ಬುಧವಾರ, ಮೇ 22, 2013

ಮಲೀನ ಗಂಗೆಯ ಗಾಥೆ- ಭಾಗ -2


ಭಾರತದ ನಾಲ್ಕು ರಾಜ್ಯಗಳಲ್ಲಿ ( ಇತ್ತೀಚೆಗೆ ಬಿಹಾರದಿಂದ ಪ್ರತ್ಯೇಖವಾದ ಜಾರ್ಖಂಡ್ ಸೇರಿ ಐದುರಾಜ್ಯ) ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನತೆಗೆ ನೀರುಣಿಸಿ ಪೊರೆಯುತ್ತಿರುವ ಗಂಗಾ ನದಿಗೆ ಅವಳ ಮಕ್ಕಳು ವಿಷವುಣಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ,ಹಾಲುಣಿಸಿದ ಹೆತ್ತ ತಾಯಿಗೆ ಮಕ್ಕಳು ವಿಷವುಣಿಸುವ ದುರಂತ ಕಥನ. ಭಾರತದ ಅಭಿವೃದ್ಧಿಯು ಪಡೆದುಕೊಂಡಿರುವ  ವೇಗ ಮತ್ತು ಧಾರ್ಮಿಕ ಮೌಡ್ಯ  ಈ ಎರಡೂ  ಸಂಗತಿಗಳು ಪರೋಕ್ಷವಾಗಿ ಗಂಗಾ ನದಿಯ ಪತನಕ್ಕೆ ಕಾರಣವಾಗಿವೆ. ಕಲುಷಿತ ಗೊಂಡಿರುವ ಗಂಗಾ ನದಿಯ ಶುದ್ಧೀಕರಣದ ಯೋಜನೆ ಕಳೆದ ಕಾಲು ಶತಮಾನದಿಂದ ನಮ್ಮ ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಲಾಭದಾಯಕ ದಂಧೆಯಾಗಿದೆ. ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಹೇಳುತ್ತಾರಲ್ಲ, “ಬರ ಅಂದ್ರೆ ಎಲ್ಲರಿಗೂ ಇಷ್ಟ.” ಹಾಗೆ ನಮ್ಮ ರಸ್ತೆಗಳು ಸದಾ ಕಿತ್ತು ಹೋಗಿರಬೇಕು, ಕೆರೆ, ಕಾಲುವೆ, ಜಲಾಶಯಗಳು ಹೂಳು ತುಂಬಿರಬೇಕು, , ಸರ್ಕಾರಿ ಕಛೇರಿಗಳು ಸೋರುತ್ತಿರಬೇಕು, ಸೇತುವೆಗಳು, ಕುಸಿಯುತ್ತಿರಬೇಕು. ಇವೆಲ್ಲವೂ ನಮ್ಮ ರಾಜಕಾರಣಿಗಳ ಪಾಲಿಗೆ ಸಂಭ್ರಮ ಪಡುವ ಸಂಗತಿಗಳು. ಮಲೀನಗೊಂಡ ಗಂಗಾ ನದಿ ಕೂಡ ತನ್ನ ತಟದಲ್ಲಿರುವ ಜನತೆಗೆ ನೀರುಣಿಸಿದ ಹಾಗೆ, ಕಲುಷಿತಗೊಂಡು , ರಾಜಕಾರಣಿ ಮತ್ತು ಅಧಿಕಾರಿಗಳ ಪಾಲಿಗೆ ಹಣದ ಹೊಳೆಯನ್ನೇ ಹರಿಸುವ  ಅಕ್ಷಯ ಪಾತ್ರೆಯಾಗಿದೆ.
ಗಂಗಾ ನದಿಯ ಹರಿವಿನುದ್ದಕ್ಕೂ ಪ್ರಮುಖ ನದಿಗಳು ಸೇರಿದಂತೆ ಉಪನದಿಗಳು ಸೇರಿ ಸುಮಾರು  ಮುವತ್ತು ನದಿಗಳು ಗಂಗೆಯನ್ನು ಸೇರಿಕೊಳ್ಳುತ್ತಿವೆ. ಇವುಗಳಲ್ಲಿ ಯಮುನಾ, ಗೋಮತಿ, ಆರತಿ, ಭಿಲಾಂಗ್, ರಾಮ್ ಗಂಗಾ, ಭೂರಿಗಂಡತ್, ತಮಸಿ  ದಾಮೋದರ್, ಮಹಾನಂದ, ಗಾಗಾರ, ಸೊನ್, ಕೋಶಿ, ಗಂಡತ್, ಬುಚಿಯ, ನಹರ್, ಕಾಳಿ ಪ್ರಮುಖ ನದಿಗಳು. ಈ ನದಿಗಳು ಸಹ ಕೊಳಚೆಯನ್ನು ತಂದು ಗಂಗಾ ನದಿಗೆ ವಿಲೀನಗೊಳಿಸುತ್ತಿವೆ.
ಇವುಗಳಲ್ಲಿ ಅತ್ಯಂತ ಪ್ರಮುಖ ಕೊಳಚೆ ನದಿಗಳೆಂದರೆ, ಯಮುನಾ, ಗೊಮತಿ, ದಾಮೋದರ್, ಮಹಾನದಿ, ಗಾಗಾರ, ಮತ್ತು ಕೋಶಿ ಮುಖ್ಯವಾದವುಗಳು.


ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, 1378 ಕಿಲೋಮೀಟರ್ ಉದ್ದ ಹರಿಯುವ ಯಮುನಾ ನದಿ, ದೆಹಲಿ ಮತ್ತು ಆಗ್ರಾ ನದಿಯ ಸಮಸ್ತ ಕೊಳಚೆಯನ್ನು ತಂದು ಅಲಹಾಬಾದಿನ ಸಂಗಮದ ಬಳಿ ಗಂಗೆಯೊಂದಿಗೆ ವಿಲೀನಗೊಳ್ಳುವುದರ ಮೂಲಕ ತನ್ನ ಪಾಲಿನ ವಿಷವನ್ನು ಗಂಗೆಗೆ ಧಾರೆಯೆರೆಯುತ್ತಿದೆ.  ಉತ್ತರ ಪ್ರದೇಶದ ಪಿಬಿಟ್ ಬಳಿಯ ಗೋಮತಿ ತಾಲ್ (ಸರೋವರ) ನಲ್ಲಿ ಹುಟ್ಟುವ ಗೋಮತಿ ನದಿ 600 ಕಿ.ಮಿ.ದೂರ ಹರಿದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರ ಸೇರಿದಂತೆ, ಸುಲ್ತಾನ್ ಪುರ್ , ಭಾನುಪುರ್ ಪಟ್ಟಣಗಳ ಕೊಳಚೆಯನ್ನು ತಂದು ಗಾಜಿಪುರ್ ಬಳಿ ಗಂಗೆಯನ್ನು ಸೇರುತ್ತದೆ.
ಜಾರ್ಖಾಂಡ್ ರಾಜ್ಯದ ಪಾಲಮು ಎಂಬಲ್ಲಿ ಹುಟ್ಟುವ ದಾಮೋದರ್ ನದಿ 600 ಕಿ.ಮಿ. ಹರಿದು, ಜಾರ್ಖಾಂಡ್ ರಾಜ್ಯದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಹೊರ ಹಾಕಿದ ಕೊಳಚೆಯನ್ನು ತಂದು ಪಶ್ಚಿಮ ಬಂಗಾಳದ ಹೂಗ್ಲಿ ಬಳಿ ಗಂಗೆಯೊಂದಿಗೆ ಕೂಡಿಕೊಳ್ಳತ್ತದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಜನ್ಮ ತಾಳುವ ಮಹಾನಂದ ನದಿ 360 ಕಿ.ಮಿ. ಹರಿದು ಸಿಲುಗುರಿ ನಗರ ಕೊಳಚೆ ಹೊತ್ತು ಬಂಗ್ಲಾದೇಶದ ಗಡಗಿರಿ ಎಂಬಲ್ಲಿ ಗಂಗಾನದಿಯನ್ನು ಸೇರಿಕೊಳ್ಳತ್ತದೆ.
 ಹಿಮಾಲಯದ ಕಾಲಾಪಾನಿ ಎಂಬಲ್ಲಿ ಹುಟ್ಟುವ ಗಾಗಾರ ನದಿ 323 ಕಿ.ಮಿ. ಹರಿದು ಬಿಹಾರದ ಡೋರಿಗಂಜ್ ಬಳಿ ಗಂಗಾ ನದಿಯನ್ನು ಸೇರಿದರೆ, ಬಿಹಾರದ ದುಃಖದ ನದಿ ಎಂದು ಕರೆಯಲ್ಪಡುವ ಕೋಶಿ ನದಿ, ನೇಪಾಳ ಮತ್ತು ಭಾರತದ ಗಡಿಭಾಗದಲ್ಲಿ ಜನಿಸಿ, 729 ಕಿ.ಮಿ. ಹರಿದು ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ಎರಡು ನದಿಗಳಿಂದ ಗಂಗಾ ನದಿಗೆ ಕೊಳಚೆ ಮತ್ತು ಕಸ ಸೇರುತ್ತಿರುವ ಪ್ರಮಾಣದಲ್ಲಿ ಶೇಕಡ 16 ರಷ್ಟು ಕೊಡುಗೆ ಇದೆ. ಹೀಗೆ ಉಪನದಿಗಳ ಕೊಡುಗೆಯ ಜೊತೆಗೆ ವಿಷಕನ್ಯೆಯಾಗಿ ಹರಿಯುತ್ತಿರುವ ಗಂಗಾ ನದಿಯ ಶುದ್ಧೀಕರಣ ಕಾರ್ಯ ಯೋಜನೆ ನಿನ್ನೆ ಮೊನ್ನೆಯದಲ್ಲ. ಇದಕ್ಕೆ 27 ವರ್ಷಗಳ ಸುಧೀರ್ಘ ಇತಿಹಾಸವಿದೆ. 1985 ರಲ್ಲಿ ಅಂದಿನ ಪ್ರದಾನಿ ರಾಜೀವ ಗಾಂಧಿಯವರು ಗಂಗಾ ಕ್ರಿಯಾ ಯೋಜನೆ ( Ganga Action Plan) ಎಂಬ ಯೋಜನೆಯಡಿ ನದಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು 450 ಕೋಟಿ ರೂ. ಹಣ ನೀಡಿ ಹಸಿರು ನಿಶಾನೆ ತೋರಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಗಂಗಾ ನದಿಯ ಶುದ್ಧೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಿಸಿ, ಸಲಹೆ ನೀಡುವ ಕಂಪನಿಗಳಿಗೆ 1100 ಕೋಟಿ ರೂಪಾಯಿಗಳನ್ನು ವ್ಯಯಮಾಡಲಾಗಿದೆ.
ಗಂಗಾ ನದಿಯ ತಟದಲ್ಲಿರುವ ನಗರ ಮತ್ತು ಪಟ್ಟಣಗಳ ಕೊಳಚೆ ನೀರನ್ನು ಸಂಸ್ಕರಿಸಿ ನದಿಗೆ ಬಿಡುವುದು, ಕಾರ್ಖಾನೆಗಳ ತ್ಯಾಜ್ಯವನ್ನು ತಡೆಗಟ್ಟುವುದು, ಮತ್ತು ಎಲ್ಲಾ ಪಟ್ಟಣಗಳ ಮತ್ತು ನಗರಗಳ ಒಳಚರಂಡಿಗಳನ್ನು ದುರಸ್ತಿ ಪಡಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಂದ ಸೃಷ್ಟಿಯಾಗುವ ಕಸ ಮತ್ತು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಗ್ರಹಿಸಿ ಸಂಸ್ಕರಿಸುವುದು ಹೀಗೆ ನೂರಾರು ಯೋಜನೆಗಳ ಕನಸುಗಳನ್ನು ಯೋಜನೆಯ ಸಂದರ್ಭದಲ್ಲಿ ಹರಿಯ ಬಿಡಲಾಯಿತು. ಆದರೆ, ಸರ್ಕಾರಗಳ ನಿತ್ಲಕ್ಷ್ಯ ಮತ್ತು ವಿದ್ಯುತ್ ಅಭಾವದಿಂದ ಬಹುತೇಕ ಸಂಸ್ಕರಣಾ ಘಟಕಗಳು ಸ್ಥಗಿತಗೊಂಡಿವೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಪ್ರತಿದಿನ 42 ದಶಲಕ್ಷ ರಸಾಯನಿಕಯುಕ್ತ ನೀರು ನದಿಗೆ ಸೇರುತ್ತದೆ. ಕಾನ್ಪುರದಲ್ಲಿರುವ ಸಂಸ್ಕರಣಾ ಘಟಕದ ಸಾಮರ್ಥ್ಯ ದಿನವೊಂದಕ್ಕೆ 9 ದಶಲಕ್ಷ ಕೊಳಚೆ ನೀರನ್ನು ಮಾತ್ರ ಸಂಸ್ಕರಿಸಬಲ್ಲದು. ಈ ಕಾರಣಕ್ಕಾಗಿ 2001 ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸಿದ ನ್ಯಾಯಾಲಯ ಕಾನ್ಪುರದಲ್ಲಿ 142 ಚರ್ಮ ಹದ ಮಾಡುವ ಕೈಗಾರಿಕೆಗಳನ್ನು ಮುಚ್ಚಿಸಿದೆ.
ಹಿಂದೂ ಧರ್ಮದ ಭಕ್ತರ ಪಾಲಿಗೆ ಸ್ವರ್ಗಕ್ಕೆ ಇರುವ ಏಕೈಕ ಹೆಬ್ಬಾಗಿಲು ಎಂದು ನಂಬಿಕೆ ಪಾತ್ರವಾಗಿರುವ ವಾರಾಣಾಸಿಯಲ್ಲಿ ದಿನವೊಂದಕ್ಕೆ 350 ದಶಲಕ್ಷ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಸಂಸ್ಕರಿಸುವ ಸಾಮರ್ಥ್ಯ ಕೇವಲ 122 ದಶಲಕ್ಷ ಲೀಟರ್ ಮಾತ್ರ. ಉಳಿದ ನೀರು ನೇರವಾಗಿ ನದಿಯ ಒಡಲು ಸೇರುತ್ತಿದೆ. ಎರಡನಯ ಗಂಗಾ ನದಿಯ ಶುದ್ಧೀಕರಣ ಯೋಜನೆ ಕುಂಟುತ್ತಾ ಸಾಗಿದ ಪರಿಣಾಮ, 2009ರಲ್ಲಿ ಪ್ರದಾನಿ ಡಾ.ಮನಮೋಹನ್ ಸಿಂಗ್ , ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿ, ರಾಷ್ಟ್ರೀಯ ನದಿ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದ್ದಾರೆ. ಈ ಮಂಡಳಿಯಲ್ಲಿ 24 ಮಂದಿ ತಜ್ಞರು ಸೇರಿದಂತೆ ಗಂಗಾ ನದಿ ಹರಿಯುವ ಐದು ರಾಜ್ಯಗಳ ಪ್ರದಾನ ಕಾರ್ಯದರ್ಶಿಗಳು, ಕೇಂದ್ರ ನೀರಾವರಿ ಸಚಿವ ಮತ್ತು ಪರಿಸರ ಖಾತೆಯಸಚಿವರು ಸಹ ಸದಸ್ಯರಾಗಿರುತ್ತಾರೆ. 2011 ರಲ್ಲಿ ನದಿ ಶುದ್ಧೀಕರಣಕ್ಕಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ವಿಶ್ವ ಬ್ಯಾಂಕ್ ನಿಂದ ಗಂಗಾ ನದಿಯ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ  ಸಾಲದ ಒಡಂಬಡಿಕೆ ಏರ್ಪಟ್ಟಿದೆ. ಆದರೆ ನದಿಯ ಚಹರೆಯಾಗಲಿ, ಲಕ್ಷಣವಾಗಲಿ ಬದಲಾಗಲಿಲ್ಲ. ಬದಲಾಗುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಏಕೆಂದರೆ, ಜಗತ್ತಿನ ಪ್ರಮುಖ ಐದು ಮಲೀನ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಸದಾ ಹಣದ ಹಾಲು ಕರೆಯುವ ಹಸು. ಭಾರತದ ನದಿಗಳಲ್ಲಿ ಹರಿಯುವ ಕೊಳಚೆ ಮತ್ತು ಕಸ ಕೂಡ ನಮ್ಮ ರಾಜಕಾರಣಿಗಳು, ಪಕ್ಷಗಳಿಗೆ ಲಾಭದಾಯಕ ದಂಧೆಯಾಗಿದೆ.
 ಒಂದು ಕ್ವಾರ್ಟರ್ ಅಗ್ಗದ ಸಾರಾಯಿಗೆ, ಒಂದು ದೊನ್ನೆ ಮಾಂಸಕ್ಕೆ,ಮೂರು ಕಾಸಿನ  ಕಳಪೆ ಸೀರೆಗೆ,ಮತ್ತು  ಐದು ನೂರು ಆರತಿ ತಟ್ಟೆಯ ಕಾಸಿಗೆ ನಮ್ಮ ಜನ ಚುನಾವಣೆಗಳಲ್ಲಿ ಮಾರಾಟವಾಗುತ್ತಿರುವಾಗ, ರಾಜಕಾರಣಿಗಳು ಚುನಾವಣೆಗೆ ಹಾಕಿದ ಬಂಡವಾಳವನ್ನು ಯೋಜನೆ ಮುಖಾಂತರ ಬಡ್ಡಿ ಸಮೇತ ಹಿಂದಕ್ಕೆ ಪಡೆಯುತ್ತಿದ್ದಾರೆ. ಗಂಗೆ ಮಾತ್ರ ಮೌನವಾಗಿ ಮಲೀನಗೊಂಡು ಹರಿಯುತ್ತಿದ್ದಾಳೆ., ಮುಂದೆಯೂ ಹರಿಯುತ್ತಾಳೆ.
                                               (ಮುಗಿಯಿತು)

2 ಕಾಮೆಂಟ್‌ಗಳು:

  1. ಮಾನ್ಯರೇ, ಇದು ಒಳ್ಳೆಯ ಲೇಖನ. ಭಾರತೀಯರಾದ ನಾವು ಇತ್ತಿತ್ತಲಾಗಿ ದೈವತ್ವವನ್ನು ಮರೆಯುತ್ತಿದ್ದೇವೆ. ಗಂಗ ಮಾತೆಯನ್ನು ಮಲಿನಗೊಳಿಸುತ್ತಿದ್ದೇವೆ. ಅದೇ ವಿದೇಶಿಯರು ಪವಿತ್ರ ಗಂಗೆ ಎಲ್ಲಿದೆ ಎಂದು ಹುಡುಕಿ ಸ್ನಾನಮಾಡಿ ಪಾವನರಾಗಲು ಬಯಸುತ್ತಾರೆ. ಇದಕ್ಕೆ ಸರಕಾರವನ್ನು ನಂಬಿ ಕುಳಿತರೆ ಗಂಗಾ ನದಿ ಉಳಿಯುವುದಿಲ್ಲ. ಇಡೀ ಉತ್ತರ ಭಾರತದ ಜನತೆ ಗಂಗೆಯನ್ನು ಉಳಿಸಲು ಬೃಹತ್ ಅಂಧೋಳನವನ್ನೇ ಮಾಡಿದರೆ ಗಂಗೆ ಉಳಿಯುತ್ತಾಳೆ. ಇಲ್ಲವಾದರೆ ಉತ್ತರ ಭಾರತದ ಕೊಳಚೆ ನೀರಿನ ನದಿ ಎಂದು ಹೆಸರಿಡಬಹುದು ಅಲ್ಲವೇ? ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. I am very happy to have gone through this article. It's really informative containing all essential details. Thiscsymbalises the decay of our culture and inability to cope up with the problems we are facing. Those who get enraged at slightest 'insult' to their religious symbals, the numerous senas, why cant they form a GANGA SENA and save this eternal source of drinking water at least in the name of conserving to future generations what they consider as PAVITRA GANGA JAL?

    ಪ್ರತ್ಯುತ್ತರಅಳಿಸಿ