Monday, 6 May 2013

ಪಶ್ಚಿಮಘಟ್ಟದ ಕಥೆ-ವ್ಯಥೆ-3 ಎರಡು ಬಿನ್ನ ವರದಿಗಳು


                 ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳ ಕುರಿತ ಒಂದು ನೋಟ
ಪಶ್ಚಿಮಘಟ್ಟದ ಜೀವಜಾಲದ ಸುರಕ್ಷತೆ ಕುರಿತಂತೆ ಎರಡು ವರದಿಗಳು ಈಗ ನಮ್ಮ ಮುಂದಿವೆ. ಇವುಗಳಲ್ಲಿ ಖ್ಯಾತ ಪರಿಸರ ತಜ್ಞ ಪ್ರೊ. ಮಾದವಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿ ಸಮಿತಿ ನೀಡಿದ್ದ ವರದಿ ಮೊದಲನೇಯದಾದರೆ, ಇನ್ನೊಂದು, ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್ ನೇತೃತವದ ತಜ್ಞರ ಸಮಿತಿ ವರದಿ.  ಇಬ್ಬರೂ ಭಾರತದ ಪ್ರಖ್ಯಾತ ಮೇಧಾವಿಗಳು ಮತ್ತು ವಿಜ್ಞಾನಿಗಳು. ಇದರಲ್ಲಿ ಎರಡು ಮಾತಿಲ್ಲ. ಅವರದೇ ಆದ ಕ್ಷೇತ್ರಗಳಲ್ಲಿ ಅದ್ವಿತೀಯರು ಕೂಡ.
2011 ರಲ್ಲಿ ಮಾದವ ಗಾಡ್ಗೀಳ್ ನೇತೃತ್ವದ 13 ತಜ್ಞರ ತಂಡ,  ಸತತ 18 ತಿಂಗಳುಗಳ ಕಾಲ ಪಶ್ಚಿಮಘಟ್ಟದ ಉದ್ದಕ್ಕೂ ಓಡಾಡಿ, ಎಂಟು ಬಾರಿ ಐದು ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ನಲವತ್ತು ಬಾರಿ ಪಶ್ಚಿಮಘಟ್ಟದ ಉಳುವಿಗಾಗಿ ಹೋರಾಟ ನಡೆಸುತ್ತಿರುವ ಐದು ರಾಜ್ಯಗಳ (ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು) ನೂರಕ್ಕು ಹೆಚ್ಚು ಸ್ವಯಂ ಸೇವಾ ಸಂಘಟನೆಗಳ ಜೊತೆ ಸಂವಾದ ನಡೆಸಿ, ಹದಿನಾಲ್ಕು ಬಾರಿ ಪಶ್ಚಿಮ ಘಟ್ಟದಲ್ಲಿ ಕ್ಷೇತ್ರ ಕಾರ್ಯ ನಡೆಸಿ  ತಯಾರಿಸಿದ ವರದಿಯಾಗಿತ್ತು.

 ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಖಾತೆಗೆ ಈ ತಜ್ಞರ ಕೂಲಂಕುಷವಾದ, ನಿಖರವಾದ ಹಾಗೂ ಪಶ್ಚಿಮ ಘಟ್ಟದ ಸ್ಥಿತಿ ಗತಿಗೆ ತೀರಾ ಹತ್ತಿರವಾಗಿದ್ದ ಈ ವರದಿಯನ್ನು ಜೀರ್ಣಿಸಿಕೊಳ್ಳಿಸುವುದು ಕಷ್ಟವಾಯಿತು. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ ಒಬ್ಬರನ್ನು ಹೊರತು ಪಡಿಸಿ, ಉಳಿದ ಸಚಿವರಿಂದ ವರದಿಗೆ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ, ಪಶ್ಚಿಮಘಟ್ಟಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನೇಕ ಗಣಿಗಾರಿಕೆಗಳು, ಉದ್ದಿಮೆಗಳು, ರಿಸಾರ್ಟ್ ಗಳು ಮತ್ತು ಪ್ರವಾಸೋದ್ಯಮ ನೆಪದಲ್ಲಿ ಸೃಷ್ಟಿಯಾಗಿರುವ ದ್ವೀಪ ಮತ್ತು ಗಿರಿಧಾಮಗಳಲ್ಲಿ ಅನೇಕ ಕೇಂದ್ರ ಸಚಿವರ ಕುಟುಂಬದ ಸದಸ್ಯರುಗಳ ಬಂಡವಾಳ ವಿನಿಯೋಗವಾಗಿತ್ತು. ಇದಕ್ಕಾಗಿ ಪರಿಸರ ಇಲಾಖೆಯ ಅನೇಕ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು. ಇದಕ್ಕೊಂದು ಉದಾಹರಣೆಯೆಂದರೆ, ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿ ಸುಪ್ರೀ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಪೂನಾ ಸಮೀಪದ ಲಾವಾಸ ದ್ವೀಪದ ನಿರ್ಮಾಣ ಕಂಪನಿಯಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಪುತ್ರಿ ಸುಪ್ರಿಯಾ ಕಾಳೆ ಇವರ ಹೆಸರಿನಲ್ಲಿ ಶೇರು ಬಂಡವಾಳವಿದೆ. ಇದು ಪಶ್ಚಿಮಘಟ್ಟದ ಅತಿ ಸೂಕ್ಷ್ಮ ವಲಯದಲ್ಲಿ ಲಾವಸ ಕಂಪನಿಗೆ  12.500 ಎಕರೆ ಪ್ರದೇಶವನ್ನು ಮಹಾರಾಷ್ರ ಸರ್ಕಾರದ ಪರವಾಗಿ, ಎನ್.ಸಿ.ಪಿ. ಸಚಿವರು ಉಡೂಗರೆಯಾಗಿ ನೀಡಿದ ಫಲವಾಗಿ, ಶರದ್ ಪವಾರ್ ಕುಟುಂಬಕ್ಕೆ  ಪುಕ್ಕಟೆಯಾಗಿ ಸಿಕ್ಕಿದ ಬಂಡವಾಳ ಇದಾಗಿದೆ.

ಭಾರತದ ಪರಿಸರ ರಕ್ಷಣೆ ಕುರಿತ ಕಾನೂನಿನ ಪರಿಕಲ್ಪನೆಗೆ  1970ರ ದಶಕದಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಂತರ ಮಾಧವ ಗಾಡ್ಗೀಳ್ ನೀಡಿದ ಶಿಫಾರಸ್ಸು ಮತ್ತು ವರದಿಯನ್ನು ಆಧರಿಸಿ 1986 ರಲ್ಲಿ ಪರಿಸರ ರಕ್ಷಣೆ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತರಲಾಯಿತು. ಈವರೆಗೆ ಇದು ಕೇವಲ ತೋರಿಕೆಯ ಕಾನೂನು ಎಂಬುದಕ್ಕೆ, ಲಾವಸ  ದ್ವೀಪನಗರ  ಎಂಬ ಉಳ್ಳವರ ವಿಲಾಸದ ಮೋಜಿನ ತಾಣ ನಮ್ಮೆದುರು ಸಾಕ್ಷಿಯಾಗಿದೆ.
ಪ್ರೊ. ಮಾಧವ ಗಾಡ್ಗಿಳ್ ಅವರ ಪರಿಸರ ಮತ್ತು ಜೀವ ವೈವಧ್ಯತೆಗಳ ಕಾಳಜಿಯನ್ನು ಮತ್ತು ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಅವರು ತಮ್ಮ ಸುಧೀರ್ಘ ಅರ್ಧಶತಮಾನವನ್ನು ಪಶ್ಚಿಮ ಘಟ್ಟದ ಜೀವಜಾಲದ ಅಧ್ಯಯನ ಮತ್ತು ರಕ್ಷಣೆಗಾಗಿ ತಮ್ಮ ಜೀವವನ್ನು ಸೆವೆಸಿದ್ದಾರೆ. ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿ ಪುಟದಲ್ಲೂ, ಪ್ರತಿ ಅಕ್ಷರದಲ್ಲೂ  ಪಶ್ಚಿಮಘಟ್ಟದ ಗರಿಕೆ ಹುಲ್ಲಿನಿಂದ ಹಿಡಿದು ಎಲ್ಲಾ ಜೀವರಾಶಿ ಮತ್ತು ಸಸ್ಯರಾಶಿಯ ಮೇಲಿನ ಅವರ ಪ್ರೀತಿ ವ್ಯಕ್ತವಾಗುತ್ತದೆ. ಅವರು ತಮ್ಮ ಜೀವಿತದ ಉದ್ದಕ್ಕೂ ಪಶ್ಚಿಮಘಟ್ಟದ ಹಸಿರನ್ನು, ನದಿಗಳನ್ನು, ಕಡಲ ಕಿನಾರೆಯನ್ನು,ದುಮ್ಮುಕ್ಕುವ ಜಲಪಾತಗಳನ್ನು ,ಪಕ್ಷಿ ಮತ್ತು ಪ್ರಾಣಿ ಸಂಕುಲವನ್ನು ತಮ್ಮ ಉಸಿರಿನಂತೆ ಕಾಪಾಡಿಕೊಂಡವರು. ಅವರಿಗೆ ಪಶ್ಚಿಮ ಘಟ್ಟವೆಂದರೆ, ಒಂದು  ಧ್ಯಾನ ಮತ್ತು ಅದೊಂದು  ವ್ಯಸನ ಎಂಬಂತಾಗಿದೆ. ಅವರ ಈ ಕಾಳಜಿಯನ್ನು ಅವರ ವರದಿಯಲ್ಲಿ ಕಾಣಬಹುದು. ಅವರ ಪ್ರಕೃತಿ  ಮೇಲಿನ ಈ ಪ್ರೀತಿಯಿಂದಾಗಿ ಗಾಡ್ಗೀಳ್ ರವರ ವರದಿ, ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ನುಂಗಲಾರದ, ಉಗುಳಲಾರದ ಬಿಸಿತುಪ್ಪವಾಯಿತು. ಈ ಕಾರಣಕ್ಕಾಗಿ ಪ್ರತಿ ರಾಜ್ಯದಲ್ಲಿಯೂ ಕೂಡ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ವರದಿಯ ಕೆಲವು ಆಯ್ದ ಭಾಗಗಳನ್ನು ಸ್ಥಳಿಯ ಭಾಷೆಗೆ ಅನುವಾದಿಸಿಕೊಂಡು ವರದಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿ ಮಾಡಿದರು. ಇವರ ಹಿಂದೆ ಬಿಲ್ಡರ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರುಗಳು, ಕೈಗಾರಿಕೋದ್ಯಮಿಗಳು, ಹಾಗೂ ಗಣಿ ಮಾಫಿಯ ಹೀಗೆ ಎಲ್ಲಾ ದುಷ್ಟಶಕ್ತಿಗಳು ಕೈ ಜೋಡಿಸಿದ್ದವು.
ಗಾಡ್ಗೀಳ್ ನೇತೃತ್ವದ ತಜ್ಞರ ವರದಿ ಪಶ್ಚಿಮಘಟ್ಟದ ಉದ್ದ, ಅಗಲ, ವಿಸ್ತೀರ್ಣ ಕುರಿತಂತೆ ಕರಾರುವಕ್ಕಾದ ಅಂಶಗಳನ್ನು ಒಳಗೊಂಡಿದೆ. ಗುಜರಾತ್- ಮಹಾರಾಷ್ಟ್ರದ ತಾಪಿ ಕಣಿವೆಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ 1490 ಕಿಲೋಮೀಟರ್ ಉದ್ದವಿದೆ ಎಂದು ತಿಳಿಸಿರುವ ವರದಿ, ಕೆಲವೆಡೆ 210 ಕಿ.ಮಿ.ಅಗಲವಿರುವ ಪಶ್ಚಿಘಟ್ಟ, ಮತ್ತೆ ಕೆಲವು ಸ್ಥಳಗಳಲ್ಲಿ ಕೇವಲ 48 ಕಿ.ಮಿ. ಅಗಲವಿರುವ ಅಂಶವನ್ನು ಸಹ ಗುರುತಿಸಲಾಗಿದೆ. ಈ ವರದಿಯ ಮತ್ತೊಂದು ವೈಶಿಷ್ಟವೆಂದರೆ, ಮಹಾರಾಷ್ಟ್ರದ ಸಿಂಧು ದುರ್ಗದ ಬಳಿಯ ಕಡಲತೀರವನ್ನು ಸಹ ಸೂಕ್ಷ್ಮ ಜೀವಿಗಳ ತಾಣವೆಂದು ಗುರುತಿಸಿ, ಪಶ್ಚಿಮಘಟ್ಟಕ್ಕೆ ಸೇರಿಸಲಾಗಿದೆ.
ವರದಿಯಲ್ಲಿ ಎರಡು ಭಾಗಗಳಿದ್ದು, ಪಶ್ಚಿಮ ಘಟ್ಟದಲ್ಲಿ ಆಗಿರುವ ಅನಾಹುತ ಹಾಗೂ ಕೈಗೊಳ್ಳಬೇಕಾದ ಕಠಿಣ ನಿಲುವುಗಳ ಬಗ್ಗೆ ಚರ್ಚಿಸಲಾಗಿದೆ.
ವರದಿಯಲ್ಲಿ ಪಶ್ಚಿಮ ಘಟ್ಟದ ಪ್ರದೇಶವನ್ನು ಅತಿ ಸೂಕ್ಷ್ಮ ಜೀವಿಗಳ ವಲಯ, ಸೂಕ್ಷ್ಮ ಜೀವಿಗಳ ವಲಯ ಮತ್ತು ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯ ಎಂದು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ಕರ್ನಾಟಕದ 11 ಜಿಲ್ಲೆಗಳ 26 ಸ್ಥಳಗಳನ್ನು ಅತಿ ಸೂಕ್ಷ್ಮ ಮತ್ತು 5 ಸ್ಥಳಗಳನ್ನು ಸೂಕ್ಷ್ಮ ಹಾಗೂ 12 ತಾಣಗಳನ್ನು ಸಾಮಾನ್ಯ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.
ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತ 25 ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ , ಕುಲಾಂತರಿ ತಳಿಗಳ ಬೆಳೆ, ಕೈಗಾರಿಕೆ, ಪ್ರವಾಸೋದ್ಯಮ, ಗಣಿಗಾರಿಕೆ ಸೇರಿದಂತೆ ಮಾನವ ನಿರ್ಮಿತ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಸೂಕ್ಷ್ಮ ವಲಯದ ತಾಣಗಳ ಸುತ್ತ ಮುತ್ತ, ಈಗಾಗಲೇ ಪರವಾನಗಿ ನೀಡಿರುವ ಎಲ್ಲಾ ವಿಧವಾದ ಚಟುವಟಿಕೆಗಳ ಪರವಾನಗಿಯನ್ನು ಮತ್ತೇ ನವೀಕರಿಸಬಾರದು ಎಂದು ತಿಳಿಸಿದೆ.
ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯದಲ್ಲಿ ತೀವ್ರ ನಿಗಾ ಇಡುವುದರ ಮೂಲಕ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದ್ದರೂ, ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನು ಖಾಸಾಗಿ ಕಂಪನಿಗಳಿಗೆ ಅಥವಾ ವ್ಯಕ್ತಿಗಳಿಗೆ ಹಸ್ತಾಂತರಿಸಬಾರದು ಎಂದು ಹೇಳಿದೆ. ಅಲ್ಲದೆ, ಗಿರಿಧಾಮಗಳ ಸೃಷ್ಟಿಗೆ ಅಥವಾ ಅಭಿವೃದ್ಧಿಗೆ ಅವಕಾಶ ನೀಡದೆ, ಪಶ್ಚಿಮ ಘಟ್ಟದ ಎಲ್ಲಾ ಸ್ಥಳಗಳಲ್ಲಿ ಪ್ಲಾಸ್ಷಿಕ್ ಚೀಲಗಳ ಬಳಕೆಗೆ ನಿಷೇಧ ಹೇರಬೇಕೆಂದು ತಿಳಿಸಲಾಗಿದೆ. ಇಂತಹ ಕಠಿಣವಾದ ಷರತ್ತುಗಳೇ ಅಂತಿಮವಾಗಿ  ಮಾಧವ ಗಾಡ್ಗೀಳ್ ವರದಿಯ ಮೇಲೆ  ಅಧಿಕಾರಸ್ಥರು ಕೆಂಗೆಣ್ಣು ಬೀರಲು ಕಾರಣವಾಯಿತು.
ಈ ಕಾರಣಕ್ಕಾಗಿಯೇ ಗಾಡ್ಗೀಳ್ ನೇತೃತ್ವದ ತಜ್ಞರ ವರದಿಯಲ್ಲಿ ಪಶ್ಚಿಮಘ್ಟದ ರೈತರ ಬಗ್ಗೆ, ಅಲ್ಲಿನ ಬುಡಕಟ್ಟುನಿವಾಸಿಗಳ ಬಗ್ಗೆ ಪ್ರಸ್ತಾಪವಿಲ್ಲ ಎಂದು ಗುಲ್ಲೆಬ್ಬಿಸಲಾಯಿತು. ಈ ರೀತಿ ಅಪಪ್ರಚಾರ ನಡೆಸಿದವರು ವರದಿಯನ್ನು ಓದಿಲ್ಲವೆಂಬುದು ಅವರ ವ್ಯವಸ್ಥಿತ ಪ್ರಚಾರದಲ್ಲಿ ಅರ್ಥವಾಗಿಬಿಡುತ್ತದೆ. ಗಾಡ್ಗೀಳ್ ಮತ್ತು ಅವರ ಸಹ ಸದಸ್ಯರು ( ಈ ತಂಡದಲ್ಲಿ ವಿಜ್ಞಾನಿ, ಹಾಗೂ ಕನ್ನಡದ ಲೇಖಕ ಡಾ.ಕೆ.ಎನ್. ಗಣೇಶಯ್ಯ ಕೂಡ ಇದ್ದಾರೆ)ವರದಿಯ ಪುಟ 15 ರಲ್ಲಿ ಬುಡಕಟ್ಟು ಜನಾಂಗದ ಸುಸ್ಥಿರ ಅಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದಕ್ಕೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಬದುಕನ್ನು ಉದಾಹರಣೆಯಾಗಿ ಕೊಡುತ್ತಾರೆ. ಒಂದು ಕಾಲದಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಸೋಲಿಗರು ಈಗ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವುದು, ತಾವೇ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದನ್ನು ವಿವರಿಸಿದ್ದಾರೆ. ಬೇಸಿಗೆಯ ಕಾಲದಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದ ಲಂಟಾನ ಗಿಡಗಳನ್ನು ತೆರವುಗೊಳಿಸಿ, ಕಾಡ್ಗಿಚ್ಚನ್ನು ನಿಯಂತ್ರಿಸಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸೋಲಿಗರ ಅಭಿವೃದ್ಧಿಯ ಹಿಂದೆ ಇರುವ ಡಾ.ಸುದರ್ಶನ್  ಅವರ ವಿವೇಕಾನಂದ ಗಿರಿಜನ ಅಭಿವೃದ್ಧಿ ಕೇಂದ್ರ ಕುರಿತು ಪ್ರಶಂಸಿಸಲಾಗಿದೆ.

ಅದೇ ರೀತಿ ವರದಿಯ ಎರಡನೇ ಭಾಗದ ಪುಟ 13 ರಲ್ಲಿ ಮಹಾಬಲೇಶ್ವರ ಗಿರಿಧಾಮದ ತಪ್ಪಲಲ್ಲಿ ಇರುವ ರೈತರ ಕುರಿತು ಪ್ರಸ್ತಾಪಿಸಲಾಗಿದೆ. ಕಳೆದ 60 ವರ್ಷಗಳಿಂದ ಕೇವಲ ತಲಾ ಎರಡು ಎಕರೆ ಭೂಮಿಯಲ್ಲಿ ಜೀವಿಸುತ್ತಿರುವ ರೈತರು ಇತ್ತೀಚೆಗಿನ ಪ್ರವಾಸೋದ್ಯಮದ ಚಟುವಟಿಕೆಯಿಮದಾಗಿ ಬಸವಳಿದಿರುವುದನ್ನು ವಿವರವಾಗಿ ದಾಖಲಿಸಿದ್ದಾರೆ.ಅಲ್ಲಿನ  ಕೃಷಿ ಭೂಮಿ ಉದ್ಯಮಿಗಳ ಪಾಲಾಗುತ್ತಿರುವ ಹಿಂದೆ ಸರ್ಕಾರಿ ಅಧಿಕಾರಿಗಳ ಪಾಲುದಾರಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ, ಸದಾಶಿವಗಡ, ಸಾವಂತವಾಡಿ, ಸಿಂಧೂದುರ್ಗ, ರತ್ನಗಿರಿ ಜಿಲ್ಲೆಗಳ ಪ್ರದೇಶದಲ್ಲಿ ರೈತರಿಗೆ ಆಧಾರವಾಗಿದ್ದ ಜಲಮೂಲ ತಾಣಗಳು ಅದಿರಿನಿ ದೂಳಿನಿಂದ ರಾಡಿಯಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ವರದಿಯ ಸತ್ಯಾ ಸತ್ಯತೆಯನ್ನು ಅರಿಯಲು ನಾವು ಒಮ್ಮೆ ಗೋವಾದಿಂದ ಮುಂಬೈಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಂತವಾಡಿಯಿಂದ ಕರಾಡ್ ವರೆಗೆ ಪ್ರಯಾಣಿಸಿದರೆ ಸಾಕು ಮನದಟ್ಟಾಗುತ್ತದೆ. ಗಣಿಗಾರಿಕೆಯ ಫಲವಾಗಿ ಇಲ್ಲಿ ಹರಿಯುತ್ತಿರುವುದು ನೀರಿನ ಹೊಳೆಯೊ? ಅಥವಾ ನೆತ್ತರಿನ ಹೊಳೆಯೊ ? ಎಂಬ ಗೊಂದಲಕ್ಕೆ ಬೀಳುವಷ್ಟರ ಮಟ್ಟಿಗೆ  ನದಿಗಳ ನೀರು ಕಲ್ಮಶಗೊಂಡು ಕೆಂಪು ಬಣ್ಣದ ರಾಡಿಯಾಗಿ ಹರಿಯುತ್ತಿದೆ.
ಇನ್ನು ಗಾಡ್ಗೀಳ್ ರ ವರದಿಗೆ ಪ್ರತಿಯಾಗಿ ಕೆ.ಕಸ್ತೂರಿ ರಂಗನ್ ನೇತೃತ್ವದ ತಜ್ಞರ ವರದಿಯಲ್ಲಿ ಅಂತಹ ಭಿನ್ನವಾದ ಅಂಶಗಳಿಲ್ಲ. ಗಾಡ್ಗೀಳರ ವರದಿಯನ್ನು ಕಸ್ತೂರಿ ರಂಗನ್ ವರದಿ ಬಹುತೇಕ ಅನುಮೋದಿಸುತ್ತದೆ. ಎರಡು ವಿಷಯಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸುತ್ತದೆ. ಗಾಡ್ಗೀಳ್ ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತಾ 25 ಸಾವಿರ ಚದುರ ಕಿ.ಮಿ. ಪ್ರದೇಶದ ಸುತ್ತ ಮುತ್ತ ಚಟುವಟಿಕೆಗಳಿಗೆ ನಿಷೇಧ ಹೇರಲು ಶಿಪಾರಸ್ಸು ಮಾಡಿದ್ದರು. ಆದರೆ, ಕಸ್ರೂರಿ ರಂಗನ್ ಈ ವ್ಯಾಪ್ತಿಯನ್ನು 10ರಿಂದ 13 ಸಾವಿರ ಚದುರ ಕಿ.ಮಿ.ಗೆ ಇಳಿಸಲು ಶಿಪಾರಸ್ಸು ಮಾಡಿದ್ದಾರೆ.

ಎರಡನೇಯದಾಗಿ ಒಂದು ಹಳ್ಳಿಯ ಪ್ರದೇಶ ಅತಿಸೂಕ್ಷ್ಮಜೀವಿಗಳ ವಲಯ ಎಂದು ಕಂಡು ಬಂದಲ್ಲಿ ಇಡೀ ತಾಲ್ಲೂಕನ್ನು ಸೂಕ್ಮ ಪ್ರದೇಶವೆಂದು ಗುರುತಿಸಲು ಗಾಡ್ಗೀಳ್ ಒತ್ತಾಯಿಸಿದ್ದರು. ಆದರೆ, ಕಸ್ತೂರಿ ರಂಗನ್ ಈ ನಿಯಮವನ್ನು ಸಡಿಲಿಸಿ, ಕೇವಲ ಗ್ರಾಮವನ್ನು ಒಂದು ಘಟಕವೆಂದು ಪರಿಗಣಿಸಿ ಉಳಿದ ಪ್ರದೇಶವನ್ನು ಮುಕ್ತಗೊಳಿಸಲು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. ಕಸ್ತೂರಿ ರಂಗನ್ ಅವರ ಈ ನಿರ್ಣಯ ಅತ್ಯಂತ ಅಪಾಯಕಾರಿಯಾದುದು. ಹಳ್ಳಿಯನ್ನು ಹೊರತುಪಡಿಸಿ ಅದರ ಸುತ್ತಾ ಕೈಗಾರಿಕೆ ಚಟುವಟಿಕೆ ಆರಂಭವಾದರೆ, ಸೂಕ್ಷ್ಮ ಜೀವಿಗಳು ಉಳಿಯಬಲ್ಲವೆ? ಈ ಕಾರಣಕ್ಕಾಗಿ ಕಸ್ತೂರಿ ರಂಗನ್ ವರದಿ ಪರಿಸರ ತಜ್ಞರಲ್ಲಿ ಮತ್ತು ಪರಿಸರವಾದಿಗಳಲ್ಲಿ ಆತಂಕ ಹುಟ್ಟಿಸಿದೆ. ಉಪಗ್ರಹ ಚಿತ್ರಗಳ ಮೂಲಕ ಪಶ್ಚಿಮ ಘಟ್ಟದ ಪರಿಸ್ಥಿತಿಯನ್ನು ಅರಿಯಲು ಸಾಧ್ಯವೆ? ಇದು ಎಲ್ಲರ ಪ್ರಶ್ನೆ. ಕಸ್ತೂರಿ ರಂಗನ್ ರವರ ಈ ಶಿಫಾರಸ್ಸಿನಿಂದಾಗಿ ಎಲ್ಲಾ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಏಜೆಂಟರು ಪಶ್ಚಿಮಘಟ್ಟಕ್ಕೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಸ್ಥಗಿತಗೊಂಡಿದ್ದ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮರು ಜೀವ ಸಿಗಲಿದೆ. 113 ಹೆಕ್ಟೇರ್ ಅರಣ್ಯ ಹಾಗೂ 263 ಹೆಕ್ಟೇರ್ ಕಂದಾಯ ಭೂಮಿಯನ್ನು ನುಂಗುವ ಯೋಜನೆಗೆ ಗಾಡ್ಗೀಳ್ ವರದಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ 2010 ರ ಜೂನ್ ತಿಂಗಳಲ್ಲಿ ಅನುಮತಿಯನ್ನು ನಿರಾಕರಿಸಲಾಗಿತ್ತು.
ಒಟ್ಟಾರೆ, ಕಸ್ತೂರಿ ರಂಗನ್ ರವರ ವರದಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಓಲೈಸುವ  ಅಂಶಗಳಿರುವುದನ್ನು ತಳ್ಳಿ ಹಾಕುವಂತಿಲ್ಲ. ಇಲ್ಲಿ ಎರಡು ವರದಿಗಳನ್ನು ತುಲನೆ ಮಾಡುವುದರ ಜೊತೆ ಜೊತೆಗೆ ನಮ್ಮ ನಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಈ ನೆಲದ ಜಲದ  ಅಥವಾ ಪರಿಸರದ ರಕ್ಷಣೆಗೆ ಯಾವ ತಜ್ಞರ ವರದಿ ಅಥವಾ ಅಧ್ಯಯನದ ಅವಶ್ಯಕತೆ ಇಲ್ಲದ ಹಾಗೆ ನಾವು ಬದುಕುವ ಪರಿಸರ ಮತ್ತು ಜೀವ ಜಾಲವನ್ನು ರಕ್ಷಿಸಿಕೊಳ್ಳುವ ಸಾರ್ವಭೌಮ ಹಕ್ಕನ್ನು ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ದಯಪಾಲಿಸಿದೆ. ಇದನ್ನು ಪರಿಣಾಮಕಾರಿಕಾಗಿ ಬಳಸಿದ ಕೇರಳದ ಜನತೆ ನಮಗೆ ಮಾದರಿಯಾಗಿದ್ದರೆ.
ಭಾರತ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಯ ಭಾಗಗಳು ಹಳ್ಳಿಗಳ ಗ್ರಾಮ ಪಂಚಾಯಿತಿ ಅಥವಾ ಗ್ರಾಮಸಭಾಗಳಂತಹ ಸ್ಥಳಿಯ ಸಂಸ್ಥೆಗಳಿಗೆ, ಸಂಪನ್ಮೂಲಗಳನ್ನು ಕ್ರೂಡೀಕರಿಸಿಕೊಳ್ಳುವ, ಆಸ್ತಿಗಳನ್ನು ರಕ್ಷಿಸಿಕೊಳ್ಳುವ, ಅಧಿಕಾರದ ಹಕ್ಕನ್ನು ನೀಡಿವೆ. ಈ ಹಕ್ಕನ್ನು ಬಳಸಿಕೊಂಡು, ಕೇರಳದ ಉತ್ತರ ಭಾಗದ ಪಟ್ಟುವಂ ಎಂಬ ಹಳ್ಳಿ ಗ್ರಾಮ ಪಂಚಾಯಿತಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ತನ್ನ ಜೈವಿಕ ಹಾಗೂ ಪಾಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿ ಈ ಕೆಳಗಿನಂತೆ ಐತಿಹಾಸಿಕ ನಿರ್ಣಯವೊಂದನ್ನು ತೆಗೆದುಕೊಂಡಿತು.
“ ಈ ಪಂಚಾಯಿತಿಯ ನಿವಾಸಿಗಳಾದ ನಾವು ಈ ಮೂಲಕ ಘೋಷಿಸುವುದೇನೆಂದರೆ, ನಮ್ಮ ಪಂಚಾಯಿತಿಯ ಭೌಗೂಳಿಕ ವ್ಯಾಪ್ತಿಯಲ್ಲಿ ಬರುವ,  ಜನತೆಗೆ ತಿಳಿದಿರುವ, ತಿಳಿಯದಿರುವ  ಅಥವಾ ಹೆಸರಿಸಿರುವ,  ಹೆಸರಿಸದಿರುವ  ಎಲ್ಲಾ ರೀತೀಯ ಜೀವ ಪ್ರಭೇಧಗಳು, ಸಸ್ಯ ಪ್ರಭೇಧಗಳು, ನೆಲ, ಜಲ, ಮತ್ತು ಪಾಕೃತಿಕ ಸಂಪತ್ತಿನ ಮೇಲೆ ಪಂಚಾಯಿತಿಯ ಪೂರ್ವ ಅನುಮತಿಯಿಲ್ಲದೆ, ಹಕ್ಕು ಸ್ಥಾಪಿಸುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಮುಂದೆ ನಮ್ಮ ಗಮನಕ್ಕೆ ಭಾರದ ಹಾಗೆ ಸ್ಥಾಪಿಸುವ ಅಥವಾ ಸ್ಥಾಪಿಸಬಹುದಾದ ಅಧಿಕಾರಕ್ಕೆ ನಮ್ಮ ಸಮ್ಮತಿಯಿಲ್ಲ.. ಅಂತಹ ಹಕ್ಕುಗಳನ್ನು ನಾವು ಮಾನ್ಯತೆ ಮಾಡುವುದಿಲ್ಲ.”
ಈ ನಿರ್ಣಯದ ವಿರುದ್ಧ ತನ್ನ ತಂಪು ಪಾನೀಯ ಘಟಕಕ್ಕೆ ಕೊಳವೆ ಬಾವಿ ತೆಗೆಯಲು ನೀರಾಕರಿಸಿಕೊಂಡ ಕೋಕಕೋಲಾ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಛೀಮಾರಿ ಕಾಕಿಸಿಕೊಂಡು ಬಂದಿವೆ. ಈಗ ಒರಿಸ್ಸಾದ ನಿಯಮಗಿರಿ ಪರ್ವತ ಶ್ರೇಣಿಯಲ್ಲಿ ಬಾಕ್ಷೈಟ್ ಅದಿರು ಗಣಿಗಾರಿಕೆಗೆ ಮುಂದಾಗಿದ್ದ  ಇಂಗ್ಲೆಂಡ್ ಮೂಲದ ವೇದಾಂತ ಕಂಪನಿಯನ್ನು ಅಲ್ಲಿನ ಜನ ಇಂತಹದ್ದೇ ನಿರ್ಣಯದ ಮೂಲಕ ಓಡಿಸಿದ್ದಾರೆ.
ಸರ್ಕಾರಗಳ ದ್ವಂದ್ವ ನೀತಿಯಿಂದ ಬೇಸತ್ತು ಹೋಗಿರುವ ಪರಿಸರ ತಜ್ಞ ಮಾಧವ ಗಾಡ್ಗೀಳರು ಈ ಅಸ್ತ್ರವನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಸ್ಥಳಿಯ ಜನತೆಯ ಮೂಲಕ ಬಳಸಲು ಮುಂದಾಗಿದ್ದಾರೆ. ಈಗಾಗಲೇ ಗೋವಾ ರಾಜ್ಯದಲ್ಲಿ ಅನೇಕ ಗ್ರಾಮಪಂಚಾಯಿತಿಗಳು, ತಮ್ಮ ನೆಲ-ಜಲ ವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹದ್ದೇ ನಿರ್ಣಯ ಕೈಗೊಂಡಿದ್ದಾರೆ. ಜೊತೆಗೆ “ಗೋವಾ ವಿಷನ್ 2021” ಎಂಬ ಯೋಜನೆ ರೂಪಿಸಿದ್ದಾರೆ.ಎಂಬ  ಇಂತಹ ಪ್ರಜ್ಞೆ ಎಲ್ಲೆಡೆ ಆವರಿಸಿದಾಗ ಮಾತ್ರ ಪಶ್ಚಿಮ ಘಟ್ಟ ಉಳಿಯಬಲ್ಲದು.
                                           (ಮುಗಿಯಿತು)

1 comment:

  1. ಸರಕಾರಕ್ಕೆ ತನಗೆ ಇಷ್ಟ ಬಂದ ರೀತಿಯಲ್ಲಿ ಯಾರದರು ವರದಿ ನೀಡದೆ ಇದ್ದಾರೆ ಆ ವರದಿಯನ್ನು ತಿರಸ್ಕರಿಸಿ ತನಗೆ ಬೇಕಾದವರು ಬೇಕಾದ ಹಾಗೆ ವರದಿ ಕೊಡಲು ಸಮಿತಿಯನ್ನು ಮಾಡುತ್ತದೆ. ಅಂದ ಹಾಗೆ ಈ ಕಸ್ತೂರಿ ರಂಗನ ಅವರು "space scientist" ಅವರು ecology ಬಗ್ಗೆ ವರದಿ ಕೊಡಲು ಯಾವ ಅರ್ಹತೆ ಹೊಂದಿದ್ದರೋ ಆ ದೇವರೇ ಬಲ್ಲ ..

    ReplyDelete