ಕಳೆದ
ಹದಿನಾಲ್ಕು ವರ್ಷಗಳಿಂದ ನೆಹರು ಅವರನ್ನು ತೆಗೆಳುವುದನ್ನೇ ಕಾಯಕ ಮಾಡಿಕೊಂಡಿರುವ ಬಿ.ಜೆ.ಪಿ.
ನಾಯಕರು ಗಾಂಧಿ
ಮತ್ತು ನೆಹರು ಕುರಿತಾಗಿ ಮಾನಸಿಕ
ರೋಗಿಗಳಾಗಿದ್ದಾರೆ. ಹಸಿ
ಸುಳ್ಳುಗಳಿಂದ ಕೂಡಿದ ನಕಲಿ ಇತಿಹಾಸವನ್ನು ಸೃಷ್ಟಿ ಮಾಡುವುದು ಅವರೆಲ್ಲರ ಮುಖ್ಯ ಗುರಿಯಾಗಿದೆ. ನೆಹರು ಹೆಸರು ಹೇಳಲು ಯೋಗ್ಯತೆ ಇಲ್ಲದ ಪ್ರಧಾನಿ ನರೇಂದ್ರ ಮೋದಿಗೆ ತನ್ನ
ಆಡಳಿದ ವೈಫಲ್ಯಗಳನ್ನು ಮುಚ್ಚಿಹಾಕಲು ಜನರನ್ನು ನೆಹರು ಅವರತ್ತ ಗಮನ ಸೆಳೆಯುವುದು ದಿನನಿತ್ಯದ ಕಾಯಕವಾಗಿದೆ. ನೆಹರು
ಪ್ರಧಾನಿಯಾಗಿ ಐನೂರು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿಹೋಗಿದ್ದರೆ, ನಾನು ರಾಷ್ಟçಕ್ಕಾಗಿ ಸಾಲ ಮಾಡುವ ಸ್ಥಿತಿ ಬರುತ್ತಿರಲಿಲ್ಲ ಎಂಬ
ಮಾತುಗಳು ಮಾತ್ರ ಈ ಮಹಾಶಯನಿಂದ ಬಾಕಿ
ಉಳಿದಿದೆ. ಇಂತಹ
ಸಮಯದಲ್ಲಿ ಭಾರತದ ಶ್ರೇಷ್ಠ ಇತಿಹಾಸ ತಜ್ಞರಾದ ಆದಿತ್ಯ ಮುಖರ್ಜಿಯವರು ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ್ದ ನೆಹರು ಕಲ್ಪನೆಯ ಭಾರತ ಎಂಬ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿಯಾಗಿ ಇದೀಗ ಸೇರ್ಪಡೆಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ
ತಂದ ಡಾ.ಬಿ.ಆರ್.ಮಂಜುನಾಥ್ ಮತ್ತು ಡಾ.ಹೆಚ್.ಕೆ.ಜಯಲಕ್ಷಿö್ಮ ಹಾಗೂ ಕೃತಿಯನ್ನು
ಪ್ರಕಟಿಸಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ಅಭಿನಂದನೆಗಳು.
ಕನ್ನಡದ
ಓರ್ವ ಲೇಖಕನಾಗಿ ಹಾಗೂ ಹಿರಿಯ ಪತ್ರಕರ್ತನಾಗಿ ಆಧುನಿಕ ಭಾರತದ ಇತಿಹಾಸವನ್ನು ವಿಶೇಷವಾಗಿ ಸ್ವಾತಂತ್ರ್ಯಾನಂತರದ ಇತಿಹಾಸವನ್ನು ಗಂಭೀರವಾಗಿ ಓದಿಕೊಂಡಿರುವ ಮತ್ತು ಓದುತ್ತಿರುವ ನನಗೆ, ಇಂದಿನ ಕಲಸು ಮೇಲೋಗರ ಇತಿಹಾಸದ ಭಾರತದಲ್ಲಿ ಆದಿತ್ಯ ಮುಖರ್ಜಿ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಕೆ.ಎನ್. ಪಣಿಕ್ಕರ್
ರಂತಹ ವಾಸ್ತವ ದೃಷ್ಟಿಕೋನದ ಇತಿಹಾಸ ತಜ್ಞರು ಆಶಾಕಿರಣವಾಗಿ ಕಾಣುತ್ತಾರೆ. ಟಿಪ್ಪು ಸುಲ್ತಾನ್ ನಿಂದ ಹಿಡಿದು, ಗಾಂಧಿ
ಮತ್ತು ನೆಹರು ಕುರಿತು ಹುಸಿ ಇತಿಹಾಸವನ್ನು ಸೃಷ್ಟಿ ಮಾಡುತ್ತಿರುವ ಬಿ.ಜೆ.ಪಿ.
ಆಸ್ಥಾನದ ವಿದೂಷಕರಿಗೆ ಇವರೆಲ್ಲರೂ ಹೊಟ್ಟೆಯೊಳಗಿನ ಕರುಳು ಹುಣ್ಣುಗಳಂತೆ ಬಾಧಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ, ಆದಿತ್ಯಾ ಮುಖರ್ಜಿ ಮತ್ತು ಮೃದುಲಾ ಮುಖರ್ಜಿ ಇಬ್ಬರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ ‘’ ಆರ್.ಎಸ್.ಎಸ್. ಸ್ಕೂಲ್ ಟೆಕ್ಸ್ಟ್ ಅಂಡ್ ಮರ್ಡರ್ ಆಫ್ ಮಹಾತ್ಮ’’ ಎಂಬ ಕೃತಿಯು ಸಂಘ ಪರಿವಾರದ ಮುಖವಾಡವನ್ನು ಕಳಚಿ ಹಾಕಿತ್ತು. ಕೇವಲ ನೂರ ಮುವತ್ತು ಪುಟಗಳಷ್ಟು ಇರುವ ಈ ಕೃತಿಯಲ್ಲಿ ನಲವತ್ತು
ಪುಟಗಳಷ್ಟು ಹೆಚ್ಚುವರಿಯಾಗಿ ಇತಿಹಾಸದ ಅಧಿಕೃತ ಅಂಕಿ ಅಂಶದ ಟಿಪೊಣಿಗಳ ದಾಖಲೆಗಳನ್ನು ನೀಡಿ, ವಿ.ಡಿ. ಸಾವರ್ಕರ್,
ಹುಸಿ ಸ್ವಾತಂತ್ರ ಹೋರಾಟಗಾರ ಮತ್ತು ಪೊಳ್ಳು ವ್ಯಕ್ತಿತ್ವವುಳ್ಳ ಮನುಷ್ಯ ಎಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ.
ಗಾಂಧೀಜಿಯವರು
ಹತ್ಯೆಯಾದ ನಂತರ, ನಾಥುರಾಮ್ ಗೋಡ್ಸೆ ಮತ್ತು ಸಂಗಡಿಗರ ಜೊತೆ ಸಾವರ್ಕರ್ ಕೂಡಾ ಬಂಧಿತರಾಗಿದ್ದರು. ದೆಹಲಿ
ಕೆಂಪುಕೋಟೆ ಒಳಗೆ ಮೊಘಲ್ ದೊರೆಗಳು ಟಗರು ಪಂದ್ಯ ನಡೆಸುತ್ತಿದ್ದ ನೆಲಮಹಡಿಯಲ್ಲಿ ಗಾಂಧಿ
ಹತ್ಯೆ ಕುರಿತು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಡೆಯುತ್ತಿದ್ದ ವಿಚಾರಣೆಯ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್, ಎಂದಿಗೂ
ಗೋಡ್ಸೆ ಮತ್ತು ಸಂಗಡಿಗರತ್ತ ತಿರುಗಿ ನೋಡಲಿಲ್ಲ ಮತ್ತು ಅವರೊಂದಿಗೆ ಮಾತನಾಡಲಿಲ್ಲ.
ನನಗೂ ಇವರಿಗೂ ಯಾವ ಸಂಬಂಧವಿಲ್ಲ, ಇವರೆಲ್ಲರೂ ನನಗೆ ಅಪರಿಚಿತರು ಎಂಬಂತೆ ನಡೆದುಕೊಂಡರು. ವಾಸ್ತವವಾಗಿ ಗಾಂಧೀಜಿಯವರ ಹತ್ಯೆಗಾಗಿ ಬಳಸಿದ ಪಿಸ್ತೂಲ್ ಅನ್ನು ಗ್ವಾಲಿಯರ್ ನಗರ ಆರ್ಯುವೇದ ವೈದ್ಯ ಡಾ.ದತ್ತಾತ್ರೇಯ ಪರ್ಚುರೆ
ಎಂಬಾತನ ಮೂಲಕ ಸಾವರ್ಕರ್
ಕೊಡಿಸಿದ್ದರು ಎಂಬುದನ್ನು ಅಂದಿನ ಬಾಂಬೆ ಪೊಲೀಸರು ಪತ್ತೆ ಹಚ್ಚಿದ್ದರು. ಬಾಂಬೆ ಪೊಲೀಸ್ ಡೈರಿ ಎಂಬ 750 ಪುಟಗಳ ಮಾಹಿತಿಯನ್ನು ಇಟ್ಟುಕೊಂಡು ಪ್ರಾನ್ಸ್ ಲೇಖಕ ಡಾಮಿನಿಕ್ಯೂ ಲೇಪಿಯರ್ ಎಂಬುವರು ಲ್ಯಾರಿ ಕೊಲಿನ್ಸ್ ಜೊತೆಗೂಡಿ ರಚಿಸಿರುವ ‘’ಫ್ರೀಡಂ
ಅಟ್ ಮಿಡ್ ನೈಟ್ ‘’ ಎಂಬ ಕೃತಿಯಲ್ಲಿ ಈ ವಿಷಯವನ್ನು ವಿವರವಾಗಿ
ದಾಖಲಿಸಿದ್ದಾರೆ.
ಸಾಕ್ಷಾಧಾರಗಳ
ಕೊರತೆಯ ಆಧಾರದ ಮೇಲೆ ಗಾಂಧಿ ಹತ್ಯೆಯ ಆರೋಪಿಗಳ ಪಟ್ಟಿಯಿಂದ ವಿ.ಡಿ.ಸಾವರ್ಕರ್
ಬಿಡುಗಡೆಯಾದರು. ನಾಥುರಾಂ ಗೋಡ್ಸೆ ಮತ್ತು ನಾರಾಯಣ್ ಆಪ್ಟೆಗೆ ಮರಣದಂಡನೆಯ ಶಿಕ್ಷೆ ಹಾಗೂ ಇತರರಿಗೆ
ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಶಿಕ್ಷೆ ಪ್ರಕಟವಾದ ನಂತರ ಗೋಡ್ಸೆ,
ತನ್ನ ವಕೀಲರ ಜೊತೆ ಮಾತನಾಡುತ್ತಾ, ‘’ ಈ ಮನುಷ್ಯನನ್ನು ಹಿಂದೂ
ಧರ್ಮದ ಮಹಾನ್ ರಕ್ಷಕ ಎಂದು ನಾವು ನಂಬಿದ್ದು ತಪ್ಪಾಯಿತು’’ ಎಂದು ನುಡಿದಿದ್ದ ಮಾತನ್ನು ಆದಿತ್ಯ ಮುಖರ್ಜಿಯವರು ತಮ್ಮ ಕೃತಿಯಲ್ಲಿ ವಕೀಲರ ಡೈರಿಯ ಪುಟದ ಜೊತೆಗೆ ಉಲ್ಲೇಖಿಸಿದ್ದರು. ಹಿರಿಯ ವಕೀಲರಾಗಿದ್ದ ಎಲ್.ಜಿ. ನೂರಾನಿಯವರು ಸಹ ತಮ್ಮ ಒಂದು
ಕೃತಿಯಲ್ಲಿ ಈ ಪ್ರಸಂಗವನ್ನು ದಾಖಲಿಸಿದ್ದಾರೆ.
ಇಂತಹ ವಸ್ತುನಿಷ್ಠ ಇತಿಹಾಸಕಾರ ಹಾಗೂ ದೆಹಲಿಯ ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಆದಿತ್ಯ ಮುಖರ್ಜಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇತಿಹಾಸ ಕುರಿತು ಗಮನ ಸೆಳೆದವರು. ನೆಹರು ಕಲ್ಪನೆಯ ಭಾರತ ಕೃತಿಯಲ್ಲಿ ಅವರು ನೀಡಿರುವ ಅಧಿಕೃತ ದಾಖಲೆಗಳು ನೆಹರು ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜೊತೆಗೆ ಅವರ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತವೆ.
ಪೀಠಿಕೆ
ಮತ್ತು ಪ್ರಸ್ತಾವನೆಯ ಅಧ್ಯಾಯಗಳಲ್ಲಿ ನೆಹರು ಅವರನ್ನು ಸಂಘ ಪರಿವಾರವು ರಾಕ್ಷಸೀಕರಿಸುವ ಕೃತ್ಯವನ್ನು ಆಧಾರಗಳ ಸಮೇತ, ನಿರಾಕರಿಸುವ ಲೇಖಕರು, ಭಾರತದಲ್ಲಿ ನೆಹರು ಕೂಡಾ ಓರ್ವ ಶ್ರೇಷ್ಠ ಇತಿಹಾಸಕಾರ ಎಂದು ಹೇಳಿರುವುದು ಗಮನಾರ್ಹ ಸಂಗತಿ. ನೆಹರು ಸೆರೆಮನೆಯಲ್ಲಿ ಬ್ಯಾಡ್ಮಿಂಟನ್ ಆಟ ಆಡುತ್ತಾ ಕಾಲಕಳೆಯುತ್ತಿದ್ದರು
ಎಂದು ಹೇಳುವ
ಸಂಘ ಪರಿವಾರದ ಮೂರ್ಖರು ಆದಿತ್ಯ
ಮುಖರ್ಜಿಯವರ ಈ ಕೃತಿಯನ್ನು
ಓದಲೇಬೇಕು. ಸ್ವಾತಂತ್ರ್ಯ
ಹೋರಾಟದ ಸಮಯದಲ್ಲಿ ಒಟ್ಟು ಒಂಬತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನೆಹರು, ಶಿಕ್ಷೆ ಅನುಭವಿಸುತ್ತಿದ್ದ ದಿನಗಳಲ್ಲಿ ಓದು ಮತ್ತು ಬರೆವಣಿಗೆಯಲ್ಲಿ ನಿರತರಾಗಿದ್ದರು. ಅವರು ಈ ಸಂದರ್ಭದಲ್ಲಿ ರಚಿಸಿಸುವ
ಡಿಸ್ಕವರಿ ಆಫ್ ಇಂಡಿಯಾ ಎಂಬ ಕೃತಿಯು ಇಡೀ ಭಾರತದ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆ. ತಮ್ಮ
ಪುತ್ರಿ ಇಂದಿರಾ ಅವರಿಗೆ ಸೆರೆಮನೆಯಿಂದ
ಬರೆದಿರುವ ಪತ್ರಗಳ ಸಂಕಲನವಾದ ‘’ ಲೆಟರ್ಸ್ ಫ್ರಮ್ ಎ ಪಾದರ್ ಟು
ಹಿಸ್ ಡಾಟರ್’’ ಎಂಬ ಕೃತಿಯನ್ನು ಓದಿದಾಗ ಮಾತ್ರ ನೆಹರು ಅವರ ಅಪರಿಮಿತ ಜ್ಞಾನದ ಬಗ್ಗೆ ನಮಗೆ ಅರಿವಾಗಬಲ್ಲದು. ಲಂಡನ್ ನಗರದಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಆಗಮಿಸಿದ ನೆಹರು, ಆ ಕಾಲ ಘಟ್ಟದ
ವಕೀಲಿ ವೃತ್ತಿಯಲ್ಲಿ ಹೇರಳವಾಗಿ ಹಣ ಸಂಪಾದಿಸಬಹುದಿತ್ತು. ಆದರೆ, ಅವರು
ನೇರವಾಗಿ ಸ್ವಾತಂತ್ರö್ಯ ಹೋರಾಟಕ್ಕೆ ದುಮುಕಿದರು.
1916 ರಲ್ಲಿ ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮವಾಗಿ ಗಾಂಧಿಯವರನ್ನು ಭೇಟಿ ಮಾಡಿದ ನೆಹರು ಅಂದಿನಿಂದ ಅವರ ಮಾನಸ ಪುತ್ರನಂತೆ ಬದುಕಿದರು.
ನೆಹರು
ಧರಿಸುತ್ತಿದ್ದ ಅತ್ಯಾಧುನಿಕ ವೇಷ ಭೂಷಣಗಳನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಅವರು ನೀಡಿದ್ದ ‘’ ನಾನು ಪೂರ್ವ ಮತ್ತು ಪಶ್ಚಿಮಗಳ ಸಂಸ್ಕೃತಿಯ ಸಂಗಮದಂತೆ ಕಾಣಿಸುತ್ತೇನೆ ನಿಜ. ಆದರೆ,
ನನ್ನ ಎದೆಯೊಳಗೆ ಸದಾ ಮಿಡಿಯುವುದು ಭಾರತದ ಬಹುಸಂಸ್ಕೃತಿ ಮಾತ್ರ’’ ಎಂಬ ಉತ್ತರವು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿಯಾಗಿದೆ. ವಾಸ್ತವವಾಗಿ ಧರ್ಮದ ಹೆಸರಿನಲ್ಲಿ ಭಾರತ ವಿಭಜನೆಯಾಗುವುದು ಅವರಿಗೆ ಬೇಕಿರಲಿಲ್ಲ. ಆದರೆ, ಮಹಮ್ಮದ್ ಆಲಿ ಜಿನ್ನಾ ಭಾರತೀಯ ಕಾಂಗ್ರೆಸ್ ಪಕ್ಷವನ್ನು ಹಿಂದುಗಳ ಪಕ್ಷ ಎಂಬ ಲೇಪನ ಹಚ್ಚಿ ಮುಸ್ಲಿಂರ ಮನವೊಲಿಸಲು ಹೊರಟಾಗ, ವಿಭಜನೆ ಅವರ
ಪಾಲಿಗೆ ಅನಿವಾರ್ಯವಾಯಿತು. ಸ್ವಾತಂತ್ರ್ಯಾ ನಂತರದ ಭಾರತದ ಕೋಮುವಾದ ಕುರಿತು ಅವರ ತಾಳಿದ ನಿಷ್ಠುರ ನಿಲುವು ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಆದಿತ್ಯ ಮುಖರ್ಜಿಯವರು, ಕೋಮುವಾದ ಕುರಿತಂತೆ ನೆಹರು ಅವರಿಗೆ ಇದ್ದ ಸ್ಪಷ್ಠವಾದ ಪರಿಕಲ್ಪನೆಯನ್ನು ಹೀಗೆ ವಿವರಿಸಿದ್ದಾರೆ. ‘’ ವಾಸ್ತವವಾಗಿ ನೆಹರು ಬಹುಸಂಖ್ಯಾತ ಕೋಮುವಾದದ ಬಗ್ಗೆ ಎಷ್ಟು ವಿಮರ್ಶಾತ್ಮಕವಾಗಿದ್ದರೋ, ಅಲ್ಪ ಸಂಖ್ಯಾತ ಕೋಮುವಾದದ ಬಗ್ಗೆಯೂ ಹಾಗೆಯೇ ಇದ್ದರು. ಇವೆರೆಡರ ಮಧ್ಯೆ ಯಾವುದೇ ಮುಖ್ಯ ವ್ಯೆತ್ಯಾಸವಿಲ್ಲ ಎಂದು ಅವರು ಹೇಳುತ್ತಿದ್ದರು’
’ಸ್ವಾತಂತ್ರ್ಯಾ
ನಂತರದ ಭಾರತವನ್ನು
ಮುನ್ನಡೆಸುವ ಜವಾಬ್ದಾರಿಯು ನೆಹರು ಹೆಗಲಿಗೆ ಬಿದ್ದಾಗ, ಅವರ ಮುಂದೆ ಪರ್ವತದಷ್ಟು ಸಮಸ್ಯೆಗಳಿದ್ದವು. ಮುವತ್ತೇಳು
ಕೋಟಿ ಜನಸಂಖ್ಯೆ ಇದ್ದ ಅಂದಿನ ಭಾರತದಲ್ಲಿ ಶೇಕಡಾ ಎಂಬತ್ತರಷ್ಟು ಮಂದಿ ಅನಕ್ಷರಸ್ಥರಿದ್ದರು. ಬಡತನ, ಹಸಿವು, ಜಾತಿಯತೆ ಆಧಾರಿತ ಶ್ರೇಣಿಕೃತ ಸಮಾಜ ಹಾಗೂ ಭೂಮಿಯ ಮೇಲಿನ ನರಕಗಳು ಎಂಬಂತಿದ್ದ ಗ್ರಾಮೀಣ ಪ್ರದೇಶದ ಹಳ್ಳಿಗಳು, ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸ್ಥಿತಿ ಇಂತಹ ಸಮಸ್ಯೆಗಳು ಅವರ ಮುಂದಿದ್ದವು. ಇಡೀ
ದೇಶಾದ್ಯಂತ ಬರಡು ಹಾಗೂ ಮಳೆಯಾಶ್ರಿತ ಭೂಮಿ, ಆಹಾರ ಧಾನ್ಯಗಳ ಕೊರತೆಯ ಜೊತೆಗೆ ಜನಸಾಮಾನ್ಯರನ್ನು ಶಿಕ್ಷಣದತ್ತ ಕರೆದೊಯ್ಯುವ ಜವಾಬ್ದಾರಿಗಳಿದ್ದವು. ಇವೆಲ್ಲವುಗಳಿಗೆ
ಅವರು ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಗಾಂಧಿಯವರ ಚಿಂತನೆಗಳಿಗೆ ವಿರುದ್ಧವಾಗಿ ಸಮೃದ್ಧ ಭಾರತವನ್ನು ನಿರ್ಮಿಸಲು, ಮಿಶ್ರ ಆರ್ಥಿಕತೆ ಯೋಜನೆಯಡಿ, ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಅಣೆಕಟ್ಟು, ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಿದರು ಜೊತೆಗೆ ವಿಜ್ಞಾನದ ಬೆಳವಣಿಗೆ ಆದ್ಯತೆ ನೀಡಿದರು. ಅಣೆಕಟ್ಟುಗಳ ಮೂಲಕ ಏಕಕಾಲಕ್ಕೆ ಜಲವಿದ್ಯುತ್ ಉತ್ಪಾದನೆ ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸುವುದು ಅವರಿಗೆ ಮುಖ್ಯವಾಗಿತ್ತು.
ನೆಹರು
ಅವರ ಬಹುತೇಕ ಈ ಕ್ರಿಯೆಗಳು 1947
ರ ಆಗಸ್ಟ್ 15 ರಿಂದ ಶೂನ್ಯದಿಂದ
ಪ್ರಾರಂಭವಾದವು. ಭಾರತವನ್ನಾಳಿದ ಬ್ರಿಟಿಷರು ನಮಗೆ ಈ
ದೇಶದಲ್ಲಿ ಕಸವನ್ನು ಹೊರತು ಪಡಿಸಿದರೆ ಬೇರೇನೂ ಬಿಟ್ಟು ಹೋಗಿರಲಿಲ್ಲ. ಅವರು
ಈ ದೇಶವನ್ನು ತೊರೆದ
ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ ಇಪ್ಪತ್ತು ನಗರಗಳಿಗೆ ಮಾತ್ರ ವಿದ್ಯುತ್ ಲಭ್ಯವಿತ್ತು. ದೇಶದ
ಸಂಸ್ಥಾನದ ಮಾಜಿ ದೊರೆಗಳ ಅರಮನೆಯಂತಹ ನಿವಾಸಗಳಿಗೆ ದೂರವಾಣಿ
ಸೌಲಭ್ಯವಿತ್ತು. ಯಾವುದೇ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೆಲವು ನದಿಗಳಿಗೆ ನಿರ್ಮಿಸಲಾಗಿದ್ದ ಕೃಷ್ಣರಾಜ ಸಾಗರಂತಹ ಸಣ್ಣ
ಪ್ರಮಾಣದ ಅಣೆಕಟ್ಟುಗಳು ಮಾತ್ರ ಇದ್ದವು. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯಾಗಲಿ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು ಕಟ್ಟಡ
ನಿರ್ಮಾಣಕ್ಕೆ ಅವಶ್ಯಕತೆ ಇದ್ದ ಸಿಮೆಂಟ್ ಉತ್ಪಾದಿಸುವ ಕಾರ್ಖಾನೆಗಳು ಇರಲಿಲ್ಲ. ದೇಶದ
ಎಲ್ಲೆಡೆ ಹಸಿವು
ಮತ್ತು ಅಪೌಷ್ಟಿಕತೆ ತಾಂಡವಾಡುತ್ತಿತ್ತು. ಇಡೀ ದೇಶಾದ್ಯಂತ ಬಾಣಂತಿಯರು ಹಾಗೂ ಶಿಶು ಮರಣಗಳು ಸಾಮಾನ್ಯವಾಗಿದ್ದವು.
ಇಂತಹ
ಸ್ಥಿತಿಯಲ್ಲಿ ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನೆಹರು, ದೇಶಾದ್ಯಂತ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ ವಿಶ್ವವಿದ್ಯಾನಿಲಯಗಳು,
ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಇಸ್ರೋ
ಸಂಸ್ಥೆಯನ್ನು ಒಳಗೊಂಡAತೆ ನವರತ್ನ ಸಾರ್ವಜನಿಕ
ಸಂಸ್ಥೆಗಳು ಹೆಸರಿನಲ್ಲಿ ಹೆಚ್.ಎಂ.ಟಿ. ಹೆಚ್.ಎ,ಎಲ್. ಬಿ.ಇ.ಎಲ್. ಐ.ಟಿ.ಐ ನಂತಹ
ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಿ, ಭವ್ಯ
ಭಾರತದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು. ಈ ಕೃತಿಯಲ್ಲಿ ಆದಿತ್ಯ
ಮುಖರ್ಜಿಯವರು ನೆಹರು ಅವರು ಸಂಸತ್ತಿನ ಒಳಗೆ ವಿರೋಧ ಪಕ್ಷಗಳ ನಾಯಕರ ಜೊತೆ ಸಂಹವನ ನಡೆಸುತ್ತಿದ್ದ ವೈಖರಿಯ ಜೊತೆಗೆ ಅವರ ಅಪರೂಪದ ಭಾಷಣದ ತುಣುಕುಗಳನ್ನು ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ನೆಹರು ಹೇಳಿದ ‘’ ನಮಗೆ ಯಾವುದು ಇಷ್ಟವೋ ಅಂತಹ ವಿಷಯಗಳಿಗೆ ಮಾತ್ರ ಒಪ್ಪಿಗೆ ನೀಡುವುದು ಪತ್ರಿಕಾ ಸ್ವಾತಂತ್ರ್ಯ ಎನಿಸುವುದಿಲ್ಲ, ನಾಗರೀಕ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯ ಎಂದರೆ, ನಮ್ಮ ಇಷ್ಟಕ್ಕೆ ವಿರೋಧವಾಗಿ ಅಥವಾ ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ವಿಷಯಗಳಿಗೂ ಮುಕ್ತ ಸ್ವಾತಂತ್ರ್ಯವಿರಬೇಕು.’’ ಈ ವಿಷಯವನ್ನು ನೆಹರು
ಕುರಿತು ಭಜನೆ ಮಾಡುವ ಇಂದಿನ ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಳ್ಳಬೇಕಿದೆ.
ಅಪರೂಪದ
ಮಾಹಿತಿಯ ಈ ಕೃತಿಯ ಜೊತೆಗೆ
ಅಮೇರಿಕಾದ ಲೇಖಕಿ ಕ್ಯಾಥರಿನ್ ಪ್ರಾಂಕ್ ಇಂದಿರಾ ಗಾಂಧಿ ಕುರಿತು ‘’ ಎ ಲೈಫ್ ಆಫ್
ಇಂದಿರಾ ಗಾಂಧಿ’’
ಎಂಬ ಐನೂರು ಪುಟಗಳ ಜೀವನ ಚರಿತ್ರೆಯನ್ನು ಎಲ್ಲರೂ ಓದಬೇಕಿದೆ. ಕೃತಿಯ ಮೊದಲ ನೂರು ಪುಟಗಳಲ್ಲಿ ನೆಹರು ಕುರಿತಂತೆ ಅಪರೂಪದ ಮಾಹಿತಿಗಳಿವೆ. ಇಂದಿರಾ ಅವರ ಪತಿ ಫಿರೋಜ್ ಗಾಂಧಿಯವರು ನೆಹರು ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದುಕೊಂಡು, ತಮ್ಮ ಮಾವನವರ ಆಳ್ವಿಕೆಯಲ್ಲಿ ನಡೆದ ಸಾರ್ವಜನಿಕರ ಹಣದ ದುರಪಯೋಗದ ಬಗ್ಗೆ ಧ್ವನಿ ಎತ್ತಿ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ
ಅವರನ್ನು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡುವಂತೆ ಮಾಡಿದ್ದರು. ಖಾಸಾಗಿ ಉದ್ಯಮಿ ಹರಿದಾಸ್ ಮುಂಧ್ರಾ ಎಂಬಾತನು ನಷ್ಟದಲ್ಲಿರುವ ಕೈಗಾರಿಕೆಗಳ ಶೇರು ಖರೀದಿಸಲು ಎಲ್.ಐ.ಸಿ. ಸಂಸ್ಥೆ
ಜೊತೆಗೆ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿದ್ದ ಈ ಹಗರಣವನ್ನು 1957
ರ ಡಿಸಂಬರ್ ತಿಂಗಳ ಸಂಸತ್ ಅಧಿವೇಶನದಲ್ಲಿ ಫಿರೋಜ್ ಗಾಂಧಿಯವರು ಬಯಲಿಗೆಳೆದಿದ್ದರು.
ನೆಹರು ಅವರ ಇಂತಹ ಪ್ರಾಮಾಣಿಕ
ನಡುವಳಿಕೆಯನ್ನು ನಾವು ಇಂದಿನ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕಾಣಲು ಸಾಧ್ಯವೆ?
ಕಾಂಗ್ರೆಸ್
ಕಾರ್ಯಕರ್ತರು ಎಂದರೆ, ನಾಯಕರ ಭಜನೆ
ಮಾಡುವುದು ಮತ್ತು ಸಚಿವ ಸ್ಥಾನದ ಹುದ್ದೆಗಾಗಿ ರಸ್ತೆಯಲ್ಲಿ
ಕುಳಿತು ಘೋಷಣೆ ಮಾಡುವುದಲ್ಲ. ಇಂತಹ ಬೌದ್ಧಿಕ
ಗುಲಾಮಗಿರಿತನವನ್ನು ದೇಶ ಸೇವೆ ಅಥವಾ ಸಮಾಜ ಸೇವೆ ಎನ್ನಲಾಗುವುದಿಲ್ಲ. ಸಂಘಪರಿವಾರದ ಕಾರ್ಯಕರ್ತರಿಗಿಂತ ಬೌದ್ಧಿಕವಾಗಿ ದಿವಾಳಿ ಎದ್ದು ಹೋಗಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇಂತಹ ಕೃತಿಯನ್ನು ಕಡ್ಡಾಯವಾಗಿ ಓದಲೇ ಬೇಕಿದೆ. ಸಂಘಪರಿವಾರದ ಟೀಕೆ ಅಥವಾ ವಿರೋಧವನ್ನು ಎದುರಿಸಬೇಕಾದರೆ, ನಮ್ಮ ಬೌದ್ಧಿಕ ಜ್ಞಾನದ ಅಡಿಪಾಯ ಗಟ್ಟಿಯಾಗಿರಬೇಕು. ಈ ಅಂಶ ಇಂದಿನ
ಕಾಂಗ್ರೆಸ್ ಕಾರ್ಯಕರ್ತರ ಮೂಲ ಗುರಿಯಾಗಬೇಕಿದೆ. ಇಂದು ಸಂಘಪರಿವಾರದ ಟೀಕೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಿರುವವರು ಮತ್ತು ನೆಹರು ಅವರ ಇತಿಹಾಸವನ್ನು ಮುನ್ನೆಲೆಗೆ ತರುತ್ತಿರುವವರು ಎಡಪಂಥೀಯ ಲೇಖಕರು ಮತ್ತು ಚಿಂತಕರು ಮಾತ್ರ. ಅವರಿಗೆ ಕಾಂಗ್ರೆಸ್ ಅಥವಾ ಬಿ.ಜೆ.ಪಿ.
ಪಕ್ಷಗಳ ಕುರಿತಾಗಿ ಯಾವುದೇ ಮೋಹ ಅಥವಾ ಸಿಟ್ಟುಗಳಿಲ್ಲ. ವಾಸ್ತವಿಕ ಅಂಶಗಳನ್ನು ಸಮಾಜದ ಮುಂದೆ ಇರಿಸುವುದು ಅವರ ಕರ್ತವ್ಯವಾಗಿದೆ ಅಷ್ಟೇ.
ಡಾ.ಎನ್.ಜಗದೀಶ್
ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ