ಭಾನುವಾರ, ಆಗಸ್ಟ್ 9, 2026

ಗೆಳೆಯ ಎನ್.ಕೆ. ಹನುಮಂತಯ್ಯನ ನೆನಪುಗಳು



ಕಳೆದ ಹದಿನೈದು ವರ್ಷಗಳಿಂದ ಈ ಫೇಸ್ ಬುಕ್ ನಲ್ಲಿರುವ ಕವಿಪುಂಗವರು ಮತ್ತು ಪುಂಗಿಣಿಯರ ಕಾಟದಿಂದ ನಾನು ಕವಿತೆಗಳನ್ನು ಓದುವುದನ್ನು ನಿಲ್ಲಿಸಿದ್ದೀನಿ. ವಾಸ್ತವವಾಗಿ ನಾನು ಕಾವ್ದದ ಕಡು ವ್ಯಾಮೋಹಿ. ಬೇಸರವಾದಾಗೆಲ್ಲಾ ನನ್ನ ಸಂಗ್ರಹದಲ್ಲಿರುವ ಕವಿತೆಗಳನ್ನು ಓದುವುದು ನನ್ನ ಹವ್ಯಾಸ.
ಇತ್ತೀಚೆಗಿನ ವರ್ಷಗಳಲ್ಲಿ ಸುಬ್ಬು ಹೊಲೆಯಾರ್ ಮತ್ತು ಎನ್.ಕೆ.ಹನುಮಂತಯ್ಯ ನನ್ನ ಇಷ್ಟದ ಕವಿಗಳಲ್ಲಿ ಮುಖ್ಯರಾದವರು. ಮಿತ್ರ ಮೊಗಳ್ಳಿ ಗಣೇಶ್ ಮೂಲಕ ಪರಿಚಯವಾಗಿದ್ದ ಹನುಮಂತಯ್ಯನ ಒಂದು ಪದ್ಯ ‘’ ಅವ್ವ ನಿಂತೇಯಿದ್ದಾಳೆ’’ ಎನ್ನುವ ಕವಿತೆ ನನನ್ನ ಅಲುಗಾಡಿಸಿ ಬಿಟ್ಟಿತ್ತು ಪಿ.ಲಂಕೇಶ್ ಅವರ ‘’ ನನ್ನವ್ವ ಫಲವತ್ತಾದ ಕಪ್ಪು ನೆಲ’’ ಕವಿತೆಯ ಹಾಗೆ ಹನುಮಂತಯ್ಯನ ಈ ಕವಿತೆ ಯಾವಾಗಲೂ ನನಗೆ ನೆನಪಾಗುತ್ತಿತ್ತು.
ಹನುಮಂತಯ್ಯ ಪ್ರೀತಿಸಿ, ವಿವಾಹವಾಗಿ, ನಂತರ ಇನ್ನೊಂದು ಪ್ರೇಮಪ್ರಕರಣಕ್ಕೆ ಸಿಲುಕಿ, ಪ್ರಾಪಪ್ರಜ್ಞೆ ಮತ್ತು ಅದರಿಂದ ಹೊರಬಾರದೆ ಆತ್ಮಹತ್ಯೆಗೆ ಶರಣಾಗಿದ್ದು ಕನ್ನಡ ಕಾವ್ಯಲೋಕದ ದುರಂತಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾಗ, 2010 ಎಂದು ನೆನಪು. ಬೆಳಿಗ್ಗೆ ಕಾಲೇಜಿಗೆ ಹೋದ ತಕ್ಷಣ, ಅಧ್ಯಾಪಕರ ಕೊಠಡಿಯಲ್ಲಿ ಜೇಬಿನಲ್ಲಿ ತಂದಿದ್ದ ವಿಷ ಕುಡಿದುಬಿಟ್ಟ.
ಮಧ್ಯಾಹ್ನದ ವೇಳೆಗೆ ತಿಪಟೂರಿನಿಂದ ಎಸ್. ಗಂಗಾಧರಯ್ಯ ನನಗೆ ಕರೆ ಮಾಡಿ, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿರುವ ಹನುಮಂತಯ್ಯನನ್ನು ಹೇಗಾದರು ಮಾಡಿ ಉಳಿಸಬೇಕು ಗುರುವೇ ಎಂದು ಹೇಳಿದಾಗ, ನನಗೆ ಶಾಕ್ ಆಯಿತು. ಗಂಗಾಧರಯ್ಯನವರ ಪುತ್ರಿ ಸ್ಮಿತಾ ಮಾಕಳ್ಳಿಗೆ ಧಾರವಾಡದಲ್ಲಿ ನನ್ನ ಮಕ್ಕಳು ಓದುತ್ತಿದ್ದ ಜೆ.ಎಸ್.ಎಸ್. ಕಾಲೇಜಿನಲ್ಲಿ ಸೀಟ್ ಕೊಡಿಸಿದ್ದೆ. ಹಾಗಾಗಿ ಗಂಗಾಧರಯ್ಯ ದಂಪತಿಗಳು ಧಾರವಾಡದ ಮನೆಗೆ ಬರುವುದು ಸಾಮಾನ್ಯವಾಗಿತ್ತು. ಬಂದಾಗಲೆಲ್ಲಾ , ಹನುಮಂತಯ್ಯ, ಪ್ರೀತಿಸಿ ಮದುವೆಯಾದ ನಂತರವೂ, ಇನ್ನೊಂದು ಪ್ರಕರಣದಲ್ಲಿ ಸಿಲುಕಿ ನರಳಾಡುತ್ತಿರುವುದನ್ನು ಇಬ್ಬರೂ ಸಾಮಾನ್ಯವಾಗಿ ಚರ್ಚಿಸುತ್ತಿದ್ದೆವು. ಎರಡು ಮೂರು ಬಾರಿ ಕರೆ ಮಾಡಿ ತಮ್ಮನಿಗೆ ಬುದ್ದಿವಾದ ಹೇಳುವ ಹಾಗೆ ಹನುಮಂತಯ್ಯನಿಗೆ ಹೇಳಿದ್ದೆ.
ಉಡುಪಿ ಮತ್ತು ಮಂಗಳೂರು ಈ ಎರಡು ಜಿಲ್ಲೆಗಳು ಉದಯ ಟಿ.ವಿ.ಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದಾಗ, ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಮಾತ್ರ ನನ್ನ ವ್ಯಾಪ್ತಿಯಲ್ಲಿತ್ತು. ಉಡುಪಿಯ ವರದಿಗಾರ ಗಣೇಶ್ ಮತ್ತು ಮಂಗಳೂರು ವರದಿಗಾರ ಶ್ರೀನಿವಾಸ ನಾಯಕ್ ಇಬ್ಬರೂ ನನಗೆ ಪರಿಚಿತರು ನಾನು ಅತ್ತ ಕಡೆ ಹೋದಾಗ, ಸದಾ ನನ್ನ ಜೊತೆ ಇರುತ್ತಿದ್ದರು. .
ಕೂಡಲೇ ಪೋನ್ ಮಾಡಿ ಮಾತನಾಡಿದಾಗ ಉಡುಪಿ ವರದಿಗಾರ ಗಣೇಶ್, ಆಸ್ಪತ್ರೆಗೆ ಹೋಗಿ ಬಂದು ವಿವರವಾಗಿ ಪರಿಸ್ಥಿತಿಯನ್ನು ವಿವರಿಸಿದ.ನು. ಗಣೇಶ್ ನ ಸ್ವಂತ ಸಹೋದರಿ ತ್ರಿವೇಣಿ ಎಂಬುವರು ಅಲ್ಲಿ ನರ್ಸ್ ಆಗಿ, ಕಾರ್ಯ ನಿರ್ವಹಿಸುತ್ತಾ, ಹನುಮಂತಯ್ಯನ ಚಿಕಿತ್ಸೆಯ ಜವಾಬ್ದಾರಿ ಹೊತ್ತಿದ್ದರು.
ನನಗೆ ಕರೆ ಮಾಡಿದ ಅವರು, ಇಡೀ ಬಾಟಲ್ ಪೂರ್ತಿ ವಿಷ ಕುಡಿದಿದ್ದಾರೆ ಸರ್, . ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಜೊತೆಗೆ ಉಳಿಯುವ ಸಾಧ್ಯತೆ ಇಲ್ಲ ಎಂದು ನುಡಿದುಬಿಟ್ಟರು. ನಂತರ ಆ ಇಬ್ಬರು ವರದಿಗಾರರ ಮೂಲಕ ಯಾವ ಕಾರಣಕ್ಕೂ ಇದು ಆತ್ಮಹತ್ಯೆ ಕೇಸ್ ಎಂದು ದಾಖಲಾಗದಂತೆ ನೋಡಿಕೊಂಡೆ. ಉ.ಕ. ಜಿಲ್ಲೆಯ ವರದಿಗಾರಾಗಿದ್ದ ಗಂಗಾಧರ ಹಿರೇಗುತ್ತಿ ಮೂಲಕ ಪೊಲೀಸ್ ಕೇಸ್ ನಲ್ಲಿ ಈ ಅಂಶ ದಾಖಲಾಗದಂತೆ ನೋಡಿಕೊಂಡೆ. ಗಂಗಾಧರ ಹಿರೇಗುತ್ತಿ ಕರಾವಳಿ ಮುಂಜಾವು ದಿನಪತ್ರಿಕೆ ನಡೆಸುತ್ತಿದ್ದರೂ ಸಹ, ಉದಯ ಟಿ.ವಿ. ವರದಿಗಾರಿಕೆಯನ್ನು ತಮ್ಮ ಪತ್ರಿಕೆಯ ವರದಿಗಾರರ ಮೂಲಕ ನಿರ್ವಹಿಸುತ್ತಿದ್ದರು. ಉದಯ ಟಿ.ವಿ. ವಾರ್ತೆಯು ಆರ್.ಎಸ್.ಎಸ್. ಮನೋಭಾವದ ಹವ್ಯಕ್ಯ ಬ್ರಾಹ್ಮಣ ವರದಿಗಾರರಿಗೆ ಸಿಗದಂತೆ , ನನ್ನ ಮಾತಿಗೆ ಬೆಲೆ ಕೊಟ್ಟು, ಗಂಗಾಧರ್ ನೋಡಿಕೊಳ್ಳುತ್ತಿದ್ದರು.
ಹನುಮಂತಯ್ಯ ತೀರಿಕೊಂಡ ಮೂರು ವರ್ಷಗಳ ನಂತರ ಹಾಸನದಲ್ಲಿ ನಡೆದ ನನ್ನ ಮರುಭೂಮಿಯ ಹೂ ಕೃತಿಯ ಕುರಿತ ವಿಚಾರ ಸಂಕಿರಣ ಸಮಾರಂಭದಲ್ಲಿ ಹನುಮಂತಯ್ಯನವರ ಪತ್ನಿ ಶೈಲಜಾ ಮತ್ತು ಪುತ್ರಿಯನ್ನು ಪ್ರಥಮ ಬಾರಿಗೆ ಭೇಟಿ ಮಾಡಿದೆ. ಒಡಹುಟ್ಟಿದ ಕಿರಿಯ ಸಹೋದರಿಯನ್ನು ಹರಸುವ ಹಾಗೆ ಕೈ ಹಿಡಿದು ಸಾಂತ್ವನ ಹೇಳಿ, ಮಗಳ ತಲೆಯ ಮೇಲೆ ಕೈ ಯಿಟ್ಟು ಹರಸಿ ಮಾತನಾಡಿಸಿ ಬಂದೆ.
ನಿನ್ನೆ ಸಂಜೆಯಿಂದ ಹನುಮಂತಯ್ಯನ ಕವಿತೆಗಳನ್ನು ಓದುವಾಗ, ಹಳೆಯ ನೆನಪುಗಳು ನುಗ್ಗಿಬಂದವು.
ಇಲ್ಲಿ ಮಿತ್ರನ ಎರಡು ಕವಿತೆಗಳನ್ನು ಹಾಕಿದ್ದೀನಿ. ಸುಮ್ಮನೇ ಓದಿ ಬಿಡಿ. ಮಾತುಗಳು ಬೇಡ ಎನಿಸುತ್ತಿದೆ.
ಜಗದೀಶ್ ಕೊಪ್ಪ.
ಕವಿತೆ- ಒಂದು
ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.
ಎಲ್ಲಾದರೂ
ಅಳು ಅಂಟಿಕೊಂಡಿದ್ದರೆ…
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ
*****************
ಕವಿತೆ-ಎರಡು
ಅವ್ವ ನಿಂತೇಯಿದ್ದಾಳೆ
ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲು ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ
ಅವಳ ಕಣ್ಣೀರ ಆತುಕೊಳ್ಳಲು ಹೋದೆ
ಕೈ ಸುಟ್ಟಿತು
ಮನೆ ತುಂಬಾ ಹೊಗೆಯ ಬಲೆ
ಮುರಿದ ತೀರುಗಳ ತೂರಿ ಬರುವ
ಸೂರ್ಯನಾಲಗೆ
ನಿಂತಲ್ಲೇ ಉರಿಯುವೆನು
ಯಾರಿಟ್ಟ ಕಿಚ್ಚಿಗೋ…
ಅವ್ವ ನಿಂತೇ ಇದ್ದಾಳೆ
ಕಪ್ಪು ಜಡೆ ಉದುರಿ ಒಣ ಗರಿಕೆಯಂತಾಗಿ
ಶಿಲೆಯಂತೆ
ಹತ್ತಿರ ಹೋಗಿ ಅವಳ ಕಿಟಕಿ ದಾಟಿದ
ನೋಟವನೇರಿ ನೋಡಿದರೆ
ಆಚೆ ಆ ಕೊಪ್ಪಲಲಿ ಅವನು ಮಲಗಿದ್ದಾನೆ
ನಿನ್ನೆ ಮದುವೆಯಾದ ಹೆಂಡಿರೊಡನೆ
ಮೊಲೆ ಚೆಂಡಿನೊಡನೆ
ಅವನೇ ನಾನು ನಿದ್ದೆಗಣ್ಣಲಿ ಎದ್ದಾಗ
ಸೇಬು ಕೊಟ್ಟವನು
ಅಪ್ಪನ ಹೆಣ ಬೀದಿಯಲಿ ಸಾಗುವಾಗ
ಅಳುವ ಅವ್ವನ ತುಟಿಗೆ ನಗುವ
ಬಳಿದವನು
ಹೊಲಸ ಕೆರೆ ತೊರೆದು ವಲಸೆ ಹೋದ ಹಕ್ಕಿ ನಾನು
ಮತ್ತೆ ಬಂದಿರುವೆ ಮೈ ಸುಟ್ಟು
ಅವ್ವ ನಿಂತೇಯಿದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ