ಶನಿವಾರ, ಜೂನ್ 8, 2013

ಧಾರಾವಿ ಎಂಬ (ಕೊಳಗೆರಿ) ವಿಸ್ಮಯ- ಭಾಗ-2


ಮುಂಬೈನ ಧಾರವಿ ಕೊಳಗೇರಿಯ ವಿಶಿಷ್ಟವೆಂದರೆ, ಬಹುಸಂಸ್ಕೃತಿಯ ಗೂಡಾದ ಈ ವಸತಿ ಪ್ರದೇಶದಲ್ಲಿ ಕಳೆದ ಅರ್ಧ ಶತಮಾನದ ಇತಿಹಾಸದಲ್ಲಿ ಯಾವುದೇ ಕೋಮುಗಲಭೆ ಏರ್ಪಟ್ಟಿಲ್ಲ. ಬಡವರಿಗೆ ಮತ್ತು ದುಡಿದು ತಿನ್ನುವ ಶ್ರಮಜೀವಿಗಳಿಗೆ ಧರ್ಮ ಮತ್ತು ಜಾತಿಗಿಂತ ಆಯಾ ದಿನದ ಬದುಕು ದೂಡುವುದು ಮುಖ್ಯವಾಗಿರುತ್ತದೆ. ತಾವು ಬದುಕುತ್ತಿರುವ ಎಂಟು- ಹತ್ತು ಅಡಿಯ ಸೂರಿನ ಎಡ ಬಲ ಯಾರು ವಾಸಿಸುತ್ತಿದ್ದಾರೆ? ಅವರ ಜಾತಿ ಅಥವಾ ಧರ್ಮ ಯಾವುದು? ಎಂಬ ಪ್ರಶ್ನೆಗಳಿಂತ ಅವರೂ ಸಹ ನಮ್ಮಂತೆ ಈ ಸಮಾಜದಿಂದ ತಿರಸ್ಕೃತಗೊಂಡವರು ಎಂಬ ಭಾವನೆ ಮತ್ತು ಪ್ರಜ್ಙೆ  ಕೊಳಗೇರಿಯ ವಾಸಿಗಳ ಎದೆಯಲ್ಲಿ ಸದಾ ಜೀವಂತವಾಗಿರುತ್ತದೆ.
1993 ರಲ್ಲಿ ಮುಂಬೈ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಪ್ರತಿಯಾಗಿ ಮುಂಬೈ ನಗರ ಹತ್ತಿ ಉರಿದಾಗ, ಧಾರಾವಿ ಮಾತ್ರ ತಣ್ಣಗೆ ಇತ್ತು. ಇಲ್ಲಿನ ಜನಗಳು ಪ್ರತಿ ಪ್ರದೇಶದಲ್ಲಿ ಸ್ವತಃ ಕಾವಲು ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು. ಇತ್ತೀಚೆಗಿನ ದಿನಗಳಲ್ಲಿ ಆಯಾ ಸಮುದಾಯದ ಜನತೆ ಒಟ್ಟಿಗೆ ವಾಸಿಸುವುದು ಕಂಡು ಬಂದರೂ ಸಹ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮೀಯರು ಪರಸ್ಪರ ಗೌರವ ಇಟ್ಟುಕೊಂಡು ಬಾಳುವುದು ಇಲ್ಲಿನ ವೈಶಿಷ್ಟವಾಗಿದೆ.
ಈ ಮೊದಲು ಧಾರಾವಿಯಲ್ಲಿದ್ದ ಚರ್ಮ ಹದಮಾಡುವ ಕೈಗಾರಿಕೆಗಳು ಇದೀಗ ಪಕ್ಕದ ಡಿಯನೊರ್ ಪ್ರದೇಶಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಘಟಕಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಮುಸ್ಲಿಂರು, ತಮಿಳುನಾಡಿನ ಹರಿಜನರು ಹಾಗೂ ಮಹಾರಾಷ್ಟ್ರದ ದಲಿತರು ಪ್ರತ್ಯೇಕವಾಗಿ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮುಸ್ಲಿಂರು ನಡೆಸುತ್ತಿರುವ ಘಟಕಗಳಲ್ಲಿ ಬಿಹಾರದ ಮುಸ್ಲಿಂರು ಜೊತೆಗೂಡಿದ್ದರೆ. ಹಿಂದುಗಳು ನಡೆಸುತ್ತಿರುವ ಚರ್ಮದ ಕೈಗಾರಿಕೆಗಳಲ್ಲಿ ತಮಿಳುನಾಡಿನ ಜನರು ಮಾತ್ರ ದುಡಿಯುತ್ತಿದ್ದಾರೆ. ಮಹಾರಾಷ್ಟ್ರದ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡ ಹಿನ್ನಲೆಯಲ್ಲಿ ಅವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ.

ಧಾರಾವಿಯಲ್ಲಿ ದಕ್ಷಿಣ ಭಾರತದಿಂದ ವಿಶೇಷವಾಗಿ ಕರ್ನಾಟಕದ ಗುಲ್ಬರ್ಗಾ, ಬಿಜಾಪುರ ಹಾಗೂ ತಮಿಳುನಾಡು ಮತ್ತು ಕೇರಳದ ಮಂದಿ  ಅತಿ ಹೆಚ್ಚುಮಂದಿ ವಾಸವಾಗಿದ್ದು, ಶಿಕ್ಷಣ, ಉದ್ಯೋಗದಲ್ಲಿ ಪ್ರಗತಿ ಸಾಧಿಸಿದ್ದಾರೆ. ತಮಿಳುನಾಡಿನ ಮತ್ತು ಕೇರಳದ ಹಲವಾರು ಯುವ ಪ್ರತಿಭಾವಂತರು ಇಂಜಿನಿಯರ್ ಗಳಾಗಿ, ಛಾರ್ಟಡ್ ಅಕೌಟೆಂಟ್ ಗಳಾಗಿ , ಪೋಲಿಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ. ತಮ್ಮ ಕುಟುಂಬವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ. ಅದೇ ರೀತಿ ಕರ್ನಾಟಕದ ಬಹುತೇಕ ಮಂದಿ ಮಹಾರಾಷ್ಟ್ದದ ಸಚಿವಾಲಯದಲ್ಲಿ. ಶಾಸಕರ ಭವನದಲ್ಲಿ, ರೈಲ್ವೆ ಇಲಾಖೆಯಲ್ಲಿ ನಾಲ್ಕನೆ ದರ್ಜೆಯ ನೌಕರರಾಗಿ ದುಡಿಯುತ್ತಿದ್ದಾರೆ,ಜೊತೆಗೆ  ಒಂದಿಷ್ಟು ಮಂದಿ ಮುಂಬೈ ಮಹಾನಗರ ಪಾಲಿಕೆಯ ಇಂಜಿನಿಯರ್ ಗಳಾಗಿ, ನೌಕರರಾಗಿ, ಪೊಲೀಸ್ ಕಾನ್ಸ್ ಟೇಬಲ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈ ನಗರದ ಬಹತೇಕ ಖಾಸಾಗಿ ಕಂಪನಿಗಳಲ್ಲಿ ಮಲೆಯಾಳಿಗಳು ನೌಕರರಾಗಿ ದುಡಿಯುತ್ತಿರುವುದು ವಿಶೇಷ. ಇನ್ನೂ ಬಿಹಾರಿಗಳು, ಟ್ಯಾಕ್ಸಿ ಚಾಲಕರಾಗಿ ಮುಂಬೈ ನಗರದ ಜೀವಾಳವಾಗಿದ್ದಾರೆ. ಮುವತ್ತು ವರ್ಷಗಳ ಹಿಂದೆ ಎಲ್ಲಾ ದಕ್ಷಿಣ ಭಾರತೀಯರನ್ನು ಮದ್ರಾಸಿಗಳು ಎಂದು ಕರೆಯುತ್ತಿದ್ದ ಸಂಪ್ರದಾಯ ಈಗ ಅಳಿಸಿಹೋಗಿದೆ.
ಮರಾಠಿ ಭಾಷೆ ಮತ್ತು ಸಂಸ್ಕೃತಿಯ ನೆಪದಲ್ಲಿ ಜನತೆಯನ್ನು ಎತ್ತಿಕಟ್ಟುವ ಶಿವಸೇನೆ ಕೂಡ ಧಾರಾವಿಯಲ್ಲಿ ದಕ್ಷಿಣ ಭಾರತೀಯರನ್ನೇ ನಂಬಿಕೊಂಡಿದೆ. ಶಿವಸೇನೆಯ ಪ್ರಮುಖ ಸ್ಥಾನಗಳಲ್ಲಿ ತಮಿಳುನಾಡಿನ ತೆವರ್ ಜನಾಂಗ ಮತ್ತು ಕರ್ನಾಟಕದ ಬಂಟ ಸಮುದಾಯದ ನಾಯಕರಿದ್ದಾರೆ. ಮುಂಬೈ ನಗರದ ಸಸ್ಯಹಾರಿ ಹೋಟೆಲ್ ಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅಧಿಪತ್ಯ ಸ್ಥಾಪಿಸಿರುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಕಳೆದ ಎರಡು ದಶಕಗಳಿಂದ  ಮಹಾರಾಷ್ಟ್ದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಮುಂಬೈ ನಗರ ಮತ್ತು ಧಾರಾವಿಯ ಇಂತಹ ವರ್ಣಮಯ ಮತ್ತು ವೈವಿಧ್ಯಮಯ ಬದುಕಿನಿಂದಾಗಿ ಚಿತ್ರರಂಗದ ಗಮನ ಸೆಳೆದಿವೆ. ಧಾರಾವಿಯ ಕೊಳಚೆಗೇರಿಯ ಬಡತನದ ಬದುಕು,ಮತ್ತು ಇಲ್ಲಿನ ಅಪರಾಧಗಳು, ಸಾಹಸಿ ವ್ಯಕ್ತಿಗಳ ಜೀವನವನ್ನು ಆಧಾರವಾಗಿಟ್ಟುಕೊಂಡು ಹಿಂದಿ. ತಮಿಳು, ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಚಿತ್ರಗಳು ನಿರ್ಮಾಣವಾಗಿವೆ. 1980ರ ದಶಕದಲ್ಲಿ ಮನ್ ಮೋಹನ್ ದೇಸಾಯಿ “ದಿವಾರ್ ನಿರ್ಮಿಸಿದ್ದರು. ನಂತರ  ವಿದು ವಿನೋದ್ ಚೋಪ್ರ ಅವರ ‘ಫರಿಂದಾ”, ಮೀರಾ ನಾಯರ್ ಅವರ “ಸಲಾಂ ಬಾಂಬೆ” ಮಣಿರತ್ನಂ ಅವರ “ನಾಯಗನ್,” ರಾಂಗೋಪಾಲ್ ವರ್ಮ ಅವರ ಗ್ಯಾಂಗ್ ಸ್ಟರ್, ಮಧುಬಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್, ಬ್ಲಾಕ್ ಫ್ರೈಡೆ,ಚಿತ್ರಗಳನ್ನು ಹೆಸರಿಸಬಹುದು. ಮತ್ತು ಆಸ್ಕರ್ ಪ್ರಶಸ್ತಿಗೆ ಪಾತ್ರವಾದ “ಸ್ಲಂ ಡಾಗ್ ಮಿಲಿನಿಯರ್” ಇಂಗ್ಲೀಷ್ ಚಿತ್ರದದಲ್ಲಿ ಧಾರವಿಯ ಮಕ್ಕಳು ನಟಿಸಿರುವುದು ವಿಶೇಷ.
ಇಂದು ಭಾರತದ ಸಾಹಸಿ ಉದ್ಯಮಿಗಳು ಎಂದರೆ, ಮುಕೇಶ್ ಅಂಬಾನಿ, ಇನ್ಫೋಸಿಸ್ ನ ನಾರಾಯಣ ಮೂರ್ತಿ, ವಿಫ್ರೊ ಸಂಸ್ಥೆಯ ಅಜೀಜ್ ಪ್ರೇಮ್ ಜೀ ಇವರುಎಂದು ಕಳೆದ ಒಂದು ದಶಕದಿಂದ ಡಂಗೂರ ಸಾರುತ್ತಾ, , ತುತ್ತೂರಿ ಊದುವ ನಮ್ಮ ದೇಶದ ಮಾಧ್ಯಮರಂಗದ ಬೃಹಸ್ಪತಿಗಳು ಒಮ್ಮೆ ಧಾರಾವಿಯ ಕೊಳಗೇರಿಯತ್ತ ಕಣ್ಣು ಹಾಯಿಸಿ, ತಮ್ಮ ಬುದ್ಧಿಮತ್ತೆಯನ್ನು ದುರಸ್ತಿ ಮಾಡಿಕೊಳ್ಳುವ ಅವಶ್ಯಕತೆ ಇದೆ. 
ಹಿಂದೂಸ್ಥಾನ್ ಲಿವರ್ ಲಿಮಿಟೆಡ್ ಕಂಪನಿಯಲ್ಲಿ ರಿನ್ ಡಿಟೆರ್ಜೆಂಟ್ ಬಾರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಇಂದು ಧಾರಾವಿಯಲ್ಲಿ ದಿನವೊಂದಕ್ಕೆ ಎರಡು ಟನ್ ಸಾಬೂನು ಉತ್ಪಾದಿಸುತ್ತಿದ್ದಾನೆ, 150 ಮಂದಿ ಕಾರ್ಮಿಕರು ಈತನ ಬಳಿ ದುಡಿಯುತ್ತಿದ್ದಾರೆ. ಹಿಂದೆ ಧಾರಾವಿಯಲ್ಲಿ ತಮಿಳುನಾಡಿನ ವರದನಾಯ್ಕರ್ ಬಳಿ ಕಳ್ಳಬಟ್ಟಿ ಸಾರಾಯಿ ಸಾಗಾಣೆ ಮಾಡುತ್ತಿದ್ದ ತಮಿಳು ಯುವಕರೆಲ್ಲಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಜಿ ಮಸ್ತಾನ್ ಎಂಬ ಕುಖ್ಯಾತ ಕಳ್ಳಸಾಗಾಣಿಕೆದಾರನ ಬಳಿ ಇದ್ದ ಮುಸ್ಲಿಂಮರು ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೆ ಪೈಪೋಟಿ ನೀಡಿದ್ದಾರೆ. ತಾವು ಬೆಳೆಯವ ಜೊತೆಗೆ ತಮ್ಮವರನ್ನು ಬೆಳಸುವ ಉಧಾರ ಮನೋಭಾವ ಧಾರಾವಿಯ ಈ ಅನಾಮಿಕ ಉದ್ಯಮಿಗಳಲ್ಲಿದೆ.
ಕಳೆದ ಇಪ್ಪಟೆಂಟು ವರ್ಷಗಳಿಂದ ನನಗೆ ಪರಿಚಿತನಾಗಿರುವ ತಮಿಳುನಾಡಿನ ತಿರುನ್ವಾನೇಲಿ ಜಿಲ್ಲೆಯ ರಾಜು ಎಂಬಾತ ಇಂದು ಮುಂಬೈನಗರದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಬಹುತೇಕ ಪತ್ರಿಕೆಗಳ ವಿತರಕನಾಗಿದ್ದಾನೆ.  ಮಾತುಂಗ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಗಣಪತಿ ದೇವಸ್ಥಾನದ ಹಿಂದೆ ಇರುವ ಈತನ ಮನೆಯಲ್ಲಿ ಸುಮಾರು 45 ಮಂದಿ ತಮಿಳು ಯುವಕರು ವಾಸವಾಗಿದ್ದಾರೆ.ಇವರಲ್ಲಿ ಐದು ಮಂದಿ ಷಣ್ಮುಗಾ ಹಾಲ್ ಗೆ ಹೊಂದಿಕೊಂಡಿರುವ ಪತ್ರಿಕೆಯ ಅಂಗಡಿಯಲ್ಲಿ ದುಡಿಯಿತ್ತಿದ್ದಾರೆ. ಹತ್ತು ಮಂದಿ ಪ್ರತಿದಿನ ಬೆಳಿಗ್ಗೆ ಎದ್ದು ರೈಲ್ವೆ ಅಥವಾ ಲಾರಿ ಪಾರ್ಸಲ್ ಕಛೇರಿಗೆ ಹೋಗಿ ಪತ್ರಿಕೆಗಳ ಬಂಡಲ್ ಗಳನ್ನು ತರುತ್ತಾರೆ. ಇಪ್ಪತ್ತು ಮಂದಿ ಪತ್ರಿಕೆಗಳನ್ನು ವಿತರಿಸಲು ಮುಂಬೈ ನಗರದ ವಿವಿಧ ಪ್ರದೇಶಕ್ಕೆ ತೆರಳುತ್ತಾರೆ. ಉಳಿದವರು ಲೆಕ್ಕ ಪತ್ರ ಗಮನಿಸುವುದು, ಮಾರಾಟವಾಗದೆ ಉಳಿದ ಪತ್ರಿಕೆಗಳನ್ನು ಮರಳಿ ಪತ್ರಿಕೆ ಕಛೇರಿಗಳಿಗೆ ಕಳಿಸುವ ಕೆಲಸ ಮಾಡುತ್ತಾರೆ. ಅಕ್ಷರ ಜ್ಙಾನವಿಲ್ಲದ ರಾಜುವಿನ ಪ್ರತಿದಿನದ ವ್ಯವಹಾರ ಒಂದೂವರೆ ಲಕ್ಷರೂಪಾಯಿಗಳು. ಎಲ್ಲವನ್ನೂ ಹುಡುಗರು ನಿಭಾಯಿಸುತ್ತಾರೆ. ಎಂಟತ್ತು ವರ್ಷ ರಾಜು ಬಳಿ ದುಡಿದ ಹುಡುಗರು ಇದೀಗ ಮುಂಬೈ ನಗರಗಳಲ್ಲಿ ತಮ್ಮದೆ ಸ್ವಂತ ಅಂಗಡಿ, ಚಹಾ ಹೋಟೇಲ್ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಇವೊತ್ತಿಗೂ ರಾಜು ತಂದೆ, ತಾಯಿ,  ಎಲ್ಲವೂ ಆಗಿದ್ದಾನೆ. ಪ್ರತಿವರ್ಷ ಊರಿಗೆ ಹೋದಾಗಲೆಲ್ಲಾ ಐದಾರು ಮಂದಿಯನ್ನು ಮುಂಬೈಗೆ ತನ್ನ ಜೊತೆಯಲ್ಲಿ ಕರೆದು ಕೊಂಡು ಬರುವುದು ರಾಜುವಿನ ವಾಡಿಕೆ.





ಐವತ್ತು ವರ್ಷ ಹಿಂದೆ ತನ್ನ ಒಂಬತ್ತನೆ ವಯಸ್ಸಿನಲ್ಲಿ ರೈಲು ಹತ್ತಿ ಮಾತುಂಗ ನಿಲ್ದಾಣಕ್ಕೆ ಬಂದು ಬಿದ್ದ ಯಾವ ಭಾಷೆಯನ್ನೂ ಅರಿಯದ ತಮಿಳು ಬಾಲಕನಿಗೆ ಅಲ್ಲಿನ ರೈಲ್ವೆ ಕೂಲಿಗಳು ಊಟ ನೀಡಿ ಸಾಕಿದ್ದರು. ನಂತರದ ದಿನಗಳಲ್ಲಿ ನಿಧಾನವಾಗಿ ಚಹಾ ಮಾರುತ್ತಾ, ಪತ್ರಿಕೆಗಳನ್ನು ಮಾರುತ್ತಾ ಜೀವನ ನಡೆಸಿ ಬೆಳದ ಬಾಲಕ ರಾಜು ಈದಿನ ಮಾತುಂಗದಲ್ಲಿ ಪ್ರಮುಖ ತಮಿಳು ಉದ್ಯಮಿಗಳಲ್ಲಿ ಒಬ್ಬ. ಇವೊತ್ತಿಗೂ ತನಗೆ ಆ ದಿನಗಳಲ್ಲಿ ಚಹಾ ಮತ್ತು ಬನ್ ಕೊಟ್ಟ ರೈಲ್ವೆ ಕೂಲಿಗಾರರನ್ನು ಮರೆತಿಲ್ಲ. ಅದೇರೀತಿ ಚಹಾ ಮತ್ತು ಪತ್ರಿಕೆ ಮಾರಲು ಅವಕಾಶ ನೀಡಿದ ರೈಲ್ವೆ ಪ್ಲಾಟ್ ಪಾರ್ಮಿನ ಚಹಾ ಅಂಗಡಿ ಮಾಲಿಕರನ್ನು ಸಹ ಮರೆತಿಲ್ಲ. ಅವರ ಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡಿ ಋಣ ತೀರಿಸುತ್ತಿದ್ದಾನೆ. ನಾನು ಬೇಟಿಯಾದಾಗಲೆಲ್ಲಾ ಮಾತುಂಗದ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು  ತಾನು ಮಲಗುತ್ತಿದ್ದ ಜಾಗ,, ಊಟ  ಕೊಟ್ಟು ಬೆಳಸಿದ ವೃದ್ದರಾದ ಕೂಲಿಗಳನ್ನು ತೋರಿಸಿ ಕಣ್ಣಿರು ಹಾಕುತ್ತಾನೆ.
ಬಡತನ ಮತ್ತು ಹಸಿವು ಮನುಕುಲಕ್ಕೆ ಶಾಪ ನಿಜ. ಆದರೆ ಇವುಗಳು ಮನುಷ್ಯನಿಗೆ ಮಾನವೀಯತೆಯನ್ನು ಮತ್ತು ಅಂತಃಕರಣವನ್ನು ತಂದುಕೊಡುವುದರ ಮೂಲಕ ಬದುಕಿಗೆ ಘನತೆಯನ್ನು ಹೆಚ್ಚಿಸುತ್ತಿವೆ ಎಂಬುದನ್ನು ಮರೆಯಲಾಗದು.ಈ ಕಾರಣಕ್ಕಾಗಿ   ಕೊಳಗೆರಿಗಳಲ್ಲಿ ವಾಸಿಸುವವರ ಕುರಿತಂತೆ ನಮ್ಮ ಮನೋಭಾವ ಬದಲಾಗಬೇಕಿದೆ. ಅಲ್ಲಿ ನಾವು ಕಾಣಲಾಗದ ಇನ್ನೊಂದು ಜಗತ್ತು ಕೂಡ ಇದೆ ಎಂಬುದನ್ನು ಸಹ ನಾವು ಅರಿಯ ಬೇಕಿದೆ.
                                           ( ಮುಗಿಯಿತು)
(ಕಳೆದ ಲೇಖನದಲ್ಲಿ ಮುಂಬೈನ ಜನತಾ ಕಾಲೋನಿಯ 70 ಸಾವಿರ ಬಡವರನ್ನು ಒಕ್ಕಲೆಬ್ಬಸಿದ್ದ ಎ.ಕೆ ಆಂಟನಿ ಎಂದು ಬರೆಯಲಾಗಿತ್ತು. ಅದು ಅಂತುಳೆ ಎಂದಾಗಬೇಕಿತ್ತು. ಆ ವೇಳೆಯಲ್ಲಿ ಅವರು ಮಹಾರಾಷ್ಟ್ದ ಗೃಹ ಸಚಿವರಾಗಿದ್ದರು)

1 ಕಾಮೆಂಟ್‌:

  1. ಮಾನ್ಯರೇ, ಇದು ಒಳ್ಳೆಯ ಲೇಖನ. ಭಾರತೀಯರು ಯಾವ ಭಾಷೆಯವರಾದರೇನು ಮಾನವೀಯತೆ ತುಂಬಿತುಳುಕುತ್ತದೆ. ತಮ್ಮ ಬಳಿ ಇಲ್ಲದಿದ್ದಾಗ, ತಾವಿರುವಲ್ಲಿಯೇ ಆಸರೆ ನೀಡಿ, ಅನ್ನ ನೀರು ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿ ಬದುಕಿಗೆ ದಾರಿ ತೋರಿಸುವ ಕೊಳಚೆ ನಿವಾಸಿಗಳು. ಕೊನೆಗೆ ಅವರಿಂದ ಸಹಾಯ ಪಡೆದವರು ಒಂದಲ್ಲ ಒಂದು ರೀತಿಯ ಋಣ ತೀರಿಸುವ ಕೃತಜ್ನತಾ ಭಾವ. ಸ್ಮರಣೀಯ. ಕೊಳಚೆ ನಿವಾಸಿಗಳಿಗೆ ಸಹಾಯ ಹಸ್ತ ಚಾಚಲು ಪ್ರಪಂಚದ ಹಿರಿಯ ದೇಶಗಳು ಮನಸ್ಸು ಮಾಡಿದರೆ, ಅದಕ್ಕೂ ಕಲ್ಲು ಹಾಕುವ ಕುತಂತ್ರಿಗಳಿದ್ದಾರೆಂಬುದು ಇದರಿಂದ ಅರ್ಥವಾಗುತ್ತದೆ. ಅಲ್ಲವೇ? ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ