ಶನಿವಾರ, ಜೂನ್ 27, 2026

ಒಂದು ತಿಂಗಳ ಅವಧಿಯಲ್ಲಿ ತಮಿಳು ಚಿತ್ರರಂಗದ ಪ್ರತಿಭಾವಂತ ಗುರು ಶಿಷ್ಯರ ನಿರ್ಗಮನ.



ಇಂದು ಬೆಳಿಗ್ಗೆ ತಮಿಳು ಚಿತ್ರರಂಗದಲ್ಲಿ ಶ್ರೇಷ್ಠ ಚಿತ್ರಕಥೆ ಮತ್ತು ಸಂಭಾಷಣೆ ಮೂಲಕ ಹಾಗೂ ನಟ ಮತ್ತು ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದ ಭಾರತಿರಾಜ ಅವರ ಶಿಷ್ಯ ಕೆ.ಭಾಗ್ಯರಾಜ್ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ಕೇವಲ 73 ವರ್ಷ ವಯಸ್ಸಿನ ಭಾಗ್ಯರಾಜ್ ಇತ್ತೀಚೆಗೆ ಸಿನಿಮಾ ಸಮಾರಂಭಗಳಲ್ಲಿ ಮತ್ತು ಿತ್ತೀಚೆಗೆ ನಿಧನರಾದ ಭಾರತಿರಾಜರ ಶ್ರದ್ಧಾಂಜಲಿ ಸಭೆಯಲ್ಲಿ ಲವಲವಿಕೆಯಿಂದ ಪಾಲ್ಗೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.
ಹಿರಿಯ ನಟಿ ರಾಧಿಕಾ ಅವರ ಶ್ರೇಷ್ಠ ಅಭಿನಯದ ಇತ್ತೀಚೆಗಿನ ಚಿತ್ರವಾದ ತಾಯ್ ಕಿಳವಿ ಚಿತ್ರದ ಸಮಾರಂಭದಲ್ಲಿ ನಟಿ ರಾಧಿಕಾ ಅವರು ಭಾರತಿರಾಜ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವಾಗ, ಸಹಾಯಕ ನಿರ್ದೇಶಕರಾಗಿದ್ದ ಭಾಗ್ಯರಾಜ್ ಜೊತೆ ನಡುವೆ ನಡೆಯುತ್ತಿದ್ದ ಜಗಳವನ್ನು ನೆನಪಿಸಿಕೊಂಡರು. ಒಮ್ಮೆ ಭಾರತಿರಾಜರ ಬಳಿ ರಾಧಿಕಾ ದೂರು ಸಲ್ಲಿಸಿದಾಗ, ಭಾರತೀರಾಜ ಅವರು ‘’ ಮಗಳೇ, ನೀನು ಭಾಗ್ಯರಾಜನನ್ನು ಸಾಮಾನ್ಯ ಯುವಕ ಎಂದು ಕಡೆಗಣಿಸಬೇಡ. ನಟನೆಯ ಸಂದರ್ಭದಲ್ಲಿ ತಕ್ಷಣ ಹುಟ್ಟುವ ಸಂಭಾಷಣೆಗಳನ್ನು ಸೃಷ್ಟಿಸುವಲ್ಲಿ ಅವನು ಪ್ರತಿಭಾವಂತ. ಆತನ ಮಾತನ್ನು ಶ್ರದ್ಧೆಯಿಂದ ಕೇಳು’’ ಎಂದು ಬುದ್ದಿವಾದ ಹೇಳಿದ್ದರು.

ಇಂದಿಗೂ ಸಹ ತಮಿಳುಚಿತ್ರರಂಗದಲ್ಲಿ ಶ್ರೇಷ್ಟ ಚಿತ್ರಕಥೆ ಮತ್ತು ಸಂಭಾಷಣೆಗಾರ ಎಂದು ಅವರು ಹೆಸರಾಗಿದ್ದರು. ಕೆ.ಭಾಗ್ಯರಾಜ್ ನಟಿಸಿ, ನಿರ್ದೇಶನ ಮಾಡಿದ ಇಪ್ಪತ್ತೈದಕ್ಕೂ ಹೆಚ್ಚುಸಿನಿಮಾಗಳಲ್ಲಿ ಚಿತ್ರಕಥೆ ಅವರ ಸಿನಿಮಾಗಳ ಮೂಲಬಂಡವಾಳವಾಗಿತ್ತು. ಈರೋ್ಡ್ ಜಿಲ್ಲೆಯ ಹಾಗೂ ಕರ್ನಾಟಕ ಗಡಿಭಾಗದ ಗೋಪಿನಾಥಂ ಚೆಟ್ಟಿಪಾಳ್ಯಂ ಎಂಬ ಕಾಡುಗಳ್ಳ ವೀರಪ್ಪನ್ ಊರಿನ ಸಮೀಪದ ವೆಲ್ಲನ್ ಕೋವಿಲ್ ಎಂಬ ಸಾಮಾನ್ಯ ಗ್ರಾಮದಲ್ಲಿ 1953 ರಲ್ಲಿ ಜನಿಸಿದ ಕೆ.ಭಾಗ್ಯರಾಜ್, ಬಾಲ್ಯದಿಂದಲೂ ಸಿನಿಮಾ ಮತ್ತು ನಾಟಕಗಳ ಮೇಲೆ ಮೋಹ ಇದ್ದುದರಿಂದ 1970 ರ ದಶಕದಲ್ಲಿ ಚೆನ್ನೈನಗರಕ್ಕೆ ಆಗಮಿಸಿ, ಸಿನಿಮಾಗಳಿಗೆ ಸಂಭಾಷಣೆ ಬರೆಯುವುದರ ಮೂಲಕ ಬದುಕು ಕಟ್ಟಿಕೊಂಡರು. ಭಾರತೀರಾಜರವರು ಭಾಗ್ಯರಾಜ್ ಪಾಲಿಗೆ ಗುರುವಾಗಿ ತಮಿಳು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದರು.
1976 ರಲ್ಲಿ ಸುಧಾಕರ್ ನಾಯಕನಾಗಿ ಮತ್ತು ಸುಮತಿ ನಾಯಕಿಯಾಗಿ ನಟಿಸಿದ ಸುವರಿಲ್ಲಾದ ಚಿತ್ತಿರಂಗಳ್ ಎಂಬ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಸಣ್ಣ ಪಾತ್ರದಲ್ಲಿಯೂ ಭಾಗ್ಯರಾಜ್ ನಟಿಸುವುದರ ಮೂಲಕ ತಮಿಳು ಚಿತ್ರರಂಗದ ಗಮನ ಸೆಳೆದರು. ಈ ಸಿನಿಮಾವು ತೆಲುಗು ಭಾಷೆಗೆ ರಿಮೇಕ್ ಆದಾಗ, ಸುಧಾಕರ್ ಅವರನ್ನೇ ನಾಯಕರನ್ನಾಗಿ ಮಾಡಿಕೊಂಡು ನಿರ್ದೇಶನ ಮಾಡಿದ್ದರು. ಮುಂದಾನೈ ಮುಡಿಚ್ಚು ಎಂಬ ಸಿನಿಮಾವು ಕೆ. ಭಾಗರಾಜ್ ಅವರನ್ನು ಜನಪ್ರಿಯತೆಯ ಶಿಖರಕ್ಕೇರಿಸಿತು. ಹಳ್ಳಿಮೇಷ್ಟ್ರು ಹೆಸರಿನಲ್ಲಿ ಕನ್ನಡದಲ್ಲಿಯೂ ರಿಮೇಕ್ ಆಗಿರುವ ಈ ಸಿನಿಮಾಕ್ಕೆ ನೀನೇ ನಾಯಕನಾಗಿ ನಟಿಸು ಎಂದು ಭಾರತಿರಾಜ ಸಲಹೆ ನೀಡಿದ್ದರು.

ಗ್ರಾಮೀಣ ಕಥೆಗಳನ್ನು ದೃಶ್ಯಕ್ಕೆ ಅಳವಡಿಸುವಲ್ಲಿ ಅವರ ಗುರು ಭಾರತಿರಾಜ ನಿಸ್ಸಿಮರಾದರೆ, ಸಾಮಾಜಿಕವಾಗಿ ಗಂಭೀರವಾದ ಹಾಗೂ ಕುಟುಂಬದ ಸಮಸ್ಯೆಗಳನ್ನು ಲಘು ಹಾಸ್ಯದ ದಾಟಿಯಲ್ಲಿ ಹೇಳುವುದರಲ್ಲಿ ಶಿಷ್ಯ ಭಾಗ್ಯರಾಜ್ ಹೆಸರಾದರು. ಇವರ ದಾವುಣಿ ಕನವುಗಳ್, ಚಿನ್ನವೀಡು, ಅಂದ ಏಳ್ ನಾಟಕ್ಕಳ್ , ತೊರಲ್ ನಿನ್ನು ಪೊಚ್ಚು , ಮೌನ ಗೀತಂಗಳ್ ಇಂತಹ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ಹೊಸದಾಖಲೆ ಬರೆದವು. ಎಂ.ಜಿ.ಆರ್. ಶಿವಾಜಿಗಣೇಶನ್, ಕಮಲ್ ಹಾಸನ್ , ರಜನಿಕಾಂತ್ ರಂತಹ ಜನಪ್ರಿಯ ನಟರ ಮೇಲೆ ಅವಲಂಬಿತವಾಗಿ ತಮಿಳು ಸಿನಿಮಾರಂಗಕ್ಕೆ, ನಟರಿಗಿಂತ ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಮುಖ್ಯ ಎಂದು ಕೆ.ಭಾಗ್ಯರಾಜ್ ತೋರಿಸಿಕೊಟ್ಟರು.

ಭಾಗ್ಯರಾಜ್ ಪರಂಪರೆಯನ್ನು ನಟನೆ ಮತ್ತು ನಿರ್ದೇನದ ಮೂಲಕ ಚೇರನ್ ಮತ್ತು ಆರ್. ಪಾರ್ಥಿಭನ್ ಮುಂದಿನ ದಿನಗಳಲ್ಲಿ ತೋರಿಸಿಕೊಟ್ಟರು. ಭಾಗ್ಯರಾಜ್ ಅವರಿಂದ ಪ್ರಭಾವಿತರಾಗಿ ತಮಿಳುನಾಡಿನ ಅಂದಿನ ಯಶಸ್ವಿ ನಾಟಕಕಾರ ವಿಶು ಎಂಬುವರು ಸಹ ಅನೇಕ ನಾಟಕಗಳನ್ನು ಸಿನಿಮಾಗಳನ್ನಾಗಿ ಪರಿವರ್ತಿಸಿ, ನಟಿಸಿ, ನಿರ್ದೇಶನ ಮಾಡುವುದರ ಮೂಲಕ ಯಶಸ್ವಿಯಾಗಿದ್ದರು.

ಕೆ.ಭಾಗ್ಯರಾಜ್ ತಂದೆಯಾಗಿ ನಟಿಸಿದ ಹಾಗೂ 2011 ರಲ್ಲಿ ಬಿಡುಗಡೆಯಾದ ವಾಂಗೈ ಸೂಡ ವಾ ಎಂಬ ಸಿನಿಮಾವನ್ನು ನಾನು ಕಡೆಯ ಬಾರಿಗೆ ನೊಡಿದ್ದೆ. ವಿಮಲ್ ಎಂಬ ನಟ ನಾಯಕನಾಗಿ ನಟಿಸುರುವ ಈ ಸಿನಿಮಾವು ತನ್ನ ಶ್ರೇಷ್ಠ ಕಥೆಯಿಂದಾಗಿ ಎಂಟು ಅಂತರಾಷ್ಟ್ರೀಯ ಚಿತ್ರೊತ್ಸವಗಳ ಪ್ರಶಸ್ತಿಗಳ ಜೊತೆಗೆ ಶ್ರೇಷ್ಠ ತಮಿಳು ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಮತ್ತು ನಾಲ್ಕು ಸ್ಥಳೀಯ ಫಿಲಂ ಪೇರ್ ಪ್ರಶಸ್ತಿಗಳನ್ನು ಪಡೆಯಿತು. ಕೆ.ಭಾಗ್ಯರಾಜ್ ಅವರಿಂದ ಪ್ರಭಾವಿತನಾಗಿದ್ದ ಕೆ.ಶರಕುನಮ್ ಎಂಬಾತ ನಿರ್ದೇಶಿಸಿದ ಈ ಸಿನಿಮಾದಲ್ಲಿ ಶಾಲಾಶಿಕ್ಷಕನಾಗಿ ದೂರದ ಹಳ್ಳಿಗಾಡಿನಲ್ಲಿ ಸರ್ಕಾರಿ ಹುದ್ದೆ ದೊರೆತಾಗ, ಹೋಗಲು ಹಿಂದೇಟು ಹಾಕುವ ಪುತ್ರನಿಗೆ ತಂದೆ ಬುದ್ದಿವಾದ ಹೇಳಿ ಕಳಿಸಿಕೊಡುತ್ತಾನೆ.

ಒಂದು ರೀತಿಯಲ್ಲಿ ಸ್ಮಶಾನದಂತಿರುವ ಬೆಂಗಾಡಿನಂತಹ ಆ ಊರಿನಲ್ಲಿ ಧಾಖಲೆಗಳಲ್ಲಿ ಮಾತ್ರ ಶಾಲೆ ಇರುತ್ತದೆ. ಕುಡಿಯುವ ನೀರಿಲ್ಲದೆ, ನಿಲ್ಲಲು ಹಸಿರು ಮರಗಳಿಲ್ಲದ ಅನಕ್ಷರಸ್ಥರ ಆ ಊರಿನಲ್ಲಿ ಬಹುತೇಕ ಮಂದಿ ಇಟ್ಟಿಗೆ ತಯಾರಿಸುವ ಕೂಲಿಯಾಳುಗಳಾಗಿ ಜೀವಿಸುವ ಕಾಯಕದಲ್ಲಿರುತ್ತಾರೆ. ಅವರ ಮಕ್ಕಳು ಶಾಲೆಗೆ ಹೋದರೆ, ದುಡಿಯುವ ಕೂಲಿ ಹಣ ಕಡಿಮೆಯಾಗುತ್ತೆ ಎಂಬ ಆತಂಕ. ಇಂತಹ ಊರಿನಲ್ಲಿ ಶಿಕ್ಷಕನಾಗಿ ಯಶಸ್ವಿಯಾಗುವ ಯುವಕನಿಗೆ ಸ್ಪೂರ್ತಿಯಾಗುವ ತಂದೆಯ ಪಾತ್ರದಲ್ಲಿ ಕೆ.ಭಾಗ್ಯರಾಜ್ ಅಭಿನಯಿಸಿದ್ದರು.

ಭಾಗ್ಯರಾಜ್, ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಇತರೆ ನಿರ್ದೇಶಕರ ಅಡಿಯಲ್ಲಿಯೂ ನಟಿಸಿದ್ದರು. ಭಾಗ್ಯ ಎಂಬ ವಾರಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ತಮಿಳು ನಟರ ಹುಚ್ಚು ಹವ್ಯಾಸಗಳಲ್ಲಿ ಒಂದಾದ ರಾಜಕೀಯ ರಂಗಕ್ಕೆ ಇಳಿದು ಮೊದಲಿಗೆ ಎ.ಐ.ಡಿ.ಎಂ.ಕೆ ನಂತರ ಡಿ.ಎಂ.ಕೆ. ಪಕ್ಷದಲ್ಲಿ ಗುರುತಿಸಿಕೊಂಡು, ಇದು ನನ್ನ ಕ್ಷೇತ್ರವಲ್ಲ ಎಂದು ಮನದಟ್ಟಾದ ನಂತರ ತಮಿಳು ಸಿನಿಮಾ ಚಾನಲ್ ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನೆಮ್ಮದಿಯ ಬದುಕು ಕಟ್ಟಿಕೊಂಡು, ಸಿನಿಮಾ ನಿರ್ಮಾಣದ ಬಗ್ಗೆ ಯುವ ತಲೆಮಾರಿಗೆ ಸ್ಪೂರ್ತಿಯಾಗಿದ್ದ ಭಾಗ್ಯರಾಜ್ ಅನಿರೀಕ್ಷಿತವಾಗಿ ನಮ್ಮನ್ನು ಅಗಲಿದ್ದಾರೆ
, ಎಂ.ಜಿ.ಆರ್ ಮತ್ತು ಶಿವಾಜಿಗಣೇಶನ್ ಅವರಂತಹ ಮಹಾನ್ ನಾಯಕರ ಎದುರು ಖಳನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದ ನಂಬಿಯಾರ್ ಎಂಬ ಹಿರಿಯ ನಟರನ್ನು ಮನವೊಲಿಸಿ, ದಾವುಣಿ ಕನವು ಗಳ್ ಚಿತ್ರದಲ್ಲಿ ಹಾಸ್ಯನಟನನ್ನಾಗಿ ಇವರು ಪರಿವರ್ತಿಸಿದ್ದರು.

ತಮಿಳು ಸಿನಿಮಾ ರಂಗಕ್ಕೆ ಹೊಸ ಇತಿಹಾಸದ ಅಧ್ಯಾಯ ಬರೆದ ಗುರು ಶಿಷ್ಯರನ್ನು ಕಳೆದುಕೊಂಡ ತಮಿಳುನಾಡು ಸಾಂಸ್ಕೃತಿಕ ಲೋಕ ನಿಜಕ್ಕೂ ಬಡವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ