ಈ ವರ್ಷದ ಅಂದರೆ 2026 ರ ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯು ಬಿಡುಗಡೆಯಾಗಿದ್ದು, ಒಟ್ಟು 122 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ನೂರಕ್ಕೆ ತಳ್ಳಲ್ಪಟ್ಟಿದೆ. ಶೋಚನೀಯ ಸಂಗತಿಯೆಂದರೆ, ಭಾರತವು ನೆರೆಯ ಪುಟ್ಟ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾ ದೇಶಕ್ಕಿಂತ ಕೆಳಗಿನ ಸ್ಥಾನದಲ್ಲಿದೆ. ದೇಶ ಭಕ್ತರಿಗೆ ಖುಷಿಯ ಸಂಗತಿ ಏನೆಂದರೆ, ಪಾಕಿಸ್ತಾನ 106 ನೇ ಸ್ಥಾನದಲ್ಲಿದ್ದು, ಆಘ್ಪಾನಿಸ್ತಾನವು 108 ರ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕಿಂತ ಮೇಲಿರುವುದು ಮೋದಿ ಭಕ್ತರಿಗೆ ಪಟಾಕಿ ಹೊಡೆಯಲು ಅವಕಾಶ ಕಲ್ಪಿಸಿದೆ.
ಭಾರತದ ಇತ್ತೀಚೆಗಿನ ಮಾಧ್ಯಮ ಕ್ಷೇತ್ರದ ಬೃಹಸ್ಪತಿಗಳು ಅಭಿವೃದ್ಧಿಯ ಕಲ್ಪನೆ ಕುರಿತಾಗಿ ಗಂಭಿರವಾಗಿ ಅಧ್ಯಯನ ಮಾಡುವುದನ್ನು ಕಲಿಯಬೇಕಾಗಿದೆ. ನೂರಾರು ಕಿಲೊಮೀಟರ್ ವೇಗದಲ್ಲಿ ವಾಹನಗಳು ಓಡುವುದಕ್ಕೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವುದು ಅಭಿವೃದ್ಧಿಯ ಪರಿಕಲ್ಪನೆಯಲ್ಲ. ಹೆದ್ದಾರಿಯ ನೆಪದಲ್ಲಿ ದೇಶದ ಲಕ್ಷಾಂತರ ಹಳ್ಳಿಗಳು ಮತ್ತು ರೈತರು ಭೂಮಿ ಮತ್ತು ನೆಮ್ಮದಿಯ ಬದುಕು ಕಳೆದುಕೊಂಡಿದ್ದಾರೆ. ಮಾನವ ಜೀವಿಯ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂಬುದು ಇಂದಿನ ಪತ್ರಕರ್ತರ ತಲೆಯೊಳಕ್ಕೆ ಹೋಗಬೇಕಿದೆ.
ಇದನ್ನು ಅರ್ಥಶಾಸ್ತ್ರದ ಭಾಷೆಯಲ್ಲಿ ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ಎಂದು ಕರೆಯಲಾಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ WelFare State ಎಂದು ಕರೆಯಲಾಗುವ ಈ ಪರಿಕ್ಪನೆಯಲ್ಲಿ ತನ್ನ ದೇಶದ ಎಲ್ಲಾ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಹಾಗೂ ಉತ್ತೇಜಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಒಂದು ಸರ್ಕಾರಿ ವ್ಯವಸ್ಥೆಯಾಗಿದೆ. ಸರಳವಾಗಿ ಹೇಳುವುದಾದರೆ, ಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಠ ಮಟ್ಟದ ಜೀವನೋಪಾಯ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ವ್ಯವಸ್ಥೆಯ ಮುಖ್ಯ ಕಲ್ಪನೆ ಮತ್ತು ಗುರಿಯಾಗಿದೆ.
ಕಲ್ಯಾಣ ರಾಷ್ಟ್ರದ ಪ್ರಮುಖ ಲಕ್ಷಣಗಳು ಮತ್ತು ಉದ್ದೇಶಗಳು ಈ ಕೆಳಗಿನಂತಿವೆ:
ಸಾಮಾಜಿಕ ಭದ್ರತೆ:- ವೃದ್ಧಾಪ್ಯ ವೇತನ, ನಿರುದ್ಯೋಗ ಭತ್ಯೆ, ಅಂಗವಿಕಲರಿಗೆ ಆರ್ಥಿಕ ನೆರವು ಮತ್ತು ವಿಧವಾ ವೇತನಗಳ ಮೂಲಕ ಸಮಾಜದ ದುರ್ಬಲ ವರ್ಗದವರಿಗೆ ಆಸರೆಯಾಗುವುದು.
: ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಮತ್ತು ಉಚಿತ ಅಥವಾ ಕಡಿಮೆ ವೆಚ್ಚದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು.
: ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಉದ್ಯೋಗ ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವುದು.
ಶ್ರೀಮಂತರಿಂದ ಪ್ರಗತಿಪರ ತೆರಿಗೆಯನ್ನು (Progressive Tax) ವಸೂಲಿ ಮಾಡಿ, ಆ ಹಣವನ್ನು ಬಡವರ ಕಲ್ಯಾಣ ಯೋಜನೆಗಳಿಗೆ ಬಳಸಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದು.
ಭಾರತದ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಈ ವಿಷಯದಲ್ಲಿ ಸಾಧನೆ ಮಾಡಿದ್ದೀವಿ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. 400 ಕಿಲೊಮೀಟರ್ ವೇಗದಲ್ಲಿ ರೈಲು ಓಡಿಸುವುದಕ್ಕೆ ರೈಲು ಮಾರ್ಗವನ್ನು ನಿರ್ಮಿಸಿ, ಮಾರ್ಗದ ಎರಡು ಬದಿ ತಂತಿ ಬೇಲಿ ಹಾಕಿ, ಗ್ರಾಮಗಳನ್ನು ವಿಭಜಿಸುವುದು ಮತ್ತು ಅರಣ್ಯ ಪ್ರದೇಶಗಳಲ್ಲಿ ವನ್ಯ ಜೀವಿಗಳ ಸುಗುಮ ಸಂಚಾರಕ್ಕೆ ಅಡ್ಡಿ ಪಡಿಸುವುದು ನಿಜವಾದ ಅಭಿವೃದ್ಧಿಯಲ್ಲ. ಮಂಗಳ ಗ್ರಹದಲ್ಲಿ ನೀರು ಇದೆಯಾ ಎಂಬುದನ್ನು ಪತ್ತೆ ಮಾಡಲು ಸಾವಿರಾರು ಕೋಟಿ ಖರ್ಚು ಮಾಡಿ ಉಪಗ್ರಹ ಮತ್ತು ರಾಕೇಟ್ ಹಾರಿಸುವುದು ಅಭಿವೃದ್ಧಿಯಲ್ಲ, ನಮ್ಮ ನೆಲದ ಹಳ್ಳಿಗಳ ಕೆರೆ ಕಟ್ಟೆ ಮತ್ತು ಬಾವಿಗಳಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಇದೆಯಾ? ಎಂಬುದರ ಕುರಿತು ಕ್ಷೇತ್ರ ಕಾರ್ಯ ಮಾಡುವುದನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತದೆ.
ತಿನ್ನುವ ಅನ್ನದ ಅಕ್ಕಿ ಮತ್ತು ಜೋಳದ ಬೆಲೆ ಗಗನಕ್ಕೇರಿದೆ. ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದರ ನಡುವೆ ಈ ದಿನ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ ಮತ್ತು ಶೇರು ಮಾರುಕಟ್ಟೆಯಲ್ಲಿ ಸೂಚ್ಯಂತ ಏರಿದೆ ಎಂದು ಸುದ್ದಿ ಪ್ರಕಟಿಸುವುದನ್ನು ಕಾಯಕ ಮಾಡಿಕೊಂಡಿರುವ ಮಾಧ್ಯಮ ಮುಠಾಳರು ಒಮ್ಮೆ ಕೊಳೆಗೇರಿಗಳಲ್ಲಿ ಬದುಕುತ್ತಿರುವ ಬಡವರ ಸ್ಥಿತಿ ಮತ್ತು ಗ್ರಾಮೀಣ ಪ್ರದೇಶದ ಜನರ ಸ್ಥಿಯನ್ನು ಗಮನಿಸಬೇಕಾಗಿದೆ. ಬಡವರು, ಈರುಳ್ಳಿ, ಟಮೋಟೋ, ತೊಗರಿ ಬೇಳೆ ಕೊಳ್ಳುವ ಸ್ಥಿತಿಯಲ್ಲಿ ಈಗ ಇಲ್ಲ. ಗಂಜಿಯ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಪತ್ರಿಕೋದ್ಯಮದ ಆಶಯ ಎಂದರೆ, ಉಳ್ಳವರ ಹೂಸನ್ನು ಪರಿಮಳ ಎಂದು ಬಣ್ಣಿಸುವುದಲ್ಲ, ಬಡವರ ಅಥವಾ ಇಲ್ಲದವರ ಕಥೆಯನ್ನು ಕೇಳುವ ಸೌಜನ್ಯವೂ ನಮ್ಮಲ್ಲಿ ಇರಬೇಕು.
ಇದು ಭಾರತದ ಸ್ಥಿತಿ ಮಾತ್ರವಲ್ಲ, ಹಸಿವಿನ ಸೂಚ್ಯಂಕದಲ್ಲಿ ಕೊನೆಯ ಸ್ಥಾನಗಳಲ್ಲಿರುವ ಎಲ್ಲಾ ರಾಷ್ಟ್ರಗಳ ಸ್ಥಿತಿ ಕೂಡಾ ಇದೇ ಆಗಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳು ಮತ್ತು ಆಫ್ರಿಕಾದ ಬಹುತೇಕ ರಾಷ್ಟ್ರಗಳ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ನೆರೆಯ ರಾಷ್ಟ್ರವಾದ ಪಾಕಿಸ್ತಾನವು ಇರಾನ್ ಬೆಂಬಲಿತ ಹೂಥಿ ಬಂಡುಕೋರರ ಹಾವಳಿ ವಿರುದ್ಧ ಹೋರಾಡಲು, ಕಳೆದ ತಿಂಗಳು ಸೌದಿ ಅರೆಬಿಯಾ ರಾಷ್ಟ್ರಕ್ಕೆ ನಾಲ್ಕು ವಿಮಾನ ಗಳಲ್ಲಿ ಶಸ್ತ್ರಾಸ್ತ್ರಗಳು ತುಂಬಿ ಕಳಿಸಿಕೊಟ್ಟಿತ್ತು.
ಭಯೋತ್ಪಾದನೆಯನ್ನು ಹುಟ್ಟು ಹಾಕುವುದನ್ನು ಕಾಯಕ ಮಾಡಿಕೊಂಡಿರುವ ಈ ದರಿದ್ರ ರಾಷ್ಟ್ರಕ್ಕೆ ನಾಲ್ಕು ವಿಮಾನಗಳಲ್ಲಿ ಕಳಿಸಿದ ಶಸ್ತ್ರಾಸ್ತ್ರಗಳ ಹಣದಲ್ಲಿ ತನ್ನ ದೇಶದ ಲ್ಲಿ ಹಸಿದವರ ಹೊಟ್ಟೆ ತುಂಬಿಸಬಹುದಿತ್ತು ಎಂಬುದರ ಕುರಿತಾಗಿ ಕನಿಷ್ಠ ಪ್ರಜ್ಞೆ ಇಲ್ಲ. ಆಫ್ರಿಕಾದ ನೈಜಿರಿಯಾ, ಸೂಡಾನ್ ಮುಂತಾದ ರಾಷ್ಟ್ರಗಳೆಲ್ಲವೂ ತಮ್ಮ ದೇಶದ ಬಹುತೇಕ ಹಣವನ್ನು ಅಲ್ಲಿನ ಸರ್ಕಾರಗಳು ಬಂಡುಕೋರರ ವಿರುದ್ಧ ಸೆಣಸಾಡಲು ವಿನಿಯೋಗಿಸಿ, ಅಲ್ಲಿನ ಮಕ್ಕಳನ್ನು ಮತ್ತು ಮಹಿಳೆಯರನ್ನು ಹಸಿವಿನ ದವಡೆಗೆ ನೂಕಿದ್ದಾರೆ.
ಇಂದು ಜಗತ್ತಿನಾದ್ಯಂತ, ಬಹುತೇಕ ಮಾಧ್ಯಮಗಳು ಆಳುವ ಪ್ರಭುತ್ವ ಅಥವಾ ಸರ್ಕಾರಗಳ ವೈಫಲ್ಯವನ್ನು ಸಾಮಾನ್ಯ ಜನತೆಗೆ ತಿಳಿಸುವ ಬದಲು, ಪುಂಗಿ ಊದುತ್ತಾ ಕುಳಿತಿರುವುದು ಇಂತಹ ಜಾಗತಿಕ ಅಸಮಾನತೆಗೆ ಕಾರಣವಾಗಿದೆ. ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯಿಂದಾಗಿ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗಿದ್ದರೆ, ಹಸಿವು, ಮತ್ತು ಅಪೌಷ್ಟಿಕತೆಯಿಂದಾಗಿ ಮಹಿಳೆಯರಲ್ಲಿ ಗರ್ಭಧಾರಣೆಯ ಶಕ್ತಿಯೂ ಕೂಡಾ ಕುಸಿದಿದೆ. ನಮ್ಮ ಮಾಧ್ಯಮಗಳು ಮತ್ತು ಪತ್ರಕರ್ತರು ಉಳ್ಳವರ ಜಗತ್ತನ್ನು ನೋಡುವ ಬದಲಾಗಿ, ಇಲ್ಲದವರ ಜಗತ್ತಿನ ಕಡೆ ನೋಡಬೇಕಿದೆ. ಇದು ಅನಿವಾರ್ಯ ಮಾತ್ರವಲ್ಲದೆ, ನೈತಿಕ ಕರ್ತವ್ಯ ಕೂಡಾ ಹೌದು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ