಏಕರೂಪಿ ಬೆಳೆ ಸಂಸ್ಕೃತಿ,, ಏಕರೂಪಿ ಆಹಾರ ಸಂಸ್ಕೃತಿ, ಏಕರೂಪಿ ಉಡುಪಿನ ಸಂಸ್ಕತಿ ಇರಬೇಕು. ಅಲ್ಲಿ ವೈವಿದ್ಯತೆಗೆ ಅವಕಾಶವಿಲ್ಲ. ಹಾಗಾಗಿ ನಮ್ಮ ಕೈಗೆ  ತಿನ್ನಲು ಪಿಜ್ಜಾ, ಬರ್ಗರ್, ಕೆಂಟುಕಿ ಚಿಕನ್  ಕೊಟ್ಟಿವೆ, ಕುಡಿಯಲು ಪೆಪ್ಸಿ, ಕೊಕಾ ಕೋಲಗಳನ್ನು ನೀಡಿವೆ, ಉಡಲು ಜೀನ್ಸ್, ಬರ್ಮುಡ ಚಡ್ಡಿಗಳಿವೆ. ಇನ್ನೇನು ಬೇಕು? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಆಧುನಿಕ ತಲೆಮಾರನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಇದರ ಹಿಂದೆ ಇಡೀ ಜಗತ್ತನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರವಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಬೇಕಾಗಿವೆ. ಹಿಂದಿನ ಕಾಲದಲ್ಲಿ ಒಂದು ರಾಷ್ಟ್ರವನ್ನು ವಶಪಡಿಸಿಕೊಳ್ಳಲು ಅಪಾರ ಪ್ರಮಾಣದ ಸೇನೆ, ಯುದ್ಧ ಸಾಮಾಗ್ರಿಗಳಾದ ಶಸ್ತ್ರಾಸ್ತ್ರಗಳು ಬೇಕಿತ್ತು. ಈಗ ಅವುಗಳ ಅಗತ್ಯವಿಲ್ಲ. ಆಹಾರ ಸಂಸ್ಕೃತಿಯೊಂದನ್ನು ಬದಲಿಸಿದರೆ ಸಾಕು ಇಡೀ ರಾಷ್ಟವನ್ನು ಗೆಲ್ಲಬಹುದು. ಇವೊತ್ತು ಮಾನ್ಸಮಟೊ ಸೇರಿದಂತೆ ಬಹುತೇಕ ಕಂಪನಿಗಳು ಈ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತಿವೆ.
  ಭಾರತದಲ್ಲಿ ಅತ್ಯಧಿಕ ಗೋಧಿ ಬೆಳೆಯುವ ಪಂಜಾಬಿನ ರೈತರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿಯಶಸ್ವಿಯಾದ  ಪೆಪ್ಸಿ ಕಂಪನಿ ಹತ್ತು ವರ್ಷದ ಹಿಂದೆ ಗೋಧಿ ಬದಲಾಗಿ ರಪ್ತು ಆಧಾರಿತ ಯೋಜನೆಯಡಿ ಹಣ್ಣು ತರಕಾರಿ ಬೆಳೆಯಲು ಪ್ರೋತ್ಸಾಹಿಸಿತು. ರೈತರು ಕಂಪನಿಯ ಮಾತುಗಳನ್ನು ನಂಬಿ, ಹೈಬ್ರಿಡ್ ಬೀಜಗಳನ್ನು ಬಿತ್ತಿ, ಅಪಾರ ಮಟ್ಟದ ರಸಾಯನಿಕ ಗೊಬ್ಬರವನ್ನು ಭೂಮಿಗೆ ಸುರಿದು, ಬೆಳೆಗೆ ಕ್ರಿಮಿ ನಾಶಕ ಸಿಂಪಡಿಸಿ ಹಣ್ಣು ತರಕಾರಿಗಳನ್ನು ಬೆಳೆದರು. ಜೊತೆಗೆ ಫಲವತ್ತಾದ ತಮ್ಮ ಭೂಮಿಯನ್ನು ಚೌಳು ಭೂಮಿಯನ್ನಾಗಿ ಪರಿವರ್ತಿಸಿಕೊಂಡರು. ಅಮೇರಿಕಾದಲ್ಲಿ ಅಧಿಕ ಮಟ್ಟದಲ್ಲಿ ಬೆಳೆಯುವ ಗೋಧಿಯನ್ನು ಭಾರತ ಆಮದು ಮಾಡಿಕೊಳ್ಳುವಂತೆ ಮಾಡಲು, ಪಂಜಾಬಿನ ರೈತರಿಂದ ಗೋಧಿ ಬೆಳೆಯನ್ನು ಕೈ ತಪ್ಪಿಸುವ ಹುನ್ನಾರ ಈ ಯೋಜನೆಯ ಹಿಂದೆ ಅಡಗಿತ್ತು.


  ಭಾರತದ ಭ್ರಷ್ಟ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳತ್ತಿರುವ ಬಹುರಾಷ್ತ್ರೀಯ ಕಂಪನಿಗಳು ಇಲ್ಲಿನ ವಿಜ್ಞಾನಿಗಳನ್ನು ಹಣದ ಆಮೀಷದ ಮೂಲಕ ಭ್ರಷ್ಟರನ್ನಾಗಿ ಮಾಡಿ ಭಾರತದ ಕೃಷಿ ವ್ಯವಸ್ತೆಯ ಅಡಿಪಾಯಕ್ಕೆ ಅಪಾಯವನ್ನು ತಂದೊಡ್ಡಿದ್ದಾರೆ.
  ಭಾರತದಲ್ಲಿ  ರಾಷ್ಟ್ರಿಯ ಜೀವ ವೈವಿಧ್ಯತಾ ಪ್ರಾಧಿಕಾರ ಮಂಡಳಿ ಅಸ್ತಿತ್ವದಲ್ಲಿದ್ದು, ಕೃಷಿ ಅಥವಾ ಜೈವಿಕ ತಂತ್ರಜ್ಙಾನ ಕುರಿತ ಯಾವುದೇ ಪ್ರಯೋಗಕ್ಕೆ ಮುನ್ನ ಈ ಮಂಡಳಿಯಿಂದ ಅನುಮತಿ ಪಡೆಯಬೇಕು. ಆದರೆ, ನಮ್ಮ ಧಾರವಾಡದ ಕೃಷಿ ವಿ.ವಿ.ಯ ವಿಜ್ಞಾನಿಗಳು ಮಾನ್ಸಂಟೊ ಕಂಪನಿಯ ಜೊತೆ ಶಾಮೀಲಾಗಿ ಬಿ.ಟಿ. ಬದನೆ ಪ್ರಯೋಗ ಕೈಗೊಂಡರು. ಇದೇ ರೀತಿ ಕೊಯಮತ್ತೂರಿನ ಕೃಷಿ.ವಿ.ವಿ. ವಿಜ್ಞಾನಿಗಳು ಬಿ.ಟಿ.ಭತ್ತದ ಪ್ರಯೋಗ ಕೈಗೊಂಡರು. ಭಾರತದಲ್ಲಿನ ಕಾನೂನುಗಳು ಸಡಿಲಗೊಂಡಿರುವಾಗ ಮಾನ್ಸಂಟೊ ಕಂಪನಿಗೆ ಇಲ್ಲಿನ ರೈತರು ಮತ್ತು ವಿಜ್ಞಾನಿಗಳು ಪುಟ್ ಬಾಲ್ ಆಟಗಾರನ ಕಾಲ್ಚೆಂಡುಗಳಾಗಿದ್ದಾರೆ.
  ಮಾನ್ಸಂಟೊ ಮತ್ತು ಇತರೆ ಕಂಪನಿಗಳಿಗೆ ನಮ್ಮ ಆಹಾರ ಭೆಳೆಗಳು  ಮತ್ತು ತರಕಾರಿಗಳ ಮೇಲೆ ಮಾತ್ರ ಕಣ್ಣು ಬಿದ್ದಿಲ್ಲ, ನಮ್ಮ ಎಣ್ಣೆಕಾಳುಗಳ ಬೆಳೆಗಳನ್ನು ನಾಶ ಮಾಡಲು ಅವು ಹೊರಟಿವೆ. 1970 ರ ದಶಕದಲ್ಲಿ ಭಾರತಕ್ಕೆ ಅಪರಿಚಿತವಾಗಿದ್ದ ಸೋಯಾ ಅವರೆಯನ್ನು ಈ ಕಂಪನಿಗಳು ಅಮೇರಿಕಾದಿಂದ ತಂದು ಇಲ್ಲಿ ಪರಿಚಯ ಮಾಡಿದವು. ನಿಜಕ್ಕೂ ಇದು ಅನುತ್ಪಾದಕ ಬೆಳೆ ಎಂದರೆ, ತಪ್ಪಾಗಲಾರದು. ಭಾರತದಲ್ಲಿ ಬೆಳೆಯಲಾಗುತ್ತಿರುವ ಸಾಸಿವೆ ಬೆಳೆಯಲ್ಲಿ ಒಂದು ಹೆಕ್ಟೇರ್ ಗೆ 175 ಕೆ.ಜಿ.ಎಣ್ಣೆ ಸಿಗುತ್ತದೆ. ಶೇಂಗಾ ಬೆಳೆಯಿಂದ 150 ಕೆ.ಜಿ. ಎಣ್ಣೆ ಸಿಗುತ್ತಿದೆ, ಸೋಯಾ ಅವರೆಯಿಂದ ಸಿಗುತ್ತಿರುವುದು ಕೇವಲ 115ರಿಂದ 125 ಕೆ.ಜಿ. ಎಣ್ಣೆ ಮಾತ್ರ. ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯ ಪ್ರಮಾಣ ಸಾಸಿವೆಯಲ್ಲಿ325 ಕೆ.ಜಿ. ಶೇಂಗಾದಲ್ಲಿ 200 ಕೆ.ಜಿ. ಯಾದರೆ, ಸೋಯಾ ಅವರೆಯಲ್ಲಿ 645 ಕೆ.ಜಿ. ಹಿಂಡಿ ಉತ್ಪಾದನೆಯಾಗುತ್ತಿದೆ.

   ಸೋಯಾ ಅವರೆಯ ಹಿಂಡಿಯನ್ನು ಮಾಂಸಕ್ಕಾಗಿ ಬೆಳಸುವ ಗೋವುಗಳ ಆಹಾರವಾಗಿ ಯುರೋಪಿಯನ್ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿವೆ. ಅಲ್ಲಿನ ಗೋಮಾಂಸಕ್ಕೆ ಭಾರತದ ರೈತರು ಹಿಂಡಿ ಸರಬರಾಜು ಮಾಡುವ ವ್ಯವಸ್ಥೆಯ ವಿಷವರ್ತುಲಕ್ಕೆ ಸಿಲುಕಿದ್ದಾರೆ. ಖ್ಯಾದ್ಯ ತೈಲದ ಕೊರತೆ ಎದುರಿಸುತ್ತಿರುವ ಭಾರತ ನೆರೆಯ ಇಂಡನೇಷಿಯಾ ದಿಂದ ತಾಳೆ ಎಣ್ಣೆಯನ್ನು( ಪಾಮ್ ಆಯಿಲ್) ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಸೋಯಾ ಅವರೆಯ ಹಿಂಡಿ ರಫ್ತಿನಿಂದ ಸಿಗುವ ಆದಾಯದ ಎಂಟು ಪಟ್ಟು ಹೆಚ್ಚಿನ ಹಣವನ್ನು ತಾಳೆ ಎಣ್ಣೆಯ ಆಮದಿಗಾಗಿ ಸುರಿಯಲಾಗುತ್ತಿದೆ.
  ಮೂಲಭೂತವಾಗಿ ನಾವು ಅರಿಯಬೇಕಾದ ಸತ್ಯವೊಂದಿದೆ. ಯಾವುದೇ ಒಂದು ಅವಿಷ್ಕಾರ ಅಥವಾ ತಂತ್ರಜ್ಙಾನ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಈ ದಿನ ಮಾನ್ಸಂಟೊ ಕಂಪನಿ ಬಿ.ಟಿ. ಬೀಜಗಳು ಮತ್ತು ಹೈಬ್ರಿಡ್ ಬಿತ್ತನೆ ಬೀಜಗಳ ಮೇಲೆ ಹಕ್ಕಿನ ಸಾಮ್ಯ ಸ್ಥಾಪಿಸಲು ಹೊರಟಿರುವುದು ಅನೈತಿಕತೆಯ ಪರಮಾವಧಿ.
  ಭೂಮಿಯ ಮೇಲಿನ ಜೀವ ಸಂಪತ್ತು ಮತ್ತು ಸಸ್ಯ ಸಂಪತ್ತಿನ  ತಳಿ ನಕ್ಷೆಯನ್ನು  ಬಿಡಿಸಿ ಅವುಗಳ ವಂಶವಾಹಿ ಕೋಶಗಳನ್ನು ಬೆಸೆದು ಇಲ್ಲವೆ ಕತ್ತರಿಸಿ ಹೊಸ ಬೀಜ ಸೃಷ್ಟಿ ಮಾಡುವುದು ನೈಸರ್ಗಿಕ ನಿಯಮಕ್ಕೆ ವಿರುದ್ದವಾದುದು. ವಿಜ್ಙಾನಿಗಳು ಎರವಲು ಪಡೆದುಕೊಂಡಿರುವ ಸಸ್ಯದ ಕೋಶಗಳು ನಮ್ಮ ಅರಣ್ಯಗಳಲ್ಲಿ ಇರುವ ಅಪರೂಪದ ಗಿಡಗಳ ಜೀವಕೋಶಗಳೇ ಹೊರುತು, ವಿಜ್ಞಾನಿಗಳ ಸ್ವಯಂ ಸೃಷ್ಟಿಯೇನಲ್ಲ. ಇಂತಹ  ಅನೈತಿಕ ಕೃತ್ಯಗಳಿಗೆ ಕಡಿವಾಣ ಹಾಕಲು ನಮಗಿರುವ ಏಕೈಕ ಮಾರ್ಗವೆಂದರೆ, ಕುಲಾಂತರಿ ಬೀಜಗಳು ಮತ್ತು ಇಂತಹ ಬೀಜಗಳನ್ನು ಸೃಷ್ಟಿ ಮಾಡುವ ಕಂಪನಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸುವುದು. ಇದನ್ನು ಜಗತ್ತಿನ ಅತಿ ಹಿಂದುಳಿದ ರಾಷ್ಟ್ರವಾದ ಆಫ್ರಿಕಾದ ಇಥಿಯೋಪಿಯಾದ ಮಹಿಳೆಯರು ಮಾಡಿ ತೋರಿಸುವುದರ ಮೂಲಕ ನಮಗೆ ಮಾದರಿಯಾಗಿದ್ದಾರೆ.

  ಎಲ್ಲಾ ರೀತಿಯ ಅತ್ಯಾಧುನಿಕ ಬೀಜಗಳನ್ನು ತಿರಸ್ಕರಿಸಿದ ಅಲ್ಲಿನ ಮಹಿಳೆಯರು 1980ರ ದಶಕದಲ್ಲಿ ತಮ್ಮ ದೇಶಿ ಬಿತ್ತನೆ ಬೀಜಗಳನ್ನು ರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪಿಸಿದರು. ಬ್ಯಾಂಕ್ ಮುಖಾಂತರ ರೈತರ ನಡುವೆ ಬೀಜ ವಿನಿಮಯ ಪದ್ಧತಿ ಮುಂದುವರಿಯಿತು. ನಂತರ ಈ ಚಳವಳಿ ಲ್ಯಾಟಿನ್ ಅಮೇರಿಕಾ ರಾಷ್ಟ್ರಗಳು, ಪೆರು, ಪಿಲಿಫೈನ್ಸ್ ಮುಂತಾದ ರಾಷ್ಟ್ರಗಳಿಗೆ ಹರಡಿ ಆನಂತರ  1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟಿತು. ಇದೀಗ ದೇಶ್ಯಾದಂತ ಮಹಿಳೆಯರ ನೇತೃತ್ವದಲ್ಲಿ ಸಾವಿರಾರು ಬೀಜಬ್ಯಾಂಕುಗಳು ತಲೆ ಎತ್ತಿ ದೇಶಿ ಬೀಜ ರಕ್ಷಣೆಯಲ್ಲಿ ತೊಡಗಿವೆ. ಜಗತ್ತಿನ ಕೃಷಿ ಪರಂಪರೆಯಲ್ಲಿ ಮಹಿಳೆಯರನ್ನು ಕೃಷಿಚಟುವಟಿಕೆಗಳಿಂದ ದೂರ ಇಟ್ಟ ಫಲವಾಗಿ ಇಷ್ಟೆಲ್ಲಾ ದುರಂತಗಳು ಕೃಷಿ ಲೋಕದಲ್ಲಿ ಸಂಭವಿಸುತ್ತಿವೆ ಎಂಬ ಕಟು ಸತ್ಯವನ್ನು ಕೂಡ ನಾವು ಈ ಸಂದರ್ಭದಲ್ಲಿ  ಮರೆಯಬಾರದು.
                                                 (ಮುಗಿಯಿತು)


No comments:

Post a Comment