ಶನಿವಾರ, ಆಗಸ್ಟ್ 8, 2026

ಡಾ. ಮನಮೋಹನ್ ಸಿಂಗ್ ನೆನಪುಗಳು

 

 


ಭಾರತದ ಪ್ರಧಾನಿ ಹುದ್ದೆಯ ಕುರಿತಾಗಿ, ಅಸಹ್ಯ ಹಾಗೂ ಜಿಗುಪ್ಸೆ ಮೂಡಿರುವ ದಿನಗಳಲ್ಲಿ ಪದೇ ಪದೇ ನೆನಪಾಗುವ ವ್ಯಕ್ತಿಗಳಲ್ಲಿ ನೆಹರು, ಶಾಸ್ತ್ರಿ ಮತ್ತು ಮನಮೋಹನ್ ಸಿಂಗ್ ಎದ್ದು ಕಾಣುವ ಹೆಸರುಗಳು. ಓರ್ವ ಅರ್ಥಶಾಸ್ತç ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ನನ್ನ ಮೇಲೆ ಪ್ರಭಾವ ಬೀರಿದ ಅರ್ಥಶಾಸ್ತçಜ್ಞರಲ್ಲಿ ಅಮಾರ್ತ್ಯ ಸೇನ್, ಮಹಮ್ಮದ್ ಯೂನಸ್, ಜೋಸೆಪ್ ಸ್ಟಿಗ್ಲಿಟ್ ಹಾಗೂ ಮನಮೋಹನ ಸಿಂಗ್ ಮುಖ್ಯರಾದವರು.

ಕಡು ಬೂದು ಬಣ್ಣದ ಗಡ್ಡ, ನೀಲಿ ಪೇಟ ಮತ್ತು ಶ್ವೇತವರ್ಣದ ಶರ್ಟ್ ಧರಿಸುವ ಹಾಗೂ  ಕನ್ನಡಕ ಧರಿಸಿ, ಸದಾ ಜೇಬಿನಲ್ಲಿ ಪೆನ್ನು ಇರುವ ಭಾರತೀಯ ವ್ಯಕ್ತಿ ಎಂದರೆ, ಅವರು ಭಾರತದ ಅರ್ಥಶಾಸ್ತçಜ್ಞ  ಡಾ.ಮನಮೋಹನ್ ಸಿಂಗ್ ಎಂದು ಇಡೀ ಜಗತ್ತು ಸುಲಭವಾಗಿ ಗುರುತಿಸುತ್ತಿತ್ತು.  ಇಡೀ ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ  ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ನಾಯಕ ಎಂದು  ಪ್ರಸಿದ್ಧರಾಗಿದ್ದ ಭಾರತದ ಮಾಜಿ  ಪ್ರಧಾನಿ ಡಾ ಮನಮೋಹನ್  ಸಿಂಗ್  ಅವರು ಇಪ್ಪತ್ತನೇಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತೊಂದನೆಯ ಶತಮಾನದ ಆದಿ ಭಾಗದಲ್ಲಿ ಜಗತ್ತಿನಿಂದ ಶ್ರೇಷ್ಠ ಅರ್ಥಶಾಸ್ತçಜ್ಞ ಎಂದು ಗೌರವಿಸಲ್ಪಟ್ಟವರು. ಸೌಮ್ಯ ಸ್ವಭಾವದ  ಮನಮೋಹನ್  ಸಿಂಗ್ ಅವರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾಗಿದ್ದರು..  ಅವರ ಜೀವನ ಅನುಭವ ಮತ್ತು ಶಿಕ್ಷಣದ ಹಿನ್ನಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲೆಂಡಿನ ಕೇಂಬ್ರಿಡ್ಜ್  ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ.ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ನಾಗರೀಕ ಎಂಬ ಗೌರವಕ್ಕೆ  ಡಾ. ಮನಮೋಹನ್ ಸಿಂಗ್ ಪಾತ್ರರಾದರು. ಅತಿ ಕಡಿಮೆ ಮಾತುಗಳಲ್ಲಿ ಹೇಳಬೇಕಾದ ವಿಚಾರಗಳನ್ನು ಸ್ಪಷ್ಟವಾಗಿ ಹೇಳಬಲ್ಲ ಅವರನ್ನು ಭಾರತದ ಮಾಧ್ಯಮಗಳು ಇವರು ಮನಮೋಹನ್ ಸಿಂಗ್ ಅವರೋ?  ಅಥವಾ ಮನ ಮೌನಸಿಂಗರೋ? ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅಪಹಾಸ್ಯ ಮಾಡಿದ್ದುಂಟು.

 ಡಾ. ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26 ರಂದು ಸಿಖ್ ಕುಟುಂಬದಲ್ಲಿ ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳಿಗೆ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ  ಗಾಹ್ ಎಂಬ ಗ್ರಾಮದಲ್ಲಿ  ಜನಿಸಿದರು.   ಬಾಲ್ಯದಲ್ಲಿ ತಾಯಿ ತೀರಿಕೊಂಡ ಕಾರಣ, ಅಜ್ಜಿಯ (ತಂದೆಯ ತಾಯಿ) ಮೊಮ್ಮಗನನ್ನು ಕಾಳಜಿಯಿಂದ ಬೆಳೆಸಿದರು. ಇದರ ಪ್ರಭಾವದಿಂದಾಗಿ    ಅವರು ಬಾಲ್ಯದಿಂದಲೂ  ಅಜ್ಜಿಗೆ ತುಂಬಾ ಹತ್ತಿರವಾಗಿದ್ದರುಮನಮೋಹನ ಸಿಂಗ್  ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು, ಕಾರಣದಿಂದಾಗಿ ಅವರು  ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ    ತಮ್ಮ  ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದುಕೊಂಡು ಮಾತನಾಡುತ್ತಿದ್ದರುಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿ ಲಿಪಿಯನ್ನು ಸಹ ಬಳಸುತ್ತಿದ್ದರು.

 1947 ರಲ್ಲಿ ಅಖಂಡ ಭಾರತವು ವಿಭಜನೆಯಾದ  ನಂತರ  ಅವರ ಕುಟುಂಬವು ಭಾರತದ ಹಲ್ದ್ವಾನಿಗೆ ವಲಸೆ ಬಂದು ನೆಲೆಸಿತುನಂತರ ೧೯೪೮ ರಲ್ಲಿ ಕುಟುಂಬದ ಸದಸ್ಯರು ಅಮೃತಸರಕ್ಕೆ ಸ್ಥಳಾಂತರಗೊಂಡರು  ಅಲ್ಲಿ  ಸಿಂಗ್ರವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಪದವಿ ಅಧ್ಯಯನಕ್ಕೆ  ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿ  ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಕ್ರಮವಾಗಿ 1952 ಮತ್ತು 1954  ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು, ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಮನಮೋಹನ್ ಸಿಂಗ್   1957 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅರ್ಥಶಾಸ್ತ್ರದದಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರುಬ್ರಿಟಿಷ್ ಪತ್ರಕರ್ತ ಹಾಗೂ ಬಿ.ಬಿ.ಸಿ.ವರದಿಗಾರರಾಗಿದ್ದ  ಮಾರ್ಕ್ ಟುಲ್ಲಿ ಅವರೊಂದಿಗಿನ  20005 ಸಂದರ್ಶನದಲ್ಲಿ  ಸಿಂಗ್ ಅವರು ತಮ್ಮ ಕೇಂಬ್ರಿಡ್ಜ್ ದಿನಗಳು ಮತ್ತು ಅರ್ಥಶಾಸ್ತçದಿಂದ ಗಳಿಸಿಕೊಂಡ ಜ್ಞಾನವನ್ನು ಹೀಗೆ ವಿವರಿಸಿದ್ದಾರೆ.

 ಮಾನವ ವ್ಯವಹಾರಗಳನ್ನು ರೂಪಿಸುವಲ್ಲಿ ರಾಜಕೀಯದ ಸೃಜನಾತ್ಮಕ ಪಾತ್ರದ ಬಗ್ಗೆ ನಾನು ಮೊದಲು ಜಾಗೃತನಾಗಿದ್ದೆ. ವಿಷಯದಲ್ಲಿ  ನನ್ನ ಮಾರ್ಗದರ್ಶಕರಾಗಿದ್ದ  ಜೋನ್ ರಾಬಿನ್ಸನ್ ಮತ್ತು ನಿಕೋಲಸ್ ಕಾಲ್ಡೋರ್ ಅವರಿಗೆ ಋಣಿಯಾಗಿದ್ದೇನೆ . ಜೋನ್ ರಾಬಿನ್ಸನ್ ಒಬ್ಬ ಅದ್ಭುತ ಪ್ರಾಧ್ಯಾಪಕರಾಗಿದ್ದರು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಆಂತರಿಕ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದರುಅದನ್ನು ಕೆಲವೇ ಕೆಲವರು ಸಾಧಿಸಲು ಸಾಧ್ಯವಾಯಿತು. ಅವರು ನನ್ನನ್ನು ಬಹಳವಾಗಿ ಪ್ರಶ್ನಿಸಿದರು ಮತ್ತು ಯೋಚಿಸಲಾಗದದನ್ನು ಯೋಚಿಸುವಂತೆ ಮಾಡಿದರು ಅವರು ಕೇನ್ಸ್ನ ಎಡಪಂಥೀಯ ವ್ಯಾಖ್ಯಾನವನ್ನು ಪ್ರತಿಪಾದಿಸಿದರು,  ‘ನಿಜವಾಗಿಯೂ ಸಾಮಾಜಿಕ ಸಮಾನತೆಯೊಂದಿಗೆ ಅಭಿವೃದ್ಧಿಯನ್ನು ಸಂಯೋಜಿಸಲು ಬಯಸಿದರೆ ರಾಜ್ಯವು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಕಾಲ್ದೋರ್ ನನ್ನ ಮೇಲೆ ಇನ್ನಷ್ಟು ಪ್ರಭಾವ ಬೀರಿದರುಜೋನ್ ರಾಬಿನ್ಸನ್ ಚೀನಾದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಒಬ್ಬ ಮಹಾನ್ ಅಭಿಮಾನಿಯಾಗಿದ್ದರು, ಆದರೆ, ಕ್ಯಾಲ್ಡೋರ್ ಕೇನ್ಸ್ನ ವಿಶ್ಲೇಷಣೆಯನ್ನು ಬಂಡವಾಳಶಾಹಿಯನ್ನು ಕೆಲಸ ಮಾಡಲು ಸಾಧ್ಯವೆಂದು ತೋರಿಸಲು ಬಳಸಿದರು.’’ ಜಗತ್ತಿನ ಶ್ರೇಷ್ಠ ಚಿಂತಕರ ಬಳಿ ಅವರು ಓರ್ವ ಪ್ರತಿಭಾವಂತ ಅರ್ಥಶಾಸ್ತçಜರಾಗಿ ರೂಪುಗೊಂಡ ನಂತರ ಡಾ.ಮನಮೋಹನ್ ಸಿಂಗ್ ಭಾರತಕ್ಕೆ ಮರಳಿದರು.

  ಭಾರತಕ್ಕೆ ಬಂದ ನಂತರ  ಅವರು 1957  ರಿಂದ 1959  ರವರೆಗೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. 1959 ಮತ್ತು  1963 ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು 1963 ರಿಂದ 1965 ರವರೆಗೆ  ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರುನಂತರ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ .ಸಂಸ್ಥೆಗೆ  (UNCTAD) ಕೆಲಸ ಮಾಡಲು ಅಮೇರಿಕಾಕ್ಕೆ ಹೋಗಿದ್ದರುಮೂರು ವರ್ಷ ಸೇವೆ ಸಲ್ಲಿಸಿ ಭಾರತಕ್ಕೆ ಮರಳಿ ಬಂದ  ಅವರನ್ನು ಲಲಿತ್ ನಾರಾಯಣ ಮಿಶ್ರಾ ಅವರು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದರ ಜೊತೆಗೆ    ೧೯೬೯ ರಿಂದ ೧೯೭೧ ರವರೆಗೆ, ಸಿಂಗ್ ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ  ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

 1972 ರಲ್ಲಿ, ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು 1976 ವೇಳೆಗೆ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು 1980--1982 ರಲ್ಲಿ  ಯೋಜನಾ ಆಯೋಗದ ಸದಸ್ಯರಾಗಿ ಆಯ್ಕೆಯಾದರು.   1982ರಲ್ಲಿ  ಅವರು ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಂಡರು1985 ರವರೆಗೆ  ಡಾ.ಮನಮೋಹನ್ ಸಿಂಗ್ ಅವರು ಹುದ್ದೆಯಲ್ಲಿದ್ದರು. 1985 ರಿಂದ 1987 ರವರೆಗೆ ಯೋಜನಾ ಆಯೋಗದ  ಉಪಾಧ್ಯಕ್ಷರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ  1991ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು.

 ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಡಾ.ಮನಮೋಹನ್ ಸಿಂಗವರನ್ನು ತಮ್ಮ ಸಂಪುಟದಲ್ಲಿ ಹಣಕಾಸು ಅಥವಾ ಅರ್ಥ ಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದುಏಕೆಂದರೆ, ಅದೇ ವರ್ಷದ ಅಂದರೆ1991 ಮೇ ತಿಂಗಳಿನ 21 ರಿಂದ 30 ರವರೆಗೆ ಭಾರತ ಸರ್ಕಾರವು  67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ  47 ಟನ್  ಮತ್ತು ಲಂಡನ್ ನಗರದ  ಸ್ವಿಟ್ಜರ್ ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು  ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು. 1990 ರಲ್ಲಿ ಕಾಂಗ್ರೇಸ್  ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರವು  ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991 ರ ಮಾರ್ಚ್ ತಿಂಗಳಲ್ಲಿ  ಬಹುಮತ ಕಳೆದುಕೊಂಡು ಪತನಗೊಂಡಿತು. ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ  ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಹಣವು ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿಅಂಚಿಗೆ ದೂಡಿತ್ತು. 1991 ರ ಜೂನ್ ನಲ್ಲಿ ನಡೆದ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.

 1991 ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆ ಮಾರಿನ ಬಹುತೇಕ ಮಂದಿಗೆ  ಗೊತ್ತಿಲ್ಲದ ವಿಷಯವಾಗಿದೆ. ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು. ಮೂಲತಃ ಸಿಂಗ್ ರವರು ಇಬ್ಬರು ವಿಭಿನ್ನ ವಿಚಾರ ಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ  ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದ ಕಾರಣದಿಂದಾಗಿ  ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 20002 ರಿಂದ 2010 ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.

 ಡಾ.ಮನಮೋಹನ್ ಸಿಂಗ್ ಅವರು ಅನಿರೀಕ್ಷಿತವಾಗಿ ತಾವು ರಾಜಕೀಯ ಪ್ರವೇಶಿದ ಕ್ಷಣವನ್ನು ಬಿ.ಬಿ.ಸಿ. ರೇಡಿಯೋಗೆ ರೀತಿಯಲ್ಲಿ ವಿವರಿಸಿದ್ದಾರೆ. ‘’ಜೂನ್ 1991 ರಲ್ಲಿ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿ ಪಿವಿ ನರಸಿಂಹ ರಾವ್ ಅವರು  ನನ್ನನ್ನು  ಹಣಕಾಸು ಮಂತ್ರಿಯಾಗಿ ಆಯ್ಕೆ ಮಾಡಿದರು. ನರಸಿಂಹರಾವ್ ಅವರು ತಮ್ಮ ಕ್ಯಾಬಿನೆಟ್ ಅನ್ನು ರೂಪಿಸುವ ದಿನತಮ್ಮ ಪ್ರಧಾನ ಕಾರ್ಯದರ್ಶಿಯನ್ನು ನನ್ನ ಬಳಿಗೆ ಕಳುಹಿಸಿದರು, 'ನೀವು ಹಣಕಾಸು ಸಚಿವರಾಗಬೇಕೆಂದು ಪ್ರಧಾನಿ ಬಯಸುತ್ತಾರೆ' ಎಂದು ಕಾರ್ಯದರ್ಶಿ ನನಗೆ  ಹೇಳಿದರು. ನಾನು ಆಹ್ವಾನವನ್ನು  ಸ್ವೀಕರಿಸಲಿಲ್ಲ. ಅಂತಿಮವಾಗಿ ಮರುದಿನ ಬೆಳಿಗ್ಗೆ  ಪಿ.ವಿ. ನರಸಿಂಹರಾವ್ ನನನ ನಿವಾಸಕ್ಕೆ ಆಗಮಿಸಿದರು. ನನ್ನ ನಿರ್ಧಾರದಿಂದ ಅವರು ಕೋಪಗೊಂಡಿದ್ದರು ಮತ್ತು ಪ್ರಮಾಣ ವಚನಕ್ಕೆ ರಾಷ್ಟ್ರಪತಿ ಭವನಕ್ಕೆ ಬರಬೇಕೆಂದು ಒತ್ತಾಯಿಸಿದರು. ಹಾಗಾಗಿ ನಾನು ರಾಜಕೀಯವನ್ನು ಪ್ರವೇಶಿಸಿದೆ.’’ ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಪ್ರೊ. ಮಹಮ್ಮದ್ ಯೂನಸ್ ಇವರಿಗಿಂತ ಮುಂಚೆ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಅವರಿಗಿತ್ತು. ಇಪ್ಪತ್ತು  ಮತ್ತು ಇಪ್ಪತ್ತೊಂದನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರು ಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಅವರನ್ನು ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ.

 ಎಂದಿಗೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತವಾಗಿ ಭಾರತದ ಪ್ರಧಾನಿಯಾಗುವ  ಅದೃಷ್ಠವೂ ಒಲಿದು ಬಂತು. ೨೦೦೪ ರಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.. ಒಕ್ಕೂಟ ಸರ್ಕಾರ  ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ ( ವಿದೇಶಿ ಮಹಿಳೆ ಮತ್ತು  1984 ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಡಾ. ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು. ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪ ಸಂಖ್ಯಾತ ಸಮುದಾಯದಿಂದ ಬಂದ ಅಂದರೆ, ಮುಸ್ಲಿಂ ಮತ್ತು ಸಿಖ್ ಸಮುದಾಯದ  ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಡಾ.ಅಬ್ದುಲ್ ಕಲಾಂ ಮತ್ತು ಡಾ. ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.

 20004 ರಿಂದ 20009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ನಡೆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು, ಬುಷ್ ಮತ್ತು ಬರಾಕ್ ಒಬಾಮ ರಂತಹವರು  ಆರ್ಥಿಕ ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಬಾರತದ   ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರಾಷ್ಟ್ರೀಯ ಹಣಕಾಸು ನಿಧಿ(I.M.F) ಸಾಲನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು  (Struvtural adjusments) ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.

 ಡಾ.ಮನಮೋಹನ್ ಸಿಂಗ್ ರವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ಏಕೆಂದರೆದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಎರಡನೇ ಅವಧಿಯಲ್ಲಿ ಸಿಂಗ್ ಅವರ ಸಚಿವ ಸಂಪುಟದಲ್ಲಿ ಸಚಿವರಾದರು. ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೇಸ್ ಪಕ್ಷದ ಭಟ್ಟಂಗಿ ನಾಯಕರು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2.ಜಿ. ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು. ಯು.ಪಿ.. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಭಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012 ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆಯು ಭಾರತದವಿಫಲ ನಾಯಕಎಂದು ಬಣ್ಣಿಸಿತು.

 ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು, ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನುತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ) ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999 ರ ಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗ್ ರವÀರು ಸಾಲ ಪಡೆದಿದ್ದರು. ಅಸ್ಸಾಂ ನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನ ಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ವಾಪಸ್  ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಡಾ. ಮನಮೊಹನ ಸಿಂಗ್ ರವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಕಾರಣಕ್ಕಾಗಿ. ಒರ್ವ ಶಾಸಕನ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಈಗಿನ ಸಂದರ್ಭದಲ್ಲಿ  ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ  ದುರಂತ ನಾಯಕನ ಇಮೇಜಿನ ನಡುವೆಯೂ  ಗೌರವ ಮೂಡುತ್ತದೆ.

 2010 ರಲ್ಲಿ ನ್ಯೂಸ್ವೀಕ್ ನಿಯತಕಾಲಿಕವು ಅವರನ್ನು ಇತರ ರಾಷ್ಟ್ರಗಳ ಮುಖ್ಯಸ್ಥರು ಗೌರವಿಸುವ ವಿಶ್ವ ನಾಯಕ ಎಂದು ಗುರುತಿಸಿತು. ಅಮೇರಿಕಾದ  ಹೆನ್ರಿ ಕಿಸ್ಸಿಂಜರ್ ಮನಮೋಹನ್ ಸಿಂಗ್ ಅವರನ್ನು "ದೃಷ್ಟಿ, ನಿರಂತರತೆ ಮತ್ತು ಸಮಗ್ರತೆ ಹೊಂದಿರುವ ರಾಜನೀತಿಜ್ಞ" ಎಂದು ಬಣ್ಣಿಸಿದರು ಮತ್ತು ಅವರ "ನಾಯಕತ್ವಕ್ಕಾಗಿ, ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಪ್ರಶಂಸಿಸಿದರು. 2010ರ ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮನಮೋಹನ್ ಸಿಂಗ್ 18 ನೇ ಸ್ಥಾನದಲ್ಲಿದ್ದರುಫೋರ್ಬ್ಸ್ ನಿಯತಕಾಲಿಕವು ಸಿಂಗ್ ಅವರನ್ನು "ನೆಹರೂ ನಂತರ ಭಾರತದ ಅತ್ಯುತ್ತಮ ಪ್ರಧಾನ ಮಂತ್ರಿ ಎಂದು ಸಾರ್ವತ್ರಿಕವಾಗಿ ಪ್ರಶಂಸಿಸಲಾಗಿದೆ" ಎಂದು ವಿವರಿಸಿದೆ. ಆಸ್ಟ್ರೇಲಿಯನ್ ಪತ್ರಕರ್ತ ಗ್ರೆಗ್ ಶೆರಿಡನ್ ಸಿಂಗ್ "ಏಷ್ಯನ್ ಇತಿಹಾಸದಲ್ಲಿ ಶ್ರೇಷ್ಠ ರಾಜನೀತಿಜ್ಞರಲ್ಲಿ ಒಬ್ಬರು" ಎಂದು ಹೊಗಳಿದ್ದರು. 2006 ರಲ್ಲಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಉಜ್ಬೇಕಿಸ್ತಾನ್ನಲ್ಲಿ ಅಂಚೆಚೀಟಿ ಬಿಡುಗಡೆಯಾಯಿತು

 ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ವಿರೋಧಿಗಳು ಸಿಂಗ್ ಅವರನ್ನು ಹೊಗಳಿದ್ದಾರೆ.   2022 ರಲ್ಲಿ, " ದೇಶಕ್ಕೆ ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಎಂದು ನಿತಿನ್ ಗಡ್ಕರಿ ಹೇಳಿದರು. ತಮ್ಮ ಇಳೀ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇದ್ದ ಹಿರಿಯ ಜೀವ ದೇಹಲಿಯಲ್ಲಿ ವಾಸವಾಗಿದ್ದುಕೊಂಡು 2024 ರಲ್ಲಿ ನಿಧನರಾಗುವ ವರೆಗೂ  ತಮ್ಮ ಬಳಿ ಸಲಹೆ ಕೇಳಿಕೊಂಡು ಬಂದವರಿಗೆ ಪಕ್ಷ ಭೆದ ಮಾಡದೆ ಸಲಹೆ ನೀಡುವ ಉದಾರತೆಯನ್ನು .ಜೀವಂತವಿರಿಸಿಕೊಡಿದ್ದರು.. ಸೌಜನ್ಯ ಮತ್ತು ಸಾಹಾರ್ಧತೆಯನ್ನು ತಮ್ಮ ಜೀವದ ಉಸಿರಿನಂತೆ ಕಾಪಾಡಿಕೊಂಡು ಬಂದ ಮನಮೋಹನ್ ಸಿಂಗ್ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ಅರ್ಥಶಾಸ್ತ್ರಜ್ಞ ಎಂಬುದನ್ನು ನಾವುಗಳು ಮರೆಯುವಂತಿಲ್ಲ.

 ಜಗದೀಶ್ ಕೊಪ್ಪ.

ಮಂಗಳವಾರ, ಆಗಸ್ಟ್ 4, 2026

ಅನ್ನದಾತರ ಸ್ಮಶಾನವಾದ ಗ್ರಾಮಭಾರತ



ಭಾರತದ ನೆಲದಲ್ಲಿ ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಜನರ ಅನ್ನದ ಬಟ್ಟಲು ಮತ್ತು ಬದುಕಿನ ಜೀವನಾಡಿಯಾಗಿದ್ದ ಕೃಷಿ ಲೋಕವು ಇಂದು ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಎಂದಿಗೂ ಬೇಡವಾದ ಕಸದ ತೊಟ್ಟಿ ಎಂಬಂತಾಗಿದೆ. ಜಾಗತೀಕರಣದ ಹೆಸರಿನಲ್ಲಿ ದೇಶದ ಗಡಿ ಬಾಗಿಲುಗಳು ಸರಕು ಮತ್ತು ಸೇವೆ ಹೆಸರಿನಲ್ಲಿ ತೆರೆದುಕೊಂಡ ನಂತರ ಈ ದೇಶದ ಅನ್ನದಾತ ಅಕ್ಷರಶಃ ಅನಾಥನಾಗಿದ್ದಾನೆ ಕಳೆದ ಜುಲೈ ತಿಂಗಳ ಪರಿಸರ ಕುರಿತ ಡೌನ್ ಟು ಅರ್ಥ್ ಎಂಬ ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯು ಪ್ರಕಟಿಸಿರುವ ಕೃಷಿ ಲೋಕದ ಅಧ್ಯಯನದ ವರದಿಗಳು ಓದುಗರನ್ನು ಬೆಚ್ಚಿ ಬೀಳಿಸುತ್ತವೆ. ಕಾಸಿದ್ದವನು ಕೈಲಾಸ ಕಂಡ ಎಂಬ ಗಾದೆಯಂತೆ, ಹಣವಿದ್ದವನು ಭಾರತದ ಕೃಷಿ ಲೋಕವನ್ನು ನಂಬಿ ಬದುಕುವ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಇಲ್ಲವಾಗಿದೆ.
ತನಗೆ ಬೇಕಾದ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಮಾತ್ರವಲ್ಲದೆ, ತರಕಾರಿ ಮತ್ತು ಹಣ್ಣುಗಳನ್ನು ವಿದೇಶದಿಂದ ಕ್ಷಣ ಮಾತ್ರದಲ್ಲಿ ಆಮದು ಮಾಡಿಕೊಳ್ಳಬಲ್ಲ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರಿಂದಾಗಿ ಉಳ್ಳವರಿಗೆ ಇಲ್ಲಿನ ನೆಲ ಮತ್ತು ಜಲದ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಈಗ ಜಾಗತೀಕರಣದ ವೇಷ ತೊಟ್ಟ ಬಂಡವಾಳ ಶಾಹಿಗಳ ಆಡುಂಬೊಲವಾಗಿರುವ ಭಾರತದಲ್ಲಿ ಕೃಷಿ ಕ್ಷೇತ್ರವು ಯಾರಿಗೂ ಬೇಡವಾಗಿದೆ. ವಿದೇಶಿ ಬಂಡವಾಳ, ಮಾಹಿತಿ ತಂತ್ರಜ್ಞಾನದ ಜಗತ್ತು ಹಾಗೂ ಗಂಟೆಗೆ ಇನ್ನೂರು ಕಿಲೊಮೀಟರ್ ವೇಗದಲ್ಲಿ ಚಲಿಸುವ ವಿದೇಶಿ ಕಾರುಗಳು, ಹಣವಂತರು ಕುಡಿದ ನೀರು ಹೊಟ್ಟೆಯೊಳಗೆ ಅಲುಗಾಡದಂತೆ ಗ್ರಾಮಭಾರತದ ಹಳ್ಳಿಗಳನ್ನು ಇಬ್ಬಾಗವಾಗಿ ಸೀಳಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳು ಇವೆಲ್ಲವೂ ಸರ್ಕಾರಗಳ ಆದ್ಯತೆಗಳಾಗಿವೆ. ಶತ ಶತಮಾನಗಳ ಕಾಲ ಈ ದೇಶಕ್ಕೆ ಅಡಿಪಾಯವಾಗಿದ್ದ ಮತ್ತು ಅನ್ನದಾತನಾಗಿದ್ದ ರೈತನ ಕುಟುಂಬವು ಬೀದಿಗೆ ಬಿದ್ದಿರುವ ಕುರಿತು ಬರೆಯುವುದು ಅಥವಾ ಚರ್ಚಿಸುವುದು ಸಿನಿಕತನದ ವಿಷಯ ಎಂಬಂತಾಗಿದೆ. ಕಳೆದ ಮೂರು ದಶಕಗಳಲ್ಲಿ ಈ ದೇಶದಲ್ಲಿ ಮೂರು ಲಕ್ಷದ ತೊಂಬತ್ತನಾಲ್ಕು ಸಾವಿರ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ದಿನಾ ಸಾಯುವವರೆಗ ಅಳುವವರು ಯಾರು? ಇದು ಇಂದಿನ ಭಾರತದ ನಾಗರೀಕರ ಪ್ರಶ್ನಯಾಗಿದೆ.
ಈ ದೇಶದ ದುರಂತವೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವೊಬ್ಬ ಜನಪ್ರತಿನಿಧಿ ಅಥವಾ ನಾಯಕರೆನಿಸಿಕೊಂಡವರಿಗೆ ಈ ಸಾವುಗಳು ನನ್ನ ಕುಟುಂಬದ ಸಾವು ಎನಿಸುತ್ತಿಲ್ಲ. ಎಂದಿಗೂ ಲಾಭವನ್ನು ನಿರೀಕ್ಷಿಸದೆ, ಕೃಷಿಯನ್ನು ಕಾಯಕವೆಂಬಂತೆ ನಂಬಿ ಬದುಕಿದ ರೈತನು ತಾನು ಬೆಳೆದ ಬೆಳೆಗೆ ನಿರ್ಧಿಷ್ಠ ಬೆಲೆ ಕೇಳದೆ ಅನ್ನ ಹಾಕಿದ ಇತಿಹಾಸವು, ರೈತನ ಸಾವು ಆತ್ಮ ಬಂಧುವಿನ ದುರಂತ ಎಂದು ಯಾವೊಬ್ಬ ರಾಜಕೀಯ ನಾಯಕನ ಎದೆಯ ಕದ ತಟ್ಟಲಿಲ್ಲ. ಇದೀಗ ರೈತರ ಜೊತೆಗೆ ಕೃಷಿ ಕಾರ್ಮಿಕರು ಮತ್ತು ಭೂರಹಿತ ಬಡವರ ಸಾವಿನ ವರದಿಗಳು ನಮ್ಮನ್ನು ಆತಂಕಕ್ಕೆ ದೂಡಿವೆ. ಇಲ್ಲಿನ ಅಂಕಿ ಅಂಶಗಳು ಯಾವುದೋ ಒಂದು ಸಂಘಟನೆ ಅಥವಾ ರಾಜಕೀಯ ಪಕ್ಷ ಸಿದ್ಧಪಡಿಸಿದ ದಾಖಲೆಗಳಲ್ಲ. ಕೇಂದ್ರ ಸರ್ಕಾರದ ಒಡೆತನದ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಪ್ರಕಟಿಸಿರುವ ಅಂಕಿ ಅಂಶಗಳಾಗಿವೆ. ಉದ್ಯೋಗವಿಲ್ಲದ ಅತಂತ್ರಸ್ಥಿತಿ, ಮಕ್ಕಳ ಶಿಕ್ಷಣಕ್ಕೆ ನೆರವಾಗಲಾರದ ಅಸಹಾಯಕತೆ ಮತ್ತು ತಮ್ಮ ಕುಟುಂಬಗಳ ಅನಾರೋಗ್ಯಕ್ಕೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ರೈತರು ಮತ್ತು ಕೂಲಿ ಕಾರ್ಮಿಕರು ದೇಶಾದ್ಯಂತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕಳೆದ ಮೂರು ದಶಕಗಳಿಂದ ನಿರಂತರಾಗಿ ನಡೆಯುತ್ತಿರುವ ಈ ಆತ್ಮಹತ್ಯೆಯ ಸಾವುಗಳಿಗೆ ಕೇಂದ್ರ ಸರ್ಕಾರವು 2010 ರಲ್ಲಿ ಪರಿಚಯಿಸಿದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯು ತಕ್ಕಮಟ್ಟಿಗೆ ತಡೆಯೊಡ್ಡಲು ಸಹಾಯಕವಾಗಿತ್ತು. ಆದರೆ ಇತ್ತೀಚೆಗಿನ 2023 ರ ಅಂಕಿ ಅಂಶಗಳು ತೀವ್ರವಾದ ರೈತರ ಮತ್ತು ಕೂಲಿ ಕಾರ್ಮಿಕರ ಸಾವಿನ ಏರಿಕೆಯ ಪ್ರಮಾಣವನ್ನು ತೋರಿಸುತ್ತಿವೆ. ವಿಶೇಷವಾಗಿ ಕೃಷಿ ಕಾರ್ಮಿಕರಲ್ಲಿ ಆತ್ಮಹತ್ಯೆ ಪ್ರಕಟರಣಗಳು ಹೆಚ್ಚಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ದತ್ತಾಂಶದ ಪ್ರಕಾರ, ಕಳೆದ ಇಪ್ಪತ್ತೆಂಟು ವರ್ಷಗಳ ವಿಶ್ಲೇಷಣೆಯ 1990 ರ ದಶಕದ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಶೇಕಡಾ ಎರಡೂವರೆ ಪಟ್ಟು ಹೆಚ್ಚಾಗಿತ್ತು. 1995 ರಿಂದ 2023 ರ ನಡುವೆ ಮೂರು ಲಕ್ಷದ ತೊಂಬತ್ತನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು, 2000 ರ ದಶಕದ ಆರಂಭದಲ್ಲಿ ಈ ಬಿಕ್ಕಟ್ಟು ಉತ್ತುಂಗಕ್ಕೇರಿತು.
ಬಿಟಿ ಹತ್ತಿ ಬೆಳೆಯ ತ್ವರಿತ ಹರಡುವಿಕೆ, ಹೆಚ್ಚುತ್ತಿರುವ ಕೃಷಿ ಉತ್ಪಾದನೆಯ ವೆಚ್ಚಗಳು ಮತ್ತು ಪುನರಾವರ್ತಿತ ಬೆಳೆಗಳ ವೈಫಲ್ಯಗಳ ಫರಿಣಾಮವಾಗಿ ದೇಶಾದ್ಯಂತ ರೈತರ ಸಂಕಷ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಶೇಕಡಾ 75 ರಷ್ಟು ರೈತರ ಆತ್ಮಹತ್ಯೆಗಳು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ, ಇದು ಬಲವಾದ ಪ್ರಾದೇಶಿಕ ಕೇಂದ್ರೀಕರಣವನ್ನು ಸೂಚಿಸುತ್ತದೆ. 2023 ರಲ್ಲಿ ಮಹಾರಾಷ್ಟ್ರದಲ್ಲಿ 4,151 ರೈತರು ಮತ್ತು ಕರ್ನಾಟಕದಲ್ಲಿ 2,423 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾವಿನ ಪರಂಪರೆ ಈಗಲೂ ಮುಂದುವರಿದಿದೆ. 2000 ರ ದಶಕದಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿಟಿ ಹತ್ತಿಯ ತ್ವರಿತ ಹರಡುವಿಕೆ ಮೂಲ ಕಾರಣ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ (ಸಿಎಸ್ಎ) ನಡೆಸಿದ ವಿಶ್ಲೇಷಣೆಯು ದೃಢಪಡಿಸಿದೆ.
ಪ್ರತಿ ಒಂದು ಲಕ್ಷ ಕೃಷಿ ನಿರತ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯವಾರು ಆತ್ಮಹತ್ಯೆ ದರಗಳನ್ನು ಆಧರಿಸಿದ ಅಧ್ಯಯನವು, ಹೆಚ್ಚಿನ ಇಳುವರಿ ಮತ್ತು ಕೀಟ ನಿರೋಧಕತೆಯ ಭರವಸೆಗಳನ್ನು ಈಡೇರಿಸುವಲ್ಲಿ ಬಿ.ಟಿ. ಹತ್ತಿಯು ವಿಫಲವಾದುದು ರೈತರು ಆತ್ಮಹತ್ಯೆ ಕಾರಣವೆಂದು ದೃಢಪಟ್ಟಿದೆ. ರೈತರು ತೀವ್ರವಾಗಿ ಏರುತ್ತಿರುವ ಕೃಷಿ ಉತ್ಪಾದನೆಯ ವೆಚ್ಚಗಳ ಕಾರಣದಿಂದ ಸಾಲ ಮಾಡುವುದರೊಂದಿಗೆ ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಎದುರಿಸಿದರು. ಪುನರಾವರ್ತಿತ ಬೆಳೆಗಳ ವೈಫಲ್ಯಗಳು, ವಿಶ್ವಾಸಾರ್ಹ ಬೆಂಬಲದ ಬೆಲೆ ಇಲ್ಲದಿರುವುದು ಸೇರಿ, ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ದೀರ್ಘಕಾಲದ ಮತ್ತು ಅಧಿಕ ಬಡ್ಡಿಯ ಸಾಲದ ಕೂಪಕ್ಕೆ ತಳ್ಳಿದವು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಪ್ರಮುವಾಗಿವೆ. ಕಳೆದ 28 ವರ್ಷಗಳಲ್ಲಿ ಈ ಎರಡೂ ರಾಜ್ಯಗಳು ಒಟ್ಟಾಗಿ ಒಂದು ಲಕ್ಷದ ಎಪ್ಪತ್ತು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿವೆ.
ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಅಥವಾ ಕೃಷಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಕಿ ಅಂಶಗಳು ಈ ದೇಶವು ಸಾಗುತ್ತಿರುವ ಹಾದಿಯನ್ನು ನಮ್ಮೆದೆರು ತೆರೆದು ತೋರಿಸಿವೆ. ಆತ್ಮಹತ್ಯೆ ಕುರಿಂತಂತೆ ರಾಷ್ಟ್ರೀಯ ಅಂಕಿಅಂಶಗಳಲ್ಲಿ ಮಧ್ಯಪ್ರದೇಶ ರಾಜ್ಯವು ಸಹ ನಿರಂತರವಾಗಿ ಅಗ್ರಸ್ಥಾನದಲ್ಲಿದೆ, ರೈತರ ಬಿಕ್ಕಟ್ಟು ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂಬುದನ್ನು ದಾಖಲೆಯು ಒತ್ತಿಹೇಳುತ್ತದೆ. 1995 ರಲ್ಲಿ ಭಾರತ ವಿಶ್ವ ವ್ಯಾಪಾರ ಸಂಸ್ಥೆ (WTO) ಗೆ ಸೇರ್ಪಡೆಗೊಂಡ ನಂತರ ಕೃಷಿ ಬಿಕ್ಕಟ್ಟು ತೀವ್ರಗೊಂಡಿತು ಎಂಬುದನ್ನು ವಿಶ್ಲೇಷಣೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಕೃಷಿ ಸಬ್ಸಿಡಿಗಳು ಕಡಿಮೆಯಾಗುವುದರ ಜೊತೆಗೆ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುವುದರಿಂದ ಭಾರತದಲ್ಲಿ ರೈತ ಸಮುದಾಯದ ಕೃಷಿ ಆದಾಯವು ದುರ್ಬಲಗೊಂಡಿತು. ವಿಶೇಷವಾಗಿ ಸಣ್ಣ ಕೃಷಿಕರಿಗೆ ಜೀವನ ದುಸ್ತರವಾಯಿತು. ಮಳೆಯಾಶ್ರಿತ ಭೂಮಿಯಲ್ಲಿ ಬೇಸಾಯ ಮತ್ತು ಮಾರುಕಟ್ಟೆ ಆಧಾರಿತ ವಾಣಿಜ್ಯ ಬೆಳೆಗಳಲ್ಲಿ ಪ್ರಾಬಲ್ಯ ಹೊಂದಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ, ಕೆಲವು ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಆತ್ಮಹತ್ಯೆ ಸಂಖ್ಯೆಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.
ಈ ವಾಸ್ತವಿಕ ಅಂಕಿ ಅಂಶಗಳು ವಿಶಾಲವಾದ ಕೃಷಿ ಸುಧಾರಣೆಯ ಅನುಪಸ್ಥಿತಿಯಲ್ಲಿ ಅಲ್ಪಾವಧಿಯ ಪರಿಹಾರದ ಮಿತಿಗಳನ್ನು ಒತ್ತಿ ಹೇಳುವುದರೊಂದಿಗೆ, ಗ್ರಾಮೀಣ ಆರ್ಥಿಕತೆಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಯನ್ನು ಅನಾವರಣಗೊಳಿಸಿವೆ. ಕೃಷಿಕರಿಗಿಂತ ಹೆಚ್ಚಾಗಿ ಕೃಷಿ ಕೂಲಿ ಕಾರ್ಮಿಕರು ಈಗ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗಳಿಗೆ ಕಾರಣರಾಗಿದ್ದಾರೆ. 2023 ರಲ್ಲಿ ದಾಖಲಾದ 10,786 ಸಾವುಗಳಲ್ಲಿ 6,096 ಕೃಷಿ ಕಾರ್ಮಿಕರು ಮತ್ತು 4,690 ಕೃಷಿಕರು ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಮಾನಸಿಕ ಖಿನತ್ತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಶಿಕ್ಷಣದ ಶುಲ್ಕ ಭರಿಸಲಾಗದ ಚಿಂತೆ, ಕುಟುಂಬದ ಸದಸ್ಯರ ಅನಾರಗ್ಯಕ್ಕೆ ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದ ಅಸಹಾಯಕತೆ ಒಂದು ಕಡೆಯಾದರೆ, ಹವಾಮಾನ ವೈಪರಿತ್ಯದ ಕಾರಣ, ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗುತ್ತಿರುವ ರೈತರ ಕೃಷಿ ಫಸಲು ರೈತ ಸಮುದಾಯದ ಮಾನಸಿಕ ಸ್ಥಿರತೆಯನ್ನು ದುರ್ಬಲಗೊಳಿಸಿವೆ. ಇವುಗಳ ಜೊತೆಗೆ ಅರಣ್ಯದಂಚಿನ ಭೂಮಿಗಳಲ್ಲಿ ಬೇಸಾಯ ವೃತ್ತಿಯಲ್ಲಿರುವ ರೈತರಿಗೆ ತಾನು ಬೆಳೆದ ಫಸಲು ಕೈ ಸೇರುತ್ತದೆ ಎಂಬ ವಿಶ್ವಾಸವಿಲ್ಲ. ಇದರಿಂದಾಗಿ 2023 ರಲ್ಲಿ ದೇಶದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳಲ್ಲಿ 2022 ಕ್ಕೆ ಹೋಲಿಸಿದರೆ ಶೇಕಡಾ 75 ಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, ಬಿಕ್ಕಟ್ಟಿನ ಪ್ರಮಾಣವು ದೊಡ್ಡದಾಗಿ ಬೆಳೆಯುತ್ತಿದೆ. ಇದು ಪ್ರತಿ ವರ್ಷ ಸರಾಸರಿ 13,600 ಸಾವುಗಳಿಗೆ ಕಾರಣವಾಗುತ್ತದೆ.
ಸಂಶೋಧಕರ ಪ್ರಕಾರ ಬರಗಾಲ, ಬೆಳೆದ ಫಸಲುಗಳ ಬೆಲೆ ಕುಸಿತ, ದುರ್ಬಲವಾಗಿರುವ ಬೆಳೆ ವಿಮೆ ಮತ್ತು ಸಾಂಸ್ಥಿಕ ಸಾಲಗಳ ಲಭ್ಯತೆಯ ಪ್ರಮಾಣದಲ್ಲಿ ಕುಗ್ಗುವಿಕೆ ಇವುಗಳು ಆತ್ಮಹತ್ಯೆಗೆ ಕಾರಣವಾಗಿವೆ. ಕೃಷಿ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಆಳವಾದ ಗ್ರಾಮೀಣ ಭಾರತದ ಸಂಕಷ್ಟವನ್ನು ಸೂಚಿಸುತ್ತವೆ. ಕಾರ್ಮಿಕರು ವೇತನ ಮತ್ತು ಜೀವನದ ಅಭದ್ರತೆ, ನಿರುದ್ಯೋಗ, ಆಹಾರ ಬೆಲೆಗಳ ಏರಿಕೆ ಮತ್ತು ಸೀಮಿತ ಸಾಮಾಜಿಕ ರಕ್ಷಣೆಯಿಂದ ವಂಚಿರಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ರೈತರ ಆತ್ಮಹತ್ಯೆಗಳು ದ್ವಿಗುಣಗೊಂಡಿದ್ದರೂ ಸಹ ಮಹಾರಾಷ್ಟ್ರವು ಹೆಚ್ಚಿನ ಕೃಷಿ ಲೋಕದ ವಿಮೆಯ ಪರಿಹಾರಗಳನ್ನು ತಿರಸ್ಕರಿಸುತ್ತಿದೆ. ಇತ್ತ ಕರ್ನಾಟಕದ ಸರ್ಕಾರಗಳು ಅನಗತ್ಯ ವಿಳಂಭ ಮಾಡುವುದರ ಮೂಲಕ ಸಂತ್ರಸ್ತರನ್ನು ಸಾವು-ಬದುಕಿನ ನಡುವೆಯ ಜೋಕಾಲಿಯಲ್ಲಿ ತೂಗುತ್ತಿವೆ.
ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (NCRB) ವರದಿಯ ಪ್ರಕಾರ, 2024 ರಲ್ಲಿ ದೇಶಾದ್ಯಂತ 10,546 ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 30,617 ಜನರು ಅನಾರೋಗ್ಯದಿಂದಾಗಿ ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯು 14,305 ಆತ್ಮಹತ್ಯೆಗಳಿಗೆ ಕಾರಣವಾಗಿದ್ದರೆ, 14,075 ಪ್ರಕರಣಗಳು ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿವೆ ಎಂದು ವರದಿ ಹೇಳುತ್ತದೆ. 2024 ರಲ್ಲಿ ಪ್ರತಿದಿನ ಸರಾಸರಿ ಶೇಕಡಾ 84 ಜನರು ಅನಾರೋಗ್ಯದ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಪ್ರವೃತ್ತಿ ಅನೇಕ ವರ್ಷಗಳಿಂದ ಸೃಷ್ಟಿಯಾಗುತ್ತಿದೆ. ಅನಾರೋಗ್ಯಕ್ಕೆ ಕಾರಣವಾದ ಆತ್ಮಹತ್ಯೆಗಳು ಸುಮಾರು ಶೇಕಡಾ 45 ರಷ್ಟು ಏರಿಕೆಯಾಗಿವೆ.

ಬೇಸಾಯ, ನೀನು ಸಾಯ ಎಂಬ ಮಾತು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಇದರಿಂದಾಗಿ ಈಗ ಎಲ್ಲರೂ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ದೇಶದ ಅತ್ಯುನ್ನುತ್ತ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯು ಎರಡು ರ್ಷಗಳ ಹಿಂದೆ ರಾಜಧಾನಿ ದೆಹಲಿ ನಗರದಲ್ಲಿ ಡಿಸಂಬರ್ ತಿಂಗಳ ಕೊರೆಯುವ ಚಳೆಯಲ್ಲಿ ಉತ್ತರಭಾರತದ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ನಡು ರಸ್ತೆಯಲ್ಲಿ ಧರಣಿ ಕುಳಿತಾಗ ಅವರತ್ತ ತಿರುಗಿ ನೋಡಲಿಲ್ಲ. ಎರಡು ತಿಂಗಳು ಧರಣಿ ಕುಳಿತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲದ ಬೆಲೆಯನ್ನು ಘೋಷಿಸಿ ಎಂದು ಕೇಳಿಕೊಂಡರೂ ಸಹ, ಅವರ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸಾಮಾನ್ಯ ಪ್ರಜ್ಞೆ ಕೂಡಾ ಪ್ರಧಾನಿಗೆ ಇಲ್ಲವಾಗಿತ್ತು. ರೈತರು ದೆಹಲಿಗೆ ಬಾರದಂತೆ ತಡೆಯೊಡ್ಡಲು, ರಸ್ತೆಗೆ ಚೂಪಾದ ಉದ್ದನೆಯ ಮೊಳೆಗಳನ್ನು ಜೋಡಿಸುವುದರ ಜೊತೆಗೆ ಸಿಮೆಂಟ್ ತಡೆಗೋಡೆಗಳನ್ನುನಿರ್ಮಿಸಲಾಗಿತ್ತು. ಕೃಷಿ ಆಧಾರಿತ ಭಾರತದಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದ ವ್ಯೆಕ್ತಿಯೊಬ್ಬನು ರೈತರಿಗೆ ತೋರಿದ ಗೌರವದ ವೈಖರಿ ಇದು.
ಈ ಜಗತ್ತಿನಲ್ಲಿ ಎಲ್ಲಿಯಾದರೂ, ಈರುಳ್ಳಿ ಗೋಣಿ ಚೀಲ ತಯಾರಿಸುವ ಸೆಣಬಿನಿಂದ ಮಾಡಿರುವ ಒಂದು ಶಾಲು ಮತ್ತು ಶನಿಮಹಾತ್ಮನ ಪೋಟೊ ಅಳತೆಯ ಆಕಾರದ ಒಂದು ಅಭಿನಂದನಾ ಪತ್ರ ನೀಡುತ್ತಾರೆ ಎಂದರೆ, ದೇಶಗಳಿರಲಿ, ಖಂಡಗಳನ್ನೇ ದಾಟಿ ಹೋಗುವ ಈ ಮಹಾನುಭಾವನಿಗೆ ಭಾರತದ ಉದ್ಯೋಗ ಕ್ಷೇತ್ರಕ್ಕೆ ಅಸ್ತಿಭಾರವಾಗಿರುವ ಕೃಷಿಲೋಕದತ್ತ ತಿರುಗಿ ನೋಡುವ ಅಥವಾ ಚಿಂತಿಸುವ ವ್ಯವಧಾನ ಇಲ್ಲವಾಗಿದೆ. ಜವಹರಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಡಾ.ಮನಮೋಹನ್ ಸಿಂಗ್ ರಂತಹ ದೂರದೃಷ್ಟಿಯುಳ್ಳ ಅನುಭವಿಗಳು ಭಾರತದ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಬಡತನದ ನಿರ್ಮೂಲನೆ ಅವರುಗಳ ಮುಖ್ಯ ಗುರಿ ಮತ್ತು ಯೋಜನೆಯಾಗಿತ್ತು. ಇಂದಿನ ಪ್ರಧಾನಿ ನರೇಂದ್ರಮೋದಿಗೆ ಬಡವರು ಮತ್ತು ರೈತರ ನಿರ್ಮೂಲನೆ ಮೂಲ ಗುರಿಯಾಗಿದೆ. ಇಂದಿನ ಸರ್ಕಾರಕ್ಕೆ ಬೇಕಾಗಿರುವುದು ರೈತರು ಮತ್ತು ಕೃಷಿ ಕಾರ್ಮಿಕರೆಂಬ ಶ್ರಮಜೀವಿಗಳಲ್ಲ ಬದಲಾಗಿ, ಅಯೋಧ್ಯೆಯಲ್ಲಿರುವ ಶ್ರೀ ರಾಮ ದೇಗುಲದ ಹುಂಡಿಗೆ ಕಣ್ಣುಮುಚ್ಚಿಕೊಂಡು ಹಣ ಹಾಕುವ ಅಂಧ ಭಕ್ತರು ಮಾತ್ರ.
ಮಾಹಿತಿ ಸೌಜನ್ಯ- ಡೌನ್ ಟು ಅರ್ಥ್ (ಇಂಗ್ಲೀಷ್ ಪಾಕ್ಷಿಕ ಪತ್ರಿಕೆ)
( ಆಗಸ್ಟ್ ತಿಂಗಳ ಹೊಸತು ಮಾಸಪತ್ರಿಕೆಯ ಬಹುಸಂಸ್ಕೃತಿ ಅಂಕಣ ಬರಹ)

ಶನಿವಾರ, ಜುಲೈ 18, 2026

ನಾಡಗೀತೆ ಅಪಮಾನ ಸಲ್ಲದು.




ರಾಷ್ಟ್ರಕವಿ ಕುವೆಂಪು ರಚಿಸಿದ ‘’ಜಯ ಭಾರತ ಜನನಿಯೆ ತನುಜಾತೆ’’ ಎಂಬ ಕವಿತೆಯು ಕರ್ನಾಟಕ ಸರ್ಕಾರದ ನಾಡಗೀತೆಯಾದ ನಂತರದ ವರ್ಷಗಳಲ್ಲಿ ಅದರ ಕುರಿತು ವಿವಾದಗಳು ಮತ್ತೆ ಮತ್ತೆ ತಲೆ ಎತ್ತುತ್ತಿವೆ. ವಾಸ್ತವವಾಗಿ ಕುವೆಂಪು ಅವರು ಬರೆದ ಈ ಗೀತೆಯು ನಾಡಗೀತೆಯ ಉದ್ದೇಶಕ್ಕಾಗಿ ಬರೆದ ಕವಿತೆಯಲ್ಲ. ಈ ಕವಿತೆಯ ಕುರಿತಾಗಿ ಅಮೂಲಾಗ್ರ ಚರಿತ್ರೆಯನ್ನು ನನ್ನ ಆತ್ಮೀಯ ಮಿತ್ರರಾದ ಹಾಗೂ ಕುಪ್ಪಳ್ಳಿಯಲ್ಲಿ ಹಂಪಿ ಕನ್ನಡ ವಿ.ವಿ.ಯ ಕುವೆಂಪು ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ಕೆ.ಸಿ.ಶಿವಾರೆಡ್ಡಿಯವರು ಅರವತ್ತೆಂಟು ಪುಟಗಳಲ್ಲಿ ‘’ನಾಡಗೀತೆ: ಬುದ್ದನನ್ನು ಬದ್ಧನನ್ನಾಗಿ ಮಾಡುವುದೆ?’’ ಎಂಬ ಶಿರ್ಷಿಕೆಯ ಕೃತಿಯು ಮುದ್ರಣಕ್ಕೆ ಅಣಿಯಾಗಿದ್ದು, ಮುಂದಿನವಾರ ನಾಡಿನೆಲ್ಲೆಡೆ ದೊರೆಯಲಿದೆ.
ಈ ಕೃತಿಯಲ್ಲಿ ಕುವೆಂಪು 1924 ರಲ್ಲಿ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿದ ಈ ಕವಿತೆಗೆ ಅನೇಕ ವರ್ಷಗಳ ಕಾಲ ತಿದ್ದುಪಡಿ ಮಾಡಿದ ಇತಿಹಾಸವೂ ಇದೆ. ಜೊತೆಗೆ ಕೊಳಲು ಎಂಬ ಕವನ ಸಂಕಲನದಲ್ಲಿ ಸೇರ್ಪಡೆಯಾಗಿದ್ದ ಈ ಕವಿತೆಯನ್ನು ಕುವೆಂಪು ಅವರು ನಾಲ್ಕನೇ ಮುದ್ರಣದ ಸಂದರ್ಭದವರೆಗೆ ಅನೇಕ ಬಾರಿ ತಿದ್ದಿದ್ದಾರೆ. ಈ ಜಗತ್ತಿನಲ್ಲಿ ಒಂದು ಕೃತಿಯನ್ನು ತಿದ್ದುವ ಅವಕಾಶ ಇರುವುದು ಸಾಹಿತ್ಯದ ಸೃಷ್ಟಿಕರ್ತನಿಗೆ ಮಾತ್ರ ವೇ ಹೊರತು, ಬೇರೆ ಯಾರಿಗೂ ಇಲ್ಲಎಂಬ ಕನಿಷ್ಠ ಪ್ರಜ್ಞೆ ನಮ್ಮೆಲ್ಲರಿಗೂ ಇರಬೇಕು.
ಮೂಲ ಕೃತಿಯಲ್ಲಿ ಇದ್ದ ಬೌದ್ದರುದ್ಯಾನ ಎಂಬ ಪದವನ್ನು ಸೇರ್ಪಡೆ ಮಾಡುವುದು ತಿದ್ದುಪಡಿ ಎನಿಸಿಕೊಳ್ಳಲಾಗದು. ಕವಿತೆಯ ಯಾವುದೋ ಚರಣ ಅಥವಾ ಸಾಲಿನಲ್ಲಿರುವ ಶಬ್ದವನ್ನು ತಂದು ಮತ್ತೊಂದು ಸಾಲಿಗೆ ಸೇರಿಸುವುದಕ್ಕೆ ನಮಗೆ ಯಾವುದೇ ಹಕ್ಕು ಅಥವಾ ನೈತಿಕತೆ ಇಲ್ಲ. ಇದು ರಾಷ್ಟ್ರಕವಿಯ ಕವಿತೆಯನ್ನು ತಿರುಚಿದ ಅಪರಾದ ಎನಿಸಿಕೊಳ್ಳುತ್ತದೆ.
ಕವಿತೆಯಲ್ಲಿರುವ ಕೆಂಪೇಗೌಡ, ಟಿಪ್ಪು, ಹೈದರ ಎಂಬ ಶಬ್ದಗಳನ್ನು ನಾಡಗೀತೆಯಲ್ಲಿ ಸೇರಿಸಿ ಎಂದು ಇತರೆ ಸಮುದಾಯಗಳು ಬೇಡಿಕೆ ಇಟ್ಟರೆ, ಸರ್ಕಾರ ತಿದ್ದುಪಡಿ ಮಾಡಲು ಸಿದ್ಧವಿದೆಯಾ? ಈ ಪ್ರಶ್ನೆಗೆ ಕನ್ನಡ ಜನತೆಗೆ ಸರ್ಕಾರ ಉತ್ತರಿಸಬೇಕಾಗುತ್ತದೆ. 2004 ರಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಕಿತ್ತೂರು ಚೆನ್ನಮ್ಮ ಹೆಸರಿಲ್ಲ ಎಂದು ಆಕ್ಷೇಪಣೆ ಎತ್ತಿದ್ದರು. ಈ ಬಾರಿಯ ತಜ್ಞರ ಸಭೆಯಲ್ಲಿಯೂ ಕೂಡಾ ಅಕ್ಕಮಹಾದೇವಿ ಮತ್ತು ಕಿತ್ತೂರು ಚೆನ್ನಮ್ಮ ಹೆಸರನ್ನು ಸೇರಿಸಬೇಕೆಂದು ಇಬ್ಬರು ಸದಸ್ಯರು ಆಗ್ರಹಪಡಿಸಿದ್ದರು.
ಬೌದ್ದ ಧರ್ಮಗಳ ಗುರುಗಳು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಬೌದ್ದರುದ್ಯಾನ ಪದವನ್ನು ಸೇರಿಸಲು ಹೊರಟಿರುವ ಸರ್ಕಾರಕ್ಕೆ ನನ್ನ ಮೂಲಭೂತ ಪ್ರಶ್ನೆ ಹೀಗಿದೆ.
ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಸರ್ಕಾರವು ಅಸ್ತಿತ್ವಕ್ಕೆ ಬಂದ ಸಂಧರ್ಭದಲ್ಲಿ ಹಿಂದೂ ಧರ್ಮಗುರುಗಳ ಬೇಡಿಕೆಯ ಹಿನ್ನೆಲೆಯಲ್ಲಿ ನಾಡಗೀತೆಯಲ್ಲಿರುವ ‘’ ಕ್ರೈಸ್ತ ಮುಸಲ್ಮಾನ’’ ಎಂಬ ಶಬ್ದವನ್ನು ತೆಗೆದು ಹಾಕಿದರೆ, ಇದನ್ನು ಪ್ರಶ್ನಿಸುವ ನೈತಿಕ ಹಕ್ಕು ನಿಮಗೆ ಇರುತ್ತದಯೇ?
ನಾಡಗೀತೆ ಕುರಿತಾದ ಪ್ರಶ್ನೆಗಳಿಗೆ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ನೀಡಿರುವ ಪತ್ರಿಕ್ರಿಯೆಗಳನ್ನು ಓದಿದರೆ, ಗೆದ್ದಲು ಕಟ್ಟಿರುವ ನಮ್ಮ ಚಿತ್ತಕ್ಕೆ ಹೊಸ ರೂಪ ಬರಬಲ್ಲದು. ತೇಜಸ್ವಿಯವರ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.


ಒಂದು-
ಎಲ್ಲ ಜಾತಿ ಪಂಥಗಳೂ ತಮ್ಮ ತಮ್ಮ ಮತಾಚಾರ್ಯರಿಗೆ ನಾಡಗೀತೆಯಲ್ಲಿ ಜಾಗ ದೆÆರಕಬೇಕೆಂದು ಆಗ್ರಹಪಡಿಸಿದರೆ ನಾಡಗೀತೆ, ಜಾತಿ ಮತ್ತು ಮತಾಚಾರ್ಯರ ದೊಡ್ಡ ಪಟ್ಟಿಯಾಗುತ್ತದೆಯೇ ವಿನಃ ನಾಡಗೀತೆಯಾಗುವುದಿಲ್ಲ.
ಕವಿ ತನ್ನ ಔಚಿತ್ಯಪ್ರಜ್ಞೆ ಬಳಸಿ ಗೀತೆಯ ಛಂದಸ್ಸಗೀತಕ್ಕೂ ಲಯಕ್ಕೂ ಅನುಗುಣವಾದಂಥ ಹಲವು ಹೆಸರುಗಳನ್ನು ಸೇರಿಸಿರಬಹುದು. ಹಲವನ್ನು ಸೇರಿಸಿಲ್ಲದಿರಬಹುದು. ಮೀಸಲಾತಿ ಪಟ್ಟಿಯಲ್ಲಿ ತಮ್ಮ ಜಾತಿಯನ್ನೂ ಸೇರಿಸಿ ಎಂದು ಎಲ್ಲ ಜಾತಿಯವರೂ ಆಗ್ರಹಪಡಿಸುವಂತೆ ನಾಡಗೀತೆಯಲ್ಲೂ ಸೇರಿಸಬೇಕೆಂದು ಹೇಳುವುದು ಸರಿಯಲ್ಲ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು, ಸಂ. 14, ಪು. 341
ಪ್ರತಿಕ್ರಿಯೆ-ಎರಡು
ನಾಡಗೀತೆಯನ್ನು ನಾವು ಆಯಾ ಕಾಲದ ಮತೀಯ ಮತ್ತು ರಾಜಕೀಯಒತ್ತಡಗಳಿಗೆ ಅನುಗುಣವಾಗಿ ತಿದ್ದುತ್ತ ಹೋಗುವುದು ಬಹಳ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಕುವೆಂಪುರವರೇ ತಿದ್ದಿಕೊಟ್ಟಿದ್ದರು ಎಂಬುದರಿಂದ ಹಿಡಿದು, ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದರು ಎಂಬ ಶ್ರೀ ಜಿ. ನಾರಾಯಣರವರ ಹೇಳಿಕೆಯವರೆಗೆ ನಾನಾ ಬಗೆಯ ಪ್ರತಿಪಾದನೆಯನ್ನು ಹಲವರು ಮಂಡಿಸಿದ್ದಾರೆ.
ನಾನು ಕಳೆದ ಮೂರು ವರ್ಷಗಳಿಂದ ಈ ತಿದ್ದುಪಾಡಿನ ಬಗ್ಗೆ ಕುವೆಂಪುರವರ ಸಮ್ಮತಿ ಇತ್ತೆನ್ನುವುದಕ್ಕೆ ಏನಾದರೂ ಕನಿಷ್ಠ ದಾಖಲೆಗಳಾದರೂ ಇದೆಯೇ ಎಂದು ವ್ಯಾಪಕವಾಗಿ ಅಭ್ಯಾಸ ಮತ್ತು ತನಿಖೆ ಮಾಡಿದ್ದೇನೆ. ಯಾವುದೇ ನಂಬಲರ್ಹ ದಾಖಲೆಯೂ ಇಲ್ಲವೆಂದು ವಿಷಾದದದಿಂದ ನಾನು ತೀರ್ಮಾನಕ್ಕೆ ಬಂದಿದ್ದೇನೆ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಜಗತ್ತು, ಸಂಪುಟ 14, ಪುಟ 285
ಪ್ರತಿಕ್ರಿಯೆ-ಮೂರು
ಕುವೆಂಪುರವರ ಯಾವ ಸ್ಪಷ್ಟ ಅನುಮತಿಯೂ ಇಲ್ಲದೆ ಯಾವುದೋ ಲೇಖನದಲ್ಲಿ ಉದ್ಧರಿಸಿರುವ ಪರಿಷತ್ ಪ್ರಕಟಿತ ಕವನದ ಆವೃತ್ತಿಯನ್ನು ಕುವೆಂಪುರವರ ಅಧಿಕೃತ ಆವೃತ್ತಿ ಎಂದು ಘೋಷಿಸಲು ಜನಗಳು ಒತ್ತಾಯ ಮಾಡಿದಂತೆಲ್ಲಾ ಇದನ್ನು ತಿದ್ದಲು, ಕಾನೂನು ಮಂತ್ರಿಗಳಿಗೆ ಪರವಾನಗಿ ಇದೆಯೇ?
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಾಡಗೀತೆಯೇ ಕುವೆಂಪು ಅವರ ಕವನದ ಅಧಿಕೃತ ಆವೃತ್ತಿ ಎಂದು ಚಂದ್ರೇಗೌಡರಂಥವರು ತುತ್ತೂರಿ ಊದುತ್ತಿದ್ದಾರೆ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು, ಪುಟ 402, ಸಂಪುಟ 14
ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಏನೆಂದರೆ, ನಿಮಗೆ ಹಲವು ಧರ್ಮ ಅಥವಾ ವ್ಯಕ್ತಿಗಳ ಹೆಸರು ಸೇರಿಸಬೇಕು ಎಂಬ ಇಚ್ಚೆ ಇದ್ದರೆ, ದಯವಿಟ್ಟು ಕುವೆಂಪು ನಾಡಗೀತೆಯನ್ನು ಕೈ ಬಿಟ್ಟು, ನಿಮಗೆ ಬೇಕಾದ ನಾಡಗೀತೆಯನ್ನು ಬರೆಯಿಸಿಕೊಳ್ಳುವುದರ ಮೂಲಕ ಅಳವಡಿಸಿಕೊಳ್ಳಿ. ಇದು ಕುವೆಂಪು ಅವರಿಗೆ ನೀವು ಮಾಡುವ ಅಪಮಾನವಲ್ಲ, ನೀವು ನೀಡಿದ ನಿಜವಾದ ಗೌರವವಾಗುತ್ತದೆ.

ಮಾಹಿತಿ ಸೌಜನ್ಯ- ಡಾ.ಕೆ.ಸಿ.ಶಿವಾರೆಡ್ಡಿ.ಬೆಂಗಳೂರು;
ಜಗದೀಶ್ ಕೊಪ್ಪ.

ಗುರುವಾರ, ಜುಲೈ 16, 2026

ಕೆ.ವಿ. ಸುಬ್ಬಣ್ಣನವರ ನೆನಪುಗಳು.



  ಹೆಗ್ಗೋಡು ಎಂದರೆ, ನೀನಾಸಂ, ನೀನಾಸಂ ಎಂದರೆ, ಕೆ.ವಿ. ಸುಬ್ಬಣ್ಣ ಎಂದು ಇಡೀ ಕನ್ನಡನಾಡಿಗೆ ಪರಿಚಯವಾಗಿದ್ದ, ಸಾಂಸ್ಕೃತಿಕ ಚಿಂತಕ, ನಾಟಕಕಾರ ಮತ್ತು ಅನುವಾದಕ ಕೆ.ವಿ. ಸುಬ್ಬಣ್ಣನವರು. ನಮ್ಮನ್ನು ಅಗಲಿ, (2005 ರ ಜುಲೈ 16) ಇಂದಿಗೆ ಇಪ್ಪತ್ತೊಂದು ವರ್ಷವಾದರೂ ಸದಾ ತಮ್ಮ ವಿಭಿನ್ನ ಆಸಕ್ತಿಗಳ ಕಣಜವಾಗಿ ನಮ್ಮನ್ನು ಕಾಡುತ್ತಲೇ ಇದ್ದಾರೆ. ಬಹುಶಃ ನನಗೆ ತಿಳಿದ ಮಟ್ಟಿಗೆಅರವತ್ತರ ದಶಕದಲ್ಲಿ ಮೈಸೂರು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ, ಉಪನ್ಯಾಸಕರ ಹುದ್ದೆಗೆ ಆಸಕ್ತಿ ತೋರಿಸದೆ, ಕೃಷಿ ಲೋಕದತ್ತ ತೆರಳಿದವರು ಪೂರ್ಣಚಂದ್ರ ತೇಜಸ್ವಿ ಮತ್ತು ಕೆ.ವಿ. ಸುಬ್ಬಣ್ಣನವರು ಮಾತ್ರ. ಈ ಹಿರಿಯ ಚೇತನಗಳು ಮಲೆ ಮತ್ತು ಮಳೆನಾಡಿನಲ್ಲಿ ಕೃಷಿ ಲೋಕದಲ್ಲಿದ್ದುಕೊಂಡು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಸಾಗರದಿಂದ ಸುಮಾರು ಹದಿನೈದು ಕಿಲೊಮೀಟರ್ ದೂರದಲ್ಲಿರುವ ಹೆಗ್ಗೋಡು ಎಂಬ ಪುಟ್ಟಗ್ರಾಮದಲ್ಲಿ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡು, ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅವರು ಮಾಡಿದ ದಾಖಲೆಗಳು ಹೆಗ್ಗೋಡಿನತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದವು. ಹೆಗ್ಗೋಡಿನಲ್ಲಿ ಅವರು ಸ್ಥಾಪಿಸಿದ ನೀಲಕಂಠೇಶ್ವರ ನಾಟ್ಯ ಸಂಘವು ನೀನಾಸಂ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು. ತಮ್ಮ ಪುತ್ರ ಅಕ್ಷರ ಇವರ ಹೆಸರಿನಲ್ಲಿ ಸ್ಥಾಪಿಸಿದ ಅಕ್ಷರ ಪ್ರಕಾಶನವು ಕನ್ನಡದ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಯಿತು.. ಪ್ರಕಾಶನ ಸಂಸ್ಥೆಗಾಗಿ, ನಿನಾಸಂ ನಾಟಕ ಮಂದಿರದ ಪಕ್ಕದಲ್ಲಿ ಸರಸ್ವತಿ ಮುದ್ರಣಾಲಯವನ್ನು ಸ್ಥಾಪಿಸಿ, ಐದಾರು ಮಂದಿಗೆ ಶಾಶ್ವತ ಉದ್ಯೋಗ ದೊರಕುವಂತೆ ಮಾಡಿದ್ದರು. ನಿನಾಸಂ ನ ನಾಟಕಗಳು, ಮತ್ತು ಅಕ್ಷರ ಪ್ರಕಾಶನದ ಪ್ರಕಟಣೆಗಳು ಅಲ್ಲಿಯೇ ಮುದ್ರಣವಾಗುತ್ತಿದ್ದವು.

ನನಗೆ ಎಂಬತ್ತರ ದಶಕದಲ್ಲಿ, ಬೆಂಗಳೂರಿನಲ್ಲಿ ಯು.ಆರ್.ಅನಂತಮೂರ್ತಿಯವರ ಪರಿಚಯವಾದ ಕೆ.ವಿ. ಸುಬ್ಬಣ್ಣನವರ ಬಹುಮುಖಿ ಪ್ರತಿಭೆಯ ಕುರಿತು ಆಸಕ್ತಿಯ ಜೊತೆಗೆ ಅಪಾರ ಗೌರವವಿತ್ತು. ಅನಂತಮೂರ್ತಿ ಮತ್ತು ಸುಬ್ಬಣ್ಣನವರ ಬಳಿ ನಾನು ಕಂಡ ಒಂದೇ ರೀತಿಯ ಗುಣವೆಂದರೆ, ಎಲ್ಲಾ ಬಗೆಯ ಟೀಕೆಗಳನ್ನು ನಗು ಮುಖದಿಂದ ಸ್ವೀಕರಿಸಿ, ಶಾಂತವಾಗಿ ಉತ್ತರಿಸುತ್ತಿದ್ದರು. ನನಗೆ ಅಕ್ಷರ ಪ್ರಕಾಶನದ ಬಗ್ಗೆ ಒಂದು ರೀತಿಯಲ್ಲಿ ಸಾತ್ವಿಕ ಸಿಟ್ಟಿತ್ತು. ನಾನು ಅದನ್ನು ಅಗ್ರಹಾರದ ಪ್ರಕಾಶನ ಎಂದು ಕರೆಯುತ್ತಿದ್ದೆ. ಏಕೆಂದರೆ, ಕೇವಲ ಪ್ರಸಿದ್ಧ ಬ್ರಾಹ್ಮಣ ಬರಹಗಾರರ ಕೃತಿಗಳು ಮಾತ್ರ ಪ್ರಕಟವಾಗುತ್ತಿದ್ದವು. 1988 ರಲ್ಲಿ ಜೋಗದ ಜಲಪಾತ ನೋಡಲು ಹೋಗಿದ್ದ ನಾನು, ಸಾಗರದಲ್ಲಿ ಉಳಿದುಕೊಂಡಿದ್ದೆ. ಬೆಳಿಗ್ಗೆ ಎದ್ದು ಹೆಗ್ಗೋಡಿಗೆ ಹೋಗಿ ಇಡೀ ದಿನ ಸುಬ್ಬಣ್ಣನರ ಜೊತೆ ಕಾಲ ಕಳೆದಿದ್ದೆ. ಈ ಸಂದರ್ಭದಲ್ಲಿ ನನ್ನ ಅಸಮಾಧಾನವನ್ನು ಅವರೆದುರು ಹೊರಹಾಕಿದ್ದೆ.
ಆ ದಿನ ನನ್ನನ್ನು ಮುದ್ರಣಾಲಯಕ್ಕೆ ಕರೆದೊಯ್ದು, ಅಲ್ಲಿನ ಕೆಲಸಗಾರರು, ನಡೆಯುತ್ತಿದ್ದ ಪುಸ್ತಕಗಳ ಮುದ್ರಣ ಮತ್ತು ಬೈಂಡಿಂಗ್ ಕೆಲಸ ತೋರಿಸಿ, ಇವರ ಹೊಟ್ಟೆ ತುಂಬಿಸುವುದು ನಮ್ಮ ಆದರ್ಶಗಳಲ್ಲ ಕಣೋ ಎಂದು ನುಡಿದಿದ್ದರು. ನಂತರ, ನಾಟ್ಯಮಂದಿರದ ಮುಂದೆ ಇದ್ದ ಕಿರಾಣಿ ಅಂಗಡಿ ಬಳಿ ಕರೆದೊಯ್ದು, ಅಲ್ಲಿನ ಜಗುಲಿಯ ಮೇಲೆ ಕಾಲು ಮೇಲೆ ಕಾಲು ಹಾಕಿಕೊಂಡು ಗೋಡೆಗೆ ಒರಗಿ ಕುಳಿತು, ಎಲೆ ಅಡಿಕೆ ಜಗಿಯುತ್ತಾ, ಪ್ರಕಾಶನ ಸಂಸ್ಥೆ ಮತ್ತು ನಿನಾಸಂ ಸಂಸ್ಥೆಯ ಉದ್ಯೋಗಿಗಳಿಗೆ ನೆಮ್ಮದಿ ಒದಗಿಸಲು, ನಮ್ಮೊಳಗೆ ಒಂದಿಷ್ಟು ವ್ಯವಹಾರಿಕ ಬುದ್ದಿಯೂ ಇರಬೇಕು ಜಗದೀಶಾ ಎಂದು ಶಾಂತವಾಗಿ ನುಡಿದಿದ್ದರು.

ಎಂಬತ್ತೈದರ ವೇಳೆಗೆ ಕರ್ನಾಟಕಕ್ಕೆ ಕಂಪ್ಯೂಟರ್, ಡಿ.ಟಿ.ಪಿ. ವ್ಯವಸ್ಥೆ ಬಂದಿತ್ತು. ಅವರಿಗೆ ಪ್ರಕಾಶನದ ಪುಸ್ತಕಗಳನ್ನು ಆಫ್ ಸೆಟ್ ಮುದ್ರಣ ಮಾಡಿಸುವ ಒಲವಿರಲಿಲ್ಲ. ನಾನು ಪದೇ ಪದೆ ಈ ಕುರಿತು ಹೇಳುತ್ತಿದ್ದೆ. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ, ಅವರನ್ನು ಚಾಮರಾಜಪೇಟೆಯ ಲಕ್ಷ್ಮಿ ಮುದ್ರಣಾಲಯಕ್ಕೆ ಕರೆದುಕೊಂಡು ಹೋಗಿ ಹೊಸ ವ್ಯವಸ್ಥೆಯನ್ನು ತೋರಿಸಿದ್ದೆ. ನಿಮ್ಮ ಪ್ರೆಸ್ ಕೆಲಸಗಾರರಿಗೆ ಬೇರೆ ಕೆಲಸ ಕೊಡಿ ಸಾರ್, ಪುಸ್ತಕಗಳು ಅಚ್ಚುಕಟ್ಟಾಗಿ ಮುದ್ರಣವಾಗಲಿ ಎಂದು ಹೇಳಿದ್ದೆ. ಕೊನೆಗೂ ಸುಬ್ಬಣ್ಣ ಒಪ್ಪಿದರು. ನನಗೆ ನೆನಪಿರುವಂತೆ, ಯು.ಆರ್. ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಆಪ್ ಸೆಟ್ ಮುದ್ರಣ ಮಾಡಿಸಿದರು. ದೆಹಲಿಯಲ್ಲಿ ವಾಸವಾಗಿದ್ದ ಶಾ.ಬಾಲುರಾವ್ ಅವರನ್ನು ನನಗೆ ಪರಿಚಯ ಮಾಡಿಕೊಟ್ಟು, ಅವರ ಬ್ರೆಕ್ಟ್ ನ ಕವಿತೆಗಳ ಕೃತಿಯನ್ನು ಉಡುಗೊರೆಯಾಗಿ ಕೊಡಿಸಿದ್ದರು. ಶಾ.ಬಾಲುರಾವ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದವರು ಎಂಬುದು ಅಲ್ಲಿಯವರೆಗೂ ನನಗೆ ತಿಳಿದಿರಲಿಲ್ಲ

ನಾನು 1989 ರಲ್ಲಿ ವಿವಾಹವಾದ ನಂತರ ವಿದ್ಯಾಭ್ಯಾಸ ಮುಂದುವರಿಸುವ ಉದ್ದೇಶದಿಂದ, ಪತ್ನಿಯನ್ನು ಊರಿನಲ್ಲಿರಿಸಿ, ಮೈಸೂರು ವಿ.ವಿ.ಗೆ ಎಂ.ಎ. ಗೆ ಸೇರಿದ್ದೆ. ಸ್ನಾತಕೋತ್ತರ ಪದವಿ ಮುಗಿದ ನಂತರ ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಗೆ ಸೇರ್ಪಡೆಯಾಗಿದ್ದೆ. ಕೊಪ್ಪದ ನನ್ನ ಮನೆಗೆ ದೂರವಾಣಿ ಸಂಪರ್ಕವಿತ್ತು. 1993 ರ ಸೆಪ್ಟಂಬರ್ ತಿಂಗಳಲ್ಲಿ ಒಂದು ರಾತ್ರಿ ಫೋನ್ ಮಾಡಿದ ಸುಬ್ಬಣ್ಣನವರು, ಜಗದೀಶಾ, ನೀನು ಈ ವರ್ಷ ಅಕ್ಟೋಬರ್ ತಿಂಗಳ ನೀನಾಸಂ ಶಿಬಿರಕ್ಕೆ ಬಾರೋ, ದೆಹಲಿಯ ಆಶೀಷ್ ನಂದಿ ಮತ್ತು ಬೆಂಗಳೂರಿನ ಡಿ.ಆರ್.ನಾಗರಾಜ್ ಅವರ ವಿಶೇಷ ಉಪನ್ಯಾಸಗಳಿವೆ. ಶಾ.ಬಾಲುರಾವ್ ಕೂಡಾ ಪತ್ನಿಯ ಜೊತೆಗೆ ಹೆಗ್ಗೋಡಿಗೆ ಬರ್ತಿದ್ದಾರೆ. ಅನಂತಮೂರ್ತಿ ಕೂಡಾ ಒಂದು ವಾರ ಇಲ್ಲೇ ಇರ್ತಾರೆ’’ ಎಂದು ತಿಳಿಸಿದಾಗ, ಮರು ಮಾತಿಲ್ಲದೆ, ಆ ವರ್ಷ ನೀನಾಸಂ ಶಿಬಿರದಲ್ಲಿ ಭಾಗವಹಿಸಿದ್ದೆ.

ಆ ವೇಳೆಗಾಗಲೇ, ಅನಂತಮೂರ್ತಿಯವರು ಕೇರಳದ ತಿರುವನಂತಪುರಂ ಮಹಾತ್ಮಗಾಂಧಿ ವಿ.ವಿ. ಉಪಕುಲಪತಿಯಾಗಿ ಸೇವೆ ಸಲ್ಲಿಸಿ, ಮಣಿಪಾಲದ ಟಿ.ಎಂ. ಪೈ ಪ್ರತಿಷ್ಟಾನದ ಮಹಾತ್ಮಗಾಂಧಿ ಪೀಠದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಮಣಿಪಾಲ್ ನಲ್ಲಿ ವಾಸವಾಗಿದ್ದರು. ಹೆಗ್ಗೋಡಿನಲ್ಲಿ ನನ್ನನ್ನು ನೋಡಿದಾಕ್ಷಣ, ಓಹೋ ನೀನು ಬಂದಿದ್ದೀಯಾ? ಎಂದು ಕೇಳಿದಾಗ, ಸುಬ್ಬಣ್ಣನವರು, ಅನಂತಮೂರ್ತಿಯವರಿಗೆ, ‘’ ಅನಂತು ನೀನು ಭವ ಕಾದಂಬರಿ ಬರೆಯಲು ನೇಪಾಳದ ಕಠ್ಮಂಡು ವರೆಗೆ ಹೋಗಬೇಕಿರಲಿಲ್ಲ. ಅಂತಹ ಕೆಟ್ಟ ಕಾದಂಬರಿಯನ್ನು ಹೆಗ್ಗೋಡಿನಲ್ಲಿ ಕುಳಿತು ಬರೆಯಬಹುದಿತ್ತು’’ ಎಂದು ಜಗದೀಶ ಹೇಳ್ತಾ ಇದ್ದ ಕಣೋ’’ ಎನ್ನುತ್ತಿದ್ದಂತೆ, ಅನಂತಮೂರ್ತಿಯವರ ಪತ್ನಿ ಎಸ್ತರ್ ಮೇಡಂ ಜೋರಾಗಿ ನಕ್ಕುಬಿಟ್ಟರು. ಅವರಿಗೂ ಕೂಡಾ ಆ ಕಾದಂಬರಿ ಇಷ್ಟವಾಗಿರಲಿಲ್ಲ.

ಸುಬ್ಬಣ್ಣನರ ಮಾತಿಗೆ ಮನಸಾರೆ ನಕ್ಕು ಅನಂತಮೂರ್ತಿಯವರು, ‘’ ಇವನು ಮಂಡ್ಯದ ನಡೆದಾಡುವ ನಾಡ ಬಾಂಬ್ ಕಣೋ, ಎನ್ನುತ್ತಾ, 1980 ರ ಗಿರಿಯವರ ಗತಿ ಸ್ಥಿತಿ ಕಾದಂಬರಿ ಕುರಿತು ಬೆಂಗಳೂರು ಸೆಂಟ್ರಿಲ್ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯುತ್ತಿದ್ದಾಗ, ನನ್ನ ಮೇಲೆ ಮತ್ತು ನವ್ಯ ಸಾಹಿತ್ಯದ ಮೇಲೆ ಕೋಗಾಡಿದ್ದ ಕಣೊ, ಎಂದು ಹೇಳುತ್ತಾ ನಗಾಡಿದ್ದರು. ಈ ಕಾರಣದಿಂದಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಕಟು.ಟೀಕೆ ಮತ್ತು ವಿಮರ್ಶೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದ ಕೆ.ವಿ.ಸುಬ್ಬಣ್ಣ ಮತ್ತು ಅನಂತಮೂರ್ತಿಯವರ ಬಗ್ಗೆ ಇಂದಿಗೂ ನನಗೆ ಅಪಾರ ಗೌರವವಿದೆ.

ಕೆ.ವಿ.ಸುಬ್ಬಣ್ಣನವರು ಪೋರ್ಡ್ ಪೌಂಡೇಶನ್ ವತಿಯಿಂದ ಹಣ ಪಡೆದ ಕಾರಣದಿಂದಾಗಿ 1980 ಮತ್ತು 90 ರ ದಶಕದಲ್ಲಿ ಬಂಡಾಯ ಸಾಹಿತಿಗಳಿಂದ ವ್ಯಾಪಕ ಟೀಕೆಯನ್ನು ಎದುರಿಸಿದರು. ಆದರೆ, ಅವರು ಆ ಹಣವನ್ನು ಮತ್ತು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುವ ಫಿಲಿಪೈನ್ಸ್ ನ ಮ್ಯಾಗ್ಸಸೆ ಪ್ರಶಸ್ತಿಯ ಹಣವನ್ನು ನೀನಾಸಂ ಕೇಂದ್ರದ ಅಭಿವೃದ್ಧಿಗೆ ಬಳಸಿರುವುದನ್ನು ಕಣ್ಣಾರೆ ನೋಡಿದಾಗಲೇ ನಮಗೆ ಅರ್ಥವಾಗುವುದು. ಅಂತಹ ಬದ್ಧತೆಯ ಬದುಕು ಕೆ.ವಿ.ಸುಬ್ಬಣ್ಣನವರದು. ಅವರ ಅಭಿರುಚಿಗಳು ವಿಶೇಷವಾದವು ಸುಬ್ಬಣ್ಣನವರ ಸಂಗ್ರಹದಲ್ಲಿ ಐವತ್ತಕ್ಕೂ ಹೆಚ್ಚು ಜಗತ್ತಿನ ಶ್ರೇಷ್ಠ ಸಿನಿಮಾ ಸಂಗ್ರಹಗಳಿದ್ದವು. ನಾನು ಸತ್ಯಜಿತ್ ರಾಯ್ ಅವರ ಪಥೇರ್ ಪಾಂಚಾಲಿ ಹಾಗೂ ಇಂಗ್ಲೀಷ್ ಸಿನಿಮಾ ಬೈಸಿಕಲ್ ಥೀವ್ಸ್ ಸಿನಿಮಾಗಳನ್ನು ಅಲ್ಲಿಯೇ ನೋಡಿ ಪ್ರಭಾವಿತನಾಗಿದ್ದೆ.

ಶಿಬಿರದಲ್ಲಿ ಇದ್ದಾಗ, ನಾನು ಪ್ರತಿದಿನ ಸಂಜೆ ಮಾಂಸಹಾರ ಊಟಕ್ಕಾಗಿ. ಸಾಗರಕ್ಕೆ ಹೋಗುತ್ತಿದ್ದೆ ನಾಟಕ ಮತ್ತು ನೃತ್ಯ ಕುರಿತಂತೆ ಆಸಕ್ತಿ ಇರಲಿಲ್ಲ. ಒಂದು ದಿನ ಸುಬ್ಬಣ್ಣನವರು ನನ್ನನ್ನುಕರೆದು ಜಗದೀಶಾ, ನೀನು ಈ ದಿನ ಎಲ್ಲಿಯೂ ಹೋಗಬೇಡ. ತೇಜಸ್ವಿಯವರ ‘’ ಕಿರಗೂರಿನ ಗಯ್ಯಾಳಿಗಳು’’ ನಾಟಕವಿದೆ ಎಂದು ಹೇಳಿದಾಗ, ಆ ರಾತ್ರಿ ನೀನಾಸಂ ರಂಗಮಂದಿರದಲ್ಲಿ ನಾಟಕ ನೋಡಿ ವಿಸ್ಮಯಗೊಂಡೆ. ಒಂದು ಕೃತಿಯನ್ನು ಹೀಗೂ ನಾಟಕ ರೂಪಕ್ಕೆ ಇಳಿಸಬಹುದೆಂದು ಆ ದಿನ ನನಗೆ ಮನವರಿಕೆಯಾಯಿತು. ಇಂದಿಗೂ ನನಗೆ ಆಶ್ಚರ್ಯಕರ ಸಂಗತಿ ಎಂದರೆ, ತೇಜಸ್ವಿ, ಸುಬ್ಬಣ್ಣ ಇಬ್ಬರೂ ನಗರ ಸಂಸ್ಕೃತಿಯನ್ನು ತೊರೆದು, ತಾವಿದ್ದ ಸ್ಥಳವನ್ನೇ ಸೃಜಶೀಲತೆಯ ಕೇಂದ್ರವನ್ನಾಗಿ ಮಾಡಿಕೊಂಡದ್ದು ಸಾಮಾನ್ಯ ವಿಷಯವಲ್ಲ.

ತೇಜಸ್ವಿಯವರು ಮೂಡಿಗೆರೆಯ ತೋಟದಲ್ಲಿ ಕುಳಿತು, ಕರ್ವಾಲೋ, ಕಾಡು ಮತ್ತು ಕ್ರೌರ್ಯ ಜುಗಾರಿ ಕ್ರಾಸ್, ಚಿದಂಬರರಹಸ್ಯ, ಮಾಯಾಲೋಕ ಕಾದಂಬರಿಗಳು ಮತ್ತು ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಹುಲಿಯೂರಿನ ಸರಹದ್ದು ಕಥಾ ಸಂಕಲನಗಳು ಸೇರಿದಂತೆ ಅನುವಾದವೂ ಸೇರಿದಂತೆ ಹಲವಾರು ಕೃತಿಗಳನ್ನು ಬರೆದರು. ಕೆ.ವಿ.ಸುಬ್ಬಣ್ಣನವರು ಕುವೆಂಪುಗೆ ಪುಟ್ಟ ಕನ್ನಡಿ ಮತ್ತು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಎರಡು ಮಹತ್ವದ ಕೃತಿಗಳ ಜೊತೆಗೆ ಅಸಂಖ್ಯಾತ ಸಂಸ್ಕೃತ ಮತ್ತು ಗ್ರೀಕ್, ನಾಟಕಗಳು ಸೇರಿದಂತೆ, ಜಗತ್ತಿನ ಅತ್ಯುತ್ತಮ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ನೀನಾಸಂ ಮೂಲಕ ತಿರುಗಾಟ ಕಾರ್ಯಕ್ರಮದ ಅಡಿಯಲ್ಲಿ ಇಡೀ ಕರ್ನಾಟಕಕ್ಕೆ ಪರಿಚಯಿಸಿದರು. ಇಂದು ಕರ್ನಾಟಕದಲ್ಲಿ ನೂರಾರು ರಂಗಭೂಮಿಯ ಕಲಾವಿದರು, ರಂಗಕರ್ಮಿಗಳು ಉದಯವಾಗಲು ಕೆ.ವಿ.ಸುಬ್ಬಣ್ಣ ಅವರ ನೀನಾಸಂ ಸಂಸ್ಥೆ ಕಾರಣವಾಗಿದೆ.

ಓರ್ವ ವ್ಯಕ್ತಿಯನ್ನು ಜಾತಿ ಅಥವಾ ಧರ್ಮದ ಗೂಟಕ್ಕೆ ಬಿಗಿದು ನೋಡುವುದರ ಬದಲು ಆ ವ್ಯಕ್ತಿಯ ಸೃಜನಶೀಲತೆಯನ್ನು ಮತ್ತು ಸಾಧನೆಯನ್ನು ಮುಕ್ತವಾಗಿ ವ್ಯಾಖ್ಯಾನಿಸುವ ಗುಣ ಇಂದಿನ ವರ್ತಮಾನದ ಜಗತ್ತಿಗೆ ತುರ್ತು ಅಗತ್ಯವಾಗಿದೆ. ನನ್ನ ಪಾಲಿಗೆ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರ ಜೊತೆಗೆ ಕೆ.ವಿ.ಸುಬ್ಬಣ್ಣ ಕೂಡಾ ಮುಖ್ಯರು. ಇವರೆಲ್ಲರಿಂದ ನನ್ನ ಬೌದ್ಧಿಕ ಪ್ರಜ್ಞೆ ವಿಸ್ತಾರಗೊಂಡಿದೆ. ಈಗ ಗಿರೀಶ್ ಕಾರ್ನಾರ್ಡ್ ಬಿ.ವಿ.ಕಾರಾಂತ ಮತ್ತು ಕೆ.ವಿ.ಸುಬ್ಬಣ್ಣನವರ ನಾಟಕಗಳ ಕುರಿತಾಗಿ ಮತ್ತು ರಂಗಭೂಮಿಗೆ ಅವರ ಕೊಡುಗೆ ಕುರಿತಾಗಿ ಗಂಭೀರ ಅಧ್ಯಯನ ನಡೆಯಬೇಕಿದೆ. ಕರ್ನಾಟಕದಲ್ಲಿರುವ ವಿ.ವಿ.ಗಳು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಾಗಿರುವ ಕಾರಣ ಅವುಗಳಿಂದ ಏನನ್ನೂ ನಿರೀಕ್ಷಿಸಲಾಗದು.
ಜಗದೀಶ್ ಕೊಪ್ಪ, ಮೈಸೂರು.

ಸೋಮವಾರ, ಜುಲೈ 6, 2026

ಲಾಹೋರ್ ಹೀರಾಮಂಡಿಯ ಗತ ವೈಭವದ ಇತಿಹಾಸ

 


ಅವಿಭಜಿತ ಭಾರತದ ಪ್ರಸಿದ್ದ ಸಾಂಸ್ಕೃತಿಕ ನಗರವಾಗಿದ್ದ ಪಾಕಿಸ್ತಾನದ ಲಾಹೋರ್ ನಗರವು ಇಂದಿಗೂ ಅದೇ ಗತವೈಭವವನ್ನು ಉಳಿಸಿಕೊಂಡಿದೆ. ಇಡೀ ಪಾಕಿಸ್ತಾನದಲ್ಲಿ ಸಾಹಿತ್ಯ ಸಂಗೀತ, ನೃತ್ಯಕಲೆಗಳ ತವರೂರು ಎಂಬಂತಿರುವ ಲಾಹೋರ್ ನಗರದಲ್ಲಿನ ಹೀರಾಮಂಡಿ ಎಂಬ ಪ್ರದೇಶವು ಹಲವು ಶತಮಾನಗಳಿಂದ ವಿವಿಧ ಕಾರಣಗಳಿಂದಾಗಿ ಪ್ರಸಿದ್ಧವಾಗಿದೆ. ದಿನದ ಇಪ್ಪತ್ತುನಾಲ್ಕು ಗಂಟೆಯೂ ಚಟುವಟಿಕೆಯಲ್ಲಿರುವ ಈ ಪ್ರದೇಶವು ಸದಾ ತನ್ನ ಬಣ್ಣ ಮತ್ತು ಚಹರೆಯನ್ನು ಬದಲಾಯಿಸುತ್ತದೆ. ಹಗಲಿನ ವೇಳೆಯಲ್ಲಿ ದವಸ ಧಾನ್ಯಗಳು, ತರಕಾರಿ ವ್ಯಾಪಾರ ನಡೆದರೆ, ಸಂಜೆಯಾಗುತ್ತಿದ್ದಂತೆ ಬಗೆ ಬಗೆಯ ಸಿಹಿತಿಂಡಿ ಹಾಗೂ ಆಹಾರ ಪದಾರ್ಥಗಳಿಗೆ ಹೆಸರಾಗಿದೆ. ಸಂಜೆಯ ವೇಳೆಗೆ ಕತ್ತಲಾದಂತೆ ನೃತ್ಯ ಸಂಗೀತದ ಜೊತೆಗೆ ಮಹಿಳೆಯರ ದೇಹ ಮಾರಾಟದ ಮಾರುಕಟ್ಟೆಯಾಗುತ್ತದೆ.
ನೋವಿನ ಸಂಗತಿ ಎಂದರೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಸಾವಿರಾರು ನತದೃಷ್ಟ ಮಹಿಳೆಯರು ಮುಸ್ಲಿಮರಿಂದ ಅತ್ಯಾಚಾರಕ್ಕೆ ಒಳಗದಾಗ, ಸಿಖ್ ಧರ್ಮದ ಕುಟುಂಬದ ಹಿರಿಯರಿಂದ ವiರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಲ್ಪಟ್ಟರು ಮತ್ತು ಸಿಖ್ ಧರ್ಮ ಗುರುಗಳ ಆದೇಶದ ಮೇರೆಗೆ ಸಾಮೂಹಿಕವಾಗಿ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ಸಾವಿಗೆ ಹೆದರಿ ತಪ್ಪಿಸಿಕೊಂಡ ಯುವತಿಯರಿಗೆ ಅಂದಿನ ದಿನಗಳಲ್ಲಿ ಹೀರಾಮಂಡಿಯ ನೃತ್ಯಗಾತಿಯರ ಕೋಥಾಗಳು ಆಸರೆಯಾದವು. ಹೀರಾಮಂಡಿಯು ಒಂದು ಬಗೆಯಲ್ಲಿ ವೇಶ್ಯಾವಾಟಿಕೆಯ ಕೇಂದ್ರವೂ ಹೌದು, ಇನ್ನೊಂದು ಬಗೆಯಲ್ಲಿ ನೊಂದವರ, ಹಾಗೂ ಹಸಿವಿನಿಂದ ಬಳಲಿದ ಹೆಣ್ಣುಮಕ್ಕಳ ಆಶ್ರಯ ತಾಣವೂ ಹೌದು. ಇದರಿಂದಾಗಿ ಹೀರಾಮಂಡಿ ಪ್ರದೇಶವನ್ನು ಅವಿಭಜಿತ ಭಾರತದ ಪುರಾತನ ವೇಶ್ಯಾವಾಟಿಕೆಯ ಕೇಂದ್ರ ಎಂದು ಗುರುತಿಸಲಾಗಿದೆ. ಮುಂಬೈನ ಕಾಮಾಟಿಪುರ, ಕೊಲ್ಕತ್ತ ನಗರದ ಸೋನಾಗಚಿ, ಪುಣೆಯ ಬುಧುವಾರ್ ಪೇಟ್, ಬಿಹಾರದ ಮುಜಾಪರ್ ನಗರದ ಚತುರ್ಬುಜ್ ಸ್ಥಾನ್ ಹಾಗೂ ದೆಹಲಿಯಲ್ಲಿ ಬ್ರಿಟಿಷ್ ಗವರ್ನರ್ ಗ್ಯಾಸ್ಟಿನ್ ಬಸ್ಟೆಲ್ ಎಂಬುವನು ತನಗಾಗಿ ಮತ್ತು ಸೈನಿಕರಿಗಾಗಿ ಅಜ್ಮೀರ್ ಗೇಟ್ ಮತ್ತು ಲಾಹೋರ್ ಗೇಟ್ ಗಳ ನಡುವೆ ಸ್ಥಾಪಿಸಿದ ಕೋಥಾಗಳು ಈಗ ಜಿ.ಬಿ.ರೋಡ್ ವೇಶ್ಯಾ ಕೇಂದ್ರವೆಂದು ಹೆಸರಾಗಿದೆ.
ವಿಶ್ವ ಏಡ್ಸ್ ನಿಯಂತ್ರಣ ಮಂಡಲಿಯು 2016 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಆರು ಲಕ್ಷದ ಐವತ್ತೇಳು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಕಾಯಕ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು ಪ್ರಕಟಿಸಿತ್ತು. ವಾಸ್ತವವಾಗಿ ಮುವತ್ತು ಲಕ್ಷ ಮಹಿಳೆಯರು ಈ ವೃತ್ತಿಯಲ್ಲಿದ್ದು, ಹನ್ನೆರಡು ಲಕ್ಷ ಅಪ್ರಾಪ್ತ ಬಾಲಕಿಯರು ಇದ್ದಾರೆ. ಇದು ಪರೋಕ್ಷವಾಗಿ ಈ ದೇಶದ ಬಡತನ, ಮಕ್ಕಳ ಕಳ್ಳಸಾಗಾಣಿಕೆ, ಕಾನೂನು ನಿಯಂತ್ರಣದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ವೇಶ್ಯಾವೃತ್ತಿಯು ಪ್ರತಿಯೊಂದು ದೇಶದ ಸಾಮಾಜಿಕ ಕಳಂಕ ಎಂದು ನಾವು ಗುರುತಿಸಿದರೂ ಸಹ, ಅದು ಅನೇಕ ಅನಾಥ ಹೆಣ್ಣುಮಕ್ಕಳ ಪಾಲಿಗೆ ತವರು ಮನೆಯಾಗಿರುವುದನ್ನು ಕಡೆಗಣಿಸುವಂತಿಲ್ಲ. ಈ ಕಾರಣದಿಂದ ಲಾಹೋರಿನ ಹೀರಾಮಂಡಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಮತ್ತು ಇತಿಹಾಸ ನಮ್ಮನ್ನು ಹದಿನಾರನೇ ಶತಮಾನಕ್ಕೆ ಕರೆದೊಯ್ಯುತ್ತದೆ.
ಇಂದಿನ ಪಾಕಿಸ್ತಾನದ ಲಾಹೋರ್ ಹಾಗೂ ಮಲ್ತಾನ್ ನಗರಗಳೆರೆಡೂ ಐತಿಹಾಸಿಕ ನಗರಗಳಾಗಿವೆ. ಪರ್ಷಿಯನ್ ದೊರೆಗಳು, ಸೂಫಿ ಸಂತರು, ವ್ಯಾಪಾರಸ್ಥರು ಇಂದಿನ ಟರ್ಕಿ, ಇರಾನ್ ಮತ್ತು ಇರಾಕ್ ರಾಷ್ಟçಗಳಿಂದ ಭಾರತಕ್ಕೆ ಬರುವಾಗ ಮಲ್ತಾನ್ ನಗರವು ಅವರ ಪಾಲಿಗೆ ವಿಶ್ರಾಂತಿಯ ತಂಗುದಾಣವಾಗಿತ್ತು. ಅದೇ ರೀತಿಯಲ್ಲಿ ಮೊಗಲ್ ಸಾಮ್ರಾಜ್ಯದ ಅಕ್ಬರ್ ನ ಅವಧಿಯಲ್ಲಿ ಲಾಹೋರ್ ನಗರವು ಆತನ ಆಡಳಿತಕ್ಕೆ ಸೇರಿತ್ತು. ರಾವಿ ನದಿಯ ದಂಡೆಯಲ್ಲಿರುವ ಲಾಹೋರ್ ನಗರವನ್ನು ಅಕ್ಬರ್ನ ಪುತ್ರ ಸಲೀಂ ತನ್ನ ಪಟ್ಟಾಭಿಷೇಕದ ನಂತರ ಜಹಾಂಗೀರ್ ಎಂದು ಹೆಸರಿನಿಂದ ಲಾಹೋರ್ ನಗರವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದನು. ಇಂದಿಗೂ ಸಹ, ಜಹಾಂಗೀರ್ ಮತ್ತು ಆತನ ಪತ್ನಿ ನೂರ್ ಜಹಾನ್ ದಂಪತಿಗಳ ಭವ್ಯ ಸಮಾಧಿಯ ಕಟ್ಟಡವು ಲಾಹೋರಿನ ಪ್ರಮುಖ ಆಕರ್ಷಣೆಯಾಗಿದೆ.. ಲಾಹೋರ್ ಕೋಟೆಯ ದಕ್ಷಿಣದ ಒಂದು ಪ್ರದೇಶವನ್ನು ರಾಜಮನೆತನದ ಮತ್ತು ಚಕ್ರವರ್ತಿಯ ಸೇವಕರು ಮತ್ತು ಸೇನೆಪಡೆಯ ವಸತಿಗಾಗಿ ಅಭಿವೃದ್ಧಿಪಡಿಸಲಾಯಿತು. ಈ ಪ್ರದೇಶ ಕೋಟೆಗೆ ಹತ್ತಿರದಲ್ಲಿರುವುದರಿಂದ, 'ಶಾಹಿ ಮೊಹಲ್ಲಾ' ಅಥವಾ 'ಸಾಮ್ರಾಟನ ನೆರೆಹೊರೆ' ಎಂದು ಕರೆಯಲಾಯಿತು.

ಈ ಪ್ರದೇಶವು ರಾಜಮನೆತನದ ಆಸ್ಥಾನದ ವೃತ್ತಿಪರ ಮನರಂಜಕರಾದ ತವೈಫ್ ಹೆಸರಿನ ನೃತ್ಯಗಾತಿಯರಿಗೆ ನೆಲೆಯಾಗಿತ್ತು. ಮೊಘಲ್ ಯುಗದಲ್ಲಿ ಪ್ರವರ್ಧಮಾನಕ್ಕೆ ಬಂದ ತವೈಫ್ ಸಂಸ್ಕೃತಿಯು ಮಧ್ಯಕಾಲೀನ ಭಾರತೀಯ ದೊರೆಗಳ ಆಸ್ಥಾನದಲ್ಲಿ ಮುಜ್ರಾ ಎಂಬ ನೃತ್ಯವನ್ನು ಪ್ರದರ್ಶಿಸುವ ಪ್ರತಿಭಾನ್ವಿತ ಕಲಾವಿದರನ್ನು ಒಳಗೊಂಡಿತ್ತು. ಆ ಕಾಲಘಟ್ಟದ ಬಹುತೇಕ ಕಲಾವಿದರು ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಹೆಚ್ಚಿನ ಕೊಡುಗೆ ನೀಡಿದ ಅತ್ಯಂತ ಯಶಸ್ವಿ ಮನರಂಜನೆಯ ಕಲಾವಿದÀರಾಗಿದ್ದರು. ಆಸ್ಥಾನದಲ್ಲಿ ಹಾಡು ಮತ್ತು ನೃತ್ಯವನ್ನು ವೃತ್ತಿಯಾಗಿಸಿಕೊಂಡಿದ್ದ ತವೈಫ್ ಹೆಸರಿನ ಕಲಾವಿದಎಯರಿಗೆ ಆಸ್ಥಾನದಲ್ಲಿದ್ದ ಅತ್ಯುತ್ತಮ ಉಸ್ತಾದ್ಗಳು ಸಂಗೀತ ಮತ್ತು ನೃತ್ಯದಲ್ಲಿ ತರಬೇತಿ ನೀಡುತ್ತಿದ್ದರು. ಇವರೆಲ್ಲರೂ ಶಾಹಿ ಮೊಹಲ್ಲಾದ ಗಣ್ಯ ವ್ಯಕ್ತಿಗಳಾಗಿ ಸಾಮಾಜಿಕ ಸಂಕೇತವಾಗಿದ್ದರು; ಅನೇಕ ವೃತ್ತಿಪರ ಕಲಾವಿದೆಯರು ಹೆಚ್ಚಾಗಿ ಲೈಂಗಿಕ ಕಾರ್ಯಕರ್ತರಾಗಿದ್ದರೂ ಕೂಡಾ, ಶಾಹಿ ಮೊಹಲ್ಲಾದ ತವೈಫ್ ಕಲಾವಿದೆಯರು ಆ ವೃತ್ತಿಯಲ್ಲಿರಲಿಲ್ಲ. ಗಣ್ಯರು ತಮ್ಮ ಮಕ್ಕಳನ್ನು ಶಿಷ್ಟಾಚಾರ, ಸಂಗೀತ, ಮತ್ತು ನೃತ್ಯ ಕಲಿಯಲು ಅವರ ಬಳಿಗೆ ಕಳುಹಿಸುತ್ತಿದ್ದರು.
ಹದಿನೆಂಟನೇ ಶತಮಾನದ ಮೊದಲಾರ್ಧದ ವೇಳೆಗೆ, ಲಾಹೋರ್ ನಗರವು ಹಲವಾರು ಆಕ್ರಮಣಗಳು ಮತ್ತು ದಾಳಿಗಳಿಗೆ ಸಾಕ್ಷಿಯಾಯಿತು. ಇರಾನಿನ ದೊರೆ ನಾದಿರ್ ಷಾ ಮತ್ತು ಆನಂತರ ಅಹ್ಮದ್ ಷಾ ಅಬ್ದಾಲಿಯ ನೇತೃತ್ವದಲ್ಲಿ ಆಫ್ಘನ್ನರ ದಾಳಿಯು ಪಂಜಾಬ್ನಲ್ಲಿ ಮೊಘಲ್ ಆಳ್ವಿಕೆಯನ್ನು ದುರ್ಬಲಗೊಳಿಸಿದವು. ಇದರಿಂದಾಗಿ ತವೈಫ್ಗಳ ರಾಜಮನೆತನದ ಪ್ರೋತ್ಸಾಹ ಕೊನೆಗೊಂಡಿತು. ಇದೇ ಸಮಯದಲ್ಲಿ ಲಾಹೋರ್ ನಗರದಲ್ಲಿ ವೇಶ್ಯಾಗೃಹಗಳು ಕಾಣಿಸಿಕೊಂಡವು. ಆಕ್ರಮಣಕಾರಿ ಮುಸ್ಲಿಂ ಸೈನ್ಯವು ೧೭೪೮ ಮತ್ತು ೧೭೬೭ ರ ನಡುವೆ ಭಾರತದ ಉಪಖಂಡದಲ್ಲಿ ದಾಳಿ ನಡೆಸಿ ಲೂಟಿ ಮಾಡಿದ ಪಟ್ಟಣಗಳಿಂದ ಅಪಹರಿಸಿದ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ವೇಶ್ಯಾಗೃಹಗಳನ್ನು ಸ್ಥಾಪಿಸಿದವು. ಅವುಗಳು ಇಂದಿಗೂ ಧೋಬಿ ಮಂಡಿ ಮತ್ತು ದಾರಾ ಶಿಕೋ ಮೊಹಲ್ಲಾ ಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ. 1762ರಲ್ಲಿ ಅಫ್ಘಾನ್ ಸೈನ್ಯವು ಸಿಖ್ಖರ ಪವಿತ್ರ ದೇವಾಲಯವಾದ ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಕೆಡವಿದಾಗ ಸಿಖ್ ಸಮುದಾಯವು ಒಗ್ಗೂಡಿ ಮಸ್ಲಿಂ ಪಡೆಗಳನ್ನು ಲಾಹೋರ್ ಒಳಗೊಂಡಂತೆ ಇಡೀ ಪಂಜಾಬ್ ಪ್ರಾಂತ್ಯದಿಂದ ಹೊರದಬ್ಬಿತು,
ರಂಜಿತ್ ಸಿಂಗ್ ಎಂಬ ಯುವಕನು 1799 ರಲ್ಲಿ, ಲಾಹೋರ್ ನಗರವನ್ನು ವಶಪಡಿಸಿಕೊಂಡು. 1801 ರಲ್ಲಿ, ಪಂಜಾಬಿನ ದೊರೆ ಎಂದು ಸ್ವಯಂ ಘೋಷಿಸಿಕೊಂಡನು. ರಂಜಿತ್ ಸಿಂಗ್ ಮೊಘಲರ ಹಲವಾರು ರಾಜ ಪದ್ಧತಿಗಳನ್ನು ಪುನಃ ಪರಿಚಯಿಸಿದನು. ಅವುಗಳಲ್ಲಿ ತವೈಫ್ ಗಳ ನೃತ್ಯ ಸಂಸ್ಕೃತಿ ಕೂಡಾ ಒಂದಾಗಿತ್ತು. ಆಸ್ಥಾನದಲ್ಲಿ ನೃತ್ಯ ಪ್ರದರ್ಶನಗಳಿಂದಾಗಿ ಶಾಹಿ ಮೊಹಲ್ಲಾದ ಕಲಾವಿದೆಯರು ಮತ್ತೊಮ್ಮೆ ಆಸ್ಥಾನದಿಂದ ಪ್ರೋತ್ಸಾಹವನ್ನು ಪಡೆದರು. ವಾಸ್ತವವಾಗಿ, ದೊರೆ ರಂಜಿತ್ ಸಿಂಗ್ ಅಮೃತಸರ ಬಳಿಯ ಮಖನ್ ಪುರ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾಶ್ಮೀರದ ಮುಸ್ಲಿಂ ಹೆಣ್ಣುಮಗಳು 'ಮೊರನ್' ಎಂಬ ಕಲಾವಿದೆಯನ್ನು ಪ್ರೀತಿಸುತ್ತಿದ್ದ ಕಾರಣದಿಂದ, ಹೀರಾ ಮಂಡಿಯ ಕಲಾವಿದೆಯರಿಗೆ ರಾಜಮನೆತನದ ಪ್ರೋತ್ಸಾಹವನ್ನು ನೀಡುತ್ತಿದ್ದನು. ಆದರೆ, ಎರಡು ನಿರ್ಣಾಯಕ ಆಂಗ್ಲೋ-ಸಿಖ್ ಯುದ್ಧಗಳ ನಂತರ (1845-49), ಸಿಖ್ ಸಾಮ್ರಾಜ್ಯವು ಪಂಜಾಬ್ ಪ್ರಾಂತ್ಯದಲ್ಲಿ ಕೊನೆಗೊಂಡಿತು. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಈ ಪ್ರದೇಶವನ್ನು ವಶಪಡಿಸಿಕೊಂಡಿತು.
ಈ ಸಂದರ್ಭದಲ್ಲಿ ಜೀವನೋಪಾಯವನ್ನು ಕಳೆದುಕೊಂಡ ಅನೇಕ ತವೈಫ್ ಕಲಾವಿದೆಯರು ಲಾಹೋರಿನ ಹಳೆಯ ನಗರದ ಕಂಟೋನ್ಮೆAಟ್ ಪ್ರದೇಶದಲ್ಲಿ ಬ್ರಿಟಿಷ್ ಸೈನಿಕರಿಗೆ ಲೈಂಗಿಕ ಕಾರ್ಯಕರ್ತರಾದರು. ಈ ಪ್ರದೇಶವು ಮೊಘಲ್ ಯುಗದ ಶಾಹಿ ಮೊಹಲ್ಲಾದಿಂದ ಹತ್ತಿರವಿದ್ದು ಹೀರಾ ಮಂಡಿ ಎಂದೂ ಕರೆಯಲ್ಪಡುತ್ತಿದ್ದ ಕಾರಣ, ಇಲ್ಲಿಂದಲೂ ಅವರು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ೧೮೫೦ ರ ದಶಕದ ಆರಂಭದಲ್ಲಿ, ನಗರದಲ್ಲಿ ಪ್ಲೇಗ್ ರೋಗ ಹರಡಿತು. ಸ್ಥಳೀಯ ಬ್ರಿಟಿಷ್ ಆಡಳಿತವು ತಮ್ಮ ಕಂಟೋನ್ಮೆಂಟ್ ಅನ್ನು ನಗರದ ಹೊರಗಿನ ಧರ್ಮಪುರಕ್ಕೆ ಸ್ಥಳಾಂತರಿಸಿತು. ಇಂತಹ ಏಳು ಬೀಳುಗಳ ನಡುವೆ ಹೀರಾ ಮಂಡಿಯು ಪ್ರದರ್ಶನ ಕಲೆಗಳ ಕೇಂದ್ರವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿತು. ಚಕ್ರವರ್ತಿಗಳ ಬದಲಾಗಿ ಅಲ್ಲಿನ ಶ್ರೀಮಂತರು. ತವೈಫ್ ಗಳ ಪೋಷಕರಾದರು. ಹೀಗಾಗಿ ಹೀರಾಮಂಡಿ ಪ್ರದರ್ಶನ ಕಲೆಗಳ ಸಂಸ್ಕೃತಿಯು. ನೂರ್ ಜಹಾನ್, ಖುರ್ಷಿದ್ ಬೇಗಂ, ಮುಮ್ತಾಜ್ ಸೇರಿದಂತೆ ಅನೇಕ ಅತ್ಯುತ್ತಮ ಕಲಾವಿದೆಯರನ್ನು ಹುಟ್ಟುಹಾಕಿದೆ.
ಹೀರಾ ಮಂಡಿ ಪ್ರದೆಶವು ಹಿಂದೂಸ್ತಾನಿ ಸಂಗೀತದ ಕೇಂದ್ರ ಬಿಂದುವಾಗಿತ್ತು. ಭಾರತದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಡೇ ಗುಲಾಂ ಆಲಿಖಾನ್ ಅವರ ಕಿರಿಯ ಸಹೋದರರಾದ ಬರ್ಕತ್ ಅಲಿ ಖಾನ್ ಮತ್ತು ಮುಬಾರಕ್ ಅಲಿ ಖಾನ್ ಅವರ ನಿತ್ಯ ಸಂಗೀತ ಕಚೇರಿ ಅಥವಾ ಬೈಠಕ್ ಗಳು ಇಲ್ಲಿ ನಡೆಯುತ್ತಿದ್ದವು, ಈ ಸಂಗೀತಗಾರರನ್ನು ಅಲ್ಲಿನ ಜನರು ಇಂದಿಗೂ ಬಹಳ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ ಈ ಬೈಠಕ್ಗಳು ಸಂಗೀತ ಕಲಿಕೆಯ ಕೇಂದ್ರಗಳಾಗಿದ್ದವು. ಉಸ್ತಾದ್ ದಮನ್ನ, ಉಸ್ತಾದ್ ಅಮೀರ್ ಖಾನ್ ಅವರ ನಿವಾಸಗಳು ಇಲ್ಲಿದ್ದವು. ಈ ಬೈಠಕ್ ಅನ್ನು 'ಹುಜ್ರಾ-ಎ ಶಾ ಹುಸೇನ್' ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇದು ಅದೇ ಹೆಸರಿನ ಮಹಾನ್ ಸೂಫಿ ಕವಿಗೆ ವಿಶ್ರಾಂತಿ ನೀಡುತ್ತಿದ್ದ ಸ್ಥಳವಾಗಿತ್ತು. ಹೀರಾ ಮಂಡಿ ಚೌಕದ ವೇದಿಕೆಯು ಉಸ್ತಾದ್ ಬರ್ಕತ್ ಅಲಿ ಖಾನ್ ಅವರ ಬೈಠಕ್, ಠುಮ್ರಿ ಮತ್ತು ಗಜಲ್ ಗಾಯನಕ್ಕೆ ಹೆಸರುವಾಸಿಯಾಗಿತ್ತು, ಉಸ್ತಾದ್ ಚೋಟೆ ಆಶಿಕ್ ಅಲಿ ಖಾನ್ ಖಯಾಲ್ ಗಾಯನದ ಶ್ರೇಷ್ಠ ಪ್ರತಿಪಾದಕರಾಗಿದ್ದರು. ಉತ್ತರ ಭಾರತವೂ ಸೇರಿದಂತೆ ಇಡೀ ಧೇಶಾದ್ಯಂತ ಪ್ರಸಿದ್ಧವಾಗಿರುವ ಖವ್ವಾಲಿ ಎಂಬ ಸೂಫಿ ಭಕ್ತಿ ಗಾಯನದ ಸೃಷ್ಟಿಗೆ ಮತ್ತು ಸ್ಪೂರ್ತಿಗೆ ಲಾಹೋರ್ ನಗರದ ಹೀರಾಮಂಡಿ ಮೂಲಕಾರಣವಾಗಿದೆ.
ಇಲ್ಲಿನ ಹೆಚ್ಚಿನ ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಮುಸ್ಲಿಮರಾಗಿದ್ದು, ಹೀರಾಮಂಡಿಯಲ್ಲಿ ಉತ್ತಮ ಆಸ್ತಿಗಳನ್ನು ಹೊಂದಿದ್ದರು. ಅವರು ನಿಧನರಾದಾಗ ತಮ್ಮ ಆಸ್ತಿಯನ್ನು ಮಸೀದಿ ಅಥವಾ ಇತರ ಕಲ್ಯಾಣ ಕಾರ್ಯಗಳಿಗೆ ದಾನ ಮಾಡುತ್ತಿದ್ದರು. ಬ್ರಿಟಿಷ್ ಆಳ್ವಿಕೆಯಲ್ಲಿ ಹೀರಾ ಮಂಡಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು, ಆ ಸಮಯದಲ್ಲಿ ದೂರದ ಪ್ರದೇಶಗಳಿಂದ ಜನರು ತಮ್ಮ ಹೆಣ್ಣುಮಕ್ಕಳನ್ನು ಲಾಹೋರ್ ಗೆ ಕರೆತಂದು ಸಂಗೀತ ಮತ್ತು ನೃತ್ಯ ಕಲೆಯನ್ನು ಕಲಿಯುವಂತೆ ಮಾಡುತ್ತಿದ್ದರು. ಲಖನ್ವಾಲ್ ಕಸೂರ್, ಸಿಯಾಲ್ ಕೋಟ್, ಫೈಜಾಬಾದ್, ಫಿರೋಜ್ ಪುರ್, ಲೂಧಿಯಾನ, ಜಲಂಧರ್, ಫಾಗ್ವಾರಾ ಸೇರಿದಂತೆ ಹಲವು ನಗರಗಳ ನೃತ್ಯ ಹುಡುಗಿಯರ ಕುಟುಂಬಗಳು ಹೀರಾ ಮಂಡಿ ಪ್ರದೇಶದಲ್ಲಿ ನೆಲೆಗೊಂಡಿದ್ದವು. ಲೈಂಗಿಕ ಕಾರ್ಯಕರ್ತರಿಗೆ ಮತ್ತು ಸಂಗೀತ, ನೃತ್ಯ ರಸಿಕರಿಗೆ ಮನರಂಜನೆಯ ಕೇಂದ್ರವಾಗಿದ್ದ ಹೀರಾ ಮಂಡಿಯ ದ್ವಂದ್ವ ಸಂಸ್ಕೃತಿಯು ಭಾರತದ ಸ್ವಾತಂತ್ರ್ಯದ ನಂತರವೂ ಮುಂದುವರೆಯಿತು.
ಇಲ್ಲಿನ ತವೈಫ್ಗಳಲ್ಲಿ ಹಲವಾರು ಮಂದಿ ಲೈಂಗಿಕ ಕಾರ್ಯಕರ್ತರಾಗಿದ್ದು, ಕಂಜರ್ ಸಮುದಾಯದಿಂದ ಬಂದವರಾಗಿದ್ದರು. ಪೂರ್ವ ಪಾಕಿಸ್ತಾನ ಸೇರಿದಂತೆ ಇತರ ಪ್ರದೇಶಗಳ ಮಹಿಳೆಯರನ್ನು ಬಡತನದಿಂದಾಗಿ ಅವರನ್ನು ಅಕ್ರಮವಾಗಿ ಸಾಗಣೆ ಮಾಡಿ ಹೀರಾ ಮಂಡಿಗೆ ಕರೆಕರಲಾಗಿತ್ತು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಹಮ್ಮದ್ ಜಿಯಾ-ಉಲ್-ಹಕ್, 1978 ರಿಂದ 1988 ರವರೆಗೆ, ಹೀರಾ ಮಂಡಿಯಲ್ಲಿ ಮುಜ್ರಾಗಳು ಮತ್ತು ಲೈಂಗಿಕ ಕಾರ್ಯಕರ್ತರ ಸಂಸ್ಕೃತಿಯನ್ನು ಕೊನೆಗೊಳಿಸಲು ಕಠಿಣ ಪ್ರಯತ್ನ ಮಾಡಿದ್ದರು. ಆದರೆ, ಅದು ಯಶಸ್ವಿಯಾಗಲಿಲ್ಲ. ಅನೇಕ ವೇಶ್ಯಾಗೃಹಗಳು ಲಾಹೋರ್ನಿಂದ ಇತರ ಭಾಗಗಳಿಗೆ ಸ್ಥಳಾಂತರಗೊಂಡವು. ಇಂದಿಗೂ ಕೂಡಾ ಅನೇಕ ತವೈಫ್ ಪ್ರಸಿದ್ಧ ಕಲಾವಿದೆಯರ ಮಹಲುಗಳು ಹೀರಾಮಂಡಿಯ ವೈಭವಕ್ಕೆ ಸಾಕ್ಷಿಯಾಗಿವೆ. ಮಟ್ಟಿ ಬಾಯಿ ಎಂಬಾಕೆ ಕೆಂಪು ದೀಪ ಪ್ರದೇಶದ ಪ್ರಸಿದ್ಧ ನೃತ್ಯಗಾರ್ತಿಯಾಗಿದ್ದಳು ಅಲ್ಲಿನ ಒಂದು ವೃತ್ತಕ್ಕೆ ಆಕೆಯ ಹೆಸರಿಡಲಾಗಿದೆ. ಅಖ್ತರಿ ಎಂಬ ಕಲಾವಿದೆ ಸಿನಿಮಾ ನಟಿಯಾಗಿ ಹೀರಾ ಮಂಡಿಯ ಮುಖ್ಯ ರಸ್ತೆಯಲ್ಲಿ ವಾಸಿಸುತ್ತಿದ್ದಳು. ಜಮೀನ್ದಾರ್ ಮತ್ತು ಖಾಂದಾನ್ ಎಂಬ ಪ್ರಸಿದ್ಧ ಚಲನಚಿತ್ರಗಳಲ್ಲಿ ಆಕೆ ನಟಿಸಿದ್ದಳು. ಪಾಕಿಸ್ತಾನದ ಪ್ರಸಿದ್ಧ ಕಾದಂಬರಿಕಾರ ಗುಲಾಮ್ ಅಬ್ಬಾಸ್ ಈ ಪ್ರದೇಶದ ನಿವಾಸಿಯಾಗಿದ್ದರಿಂದ ಅದೇ ಹೀರಾ ಮಂಡಿಯಲ್ಲಿ ಕುಳಿತು ತಮ್ಮ 'ಆನಂದಿ' ಎಂಬ ಕಾದಂಬರಿಯನ್ನು ಬರೆದಿದ್ದಾರೆ.
ಪಂಜಾಬಿನ ದೊರೆ ರಂಜೀತ್ ಸಿಂಗ್ ಆಳ್ವಿಕೆಯ ಸಮಯದಲ್ಲಿ ಆತನ ಸೇನಾ ದಳಪತಿ ಕಾಲೂ ಸಿಂಗ್ ಎಂಬುವನು ಕಾಶ್ಮೀರದ ನೂರಾರು ಮಹಿಳೆಯರನ್ನು ಬಂಧಿಸಿ ಲಾಂಡಾ ಬಜಾರ್ ಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತರನ್ನಾಗಿ ಮಾಡಿದ್ದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಐತಿಹಾಸಿಕ ಉಲ್ಲೇಖಗಳ ಪ್ರಕಾರ, ಮೊಘಲ್ ಆಳ್ವಿಕೆಯಲ್ಲಿ ಕೇವಲ ನೃತ್ಯ ಹುಡುಗಿಯರು ಮಾತ್ರ ಇದ್ದರು ಆದರೆ ಸಿಖ್ ದೊರೆಯ ಆಳ್ವಿಕೆಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಪರಿಚಯಿಸಲಾಯಿತು. ಸಿಖ್ ಸರ್ದಾರ್ಗಳು ಯಾವಾಗಲೂ ಸುಂದರ ಹುಡುಗಿಯರನ್ನು ಸಂತೋಷಕ್ಕಾಗಿ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಭಾರತ ಮತ್ತು ಪಾಕ್ ವಿಭಜನೆಯ ಸಂದರ್ಭದಲ್ಲಿ ನೊಂದವರ ಬದುಕನ್ನು ‘’ಮಾಯದ ಗಾಯಗಳು’’ ಎಂಬ ಶೀರ್ಷಿಕೆಯಡಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಲೇಖಕನಿಗೆ ಗಡಿಯಾಚೆಗಿನ ಲಾಹೋರ್ ಪ್ರದೇಶದ ಹೆಣ್ಣು ಮಕ್ಕಳ ಕುರಿತಂತೆ ಸಿಕ್ಕ ಮಾಹಿತಿಗಳವು.
( ಜುಲೈ ತಿಂಗಳ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)