ಬುಧವಾರ, ಜೂನ್ 12, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಒಂದು

ಭಾರತದ ಚಿಪ್ಕೊ ಚಳವಳಿ  ಎಂದು  ಕರೆಯಲಾಗುವ ಅಪ್ಪಿಕೊ ಚಳವಳಿಗೆ ಹಲವಾರು ಆಯಾಮಗಳಿವೆ. ಹಿಮಾಲಯದ ತಪ್ಪಲಿನ ಅರಣ್ಯ ಮತ್ತು ಅಲ್ಲಿನ ಪರಿಸರ ಉಳಿಸಲು ಸ್ಥಳಿಯರು 1970 ರ ದಶಕದಲ್ಲಿ ಆರಂಭಿಸಿದ ಅಪ್ಪಿಕೊ ಚಳವಳಿ ವಿಶ್ವವ್ಯಾಪಿ ಗಮನ ಸೆಳದಿತ್ತು. ಜೊತೆಗೆ ಭಾರತದಲ್ಲಿ ಪರಿಸರ ಪ್ರಜ್ಙೆಗೆ ಅದು ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಈ ಚಳುವಳಿಯ ಇತಿಹಾಸ ಕುರಿತಂತೆ ಹಲವರು ಹಲವು ಬಗೆಯ ಇತಿಹಾಸವನ್ನು ವ್ಯಾಖ್ಯಾನಿಸುತ್ತಾ, ನಮ್ಮ ಮುಂದಿಡುತ್ತಾ, ಚಳವಳಿಯ ನಿಜವಾದ ಬೇರುಗಳನ್ನು ಮರೆ ಮಾಚುತ್ತಿದ್ದಾರೆ ಎನಿಸುತ್ತದೆ.
ಅಪ್ಪಿಕೊ ಚಳುವಳಿಯಲ್ಲಿ ಚಾಂಡಿ ಪ್ರಸಾದ್ ಭಟ್, ಸುಂದರ್ ಲಾಲ್ ಬಹುಗುಣ, ಧೂಮ್ ಸಿಂಗ್ ನೇಗಿ, ಘನಶ್ಯಾಮ್ ಶೈಲಾನಿ ಮುಖ್ಯ ಪಾತ್ರ ವಹಿಸಿದ್ದರು. ಇಡೀ ಹಿಮಾಲಯದ ತೆಹ್ರಿ ಮತ್ತು ಘರ್ ವಾಲ್  ಪ್ರಾಂತ್ಯದ ಸುಮಾರು ಹತ್ತು ಜಿಲ್ಲೆಗಳಲ್ಲಿ ನಡೆದ ಈ ಚಳವಳಿಗೆ ಬೇರೆ ಬೇರೆ ನಾಯಕರು ನೇತೃತ್ವ ವಹಿಸಿದ್ದರು. ಜಯಪ್ರಕಾಶ ನಾರಾಯಣ ರಿಂದ ಪ್ರೇರಿತರಾಗಿದ್ದ, ಚಾಂಡಿ ಪ್ರಸಾದ್ ಭಟ್, ಹಾಗೂ ಗಾಂಧಿ ಅನುಯಾಯಿಯಾಗಿದ್ದ ಸುಂದರ ಲಾಲ್ ಬಹುಗುಣ ಇವರ ನಡುವೆ ನಿಸರ್ಗದ ಕಾಳಜಿ ಕುರಿತಂತೆ ಭಿನ್ನ ಆಲೋಚನೆಗಳಿದ್ದರೂ  ಸಹ ಗುರಿ ಮಾತ್ರ ಒಂದೇ  ಆಗಿತ್ತು.
ಅಪ್ಪಿಕೊ ಚಳವಳಿಯ ನೇತಾರರು ಪುರುಷರೇ ಆದರೂ ಕೂಡ ಇಡೀ ಚಳವಳಿಗೆ ಭದ್ರ ಬುನಾದಿಯಾದವರು  ಹಿಮಾಲಯ ತಪ್ಪಲಿನ ತಾಯಂದಿರು ಎಂಬುದುನ್ನು ಮರೆಯಲಾಗದು. ಮುಷ್ಕರಕ್ಕೆ ಓಗೊಟ್ಟು ಮರಗಳನ್ನು ತಬ್ಬಿ ಹಿಡಿದು, ಕೊಡಲಿಗೆ, ಗರಗಸಕ್ಕೆ ತಮ್ಮ ದೇಹವನ್ನು ಒಡ್ಡಿದವರು ಮಹಿಳೆಯರು ಎಂಬುದನ್ನ  ಇತಿಹಾಸದ ಮುನ್ನೆಲೆಗೆ ತರುವಲ್ಲಿ ವಿಫಲವಾದ ಕಾರಣವನ್ನು ಹುಡುಕುತ್ತಾ ಹೋದರೆ ಕಾಣದ ಕೈಗಳ ಕೈವಾಡವಿರಬಹುದೆ? ಎಂಬ ಸಂಶಯ ಮೂಡುತ್ತದೆ..
ಭಾರತಕ್ಕೆ ಈ ಮಾದರಿಯ ಅಪ್ಪಿಕೊ ಚಳವಳಿ ಹೊಸತೇನಲ್ಲ. ಇದರ ಬೇರುಗಳು ನಮ್ಮನ್ನು ಮುನ್ನೂರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತವೆ. 17 ನೇ ಶತಮಾನದಲ್ಲಿ ರಾಜಸ್ಥಾನದ ಬಿಷ್ನೋಯ್ ಪಂಗಡಕ್ಕೆ ಸೇರಿದ ಜನಾಂಗವೊಂದು ಖೇಜರಿ ಮರಗಳನ್ನು ಉಳಿಸುವುದರ ಸಲುವಾಗಿ ಅಮೃತಾ ದೇವಿ ಎಂಬ ಮಹಿಳೆಯ ನೇತೃತ್ವದಲ್ಲಿ ಮುನ್ನೂರು ಮಹಿಳೆಯರು  ಮರಗಳನ್ನು ಅಪ್ಪಿಕೊಂಡು ಕೊಡಲಿಗೆ ಬಲಿಯಾದ ಘಟನೆ ಇತಿಹಾಸದಲ್ಲಿ ಧಾಖಲಾಗಿದೆ.
ಪರಿಸರ ಕುರಿತು ಮಾತನಾಡುವ, ಬರೆಯುವ ಮತ್ತು  ಓದುವ ನಾವೆಲ್ಲಾ ಗಮನಿಸಬೇಕಾದ ಬಹು ಮುಖ್ಯವಾದ ಸಂಗತಿಯೊಂದಿದೆ. ಅದೇನೆಂದರೆ, ಈ ದಿನ ಭೂಮಂಡಲದಲ್ಲಿ ನೀರು, ಗಾಳಿ, ಭೂಮಿ, ಮರ ಗಿಡ, ಜೀವ ಪ್ರಭೇಧಗಳು ಇನ್ನೂ ಜೀವಂತವಾಗಿದ್ದರೆ, ಅಥವಾ ಸುಸ್ಥಿತಿಯಲ್ಲಿ ಇದ್ದರೆ, ಅದರ ಹಿಂದೆ ಹೆಣ್ಣು ಸಂಕುಲದ ತಾಯ್ತನದ ಪ್ರೀತಿಯೊಂದು ಅಡಗಿದೆ ಎಂಬುದು. ಭೂಮಿಯನ್ನು ಹೆಣ್ಣಿಗೆ ಹೋಲಿಸಿ ಬಣ್ಣಿಸುವ ನಾವು, ಈ ನೆಲದ ಹೆಣ್ಣು ಮಕ್ಕಳು  ಭೂಮಿತಾಯಿಯ ವಾರಸುದಾರರು ಎಂಬುದನ್ನು ಮರೆತ್ತಿದ್ದೇವೆ. ನಾವು ಸೆವೆಸಿದ ಹೆಜ್ಜೆಯ ಗುರುತುಗಳನ್ನು ಒಮ್ಮೆ ಅವಲೋಕಿಸಿದರೆ, ಶತಮಾನಗಳುದ್ದಕ್ಕೂ ನೈಸರ್ಗಿಕ ಸಮತೋಲನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣ್ಣು ಸಂಕುಲ  ನಿರ್ವಹಿಸಿರುವ ಪಾತ್ರ ನಮ್ಮ ಅರಿವಿಗೆ ಬರುತ್ತದೆ. ಈ ಕಾರಣಕ್ಕಾಗಿ ನಮ್ಮ ಪೂರ್ವಿಕರು ಭೂಮಿಯನ್ನು, ನೀರನ್ನು ಮತ್ತು ಪಕೃತಿಯನ್ನು ಸ್ತ್ರೀಗೆ ಹೋಲಿಸಿದ್ದರು. ನಮ್ಮ ಪ್ರಾಚೀನ ಕೃಷಿ ಜಗತ್ತು ಹೆಣ್ಣಿನ ಮುಖಂಡತ್ವದಲ್ಲಿ ಸುರಕ್ಷಿತವಾಗಿತ್ತು. ಹಾಗಾಗಿ ಪರಿಸರದ ಸರಪಳಿಯ ಕೊಂಡಿಗಳು ಎನಿಸಿಕೊಂಡ ಎಲ್ಲಾ ವಿಧವಾದ ಬೀಜ ಸಂಪತ್ತು, ಸಸ್ಯ ಸಂಪತ್ತು, ಪಕ್ಷಿ ಮತ್ತು ಪ್ರಾಣಿಗಳ ಸಂಕುಲ ಅವಳ ಕೈಲಿ ಸುರಕ್ಷಿತವಾಗಿದ್ದವು.
ತೃತೀಯ ಜಗತ್ತಿನ ಅಂದರೆ, ನಮ್ಮ  ಪೂರ್ವ ಜಗತ್ತಿನ ರಾಷ್ಟ್ರಗಳ ಮಹಿಳೆಯರ ಇತಿಹಾಸವನ್ನು ಗಮನಿಸುವಾಗ ಒಂದು ಅಂಶ ನಮಗೆ ಮನದಟ್ಟಾಗುತ್ತದೆ. ಪಶ್ಚಿಮ ಜಗತ್ತು ಅವಿಷ್ಕರಿಸಿದ ವಿಜ್ಙಾನವಾಗಲಿ ಅಥವಾ ಅಭಿವೃದ್ಧಿ ಕುರಿತ ಚಿಂತನೆಗಳಾಗಲಿ ಸಮಗ್ರ ಮನುಕುಲದ ಒಳಿತನ್ನು ಒಳಗೊಂಡಿಲ್ಲ. ಅವು ಮಹಿಳೆಯರನ್ನು ಹೊರಗಿಟ್ಟು ರೂಪಿತವಾಗಿರುವ , ಚಾರಿತ್ರಿಕವಾದ ಮತ್ತು ಸೈದ್ಧಾಂತಿಕವಾದ ಪುರುಷ ನಿರ್ಮಿತ ಯೋಜನೆ ಮತ್ತು ಪರಿಕಲ್ಪನೆಗಳು ಮಾತ್ರ. ಆದರೆ,ಅವುಗಳು ಎಲ್ಲರನ್ನೂ ಒಳಗೊಂಡಿದೆ ಎಂದು ನಮ್ಮನ್ನು ನಂಬುವಂತೆ ಮಾಡಿವೆ ಅಷ್ಟೇ. ಇವುಗಳ ಹಿಂದೆ ಪರಿಸರದ ನಾಶ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳು ಅಡಗಿವೆ. 15 ಮತ್ತು 16 ನೇ ಶತಮಾನದಲ್ಲಿ ಯೋರೋಪಿನಲ್ಲಿ ತಲೆ ಎತ್ತಿದ ಪಿತೃ ಪ್ರಧಾನ ವ್ಯವಸ್ಥೆ ಮತ್ತು ಆಧುನಿಕ ವಿಜ್ಙಾನ, ಮತ್ತು ಇವುಗಳ ಜೊತೆ ಕೈಜೋಡಿಸಿದ ಕೈಗಾರಿಕಾ ಕ್ರಾಂತಿ ಇವೆಲ್ಲವೂ ಮಹಿಳೆಯನ್ನು ಪ್ರಕೃತಿಯಿಂದ ದೂರಮಾಡಿ ನಾಲ್ಕು ಗೋಡೆಯ ನಡುವೆ ಬಂಧಿಯನ್ನಾಗಿಸಿದವು.
ಇದರ ಪರಿಣಾಮವಾಗಿ ಇವೊತ್ತಿಗೂ ಏಷ್ಯಾದ ರಾಷ್ಟ್ರಗಳಲ್ಲಿ ಹೆಣ್ಣಿಗೆ ಕೋಳಿ ಮಾಂಸ, ಮೊಟ್ಟೆ, ಸಮುದ್ರದ ಸೀಗಡಿ, ಮೀನು ಮುಂತಾದ  ಪೌಷ್ಟಿಕ ಆಹಾರಗಳನ್ನು ಉಷ್ಣ ಪದಾರ್ಥಗಳು ಎಂಬ ನೆಪವೊಡ್ಡಿ ನಿರಾಕರಿಸಲಾಗುತ್ತಿದೆ. ಅತಿ ಹೆಚ್ಚು ಹಾಲು ಸೇವನೆಯಿಂದ ಬಂಜೆತನ ಬರುತ್ತದೆ ಎಂಬ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಹಾಲನ್ನು ನಿರಾಕರಿಸುವ ಸಮುದಾಯಗಳು ಇಂದಿಗೂ ಈ ಪೂರ್ವ ಜಗತ್ತಿನ ರಾಷ್ಟ್ರಗಳಲ್ಲಿ ಜೀವಂತವಾಗಿವೆ.
ಹಿಮಾಲಯದ ಚಿಪ್ಕೊ ಅಥವಾ ಅಪ್ಪಿಕೊ ಚಳವಳಿಗೆ ಮೂಲ ಪ್ರೇರಣೆ ಒದಗಿದ್ದು ಬಂದದ್ದು, ಸ್ತ್ರೀ ಸಮುದಾಯದಿಂದ ಎಂಬುದು ಗಮನಾರ್ಹ ಸಂಗತಿ. ಆದರೆ, ಆದರೆ, ಭಾರತದ ಪುರುಷ ಪ್ರಧಾನ ಸಮಾಜದಲ್ಲಿ ಅಪ್ಪಿಕೊ ಚಳವಳಿಯ ಇತಿಹಾಸದಲ್ಲಿ  ಮೂಲ ಕ್ರಾಂತಿಕಾರಿಗಳಾದ ಮಹಿಳೆಯರನ್ನು ನೈಪಥ್ಯಕ್ಕೆ ಸರಿಸಲಾಗಿದೆ ಎನಿಸುತ್ತದೆ.
1892 ರಲ್ಲಿ ಬ್ರಿಟೀಷ್ ಸೇನೆಯ ನೌಕಾಧಿಕಾರಿಯ ಮಗಳಾಗಿ ಬ್ರಿಟನ್ ನಲ್ಲಿ  ಜನಿಸಿದ ಮೆಡಲಿನ್ ಸ್ಲೇಡ್ ಎಂಬ ಹೆಣ್ಣು ಮಗಳು ಗಾಂಧಿ ಚಿಂತನೆಯಿಂದ ಪ್ರಭಾವಗೊಂಡು, ಭಾರತಕ್ಕೆ ಬಂದು ಮೀರಾ ಬೆಹನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡು, ಗಾಂಧೀಜಿಯವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಮೀರಾ ಬೆಹನ್ 1947 ರ ಭಾರತ ಸ್ವಾತಂತ್ರ್ಯಾ ನಂತರ ಋಷಿಕೇಶ ಮತ್ತು ಹರಿದ್ವಾರದ ನಡುವೆ ಪಶುಲೋಕ್ ಎಂಬ ಆಶ್ರಮವನ್ನು ತೆರೆದು ಗೋವುಗಳನ್ನು ಸಾಕುತ್ತಾ ಬದುಕುವುದಕ್ಕೆ ಆರಂಭಿಸಿದ್ದರು. ಗಾಂಧಿ ತಾವು ಸಾಯುವ ಹದಿನೈದು ದಿನಕ್ಕೆ ಮುನ್ನ ಅಂದರೆ, 1948 ರ ಜನವರಿ ಎರಡನೇ ವಾರದಲ್ಲಿ ಮೀರಾ ಬೆಹನ್ ಗೆ ಪತ್ರ ಬರೆದು ಆಶ್ರಮದ ನೆಪದಲ್ಲಿ ನಿನ್ನ ಬದುಕನ್ನು ಕಟ್ಟಿ ಹಾಕಿಕೊಳ್ಳಬೇಡ, ಭಾರತದ ಮಹಿಳೆಯರ ಸ್ಥಿತಿ ಗತಿಯ ಸುಧಾರಣೆ ಮತ್ತು ನೈಸರ್ಗಿಕ ರಕ್ಷಣೆಯಲ್ಲಿ ನೀನು ವಹಿಸಬೇಕಾದ ಪಾತ್ರ ಬಹಳಷ್ಟಿದೆ ಎಂದು ತಿಳಿಸಿದ್ದರು. ನಂತರ ಆಶ್ರಮ  ತೊರೆದು ಹಿಮಾಲಯದ ತಪ್ಪಲಿನ ಘರ್ ವಾಲ್ ಪ್ರದೇಶಕ್ಕೆ ಬಂದ ಮೀರಾ ಬೆಹನ್ ಅಲ್ಲಿನ ಮಹಿಳೆಯರ ಮತ್ತು ಪರಿಸರ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡರು.
ಮೊದಲಿಗೆ ಮೀರಾಬೆಹನ್ ಅಲ್ಲಿನ ಜನಪದ ಕಥೆಗಳು ಮತ್ತು ಹಾಡುಗಳತ್ತ ಗಮನ ಹರಿಸಿದರು. ಅಲ್ಲಿನ ಕಥೆಗಳಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಖಾರೀಕ್ ಮತ್ತು ಬಂಜ್ ಎಂಬ ಮರಗಳು ಅಲ್ಲಿನ ಪ್ರದೇಶದಲ್ಲಿ ಕಾಣಸಿಗುತ್ತಿರಲಿಲ್ಲ, ಕೇವಲ ಓಕ್ ಮರಗಳು ಮಾತ್ರ ಇದ್ದವು. ಜೊತೆಗೆ ಸಮೃದ್ಧ ಗೋವುಗಳ ಸಂಪತ್ತಾಗಲಿ, ಹಾಲು ಅಥವಾ ಮೊಸರಾಗಲಿ ಇರಲಿಲ್ಲ. ಹಿರಿಯ ಮಹಿಳೆಯರು ಹಾಡುತ್ತಿದ್ದ ಜಾನಪದ ಗೀತೆಯಲ್ಲಿನ ಪೂರ್ವ ಹಿಮಾಲಯದ ಇತಿಹಾಸಕ್ಕೂ , ವರ್ತಮಾನದ ಇತಿಹಾಸಕ್ಕೂ ಪಕೃತಿಯಲ್ಲಿ ಅಜಗಜಾಂತರ ವೆತ್ಯಾಸವಿತ್ತು. ಬ್ರಿಟೀಷರ ವಸಾಹತು ಶಾಹಿ ಆಳ್ವಿಕೆಯಲ್ಲಿ ಅಲ್ಲಿನ ಮರಗಳ ಸಂಪತ್ತು ಲೂಟಿಯಾಗಿತ್ತು. ಹಿಮಾಲಯದ ಶಿಖರಗಳು ಮರಗಳಿಲ್ಲದೆ ಬರಡಾಗಿದ್ದವು. ಈ ಅಂಶಗಳು ಮೀರಾಬೆಹನ್ ಮನದಟ್ಟಾಗುತ್ತಿದ್ದಂತೆ ಅಲ್ಲಿನ ಪರಿಸರ ರಕ್ಷಣೆಗೆ ಮಹಿಳೆಯರನ್ನು ಒಂದುಗೂಡಿಸಿ ಪ್ರಜ್ಙೆ ಮೂಡಿಸತೊಡಗಿದರು.
ಇದೇ ವೇಳೆಗೆ ಸ್ವಾತಂತ್ರ್ಯ ನಂತರ ಭಾರತ- ಚೀನಾ ಗಡಿ ಭಾಗಕ್ಕೆ ಭಾರತದ ಸೇನೆ ನೀಯೋಜಿತ ಗೊಂಡಿದ್ದರಿಂದ ಸೇನೆಯ ಚಲನ ವಲನಕ್ಕೆ  ಅನೂಕೂಲವಾಗುವಂತೆ 1950ರ ದಶಕದಲ್ಲಿ ಹಿಮಾಲಯದ  ಘರ್ ವಾಲ್ ಮತ್ತು ತೆಹ್ರಿ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ರಸ್ತೆಗಳು ಅಭಿವೃದ್ಧಿಗೊಂಡವು. ರಸ್ತೆ ಅಭಿವೃದ್ಧಿಯಾಗುತ್ತಿದ್ದಂತೆ ಭ್ರಷ್ಟ ಅರಣ್ಯಾಧಿಕಾರಿಗಳ ಜೊತೆ ಶಾಮೀಲಾದ ಮರಗಳ ಗುತ್ತಿಗೆದಾರರು ಈ ಪ್ರದೇಶಕ್ಕೆ  ಕಾಲಿಟ್ಟರು. ಅಲ್ಲಿಂದ ಮರಗಳ ಮಾರಣ ಹೋಮ ಅರಂಭವಾಗಿ ಅಪ್ಪಿಕೊ ಚಳವಳಿಗೆ ನಾಂದಿಯಾಡಿತು.
                                                                              (ಮುಂದುವರಿಯುವುದು)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ