ಶುಕ್ರವಾರ, ಅಕ್ಟೋಬರ್ 30, 2026

ಕುವೆಂಪು ವೈಚಾರಿಕ ಚಿಂತನೆಗಳು ಮತ್ತು ಪ್ರಭಾವ



ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ‘ಪಂಪನಿಂದ ಕುವೆಂಪುವರೆಗೆ’ ಎಂಬ ಮಾತು ಇಂದಿಗೂ ಪ್ರಚಲಿತದಲ್ಲಿದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಬಂಡಾಯದ ಅಥವಾ ವೈಚಾರಿಕತೆಯ ಲಕ್ಷಣಗಳನ್ನು ಗುರುತಿಸಲು ಈ ಮಾತನ್ನು ಬಳಸುವುದು ಸಂಪ್ರದಾಯವಾಗಿದೆ. ಇದೇ ವ್ಯಾಖ್ಯಾನವನ್ನು ಇಟ್ಟುಕೊಂಡು, ಬಂಡಾಯ ಕವಿ ಹಾಗೂ ಹಾಸ್ಯದ ಮಾತುಗಳಿಗೆ ಹೆಸರಾಗಿದ್ದ ದಿವಂಗತ ಚಂದ್ರಶೇಖರ ಪಾಟೀಲರು ‘’ ಪಂಪನಿಂದ ಚಂಪಾವರೆಗೆ’’ ಎಂದು ಈ ವಾಖ್ಯಾನವನ್ನು ಬದಲಾಯಿಸಬೇಕು ಎಂದು ಸಾಹಿತ್ಯ ಗೋಷ್ಠಿಗಳಲ್ಲಿ ಸದಾ ಹೇಳುತ್ತಿದ್ದರು. ಹತ್ತನೇ ಶತಮಾನದ ಆದಿಕವಿ ಪಂಪನು ಅರಕೇಸರಿಯ ಆಸ್ಥಾನದಲ್ಲಿದ್ದುಕೊಂಡು ‘’ ಮಾನವ ಜಾತಿ, ತಾನೊಂದೆ ವಲಂ’ ಎಂದು ಹೇಳುವ ಮೂಲಕ, ತಾನೊಬ್ಬ ಜೈನ ಕವಿಯಾಗಿದ್ದರೂ, ಇಡೀ ಮಾನವ ಕುಲ ಒಂದೇ, ಅದಕ್ಕೆ ಜಾತಿ ಇಲ್ಲ ಎಂದು ಹೇಳುವುದರ ಮೂಲಕ ಕನ್ನಡ ಕಾವ್ಯವನ್ನು ಜಾತ್ಯಾತೀತವಾಗಿ ಉತ್ತುಂಗಕ್ಕೆ ಏರಿಸಿದನು. ಪಂಪ ಮಹಾಕವಿಯ ವೈಶಿಷ್ಠತೆ ಎಂದರೆ, ಆತನು ನಮ್ಮ ಭಾರತೀಯ ಪುರಾಣ ಕಾವ್ಯಗಳಲ್ಲಿ ಒಂದಾದ ‘’ ಮಹಾಭಾರತ’ ಕಾವ್ಯವನ್ನು ಯಥಾವತ್ತಾಗಿ ಸ್ವೀಕರಿಸಲಿಲ್ಲ. ತನ್ನ ಮಮೋಧರ್ಮಕ್ಕೆ ಅನುಗುಣವಾಗಿ ರಚಿಸಿದನು. ಈ ಕಾರಣದಿಂದಾಗಿ ಪಂಪನ “ವಿಕ್ರಮಾರ್ಜುನ ವಿಜಯ’’ ಕೃತಿಯು ಆತನು ಬದುಕಿದ್ದ ಕಾಲಘಟ್ಟದ ಸಾಮಾಜಿಕ ನಂಬಿಕೆಗಳು ಹಾಗೂ ವಾಸ್ತವಗಳನ್ನು ಒಳಗೊಂಡಿದೆ.

ಇಪ್ಪತ್ತನೇ ಶತಮಾನದಲ್ಲಿ ಈ ನಾಡು ಕಂಡ ಮಹಾಕವಿ ಕುವೆಂಪು ಅವರನ್ನು ಆದಿಕವಿ ಪಂಪನ ಉತ್ತರಾಧಿಕಾರಿ ಎಂದು ಕನ್ನಡ ಸಾಹಿತ್ಯ ಕ್ಷೇತ್ರವು ಗುರುತಿಸಿ ಗೌರವಿಸಿದೆ. ಕುವೆಂಪು ಅವರು ೧೯೪೯ ರಲ್ಲಿ ರಚಿಸಿದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ವಾಲ್ಮಿಕಿಯ ರಾಮಾಯಣವನ್ನು ಯಥಾಸ್ಥಿತಿಯಲ್ಲಿ ಅನುಕರಿಸಲಿಲ್ಲ. ಪಂಪನ ರೀತಿಯಲ್ಲಿ ತಮ್ಮದೇ ಆದ ವೈಚಾರಿಕ ಚಿಂತನೆಗಳನ್ನು ಅಳವಡಿಸಿ, ರಾಮಾಯಣದ ಅನೇಕ ಪಾತ್ರಗಳಿಗೆ ಹೊಸರೂಪ ನೀಡಿದರು. ಅವರ ಪ್ರಸಿದ್ಧ ಕಥನ ಕಾವ್ಯವಾದ’ ಕರಿಸಿದ್ಧ’ ಕವನದಲ್ಲಿ ಹೇಳಿರುವ

ಜಗಕೆಲ್ಲ ಒಂದೆ ರಾಮಾಯಣವು ಎಂಬುದದು ಹೆದ್ದಪ್ಪು,
ಇಳೆಗೆಲ್ಲ ವಾಲ್ಮೀಕಿಯೊಬ್ಬನೇ ಕವಿ ಎಂಬುದೂ ತಪ್ಪು.
ತಿರೆಗೆಲ್ಲ ಶ್ರೀರಾಮ. ನೊಬ್ಬನೇ ಎಂಬರೂ ಬೆಪ್ಪುಗಳೆ,
ಹನುಮಂತರೆನಿತಿಹರು ಮಲೆಯ ಕಾಡುಗಳಲ್ಲಿ !
ಒಂದೊA ಹಳ್ಳಿಯಲ್ಲಿ ಒಬ್ಬೊಬ್ಬ ಜಸವಂತನಾಗದಿಹ
ವಾಲ್ಮೀಕಿ ನೆಲೆಸಿಹನು. ರಾಮಾಯಣಗಳಂತೂ ಲೆಕ್ಕಕ್ಕೆ ಮಿತಿಯಿಲ್ಲ.
ಕಣ್ಣೆರೆದು ನೋಡಿದರೆ ತೋರಿ ಬರುವುದು ನಿಜವು.
ಎಂಬ ಮಾತುಗಳು ಕುವೆಂಪು ಅವರ ಮನೋಧರ್ಮ ಹಾಗೂ ವೈಚಾರಿಕತೆಗೆ ಸಾಕ್ಷಿಯಾಗಿವೆ. ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಮಂಥರೆ, ರಾವಣ, ಶಬರಿ, ಸೀತೆ ಮತ್ತು ಆಕೆಯ ಅಗ್ನಿಪರೀಕ್ಷೆ ಹೀಗೆ ಅನೇಕ ಭಾಗಗಳಲ್ಲಿ ಕುವೆಂಪು ಅವರ ವೈಚಾರಿಕ ನಿಲುವು ಮತ್ತು ಕಾವ್ಯದ ಪ್ರತಿಭೆ ನಮಗೆ ಅರ್ಥವಾಗುತ್ತದೆ.

ವೈಯಕ್ತಿಕವಾಗಿ ನಾನು ಕನ್ನಡದ ವಿದ್ಯಾರ್ಥಿ ಅಥವಾ ಉಪನ್ಯಾಸಕನಲ್ಲ, ಓದಿದ್ದು, ಅರ್ಥಶಾಸ್ತ್ರವಾದರೂ, ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಭಾರತೀಯ ಸಾಹಿತ್ಯವನ್ನು ಗಂಭೀರವಾಗಿ ಓದಿಕೊಂಡಿದ್ದೀನಿ, ನನ್ನ ದೃಷ್ಟಿಯಲ್ಲಿ ರಾಷ್ಟçಕವಿ ಎಂಬ ಬಿರುದು ಅಥವಾ ಸನ್ಮಾನಕ್ಕೆ ಅರ್ಥ ಮತ್ತು ಘನತೆಯನ್ನು ತಂದು ಕೊಟ್ಟರಲ್ಲಿ ಬಂಗಾಳದ ಮಹಾಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಕನ್ನಡದ ಕುವೆಂಪು ಮುಖ್ಯರಾದವರು. ತಮ್ಮ ನಡೆ, ನುಡಿ ಮತ್ತು ಬರಹದಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದೆ ಬದುಕಿದ ಕುವೆಂಪು ಅವರ ಜೀವನ ದೃಷ್ಟಿಕೋನವೇ ಒಂದು ಮಹಾಕಾವ್ಯ ಎಂದು ಹೇಳಬಹುದು. ಮಲೆನಾಡಿನ ದಟ್ಟ ಅರಣ್ಯದ ನಡುವೆ ಜನಿಸಿದ ಕುವೆಂಪು, ಶಿಕ್ಷಣಕ್ಕಾಗಿ ಮೈಸೂರಿಗೆ ಆಗಮಿಸಿ, ಮೈಸೂರು ನಗರವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಮೈಸೂರಿನಲ್ಲಿದ್ದುಕೊಂಡು, ಜೀವನಪೂರ್ತಿ ತಾವು ಹುಟ್ಟಿ ಬೆಳೆದ ಮಲೆನಾಡನ್ನು ಧ್ಯಾನಿಸಿದರು. ಈ ಕಾರಣದಿಂದಲೇ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ನಿರಂತರವಾಗಿ ನಾಲ್ಕೈದು ತಲೆಮಾರಿನ ಕವಿಗಳು ಮತ್ತು ಬರಹಗಾರರ ಮೇಲೆ ಪ್ರಭಾವ ಬೀರಿದರು. ಇಂತಹದ್ದೆ ಬೆಳೆವಣಿಗೆಯನ್ನು ನಾವು ಅಂದಿನ ಅವಿಭಜಿತ ಬಂಗಾಳ ಮತ್ತು ಈಗಿನ ಪಶ್ಚಿಮ ಬಂಗಾಳದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮೇಲೆ ಟ್ಯಾಗೋರ್ ಬೀರಿರುವ ಪ್ರಭಾವವನ್ನು ಕಾಣಬಹುದಾಗಿದೆ.

ಕುವೆಂಪು ಅವರು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದುವಾಗಲೇ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರ ಹಿಂದೂ ಧರ್ಮದ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅವರದು ಒಂದು ರೀತಿಯಲ್ಲಿ ದೈತ್ಯ ಪ್ರತಿಭೆ ಎಂದರೆ ತಪ್ಪಾಗಲಾರದು. ಕುವೆಂಪು ಸ್ವಯಂ ರೂಢಿಸಿಕೊಂಡ ವೈಚಾರಿಕ ಚಿಂತನೆಯು ಇಡೀ ಕನ್ನಡನಾಡನ್ನು ಹೊಸದಿಕ್ಕಿನತ್ತ ಆಲೋಚಿಸುವಂತೆ ಮತ್ತು ನೋಡುವಂತೆ ಮಾಡಿತು. ಇಂದಿಗೂ ಅನೇಕ ಮಂದಿ ಬರಹಗಾರರು, ಕುವೆಂಪು ಅವರನ್ನು ಬ್ರಾಹ್ಮಣರ ವಿರೋಧಿ ಎಂದು ಬಣ್ಣಿಸುತ್ತಾರೆ. ಅವರು ಬ್ರಾಹ್ಮಣ್ಯದ ವಿರೋಧಿಯಾಗಿದ್ದರೇ ಹೊರತು, ಬ್ರಾಹ್ಮಣರ ವಿರೋಧಿಯಾಗಿರಲಿಲ್ಲ. ಅವರಿಗೆ ಶಿಕ್ಷಣ ಕಲಿಸಿದ ಬಹುತೇಕ ಗುರುಗಳೆಲ್ಲರೂ ಬ್ರಾಹ್ಮಣರೆಂಬುದನ್ನು ನಾವು ಮರೆಯಬಾರದು. ಅವರ ಗುರುಗಳಾದ ಟಿ.ಎಸ್. ವೆಂಕಟಣ್ಣಯ್ಯನವರಿಗೆ ತಮ್ಮ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಅರ್ಪಿಸಿದ್ದಾರೆ. ಅದೇ ರೀತಿ ಮಾರ್ಗದರ್ಶನ ನೀಡಿದ ಬಿ.ಎಂ.ಶ್ರೀಕಂಠಯ್ಯ ಮತ್ತು ಎ.ಆರ್.ಕೃಷ್ಣಶಾಸ್ತಿçಯವರನ್ನು ಕೂಡಾ ಅವರು ಸದಾ ಸ್ಮರಿಸುತ್ತಿದ್ದರು. ಈ ಕಾರಣದಿಂದಾಗಿ ಕುವೆಂಪು ಅವರು ಕೇವಲ ಮಹಾನ್ ಕವಿಯಾಗಿರದೆ, ಇಪ್ಪತ್ತನೇ ಶತಮಾನದ ಮಹಾನ್ ಶೂದ್ರ ಪ್ರತಿಭೆ ಕೂಡಾ ಆಗಿದ್ದರು. ಮಲೆನಾಡಿನ ಒಕ್ಕಲಿಗರ ಕುಟುಂಬದಲ್ಲಿ ಜನಿಸಿದ ಅವರು, ಶೂದ್ರರಿಗೆ ಅಕ್ಷರ ನಿರಾಕರಿಸುತ್ತಿದ್ದ ಆ ಕಾಲಘಟ್ಟದಲ್ಲಿ ಅಕ್ಷರ ಲೋಕವನ್ನು ಬೆನ್ನತ್ತಿ, ಅಂತಿಮವಾಗಿ ಅಕ್ಷರ ಬ್ರಹ್ಮನಾಗಿ ರೂಪುಗೊಂಡರು.

ಕುವೆಂಪು ಅವರೊಳಗಿದ್ದ ಪ್ರಖರ ವೈಚಾರಿಕತೆಯು ಅವರ ಇಪ್ಪತ್ತೇಳನೇ ವಯಸ್ಸಿನಲ್ಲಿ ಸಾರ್ವಜನಿಕವಾಗಿ ಬಹಿರಂಗಗೊಂಡಿತು. 1931 ರಲ್ಲಿ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಯುವಜನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ “ ಆತ್ಮಶ್ರೀಗೆ ನಿರಂಕುಶಮತಿಗಳಾಗಿ’’ ಎಂಬ ಉಪನ್ಯಾಸವು ಆ ಕಾಲದ ಕನ್ನಡನಾಡಿನ ಸಂಪ್ರದಾಯಸ್ತ ಮನಸ್ಸುಗಳನ್ನು ಅಲುಗಾಡಿಸಿದರೆ, ವೈಚಾರಿಕ ಮನೋಭಾವದ ಮನಸ್ಸುಗಳಲ್ಲಿ ಚಿಂತನೆಯ ಹೊಸಭಾವವನ್ನು ಹುಟ್ಟುಹಾಕಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಹಾಗೂ ಓರ್ವ ಸರ್ಕಾರಿ ಉದ್ಯೋಗಿಯಾಗಿದ್ದುಕೊಂಡು ಸಮಾಜದ ವ್ಯವಸ್ಥೆ ಕುರಿತು ಕುವೆಂಪು ಆಡಿದ ಮಾತುಗಳು ಕೆಲವು ಬ್ರಾಹ್ಮಣ ಲೇಖಕರನ್ನು ಕೆರಳಿಸಿತು. ಆ ಕಾಲದ ಖ್ಯಾತ ಕಾದಂಬರಿಕಾರರಾಗಿದ್ದ ದೇವುಡು ನರಸಿಂಹಶಾಸ್ತಿçಯವರು ಈ ಕುರಿತು ಸಕಾರಕ್ಕೆ ದೂರು ಸಲ್ಲಿಸಿದಾಗ, ಮೈಸೂರು ವಿ.ವಿ.ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಟಿ.ಎಸ್. ವೆಂಕಣ್ಣಯ್ಯನವರಿಗೆ ಈ ಕುರಿತು ವರದಿ ಸಲ್ಲಿಸಲು ಅಂದಿನ ಸರ್ಕಾರ ಸೂಚಿಸಿತು. ಟಿ.ಎಸ್.ವೆಂಕಣ್ಣಯ್ಯನವರು ತಮ್ಮ ವರದಿಯಲ್ಲಿ “ ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪನ್ಯಾಸವನ್ನು ನಾನು ನೀಡಲಾರೆ’ ಎಂದು ಒಂದೇ ವ್ಯಾಕ್ಯದಲ್ಲಿ ಉತ್ತರ ಬರೆದಿದ್ದರು.

ಈ ಪ್ರಸಂಗವು ಓರ್ವ ಬ್ರಾಹ್ಮಣ ಕಾದಂಬರಿಕಾರ ಮತ್ತು ಮತ್ತೋರ್ವ ಬ್ರಾಹ್ಮಣ ಪ್ರಾಧ್ಯಾಪಕರ ವಿಭಿನ್ನ ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಿಂದ ಕುವೆಂಪುರವರು ವಿಚಲಿತರಾಗಲಿಲ್ಲ ಮತ್ತು ದೇವಡು ಬಗ್ಗೆ ಬೇಸರಗೊಳ್ಳಲಿಲ್ಲ. ನಂತರದ ವರ್ಷಗಳಲ್ಲಿ ಅಂದರೆ, 1956 ರಿಂದ 1960 ರವರೆಗೆ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ, ದೇವುಡು ನರಸಿಂಹಶಾಸ್ತಿçಯವ ಪುತ್ರ ಕನ್ನಡ ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದರು. ಕುವೆಂಪು ಅವರ ಶಿಷ್ಯರಾದ ಡಾ.ಕೆ.ಪ್ರಭುಶಂಕರ ಕೂಡಾ ಮೈಸೂರು ವಿ.ವಿ.ಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದರು ಜೊತೆಗೆ ದೇವುಡು ಅವರ ಪುತ್ರನಿಗಿಂತ ಹೆಚ್ಚು ಅಂಕ ಮತ್ತು ಅರ್ಹತೆಯನ್ನು ಪಡೆದಿದ್ದರು. ಕುವೆಂಪು ಉಪಕುಲಪತಿಗಳಾಗಿದ್ದ ಅವಧಿಯಲ್ಲಿ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರೊಬ್ಬರ ನಿವೃತ್ತಿಯಿಂದ ತೆರವಾದ ಹುದ್ದೆಗೆ, ಕುವೆಂಪು ತಮ್ಮ ಶಿಷ್ಯನನ್ನು ಕರೆದು, ‘ ಪ್ರಭುಶಂಕರ ನೀನು ಈ ವರ್ಷ ಹುದ್ದೆಗೆ ಅರ್ಜಿ ಸಲ್ಲಿಸಬೇಡ, ದೇವುಡು ಅವರ ಕುಟುಂಬ ಕಷ್ಟದಲ್ಲಿದೆ. ಅವರ ಪುತ್ರ ಮಾತ್ರ ಅರ್ಜಿ ಸಲ್ಲಿಸಲಿ, ಅವನನ್ನು ಈ ವರ್ಷ ಶಾಶ್ವತ ಹುದ್ದೆಗೆ ತೆಗೆದುಕೊಳ್ಳುತ್ತೇನೆ. ಮುಂದಿನ ವರ್ಷ ಖಾಲಿಯಾಗುವ ಹುದ್ದೆಗೆ ನಿನ್ನನ್ನು ನೇಮಕ ಮಾಡುತ್ತೇನೆ’’ ಎಂದು ಹೇಳಿದ್ದರು. ಇದು ಕುವೆಂಪು ಅವರ ವಿಶ್ವ ಮಾನವ ಪ್ರಜ್ಞೆಗೆ ಮತ್ತು ದ್ವೇಷವಿಲ್ಲದ ಅವರ ಮನೋಭಾವನೆಗೆ ಶ್ರೇಷ್ಠ ಉದಾಹರಣೆಯಾಗಿದೆ.

ಕುವೆಂಪು ಅವರು ಎಂದಿಗೂ ತಾವು ಜನಿಸಿದ ಜಾತಿ ಸಮುದಾಯದ ಜೊತೆ ಗುರುತಿಸಿಕೊಳ್ಳಲಿಲ್ಲ. ಅವರ ಸದಾ ಉಸಿರಾಡಿದ್ದು ಮತ್ತು ಧ್ಯಾನಿಸಿದ್ದು ವಿಶ್ವ ಮಾನವ ಪ್ರಜ್ಞೆಯ ಪರಿಕಲ್ಪನೆಯನ್ನು ಮಾತ್ರ. ಹಾಗಾಗಿ ಅವರ ಶಿಷ್ಯರಲ್ಲಿ ದೇ.ಜವರೇಗೌಡರನ್ನು ಹೊರತು ಪಡಿಸಿದರೆ, ಜಿ.ಎಸ್.ಶಿವರುದ್ರಪ್ಪ ಮತ್ತು ಎಲ್. ವೃಷಭೇಂದ್ರಸ್ವಾಮಿ ಹಾಗೂ ಡಾ. ಕೆ.ಪ್ರಭುಶಂಕರ ಇವರೆಲ್ಲರೂ ಒಕ್ಕಲಿಗೇತರ ಸಮುದಾಯದಿಂದ ಬಂದವರಾಗಿದ್ದರು. ಕುವೆಂಪು ಅವರಿಗೆ ಜಾತಿ, ಧರ್ಮ, ಗುಡಿ, ಗೋಪುರ ಅಥವಾ ಮಂದಿರಗಳಿಗಿಂತ ಹೆಚ್ಚಾಗಿ ತಮ್ಮ ಎದೆಯ ಧ್ವನಿಯೇ ಶಾಸ್ತç ಮತ್ತು ಧರ್ಮವಾಗಿತ್ತು. ಈ ಕಾರಣದಿಂದಲೇ ಅವರ ಕವಿತೆಯ ಈ ಕೆಳಗಿನ ಸಾಲುಗಳು ಕುವೆಂಪು ಎಂದರೆ ಏನು? ಮತ್ತು ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ನಮಗೆ ಅರಿವಾಗುತ್ತದೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

ಕನ್ನಡ ಸಾಹಿತ್ಯದಲ್ಲಿ ಯಾವ ಸಾಹಿತಿಗೂ ಇಲ್ಲದ ಸ್ವಾಭಿಮಾನ ಮತ್ತು ಆತ್ಮಸ್ಥರ್ಯವನ್ನು ಕುವೆಂಪುರವರು ಹೊಂದಿದ್ದರು. ಅವರೊಳಗಿನ ನೈತಿಕತೆ ಮತ್ತು ವೈಚಾರಿಕಪ್ರಜ್ಞೆ ಅವರ ಪಾಲಿಗೆ ರಕ್ಷಣೆಯ ಕವಚದಂತಿದ್ದವು. ತಮ್ಮ ಪುತ್ರ ಶ್ರೀಕಂಠದತ್ತ ಒಡೆಯರ್ಗೆ ಅರಮನೆಗೆ ಬಂದು ಪಾಠ ಹೇಳಿಕೊಡುವಂತೆ, ಮೈಸೂರು ಸಂಸ್ಥಾನದ ದೊರೆ ಜಯಚಾಮರಾಜೇಂದ್ರ ಒಡೆಯರ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸುವ ಆತ್ಮಸ್ಥೈರ್ಯ ಅವರಲ್ಲಿತ್ತು. 1974 ರ ಡಿಸಂಬರ್ 8 ರಂದು ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಕುವೆಂಪು ಮಾಡಿದ ಭಾಷಣವು ‘’ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಹೆಸರಿನಲ್ಲಿ ಚಾರಿತ್ರಿಕ ದಾಖಲೆಯಾಯಿತು. ಅವರು ಜನಿಸಿದ ಮಲೆನಾಡಿಗಿಂತ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಜನತೆ ಕುವೆಂಪು ಮತ್ತು ಅವರ ಚಿಂತನೆಗಳನ್ನು ನಿರಂತರವಾಗಿ ಆರಾಧಿಸಿದರು ಮತ್ತು ಅನುಸರಿಸಿದರು. ಆಧುನಿಕ ಮಂಡ್ಯ ಶಿಲ್ಪಿ ಎಂದು ಕರೆಯಲಾಗುವ ಕೆ.ವಿ.ಶಂಕರಗೌಡರು ಕುವೆಂಪು ಅವರ ಸಾಹಿತ್ಯದ ಅಭಿಮಾನಿಯಾಗಿದ್ದರು. 1967 ರ ಸಾಲಿನ ಜ್ಞಾನಪೀಠ ಪ್ರಶಸಿಯು 1968 ರಲ್ಲಿ ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಅಧಿಕೃತವಾಗಿ ಘೋಷಣೆಯಾದಾಗ, ಮಹಾಕಾವ್ಯ ಕೃತಿಯನ್ನು ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಆನೆಯ ಮೇಲಿಟ್ಟು ಮೆರವಣಿಗೆ ಮಾಡಿ, ಕರ್ನಾಟಕ ಸಂಘದಲ್ಲಿ ಮಹಾ ಕವಿಗೆ ಅದ್ದೂರಿ ಸನ್ಮಾನ ಮಾಡಲಾಯಿತು. ಮಂಡ್ಯ ಜನರ ಪ್ರೀತಿಗೆ ಮನಸೋತ ಕುವೆಂಪುರವರು “ ಹೂವಿನ ಹಾರ ಕೂಡ ಭಾರ ಎಂಬುದು ಈದಿನ ನನಗೆ ಇಲ್ಲಿ ಅರಿವಾಯಿತು’’ ಎಂದು ಭಾವನಾತ್ಮಕವಾಗಿ ನುಡಿದಿದ್ದರು.

ಕೆ.ವಿ.ಶಂಕರಗೌಡರ ನಂತರ ಮಂಡ್ಯ ಜೆಲ್ಲೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ ಡಾ.ಸುಜನಾ, ಮದ್ದೂ
ರು ತಾಲ್ಲೂಕಿನ ಡಾ.ಬೆಸಗರಹಳ್ಳಿ ರಾಮಣ್ಣ, ನಾಗಮಂಗಲ ತಾಲ್ಲೂಕಿನ ಪ್ರೊ.ಹೆಚ್.ಎಲ್. ಕೇಶವಮೂರ್ತಿ ಹಾಗೂ ಪಾಂಡವಪುರ ತಾಲ್ಲೂಕಿನ ಡಾ.ನರಹಳ್ಳಿ ಬಾಲಸುಬ್ರಮಣ್ಯ ಹೀಗೆ ಅನೇಕ ಚಿಂತಕರು ಕುವೆಂಪು ವೈಚಾರಿಕ ಚಿಂತನೆಗಳನ್ನು ನನ್ನ ತಲೆಮಾರಿನ ಎದೆಯೊಳಕ್ಕೆ ಬಿತ್ತುವುದನ್ನು ಕಾಯಕ ಮಾಡಿಕೊಂಡರು. ಇದರಿಂದಾಗಿ, ೧೯೮೦ ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆರಂಭವಾದ ರೈತ ಸಂಘದ ಚಳುವಳಿಯ ನೆಪದಲ್ಲಿ, ಇಡೀ ಜಿಲ್ಲೆಯಾದ್ಯಂತ ಕುವೆಂಪು ಮಂತ್ರ ಮಾಂಗಲ್ಯ ಪರಿಕಲ್ಪನೆಯ ಸರಳ ವಿವಾಹಕ್ಕೆ ನಾವೆಲ್ಲರೂ ಚಾಲನೆ ನೀಡಿದೆವು. ಇಡೀ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಸರಳ ವಿವಾಹಗಳು ನಡೆಸಿದ ಜಿಲ್ಲೆ ಎಂಬ ಕೀರ್ತಿಗೆ ಮಂಡ್ಯ ಜಿಲ್ಲೆ ಪಾತ್ರವಾಯಿತು. ನಾನು ಒಳಗೊಂಡಂತೆ, ನನ್ನ ತಲೆಮಾರಿನ ಬಹುತೇಕ ಮಿತ್ರರು ಕುವೆಂಪು ಮಂತ್ರ ಮಾಂಗಲ್ಯ ಪರಿಕಲ್ಪನೆಯ ಸರಳ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಟ್ಟೆವು. ಈ ಸರಳ ವಿವಾಹದ ಪರಂಪರೆಯು ಈಗ ಮೊದಲಿನಷ್ಟು ಇಲ್ಲದಿದ್ದರೂ, ನಿರಂತರವಾಗಿ ಮುಂದುವರಿದೆ.
1970 ರ ದಶಕದಿಂದ ಕುವೆಂಪು ಅವರ ಸಾಹಿತ್ಯದಲ್ಲಿ ದಲಿತರ ನೂವು, ಸಂಕಟಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲ ಎಂದು ಕೆಲವು ದಲಿತ ಲೇಖಕರು ಹೇಳುತ್ತಾ ಬಂದಿದ್ದಾರೆ. ಇಂತಹ ಆರೋಪ ಮಾಡುವ ಮುನ್ನ, ಕುವೆಂಪುರವರು ಬದುಕಿದ್ದ ಕಾಲಘಟ್ಟ ಮತ್ತು ಅವರ ಮಲೆನಾಡಿನ ಜೀವನದ ಹಿನ್ನೆಲೆಯನ್ನು ನಾವು ಗಮನಿಸಬೇಕು. ಅವರ ಮಹತ್ವದ ಕಾದಂಬರಿಯಾದ “ಮಲೆಗಳಲ್ಲಿ ಮದುಮಗಳು’’ ಕೃತಿಯ ಆರಂಭದಲ್ಲಿ ಹೇಳಿರುವ

ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ
ಎಂಬ ಮಾತುಗಳು ಕುವೆಂಪು ಭಾವನೆಯನ್ನು ಅನಾವರಣಗೊಳಿಸುತ್ತವೆ. ಅವರ ನೂರಾರು ಕವಿತೆಗಳಲ್ಲಿ ಜಾತ್ಯಾತೀತ ಹೂರಣವನ್ನು ಸಹ ನಾವು ನೋಡಬಹುದಾಗಿದೆ. ಅವರ ಕವಿತೆಯೊಂದರಲ್ಲಿ ದಾಖಲಾಗಿರುವ
ಪಂಚಮರ ಶಿಶುವೊಂದು
ಕೆರೆಯಲ್ಲಿ ಮುಳುಗುತಿರೆ,
ದಡದಲ್ಲಿ ಮೀಯುತ್ತಾ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ
ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ, ಶಾಸ್ತçಸಮ್ಮತವೇನು?

ಎಂಬ ಸಾಲುಗಳು, ಕುವೆಂಪು ಅವರ ಜೀವನದ ದೃಷ್ಟಿಕೋನಕ್ಕೆ ಕೈಗನ್ನಡಿಯಾಗಿದೆ.
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಪ್ರಾಂತ್ಯದ ಕೆಲವು ಹಿರಿಯ ವಿದ್ವಾಂಸರು, ಕುವೆಂಪು ಮತ್ತು ಬೇಂದ್ರೆಯವರನ್ನು ಎದುರು ಬದುರು ನಿಲ್ಲಿಸಿ, ದಶಕಗಳ ಕಾಲ ನಿರಂತರ ಹೊಗಳುತ್ತಾ, ತೆಗುಳುತ್ತಾ, ಮೈ ಮತ್ತು ಕೈಯನ್ನು ಪರಚಿಕೊಂಡರು. ದ,ರಾ.ಬೇಂದ್ರೆ ಕನ್ನಡದ ಶ್ರೇಷ್ಠ ಅನುಭಾವ ಕವಿಯಾದರೆ, ಕುವೆಂಪು ಶ್ರೇಷ್ಠ ವೈಚಾರಿಕ ಮನೋಭಾವದ ಕವಿ ಎಂಬ ವಾಸ್ತವವನ್ನು ಅವರೆಲ್ಲರೂ ಕಡೆಗಣಿಸಿದ್ದರು. ಬೇಂದ್ರೆಯವರೇ ಸ್ವತಃ ಕುವೆಂಪು ಅವರನ್ನು ‘ಜಗದ ಕವಿ, ಯುಗದ ಕವಿ’ ಎಂದು ಬಣ್ಣಿಸಿದ್ದನ್ನು ಮರೆತಿಬಿಟ್ಟರು. ಕನ್ನಡ ಕಾವ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಮತ್ತು ದ.ರಾ. ಬೇಂದ್ರೆ ಇಬ್ಬರೂ ಮೇರು ಪರ್ವತಗಳು ಎಂಬುದನ್ನು ನಾವು ಮರೆಯಬಾರದು. ಪರ್ವತಗಳು ಯಾವಾಗಲೂ ನೋಡುಗರ ಕಣ್ಣಿಗೆ ಕೇವಲ ಒಂದು ದಿಕ್ಕಿನಲ್ಲಿ ಅಥವಾ ಆಯಾಮದಲ್ಲಿ ಮಾತ್ರ ಕಾಣುತ್ತವೆ. ಪರ್ವತ ಅಥವಾ ಮೇರು ಶಿಖರÀಗಳನ್ನು ನಾವು ಹಲವು ಆಯಾಮಗಳಲ್ಲಿ ನೋಡಿದಾಗ ಮಾತ್ರ ಅವುಗಳ ಸ್ವರೂಪ ನಮಗೆ ಅರಿವಾಗಬಲ್ಲದು. ಕುವೆಂಪುರವರು ಅಂತಹ ಶಿಖರಗಳಲ್ಲಿ ಅಗ್ರಗಣ್ಯರು ಎಂಬುದನ್ನು ನಾವು ಮರೆಯಬಾರದು.

(ಮೈಸೂರು ಮಹಾಜನ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸ ಮತ್ತು ನವಂಬರ್ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಬಹುಸಂಸ್ಕೃತಿ ಅಂಕಣದಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ