ಭಾನುವಾರ, ಮೇ 12, 2013

ಮಾನ್ಸಂಟೊ ಮಹಾ ಮಾರಿಯ ಕಥನ- 1


ಅವಿಷ್ಕಾರ, ಅಧಿಕ ಉತ್ಪಾದನೆ ಮತ್ತು  ಅಧಿಕ ಬಳಕೆ ಇವು ತನ್ನ ಗುರಿ ಎಂದು ಘೋಷಿಸಿಕೊಂಡಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಮಾನ್ಸಂಟೊ ಕಂಪನಿಯ ಕಾರ್ಯಾಚರಣೆ ಆಧುನಿಕ ಕೃಷಿಜಗತ್ತಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡಿದೆ. ಕೃಷಿ ಕುರಿತ ಚಟುವಟಿಕೆಗಳಿಗೆ ಪೂರಕವಾಗಿ ಬಿತ್ತನೆ ಬೀಜ, ಕೀಟನಾಶಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ, ಶತಮಾನದ ಇತಿಹಾಸವಿರುವ  ಈ ಕಂಪನಿ  ಹೆಚ್ಚುತ್ತಿರುವ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಆಹಾರ ಬೆಳೆಗಳ ಉತ್ಪಾದನೆಗಾಗಿ  ಕೈಗೊಂಡಿರುವ  ಅನೇಕ ಜೈವಿಕ ತಂತ್ರಜ್ಞಾನದ ಪ್ರಯೋಗಗಳು ವಿವಾದಕ್ಕೆ ಗುರಿಯಾಗಿವೆ. ಮಾನ್ಸಂಟೊ ನಡೆಸುತ್ತಿರುವ ಅನೇಕ ಪ್ರಯೋಗಗಳಲ್ಲಿ ರೈತರ ಹಿತಾಸಕ್ತಿಗಿಂತ ಕಂಪನಿಯ ಹಿತಾಸಕ್ತಿ ಅಡಗಿರುವುದು  ರಹಸ್ಯವಾಗಿ ಉಳಿದಿಲ್ಲ. ಮಾನ್ಸಂಟೊ ಕಂಪನಿ ಸೃಷ್ಟಿಸಿರುವ ಅನೇಕ ಕುಲಾಂತರಿ ಮತ್ತು ತಳಿತಂತ್ರಜ್ಙಾನದ ಆಧಾರದ  ಬಿತ್ತನೆ ಬೀಜಗಳು ಮತ್ತು ಅವುಗಳಿಂದ ಬೆಳೆದ ಅನೇಕ ಆಹಾರ ಮತ್ತು ವಾಣಿಜ್ಯ ಬೆಳೆಗಳು ಪಕೃತಿ ಮೇಲಿನ ಜೈವಿಕ ಜಗತ್ತಿಗೆ ಮತ್ತು   ಜೀವ ವೈವಿಧ್ಯತೆಗೆ ಧಕ್ಕೆ ತಂದಿವೆ.

ಆಧುನಿಕ ಜಗತ್ತಿನಲ್ಲಿ ಮನುಷ್ಯನ ಒಳಿತಿಗಾಗಿ ಅವಿಷ್ಕಾರಗೊಂಡ ಯಾವುದೇ ವಿಜ್ಙಾನದ ತಂತ್ರಜ್ಞಾನವನ್ನು ಈ ಜಗತ್ತು ಕಳೆದ ಶತಮಾನದಿಂದ ಮುಕ್ತವಾಗಿ ಸ್ವೀಕರಿಸಿಕೊಂಡು ಬಂದಿದೆ. ಆದರೆ, ಮನುಕುಲಕ್ಕೆ, ಮತ್ತು ಪರಿಸರಕ್ಕೆ ಎರವಾಗುವ ತಂತ್ರಜ್ಞಾನವನ್ನು ಮಾತ್ರ ವಿಚಾರವಂತರ ಜಗತ್ತು ಪ್ರತಿರೋಧಿಸುತ್ತಲೇ ಬಂದಿದೆ.  ಹಣ, ಅಧಿಕಾರ, ತೋಳ್ಬಲ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಆಮೀಷದ ಮೂಲಕ ಮಣಿಸುತ್ತಾ ಬಂದಿರುವ ಮಾನ್ಸಂಟೊ ಕಂಪನಿಯ ವ್ಯವಹಾರ ಚತುರತೆಗೆ ಅದರ ವಿರೋಧಿಗಳು ಕೂಡ ತಲೆತೂಗಿದ್ದಾರೆ. ಏಕೆಂದರೆ, ಅಂತಹ ವ್ಯವಹಾರಿಕ ಸೂಕ್ಷ್ಮತೆಯನ್ನು ಈ  ಕಂಪನಿ ಮೈಗೂಡಿಸಿಕೊಂಡಿದೆ.
ವ್ಯವಸ್ಥಿತ ಪ್ರಚಾರದ ಮೂಲಕ ಮನಸ್ಸುಗಳನ್ನು ಕಲುಷಿತಗೊಳಿಸಬಹುದೆಂದು 1928ರಲ್ಲಿ ಪ್ರೊಪಗಂಡ(Propaganda)ಎಂಬ ಕೃತಿ ಬರೆದು, ಜಗತ್ತಿನ  ಜಾಹಿರಾತು ವಿಷಯಗಳ ಜನಕ ಎಂದು ಪ್ರಸಿದ್ದೀಯಾಗಿರುವ ಲೇಖಕ  ಎಡ್ವರ್ಡ್ ಬೆರ್ನೆಸ್ ( Edvard Bernyas) ತನ್ನ ಕೃತಿಯಲ್ಲಿ ಹೇಳಿರುವ “ The Conscious and intelligent manipulation of the organized habits and opinions of the masses is an important element in democratic society’ ಎನ್ನುವ ಹಾಗೆ ಎಲ್ಲಾ ಅಂಶಗಳನ್ನು ಚಾಚೂ ತಪ್ಪದೆ ಅನುಕರಿಸಿಕೊಂಡ ಬಂದ ಕಂಪನಿಗಳಲ್ಲಿ ಮಾನ್ಸಂಟೊ ಕಂಪನಿ ಮೊದಲನೇಯದು ಎಂದರೆ, ತಪ್ಪಾಗಲಾರದು.
1901 ರಲ್ಲಿ ಅಮೇರಿಕಾದ ಮಿಸ್ಸೊರಿ ಪ್ರಾಂತ್ಯದ  ಸೆಂಟ್ ಲೂಯಿಸ್ ನಗರದಲ್ಲಿ ಜಾನ್ ಎಫ್ ಕ್ವೀನಿ ಎಂಬಾತನಿಂದ ಆರಂಭಗೊಂಡ ಈ  ಕಂಪನಿ, ಇಂದು ಜಗತ್ತಿನ ಅತಿದೊಡ್ಡ ಹತ್ತು ಬಹುರಾಷ್ರೀಯ ಕಂಪನಿಗಳಲ್ಲಿ ಒಂದು, ಜಾನ್ ಎಫ್ ಕ್ವೀನಿ ಎಂಬಾತ ತನ್ನ ನೆಚ್ಚಿನ ಮಡದಿ ಒಲ್ಗಾ ಮಾನ್ಸಂಟೊ ಹೆಸರಿನಲ್ಲಿ ಈ ಕಂಪನಿಯನ್ನು ಸ್ಥಾಪಿಸಿದಾಗ, ಕೃಷಿ ಚಟುವಟಿಗಳಿಗೆ ಪೂರಕವಾಗುವಂತ ಕೀಟನಾಶಕ, ರಸಗೊಬ್ಬರ, ಬೀಜಗಳ ಸಂಗ್ರಹ ಮತ್ತು ವಿತರಣೆಗೆ ಇವುಗಳಿಗೆ ಅನೂಕೂಲವಾಗುವ ಹಾಗೆ ಗುರಿಯನ್ನು ಹೊಂದಿತ್ತು.. ತನ್ನ ಮೊದಲ ಉತ್ಪಾದನೆಯಾಗಿ ಸಚ್ಚರಿನ್ (Saccharine) ಎಂಬ ಕೀಟನಾಶಕ ರಸಾಯಿನಿಕ ಉತ್ಪಾದನೆಯ ಮೂಲಕ ಕೃಷಿಜಗತ್ತಿಗೆ ಕಾಲಿಟ್ಟ ನಂತರ, ಈ ಕಂಪನಿ ಬೆಳದ ಪರಿ ಮಾತ್ರ ಅಚ್ಚರಿ ಮೂಡಿಸುವಂತಹದ್ದು. 
 ಕೀಟನಾಶಕಗಳ ತಯಾರಿಕೆಯಲ್ಲಿ ಕುಖ್ಯಾತಿ ಗಳಿಸಿರುವ ಈ ಸಂಸ್ಥೆ ತನ್ನ ನೈಜ ಮುಖವಾಡವನ್ನು ಮುಚ್ಚಿಕೊಳ್ಳಲು ಅನೇಕ ಅಂಗ ಸಂಸ್ಥೆಗಳನ್ನು ಸ್ಥಾಪಿಸಿ, ತನ್ನ ಚಕ್ರಾಧಿಪತ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿದೆ. ಡವ್ ಎಂಬ ಪ್ರಸಿದ್ಧ ಕೀಟನಾಶಕ ತಯಾರಿಕೆಯ ಸಂಸ್ಥೆ ಕೂಡ ಮಾನ್ಸಂಟೊ ಕಂಪನಿಯ ಕೂಸು. 1940 ರವರೆಗೆ ಕೇವಲ 480 ಉದ್ಯೋಗಿಗಳನ್ನು ಹೊಂದಿದ್ದ ಮಾನ್ಸಂಟೊ ಈಗ ಜಗತ್ತಿನ 66 ರಾಷ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಒಟ್ಟು 21, 183 ಉದ್ಯೋಗಿಗಳನ್ನು ಹೊಂದಿದೆ. ಅಮೇರಿಕಾ ರಾಷ್ಟ್ರವೊಂದರಲ್ಲಿ ವಿವಿಧ ನಗರಗಳಲ್ಲಿ ಇರುವ ತಳಿಗಳ ಪ್ರಯೋಗಶಾಲೆಯಲ್ಲಿ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಮಾರುಕಟ್ಟೆಯ ವಿಭಾಗದಲ್ಲಿ 10,227 ಮಂದಿ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ.
1945 ರವರೆಗೆ ಸಚ್ಚರಿನ್, 2 ಮತ್ತು 4D ಎಂಬ ರಸಾಯಿನಿಕ ಹಾಗೂ ಅಪಾಯಕಾರಿ ಕೀಟನಾಶಕಗಳನ್ನು ತಯಾರಿಸುತ್ತಿದ್ದ ಮಾನ್ಸಂಟೊ 1960 ರಲ್ಲಿ ಕೃಷಿ ವಿಭಾಗಗಳನ್ನು ಸ್ಥಾಪಿಸಿ, ಹೈಬ್ರಿಡ್ ಬಿತ್ತನೆ ಬೀಜಗಳ ಪ್ರಯೋಗವನ್ನು ಆರಂಭಿಸಿತು. 1964ರಲ್ಲಿ ಮಾನ್ಸಂಟೊ ಹೆಸರಿನಲ್ಲಿ ಹೈಬ್ರಿಡ್ ಮುಸುಕಿನ ಜೋಳವನ್ನು ಪ್ರಥಮ ಬಾರಿಗೆ ಬಿಡುಗಡೆ ಮಾಡಿತು.  1975 ರಲ್ಲಿ ಜೀವಶಾಸ್ತ್ರ ಕೋಶ ಗಳ ಅಧ್ಯಯನಕ್ಕಾಗಿ ( Cell Biology)  ಪ್ರಯೋಗ ಶಾಲೆಯನ್ನು ಸ್ಥಾಪಿಸಿತು.
ಈ ವೇಳೆಗೆ ಈ ಕಂಪನಿಯ ಅಂಗ ಸಂಸ್ಥೆಯಾದ ಡವ್ ಕಂಪನಿ ತಯಾರಿಸಿದ ಏಜೆಂಟ್ ಆರೆಂಜ್ ಎಂಬ ಕಳೆನಾಶಕ ಔಷಧಿ ಅಮೇರಿಕಾದ ಸೇನೆಯಲ್ಲಿ ಬಳಕೆಯಾಗಿ ಅನೇಕ ದುಷ್ಪರಿಣಾಮಕ್ಕೆ ಕಾರಣವಾಗಿತ್ತು. 1962 ರಿಂದ 1970 ರ ವರೆಗೆ ವಿಯಟ್ನಾ ರಾಷ್ಟ್ರದ ಮೇಲೆ ನಿರಂತರ ಯುದ್ದ ಸಾರಿದ್ದ ಅಮೇರಿಕಾ ದೇಶಕ್ಕೆ ವಿಯಟ್ನಾಂ ಅನ್ನು ಮಣಿಸಲು ಸಾಧ್ಯವಾಗಲಿಲ್ಲ. ವಿಯಟ್ನಾಂ ಯೋಧರು ಅರಣ್ಯದಲ್ಲಿ ಅಡಗಿ ಕುಳಿತು ಗೆರಿಲ್ಲಾ ಯುದ್ದ ತಂತ್ರದ ಮೂಲಕ ಅಮೇರಿಕಾ ಸೇನೆಯ ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರುಗಳನ್ನು ಹೊಡೆದು ಉರುಳಿಸುತ್ತಿದ್ದರು.  ಈ ಸಮಯದಲ್ಲಿ ವಿಯಟ್ನಾಂನ ಅರಣ್ಯದ ಮರಗಳ ಎಲೆಗಳನ್ನು ಉದುರಿಸುವ ತಂತ್ರಜ್ಞಾನ ವಾಗಿ ಅಮೇರಿಕಾ ಸೇನೆ ಏಜೆಂಟ್ ಆರಂಜ್ ಎಂಬ ಅಪಾಯಕಾರಿ ಕಳೆನಾಶಕ ರಸಾಯನಿಕವನ್ನು ಬಳಕೆ ಮಾಡಿತು. ಎಂಟು ವರ್ಷಗಳ ಅವಧಿಯಲ್ಲಿ ಅಮೇರಿಕಾ ಸೇನೆ 70 ದಶಲಕ್ಷ ಲೀಟರ್ ವಿಷಯುಕ್ತ ರಸಾಯನಿಕವನ್ನು ವಿಯಟ್ನಾಂ ಅರಣ್ಯದ ಮೇಲೆ ಸಿಂಪಡಿಸಿತ್ತು. ಆನಂತರ ಉಂಟಾದ ಪರಿಣಾಮ ಮಾತ್ರ ಇಡೀ ಮನುಕುಲ ತಲೆ ತಗ್ಗಿಸುವಂತಹದ್ದು.

 ಈ ರಸಾಯನಿಕ ದ್ರವ ಗಾಳಿ ಮತ್ತು ನೀರಿನಲ್ಲಿ ಬೆರೆತ ಫಲವಾಗಿ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ವಿಯಟ್ನಾಂ  ಮತ್ತು ದಕ್ಷಿಣ ಕೋರಿಯಾದಲ್ಲಿ ನಾಶವಾದವು. ಪರಿಸರದಲ್ಲಿ ಮಿಳಿತಗೊಂಡಿದ್ದ ಈ ವಿಷವನ್ನು ಗಾಳಿ ಮತ್ತು ನೀರಿನ ಮೂಲಕ ಸೇವಿಸಿದ ಪರಿಣಾಮ ವಿಯಟ್ನಾಂ ಮನುಕುಲದ ಸಂತತಿಯಲ್ಲಿ ವಿಕೃತ ಶಿಶುಗಳ ಜನನಕ್ಕೆ ಕಾರಣವಾಯಿತು. ಯುದ್ಧ ನಡೆದ ನಲವತ್ತು ವರ್ಷಗಳ ನಂತರವೂ ಮನುಷ್ಯರ ವಂಶವಾಹಿ ಮೂಲಕ ಮುಂದುವರಿದಿರುವ ಈ ವಿಷ , ಇಂದಿಗೂ ವಿಯಟ್ನಾಂನಲ್ಲಿ ಅನೇಕ .ವಿಕೃತ ಮಕ್ಕಳ ಜನನಕ್ಕೆ ಕಾರಣವಾಗಿದೆ.
 ಈ ಸಂದರ್ಭದಲ್ಲಿ  ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಕೇರಳದ ಕಾಸರಗೂಡು ಜಿಲ್ಲೆಯಲ್ಲಿ 1980ರ ದಶಕದಲ್ಲಿ ಗೇರು ಮರಗಳ ಮೇಲೆ ಎಂಡೋ ಸಲ್ಫಾನ್ ಎಂಬ ರಸಾಯನಿಕವನ್ನು ಸಿಂಪಡಿಸಿದ ಪರಿಣಾಮ ನಡೆದ ದುರಂತದ ಅಧ್ಯಾಯವನ್ನು ಇಲ್ಲಿ ನೆನೆಯಬಹುದು. ವಿಯಟ್ನಾಂ ಸಂತ್ರಸ್ತರು ಅಂತರಾಷ್ಟ್ರಿಯ ನ್ಯಾಯಾಲಯದಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಪರಿಹಾರಕ್ಕೆ ಮೊಕೊದ್ದಮೆ ದಾಖಲಿಸಿದ ಪರಿಣಾಮ 1984ರಲ್ಲಿ ಮಾನ್ಸಂಟೊ ಮತ್ತು ಡವ್ ಕಂಪನಿಗಳು  180 ದಶಲಕ್ಷ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದವು. ದಕ್ಷಿಣ ಕೋರಿಯಾ ತನ್ನ ನೆಲದ 6,800 ಸಂತ್ರಸ್ತರ ಪರವಾಗಿ 60 ದಶಲಕ್ಷ ಡಾಲರ್ ಗಾಗಿ ಮೊಕದ್ದಮೆ ದಾಖಲಿಸಿದ್ದು  ವಿಚಾರಣೆ ಮುಂದುವರಿದಿದೆ. ಈ ಘಟನೆ ನಡೆದ ನಂತರ ಮಾನ್ಸಂಟೊ ಕಂಪನಿಯ ತನ್ನ ಏಜೆಂಟ್ ಆರೆಂಜ್ ರಸಾಯಿನಕದ ಬ್ರಾಂಡ್ ಹೆಸರನ್ನು ಬದಲಿಸಿ, ರೌಂಡ್ ಅಪ್ ಹೆಸರಿನಲ್ಲಿ ಕಳೆನಾಶಕ ಔಷಧಿಯನ್ನಾಗಿ ಬಿಡುಗಡೆಮಾಡಿದೆ. ಈಗ ಈ ಅಪಾಯಕಾರಿ ರಸಾಯಿಕ ನಮ್ಮ ಕರ್ನಾಟಕ, ಆಂಧ್ರ, ತಮಿಳುನಾಡು, ಸೇರಿದಂತೆ ಅಧಿಕ ಭತ್ತ ಬೆಳೆಯುವ ಭಾರತದ ರಾಜ್ಯಗಳಲ್ಲಿ ಬಳಕೆಯಾಗುತ್ತಿದೆ.ಇದಲ್ಲದೆ ಯಾವುದೇ ನೈತಿಕತೆ ಇಲ್ಲದೆ ಇತರೆ ಸಂಶೋಧನೆಯ ಜ್ಞಾನವನ್ನು ಕದಿಯುವುದು ಕೂಡ ಈ ಕಂಪನಿಯ ಹವ್ಯಾಸಗಳಲ್ಲಿ ಒಂದು. ಕ್ಯಾಲಿಪೊರ್ನಿಯ ವಿಶ್ವವಿದ್ಯಾಲಯ ಅಭಿವೃದ್ದಿ ಪಡಿಸಿದ್ದ, ಹಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿ ಮಾಡಬಹುದಾದ ಪೊಸಿಲ್ಯಾಕ್ (Posilac) ಎಂಬ ಹಾರ್ಮೋನನ್ನು ಕದ್ದ ಪರಿಣಾಮವಾಗಿ 100 ದಶಲಕ್ಷ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ.
ಹೀಗೆ ಅನೇಕ ರಾದ್ಧಾಂತಗಳನ್ನು ಸೃಷ್ಟಿಸಿರುವ ಈ ಕಂಪನಿಯ ಇತಿಹಾಸವನ್ನು ಇತ್ತೀಚೆಗೆ ಅಮೇರಿಕನ್ ಲೇಖಕ F. William engdahl ತನ್ನ ಖಚಿತ ಸಂಶೋಧನೆಯ ಮೂಲಕ ಹೊರತಂದಿರುವ ಬೀಜಗಳ ವಿರೂಪ ಕುರಿತ Seeds of Destrection ಕೃತಿಯಲ್ಲಿ ಅವಲೋಕಿಸಬಹುದು. ಕುಲಾಂತರಿ ತಳಿಗಳ ಆಹಾರವನ್ನು ಸೇವಿಸಿರುವ ಮನುಷ್ಯರು ಮತ್ತು ಪ್ರಾಣಿಗಳು( ಹಸು ಮತ್ತು ಹಂದಿ) ಇವುಗಳಲ್ಲಿ ಆಗಿರುವ ಜೀವಿಕ ಬದಲಾವಣೆಯನ್ನು ತನ್ನ ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ.


ಹೇರಳವಾದ ಧನ ಸಂಪತ್ತು ಮತ್ತು ವ್ಯವಹಾರದ ಕುಶಲತೆಯನ್ನು ಹೊಂದಿರುವ ಮಾನ್ಸಂಟೊ ಇದೀಗ ಜಗತ್ತಿನ ಹಿರಿಯಣ್ಣ ಎಂದು ನಾವು ಭಾವಿಸುವ ಅಮೇರಿಕಾವನ್ನು ಮಣಿಸಿದೆ. ಮಾನ್ಸಂಟೊ ರಕ್ಷಣಾ ಕಾಯ್ದೆ ಎಂದು ಕರೆಯಬಹುದಾದ H.R.933 ಸೆಕ್ಷನ್ 735 ಎಂಬ ಮಸೂದೆಗೆ ಅದ್ಯಕ್ಷ ಬರಾಕ್ ಒಬಾಮ ಇದೇ ಮಾರ್ಚಿ ಕೊನೆಯ ವಾರದಲ್ಲಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಅನ್ವಯ ಇನ್ನು ಮುಂದೆ ಮಾನ್ಸಂಟೊ ಕಂಪನಿಯ ಬೀಜಗಳು, ಕ್ರಿಮಿನಾಶಕಗಳನ್ನು ಬಳಸಿದ ಅಥವಾ ಕುಲಾಂತರಿ ತಳಿಗಳ ಆಹಾರ ಸೇವಿಸಿ ತೊಂದರೆಗೊಳಗಾದ ರೈತರು ಇಲ್ಲವೆ, ಗ್ರಾಹಕರು ಪರಿಹಾರಕ್ಕಾಗಿ ಫೆಡರಲ್ ನ್ಯಾಯಾಲಯಗಳಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸುವಂತಿಲ್ಲ. ಇದು ಅಮೇರಿಕನ್ ಸಾವಯವ ಕೃಷಿ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಎರಡು ಲಕ್ಷ ಗ್ರಾಹಕರನ್ನು ಕೆರಳಿಸಿದೆ. ಕಳೆದ ಎರಡು ತಿಂಗಳಿಂದ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದರ ಮೂಲಕ ಅಮೇರಿಕನ್ ನಾಗರೀಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
                               (ಮುಂದುವರಿಯುವುದು)

1 ಕಾಮೆಂಟ್‌: