ಭಾನುವಾರ, ಅಕ್ಟೋಬರ್ 4, 2026

ಮಣಿಕಾಂತ್ ಎಂಬ ಪತ್ರಿಕೋದ್ಯಮದ ಮಾಣಿಕ್ಯ

 


ಕನ್ನಡ ಪತ್ರಿಕೋದ್ಯಮದಲ್ಲಿ ಬರಹ ಮತ್ತು ಬದುಕಿನ ಬದ್ಧತೆಗೆ ಮತ್ತೊಂದು ಹೆಸರೇ ಎ.ಆರ್. ಮಣಿಕಾಂತ್ ಎಂಬುದು ನನ್ನ ಮೂರೂವರೆ ದಶಕದ ಅನುಭವ ಮತ್ತು ನಂಬಿಕೆ. ನನ್ನ ಪಾಲಿಗೆ ಕಿರಿಯ ಸಹೋದರನಂತೆ ಇರುವ ಈತನನ್ನು ನಾನು ಮಣಿ ಎಂದೇ ಕರೆಯುತ್ತೇನೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪುಟ್ಟ ಗ್ರಾಮವೊಂದರ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಮಣಿಕಾಂತ್, ಮನಸ್ಸು ಮಾಡಿದ್ದರೆ, ಇಂದು ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿಯಾಗಿ ಅಮೇರಿಕಾ ಅಥವಾ ಕೆನಡಾದಲ್ಲಿ ಇರಬೇಕಿತ್ತು. ಆತನ ಇಂಜಿನಿಯರಿಂಗ್ ಸಹಪಾಠಿಗಳು ಸಾಕಷ್ಟು ಮಂದಿ ವಿದೇಶದಲ್ಲಿದ್ದಾರೆ. ಭಾರತದಲ್ಲಿಯೂ ಕೂಡಾ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಹತ್ತು ವರ್ಷದ ಹಿಂದೆ ಅಕ್ಕ ಸಮ್ಮೇಳನ ನಡೆಯುವಾಗ, ಈತನ ಸಹಪಾಠಿಯೊಬ್ಬ ಮಣಿಕಾಂತ್ ನನ್ನು ಅಮೇರಿಕಾಕ್ಕೆ ಕರೆಸಿಕೊಂಡಿದ್ದ. ಸರ್ಕಾರದ ಹಂಗಿಲ್ಲದೆ, ಮಣಿಕಾಂತ್ ಅಮೇರಿಕಾ ಪ್ರವಾಸ ಮಾಡಿ ಬಂದನು.
ಮಣಿಕಾಂತ್ 1990ರ ದಶಕದಲ್ಲಿ ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಟೋಮೊಬೈಲ್ ವಿಭಾಗದಲ್ಲಿ ಪದವಿ ಪಡೆದವನು. ಮಂಡ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಡಾ.ಬೆಸಗರಹಳ್ಳಿ ರಾಮಣ್ಣನವರ ಜೊತೆಗೂಡಿ ಹೊಸರೂಪು ನೀಡಿದ ಪ್ರೊ.ಹೆಚ್.ಎಲ್.ಕೇಶವಮೂರ್ತಿಯವರ ಶಿಷ್ಯರಲ್ಲಿ ಪ್ರಮುಖನಾದವನು. ಬಹಳ ಮಂದಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಕನ್ನಡ ಸಾಹಿತ್ಯ ಲೋಕಕ್ಕೆ ಮಂಡ್ಯದ ನೆಲದಿಂದ ಸಾಕಷ್ಟು ಪ್ರತಿಭಾವಂತರನ್ನು ಕೊಡುಗೆ ನೀಡಿದ ಕೀರ್ತಿ ನಾಗಮಂಗಲ ತಾಲ್ಲೂಕಿಗೆ ಸಲ್ಲುತ್ತದೆ.. ಬಿ.ಎಂ.ಶ್ರೀ., ಬಿ.ಎಸ್.ರಂಗಾ, ಹೆಚ್ ಎಲ್.ನಾಗೇಗೌಡ, ಜೀ.ಶಂ. ಪರಮಶಿವಯ್ಯ, ಹೆಚ್.ಎಲ್.ಕೇಶವಮೂರ್ತಿ, ಹೀಗೆ ಹೆಸರಿಸುತ್ತಾ ಹೋಗಬಹುದು. ನನ್ನ ತಲೆಮಾರಿನ ಅಸಂಖ್ಯಾತ ಪ್ರತಿಭಾವಂತರು ಕೂಡಾ ಇದ್ದಾರೆ. ನಾಗಮಂಗಲ ತಾಲ್ಲೂಕಿನ ನಂತರ, ಎರಡನೆಯಾಗಿ ಮದ್ದೂರು, ಕೆ.ಆರ್,ಪೇಟೆ ಹಾಗೂ ಪಾಂಡುವಪುರ ತಾಲ್ಲೂಕುಗಳನ್ನು ಹೆಸರಿಸಬಹುದು.
ವಾಸ್ತವವಾಗಿ ನನಗೆ ಮಣಿಕಾಂತ್ ಪರಿಚಯವಾದದ್ದು 1995 ರಲ್ಲಿ ಗೆಳೆಯ ರವಿಬೆಳೆಗೆರೆ ಆರಂಭಿಸಿದ್ದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ. ಅದಕ್ಕೂ ಎರಡು ವರ್ಷದ ಮುನ್ನ, ಇವನು ಬದುಕಿಗೆ ಶಾಶ್ವತ ಭದ್ರತೆ ಒದಗಿಸುವ ಇಂಜಿನಿಯರ್ ಉದ್ಯೋಗಕ್ಕೆ ಹೋಗದೆ, ಅಕ್ಷರದ ಮೇಲಿನ ಮೋಹ ಅಥವಾ ಪ್ರೀತಿಯಿಂದ ಪತ್ರಿಕೋದ್ಯಮಕ್ಕೆ ಬಂದವನು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಶ್ಯಾಮರಾವ್ ಕೈ ಕೆಳಗೆ ಮೂರು ಅಥವಾ ನಾಲ್ಕು ಸಾವಿರ ರೂಪಾಯಿ ವೇತನಕ್ಕೆ ಪತ್ರಿಕೆಗೆ ಸೇರ್ಪಡೆಯಾಗಿದ್ದನು. 1989 ರಲ್ಲಿ ವಿವಾಹವಾದ ನಂತರ ನಾನು 1990 ರಲ್ಲಿ ಪತ್ರಿಕೋದ್ಯಮ ತೊರೆದು, ಹತ್ತು ವರ್ಷಗಳ ಕಾಲ ನನ್ನ ಕುಟುಂಬವನ್ನು ಊರಿನಲ್ಲಿರಿಸಿ, ಮತ್ತೇ ಪದವಿಯ ನಂತರ ಮೈಸೂರು, ಮಂಡ್ಯ ಹಾಗೂ ಹಂಪಿಯಲ್ಲಿ ಶಿಕ್ಷಣವನ್ನು ಮುಂದುವರಿಸಿದ್ದೆ.
ಸಾಹಿತ್ಯ, ಮತ್ತು ಸಂಗೀತ ಕುರಿತು ಆಳವಾದ ಒಳನೋಟಗಳಿದ್ದ ರವಿಬೆಳೆಗೆರೆ ನನಗೆ 1987 ರಿಂದಲೂ ಆತ್ಮೀಯ ಹಾಗೂ ಏಕವಚನದ ಮಿತ್ರ ನಾಗಿದ್ದ. ಬಾಲ್ಯದ ಸಹಪಾಠಿಗಳನ್ನು ಹೊರತು ಪಡಿಸಿ, ಜಗಿ ಎಂದು ನನ್ನನ್ನು, ಕರೆಯುವ ಮಿತ್ರನಾಗಿದ್ದ. ನಾನು ಪ್ರತಿ ಬುಧವಾರ ಬೆಂಗಳೂರಿಗೆ ಹೋಗಿ, ಆತನನ್ನುಭೇಟಿಯಾಗಿ ಬರುತ್ತಿದ್ದೆ. ನಮ್ಮಿಬ್ಬರ ಪರ್ಮನೆಂಟ್ ಅಡ್ಡೆಗಳಲ್ಲಿ ( ರೆಸಿಡೆನ್ಸಿ ರಸ್ತೆಯ ಇಂಪಿರಿಯಲ್ ರೆಸ್ಟೋರೆಂಟ್ ಅಥವಾ ,ಬೆಂಗಳೂರು ಪ್ರಸ್ ಕ್ಲಬ್ ) ಮಧ್ಯರಾತ್ರಿಯವರೆಗೆ ಕುಳಿತು, ಕನ್ನಡ, ತೆಲುಗು ಸಾಹಿತ್ಯ ಹಾಗೂ ಸೂಫಿ ಕವಿಗಳ ಬಗ್ಗೆ ಗಂಭೀರವಾಗಿ ಇಬ್ಬರೂ ಚರ್ಚಿಸುತ್ತಿದ್ದೆವು. ಆ ಸಮಯದಲ್ಲಿ ಮಣಿಕಾಂತ್, ಸಂಯುಕ್ತ ಕರ್ನಾಟಕದ ಕೆಲಸ ಮುಗಿಸಿ, ಸಂಜೆ ವೇಳೆಗೆ ಹಾಯ್ ಬೆಂಗಳೂರು ಕಛೇರಿಗೆ ಬಂದರೆ, ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆಯವರೆಗೆ ಪತ್ರಿಕೆಯ ಬಹುತೇಕ ವರದಿಗಳನ್ನು ಎಡಿಟ್ ಮಾಡುವುದರ ಜೊತೆಗೆ ತನ್ನ ಹೆಸರನ್ನು ನಮೂದಿಸದೆ, ಅಂಕಣ ಬರೆದು ಹೋಗುತ್ತಿದ್ದ,
ಮಣಿಕಾಂತ್ ನ ಅಕ್ಷರ ಪ್ರೀತಿ ಎಂತಹದ್ದು ಎಂದರೆ, ಹಾಯ್ ಬೆಂಗಳೂರ್ ಪತ್ರಿಕೆಯ ಈ ಕೆಲಸಕ್ಕಾಗಿ ವೇತನ ಪಡೆಯುತ್ತಿರಲಿಲ್ಲ. ಮನೆಗೆ ಹೋಗುವುದಕ್ಕೆ ಮತ್ತು ಸಂಯುಕ್ತ ಕರ್ನಾಟಕ ಕಚೇರಿಯಿಂದ ಹಾಯ್ ಬೆಂಗಳೂರ್ ಕಚೇರಿಗೆ ಬರುವುದಕ್ಕೆ, ಪತ್ರಿಕೆಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ನಿವೇದಿತಾ ಎಂಬ ಹೆಣ್ಣು ಮಗಳಿಂದ ಆಟೊರಿಕ್ಷಾಕ್ಕೆ ಮಾತ್ರ ಹಣವನ್ನು ಪಡೆಯುತ್ತಿದ್ದ. ಒಂದು ದಿನ ರವಿ ಬೆಳೆಗೆರೆ ಮತ್ತು ನಾನು ಆತನ ಚೇಂಬರ್ ನಲ್ಲಿ ಕಾಫಿ ಕುಡಿದು ಮಾತನಾಡುತ್ತಾ, ಕುಳಿರುವಾಗ, ಕಚೇರಿಯ ಮೂಲೆಯಲ್ಲಿ ಕತ್ತು ಬಗ್ಗಿಸಿ, ಬರೆಯುತ್ತಿದ್ದ ಮಣಿಕಾಂತ್ ನನ್ನು ತೋರಿಸಿ. ‘’ ಜಗಿ, ಇವನು ಮಣಿಕಾಂತ್, ಇಂಜಿನಿಯರ್ ಪದವೀಧರ, ನಿನ್ನ ಜಿಲ್ಲೆಯ ಹುಡುಗ, ಅದ್ಭುತ ಪ್ರತಿಭಾವಂತ, ನನ್ನ ಪತ್ರಿಕೆಗೆ ಇವನು ಜೀವಾಳ ಎಂದು ಹೇಳುತ್ತಾ, ಹುಟ್ಟಿನಿಂದಲೇ ಬಂದಿರುವ ಶ್ರವಣ ದೋಷದಿಂದ ಯಾರ ಜೊತೆಯಲ್ಲೂ ಮಾತನಾಡುವುದಿಲ್ಲ’ ಎಂದು ಹೇಳಿದಾಗ, ನಾನು ಮೊದಲ ಬಾರಿಗೆ ಮಣಿಯ ಟೇಬಲ್ ಬಳಿ ಹೋಗಿ, ಮಾತನಾಡಿಸಿ, ಮೈ ದಡವಿ ಬಂದಿದ್ದೆ. ಅಂದಿನಿಂದ ಇಂದಿನವರೆಗೂ ಮಣಿಕಾಂತ್ ನನ್ನ ಪಾಲಿಗೆ ಒಡ ಹುಟ್ಟಿದ ತಮ್ಮನಂತೆ ಇದ್ದಾನೆ.
ಆ ಕಾಲದಲ್ಲಿ ರವಿಯ ಆತ್ಮೀಯ ಮಿತ್ರರಾಗಿದ್ದ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು , ಅವರಿಗೆ ಹೇಳಿ, ಪತ್ರಿಕೆಯಲ್ಲಿ ಉಪಸಂಪಾದಕ ಹುದ್ದೆಯನ್ನು ರವಿ ದೊರಕಿಸಿಕೊಟ್ಟನು. ಮಣಿಕಾಂತ್ ವಿಜಯ ಕರ್ನಾಟಕಕ್ಕೆ ಬಂದ ನಂತರ ಈತ ಎಂತಹ ಪ್ರತಿಭಾವಂತ ಪತ್ರಕರ್ತ ಎಂದು ಇಡೀ ನಾಡಿಗೆ ಪರಿಚಯವಾಯಿತು. ಮಣಿಯು ನಗರದ ವಿಶೇಷ ಸಂಚಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳಿಗೆ ನಾಡಿನ ಲೇಖಕರು ಎದುರು ನೋಡುತ್ತಿದ್ದರು. ಮಣಿಕಾಂತ್ ಈಗ ಹೊರತಂದಿರುವ ಅಮ್ಮ ಹೇಳಿದ ಎಂಟು ಸುಳ್ಳುಗಳು ಮತ್ತು ಅಪ್ಪ ಅಂದ್ರೆ ಆಕಾಶ ಈ ಎರಡು ಕೃತಿಗಳ ಬಹುತೇಕ ಬರಹಗಳು ವಿಜಯ ಕರ್ನಾಟಕ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳಾಗಿವೆ. ಈ ಕೃತಿಗಳು ಕ್ರಮವಾಗಿ ಇನ್ನೂರು ಮುದ್ರಣ ಮತ್ತು ನೂರು ಮುದ್ರಣ ಕಂಡಿರುವುದು ಮಣಿಯ ಪ್ರತಿಭೆಗೆ ಸಾಕ್ಷಿಯಾಗಿವೆ. ತಾನೇ ಸ್ವತಃ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ, ಅದಕ್ಕೆ ಏಕೈಕ ಪುತ್ರಿ ನೀಲಿಮಾಳ ಹೆಸರಿಟ್ಟಿದ್ದಾನೆ. ಮಣಿಕಾಂತ್ ಗೆ ಪತ್ನಿ ಹಾಗೂ ನಮ್ಮ ಮಂಡ್ಯ ನಗರದ ಹೆಣ್ಣುಮಗಳು ನಾಗರತ್ನ ಬೆಂಬಲವಾಗಿ ನಿಂತು ಎಲ್ಲಾ ವ್ಯವಹಾರಗಳನ್ನು ನಿಭಾಯಿಸುತ್ತಾಳೆ.

ಎಲೆಮರೆಯ ಕಾಯಂತೆ ಇದ್ದು, ಅಪ್ರತಿಮ ಸಾಧನೆ ಮಾಡಿದ ಜೀವಗಳು, ನೊಂದವರ ಬದುಕು ಮತ್ತು ಸಮಾಜದ ಕಣ್ಣಿಗೆ ಕಾಣದ ಹಾಗೆ ಬಡವರಿಗೆ ಸಹಾಯ ಮಾಡುತ್ತಾ, ಎಂದಿಗೂ ಪ್ರಚಾರಕ್ಕೆ ಹಂಬಲಿಸದ ಜೀವಗಳು ಹೀಗೆ ತರಾವರಿ ಮಾನವೀಯ ಮುಖದ ಜೀವಗಳು ಮಣಿಕಾಂತ್ ಬರಹಕ್ಕೆ ಮೂಲವಾಗಿದ್ದಾರೆ. ಈತನ ಬರಹಗಳಿಂದ ಪ್ರೇರಣೆಗೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗಲಾರದು. ಮಣಿಕಾಂತ್ ಸಾಮಾನ್ಯವಾಗಿ ಒಬ್ಬನೇ ಎಲ್ಲಿಯೂ ಪ್ರವಾಸ ಹೋಗುವುದಿಲ್ಲ. ಒಮ್ಮೆ, ಸಾರ್, ನಾನು ಕೂಡಲ ಸಂಗಮ ನೋಡಬೇಕು ಎಂದು ಆಸೆ ವ್ಯಕ್ತಪಡಿಸಿದಾಗ, ಮಣಿಯನ್ನು ಧಾರವಾಡಕ್ಕೆ ಕರೆದುಕೊಂಡು ಬಂದು, ಮಣಿಯ ರೀತಿಯಲ್ಲಿ ನನಗೆ ತಮ್ಮನಂತಿರುವ ಹಾಯ್ ಬೆಂಗಳೂರ್ ವರದಿಗಾರ ರವಿಕುಲಕರ್ಣಿಯ ಜೊತೆ ಕಾರಿನಲ್ಲಿ ಕರೆದುಕೊಂಡು ಹೋಗಿ ಎರಡು ದಿನ ಗದಗ, ಲಕ್ಕುಂಡಿ, ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಎಲ್ಲವನ್ನೂ ತೋರಿಸಿಕೊಂಡು ಬಂದೆ.
ಮೂರನೇ ದಿನ ಮನೆಯಲ್ಲಿ ಬೆಳಿಗ್ಗೆ ತಿಂಡಿ ತಿನ್ನುತ್ತಿರುವಾಗ, ‘’ ಸಾರ್, ಎಂ.ಎಂ.ಕಲ್ಬುರ್ಗಿ ಸರ್ ಅವರನ್ನು ಭೇಟಿ ಮಾಡಬೇಕು, ಅವರಿಗೆ ಅಮ್ಮ ಹೇಳಿದ ಎಂಟು ಸುಳ್ಳುಗಳು ಕೃತಿ ನೀಡಬೇಕು’’ ಎಂದು ಮಣಿ ಕೇಳಿಕೊಂಡಾಗ, ಕೂಡಲೇ ಕಲ್ಬುರ್ಗಿ ಸರ್ ಮನೆಗೆ ದೂರವಾಣಿ ಕರೆ ಮಾಡಿದೆ. ಕರೆದುಕೊಂಡು ಬಾ ಕೊಪ್ಪ, ಮನೆಯಲ್ಲಿ ಇದ್ದೀನಿ ಎಂದರು. ಮಣಿಕಾಂತನನ್ನು ಅವರ ಮನೆಗೆ ಕರೆದೊಯ್ದು, ಈತನ ಬಗ್ಗೆ ವಿವರಿಸಿದೆ. ಕಲ್ಬುರ್ಗಿಯವರು ಮಣಿಯ ಕೈ ಹಿಡಿದುಕೊಂಡು ಪ್ರೀತಿಯಿಂದ ಮಾತನಾಡಿಸಿದರು. ಮನೆಯಿಂದ ಹೊರಬರುವಾಗ, ಗೇಟ್ ನ ವರೆಗೆ ಬಂದರು. ಮಣಿಯ ಆಸೆಯಂತೆ ಮನೆಯ ಹೊರಗಿನ ಪುಟ್ಟ ಹೂ ತೋಟದಲ್ಲಿ ಮಣಿಯನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಫೋಟೊ ತೆಗಿಸಿಕೊಂಡರು. ಮಣಿಕಾಂತ್ ಅವರಿಗೆ ಕೃತಿಯನ್ನು ನೀಡಿ, ಅದೇ ರಾತ್ರಿ ಚೆನ್ನಮ್ಮ ಎಕ್ಸ್ ಪ್ರಸ್ ಟ್ರೈನ್ ನಲ್ಲಿ ಬೆಂಗಳೂರಿಗೆ ತೆರಳಿದ.
ಬೆಳಿಗ್ಗೆ ಒಂಬತ್ತು ಗಂಟೆಗೆ ಕಲ್ಬುರ್ಗಿ ಸರ್ ನನಗೆ ಕರೆ ಮಾಡಿದರು. ಕೊಪ್ಪಾ, ಕೂಡಲೇ ಮನೆಗೆ ಬಂದು ಹೋಗು, ನಿನ್ನ ಬಳಿ ಮಣಿಕಾಂತ್ ನೀಡಿರುವ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ತೆಗೆದುಕೊಂಡು ಬಾ ಎಂದರು. ನಾನು ಮನೆಗೆ ಹೋದಾಗ, ಕಲ್ಬರ್ಗಿಯವರು ಇಡೀ ರಾತ್ರಿ ಆ ಪುಸ್ತಕವನ್ನು ಓದಿ, ಬಿಜಾಪುರದಿಂದ ಬಂದಿದ್ದ ತಮ್ಮ ಮಗಳಿಗೆ ಓದುವಂತೆ ಹೇಳಿ ಬೆಳಿಗ್ಗೆ ಕೊಟ್ಟು ಕಳಿಸಿಬಿಟ್ಟಿದ್ದರು. ‘ ಕೊಪ್ಪಾ ಪುಸ್ತಕ ತುಂಬಾ ಚೆನ್ನಾಗಿದೆ ಕಣೋ, ನಿನ್ನ ಅಮ್ಮನಿಗೆ ಓದಿಸಬೇಕಿತ್ತು. ( ಕಲ್ಬುರ್ಗಿಯ ಶ್ರೀಮತಿ ಉಮಾ ದೇವಿಯವರನ್ನು ನಾನು ಅಮ್ಮಾ ಎಂದು ಕರೆಯುತ್ತಿದ್ದೆ.) ಆದರೆ, ಮಗಳಿಗೆ ಕೊಟ್ಟಬಿಟ್ಟೆ ಹಾಗಾಗಿ ನಿನ್ನ ಪುಸ್ತಕವನ್ನು ತರಿಸಿದೆ ಎಂದು ಹೇಳುತ್ತಾ, ನೀನು ಹುಬ್ಬಳ್ಳಿಯ ನಿನ್ನ ಕಚೇರಿಗೆ ಹೋದಾಗ, ಸಪ್ನ ಬುಕ್ ಹೌಸ್ ಗೆ ಹೋಗಿ ಹತ್ತು ಪ್ರತಿಗಳನ್ನು ತೆಗೆದುಕೊಂಡು ಬಾ, ನೀನು ಒಂದನ್ನು ಇಟ್ಟುಕೋ, ಉಳಿದ ಒಂಬತ್ತು ಪ್ರತಿಗಳನ್ನು ನನಗೆ ತಲುಪಿಸು, ಆತ್ಮೀಯರಿಗೆ ಇದನ್ನು ಓದಿಸಬೇಕು ಎಂದು ಹೇಳುತ್ತಾ ಕೈಗೆ ಹಣವಿತ್ತರು. ಮಣಿಕಾಂತನ ಪ್ರತಿಭೆಗೆ ಇದಕ್ಕಿಂತ ಯಾವ ಪ್ರಶಸ್ತಿ ಬೇಕು ಹೇಳಿ?
ಬಸವರಾಜ ಹೊರಟ್ಟಿಯವರು ಈ ಕೃತಿಯನ್ನು ಓದಿ, ತಮ್ಮ ತಾಯಿ ಹೆಸರಿನಲ್ಲಿ ನೀಡುವ ಅವ್ವಾ ಪ್ರಶಸ್ತಿಯನ್ನು ಮಣಿಕಾಂತ್ ಗೆ ನೀಡಿ, ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಸನ್ಮಾನಿಸಿದ್ದರು. ಇಂತಹ ಮೌನ ಸಾಧಕನಿಗೆ ಸಾಹಿತ್ಯಅಕಾಡೆಮಿಯ ಪ್ರಶಸ್ತಿಯನ್ನು ಹೊರತು ಪಡಿಸಿದರೆ, ಮೂರೂವರೆ ದಶಕ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರೂ ಈವರೆಗೆ ಮಾಧ್ಯಮ ಅಕಾಡೆಮಿ ಅಥವಾ ಪತ್ರಕರ್ತರ ಸಂಘದಿಂದ ಒಂದು ಪ್ರಶಸ್ತಿ ಕೂಡಾ ದೊರೆತಿಲ್ಲ. ಇದು ಅಕಾಡೆಮಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಮಣಿಕಾಂತ್ ನ ಬದುಕಿನ ಬದ್ಧತೆ ಎಂತಹದು ಎಂಬುದಕ್ಕೆ ಇದೂ ಕೂಡಾ ಶ್ರೇಷ್ಠ ಉದಾಹರಣೆಯಾಗಿದೆ.

ಮಣಿಕಾಂತ್ ಪತ್ರಿಕೋದ್ಯಮದಲ್ಲಿದ್ದರೂ ಸಹ, ಕುಡಿಯುವ ಅಥವಾ ಸಿಗರೇಟ್ ಸೇದುವ ಅಭ್ಯಾಸವಿಲ್ಲ. ಇದಕ್ಕಿಂತ ಹೆಚ್ಚಾಗಿ ಮಂಡ್ಯ ನೆಲದ ಅಪ್ಪಟ ಒಕ್ಕಲಿಗನಾಗಿ ಮಾಂಸ ತಿನ್ನುವುದಿಲ್ಲ. ಒಮ್ಮೆ ತನ್ನ ಪತ್ನಿ, ಮಗಳ ಜೊತೆ ನನ್ನ ಮನೆಗೆ ಬಂದಾಗ, ನಾವೆಲ್ಲಾ ಮಾಂಸದೂಟ ಮಾಡಿದೆವು. , ಇವನು ಬೇಳೆಸಾರು ಊಟ ಮಾಡಿದ. ಈ ಬಗ್ಗೆ ಪ್ರಶ್ನಿಸಿದಾಗ, ಮಣಿ ಹೇಳಿದ ಬಾಲ್ಯದ ಘಟನೆಯು ನನ್ನನ್ನು ಕ್ಷಣ ಕಾಲ ಅಲುಗಾಡಿಸಿಬಿಟ್ಟಿತು. ನಮ್ಮ ಬಾಲ್ಯದ ದಿನಗಳಲ್ಲಿ ಒಕ್ಕಲಿಗರ ಮನೆಗಳಲ್ಲಿ ವರ್ಷಕ್ಕೆ . ಮೂರು ಅಥವಾ ನಾಲ್ಕು ಬಾರಿ ಮಾತ್ರ ಕೋಳಿ ಕುಯ್ದು ಮಾಂಸದೂಟ ಮಾಡುವುದು ಪದ್ಧತಿಯಿತ್ತು.
ಮಾಂಸಹಾರಿಯಾಗಿದ್ದ ಮಣಿಕಾಂತ್ ತಂದೆ ತನ್ನೂರಿನ ಬಳಿಯ ಸಂತೆಯಲ್ಲಿ ಗಾಂಧಿವಾದಿಗಳ ಉಪನ್ಯಾಸ ಕೇಳಿ, ಅಹಿಂಸೆಯ ಪ್ರತೀಕವಾಗಿ ಮಾಂಸಹಾರ ಬಿಟ್ಟರು. ಇದು ಮಣಿಕಾಂತ್ ಮೇಲೆ ಪ್ರಭಾವ ಬೀರಿತು. ಈತನೂ ಸಸ್ಯಹಾರಿಯಾದನು.. ಮಣಿಯ ಇಂತಹ ಬದುಕಿನ ಬದ್ಧತೆಯೇ ನನಗೆ ಈತನನ್ನು ತಮ್ಮನಂತೆ ಪ್ರೀತಿಸಲು ಮೂಲ ಕಾರಣವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ