ನಿನ್ನೆ ಮಧ್ಯಾಹ್ನ ಮೂರೂವರೆ ಸಮಯದಲ್ಲಿ ನಾನು ಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕಾರಣ,ಮೊಬೈಲ್ ಅನ್ನು ಸೈಲೆಂಟ್ ಮಾಡಿದ್ದೆ. ಮಧುರೈ ನಗರದ ಸನ್ ಟಿ.ವಿ. ವರದಿಗಾರ, ಹತ್ತು ನಿಮಿಣಗಳ ಅವಧಿಯಲ್ಲಿ ಆರು ಬಾರಿ ಕರೆ ಮಾಡಿದ್ದ. ಕಾರ್ಯಕ್ರಮದಲ್ಲಿದ್ದೀನಿ. ಕರೆ ಮಾಡುತ್ತೀನಿ ಎಂದು ಮೆಸೇಜ್ ಹಾಕಿ ಸಂಜೆ ಮನೆಗೆ ಬಂದ ನಂತರ ಕರೆ ಮಾಡಿದಾಗ, ಪಾಪಯ್ಯನವರ ನಿಧನದ ಸುದ್ದಿ ತಿಳಿಸಿದಾಗ ಮನಸ್ಸಿಗೆ ಸಂಕಟವಾಯಿತು.
ನಾನು ತಮಿಳುನಾಡಿನಲ್ಲಿ ಭಾಷೆ ಮತ್ತು ಸಂಸ್ಕೃತಿ ಕುರಿತಾಗಿ ಅಧಿಕೃತವಾಗಿ ಮಾತುನಾಡುತ್ತಿದ್ದ ಎಂ.ಕರುಣಾನಿಧಿಯವರ ನಂತರ ಸಾಲೊಮನ್ ಪಾಪಯ್ಯನವರ ಮಾತುಗಳಿಗೆ ಮರುಳಾಗಿದ್ದೆ. ಮಧುರೈ ಸಮೀಪದ ಪುಟ್ಟ ಗ್ರಾಮವೊಂದರಲ್ಲಿ ಓರ್ವ ರೈಲ್ವೆ ಉದ್ಯೋಗಿಯ ಪುತ್ರನಾಗಿ ಜನಿಸಿದ ಪಾಪಯ್ಯನವರು ತಂಜಾವೂರಿನಲ್ಲಿ ತಮಿಳು ಭಾಷೆಯ ಕುರಿತಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು, ತಮಿಳು ಪ್ರಾಧ್ಯಾಪಕರಾಗಿದ್ದರು.
ತಮಿಳುನಾಡಿನ ಸಾಂಸ್ಕೃತಿಕ ಜಿಲ್ಲೆಗಳಾದ ತಂಜಾವೂರು ಹಾಗೂ ಮಧುರೈ ನಲ್ಲಿ ಇಡೀ ಬದುಕನ್ನ ಕಳೆದ ಪಾಪಯ್ಯನವರ ನಾಲಿಗೆ ಮೇಲೆ ತಮಿಳು ಪ್ರಾಚೀನ ಕಾವ್ಯದ ನುಡಿಗಟ್ಟುಗಳು ಸದಾ ಹರಿದಾಡುತ್ತಿದ್ದವು. ಉಪನ್ಯಾಸದಲ್ಲಿ ಅವರ ಮಾತುಗಳನ್ನು ಕೇಳಲು ಸಾವಿರಾರು ಮಂದಿ ನೆರೆಯುತ್ತಿದ್ದರು. ಅವರಿಂದ ಪ್ರಭಾವಿತರಾದ ನೂರಾರು ಮಂದಿ ಇಂದು ಯಾವುದೇ ಅಡೆ ತಡೆಯಿಲ್ಲದೆ, ನೋಟ್ಸ್ ಬರೆದಿಟ್ಟುಕೊಳ್ಳದೆ ತಮಿಳು ಭಾಷೆಯ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಿದ್ದಾರೆ
ಪಾಪಯ್ಯನವರ ಪ್ರತಿಭೆಯನ್ನು ಗಮನಿಸಿದ್ದ ಸನ್ ತಮಿಳು ಟಿ.ವಿ.ಯವರು ಮೂರು ದಶಕಗಳ ಹಿಂದೆ ಅವರ ನೇತೃತ್ವದಲ್ಲಿ ಪತ್ತಿ ಮಂಡ್ರಮ್ಸ್ ಹೆಸರಿನ ಚರ್ಚೆಯ ಕಾರ್ಯಕ್ರಮ ಆರಂಭಿಸಿತು. ಪಾಪಯ್ಯನವರ ಕಾರ್ಯಕ್ರಮ ಎಷ್ಟು ಜನಪ್ರಿಯವಾಯಿತೆಂದರೆ, ಹಬ್ಬದ ದಿನಗಳಲ್ಲಿ ಪ್ರಸಾರವಾಗುತ್ತಿದ್ದ ರಜನಿ ಅಥವಾ ಕಮಲ್ ಸಿನಿಮಾಗಳಿಂದ ಹೆಚ್ಚು ಪ್ರೇಕ್ಷಕರು ಪಾಪಯ್ಯನವರ ಮಾತು ಕೇಳಲು ಇಷ್ಟ ಪಡುತ್ತಿದ್ದರು.
ಪಾಪಯ್ಯನವರು ಒಂದು ನಿರ್ಧಿಷ್ಟ ವಿಷಯ ಇಟ್ಟುಕೊಂಡು ನಾಲ್ಕೈದು ಮಂದಿಯನ್ನು ಚರ್ಚೆಗೆ ಆಹ್ವಾನಿಸಿ ನಂತರ ತೀರ್ಪುಗಾರನ ಸ್ಥಾನದಲ್ಲಿರುತ್ತಿದ್ದ ಅವರು ನೀಡುತ್ತಿದ್ದ ವ್ಯಾಖ್ಯಾನಗಳನ್ನು ಮರೆಯಲಾಗದು. ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರವನ್ನು ಹೊರತು ಪಡಿಸಿ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದವು.
ಇದೇ ಕಾರ್ಯಕ್ರಮವನ್ನು ನಾನು ಕಾರ್ಯನಿರ್ವಹಿಸುತ್ತಿದ್ದ ಉದಯ ಟಿ.ವಿ.ಯಲ್ಲಿ ಹರಟೆ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಚಿಕ್ಕಮಗಳೂರು ಕಣ್ಣನ್ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ಶುದ್ಧ ಹರಟೆಯಾಗಿ ಪರಿವರ್ತನೆಯಾಗಿ, ಜನಪ್ರಿಯವಾಗಲಿಲ್ಲ. ಪ್ರಾಣೇಶ, ಸುಧಾ ಬರಗೂರು ಮತ್ತು ಎಂ. ಕೃಷ್ಣೇಗೌಡ ಮುಂತಾದ ಕಾಮಿಡಿ ಪೀಸ್ ಗಳು ವಿಷಯದ ಎಲ್ಲೆಯನ್ನು ದಾಟಿ, ತಮ್ಮ ಹಾಸ್ಯ ಪ್ರತಿಭೆ ತೋರಲು ಮುಂದಾದರು.
ಸೊಲೊಮನ್ ಪಾಪಯ್ಯನವರು ತಮಿಳುನಾಡಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮನಡೆಸಿಕೊಟ್ಟರು. ಚಿತ್ರರಂಗದಿಂದ ಆಹ್ವಾನ ಬಂದರೂ ತಿರಸ್ಕರಿಸಿದರು. ರಜನಿಕಾಂತ್ ಆಹ್ವಾನದ ಮೇರೆಗೆ ಮೂರು ಅಥವಾ ನಾಲ್ಕು ಸಿನಿಮಾ ಹೊರತು ಪಡಿಸಿದರೆ, ಇಡೀ ಬದುಕನ್ನು ತಮಿಳುನಾಡಿನ ಸಮಗ್ರ ವಿಷಯಗಳ ಚಿಂತನೆಗೆ ಮೀಸಲಾಗಿಟ್ಟಿದ್ದರು. ಇವರಿಗೆ ತಮಿಳು ಸರ್ಕಾರದ ಕಲೈ ಮಾಮಣಿ ಮತ್ತು ಪದ್ಮಶ್ರೀ ಪ್ರಶಸ್ತಿಗಳು ದೊರೆತಿದ್ದವು.
ನಿನ್ನೆ ಮಧುರೈ ಆಸ್ಪತ್ರೆಯಲ್ಲಿ ಅಂತ್ಯಕ್ರಿಯೆಗೆ ಪಾಪಯ್ಯನವರ ದೇಹವನ್ನು ಸಿದ್ಧಪಡಿಸುತ್ತಿರುವಾಗ, ಅವರ ಎದೆಯ ಮೇಲೆ ತಮಿಳ ಪ್ರಾಚೀನ ಕಾವ್ಯ ಕುರಿತ ಒಂದು ಪುಸ್ತಕವನ್ನು ಇಟ್ಟು ನಂತರ ಬಿಳಿಯ ಬಟ್ಟೆಯಿಂದ ಅವರ ದೇಹವನ್ನು ಪ್ಯಾಕ್ ಮಾಡಲಾಯಿತು.
ಇದು ಒಬ್ಬ ನಿಜ ಹಾಗೂ ಸತ್ವಯುತ ವಿದ್ವಾಂಸನಿಗೆ ನೀಡಲಾದ ಗೌರವ ಎಂದು ಆಕ್ಷಣಕ್ಕೆ ನನಗೆ ಅನಿಸಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ