ಸೋಮವಾರ, ಸೆಪ್ಟೆಂಬರ್ 14, 2026

ದಕ್ಷಿಣ ಭಾರತದಲ್ಲಿ ದ್ರಾವಿಡ ಪ್ರಜ್ಞೆ ಬಿತ್ತಿದ ಅಪ್ಪಟ ಕನ್ನಡಿಗ ಪೆರಿಯಾರ್ ರಾಮಸ್ವಾಮಿ.



ಭಾರತದ ೨೨ ರಾಷ್ಟç ಭಾಷೆಗಳಲ್ಲಿ ಒಂದಾದ ಹಿಂದಿಭಾಷೆಯನ್ನು ಇಡೀ ದೇಶದ ಮೇಲೆ ಹೇರುವ ನಿಟ್ಟಿನಲ್ಲಿ ಸೆಪ್ಟಂಬರ್ ೧೪ ಅನ್ನು ಹಿಂದಿ ದಿನವನ್ನಾಗಿ ಆಚರಿಸುವುದರ ಮೂಲಕ ಬಹುಭಾಷೆ ಮತ್ತು ಬಹುಸಂಸ್ಕೃತಿಯ ನೆಲೆಯಾದ ಭಾರತದ ಇತರೆ ಭಾಷೆಗಳಿಗೆ ಅಪಮಾನ ಎಸೆಗುವ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ, ೧೯೩೭ ರಲ್ಲಿ ಅಂದಿನ ಮದ್ರಾಸ್ ರೆಸಿಡೆನ್ಸಿ ಪ್ರಾಂತ್ಯದಲ್ಲಿ ( ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ಮಂಗಳೂರು ಹಾಗೂ ಕೇರಳ) ರಾಜಾಜಿಯವರು ಮುಖ್ಯಮಂತ್ರಿಯಾಗಿದ್ದಾಗ, ಹಿಂದಿ ಭಾಷೆ ಹೇರುವ ಕೆಲಸಕ್ಕೆ ಮೊದಲು ಪ್ರತಿಭಟಿಸಿದವರು ಕನ್ನಡಿಗ ಇ.ವಿ. ಪೆರಿಯಾರ್ ರಾಮಸ್ವಾಮಿಯವರು. ಹಿಂದಿ ಮತ್ತು ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿದ ಅವರು ನಾನು ದ್ರಾವಿಡ ಭಾಷೆಗಳನ್ನು ಮಾತ್ರ ಮಾತನಾಡುತ್ತೇನೆ ಎಂಬ ಪ್ರತಿಭಟನೆಯ ಬೀಜವನ್ನು ಬಿತ್ತಿದವರು. ಅದರಂತೆ ಕನ್ನಡ ಮತ್ತು ತಮಿಳು ಭಾಷೆಗಳನ್ನು ಮಾತ್ರ ಮಾತನಾಡುತ್ತಿದ್ದರು.

ಅದರ ಫರಿಣಾಮ ಎಂಬಂತೆ ಇಂದಿಗೂ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಆಚರಣೆಯಲ್ಲಿ ಇಲ್ಲ. ಜೊತೆಗೆ ತಮಿಳುನಾಡಿನ ಮಧುರೈ ಹೈಕೋರ್ಟ್ ಪೀಠವು ಕೇಂದ್ರ ಸರ್ಕಾರವು ತಮಿಳುನಾಡು ಜೊತೆ ವ್ಯವಹರಿಸುವಾಗ ಹಿಂದಿ ಭಾಷೆಯನ್ನು ಬಳಸುವಂತಿಲ್ಲ, ಸಂವಹನ ಭಾಷೆಯಾಗಿ ಇಂಗ್ಲೀಷ್ ಬಳಸಬೇಕೆಂದು ಆದೇಶ ಮಾಡಿದೆ.ಜೊತೆಗೆ ಮದ್ರಾಸ್ ಹೈಕೋರ್ಟ್ ನ್ಯಾಯಾಲಯುವು ಸಂಸ್ಕೃತ ಮಾತ್ರ ದೇವ ಭಾಷೆಯಲ್ಲ, ತಮಿಳು ಭಾಷೆ ಕೂಡ ದೇವ ಭಾಷೆಯಾಗಿದ್ದು ತಮಿಳುನಾಡಿನ ದೇವಾಲಯಗಳಲ್ಲಿ ತಮಿಳು ಭಾಷೆಯಲ್ಲಿ ಸ್ತೋತ್ರಗಳನ್ನು ಹೇಳಬೇಕೆಂದು ಆದೇಶಿಸಿದೆ. ಹನ್ನೇರೆಡನೇ ಶತಮಾನದ ಆಚರಣೆಯಲ್ಲಿದ್ದ ತೇವಾರಂ ಎಂಬ ತಮಿಳು ಪ್ರಾರ್ಥನೆಗಳು ಅಥವಾ ಭಕ್ತಿಗೀತೆಗಳು ಸುಮಾರು ಮೂರು ಶತಮಾನಗಳ ಕಾಲ ಕತ್ತಲೆಗೆ ದೂಡಲ್ಪಟ್ಟಿದ್ದವು. ಹದಿನೈದನೇ ಶತಮಾನದಲ್ಲಿ ಚಿದಂಬರಂ ಪಟ್ಟಣದ ಬೃಹತ್ ನಟರಾಜ ದೇವಾಲಯದ ಕೊಠಡಿಯಲ್ಲಿ ಮುನ್ನೂರು ತಾಮ್ರದ ತೇವಾರಂ ಕಟ್ಟುಗಳು ಸಿಕ್ಕಿದ ಫಲವಾಗಿ ವಿಜಯ ನಗರ ಅರಸರ ಆಳ್ವಿಕೆಯಲ್ಲಿ ಮತ್ತು ಮರಾಠರ ಆಳ್ವಿಕೆಯಲ್ಲಿ ಇಪ್ಪತ್ತನೇ ಶತಮಾನದವರೆಗೆ ಜಾರಿಯಲ್ಲಿದ್ದು ನಂತರ ಸಂಸ್ಕೃತದ ನೆಪದಲ್ಲಿ ಹಿನ್ನಲೆಗೆ ಸರಿದಿದ್ದವು. ಪೆರಿಯಾರ್ ಅವರ ದೂರದೃಷ್ಟಿಯ ಚಿಂತನೆಗಳು ದ್ರಾವಿಡ ಸಂಸ್ಕೃತಿಯ ಭಾಗವಾಗಿ ಇಂದು ತಮಿಳುನಾಡಿನಲ್ಲಿ ಫಲಕೊಡುತ್ತಿವೆ.

ಅವರು ಪುರೋಹಿತಶಾಹಿ ವರ್ಗವು ಪೋಷಿಸಿಕೊಂಡು ಬಂದಿದ್ದ ಜಾತಿಯತೆ, ಲಿಂಗ ಅಸಮಾನತೆ ಇವುಗಳ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಮೇಲ್ಜಾತಿಯ ಬ್ರಾಹ್ಮಣ ವರ್ಗವನ್ನು ತಿರಸ್ಕರಿಸಿದ್ದರು.
ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ಅಸಮಾನತೆಗಳನ್ನು ತಿರಸ್ಕರಿಸಿದ ಅವರು ದೇವರ ಅಸ್ತಿತ್ವವನ್ನು ಸಹ ನಿರಾಕರಿಸಿದರು. ಇಂದು ರಾಮನ ಹೆಸರಿನಲ್ಲಿ ನಡೆಯುತ್ತಿರುವ ಅಪಚಾರಗಳನ್ನು ಗಮನಿಸಿದಾಗ, ಶ್ರೀರಾಮನು ದೇವರಾಗುವ ಬದಲಾಗಿ ನಿರ್ಧಿಷ್ಟ ರಾಜಕೀಯ ಪಕ್ಷವೊಂದಕ್ಕೆ ಮತ ಗಳಿಕೆಯ ಸಂಕೇತವಾಗಿದ್ದಾನೆ. ಪೆರಿಯಾರ್ ರಾಮಸ್ವಾಮಿಯವರು 1957 ರಲ್ಲಿ ಮದ್ರಾಸ್ ನಗರದ ಮೆರಿನಾ ಬೀಚ್ ಪ್ರದೇಶದಲ್ಲಿ ಶ್ರೀ ರಾಮನ ಭಾವಚಿತ್ರವನ್ನು ಬಹಿರಂಗವಾಗಿ ಸುಟ್ಟು ಹಾಕಿ ಬಂಧನಕ್ಕೆ ಒಳಗಾಗಿದ್ದರು. ದೇವರು ಮನುಷ್ಯರ ಕೈಗೊಂಬೆಯಾಗುವುದನ್ನು ಅವರು ಆರು ದಶಕಗಳ ಹಿಂದೆಯೇ ಮನಗಂಡಿದ್ದರು.
ದೇವರು ಇಲ್ಲ, ಇಲ್ಲವೇ ಇಲ್ಲ ಎಂಬ ಆತ್ಮವಿಶ್ವಾಸದ ಘೋಷಣೆಯೊಂದಿಗೆ 1920 ರ ದಶಕದಲ್ಲಿ ಆಚರಣೆಯಲ್ಲಿದ್ದ ಬ್ರಾಹ್ಮಣ್ಯ, ಜಾತಿಯತೆ ಮತ್ತು ಲಿಂಗ ಸಮಾನತೆಗೆ ದೊಡ್ಡ ಪೆಟ್ಟು ನೀಡಿದ ಪೆರಿಯಾರ್ ರಾಮಸ್ವಾಮಿ ತಾವು ಜನಿಸಿದ (1879 ರ ಸೆಪ್ಟಂಬರ್ .17) ತಮಿಳುನಾಡಿನಲ್ಲಿ ಸಾಮಾಜಿಕ ಕ್ರಾಂತಿಕಾರರಾಗಿ ಇಂದಿಗೂ ಗೌರವಿಸಲ್ಪಡುತ್ತಿದ್ದಾರೆ.

ಇಂದು ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ಎರಡು ರಾಜಕೀಯ ಪಕ್ಷಗಳಾದ ಡಿ.ಎಂ.ಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳ ಮೂಲ ಸಂಸ್ಥಾಪಕರು ಪೆರಿಯಾರ್ ಆಗಿರುವುದು ವಿಶೇಷ. ಅವರು ಸ್ಥಾಪಿಸಿದ ಜಸ್ಟಿಸ್ ಪಾರ್ಟಿ ನಂತರದ ದಿನಗಳಲ್ಲಿ ದ್ರಾವಿಡ ಕಳಗಂ ಪಕ್ಷವಾಗಿ ಆನಂತರ ಸಿ.ಎನ್. ಅಣ್ಣಾದರ್ಯೆ ತನ್ನ ಗುರುವಾದ ಪೆರಿಯಾರ್ ವಿರುದ್ಧ ಸಿಡಿದೆದ್ದು ದ್ರಾವಿಡ ಮುನ್ನೇತ್ರ ಕಳಗಂ ( ಡಿ.ಎಂ.ಕೆ.) ಪಕ್ಷ ಕಟ್ಟಿದ್ದು ಆನಂತರ ಅಣ್ನಾದರ್ಯೆ ನಿಧನಾನಂತರ ಪಕ್ಷದ ಮುಂಚೂಣಿ ನಾಯಕರಾದ ಎಂ.ಕರುಣಾನಿಧಿ ಹಾಗೂ ನಟ ಎಂ,ಜಿ.ರಾಮಚಂದ್ರನ್ ನಡುವೆ ವೈಮನಸ್ಸು ಉಂಟಾದ ಫರಿಣಾಮ ಎಂ.ಜಿ. ರಾಮಚಂದ್ರನ್ ಅಣ್ಣಾ ಡಿ.ಎಂ.ಕೆ. ಪಕ್ಷ ಸ್ಥಾಪಿಸಿದ್ದು ಈಗ ಇತಿಹಾಸ.

ತಮಿಳುನಾಡಿನ ಸಾಮಾಜಿಕ ಇತಿಹಾಸದಲ್ಲಿ ವೈಚಾರಿಕತೆಯ ಪ್ರಜ್ಞೆಯ ಭಾಗದಂತಿರುವ ಪೆರಿಯಾರ್ ರಾಮಸ್ವಾಮಿ ಮೂಲತಃ ಕನ್ನಡಿಗರು. ಅವರ ತಂದೆ ವೆಂಕಟಪ್ಪನಾಯ್ಕರ್ ಕರ್ನಾಟಕದಿಂದ ವಲಸೆ ಹೋಗಿ ಈರೋಡ್ ನಗರದಲ್ಲಿ ದೊಡ್ಡ ಮಂಡಿ ವರ್ತಕರಾಗಿದ್ದರು. ಈಗಿನ ಈರೋಡ್ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಅವರ ನಿವಾಸವನ್ನು ರಾಮಸ್ವಾಮಿಯವರ ನೆನಪಿಗಾಗಿ ಸ್ಮಾರಕವನ್ನಾಗಿ ಮಾಡಲಾಗಿದೆ. ಅರಿಶಿನ ಮತ್ತು ಹುಣಸೆ ಹಣ್ಣು ವ್ಯಾಪಾರಕ್ಕಾಗಿ ಈರೋಡಿಗೆ ಹೋದ ವೆಂಕಪ್ಪನಾಯ್ಡು ಮೂಲತಃ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಗರ್ಭ ಶ್ರೀಮಂತರಾಗಿದ್ದ ಅವರು ತಮಿಳುನಾಡಿನಲ್ಲಿ ವೆಂಕಟಪ್ಪ ನಾಯ್ಕರ್ ಆಗಿ ಗುರುತಿಸಿಕೊಂಡು ದೊಡ್ಡ ಮಂಡಿ ವರ್ತಕರು. ( ಪೆರಿಯಾರ್) ಎಂದು ಕರೆಯಲ್ಪಡುತ್ತಿದ್ದರು. ಆಗಿನ ಕಾಲದಲ್ಲಿ ತಮಿಳುನಾಡಿನನಿಂದ ಕೇರಳಕ್ಕೆ ರೈಲು ಮಾರ್ಗ ಇರಲಿಲ್ಲ. ತಿರುವಾಂಕೂರಿನ ದೊರೆ ( ತಿರುನಂತಪುರ) ಈರೋಡ್ ನಗರದವರೆಗೆ ಬಂದು ಪೆರಿಯಾರ್ ರಾಮಸ್ವಾಮಿಯವರ ನಿವಾಸದಲ್ಲಿ ವಿಶ್ರಾಂತಿ ಪಡೆದು ನಂತರ ಮದ್ರಾಸ್ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ರಾಮಸ್ವಾಮಿಯವರಿಗೆ ಅವರ ತಂದೆ ಹತ್ತೊಂಬತ್ತನೇ ವಯಸ್ಸಿನಲ್ಲಿ ವಿವಾಹ ಮಾಡಿದ್ದರು. ಆದರೆ, ಕೇವಲ ಎರಡು ಮೂರು ವರ್ಷದ ಅವಧಿಯೊಳಗೆ ಅವರ ಐದು ತಿಂಗಳ ಪುತ್ರಿ ನಂತರ ಮಡದಿ ಅಕಾಲಿಕ ಮರಣಕ್ಕೆ ತುತ್ತಾದರು. ಆನಂತರ ಲೌಕಿಕ ಬದುಕಿನ ಬಗ್ಗೆ ಜಿಗುಪ್ಸೆಗೊಂಡ ಅವರು ಅನುಭಾವದತ್ತ ತೆರಳುವ ನಿಟ್ಟಿನಲ್ಲಿ ಕಾಶಿ ಯಾತ್ರೆ ಕೈಗೊಂಡರು. ಆದರೆ, ಕಾಶಿ ನಗರದಲ್ಲಿ ಕಂಡ ದೃಶ್ಯಗಳು ಹಾಗೂ ಬ್ರಾಹ್ಮಣರಿಂದ ಆದ ಅಪಮಾನಗಳು ಅವರನ್ನು ತೀವ್ರ ವೈಚಾಕತೆಯ ವ್ಯಕ್ತಿಯನ್ನಾಗಿ ರೂಪಿಸಿದವು. ಅಲ್ಲಿನ ಕಾಶಿ ವಿಶ್ವನಾಥ ದೇಗುಲದ ಪೂಜಾರಿಗಳ ವರ್ತನೆ, ಯಾತ್ರಾರ್ಥಿಗಳನ್ನು ದೋಚುವ ಪರಿ ಇವುಗಳಿಂದ ಹತಾಶಗೊಂಡ ರಾಮಸ್ವಾಮಿಯವರು ತಮಿಳುನಾಡಿನ ಬ್ರಾಹ್ಮಣೇತರ ವರ್ತಕರು ನಿರ್ಮಿಸಿದ್ದ ಛತ್ರವೊಂದಕ್ಕೆ ಊಟ ಮಾಡಲು ಹೋದಾಗ ಇಲ್ಲಿ ಬ್ರಾಹ್ಮಣರಿಗೆ ಮಾತ್ರ ಪ್ರವೇಶ ಎಂದು ಹೇಳಿ ಅವರನ್ನು ಹೊರದಬ್ಬಿದರು. ಬ್ರಾಹ್ಮಣತೇರರಿಂದ ಹಣ ಪಡೆದು ಅವರನ್ನು ಅಸ್ಪೃಶ್ಯರಂತೆ ಕಾಣುವ ಬ್ರಾಹ್ಣಣರ ರೀತಿ ನೀತಿಗಳ ಕುರಿತು ಸಿಟ್ಟಿಗೆದ್ದ ಅವರು ಅಂದಿನಿAದ ಬ್ರಾಹ್ಮಣ್ಯದ ವಿರುದ್ಧ ಯುದ್ಧ ಸಾರಿದರು.

ತಮಿಳುನಾಡಿಗೆ ಹಿಂತಿರುಗಿ ಗಾಂಧೀಜಿಯವರ ಕಾಂಗ್ರೇಸ್ ಪಕ್ಷದ ಜೊತೆ ಕೈ ಜೋಡಿಸಿ ತಮಿಳುನಾಡು ಮತ್ತು ಕೇರಳದ ವೈಕಂ ಪಟ್ಟಣದ ದೇಗುಲಗಳಿಗೆ ಹರಿಜರಿಗೆ ಪ್ರವೇಶ ದೊರಕಿಸಿಕೊಡಲು ಹೋರಾಡಿದರು. ಕಾಂಗ್ರೇಸ್ ಪಕ್ಷದಲ್ಲಿ ಮೇಲ್ಜಾತಿಯ ಜನ ನಾಯಕತ್ವ ವಹಿಸಿಕೊಂಡಾಗ ಅದನ್ನು ಪ್ರತಿಭಟಿಸಿ ಪಕ್ಷದಿಂದ ಹೊರಬಂದು ಜಸ್ಟಿಸ್ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿ ಹಿಂದುಳಿದ ವರ್ಗಗಳ ಕಾರ್ಯಕರ್ತರನ್ನು ಕಟ್ಟಿಕೊಂಡು ಅವರಲ್ಲಿ ದ್ರಾವಿಡ ಪ್ರಜ್ಞೆಯನ್ನು ಬೆಳಸುತ್ತಾ ನಾಯಕರನ್ನಾಗಿ ರೂಪಿಸಿದರು. ಇವರಲ್ಲಿ ಕಾಂಚಿಪುರಙ ನ ನೇಕಾರ ಕುಟುಂಬದಿಂದ ಬಂದ ಸಿ.ಎನ್. ಅಣ್ಣಾದೊರೈ ಎಂಬ ಬಿ.ಎ. ಪದವೀಧರ ಹಾಗೂ ತಂಜಾವೂರು ಜಿಲ್ಲೆಯ ಹಳ್ಳಿಯ ಹಾಗೂ ದೇವಸ್ಥಾನಗಳಲ್ಲಿ ಡೋಲು ಬಾರಿಸುವ ಕಾಯಕದ ಸವಿತಾ ಸಮಾಜದ ಎಂ.ಕರುಣಾನಿಧಿ ಎಂಬ ಬಿಎಸ್ಸಿ ಪದವೀಧರ ಮುಖ್ಯರಾದವರು. ಇವರಿಬ್ಬರೂ ಆ ಕಾಲದ ತಮಿಳು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆಯುತ್ತಾ ಅನಕ್ಷರಸ್ತ ತಮಿಳು ಜನರಿಗೆ ದ್ರಾವಿಡ ಪ್ರಜ್ಞೆ ಹಾಗೂ ತಮಿಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಉಂಟಾಗುವಂತೆ ಮಾಡಿದರು.

1944 ರಲ್ಲಿ ಪೆರಿಯಾರ್ ಅವರು ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ತಮ್ಮ ಆರೋಗ್ಯ ನೋಡಿಕೊಳ್ಳುವ ನಿಟ್ಟಿನಲ್ಲಿ ಹಾರೈಕೆಗಾಗಿ 32 ವಯಸ್ಸಿನ ಕಾರ್ಯಕರ್ತೆ ಮಣಿಯಮ್ಮ ಎಂಬುವರನ್ನು ವಿವಾಹವಾದಾಗ ಇದನ್ನು ಪ್ರತಿಭಟಿಸಿದ ಇಬ್ಬರು ಶಿಷ್ಯರೂ ಗುರುವಿನ ವಿರುದ್ಧ ಸಿಡಿದೆದ್ದು ಗುರುವಿನ ದ್ರಾವಿಡ ಕಳಗಂ ಗೆ ಪ್ರತಿಯಾಗಿ ದ್ರಾವಿಡ ಮುನೇತ್ರ ಕಳಗಂ ಎಂಬ ಪಕ್ಷವನ್ನು ಕಟ್ಟಿದರು. ಗುರುವಿನ ವೈಯಕ್ತಿಕ ನಿರ್ಧಾರದ ವಿರುದ್ಧ ಅಣ್ನಾದೊರೈ ಮತ್ತು ಕರುಣಾನಿಧಿಯವರಿಗೆ ಬೇಸರವಿತ್ತೇ ಹೊರತು ಅವರ ಸಿದ್ಧಾಂತಗಳ ಕುರಿತಂತೆ ಯಾವುದೇ ವೈಮನಸ್ಸು ಇರಲಿಲ್ಲ. ಗುರು ಪೆರಿಯಾರ್ ಅವರ ಕನಸು ಮತ್ತು ಹೋರಾಟಗಳನ್ನು ಮುಂದುವರಿಸಿದರು. 1967ರಲ್ಲಿ ತಮಿಳುನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಯಾಗಿದ್ದ ಕಾಂಗ್ರೇಸ್ ಪಕ್ಷದ ಕಾಮರಾಜ ನಾಡರ್ ಅವರನ್ನು ಸೋಲಿಸಿ, ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಡಿ.ಎಂ.ಕೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. 1967 ರಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷ ಇಂದಿನವರೆಗೂ ತಮಿಳುನಾಡಿನಲ್ಲಿ ಬೇರು ಬಿಡಲು ಸಾಧ್ಯವಾಗಲಿಲ್ಲ.
ಕಾಮರಾಜ ನಾಡರ್ ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅನೇಕ ಜನಪರ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅಣ್ಣಾದೊರೈ ಮತ್ತು ಕರುಣಾನಿಧಿ ಇಬ್ಬರೂ ಮುಂದುವರಿಸಿದರು, ಇವುಗಳಲ್ಲಿ ಮುಖ್ಯವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಪ್ರಮುಖವಾದುದು.

ಇಂದು ತಮಿಳುನಾಡಿನಲ್ಲಿ ಡಿ.ಎಂ.ಕೆ ಮತ್ತು ಅಣ್ಣಾ ಡಿ.ಎಂ.ಕೆ. ಪಕ್ಷಗಳು ಕಳೆದ ಐವತ್ತು ವರ್ಷಗಳಿಂದ ಆಳ್ವಿಕೆ ನಡೆಸುತ್ತಿವೆ. ಆದರೆ, ತಮಿಳು ಭಾಷೆ ಸಂಸ್ಕೃತಿ ಕುರಿತಂತೆ ಪಕ್ಷಗಳ ನಿಲುವು ಎಂದಿಗೂ ಬದಲಾಗಿಲ್ಲ. ಹಾಗಾಗಿ ಉತ್ತರದವರ ಹಿಂದಿ ಭಾಷೆ ತಮಿಳುನಾಡಿಗೆ ಈವರೆಗೂ ಕಾಲಿಡಲು ಸಾಧ್ಯವಾಗಿಲ್ಲ. ಈಗಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪೆರಿಯಾರ್ ರಾಮಸ್ವಾಮಿಯವರ ಜನ್ಮದಿನವಾದ ಸೆಪ್ಟಂಬರ್ 17ಅನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದು ಪೆರಿಯಾರ್ ಗೆ ಸಂದ ನಿಜವಾದ ಗೌರವ. ತಮಿಳುನಾಡಿನಲ್ಲಿ ತಿರುವಳ್ವರ್ ನಂತರ ಪೆರಿಯಾರ್ ಗೌರವದ ಸ್ಥಾನ ಪಡೆದಿದ್ದಾರೆ.

ಇನ್ನು, ಪೆರಿಯಾರ್ ಚಿಂತನೆಗಳು ಕನ್ನಡಕ್ಕೆ ಬರಲು ಮೂಲಕಾರಣಕರ್ತರು ಬೆಂಗಳೂರಿನ ವಸುದೇವ ಭೂಪಾಲಂ ಎಂಬ ಮಹನೀಯರು. ಇವರು 1974 ರಲ್ಲಿ ಸಿಟಿಮಾರ್ಕೆಟ್ ಬಳಿಯ ಬಾಳೆಕಾಯಿ ಮಂಡಿ ಪ್ರದೇಶದ ಗುಂಡೂಪಂತ್ ರಸ್ತೆಯ ಕಟ್ಟಡವೊಂದರ ಮಹಡಿ ಮೇಲಿನ ಕೊಠಡಿಯಲ್ಲಿ “ ಚಿಂತಕರ ಚಾವಡಿ” ಎಂಬ ಸಂಸ್ಥೆಯನ್ನು ಆರಂಭಿಸಿ, ಕೇವಲ ನಾಲ್ಕಾಣೆಗೆ ನಲವತ್ತು ಪುಟಗಳ ಕ್ರೌನ್ ಆಕಾರದ ಪುಸ್ತಕಗಳ ಮೂಲಕ ನನ್ನ ತಲೆಮಾರಿಗೆ ಪೆರಿಯಾರ್ ಚಿಂತನೆಗಳನ್ನು ಧಾರೆಯೆರೆದರು. 1972ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ್ದರೂ ಸಹ ಬಡತನದ ಕಾರಣ ಮೂರು ವರ್ಷಗಳ ಕಾಲ ಮನೆಯಲ್ಲಿದ್ದ ನಾನು, ಚಾಮರಾಜಪೇಟೆಯ ಅಕ್ಕನ ಮನೆಗೆ ಬಂದಾಗ, ಅಕ್ಕನ ಬಳಿ ಎಂಟಾಣಿ ಪಡೆದು, ಮಿಂಟೊ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಒಳಗೆ ನಡೆದುಕೊಂಡು ಹೋಗಿ ಚಿಂತಕರ ಚಾವಡಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದೆ. ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಡಿ.ಆರ್ ನಾಗರಾಜ್ ಇವರನ್ನು ಓದುವ ಮೊದಲೇ ಕುವೆಂಪು ಹಾಗೂ ಪೆರಿಯಾರ್ ಅವರ ವಿಚಾರಧಾರೆ ನನ್ನೊಳಗೆ ಮನೆ ಮಾಡಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ