ಶನಿವಾರ, ಮೇ 4, 2013

ಪಶ್ಚಿಮಘಟ್ಟದ ಕಥೆ-ವ್ಯಥೆ-2 ( ಕರ್ನಾಟಕದ ಕರಾಳ ಇತಿಹಾಸ)

ಅಭಿವೃದ್ದಿಯ ವಾಖ್ಯಾನಗಳು ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗಬಲ್ಲವು ಎಂಬುದಕ್ಕೆ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕಿನ  ಅಧ್ಯಕ್ಷ ತಕಿಹಿಕೊ ನಕಾವೊ ಅವರು, ಮೂರು ದಿನಗಳ ಹಿಂದೆ ನವದೆಹಲಿಯಲ್ಲಿ ಆಡಿದ ಮಾತುಗಳು ಇವು “ಏಷ್ಯಾದ ರಾಷ್ಟ್ರಗಳಲ್ಲಿ ಬಡತನದ ರೇಖೆಯ ಕೆಳಗೆ ಬದುಕುತ್ತಿರುವ ಸುಮಾರು 80 ಕೋಟಿ ಜನರ ಬಡತನದ ನಿವಾರಣೆಗೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದೊಂದೇ ದಾರಿ” ಇದು ಅವರ ಮನದಾಳದ ಮಾತು. ಅಂದರೆ, ರಾಷ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವುದು, ಬೃಹತ್ ಸೇತುವೆ, ಮತ್ತು ಬಂದರು, ಹಾಗು ರೈಲ್ವೆ ಮಾರ್ಗ ನಿರ್ಮಿಸುವುದರ ಮೂಲಕ ಬಡತನದ ನಿವಾರಣೆಗೆ ಹೊಸ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಏಷ್ಯಾ ರಾಷ್ಟ್ರಗಳಿಗೆ ಒಳಚರಂಡಿ, ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಇವುಗಳಿಗೆ ಸಾಲ ನೀಡುವುದನ್ನು ವೃತ್ತಿಯಾಗಿಸಿಕೊಂಡ  ಬ್ಯಾಂಕೊಂದರ ಅಧ್ಯಕ್ಷನಿಂದ ಬಡತನ ಕುರಿತಂತೆ ಇನ್ನೆನು  ನಿರೀಕ್ಷಿಸಲು ಸಾದ್ಯ?

ಜನಸಾಮಾನ್ಯರಿಗೆ ನಿಲುಕಲಾರದ ಆರೋಗ್ಯ, ಶಿಕ್ಷಣ, ವಸತಿ, ಪೂರ್ಣಪ್ರಮಾಣದ ಉದ್ಯೋಗ ಮುಂತಾದ ಜನಕಲ್ಯಾಣ ಸೇವೆ, ಹಾಗೂ  ಕೈಗೆಟುಕದೆ, ಗಗನಕ್ಕೇರುತ್ತಿರು ಅಗತ್ಯ ವಸ್ತುಗಳ ಬೆಲೆ ಏರಿಕೆ ಇವುಗಳ ಬಗ್ಗೆ ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದ ಇಂತಹ ಮಾರವಾಡಿ ಬಡ್ಡಿ ವ್ಯಾಪರಸ್ಥರಿಂದಾಗಿಯೇ ಇಂದು  ಪಶ್ಚಿಮ ಘಟ್ಟದ ಸ್ಥಿತಿ ಅಧೋಗತಿಗೆ ನೂಕಲ್ಪಟ್ಟಿದೆ.
ಪಶ್ಚಿಮ ಘಟ್ಟ ಹರಡಿರುವ ಐದು ರಾಜ್ಯಗಳಲ್ಲಿ ಕೇರಳ ಮತ್ತು ತಮಿಳು ನಾಡನ್ನು ಹೊರತು ಪಡಿಸಿದರೆ, ಉಳಿದ ಮಹಾರಾಷ್ಟ್ರ, ಗೋವಾ,ಮತ್ತು ಕರ್ನಾಟಕ  ರಾಜ್ಯಗಳು ಅಭಿವೃದ್ಧಿಯ ನೆಪದಲ್ಲಿ ಪಶ್ಚಿಮಘಟ್ಟದ ಮೇಲೆ ನೇರ ದಾಳಿ ಇಟ್ಟಿವೆ.ಇದರಲ್ಲಿ ನಮ್ಮ ಕರ್ನಾಟಕದ ಸ್ಥಾನ ಮೂರನೇಯದು. ಬೆಳಗಾವಿ ಜಲ್ಲೆಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಮತ್ತು ಉತ್ತರ ಕನ್ನಡದ ಗಿರಿಶ್ರೇಣಿ ಮತ್ತು ಕಣಿವೆ ಪ್ರದೇಶದಲ್ಲಿದ್ದ ಅಪರೂಪ ಔಷಧೀಯ ಗಿಡಮೂಲಿಕೆಗಳನ್ನು ಬುಡಸಮೇತ ಕಿತ್ತು, ಮುಂಬೈ ನಗರಕ್ಕೆ ಮಾರಾಟ ಮಾಡುವ ಜಾಲವೊಂದು ತಲೆಯೆತ್ತಿ ನಿಂತಿದೆ. ಅತ್ಯಮೂಲ್ಯ ಗಿಡಮೂಲಿಕೆಗಳ ದರೋಡೆಗೆ ಕರ್ನಾಟಕದ ಇಡೀ ವ್ಯವಸ್ಥೆ  ಕಣ್ಮುಚ್ಚಿ ಕುಳಿತಿದೆ. ಇಂತಹದ್ದೇ ದರೋಡೆ ಕೇರಳದ ವೈನಾಡು ಪ್ರದೇಶ, ಇಡುಕ್ಕಿ ಜಿಲ್ಲೆಯ ಮೌನ ಕಣಿವೆ, ಮತ್ತು ತಮಿಳುನಾಡಿನ  ಈರೋಡು ಜಿಲ್ಲೆಯ ಆರಣ್ಯ ಪ್ರದೇಶ ಹಾಗೂ ನಾಗರಕೋಯಿಲ್ – ತಿರುವನಂತಪುರದ ಗಡಿಭಾಗದ ಅರಣ್ಯದಲ್ಲಿ ಸಹ ನಿರಂತರವಾಗಿ ಸಾಗಿದೆ.

ಕರ್ನಾಟಕದಲ್ಲಿ 80 ರ ದಶಕದಲ್ಲಿ ಅರಂಭವಾದ ಕುದುರೆ ಮುಖ ಗಣಿಗಾರಿಕೆಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. “ತುಂಗಾ ಮೂಲ ಉಳಿಸಿ” ಎಂಬ ಚಳುವಳಿ ಮಲೆನಾಡಿನಲ್ಲಿ ಅರಂಭಗೊಂಡಿತ್ತು. ಪಾಂಡುರಂಗ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಅನಂತ ಹೆಗ್ಡೆ ಆಶಿಸಿರ ಮುಂತಾದವರು  ನಡೆಸಿದ ನಿರಂತರ ಚಳವಳಿಯ ನಡುವೆಯೂ ಸಹ ಏನನ್ನೂ ಲೆಕ್ಕಿಸಿದ ಕೇಂದ್ರ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿತು. ಇದರಿಂದಾಗಿ ಕುದುರೆ ಮುಖದ ಗುಡ್ಡಗಳು ಕರಗುವುದರ ಜೊತೆಗೆ ಕೋಟ್ಯಾಂತರ ಟನ್ ಅದಿರಿನ ದೂಳು ತುಂಗೆಯ ಒಡಲು ಸೇರಿತು.

ಇಂದು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ  ಸುಮಾರು 3.500 ಮೆಗಾವ್ಯಾಟ್ ವಿದ್ಯುತ್ ನಲ್ಲಿ 3000  ಮೆ.ವ್ಯಾ. ವಿದ್ಯುತ್ ಪಶ್ಚಿಮ ಘಟ್ಟದ  ಒಡಲಲ್ಲಿರುವ ಜಲಾಶಯಗಳಿಂದ ಉತ್ಪತ್ತಿಯಾಗುತ್ತಿದೆ. ಇಡೀ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ 50 ಜಲಾಶಯಗಳಲ್ಲಿ ಕರ್ನಾಟಕದ ಲಿಂಗನಮಕ್ಕಿ, ಭದ್ರಾ, ನಾಗಜರಿ, ಕದ್ರ, ಕೊಡಸಳ್ಳಿ, ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇವುಗಳ ಜೊತೆಗೆ ಯಾವ ಕ್ಷಣದಲ್ಲಾದರೂ ಸಿಡಿಯಬಹುದಾದ ನೆಲಬಾಂಬ್ ನಂತೆ ಕಾರವಾರ ಸಮೀಪದ ಕೈಗಾ ಬಳಿ ಅಣು ವಿದ್ಯುತ್ ರಿಯಾಕ್ಷರ್ ನಲ್ಲೂ ಸಹ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಆರಂಭದಲ್ಲಿ 730 ಕೋಟಿ ಎಂದು ಅಂದಾಜಿಸಲಾಗಿದ್ದ ಕೈಗಾ ಅಣುಸ್ಥಾವರದ ನಾಲ್ಕು ವಿದ್ತುತ್ ಘಟಕಗಳಿಗೆ ಈವರೆಗೆ ಆಗಿರುವ ವೆಚ್ಚ 2750 ಕೋಟಿ ರೂಪಾಯಿಗಳು. ಇದರಲ್ಲಿ ನಿರ್ಮಾಣದ ಹಂತದಲ್ಲಿ ಕುಸಿದು ಬಿದ್ದ ಗೋಪುರದಿಂದ ಆದ 15ಕೋಟಿ ವೆಚ್ಚವೂ ಸೇರಿದೆ. ಕೈಗಾ ಸ್ಥಾವರಕ್ಕಾಗಿ 700 ಎಕರೆ ಪಶ್ಚಿಘಟ್ಟದ ಕಾಡನ್ನು ನೆಲಸಮ ಮಾಡಲಾಯಿತು. ಇದರ ಜೊತೆಗೆ ಗೋವಾ ದಿಂದ ಕೈಗಾ ವರೆಗೆ ತಜ್ಞರು ಬಂದು ಹೋಗುವುದಕ್ಕಾಗಿ ನಿರ್ಮಿಸಿದ 150ಕಿ.ಮಿ.ದೂರದ ರಸ್ತೆ, ಹಾಗೂ ಕಾರವಾರದಿಂದ ಕೈಗಾವರೆಗೆ ನಿರ್ಮಿಸಿದ 60 ಕಿ.ಮಿ. ರಸ್ತೆಗಾಗಿ ಮತ್ತು ಇಲ್ಲಿನ ಸಿಬ್ಬಂಧಿಗಳ ವಸತಿ ಕಾಲೋನಿಗಾಗಿ ನೆಲಸಮ ಮಾಡಿದ ಅರಣ್ಯದ ಲೆಕ್ಕ ಇನ್ನೂ ಸಿಕ್ಕಿಲ್ಲ. ಇದಲ್ಲದೆ  ಕೈಗಾ ಅಣುಸ್ಥಾವರದಲ್ಲಿ ಉತ್ಪಾದಿಸಲಾಗುವ ವಿದ್ಯುತ್ ಅನ್ನು  ಶಿರಸಿ ಬಳಿ ಇರುವ ಸಂಪರ್ಕ ಜಾಲಕ್ಕೆ ಜೋಡಿಸಲಾಗಿದೆ. ಕೈಗಾ ಅಣುಸ್ಥಾವರದಿಂದ ಶಿರಸಿಯವರೆಗೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಕೆಳೆಗೆ 130 ಅಡಿ ವಿಸ್ತಿರ್ಣದಷ್ಟು ಕಾಡನ್ನು 77 ಕಿಲೋಮೀಟರ್ ಉದ್ದಕ್ಕೂ ಕಡಿಯಲಾಗಿದೆ.

ಅಣು ವಿದ್ಯುತ್ ಸ್ಥಾವರಕ್ಕೆ ಬಳಸಲಾಗುವ ಯುರೇನಿಯಂ ಅನ್ನು ಕೊಲ್ಕತ್ತದಿಂದ 220 ಕಿ.ಮಿ. ಹಾಗೂ ಜೆಮ್ ಶೆಡ್ ಪುರದಿಂದ  ಕೇವಲ 24 ಕಿ.ಮಿ.ದೂರವಿರುವ ಬಿಹಾರ ರಾಜ್ಯದ ಪೂರ್ವಸಿಂಗಭೂಮಿ ಜಿಲ್ಲೆಯ ಜಾದುಗುಡ ಎಂಬಲ್ಲಿ ತೆಗೆಯಲಾಗುತ್ತಿದ್ದು, ಈ ಕಚ್ಛಾ ಯುರೇನಿಯಂ ಅದಿರನ್ನು ಹೈದರಾಬಾದಿಗೆ ಸಾಗಿಸಿ, ನಂತರ ಅದನ್ನು ಸಂಸ್ಕರಿಸಲಾಗುತ್ತದೆ. ಬಿಲ್ಲೆ ರೂಪದ ಸಂಸ್ಕರಿತ ಯುರೇನಿಯಂ ಅದಿರು ಹೈದರಾಬಾದಿನಿಂದ ಲಾರಿಯಲ್ಲಿ ಕೈಗಾ ತಲುಪುತ್ತಿದೆ. ಇಲ್ಲಿ ವಿದ್ಯತ್ ಉತ್ಪಾದನೆಗೆ ಬಳಸಿದ ನಂತರ ಕಸವಾಗುವ ಯುರೇನಿಯಂ ತ್ಯಾಜ್ಯವನ್ನು ಕೈಗಾ ಘಟಕದ ಆವರಣದಲ್ಲಿ ದಪ್ಪನೆಯ ಹೊದಿಕೆಯುಳ್ಳ ಸ್ಟೀಲ್ ಡ್ರಮ್ ಗಳಲ್ಲಿ ಹಾಕಿ ಭೂಮಿಯಲ್ಲಿ ಹೂತು ಹಾಕಲಾಗುತ್ತಿದೆ. ಯುರೇನಿಯಂ ಅದಿರು ಮತ್ತು ಕಸದಿಂದ ಹೊರಸೂಸುವ ಅಣುವಿಕಿರಣ ಮನುಷ್ಯನೂ ಸೇರಿದಂತೆ ಜಗತ್ತಿನ ಎಲ್ಲಾ ಜೀವಿಗಳಿಗೆ ಅತ್ಯಂತ ಅಪಾಯಕಾರಿಯಾದುದು. ಇದೇರೀತಿ ಕೇರಳದ ಕರಾವಳಿಯಲ್ಲಿ ದೊರೆಯುವ ಥೋರಿಯಂ ಅದಿರನ್ನು ಅಣು ಬಾಂಬ್ ತಯಾರಿಸಲು ಉಪಯೋಗಿಸಲಾಗುತ್ತಿದೆ. ಇದರ ಸಂಸ್ಕರಣಾ ಘಟಕ ಮೈಸೂರು ಸಮೀಪ ಮಡಿಕೇರಿ ಹೆದ್ದಾರಿಯಲ್ಲಿ ಕೃಷ್ಣರಾಜಸಾಗರದ ಹಿನ್ನೀರಿನ ಬಳಿ ಇರುವ ರಟ್ಟೆ ಹಳ್ಳಿ ಬಳಿ ಇದೆ. ಇಲ್ಲಿಯೂ ಸಹ ತ್ಯಾಜ್ಯವನ್ನು ಆವರಣದ ಭೂಮಿಯಲ್ಲಿ ಹೂಳಲಾಗುತ್ತಿದೆ ಈ ಘಟಕ ಜನ ಸಾಮಾನ್ಯರ ಗಮನಕ್ಕೆ ಬಾರದಂತೆ ಸುತ್ತಾ ಹತ್ತು ಅಡಿ ಎತ್ತರದ ಕಲ್ಲಿನ ಗೋಡೆಯನ್ನು ನಿರ್ಮಿಸಲಾಗಿದೆ. ನಾಳೆ ಇಂತಹ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿ ಭೂಮಿ ಬಾಯಿ ತೆರೆದರೆ, ಪಶ್ಚಿಮಘಟ್ಟದ ಭವಿಷ್ಯವೇನು? ಇದಕ್ಕೆ ಯಾರಲ್ಲೂ ಉತ್ತರವಿಲ್ಲ. ಪಶ್ಚಿಘಟ್ಟದಲ್ಲಿ ಜಲವಿದ್ಯುತ್ ಉತ್ಪಾದನೆ ಮೀಸಲಾದ ಜಲಾಶಯಗಳ ಜೊತೆಗೆ ನೀರಾವರಿಗಾಗಿ ರೂಪುಗೊಂಡ ಶಿವಮೊಗ್ಗದ ಗಾಜನೂರು ಬಳಿಯ ಲಕ್ಕುವಳ್ಳಿ ಡ್ಯಾಂ, ಕೃಷ್ಣರಾಜಸಾಗರ, ಕಬಿನಿ, ಹೇಮಾವರಿ, ಹಾರಂಗಿ, ಸುವರ್ಣಾವತಿ ಮುಂತಾದ ಅಣೆ,ಕಟ್ಟುಗಳಿವೆ.
ಕಾರವಾದ ಬಳಿ ಕೈಗಾ ಅಣುಸ್ಥಾವರದ ಜೊತೆಗೆ ಅಣುಬಾಂಬುಗಳ ಸಿಡಿತಲೆಯನ್ನು ಹೊಂದಿರುವ ರಾಕೇಟ್ ಗಳನ್ನು ಜಲಂತರ್ಗಾಮಿ ನೌಕೆಗಳಲ್ಲಿ ಇಟ್ಟು ಕಾಯುವ ಸುರಕ್ಷಿತ ಸ್ಥಳವಾಗಿ ಕಾರವಾರ ಬಂದರಿನ ಬಳಿ ಸೀ ಬರ್ಡ್ ನೌಕಾ ನೆಲೆ ನಿರ್ಮಿಸಲಾಗಿದೆ. ಈ ಮೊದಲು ಗುಜರಾತು ಬಂದರಿನಲ್ಲಿ ಈ ನೆಲೆಯನ್ನು ನಿರ್ಮಿಸಲಾಗಿತ್ತು. ಆದರೆ, ನೆರೆಯ ವೈರಿ ರಾಷ್ಟ್ರವಾದ ಪಾಕಿಸ್ಥಾನಕ್ಕೆ ಈ ಬಂದರು ಹತ್ತಿರವಾದ ಕಾರಣ, ಕಾರವಾರಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕಾಗಿ ಕಾರವಾರ-ಅಂಕೋಲಾ ನಡುವಿನ ಸಮುದ್ರ ತೀರದ 13 ಹಳ್ಳಿಗಳ, ಮತ್ತು ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದ 4779 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಅವರೆಲ್ಲರನ್ನು ಕಾರವಾರ-ಯಲ್ಲಾಪು ರಸ್ತೆಯ ಮಾಸ್ತಿಕಟ್ಟ ಅರಣ್ಯ ಪ್ರದೇಶದಲ್ಲಿರುವ ತೋಡೂರು ಎಂಬ ವಸತಿ ಕಾಲೋನಿಗೆ ತಂದು ಬಿಡಲಾಗಿದೆ. ಏನೋಂದು ವೃತ್ತಿಯನ್ನು ಮಾಡಲಾಗದ ಈ ಮೀನುಗಾರರು ಹಿಟ್ಲರನ ನಾಜಿ ಶಿಬಿರದಲ್ಲಿ ಬದುಕುಳಿದಿದ್ದ ಖೈದಿಗಳಂತೆ ಬದುಕುತ್ತಿದ್ದಾರೆ. ಖಿನ್ನತೆಯಿಂದಾಗಿ ಈ ಕಾಲೋನಿಯಲ್ಲಿ ಮಹಿಳೆಯರೂ ಮತ್ತು ಪುರುಷರೂ ಸೇರಿದಂತೆ 600 ಮಂದಿ ಮಾನಸಿಕ ಅಸ್ವಸ್ತರಾಗಿದ್ದಾರೆ.
ಕಾರವಾರದ ಕಡಲು ಮತ್ತು ಇಲ್ಲಿನ ಪಶ್ಚಿಮ ಘಟ್ಟದ ಅರಣ್ಯ ಅನೇಕ ಜೀವಿಗಳ ಪಾಲಿಗೆ ತೊಟ್ಟಿಲಿನಂತಿದೆ. ಇಲ್ಲಿನ ಪ್ರದೇಶವನ್ನು ಪಕ್ಷಿಕಾಶಿ ಎಂದು ಕರೆಯಲಾಗುತ್ತದೆ. ಇಲ್ಲಿ ದೊರೆಯುವ ವಿವಿಧ ಬಗೆಯ ಹಣ್ಣುಗಳಿಗಾಗಿ, ಮತ್ತು ತಮ್ಮ ಸಂತಾನದ  ಅಭಿವೃದ್ಧಿಗಾಗಿ ದೂರ ಚಳಿ ದೇಶಗಳಾದ ಸೈಬಿರಿಯಾ, ಅಲಸ್ಕಾ,ಮತ್ತು ಯುರೋಪ್ ರಾಷ್ಟ್ರಗಳಿಂದ ನಾನಾ ಹಕ್ಕಿಗಳು ವಲಸೆ ಬರುತ್ತಿವೆ. ಇವುಗಳಲ್ಲಿ ಗೋಲ್ಡನ್ ಪ್ಲವರ್, ಬೂದು ಪ್ಲವರ್, ಕೆಂಪು ಕಾಲಿನ ಹಕ್ಕಿ, ಗಾಡ್ ವಿಜ್, ಸ್ವಂಟ್, ಸ್ಯಾಂಡರ್ ಲಿಂಗ್, ಮುಖ್ಯವಾದವುಗಳು. ಅದೇ ರೀತಿ ಹಿಮಾಲಯ ತಪ್ಪಲಿನಿಂದ ಪಟ್ಟಿತಲೆಯುಳ್ಳ ಬಾತು, ಹಳದಿ ಸಿಪಿಲೆ, ಗುಲಾಬಿ, ಮೈನಾ, ಮರ್ಶಾ ಹ್ಯಾರಿಯರ್ ಕೊಕ್ಕರೆಗಳು ಬರುತ್ತಿವೆ. ಕಾರವಾರದ ಕಡಲಿನಲ್ಲಿ ಅತ್ಯಂತ ರುಚಿಯಾದ ಮ್ಯಾಕರೆಲ್ ಎಂಬ ಜಾತಿ ಮೀನುಗಳು ದೊರೆಯುತ್ತವೆ, ಇಲ್ಲಿನ ಭೂಮಿಯಲ್ಲಿ ಹೂತು ಹಾಕಿರುವ ಅಣುತ್ಯಾಜ್ಯದಿಂದ ಅಣು ವಿಕಿರಣಗಳು ಹೊರಸೂಸಿದರೆ, ಈ ಅಪರೂಪದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ಪಕ್ಷಿ ಸಂಕುಲ, ಹಾಗೂ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಏಲಕ್ಕಿ, ಮೆಣಸು, ಬಾಳೆ, ಅಡಿಕೆ ಮುಂತಾದ ಬೆಳೆಗಳ ಗತಿಯೇನು? ಇದಕ್ಕೆ ಉತ್ತರಿಸುವವರು ಯಾರು?  ಅಭಿವೃದ್ಧಿಯೆಂಬ ವಿಕೃತಿಯ ಯೋಜನೆಗಳ ಬಗ್ಗೆ ಲಂಗು ಲಗಾಮು ಇಲ್ಲದೆ ಮಾತನಾಡುವ ಮಂದಿ, ಒಮ್ಮೆ ಪಶ್ಚಿಮ ಘಟ್ಟ ನಿರ್ಜನ ಅರಣ್ಯದಲ್ಲಿ ಓಡಾಡಬೇಕಿದೆ. ಆಗ ಮಾತ್ರ ಪಶ್ಚಿಮ ಘಟ್ಟದ ಮಹತ್ವ ಅರಿವಾಗುವುದು.
                               ( ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ