ಸೋಮವಾರ, ಆಗಸ್ಟ್ 17, 2026

ಮಂಡ್ಯ ರೈತ ಸಂಘದ ಹಿರಿಯ ನಾಯಕ ಹೆಚ್.ಶ್ರೀನಿವಾಸ್ ಈಗ ನೆನಪು ಮಾತ್ರ.

 


1980 ರ ದಶಕದ ಆರಂಭದಲ್ಲಿ ಶಿವಮೊಗ್ಗದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರೈತ ಸಂಘವು ಹಾಸನ ಜಿಲ್ಲೆಗೆ ವಿಸ್ತರಿಸಿ, ಅಲ್ಲಿಂದ ಮಂಡ್ಯ ಜಿಲ್ಲೆಗೆ ಕಾಲಿಟ್ಟಾಗ, ರಾಜ್ಯ ರೈತಸಂಘವನ್ನು ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಮಂಡ್ಯ ನೆಲದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಹೆಚ್. ಶ್ರೀನಿವಾಸ್ ಪ್ರಮುಖರು.
ನಿನ್ನೆ ಮಂಡ್ಯ ನಗರದಲ್ಲಿ ಈ ಹಿರಿಯ ಜೀವ ತಮ್ಮ 88 ನೇ ವಯಸ್ಸಿಗೆ ನಿಧನರಾದರು. ಮೈಸೂರು- ಬೆಂಗಳೂರು ಮುಖ್ಯರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಬಂದಿಗೌಡ ಬಡಾವಣೆ ಎಂದರೆ, ನಮ್ಮ ಪಾಲಿಗೆ ಅಪ್ಪ ಮತ್ತು ಅಣ್ಣನ ಮನೆಗಳು ಎಂಬಂತಿತ್ತು. ನಾವೆಲ್ಲರೂ ಅಪ್ಪಾ ಎಂತಲೇ ಕರೆಯುತ್ತಿದ್ದ ಜಿ.ಮಾದೇಗೌಡರು ಅಲ್ಲಿದ್ದರು. ಅವರ ಮನೆಯ ಕೂಗಳತೆಯಲ್ಲಿ ಅಣ್ಣಾ ಎನ್ನುತ್ತಿದ್ದ ಮಂಡ್ಯ ಜಿಲ್ಲೆಯ ರೈತ ಸಂಘದ ಪ್ರಥಮ ಅಧ್ಯಕ್ಷರಾದ ಶ್ರೀನಿವಾಸ್ ಮನೆ ಇತ್ತು.
ನಮ್ಮ ಮಂಡ್ಯ ನೆಲದ ಸಂಸ್ಕೃತಿಯ ಮೂಲ ಲಕ್ಷಣವೆಂದರೆ, ಮನೆಗೆ ಬಂದವರನ್ನು ಕಾಫಿ ಕುಡಿಯುತ್ತೀರಾ? ಊಟ ಮಾಡುತ್ತೀರಾ? ಎಂದು ಕೇಳುವುದು ಅತಿಥಿಗಳಿಗೆ ಅಪಮಾನ ಮಾಡಿದಂತೆ.
ಊಟದ ಸಮಯವಾಗಿದ್ದರೆ, ಊಟದ ತಟ್ಟೆ ಮತ್ತು ಕಾಫಿ ಅಥವಾ ಚಹಾ ಸಮಯವಾಗಿದ್ದರೆ ಪಾನೀಯ ಲೋಟಗಳು ಮನೆಗೆ ಬಂದ ಅತಿಥಿಗಳ ಮುಂದೆ ಹಾಜರಾಗುತ್ತವೆ.
ಮನೆಯಲ್ಲಿರುವ ಸದಸ್ಯರ ಸಂಖ್ಯೆಗಿಂತ ಎರಡು ಮೂರು ಮಂದಿಗೆ ಹೆಚ್ಚಿನ ಮುದ್ದೆ, ಅನ್ನ ಮಾಡುವುದು ನಮ್ಮ ಪದ್ಧತಿ. ಹಾಗಾಗಿ‌ ಅಪ್ಪ ಮಾದೇಗೌಡರ ಮನೆಗೆ ಹೋದರೆ, ಅಪ್ಪನವರ ಬೈಗುಳ, ಬುದ್ಧಿವಾದದ ಜೊತೆಗೆ ಊಟ ದೊರೆಯುತ್ತಿತ್ತು. ಶ್ರೀನಿವಾಸ್ ಅಣ್ಣನವರ ಮನೆಗೆ ಹೋದರೆ, ಪ್ರೀತಿ ಹಾಗೂ ಚಳುವಳಿಯನ್ನು ಕಟ್ಟಿ ಬೆಳೆಸುವುದರ ಜೊತೆಗೆ ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗುವುದರೊಂದಿಗೆ ವರದಕ್ಷಿಣೆ, ಅದ್ದೂರಿ ವಿವಾಹ ವಿರೋದಿಸುವ ಬಗೆ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಮಾಡುವುದರ ಕುರಿತು ಮಾರ್ಗದರ್ಶನ ನೀಡುತ್ತಾ, ಊಟ ಮಾಡಿಸಿ ಕಳಿಸುತ್ತಿದ್ದರು.
ಹಳ್ಳಿಗಳಿಂದ ನಗರಕ್ಕೆ ಬಂದವರು ಹಸಿದ ಹೊಟ್ಟೆಯಲ್ಲಿ ಇರುತ್ತಾರೆ ಎಂಬ ಮನುಷ್ಯ ಪ್ರಜ್ಞೆಯು ನಮ್ಮ ಮಂಡ್ಯದ ಜನರಿಗೆ ವಂಶವಾಹಿಯಂತೆ, ಪರಂಪರೆಯಂತೆ ಬೆಳೆದು ಬಂದಿತ್ತು. ಅದು ಇಂದಿಗೂ ಜೀವಂತವಿದೆ. ಹೆಚ್. ಶ್ರೀನಿವಾಸ್ ಮದ್ದೂರು ತಾಲ್ಲೂಕು ವಳಗೇರಹಳ್ಳಿಯ ಶ್ರೀಮಂತ ರೈತ ಕುಟುಂಬದಿಂದ ಬಂದು ಮಂಡ್ಯದಲ್ಲಿ ವಕೀಲರಾಗಿದ್ದರು
ಅವರ ಮಾರ್ಗದರ್ಶನಿಂದ ಪ್ರೇರಿತರಾದ ನನ್ನ ತಲೆಮಾರಿನ ಬಹುತೇಕ ಗೆಳೆಯರು ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗಿ ಬದುಕು ಕಟ್ಟಿಕೊಂಡೆವು. ನನ್ನ ಪ್ರೇಮ ವಿವಾಹಕ್ಕೆ ಹದಿನಾಲ್ಕು ವರ್ಷ ವಿರೋಧ ವ್ಯಕ್ತ ಪಡಿಸಿ, ತಡೆಯೊಡ್ಡಿದ್ದ ನನ್ನ ಮಾವನವರು, ನಾನು 1989 ರಲ್ಲಿ ಸರಳ ವಿವಾಹವಾದ ಬಗೆ ನೋಡಿ, ವಿವಾಹವಾದ ಕ್ಷಣಾರ್ಧದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಶ್ರೀಮಂತ ಕುಟುಂಬದಿಂದ ಬಂದಿದ್ದ ಅವರಿಗೆ ಬಡ ರೈತನ ಮಗನಾದ ನನಗೆ ಮಗಳನ್ನು ನೀಡಲು ಇಷ್ಟವಿರಲಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘ ಸ್ಥಾಪನೆಯಾದಾಗ, ಶ್ರೀನಿವಾಸ್ ಅಣ್ಣ ಅಧ್ಯಕ್ಷರಾದರೆ, ಹನಕರೆ ಗ್ರಾಮದ ಹಾಗೂ ವಕೀಲರಾಗಿದ್ದ ಎಂ. ಶ್ರೀನಿವಾಸ್ ಖಜಾಂಚಿಯಾಗಿದ್ದರು. ಇನ್ನೊಬ್ಬ ಯುವ ನಾಯಕ ಮಂಡ್ಯ ಸಮೀಪದ ಸೂನಗಹಳ್ಳಿ ಗ್ರಾಮದ ಎಸ್.ಡಿ.ಜಯರಾಂ ಸಂಘಟನಾ ಕಾರ್ಯದರ್ಶಿಯಾದರು. ಮುಂದಿನ ದಿನಗಳಲ್ಲಿ ಎಸ್.ಡಿ. ಜಯರಾಂ ಮತ್ತು ಶ್ರೀನಿವಾಸ್ ಜೆ.ಡಿ.ಎಸ್. ಸೇರಿ ಶಾಸಕರಾದರು. ಆದರೆ, ಹೆಚ್. ಶ್ರೀನಿವಾಸ್ ತಟಸ್ಥರಾಗಿ ರೈತ ಸಂಘದಲ್ಲಿ ಉಳಿದರು. 1983 ರಲ್ಲಿ ಪಾಂಡುವಪುರದ ಮಿತ್ರ ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬಂದ ನಂತರ ರೈತ ಚಳುವಳಿಗೆ ಹೊಸ ಸ್ವರೂಪ ಮತ್ತು ಚಿಂತನೆ ಧಕ್ಕಿತು.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಮಂಡ್ಯ ಜಿಲ್ಲಾ ರೈತ ಸಂಘ ಆರ್ಥಿಕವಾಗಿ ದೊಡ್ಡ ಶಕ್ತಿಯನ್ನು ತುಂಬಿತು. ಮಂಡ್ಯ ಜಿಲ್ಲೆಯಲ್ಲಿದ್ದ ಮೂರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದ ರೈತರು ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ನೀಡುತ್ತಿದ್ದ ದರದಲ್ಲಿ ಐವತ್ತು ಪೈಸೆ ಹಣವನ್ನು ಸಂಘಕ್ಕೆ ನೀಡುವಂತೆ ಶ್ರೀನಿವಾಸ್ ಮನವೊಲಿಸಿದ್ದರು. ಐವತ್ತು ಟನ್ ಕಬ್ಬು ಬೆಳೆದ ರೈತನಿಂದ ಸಂಘಕ್ಕೆ ಇಪ್ಪತ್ತೈದು ರೂಪಾಯಿ ಸಂದಾಯವಾಗುತ್ತಿತ್ತು.
ಈ ಕಾರಣದಿಂದ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ನಲ್ಲಿ ರೈತರ ಬೃಹತ್ ಸಮಾವೇಶ ಮತ್ತು ಪ್ರೊ.ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ ಮುಂತಾದ ನಾಯಕರು ರಾಜ್ಯಾದ್ಯಂತ ಓಡಾಡಿ ರೈತ ಸಂಘಟನೆಯನ್ನು ರೂಪಿಸಲು ಸಾಧ್ಯವಾಯಿತು. ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡದಲ್ಲಿ ಒಂದು ವಾರ ಕಾಲ ರಾಜ್ಯ ರೈತ ಸಂಘಟನೆಯ ಪದಾಧಿಕಾರಿಗಳಿಗೆ ತರಬೇತಿ ಶಿಬಿರ ಏರ್ಪಡಿಸಿ, ಕಾನೂನು ಮತ್ತು ರೈತರ ಹಕ್ಕುಗಳನ್ನು ಪರಿಚಯ ಮಾಡಿಕೊಟ್ಟಿದ್ದು ಮಂಡ್ಯ ರೈತ ಸಂಘದ ಸಾಧನೆ.
ಈ ಶಿಬಿರದಲ್ಲಿ ಪ್ರೊ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ. ಪ್ರೊ.ರವಿವರ್ಮಕುಮಾರ್, ಹಾಸನದ ಮಂಜುನಾಥ ದತ್ತಣ್ಣ, ಆರ್.ಪಿ. ವೆಂಕಟೇಶ ಮೂರ್ತಿ, ಶಿವಮೊಗ್ಗದ ಕೆ.ಟಿ. ಗಂಗಾಧರ್ ಮುಂತಾದವರು ಆಗಮಿಸಿ ಉಪನ್ಯಾಸ ನೀಡಿದ್ದರು. ಅಂದು ಪರಿಚಯವಾದ ಈ ಅಣ್ಣಂದಿರು ಮತ್ತು ಗುರುಗಳ ಜೊತೆ ಈಗಲೂ ನಿಕಟ ಸಂಪರ್ಕ ಇಟ್ಟುಕೊಂಡಿದ್ದೀನಿ.
ಈಗ ಮಂಡ್ಯ ಜಿಲ್ಲೆಯ ರೈತ ಸಂಘದ ಸ್ಥಾಪಕರಲ್ಲಿ ಮೂರು ಬಾರಿ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಮಾತ್ರ ಇದ್ದಾರೆ. ಎಸ್.ಡಿ.ಜಯರಾಂ, ನನ್ನೂರಿನ ಕೆ.ಕೃಷ್ಣ, ಕ್ಯಾತನಹಳ್ಳಿ ಪುಟ್ಟಣ್ಣಯ್ಯ,ವಳಗೇರಹಳ್ಳಿಯ ಅಶೋಕ, ಬೆಸಗರಹಳ್ಳಿಯ ನನ್ನ ಹೈಸ್ಕೂಲ್ ಸಹಪಾಠಿ ಕೋಣಸಾಲೆ‌ ನರಸರಾಜು ಈಗಿಲ್ಲ. ಈ ದಿನ ಹೆಚ್. ಶ್ರೀನಿವಾಸ್ ಅಣ್ಣ ಕೂಡಾ ಮರಳಿ ಬಾರಲಾರದ ಊರಿಗೆ ತೆರಳಿದರು.
ರಾಜ್ಯ ಮಟ್ಟದಲ್ಲಿ ಸುಂದರೇಶ್, ಪ್ರೊಫೆಸರ್,ನಂಜುಂಡಸ್ವಾಮಿ, ಹೆಚ್.ಎಸ್. ರುದ್ರಪ್ಪ, ಇಲ್ಲ. ಕಡಿದಾಳು ಶಾಮಣ್ಣನವರು ಹಾಸಿಗೆ‌ಹಿ ಡಿದಿದ್ದಾರೆ. ಶಿವಮೊಗ್ಗಕ್ಕೆ ಹೋದರೆ, ಕಡದಕಟ್ಟೆ ಗಂಗಾಧರಣ್ಣ ಸಿಗುತ್ತಾರೆ. ಹಾಸನಕ್ಕೆ ಹೋದರೆ, ದತ್ತಣ್ಣ ಮತ್ತು ವೆಂಕಟೇಶ್ ಮೂರ್ತಿ ಅಣ್ಣ ಸಿಗುತ್ತಾರೆ. ನೋವಿನ ಸಂಗತಿ ಎಂದರೆ, ನಲವತ್ತು ವರ್ಷಗಳ ಕಾಲ ರಾಮಲಕ್ಷ್ಮಣರಂತೆ ಬದುಕಿ, ಹಾಸನದಲ್ಲಿ ಜನತಾ ಮಾಧ್ಯಮ ಪತ್ರಿಕೆ ನಡೆಸಿದ ಈ ಅಣ್ಣಂದಿರು ಈಗ ಬೇರೆಯಾಗಿದ್ದಾರೆ.
ಯಾಕ್ರಣ್ಣಾ? ಏನಾಯ್ತು ನಿಮಗೆ ಎಂದು ಕೇಳುವ ದ್ಯರ್ಯ ನನಗಿಲ್ಲ.ಏಕೆಂದರೆ, ಈ ಅಣ್ಣಂದಿರಿಂದ, ನೈತಿಕತೆ ಮತ್ತು‌ನಿಷ್ಟುರತೆಯನ್ನು ಕಲಿತವನು ನಾನು
ಹಾಗಾಗಿ ಈಗ ಎಲ್ಲಾ ಸಾರ್ವಜನಿಕ ಚಳುವಳಿಗಳಿಂದ ದೂರ ಉಳಿದಿದ್ದೀನಿ.
ಧಾರವಾಡ ಕುರಿತಂತೆ ಹಿಂದೆ ಒಂದು ಜನಪ್ರಿಯ ಜೋಕ್ ಚಾಲ್ತಿಯಲ್ಲಿತ್ತು. ಧಾರವಾಡ ನೆಲದಲ್ಲಿ ನಿಂತು‌ ನೀವು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ಕವಿಯ ಮನೆ ಮೇಲೆ ಬೀಳುತ್ತದೆ ಎಂದು.
ಈಗ‌ ಕರ್ನಾಟದ ನೆಲದಲ್ಲಿ ನಿಂತು ಒಂದು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ರಾಜ್ಯ ರೈತ ಸಂಘದ ಅಧ್ಯಕ್ಷನ ಮನೆಯ ಮೇಲೆ ಅಥವಾ ರಾಜ್ಯ ದಲಿತ ಸಂಘಟನೆಯ ಅಧ್ಯಕ್ಷನ ಮನೆಯ ಮೇಲೆ ಬೀಳುತ್ತದೆ
ಊರಿಗೊಬ್ಬ ದೊಣ್ಣೆ ನಾಯಕ ಸೃಷ್ಟಿಯಾದರೆ, ಸಾರ್ವಜನಿಕ ಚಳುವಳಿಗೆ ಅರ್ಥ, ಘನತೆ ಮತ್ತು ಗಾಂಭಿರ್ಯ ಉಳಿಯುವುದಿಲ್ಲ.
ಕ್ಷಮಿಸಿ, ಅಣ್ಣನವರ ಅಗಲಿಕೆಯ ನೋವಿನಲ್ಲಿ ಇವೆಲ್ಲವನ್ನೂ ಬರೆಯಬೇಕಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ