ಮಂಗಳವಾರ, ಜೂನ್ 4, 2013

ಧಾರಾವಿ ( ಮುಂಬೈ ಕೊಳಗೇರಿ) ಎಂಬ ವಿಸ್ಮಯ- ಭಾಗ-1

ಏಷ್ಯಾದ ಅತಿದೊಡ್ಡ  ಕೊಳಚೇಗೇರಿಗಳಲ್ಲಿ ಎರಡನೆ ಸ್ಥಾನ ಪಡೆದಿರುವ ಮುಂಬೈನ ಧಾರಾವಿ ಎಂಬ ಕೊಳಗೇರಿ ಇವೊತ್ತಿಗೂ ಜಗತ್ತಿನ ಸಮಾಜ ವಿಜ್ಙಾನಿಗಳ ಪಾಲಿಗೆ ವಿಸ್ಮಯದ ಪ್ರಪಂಚವಾಗಿದೆ. ದೇಶವಿದೇಶಗಳಿಂದ ಬರುವ ಅರ್ಥಶಾಸ್ತ್ರಜ್ಙರಿಗೆ ಮತ್ತು ಸಮಾಜ ಶಾಸ್ತ್ರಜ್ಙರಿಗೆ ಧಾರಾವಿ ಅಧ್ಯಯನ ಕೇಂದ್ರವಾಗಿದೆ. ಹಾಗಾಗಿ ಈವರೆಗೆ  ಧಾರಾವಿ ಕುರಿತು ಐವತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳು ( ಬಿ.ಬಿ.ಸಿ., ಡಿಸ್ಕವರಿ ಛಾನಲ್ ಮತ್ತು ನ್ಯಾಷನಲ್ ಜಿಯಾಗ್ರಪಿಕ್ ಛಾನಲ್ ಗಳು ಸೇರಿ) ನಿರ್ಮಾಣಗೊಂಡಿವೆ. ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್, ಆಕ್ಷ್ ಪರ್ಡ್ ವಿ.ವಿ. ಮತ್ತು ಕೇಂಬ್ರಿಡ್ಜ್ ವಿ.ವಿ.ಗಳಿಂದ ಇಪ್ಪತ್ತಕ್ಕೂ ಹೆಚ್ಚು ಅಧ್ಯಯನ ಪ್ರಬಂಧಗಳು ಪ್ರಕಟವಾಗಿವೆ. ನಮ್ಮವರೇ ಆದ ಹಿಂದೂ ಇಂಗ್ಲೀಷ್ ದಿನಪತ್ರಿಕೆಯ ಮುಂಬೈನ ಸಂಪಾಕಿಯಾಗಿದ್ದ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮ ಅವರ “ ರಿ ಡಿಸ್ಕವರಿಂಗ್ ಧಾರಾವಿ “ ಎಂಬ ಕೃತಿ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ವಿವಿಧ ಭಾಗದ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ವಾಸಿಸುವ ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಬಡತನ ಮತ್ತು ಹಸಿವುಗಳ ಜೊತೆ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಅಲ್ಲಿನ ಜನತೆ ಕಟ್ಟಿಕೊಂಡಿರುವ ಘನತೆಯುಳ್ಳ ಸೃಜನಶೀಲತೆಯ ಬದುಕು ಆಶ್ಚರ್ಯ ಮೂಡಿಸುತ್ತದೆ.
ಧಾರಾವಿ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಅದು ಮುಂಬೈನಗರದ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ. ಇಂದಿನ ಮುಂಬೈನಗರದ ಸಿಯಾನ್, ಬಾಂದ್ರ, ಕುರ್ಲಾ, ಕಲಿನಾ ಎಂಬ ಪ್ರತಿಷ್ಟಿತ ಪ್ರದೇಶಗಳ ನಡುವೆ 175 ಹೆಕ್ಟೇರ್ ಪ್ರದೇಶದಲ್ಲಿ ಎದ್ದು ನಿಂತಿರುವ ಧಾರಾವಿಯಲ್ಲಿ ಸುಮಾರು 27 ಸಾವಿರ ಕುಟುಂಬಗಳು ವಾಸಿಸುತ್ತಿದ್ದು, 11 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ.
1534 ರಲ್ಲಿ ಪೋರ್ಚುಗೀಸರ ವಸಾಹತುಸಾಹಿ ಬಂದರು ಪಟ್ಟಣವಾಗಿದ್ದ ಮುಂಬೈನಗರದ ಮೂಲ ಹೆಸರು ಬೊಂಬಾಯಿ ಎಂದಾಗಿತ್ತು. ಅಲ್ಲಿನ ಸುಂದರ ಕಡಲ ತೀರ ಪ್ರದೇಶವನ್ನು ನೋಡಿದ ಪೋರ್ಚುಗೀಸರು ಇದಕ್ಕೆ ಬೊಂಬಾಯಿ ಎಂದು ಹೆಸರಿಟ್ಟರು . (ಪೋರ್ಚುಗಲ್ ಭಾಷೆಯಲ್ಲಿ ಬೊಂಬ್ ಎಂದರೆ ಸುಂದರ ಮತ್ತು ಬಾಹಿಯ ಎಂದರೆ   ಕಡಲತೀರ ಎಂದರ್ಥ) ಮುಂದೆ ಈ ಹಸರು ಬೊಂಬಾಯಿ. ನಂತರ ಬಾಂಬೆಯಾಗಿ ಆನಂತರ ಅಪ್ಪಟ ಮರಾಠಿ ಭಾಷೆಯಲ್ಲಿ ಮುಂಬೈ ಎಂದು ನಾಮಕರಣಗೊಂಡಿತು.

ಮುಂಬೈನ ಮೂಲನಿವಾಸಿಗಳು ಕೋಳಿಜನಾಂಗ ಅಂದರೆ, ಮೀನುಗಾರರು.  ಅಲ್ಲಿನ ಮಿಥಿ ನದಿಯ ಕಡಲ ತೀರದಲ್ಲಿ ಕೋಳಿ ಜನಾಂಗ ವಾಸವಾಗಿದ್ದ ಪ್ರದೇಶವನ್ನು ಕೋಳಿವಾಡ ಎಂದು ಕರೆಯಲಾಗುತ್ತಿತ್ತು. 1727 ರಲ್ಲಿ ಬೊಂಬಾಯಿ ಮತ್ತು ಮಹೀಂ ಎಂಬ ಎರಡು ಅವಳಿ ನಗರಗಳಿದ್ದವು. ಈ ಎರಡು ನಗರಗಳಿಗೆ ಹೊಂದಿಕೊಂಡಂತೆ ಎಂಟು ಹಳ್ಳಿಗಳು ಇದ್ದುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಅವುಗಳಲ್ಲಿ ಮಜಗಾಂ, ವರ್ಲಿ, ಪರೇಲ್, ವಡಾಲ, ನೈಗಮ್, ಮಾತುಂಗ, ಧಾರಾವಿ, ಕೊಲಬಾ ಹೆಸರಿನ ಗ್ರಾಮಗಳು ಈಗ ಮುಂಬೈ ಮಹಾನಗರದೊಳಗೆ ಲೀನವಾಗಿವೆ.
1668 ರಲ್ಲಿ ಇಂಗ್ಲೆಂಡಿನ ದೊರೆ ಎರಡನ ಕಿಂಗ್ ಜಾರ್ಜ್ ಪೋರ್ಚುಗಲ್ಲಿನ ರಾಜಕುಮಾರಿಯನ್ನು ವಿವಾಹವಾದಾಗ, ಪೋರ್ಚುಗಲ್ ದೊರೆ, ತನ್ನ ಅಳಿಯನಾದ ಬ್ರಿಟೀಷ್ ರಾಜಕುಮಾರನಿಗೆ  ಮುಂಬೈ ಬಂದರು ಪಟ್ಟಣವನ್ನು  ಬಳುವಳಿಯಾಗಿ ನೀಡಿದ. ಆನಂತರ ಈ ಬಂದರು ಪಟ್ಟಣ ಬ್ರಿಟೀಷರ ಈಸ್ಟ್ ಇಂಡಿಯ ಕಂಪನಿ ಮೂಲಕ ಅಭಿವೃದ್ಧಿ ಹೊಂದಿತು. 1854 ರವರೆಗೆ ಅಲ್ಲಿನ ಮೂಲ ನಿವಾಸಿಗಳಾದ ಕೋಲಿಜನಾಂಗ ( ಮೀನುಗಾರರು) ಮತ್ತು ಪಾರ್ಸಿ ಜನಾಂಗದ ವ್ಯಾಪರಸ್ಥರಿಂದ ಕೂಡಿದ್ದ ಮುಂಬೈ ನಗರಕ್ಕೆ 1854 ರಲ್ಲಿ ಆರಂಭವಾದ ಜವಳಿ ಮಿಲ್ ನಿಂದಾಗಿ , ಕಾರ್ಮಿಕರಾಗಿ ದುಡಿಯಲು ಹೊರಗಿನಿಂದ ಜನ ಬರತೊಡಗಿದರು. ಮುಂಬೈ ನಗರ ಬೆಳೆಯ ತೊಡಗಿತು. 1870 ರಲ್ಲಿ ಈಸ್ಟ್ ಇಂಡಿಯ ಕಂಪನಿಯು ಈ ನಗರವನ್ನು ಪ್ರಮುಖ ಬಂದರು ಹಾಗೂ ವಾಣಿಜ್ಯ ನಗರವನ್ನಾಗಿ  ಘೋಷಿಸಿತು.
 ನಗರಕ್ಕೆ ಪ್ರಪಥಮವಾಗಿ ಸೌರಾಷ್ಟ್ರ ( ಗುಜರಾತ್)ದಿಂದ ಬಡವರು 1877 ರಲ್ಲಿ ವಲಸೆ ಬಂದರು. ಬೀಕರ ಕ್ಷಾಮದಿಂದ ತತ್ತರಿಸಿದ ಸೌರಾಷ್ಟ್ರದ ಕುಂಬಾರರು ಮುಂಬೈ ನಗರಕ್ಕೆ ವಲಸೆ ಬಂದ ಮೊದಲ ಹಿಂದುಳಿದ ಜನಾಂಗದವಾಗಿದ್ದಾರೆ. ನಂತರ ತಮಿಳುನಾಡಿನ ಶಾಶ್ವತ ಬರಪೀಡಿತ ಜಿಲ್ಲೆಯಾದ ತಿರುನಾಲ್ವೇಲಿ ಜಿಲ್ಲೆಯಿಂದ ಆದಿದ್ರಾವಿಡರು ( ಹರಿಜನರು) ಹಾಗೂ ಉತ್ತರ ಪ್ರದೇಶದಿಂದ ಮುಸ್ಲಿಂರು, ಮುಂಬೈ ನಗರಕ್ಕೆ ಬಂದು ಚರ್ಮ ಹದಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡರು. ನಂತರ ಬಿಹಾರ, ಒರಿಸ್ಸಾ, ಕರ್ನಾಟಕ ರಾಜ್ಯಗಳ ಹಿಂದುಳಿದ ಜನಾಂಗ ಆಗಮಿಸಿ, ಸಫಾಯಿ ಕರ್ಮಾಚಾರಿಗಳಾಗಿ, ಪೌರಕಾರ್ಮಿಕರಾಗಿ ದುಡಿಯುತ್ತಾ ಮುಂಬೈ ನಗರಕ್ಕೆ ಜಮೆಯಾದರು. 1950 ರ ದಶಕದ ವರೆಗೆ ಪ್ರಶಾಂತವಾಗಿದ್ದ ಮುಂಬೈ ನಗರಕ್ಕೆ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಕ್ರಮ ಬಡಾವಣೆಗಳು ಮತ್ತು ಕೊಳೆಗೇರಿಗಳು ತಲೆ ಎತ್ತತೊಡಗಿದವು.
ಮಾತುಂಗಾ,  ಕಲಿನಾ, ಸಿಯಾನ್ , ಕುರ್ಲಾ ಪ್ರದೇಶಗಳಲ್ಲಿ ಇದ್ದ ವಲಸಿಗರನ್ನು ಮುಂಬೈ ನಗರ  ಸಭೆ ಒಕ್ಕಲೆಬ್ಬಿಸಿದ ಪರಿಣಾಮ ಎಲ್ಲರೂ ಕೋಳಿವಾಡಕ್ಕೆ ಬಂದು ವಾಸತೊಡಗಿದರು. ನಂತರ 1976 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಎ.ಕೆ.ಆಂಟನಿ ನೃತೃತ್ವದ ಸರ್ಕಾರ, ಮೇ 17 ರಂದು ಬಾಂಬೆ ಅಣು ರಿಯಾಕ್ಟರ್ ಸಂಸ್ಥೆಯ ಪ್ರದೇಶದ ಜನತಾ ಕಾಲೋನಿಯಲ್ಲಿ ವಾಸವಾಗಿದ್ದ 70 ಸಾವಿರ ಬಡಜನರನ್ನು 12 ಸಾವಿರ ಪೊಲೀಸರ ನೆರವಿನಿಂದ ತೆರವುಗೊಳಿಸ ಲಾಯಿತು. ಈ ನತದೃಷ್ಟರು ಸಹ ಅಂತಿಮವಾಗಿ ದಾರಿ ಕಾಣದೆ  ಧಾರಾವಿಯಲ್ಲಿ ನೆಲೆ  ನಿಂತರು. ಹೀಗೆ ಧರ್ಮ, ಜಾತಿಗಳ ಬೇಧ ಭಾವವಿಲ್ಲದೆ, ಎಲ್ಲರ ಸಂಕಟಗಳು ಒಂದೇ ಆದ ಪರಿಣಾಮ, ಅಲ್ಲಿನ ಜನತೆ ವಿವಿಧ ವೃತ್ತಿಯಲ್ಲಿ ತೊಡಗಿಕೊಂಡು ತಮ್ಮ ಪಾಲಿಗೆ ಇರುವ ಎಂಟು ಮತ್ತು ಹತ್ತು ಅಡಿ ಜಾಗದ ನಿವೇಶನವನ್ನು  ಸ್ವರ್ಗವನ್ನಾಗಿ ಮಾಡಿಕೊಂಡರು.

2001 ರ ಸಮೀಕ್ಷೆಯಂತೆ ಧಾರಾವಿ ಕೊಳಚೆ ಪ್ರದೇಶದಲ್ಲಿ 142 ಸಾರ್ವಜನಿಕ ಕೊಳಾಯಿ ಮತ್ತು 842 ಸಾರ್ವಜನಿಕ ಶೌಚಾಲಯಗಳಿದ್ದವು. 27 ಹಿಂದೂ ದೇವಾಲಯಗಳು, 11 ಮಸೀದಿಗಳು, 6 ಚರ್ಚುಗಳು ಧಾರಾವಿ ಕೊಳಗೇರಿಯಲ್ಲಿ ಇವೆ. 1913 ರಲ್ಲಿ ತಮಿಳರು ವಾರಾಣಾಸಿಯಿಂದ ತಂದು ಸ್ಥಾಪಿಸಿದ ಗಣೇಶನ ಮೂರ್ತಿ ಧಾರಾವಿಯ ಪ್ರಾಚೀನ ಮೂರ್ತಿಯಾಗಿದೆ. 1939 ರಲ್ಲಿ ಗಣಪತಿ ಮೂರ್ತಿಗೆ  ದೇವಾಲಯವನ್ನು ಸಹ ನಿರ್ಮಾಣ ಮಾಡಲಾಯಿತು. ನಂತರ ತಮಿಳರು ಆರಂಭಿಸಿದ ತಮಿಳು ಭಾಷೆಯ ಶಾಲೆ ಈಗ ಧಾರಾವಿಯಲ್ಲಿ ಅತಿದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳದಿದೆ. ಈ ಶಿಕ್ಷಣ ಸಮಸ೵ಥೆಯಲ್ಲಿ ಪದವಿ ವರೆಗೆ ತಮಿಳು ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿದೆ. 1980ರ ದಶಕದಲ್ಲಿ ಈ ಪ್ರದೇಶದ ದಲಿತರು ಆರಂಭಿಸಿದ  ಅಂಬೇಡ್ಕರ್ ಇಂಗ್ಲೀಷ್ ಶಾಲೆ ಕೂಡ ದಲಿತ ಹಾಗೂ ಹಿಂದುಳಿತ ಜಾತಿಯ ಮಕ್ಕಳಿಗೆ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಾ ಧಾರಾವಿಯ ಪ್ರತಿಷ್ಟಿತ ಸಂಸ್ಥೆಯಾಗಿ ತಲೆ ಎತ್ತಿ ನಿಂತಿದೆ.

ಧಾರಾವಿ ಕೊಳಗೇರಿ, ಜಗತ್ತಿನ ಎಲ್ಲಾ ಕೊಳಗೇರಿಗಳಿಗಿಂತ ಭಿನ್ನವಾಗಿ, ಕೇವಲ ಬಡವರ ವಾಸಸ್ಥಾನವಾಗದೆ ಗುಡಿ ಕೈಗಾರಿಕೆಯ ಕೇಂದ್ರ ಬಿಂದುವಾಗಿದೆ. ಈ ಪ್ರದೇಶದಲ್ಲಿ 80 ಕ್ಕೂ ಹೆಚ್ಚು ಚರ್ಮ ಹದ ಮಾಡುವ ಕೈಗಾರಿಕೆಗಳು,  ಚಿಪ್ಸ್, ಕಡ್ಲೆ ಮಿಠಾಯಿ, ಹಪ್ಪಳ, ಹುರಿದ ಕಾಳುಗಳು ಸೇರಿದಂತೆ 150 ವಿವಿಧ ಬಗೆಯ ತಿಂಡಿ ಪದಾರ್ಥಗಳನ್ನು ತಯಾರಿಸುವ 800 ಗುಡಿ ಕೈಗಾರಿಕೆಗಳು , 65 ಬೇಕರಿಗಳು, 9 ಸಾಬೂನು ತಯಾರಿಕಾ ಘಟಕಗಳು, 30 ಬನಿಯನ್, ಕಾಲುಚೀಲ ತಯಾರಿಸುವ ಘಟಕ, 110 ಸೂಟ್ ಕೇಸ್, ಪರ್ಸ್, ಮತ್ತು ಬೆಲ್ಟ್ ತಯಾರಿಸುವ ಕಂಪನಿಗಳು, 280 ವಿವಿಧ  ಮಡಕೆ ಮತ್ತು ಹೂಜಿಗಳನ್ನು  ತಯಾರಿಸುವ ಘಟಕಗಳು,  600 ಕ್ಕೂ ಹೆಚ್ಚು ಕಬ್ಬಿಣ, ಅಲ್ಯೂಮಿನಿಯಂ,ಪ್ಲಾಸ್ಟಿಕ್ ಮರುಬಳಕೆಯ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 13 ಸಾವಿರ ಕಾರ್ಮಿಕರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಲ್ಲಿನ ಬಹುತೇಕ ಘಟಕಗಳು ಕೇವಲ ಒಂದೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ಧಾರಾವಿ ಯ ವಾರ್ಷಿಕ ವಾಣಿಜ್ಯ ವಹಿವಾಟು ಮೂರು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದ್ದು, ಇಲ್ಲಿ ತಯಾರಾಗುವ ವಸ್ತುಗಳು ದುಬೈ, ಸೌದಿ ಅರೇಬಿಯಾ, ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್, ಅಮೇರಿಕಾ ಸೇರಿದಂತೆ 38 ರಾಷ್ಟ್ರಗಳಿಗೆ ರಫ್ತಾಗುತ್ತಿವೆ ( ಹೆಚ್ಚಿನವು ಚರ್ಮದಿಂದ ತಯಾರಿಸಿದ ವಸ್ತುಗಳು)


ಧಾರಾವಿ ಕೊಳಚೆಗೇರಿಯನ್ನು ಹಾಂಗ್ ಕಾಂಗ್ ನಲ್ಲಿದ್ದ ತಾಯ್ ಕಾಂಗ್ ಎಂಬ ಕೊಳಗೇರಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಂದರೆ, ನಿವಾಸಿಗಳು ಬಹುಮಡಿ ಕಟ್ಟಡಿಗಳಲ್ಲಿ ವಾಸಿಸುವಂತೆ ಮಾಡಲು ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಧಾರಾವಿ ಪುನರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿತು. ಆದರೆ ಯೊಜನೆಯ ವಿನ್ಯಾಸ ಕುರಿತಂತೆ ಅಪಸ್ವರಗಳು ಕೇಳಿಬಂದ ಹಿನ್ನಲೆಯಲ್ಲಿ 2010 ರಲ್ಲಿ ಪ್ರಖ್ಯಾತ ವಾಸ್ತುಶಿಲ್ಪಿ ಹಾಗು  ಅಮೇರಿಕಾದಲ್ಲಿ ಶಿಕ್ಷಣ ಪಡೆದ ಮುಕೇಶ್ ಮೆಹತಾ ಎಂಬ ತಜ್ಙರ ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ಸುಮಾರು 13 ಅಡಿ ಅಗಲ ಮತ್ತು 20 ಅಡಿ ಉದ್ದ ಇರುವ ಮನೆಗಳ ಬಹು ಮಹಡಿ ಕಟ್ಟಡಕ್ಕೆ ನಿರ್ಮಾಣಕ್ಕೆ ಅಲ್ಲಿನ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಶಾಲೆ, ಉದ್ಯಾನವನ, ಹೀಗೆ ಹಲವಾರು ಸಾರ್ವಜನಿಕ ಉಪಯೋಗಕ್ಕಾಗಿ ಜಾಗವನ್ನು ಮೀಸಲಾಗಿಟ್ಟರುವ, ಸುಮಾರು 15 ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಗೆ ಅಮೇರಿಕಾದ ಲೆಹ್ ಮನ್ ಬ್ರದರ್ಸ್, ಮತ್ತು ಸಿಂಗಾಪುರ ಹಾಗೂ ದುಬೈ ಖಾಸಾಗಿ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ.  ತಾವು ಹೂಡುವ ಬಂಡವಾಳಕ್ಕೆ ಪ್ರತಿಯಾಗಿ ತಮಗೆ ಇಂತಿಷ್ಟು ಜಾಗವನ್ನು ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಉಚಿತವಾಗಿ ನೀಡಬೇಕೆಂದು ಈ ಕಂಪನಿಗಳು ಬೇಡಿಕೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. 

                       ( ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ