ಭಾನುವಾರ, ಸೆಪ್ಟೆಂಬರ್ 6, 2026

ಸೋನಿಯಾ ಗಾಂಧಿ ಎಂಬ ಹಿರಿಯ ಜೀವವೊಂದರ ಬದುಕಿನ ಒಳನೋಟಗಳು.



ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಚುಕ್ಕಾಣಿಯಾಗಿರುವ ಸೋನಿಯಾ ಗಾಂಧಿಯವರ ಮೊದಲ ಆತ್ಮಕಥೆ 2009 ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತ್ತು. ಇದೀಗ ಎಂಬತ್ತು ವರ್ಷ ಪೂರೈಸಿರುವ ಈ ಹಿರಿಯ ಜೀವ ತಮ್ಮ ಪೂರ್ಣಪ್ರಮಾಣದ ಆತ್ಮ ಚರಿತ್ರೆಯನ್ನು ಬರೆದಿದ್ದು, ಅಮೇರಿಕಾದ ಪ್ರಕಾಶನ ಸಂಸ್ಥೆಯೊಂದು ನವಂಬರ್ ಹತ್ತರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸೋನಿಯಾ ಅವರ ನೂತನ ಆತ್ಮಚರಿತ್ರೆ ಬಿಲಾಂಗಿಗ್ ಕೃತಿಯನ್ನು ಪ್ರಕಟಿಸಲು ಒಪ್ಪಿಕೊಂಡಿದ್ದ ಪೆಂಗ್ವಿನ್ ಇಂಡಿಯಾ ಸಂಸ್ಥೆ ಇದೀಗ ಹಲವು ನೆಪಗಳನ್ನು ಹೇಳುತ್ತಾ ಹಿಂದೇಟು ಹಾಕಿದೆ. ಸೋನಿಯಾ ಗಾಂಧಿಯವರು ತಮ್ಮ ಎರಡನೇ ಕೃತಿಯಲ್ಲಿ ದಾಖಲಿಸಿರುವ ರಾಜಕೀಯ ಚಿಂತನೆಗಳು ಮತ್ತು ಬಿ.ಜೆ.ಪಿ. ಸರ್ಕಾರಗಳ ವೈಫಲ್ಯ ಕುರಿತಾದ ದೃಷ್ಟಿಕೋನಗಳು ಪೆಂಗ್ವಿನ್ ಪ್ರಕಾಶನಕ್ಕೆ ತೊಡಕಾಗಿವೆ.

ಪೆಂಗ್ವಿನ್ ಅಥವಾ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು, ಯಾವುದೇ ಕೃತಿಯನ್ನು ಪ್ರಕಟಿಸುವ ಮುನ್ನ, ಲೇಖಕ ಅಥವಾ ಲೇಖಕಿ ಎಷ್ಟೇ ಪ್ರಸಿದ್ಧರಾಗಿದ್ದರೂ ಸಹ, ತಾವು ನೇಮಕ ಮಾಡಿಕೊಂಡಿರುವ ಸಂಪಾದಕರ ಮೂಲಕ ಕೃತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತವೆ. ಅಲ್ಲಿ, ಭಾಷೆ, ನಿರೂಪಣೆಯ ಶೈಲಿ ಮತ್ತು ಕೃತಿಯ ವಿಷಯಗಳು ಪರಿಷ್ಕರಣೆಗೆ ಕೃತಿಯ ಲೇಖಕರ ಸಹಮತದೊಂದಿಗೆ ಒಳಪಡುವುದು ಸಹಜ ಕ್ರಿಯೆ. ಕಳೆದ ಒಂದೂವರೆ ದಶಕದಿಂದ, ದೇಶದ ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ, ಬ್ಯಾಂಕಿಂಗ್, ಮತ್ತು ಇ.ಡಿ ಹಾಗೂ ಸಿ.ಬಿ.ಐ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಮೂಗು ತೂರಿಸುವುದನ್ನು ಕಾಯಕ ಮಾಡಿಕೊಂಡಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರವು, ಪ್ರಕಾಶನ ಸಂಸ್ಥೆಯ ಮೇಲೆ ಪ್ರಭಾವ ಬೀರಿರುವುದನ್ನು ತಳ್ಳಿಹಾಕುವಂತಿಲ್ಲ.
ಇಟಲಿ ಮೂಲದ ಸೋನಿಯಾ ಗಾಂಧಿಯವರು ಆರಂಭದ ಇಪ್ಪತ್ತು ವರ್ಷಗಳನ್ನು ತಾಯ್ನಾಡಿನಲ್ಲಿ ಕಳೆದದ್ದನ್ನು ಹೊರತು ಪಡಿಸಿದರೆ, ಉಳಿದ ಅರವತ್ತು ವರ್ಷಗಳನ್ನು, ಭಾರತದ ಸೊಸೆಯಾಗಿ, ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿ, ಇಬ್ಬರು ಮಕ್ಕಳ ತಾಯಿಯಾಗಿ ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಬದುಕಿದ ಅವರ ಬದುಕು ನಿಜಕ್ಕೂ ಮಾದರಿಯಾಗುವಂತಹದ್ದು. ನನಗೆ ಅವರ ಆತ್ಮ ಚರಿತ್ರೆಯನ್ನು ಓದುವುದು ಬೇಕಿಲ್ಲ. ಅವರ ಬದುಕಿನ ಬಹುತೇಕ ಘಟನೆಗಳಿಗೆ ನಾನು ಮತ್ತು ನನ್ನ ತಲೆಮಾರು ಸಾಕ್ಷಿಯಾಗಿದ್ದೀವಿ. 1975 ರಿಂದಲೂ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಮತ್ತು ಕೌಟುಂಬಿಕ ಬದುಕನ್ನು ಸೂಕ್ಷಮವಾಗಿ ಗಮನಿಸಿಕೊಂಡು ಬಂದಿರುವ ನನಗೆ, ಸೋನಿಯಾ ಗಾಂಧಿಯವರು ಇಂದಿರಾ ಅವರಿಗೆ ಕೇವಲ ಸೊಸೆ ಮಾತ್ರವಲ್ಲದೆ, ಮಗಳಂತೆ ಇದ್ದರು. ಎರಡನೇ ಪುತ್ರ ಸಂಜಯ್ ಗಾಂಧಿಯವರ ಪತ್ನಿ ಮನೇಕಾ ಗಾಂಧಿ ಎಂದಿಗೂ ಇಂದಿರಾ ಕುಟುಂಬದ ಜೊತೆ ಭಾಂದವ್ಯದಿಂದ ಇರಲು ಸಾಧ್ಯವಾಗಲಿಲ್ಲ. ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಥವಾ ಸಿದ್ಧಾಂತಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಹಲವಾರು ಭಿನ್ನಾಭಿಪ್ರಾಯಗಳಿವೆ. ಆದರೆ, ದೇಶದ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಸೊಸೆಯಾಗಿ, ಅವರು ನೋಡಿದ ಮತ್ತು ಅನುಭವಿಸಿದ ದುರಂತ ಘಟನೆಗಳನ್ನು ತಣ್ಣನೆಯ ಭಾವದಿಂದ ಮೌನವಾಗಿ ಸಹಿಸಿಕೊಂಡ ಅವರ ಕುರಿತಾಗಿ ಅಪಾರ ಗೌರವವಿದೆ.
ದೆಹಲಿಯಲ್ಲಿ1980 ರಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಮೈದುನ ಸಂಜಯ್ ಗಾಂಧಿಯ ಸಾವು, 1984 ರ ಅಕ್ಟೋಬರ್ ತಿಂಗಳಲ್ಲಿ ತನ್ನ ಸ್ವಂತ ಅಂಗರಕ್ಷಕರ ಗುಂಡೇಟಿಗೆ ಬಲಿಯಾದ ಅತ್ತೆ ಇಂದಿರಾಗಾಂಧಿ ಹಾಗೂ 1991ರ ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀ ಪೆರಬಂದೂರು ಪಟ್ಟಣದಲ್ಲಿ ಶ್ರೀ ಲಂಕಾದ ಎಲ್.ಟಿ.ಟಿ. ಉಗ್ರರ ಬಾಂಬ್ ದಾಳಿಗೆ ಪ್ರಾಣತೆತ್ತ ಪತಿ . ರಾಜೀವ್ ಗಾಂಧಿಯವರ ಸಾವು ಇಂತಹ ಅಘಾತಕಾರಿ ಘಟನೆಗಳ ನಡುವೆಯೂ ಸೋನಿಯಾ ಗಾಂಧಿ ಭಾರತದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಅವರ ಜೀವನದಲ್ಲಿ ಬಹು ದೊಡ್ಡ ಸಾಧನೆ. ಬೇರೆ ಯಾರೇ ಆಗಿದ್ದರೂ ತನ್ನ ಇಬ್ಬರು ಮಕ್ಕಳಾದ ರಾಹುಲ್, ಮತ್ತು ಪ್ರಿಯಾಂಕರನ್ನು ಕರೆದುಕೊಂಡು, ಭವಿಷ್ಯದ ದೃಷ್ಟಿಯಿಂದ ದೇಶ ತ್ಯೆಜಿಸಿ ಹೊರ ಹೋಗುತ್ತಿದ್ದರು. ನನಗೆ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಕೆಲವು ಚಿತ್ರಗಳು ನೆನಪಿವೆ. 1984 ರಲ್ಲಿ ಇಂದಿರಾಗಾಂಧಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆಯುತ್ತಿರುವಾಗ, ಹತ್ತು ಅಥವಾ ಹನ್ನೆರಡು ವರ್ಷದ ರಾಹುಲ್, ತನ್ನ ತಂದೆ ರಾಜೀವ್ ಗಾಂಧಿಯವರ ಎದೆಗೆ ಮುಖ ಹುದುಗಿಸಿಕೊಂಡು ಅಳುತ್ತಿರುವ ದೃಶ್ಯವನ್ನು ಇಂಡಿಯ ಟುಡೆ ಪತ್ರಿಕೆಯ ಖ್ಯಾತ ಛಾಯಾಚಿತ್ರಕಾರ ರಘುರಾಯ್ ಅದ್ಭುತವಾಗಿ ಸೆರೆ ಹಿಡಿದಿದ್ದರು.

ಖಲಿಸ್ತಾನ್ ಉಗ್ರರ ನಿಯಂತ್ರಣಕ್ಕೆ ಅಮೃತ್ ಸರದ ಸ್ವರ್ಣದೇವಾಲಯದ ಯಾತ್ರಿಗಳ ನಿವಾಸದಲ್ಲಿ ಅಡಗಿದ್ದ ಬಿಂದ್ರನ್ ವಾಲೆ ಹಾಗೂ ಸಹಚರರನ್ನು ಆಪರೇಶನ್ ಬ್ಲೂಸ್ಟಾರ್ ಹೆಸರಿನಲ್ಲಿ1984 ರ ಜನವರಿ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ, ಹುಟ್ಟಡಗಿಸಿದ ಇಂದಿರಾಗಾಂಧಿಯವರು, ಅದೇ ಸಿಖ್ ಸಮುದಾಯ ಅಂಗರಕ್ಷರ ಗುಂಡಿಗೆ ಜೀವತೆತ್ತರು. ಈ ಕಾರ್ಯಾಚರಣೆ ನಡೆದ ನಂತರ, ನಿಮ್ಮ ನಿವಾಸದಲ್ಲಿ ಸಿಖ್ ಸಮುದಾಯದ ಒಬ್ಬ ಸಿಬ್ಬಂದಿಯೂ ಇರಕೂಡದು ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ತಿರಸ್ಕರಿಸಿದ್ದ ಅವರು ನನ್ನ ರಕ್ಷಣೆಗೆ ಇರುವ ಹಿಂದೂ-ಮುಸ್ಲಿಂ ಅಥವಾ ಎರಡು-ಸಿಕ್ ಸಮುದಾಯದ ಯೋಧರನ್ನು ನಾನು ಸಂದೇಹ ಪಡಲಾರೆ ಎಂದು ಘೋಷಿಸಿಕೊಂಡಿದ್ದರು. ಇಂತಹ ಉದಾತ್ತ ನಂಬಿಕೆ ಮತ್ತು ವಿಶ್ವಾಸ ಇಂದಿರಾ ಗಾಂಧಿಯವವರನ್ನು ಬಲಿ ತೆಗೆದುಕೊಂಡಿತು. ಇದೀಗ ಬಿ.ಜೆ.ಪಿ. ಪಕ್ಷವು ಮುಂಬರುವ ಪಂಜಾಬ್ ವಿಧಾನ ಸಭೆಯ ಚುನಾವಣೆಗೆ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್ ಸಿಂಗ್ ಪುತ್ರನಿಗೆ ಟಿಕೇಟ್ ಘೋಷಣೆ ಮಾಡಿದೆ.
ರಾಜೀವ್ ಗಾಂಧಿಯವರು ಪ್ರಬಲ ಬಾಂಬ್ ಸ್ಪೋಟಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಇಡೀ ದೇಹವು ಗುರುತು ಸಿಗಲಾರದಷ್ಟು ಛಿದ್ರವಾಗಿತ್ತು. ಎಡಗಾಲಿನ ಶೋ ಧರಿಸಿದ್ದ ಪಾದವೊಂದು ಮಾತ್ರ ಅವರ ಗುರುತಾಗಿ ಉಳಿದುಕೊಂಡಿತ್ತು ಇಂತಹ ಕೌಟುಂಬಿಕ ದುರಂತಗಳನ್ನು ಸಹಿಸಿಕೊಂಡು, ನೆಹರು ಮತ್ತು ಇಂದಿರಾ ಪೋಷಿಸುಕೊಂಡು ಬಂದಿದ್ದ ಕಾಂಗ್ರೇಸ್ ಪಕ್ಷವನ್ನು ಜೀವಂತವಾಗಿಟ್ಟ ಸೋನಿಯಾ ವರ ಬದ್ಧತೆಯು ಯಾವುದೇ ರಾಜಕೀಯ ನಾಯಕರಿಗೆ ಇಂದಿಗೂ ಮಾರ್ಗದರ್ಶಿಯಾಗಬಲ್ಲದು ಪದೇ ಪದೇ ಸೋನಿಯಾಗಾಂಧಿಯವರ ಇಟಲಿ ಮೂಲವನ್ನು ಪ್ರಸ್ತಾಪಿಸುವ ಸಂಘಪರಿವಾರದ ಅವಿವೇಕಿಗಳು ಒಮ್ಮೆ ಕಳೆದ ನಾಲ್ಕು ದಶಕಗಳ ಭಾರತದ ರಾಜಕೀಯ ಇತಿಹಾಸವನ್ನು ಗಂಭೀರವಾಗಿ ಕುಳಿತು ಓದುವದು ಒಳಿತು. 2004 ರ ಮೇ ತಿಂಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಕೂಡಿ ಬಂದಿತು. ಆದರೆ, ಅವರು ಅದನ್ನು ತಿರಸ್ಕರಿಸಿ, ಈ ನೆಲದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದು, ಸೋನಿಯಾ ಗಾಂಧಿಯವರು ಭಾರತಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಎಂಬುದು ನನ್ನ ಅಚಲವಾದ ನಂಬಿಕೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಮನಮೋಹನ್ ಸಿಂಗ್ ಅವರ ಚಿಂತನೆಗಳು ಮೂಲ ಕಾರಣ. ಇಂದಿರಾಗಾಂಧಿಯವರ ಸಾವಿನ ನಂತರ ಅನಿರೀಕ್ಷಿತವಾಗಿ ಪ್ರಧಾನಿಯಾದ ರಾಜೀವ್ ಗಾಂಧಿಯವರಿಗೆ ರಾಜಕೀಯ ಅನುಭವ ಇರಲಿಲ್ಲ. ಅವರು ಆರಂಭದಿಂದಲೂ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಅವಧಿಯಲ್ಲಿ ನಡೆದ ಮೂರು ಐತಿಹಾಸಿಕ ತಪ್ಪುಗಳಲ್ಲಿ ಒಂದನ್ನು ಸಂಘಪರಿವಾರ ದುರಪಯೋಗಿಸಿಕೊಂಡಿದ್ದನ್ನು ಯಾರೂ ಮರೆಯಲಾಗದು. ರಾಜಕೀಯ ಅನುಭವವಿಲ್ಲದ ರಾಜೀವ್ ಗಾಂಧಿಯವರ ಬಳಿ ಸುತ್ತುವರಿದ ಹಾಗೂ ಬೌದ್ಧಿಕ ಕೊರತೆಯಿಂದ ನರಳುತ್ತಿದ್ದ ಮತ್ತು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಆಡಳಿತದುದ್ದಕ್ಕೂ ದಿಕ್ಕು ತಪ್ಪಿಸಿದರು. 1978ರಲ್ಲಿ ಐದು ಮಕ್ಕಳ ತಾಯಾಗಿದ್ದ ಮಧ್ಯಪ್ರದೆಶದ ಇಂದೂರಿನ ಶಾ ಬಾನು ಬೇಗಂ ಎಂಬಾಕೆಯನ್ನು ವಕೀಲನಾಗಿದ್ದ ಪತಿಯು ನಲವತ್ತಾರು ವರ್ಷ ದಾಂಪತ್ಯ ಜೀವನ ನಡೆಸಿ, ತಲಾಖ್ ನೀಡುವುದರ ಮೂಲಕ ಮನೆಯಿಂದ ಹೊರದಬ್ಬಿದ್ದ.
ಜೀವನ ನಿರ್ವಹಣೆಗೆ ನ್ಯಾಯಾಲಯದ ಮೆಟ್ಟಿಲೇರಿದ 62 ವರ್ಷದ ಆಕೆಗೆ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು, 1985 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ನಿಯಮಗಳನ್ನು ತಿರಸ್ಕರಿಸಿ, ಮಾಸಾಶನ ನೀಡುವಂತೆ ಐತಿಹಾಸಿಕ ತೀರ್ಪು ನೀಡಿತು. ಆದರೆ, ಈ ತೀರ್ಪಿನ ವಿರುದ್ಧ ಇಸ್ಲಾಂ ಧರ್ಮದ ಮೌಲ್ವಿಗಳು ಪ್ರತಿಭಟನೆ ನಡೆಸಿ, ಮಹಿಳೆಯರನ್ನು ಶೋಷಿಸುವುದು ನಮ್ಮ ಧಾರ್ಮಿಕ ಹಕ್ಕು ಎಂಬಂತೆ ನಡೆದುಕೊಂಡರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿಯವರು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸುವುದರ ಬದಲಾಗಿಗೆ ಮಸೂದೆಗೆ ತಿದ್ದುಪಡಿ ತಂದು ಐತಿಹಾಸಿಕ ತಪ್ಪನ್ನು ಎಸಗಿದರು.
ಎರಡನೆಯದಾಗಿ ಅಯೋಧ್ಯೆಯ ಬಾಬರಿ ಮಸೀದಿಗೆ ತಂದು ಇಡಲಾಗಿದ್ದ ರಾಮಲಲ್ಲಾ ವಿಗ್ರಹಗಳನ್ನು ದರ್ಶನ ಮಾಡದಂತೆ ಫೈಜಾಬಾದ್ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಗೆ ಬೀಗ ಹಾಕಲಾಗಿತ್ತು. ಆದರೆ, 1986 ರ ಪೆಬ್ರವರಿ ತಿಂಗಳಲ್ಲಿ ರಾಜೀವ್ ಗಾಂಧಿಯವರು ಬಾಬರಿ ಮಸೀದಿಯ ಬಾಗಿಲು ತೆಗೆಸಿ, ರಾಮನ ವಿಗ್ರಹದ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟರು. ಇದು ಪರೋಕ್ಷವಾಗಿ , ಬಾಬರಿ ಮಸೀದಿಯ ಧ್ವಂಸದ ಜೊತೆಗೆ ರಥಯಾತ್ರೆ ನಡೆದು ಅಂತಿಮವಾಗಿ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ನನ್ನ ದೃಷ್ಟಿಯಲ್ಲಿ ಇದು ರಾಜೀವ್ ಗಾಂಧಿಯವರು ಎಸೆಗಿದ ಎರಡನೆಯ ಐತಿಹಾಸಿಕ ತಪ್ಪು .
ಶ್ರೀಲಂಕಾದ ಭಾರತೀಯ ಮೂಲದ ತಮಿಳರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ, ಹೋರಾಟ ನಡೆಸುತ್ತಿದ್ದಾಗ, ಅವರನ್ನು ಸದೆ ಬಡೆಯಲು 1988 ರಲ್ಲಿ ಭಾರತದ ಸೇನೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟಿದ್ದು ಅವರ ಮೂರನೇ ತಪ್ಪು. ಅಂತಿಮವಾಗಿ ತಾವು ಮಾಡಿದ ತಪ್ಪಿಗೆ ಪ್ರಾಣ ತೆತ್ತರು. ಯಾವೊಂದು ದೋಷ ಎಸಗದೆ ಎಲೆ ಮರೆಯ ಕಾಯಿಯಂತೆ ಬದುಕಿದ್ದ ಸೋನಿಯಾ ಗಾಂಧಿ ಅಂತಿಮವಾಗಿ ಎಲ್ಲಾ ಹೊರೆಗಳನ್ನು ತಮ್ಮ ಹೆಗಲ ಮೇಲೆ ಹೊತ್ತು, ಮಕ್ಕಳನ್ನು ಸಾಕಿ ಬೆಳೆಸಿದರು. ಇಂತಹ ಮಹಾನ್ ತಾಯಿಯೊಬ್ಬಳ ಆತ್ಮಕಥನ ಪ್ರಕಟವಾಗುವ ಮುನ್ನವೇ ಅಡ್ಡಿಪಡಿಸುವುದು ನ್ಯಾಯ ಸಮ್ಮತವಲ್ಲ. ಒಂದು ಕೃತಿ ಲೋಕಾರ್ಪಣೆಗೊಂಡನಂತರ ಅದು ಈ ಸಮಾಜದ ಕೃತಿಯಾಗುತ್ತದೆ. ಅದನ್ನು ವಿಮರ್ಶಿಸಲು ನಮಗೆ ಹಕ್ಕಿದೆ. ಕನಿಷ್ಠ ಈ ಜ್ಞಾನ ನಮ್ಮಲ್ಲಿರಬೇಕು.

ಮಂಗಳವಾರ, ಆಗಸ್ಟ್ 18, 2026

ನೊಂದವರ ನೋವ ನೋಯದವರೆತ್ತ ಬಲ್ಲರೋ?

 



ಕಳೆದ ಜುಲೈ ತಿಂಗಳಲ್ಲಿ ನಮ್ಮ ಮಕ್ಕಳು ದೆಹಲಿಯಲ್ಲಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಧರಣಿಯ ಸಂದರ್ಭದಲ್ಲಿ ನಮ್ಮ ಮುಸ್ಲಿಂ ಮತ್ತು ಸಿಖ್ ಸಹೋದರರು ಹಸಿದ ಮಕ್ಕಳಿಗೆ ಆಹಾರ, ಕುಡಿಯಲು ನೀರು ಒದಗಿಸುತ್ತಿದ್ದಾಗ, ನನಗೆ 2004 ರ ಡಿಸಂಬರ್ ತಿಂಗಳಲ್ಲಿ ಸಂಭವಿಸಿದ ಸುನಾಮಿ ದುರಂತದ ಘಟನೆ ನೆನಪಾಗುತ್ತಿತ್ತು. ಏಳು ವರ್ಷದ ಹಿಂದೆ ಬರೆದಿದ್ದ ಈ ಲೇಖನವನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೀನಿ.

ನಾನು ಕರ್ನಾಟಕದಲ್ಲಿ ಈವರೆಗೆ ಕಂಡರಿಯದ ಪ್ರಕೃತಿಯ ವಿಕೋಪಕ್ಕೆ ಮತ್ತು ಸಂತ್ರಸ್ತರ ಬವಣೆಗೆ ಸಾಕ್ಷಿಯಾದ ನಂತರ ನನ್ನೊಳಗೆ ಒಂದು ರೀತಿಯ ಸೂತಕದ ಛಾಯೆ ಮನೆ ಮಾಡಿದೆ. ಬರದ ಬವಣೆಯಲ್ಲಿ ಕಳೆದ ಐದಾರು ವರ್ಷಗಳಿಂದ ನರಳಿದ ರೈತ ಸಮುದಾಯದ ಬದುಕು ಈ ಬಾರಿ ನೆರೆಯಲ್ಲಿ  ಕೊಚ್ಚಿ ಹೋಗಿದೆ. ಅನ್ನದಾತ ಎಂದು ಕರೆಸಿಕೊಂಡ ರೈತ  ಈಗ ನಿರಾಶ್ರಿತರ ಶಿಬಿರದಲ್ಲಿ ಕುಳಿತು ತುತ್ತು ಅನ್ನಕ್ಕೆ ಕೈಚಾಚುವುದನ್ನು ನೋಡಿ ಮನಸ್ಸು ಭಾರವಾಗಿದೆ.

ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡವರು ದಿಲ್ಲಿಯೆಂಬ ನಾಯಕಸಾನಿಯ ಸೆರಗಿನಲ್ಲಿ ಮರೆಯಾಗಿದ್ದಾರೆ. ಉತ್ತರ ಕರ್ನಾಟಕದ ಅದರಲ್ಲೂ‌ ವಿಶೇಷವಾಗಿ ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಬದುಕು ಮೂರಾಬಟ್ಟೆಯಾಗಿದೆ. ಭವಿಷ್ಯದ ‌ಬದುಕಿನ ಆತಂಕ, ಸಾವು ಮತ್ತು ನೋವು ಇವುಗಳು ಎಲ್ಲರನ್ನೂ ಜಾತಿ, ಧರ್ಮದ ಬೇಧವಿಲ್ಲದೆ ಒಂದುಗೂಡಿಸಿವೆ.ಈ ಸಂದರ್ಭದಲ್ಲಿ ನನಗೆ ಹದಿನಾಲ್ಕು ವರ್ಷಗಳ ಹಿಂದಿನ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ದುರಂತ ನೆನಪಾಯಿತು.

2004 ರ ಡಿಸೆಂಬರ್ ತಿಂಗಳಲ್ಲಿ ನಡೆದ ಈ ದುರಂತದಲ್ಲಿ ನಾಗಪಟ್ಟಣಂ ಜಿಲ್ಲೆಗೆ ಅತೀವ ಹಾನಿಯಾಯಿತು. ಚಿದಂಬರಂ, ಕಾರೈಕಲ್ ಹಾಗೂ ಕಡಲೂರು ಮತ್ತು ನಾಗಪಟ್ಟಣಂ ಸಮೀಪದ ಕಡಲತೀರದ ಮೀನುಗಾರರ ಹಳ್ಳಿಗಳನ್ನು ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಬದುಕುಳಿದ‌ ಸಾವಿರಾರು ಜನ ಅನ್ನ ಮತ್ತು ಸೂರಿಲ್ಲದೆ ಬಯಲಿಗೆ ಬಿದ್ದ ಸಂದರ್ಭದಲ್ಲಿ ನಾಗಪಟ್ಟಣಂ ಸಮೀಪದ ನಾಗೂರ್ ದರ್ಗಾ ಎಂಟು ಸಾವಿರ ಮಂದಿಗೆ ನಲವತ್ತು ದಿನಗಳ ಕಾಲ ಊಟ ಹಾಕಿ ಬಹುತ್ವದ ಈ ನೆಲದಲ್ಲಿ ಮಾನವೀಯತೆ ಸತ್ತಿಲ್ಕ ಎಂಬುದನ್ನ ಸಾಬೀತು ಪಡಿಸಿತು. ತಂಜಾವೂರು ದೊರೆಯ ಕಣ್ಣಿನ ಬೇನೆ ವಾಸಿಮಾಡಿದ ಮುಸ್ಲಿಂ ಸಂತನಿಗೆ ದೊರೆ ನೀಡಿದ ಜಾಗದಲ್ಲಿ ಈ ದರ್ಗಾ ನಿರ್ಮಾಣಗೊಂಡಿದೆ. ಜೊತೆಗೆ ತಮಿಳುನಾಡಿನ ಹಿಂದೂ ಮತ್ತು ಮುಸ್ಲಿಂ ಬಾಂಧವರ ಶ್ರದ್ಧಾ ಕೇಂದ್ರವಾಗಿದೆ.

ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಹತ್ತು ಎಕರೆ ಭೂಮಿಯಲ್ಲಿ ಹಾಕಲಾಗಿದ್ದ ತೆಂಗಿನ ಗರಿಯ‌ ಚಪ್ಪರದಲ್ಲಿ ಆರು ಸಾವಿರ ಮಂದಿ ಮತ್ತು ದರ್ಗಾದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಎರಡು ಸಾವಿರ ಮಂದಿ ಆಶ್ರಯ ಪಡೆದಿದ್ದರು‌ ಬೆಳಿಗ್ಗೆ ಇಡ್ಲಿ ಅಥವಾ ಪೊಂಗಲ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಬಡಿಸಲಾಗುತ್ತಿತ್ತು.

ಅಲ್ಲಿ ನೊಂದವರು ಮತ್ತು ನೋಯದವರ ನಡುವೆ ಮನುಷ್ಯತ್ವ ಸೇತುವೆ ನಿರ್ಮಾಣವಾಗಿತ್ತು.  ಅನ್ನ ನೀಡುವವನಿಗೆ ನಾನು ನೀಡುತ್ತಿದ್ದೇನೆ ಎಂಬ ಅಹಂಕಾರವಿರಲಿಲ್ಲ. ಬೇಡುವವನಿಗೆ ಪಡೆಯುತ್ತಿದ್ದೇನೆ ಎಂಬ ಕೀಳರಿಮೆಯಿರಲಿಲ್ಲ. ಅಕ್ಕಿ, ಬೇಳೆ ಕೊಟ್ಟವನು ಯಾವ ಧರ್ಮದವನು, ಅಡುಗೆ ಮಾಡಿದವನು ಯಾವ ಜಾತಿ? ಬಡಿಸುತ್ತಿರುವವನು ಯಾವ ಕುಲ? ಎಂಬ ಪ್ರಶ್ನೆ ಅಲ್ಲಿ ಯಾರ ಎದೆಯಲ್ಲೂ ಉದ್ಭವಿಸಲಿಲ್ಲ. ಕಾರೈಕಲ್, ನಾಗಪಟ್ಟಣಂ ಮತ್ತು ಕುಂಭಕೋಣಂ ತಾಲೋಕಿನಲ್ಲಿ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಕೃಷಿ ಮತ್ತು ವ್ಯಾಪಾರದ ಮೂಲಕ ಶ್ರೀಮಂತವಾಗಿವೆ. ಪ್ರತಿ ಕುಟುಂಬಗಳು ಲಾರಿ, ವ್ಯಾನುಗಳ ಮೂಲಕ ನಾಗೂರು ದರ್ಗಾಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಕಳುಹಿಸಿ ತಮ್ಮ ಹೆಸರು ಎಲ್ಲಿಯೂ ಪ್ರಚಾರಕ್ಕೆ ಬರದಂತೆ ನೋಡಿಕೊಂಡವು.

ಆ ವರ್ಷ ಡಿಸೆಂಬರ ಕೊನೆಯವಾರ ಐದು ದಿನಗಳ ಕಾಲ ನೆಲದ ಮೇಲಿನ ನರಕ ಮತ್ತು ಸ್ಮಶಾನದಂತಿದ್ದ ಈ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ನಾನು ಒಂದು ದಿನ ದರ್ಗಾದಲ್ಲಿದ್ದೆ. ಮುಸ್ಲಿ ಸಂತನ ಕುಟುಂಬದ ವಾರಸುದಾರರ ನೇತೃತ್ವದಲ್ಲಿ ನಡೆಯುತ್ತಿರುವ ಈ ದರ್ಗಾದ ಮುಖ್ಯಸ್ಥ ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ  ಈ ರೀತಿ ಊಟ ಹಾಕುವ ಧೈರ್ಯ ನಿಮಗೆ ಹೇಗೆ ಬಂತು? ಎಂದು ಪ್ರಶ್ನಿಸಿದೆ. ಅವರು ನಗುತ್ತಾ ಹೀಗೆ ಉತ್ತರಿಸಿದರು.

‘’ದೇವರು ನೆರವಿಗೆ ಬರುತ್ತಾನೆ ಎಂಬ ಇಚ್ಚಾಶಕ್ತಿಯಿಂದ ಆರಂಭಿಸಿದೆ. ದರ್ಗಾದ ಭಕ್ತರು‌ ದೇವರ ರೂಪದಲ್ಲಿ ಸಹಕರಿಸಿದರು’’ ಎಂದು ಹೇಳಿದರು. ಜೊತೆಗೆ ಮಧ್ಯಾಹ್ನದ ಭೊಜನಕ್ಕೆ ಆಹ್ವಾನಿಸಿದರು. ಹತ್ತು ಕಿ.ಮಿ. ದೂರದ ನಾಗಪಟ್ಟಣಂ ಗೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ರವಾನೆಯಾಗುತ್ತಿದ್ದ ಅನ್ನ,‌ಸಾಂಬಾರ್ ನೋಡುತ್ತಾ ದರ್ಗಾದ ಮುಖ್ಯಸ್ಥರ ಜೊತೆ ಊಟ ಮಾಡುವಾಗ ನನಗೆ ಅನಿಸಿದ್ದು ಹೀಗೆ.

ಮಠ, ಮಂದಿರ, ಮಸೀದಿಗಳೆಂದರೆ ಕೇವಲ ಧಾರ್ಮಿಕ ‌ಶ್ರದ್ಧಾಕೇಂದ್ರಗಳಲ್ಲ, ಮಾನವೀಯತೆಯ ಶ್ರದ್ಧಾಕೇಂದ್ರಗಳೂ ಹೌದು.

ಜಿಮೊಟೊ ಎಂಬ ಆಹಾರ ಸರಬರಾಜು ಮಾಡುವ ಕಂಪನಿಯ ಡೆಲಿವರಿ ಬಾಯ್ ಮುಸ್ಲಿಂ ಎನ್ನುವ ಕಾರಣಕ್ಕೆ ಆಹಾರ ನಿರಾಕರಿಸಿದ ಹಾಗೂ ಕಂಪನಿಯ ವಿರುದ್ಧ ಸಿಡಿದೆದ್ದ  ನಮ್ಮ ನವನಾಗರೀಕತೆಯ ಅನಾಗರಿಕರಿಗೆ ಇಂತಹ ಸುನಾಮಿ ಒಮ್ಮೆ ಅವರ ಬದುಕಿನಲ್ಲಿ ಅಪ್ಪಳಿಸಬಾರದೆ ಎಂದು ಈ ಕ್ಷಣದಲ್ಲಿ ಹಂಬಲಿಸುತ್ತಿದ್ದೇನೆ.

ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ಅಕ್ಕನ ವಚನದ ಸಾಲು ಈ ಸಂತ್ರಸ್ತರನ್ನು ನೋಡಿದಾಗ‌ ನೆನಪಾಗುತ್ತಿದೆ.

ಜಗದೀಶ್ ಕೊಪ್ಪ.

ಸೋಮವಾರ, ಆಗಸ್ಟ್ 17, 2026

ಆರ್.ಎಸ್.ಎಸ್. ಕಾರ್ಯಕರ್ತರಿಗೆ ಸ್ವಾತಂತ್ರ್ಯ ಇತಿಹಾಸದ ಪಾಠಗಳು



ಅಯ್ಯಾ ಮಿತ್ರರೇ, ನನ್ನೊಳಗೆ ನಿಮ್ಮ ಕುರಿತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದನ್ನು ಹೊರತು ಪಡಿಸಿದರೆ, ಬೇರೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲಕಣ್ರಪ್ಪ. . ನಿಮ್ಮ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನನಗೆ ಕಳೆದ ಮೂರು ದಶಕಗಳಿಂದಲೂ ಪರಿಚಯ. ಬೆಂಗಳೂರು ಮಲ್ಲೇಶ್ವರಂ ನ ಕ್ರೀಡಾಂಗಣ ಸಮೀಪವಿದ್ದ ನಿಮ್ಮ ರಾಜ್ಯ ಬಿ.ಜೆ.ಪಿ. ಕಚೇರಿಯಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದುಕೊಂಡು, ಪತ್ರಕರ್ತರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿಗೆ ನಾನು ವಿಸ್ಮಯಗೊಂಡಿದ್ದೆ. ಸಾಮಾನ್ಯ ಹೆಂಚಿನ ಹಳೆಯ ಕಟ್ಟಡವಾಗಿದ್ದ ನಿಮ್ಮ ಕಚೇರಿಗೆ ನಾವು ಒಂದಿಷ್ಟು ಜನ ಪತ್ರಕರ್ತರು ನಿಮ್ಮ ನಾಯಕರನ್ನು ಭೇಟಿ ಮಾಡಲು ಹೋದರೆ, ಅತ್ಯಂತ ಗೌರವದಿಂದ ನಮ್ಮನ್ನು ನಡೆಸಿಕೊಳ್ಳುತ್ತಿದ್ದರು. ಸಮೀಪದ ವಿದ್ಯಾರ್ಥಿ ಭವನದಿಂದ ಕಾಫಿ ತರಿಸಿ ಕುಡಿಸಿ, ನಾಯಕರಿಗೆ ದೂರವಾಣಿ ಕರೆ ಮಾಡಿ ನಾವು ಬಂದಿರುವ ವಿಷಯ ತಿಳಿಸಿ, ಅವರೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದರು.
ವೈಯಕ್ತಿಕ ಭಿನ್ನಾಭಿಪ್ರಾಯದ ನಡುವೆಯೂ ಅವರ ಬಗ್ಗೆ ಇಟ್ಟುಕೊಂಡಿದ್ದ ಗೌರವವು ನಿನ್ನೆ ಕರಗಿ ಹೋಯಿತು. ಭಾರತಕ್ಕೆ ಚರಕದಿಂದ ಅಥವಾ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬರಲಿಲ್ಲ ಎಂಬ ಅವಿವೇಕದ ಮಾತುಗಳನ್ನಾಡುವ ಮೊದಲು ಈ ವ್ಯಕ್ತಿ, ಭಾರತದಲ್ಲಿ ಯಾರಾದರೂ ಗಾಂಧಿಜಿ ಒಬ್ಬರಿಂದ ಮಾತ್ರ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿರುವ ಮಾತುಗಳನ್ನು ದಾಖಲೆಯ ಮೂಲಕ ಸಾಬೀತು ಪಡಿಸಿಬೇಕಿತ್ತು. ಅದು ಸಾಧ್ಯವೆ? ಅನಕ್ಷಸ್ತರು ತುಂಬಿದ್ದ ಅಂದಿನ ಭಾರತದಲ್ಲಿ ಗಾಂಧಿಯನ್ನು ಎಂದೂ ನೋಡದ ಕೋಟ್ಯಾಂತರ ಜನತೆ ಆ ಮಹಾತ್ಮನ ಮಾತಿಗೆ ಮತ್ತು ಚಿಂತನೆಗೆ ಹೇಗೆ ಒಲಿದರು ಎಂಬುದನ್ನು ಸಂತೋಷ್ ಒಮ್ಮೆ ತಣ್ಣಗೆ ಕುಳಿತು ಯೋಚಿಸಿದ್ದರೆ, ಇಂತಹ ಅವಿವೇಕತನದ ಮಾತುಗಳು ಅವರ ಬಾಯಿಂದ ಹೊರಬರುತ್ತಿರಲಿಲ್ಲ.
ಮದನ್ ಲಾಲ್ ಡಿಂಗ್ರಾ, ಸಾವರ್ಕರ್, ಭಗತ್ ಸಿಂಗ್, ಚೆಂದ್ರಶೇಖರ ಅಜಾದ್ ಮುಂತಾದವರನ್ನು ತಮ್ಮ ಮಾತುಗಳಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಎಂದು ಸ್ಮರಿಸಿದ್ದಾರೆ. ಈ ಮಾತುಗಳನ್ನು ಅತಿಶಯದ ಮಾತುಗಳು ಎಂದು ನಾನು ಹೇಳಲಾರೆ ಆದರೆ, ಡಿಂಗ್ರಾ ಮತ್ತು ಸಾವರ್ಕರ್ ಕುರಿತ ಇತಿಹಾಸವನ್ನು ಮಾತ್ರ ನಿಮ್ಮ ಮುಂದೆ ತರಲು ಇಚ್ಚಿಸುತ್ತೇನೆ. ಮದನ್ ಲಾಲ್ ಡಿಂಗ್ರಾ ಲಂಡನ್ ನಗರದಲ್ಲಿ ಓದುತ್ತಿದ್ದಾಗಲೇ ಬ್ರಿಟಿಷರ ಬಗ್ಗೆ ಆಕ್ರೋಶಗೊಂಡಿದ್ದನು. ಸಾವರ್ಕರ್ ಸಂಪರ್ಕಕ್ಕೆ ಬಂದು, ಅವರ ಅಭಿನವ್ ಭಾರತ್ ಮಂಡಲ ಎಂಬ ರಹಸ್ಯ ಸಂಘಟನೆಯನ್ನು ಸೇರಿಕೊಂಡಿದ್ದನು. ಆತನಿಗೆ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ನನ್ನು ಕೊಲ್ಲುವ ಉದ್ದೇಶ ವಿತ್ತು. ಆದರೆ, ಅದೇ ಹೆಸರಿನ ಸರ್.ವಿಲಿಯಂ ಕರ್ಜನ್ ಎಂಬ ಇನ್ನೊಬ್ಬ ಅಧಿಕಾರಿಯನ್ನು ಹತ್ಯೆ ಮಾಡಿ, ಬ್ರಿಟಿಷ್ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ, 1909 ರ ಆಗಸ್ಟ್ ತಿಂಗಳಿನಲ್ಲಿ ಲಂಡನ್ ನಗರದಲ್ಲಿ ಮರಣ ದಂಡನೆಗೆ ಒಳಗಾದನು.
ಮದನ್ ಲಾಲ್ ಡಿಂಗ್ರಾಗೆ ಆಶ್ರಯ ಮತ್ತು ಶಸ್ತ್ರಾಸ್ತ್ರ ( ಪಿಸ್ತೂಲ್) ಒದಗಿಸಿದ ಆರೋಪದಡಿ ಬಂದನಕ್ಕೆ ಒಳಗಾದ ಮತ್ತು ವಿನಾಯಕ ದಾಮೋದರ್ ಎಂದು ಆ ವೇಳೆಯಲ್ಲಿ ಕರೆಸಿಕೊಳ್ಳುತ್ತಿದ್ದ ಸಾವರ್ಕರ್ ಅವರನ್ನು ಹೆಚ್ಚಿನ ವಿಚಾರಣೆಗೆ ಭಾರತಕ್ಕೆ ( ಮುಂಬೈಗೆ) ಕರೆತರುವಾಗ, ಹಡಗು ಪ್ರಾನ್ಸ್ ನ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದಾಗ, ಈ ಮಹಾಶಯ ತಪ್ಪಿಸಿಕೊಳ್ಳಲು ಯತ್ನಿಸಿ, ಸಮುದ್ರಕ್ಕೆ ಹಾರಿದಾಗ, ಪ್ರಾನ್ಸ್ ಪೊಲೀಸರು ಬಂಧಿಸಿ ಸೆರೆಮನೆಗೆ ತಳ್ಳಿದರು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರ ಮತ್ತೆ ವಶಕ್ಕೆ ಪಡೆದು ಐವತ್ತು ವರ್ಷಗಳ ಸುಧೀರ್ಘ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾ್ ಸೆಲ್ಯೂಲರ್ ಜೈಲಿಗೆ ತಳ್ಳಿತು. ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್, ಬ್ರಿಟಿಷ್ ಸರ್ಕಾರಕ್ಕೆ ನಿರಂತರ ಕ್ಷಮಾರ್ಪಣೆಯ ಪತ್ರ ಬರೆಯುತ್ತಾ, ( ಒಟ್ಟು ಹನ್ನೊಂದು ಬಾರಿ) ಅಲ್ಲಿಂದ ಬಿಡುಗಡೆಗೊಂಡು, ಸ್ವಂತ ಊರಾದ ಮಹಾರಾಷ್ಟ್ರದ ರತ್ನಗಿರಿ ಬಳಿ ಗೃಹಬಧನದಲ್ಲಿದ್ದರು.
ಜೀವನ ನಿರ್ವಹಣೆಗಾಗಿ ಬ್ರಿಟಿಷ್ ಸರ್ಕಾರದ ಬಳಿ ಬಿಕ್ಷೆ ಬೇಡಿ, ಅಂಗಲಾಚಿದ ಪರಿಣಾಮ ಮಾಸಿಕ ನಿರ್ಬಂಧಿತ ಭತ್ಯೆ ಪಡೆಯುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಯಾವ ಹೋರಾಟಗಾರನು ಬ್ರಿಟಿಷರಿಂದ ಅಂತಹ ಎಂಜಲು ಕಾಸನ್ನು ಪಡೆದಿರಲಿಲ್ಲ. ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ ಲಾಹೋರ್ ಜೈಲಿನಲ್ಲಿದ್ದು,1931 ರ ಮಾರ್ಚ್ ತಿಂಗಳಲ್ಲಿ ಗಲ್ಲಿಗೇರಿದ ಭಗತ್ ಸಿಂಗ್ ಮತ್ತು ಆತನ ಸಹಚರರು ಬ್ರಿಟಿಷರಿಗೆ ಕ್ಷಮಾರ್ಪಣೆ ಪತ್ರ ಬರೆಯಲಿಲ್ಲ, ಭತ್ಯೆ ಹೆಸರಿನಲ್ಲಿ ಹಣ ಪಡೆಯಲಿಲ್ಲ. ಈಗ ಹೇಳಿ, ಯಾರು ನಿಜವಾದ ಸ್ವಾತಂತ್ರ್ಯ ಹೋರಾಟಗಾರು?
ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಹಾನ್ ದೇಶಭಕ್ತರಂತೆ ಮತ್ತು ಇತಿಹಾಸಕಾರರಂತೆ ಮಾತನಾಡುವ ನಿಮಗೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಟಿಪ್ಪು ಸುಲ್ತಾನ್ ಹೆಸರು ಹೇಳಲು ಏಕೆ ಹಿಂಜರಿಕೆ? ಸ್ವತಃ ಬ್ರಿಟಿಷ್ ಸರ್ಕಾರ ಅಂದರೆ, ಈಸ್ಟ್ ಇಂಡಿಯಾ ಕಂಪನಿ ಒಪ್ಪಿಕೊಂಡಿರುವಂತೆ ಭಾರತದಲ್ಲಿ ಅವರಿಗೆ ದೊಡ್ಡ ಸವಾಲು ಒಡ್ಡಿದ ಏಕೈಕ ಸಂಸ್ಥಾನದ ದೊರೆ ಟಿಪ್ಪು ಸುಲ್ತಾನ್ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅಯ್ಯಾ, ಮಿತ್ರರಾ, ಕೊಲ್ಕತ್ತಾ ನಗರದಲ್ಲಿರುವ ಬೃಹತ್ ವಿಕ್ಟೊರಿಯಾ ಸ್ಮಾರಕ ಭವನದಲ್ಲಿ ಎರಡನೇ ಮಹಡಿಯಲ್ಲಿ ಇಡೀ ಶ್ರೀರಂಗಪಟ್ಟಣದ ಕೃತಕ ಮಾದರಿಯನ್ನು ಹತ್ತು ಅಡಿ ಅಗಲ ಇಪ್ಪತ್ತುಅಡಿ ಉದ್ದದ ಟೇಬಲ್ ಮೇಲೆ ಸೃಷ್ಟಿ ಮಾಡಿ ಇಡಲಾಗಿದೆ. ಜೊತೆಗೆ ಇತರೆ ವಿವರಗಳಿವೆ. ಬ್ರಿಟಿಷರನ್ನು ಹಗಲಿರುಳು ಕಾಡಿದ ಟಿಪ್ಪುವಿನ ಹೆಸರನ್ನು ಹೇಳಲು ನಿಮ್ಮ ನಾಲಿಗೆಗೆ ಯಾವ ಬಗೆಯ ಲಕ್ವಾ ಹೊಡೆದಿದೆ? ಹೇಳಬಲ್ಲಿರಾ?
ಹದಿನೆಂಟನೇ ಶತಮಾನದ ಟಿಪ್ಪು ಸುಲ್ತಾನ್ ಇರಲಿ, ಇಪ್ಪತ್ತನೇ ಶತಮಾನದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಜೊತೆ ಕೈ ಜೋಡಿಸಿ ಹೋರಾಡಿದ ಮೌಲನಾ ಅಜಾದ್ ಮತ್ತು ಭಾರತದ ವಾಯುವ್ಯ ಪ್ರಾಂತ್ಯದ ಬೆಲೂಚಿಸ್ಥಾನದಿಂದ ಬಂದ ಖಾನ್ ಅಬ್ದಲ್ ಗಫರ್ ಖಾನ್ ಹಾಗೂ ಇತರೆ ನಾಯಕರ ಹೆಸರು ಬಿ.ಎಲ್.ಸಂತೋಷ್ ಅಥವಾ ನಿಮ್ಮಿಂದ ಎಂದಾದರೂ ಕೇಳಿ ಬಂದಿರುವ ಇತಿಹಾಸ ಉಂಟೆ? ನಿಮಗೆ ಕನಿಷ್ಠ ಇಪ್ಪತ್ತೈದು ಮಂದಿ ಮುಸ್ಲಿಂ ಮಹಿಳೆಯರ ದಾಖಲೆಯನ್ನು ನಾನು ನೀಡಬಲ್ಲೆ. ನನ್ನ ಪದಗಳಿವೆ ಎದೆಯೊಳಗೆ ಎಂಬ ಸಂಶೋಧನಾ ಕೃತಿಯಲ್ಲಿ 1875 ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಾರ್ಯಕರ್ತರಿಗೆ ಆಶ್ರಯ ನೀಡಿ, ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಕಾರಣಕ್ಕೆ ಕಾನ್ಪುರದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲ್ಪಟ್ಟ ಇಪ್ಪತ್ತೊಂದು ಮುಸ್ಲಿಂ ಸಂಗೀತಗಾರ್ತಿಯರು ಮತ್ತು ನೃತ್ಯಗಾತಿಯರ ವಿವರಗಳಿವೆ. ದಯವಿಟ್ಟು ಓದಿ ಮತ್ತು ಎದೆಯೊಳಗಿನ ವಿಷವನ್ನು ಕಡಿಮೆ ಮಾಡಿಕೊಳ್ಳಿ.
ಅಯ್ಯಾ ಅವಿವೇಕಿ ಮಿತ್ರರಾ, ನಿಮ್ಮ ಹಿಂದೂ ರಾಷ್ಟ್ರದ ಹುಚ್ಚುತನವನ್ನು ದಯವಿಟ್ಟು ತ್ಯೆಜಿಸಿ. ನಿಮ್ಮಂತೆ, ಪಾಕಿಸ್ತಾನದಲ್ಲಿ ಮುಸ್ಲಿಂ ರಾಷ್ಟ್ರಕ್ಕಾಗಿ ಹಗಲಿರುಳು ಶ್ರಮಿಸಿದ ಓರ್ವ ವ್ಯಕ್ತಿ 1948 ರಲ್ಲಿ ಅಲ್ಲಿಂದ ಗಡಿಪಾರಾಗಿ ಲಂಡನ್ ನಗರದಲ್ಲಿ ಬೀದಿ ನಾಯಿಯಂತೆ ಪ್ರಾಣ ಬಿಟ್ಟನು. ಆತನ ಇತಿಹಾಸವನ್ನು ಒಮ್ಮೆ ಓದಿ ನೋಡಿ. ಚೌಧುರಿ ರೆಹಮತ್ ಆಲಿ ಎಂಬ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಗಳಿಸಿದ್ದ ಈ ವ್ಯಕ್ತಿ 1933 ರಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕೆ ಪಾಕಿಸ್ತಾನ ಎಂಬ ಹೆಸರನ್ನು ನೀಡಿದ ಕೀರ್ತಿಗೆ ಒಳಗಾಗಿದ್ದಾನೆ. ಪಾಕಿಸ್ತಾನ ಎಂಬ ಹೆಸರಿನ ಪ್ರತಿಯೊಂದು ಅಕ್ಷರದ ಹಿಂದೆ ಪಂಜಾಬ್, ಆಫ್ಘಾನಿಸ್ತಾನ್, ಕಾಶ್ಮೀರ್, ಸಿಂದ್, ಮತ್ತು ಬೆಲೂಚಿಸ್ತಾನ್ ಹೆಸರುಗಳಿರುವುದನ್ನು ನಾವು ಗಮನಿಸಬಹುದು.
1947 ರಲ್ಲಿ ಭಾರತ ಪಾಕ್ ವಿಭಜನೆಯಾದಾಗ, ಅಲ್ಲಿನ ಅಧ್ಯಕ್ಷ ಜಿನ್ನಾ ಮತ್ತು ಪ್ರಥಮ ಪ್ರಧಾನಿ ಲಿಯಾಕತ್ ಖಾನ್ ಅವರಿಗೆ ನೂತನ ಪಾಕಿಸ್ತಾನದ ಹಿಂದೂ, ಸಿಖ್ ಹಾಗೂ ಪಾರ್ಸಿ ಗಳ ಬಗ್ಗೆ ಯಾವುದೇ ಅಸಮಾಧಾನ ಇರಲಿಲ್ಲ. ಅವರೆಲ್ಲರೂ ಪಾಕಿಸ್ತಾನದ ಗೌರವಾನ್ವಿತ ನಾಗರೀಕರು ಎಂದು ಪರಿಗಣಿಸಿದ್ದರು. ಆದರೆ, ಚೌಧಿರಿ ರೆಹಮತ್ ಮಾತ್ರ ಇಲ್ಲಿನ ಹಿಂದೂ ರಾಷ್ಟ್ರ ಭಕ್ತರ ಶೈಲಿಯಲ್ಲಿ ಪಾಕಿಸ್ತಾನದ ಹಿಂದೂ ಮತ್ತು ಸಿಖ್ ಸಮುದಾಯದ ವಿರುದ್ಧ ವಿಷ ಕಾರುತ್ತಾ, ಲೇಖನಗಳನ್ನು ಬರೆಯುತ್ತಾ, ಸರ್ಕಾರದ ನೀತಿಗಳನ್ನು ಖಂಡಿಸುತ್ತಿದ್ದನು. 1948 ರ ಸೆಂಪ್ಟಂಬರ್ ತಿಂಗಳಲ್ಲಿ ಮಹಮದ್ ಆಲಿ ಜಿನ್ನಾ ನಿಧನಾನಂತರ, ಪ್ರಧಾನಿ ಲಿಯಾಕತ್ ಆಲಿ ಖಾನ್ ಅವರು 1948 ರ ಅಕ್ಟೋಬರ್ ತಿಂಗಳಲ್ಲಿ ಈ ಪರಮ ಮುಸ್ಲಿಂ ವಾದಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಿದರು.
ದೇಶಭ್ರಷ್ಟನಾದ ಚೌಧುರಿ ರೆಹಮತ್ ಲಂಡನ್ ನಗರಕ್ಕೆ ಬಂದು ಅಲ್ಲಿನ ಕಾನೂನು ಸೇವಾ ಸಂಸ್ಥೆಗಳಲ್ಲಿ ಗುಮಾಸ್ತನಾಗಿ ದುಡಿಯುತ್ತಾ, ಒಂಟಿಯಾಗಿ ಬದುಕು ದೂಡುತ್ತಿದ್ದನು. 1951 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ನಿಧನವಾಗಿ ಅನಾಥ ಹೆಣವಾದನು. ಆನಂತರ ಪಾಕ್ ಸರ್ಕಾರವು ಲಂಡನ್ ನಗರದಲ್ಲಿದ್ದ ರಾಯಭಾರಿ ಕಚೇರಿ ಮೂಲಕ ಆಸ್ಪತ್ರೆ ಬಿಲ್ ಹಣವನ್ನು ಪಾವತಿಸಿ, ಲಂಡನ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಿಸಿತು.

ಆರ್.ಎಸ್.ಎಸ್. ಹಿಂದೂ ರಾಷ್ಟ್ರದ ಭಕುತ ಮಣಿಗಳಾ, ಭಾರತದ ಇತಿಹಾಸವನ್ನು ಗಂಭೀರವಾಗಿ ಓದಿಕೊಳ್ಳಿರಯ್ಯ, ಈ ಜಗತ್ತಿನ ನೆಲದಲ್ಲಿ ಹಾರಾಡಿದ ಯಾವ ಸಾಮ್ರಾಟನೂ ಶಾಶ್ವತವಾಗಿ ಉಳಿದಿಲ್ಲ. ಎಲ್ಲರೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ಗಾಂಧೀಜಿ ಮತ್ತು ಅವರ ಸಹವರ್ತಿಗಳಾದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪೊಳ್ಳು ಭಾಷಣಗಳಿಂದ ಅಳಿಸಲು ಸಾಧ್ಯವಿಲ್ಲ. ಏಕೆಂದರೆ, ಈ ನೆಲದಲ್ಲಿ ದಾರ್ಶನಿಕ ಚಿಂತನೆಗಳಿಗೆ ಎಂದಿಗೂ ಸಾವಿಲ್ಲ.
ಪಾಕಿಸ್ತಾನದ ಚೌಧುರಿ ರೆಹಮತ್ ರೀತಿಯಲ್ಲಿ ನೀವೂ ಬೀದಿಯ ಹೆಣವಾಗುವುದು ಬೇಡ ಕಣ್ರಯ್ಯಾ. ಈಗ ಎದ್ದು ನಿಂತಿರವ ಜೆನ್ ಜಿ ಎಂಬ ಯುವತಲೆಮಾರಿನ ಚಿಂತನೆಯು ನಮ್ಮ ತಲೆ ಮಾಸಿದ ಚಿಂತನೆಗಳಿಂತ ಅರ್ಧ ಶತಮಾನಗಳ ಕಾಲ ಮುಂದಿದೆ. ಈ ವಾಸ್ತವ ಸತ್ಯವನನ್ನು ಅರ್ಥ ಮಾಡಿಕೊಂಡು ಮಾತನಾಡಲು ಕಲಿಯಿರಿ.
ಚಿತ್ರ ಒಂದು- ಚೌಧುರಿ ರೆಹಮತ್
ಚಿತ್ರ ಎರಡು- ಲಂಡನ್ ನಗರದಲ್ಲಿರುವ ಆತನ ಸಮಾಧಿ.

ಮಂಡ್ಯ ರೈತ ಸಂಘದ ಹಿರಿಯ ನಾಯಕ ಹೆಚ್.ಶ್ರೀನಿವಾಸ್ ಈಗ ನೆನಪು ಮಾತ್ರ.

 


1980 ರ ದಶಕದ ಆರಂಭದಲ್ಲಿ ಶಿವಮೊಗ್ಗದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರೈತ ಸಂಘವು ಹಾಸನ ಜಿಲ್ಲೆಗೆ ವಿಸ್ತರಿಸಿ, ಅಲ್ಲಿಂದ ಮಂಡ್ಯ ಜಿಲ್ಲೆಗೆ ಕಾಲಿಟ್ಟಾಗ, ರಾಜ್ಯ ರೈತಸಂಘವನ್ನು ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಮಂಡ್ಯ ನೆಲದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಹೆಚ್. ಶ್ರೀನಿವಾಸ್ ಪ್ರಮುಖರು.
ನಿನ್ನೆ ಮಂಡ್ಯ ನಗರದಲ್ಲಿ ಈ ಹಿರಿಯ ಜೀವ ತಮ್ಮ 88 ನೇ ವಯಸ್ಸಿಗೆ ನಿಧನರಾದರು. ಮೈಸೂರು- ಬೆಂಗಳೂರು ಮುಖ್ಯರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಬಂದಿಗೌಡ ಬಡಾವಣೆ ಎಂದರೆ, ನಮ್ಮ ಪಾಲಿಗೆ ಅಪ್ಪ ಮತ್ತು ಅಣ್ಣನ ಮನೆಗಳು ಎಂಬಂತಿತ್ತು. ನಾವೆಲ್ಲರೂ ಅಪ್ಪಾ ಎಂತಲೇ ಕರೆಯುತ್ತಿದ್ದ ಜಿ.ಮಾದೇಗೌಡರು ಅಲ್ಲಿದ್ದರು. ಅವರ ಮನೆಯ ಕೂಗಳತೆಯಲ್ಲಿ ಅಣ್ಣಾ ಎನ್ನುತ್ತಿದ್ದ ಮಂಡ್ಯ ಜಿಲ್ಲೆಯ ರೈತ ಸಂಘದ ಪ್ರಥಮ ಅಧ್ಯಕ್ಷರಾದ ಶ್ರೀನಿವಾಸ್ ಮನೆ ಇತ್ತು.
ನಮ್ಮ ಮಂಡ್ಯ ನೆಲದ ಸಂಸ್ಕೃತಿಯ ಮೂಲ ಲಕ್ಷಣವೆಂದರೆ, ಮನೆಗೆ ಬಂದವರನ್ನು ಕಾಫಿ ಕುಡಿಯುತ್ತೀರಾ? ಊಟ ಮಾಡುತ್ತೀರಾ? ಎಂದು ಕೇಳುವುದು ಅತಿಥಿಗಳಿಗೆ ಅಪಮಾನ ಮಾಡಿದಂತೆ.
ಊಟದ ಸಮಯವಾಗಿದ್ದರೆ, ಊಟದ ತಟ್ಟೆ ಮತ್ತು ಕಾಫಿ ಅಥವಾ ಚಹಾ ಸಮಯವಾಗಿದ್ದರೆ ಪಾನೀಯ ಲೋಟಗಳು ಮನೆಗೆ ಬಂದ ಅತಿಥಿಗಳ ಮುಂದೆ ಹಾಜರಾಗುತ್ತವೆ.
ಮನೆಯಲ್ಲಿರುವ ಸದಸ್ಯರ ಸಂಖ್ಯೆಗಿಂತ ಎರಡು ಮೂರು ಮಂದಿಗೆ ಹೆಚ್ಚಿನ ಮುದ್ದೆ, ಅನ್ನ ಮಾಡುವುದು ನಮ್ಮ ಪದ್ಧತಿ. ಹಾಗಾಗಿ‌ ಅಪ್ಪ ಮಾದೇಗೌಡರ ಮನೆಗೆ ಹೋದರೆ, ಅಪ್ಪನವರ ಬೈಗುಳ, ಬುದ್ಧಿವಾದದ ಜೊತೆಗೆ ಊಟ ದೊರೆಯುತ್ತಿತ್ತು. ಶ್ರೀನಿವಾಸ್ ಅಣ್ಣನವರ ಮನೆಗೆ ಹೋದರೆ, ಪ್ರೀತಿ ಹಾಗೂ ಚಳುವಳಿಯನ್ನು ಕಟ್ಟಿ ಬೆಳೆಸುವುದರ ಜೊತೆಗೆ ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗುವುದರೊಂದಿಗೆ ವರದಕ್ಷಿಣೆ, ಅದ್ದೂರಿ ವಿವಾಹ ವಿರೋದಿಸುವ ಬಗೆ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಮಾಡುವುದರ ಕುರಿತು ಮಾರ್ಗದರ್ಶನ ನೀಡುತ್ತಾ, ಊಟ ಮಾಡಿಸಿ ಕಳಿಸುತ್ತಿದ್ದರು.
ಹಳ್ಳಿಗಳಿಂದ ನಗರಕ್ಕೆ ಬಂದವರು ಹಸಿದ ಹೊಟ್ಟೆಯಲ್ಲಿ ಇರುತ್ತಾರೆ ಎಂಬ ಮನುಷ್ಯ ಪ್ರಜ್ಞೆಯು ನಮ್ಮ ಮಂಡ್ಯದ ಜನರಿಗೆ ವಂಶವಾಹಿಯಂತೆ, ಪರಂಪರೆಯಂತೆ ಬೆಳೆದು ಬಂದಿತ್ತು. ಅದು ಇಂದಿಗೂ ಜೀವಂತವಿದೆ. ಹೆಚ್. ಶ್ರೀನಿವಾಸ್ ಮದ್ದೂರು ತಾಲ್ಲೂಕು ವಳಗೇರಹಳ್ಳಿಯ ಶ್ರೀಮಂತ ರೈತ ಕುಟುಂಬದಿಂದ ಬಂದು ಮಂಡ್ಯದಲ್ಲಿ ವಕೀಲರಾಗಿದ್ದರು
ಅವರ ಮಾರ್ಗದರ್ಶನಿಂದ ಪ್ರೇರಿತರಾದ ನನ್ನ ತಲೆಮಾರಿನ ಬಹುತೇಕ ಗೆಳೆಯರು ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗಿ ಬದುಕು ಕಟ್ಟಿಕೊಂಡೆವು. ನನ್ನ ಪ್ರೇಮ ವಿವಾಹಕ್ಕೆ ಹದಿನಾಲ್ಕು ವರ್ಷ ವಿರೋಧ ವ್ಯಕ್ತ ಪಡಿಸಿ, ತಡೆಯೊಡ್ಡಿದ್ದ ನನ್ನ ಮಾವನವರು, ನಾನು 1989 ರಲ್ಲಿ ಸರಳ ವಿವಾಹವಾದ ಬಗೆ ನೋಡಿ, ವಿವಾಹವಾದ ಕ್ಷಣಾರ್ಧದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಶ್ರೀಮಂತ ಕುಟುಂಬದಿಂದ ಬಂದಿದ್ದ ಅವರಿಗೆ ಬಡ ರೈತನ ಮಗನಾದ ನನಗೆ ಮಗಳನ್ನು ನೀಡಲು ಇಷ್ಟವಿರಲಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘ ಸ್ಥಾಪನೆಯಾದಾಗ, ಶ್ರೀನಿವಾಸ್ ಅಣ್ಣ ಅಧ್ಯಕ್ಷರಾದರೆ, ಹನಕರೆ ಗ್ರಾಮದ ಹಾಗೂ ವಕೀಲರಾಗಿದ್ದ ಎಂ. ಶ್ರೀನಿವಾಸ್ ಖಜಾಂಚಿಯಾಗಿದ್ದರು. ಇನ್ನೊಬ್ಬ ಯುವ ನಾಯಕ ಮಂಡ್ಯ ಸಮೀಪದ ಸೂನಗಹಳ್ಳಿ ಗ್ರಾಮದ ಎಸ್.ಡಿ.ಜಯರಾಂ ಸಂಘಟನಾ ಕಾರ್ಯದರ್ಶಿಯಾದರು. ಮುಂದಿನ ದಿನಗಳಲ್ಲಿ ಎಸ್.ಡಿ. ಜಯರಾಂ ಮತ್ತು ಶ್ರೀನಿವಾಸ್ ಜೆ.ಡಿ.ಎಸ್. ಸೇರಿ ಶಾಸಕರಾದರು. ಆದರೆ, ಹೆಚ್. ಶ್ರೀನಿವಾಸ್ ತಟಸ್ಥರಾಗಿ ರೈತ ಸಂಘದಲ್ಲಿ ಉಳಿದರು. 1983 ರಲ್ಲಿ ಪಾಂಡುವಪುರದ ಮಿತ್ರ ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬಂದ ನಂತರ ರೈತ ಚಳುವಳಿಗೆ ಹೊಸ ಸ್ವರೂಪ ಮತ್ತು ಚಿಂತನೆ ಧಕ್ಕಿತು.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಮಂಡ್ಯ ಜಿಲ್ಲಾ ರೈತ ಸಂಘ ಆರ್ಥಿಕವಾಗಿ ದೊಡ್ಡ ಶಕ್ತಿಯನ್ನು ತುಂಬಿತು. ಮಂಡ್ಯ ಜಿಲ್ಲೆಯಲ್ಲಿದ್ದ ಮೂರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದ ರೈತರು ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ನೀಡುತ್ತಿದ್ದ ದರದಲ್ಲಿ ಐವತ್ತು ಪೈಸೆ ಹಣವನ್ನು ಸಂಘಕ್ಕೆ ನೀಡುವಂತೆ ಶ್ರೀನಿವಾಸ್ ಮನವೊಲಿಸಿದ್ದರು. ಐವತ್ತು ಟನ್ ಕಬ್ಬು ಬೆಳೆದ ರೈತನಿಂದ ಸಂಘಕ್ಕೆ ಇಪ್ಪತ್ತೈದು ರೂಪಾಯಿ ಸಂದಾಯವಾಗುತ್ತಿತ್ತು.
ಈ ಕಾರಣದಿಂದ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ನಲ್ಲಿ ರೈತರ ಬೃಹತ್ ಸಮಾವೇಶ ಮತ್ತು ಪ್ರೊ.ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ ಮುಂತಾದ ನಾಯಕರು ರಾಜ್ಯಾದ್ಯಂತ ಓಡಾಡಿ ರೈತ ಸಂಘಟನೆಯನ್ನು ರೂಪಿಸಲು ಸಾಧ್ಯವಾಯಿತು. ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡದಲ್ಲಿ ಒಂದು ವಾರ ಕಾಲ ರಾಜ್ಯ ರೈತ ಸಂಘಟನೆಯ ಪದಾಧಿಕಾರಿಗಳಿಗೆ ತರಬೇತಿ ಶಿಬಿರ ಏರ್ಪಡಿಸಿ, ಕಾನೂನು ಮತ್ತು ರೈತರ ಹಕ್ಕುಗಳನ್ನು ಪರಿಚಯ ಮಾಡಿಕೊಟ್ಟಿದ್ದು ಮಂಡ್ಯ ರೈತ ಸಂಘದ ಸಾಧನೆ.
ಈ ಶಿಬಿರದಲ್ಲಿ ಪ್ರೊ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ. ಪ್ರೊ.ರವಿವರ್ಮಕುಮಾರ್, ಹಾಸನದ ಮಂಜುನಾಥ ದತ್ತಣ್ಣ, ಆರ್.ಪಿ. ವೆಂಕಟೇಶ ಮೂರ್ತಿ, ಶಿವಮೊಗ್ಗದ ಕೆ.ಟಿ. ಗಂಗಾಧರ್ ಮುಂತಾದವರು ಆಗಮಿಸಿ ಉಪನ್ಯಾಸ ನೀಡಿದ್ದರು. ಅಂದು ಪರಿಚಯವಾದ ಈ ಅಣ್ಣಂದಿರು ಮತ್ತು ಗುರುಗಳ ಜೊತೆ ಈಗಲೂ ನಿಕಟ ಸಂಪರ್ಕ ಇಟ್ಟುಕೊಂಡಿದ್ದೀನಿ.
ಈಗ ಮಂಡ್ಯ ಜಿಲ್ಲೆಯ ರೈತ ಸಂಘದ ಸ್ಥಾಪಕರಲ್ಲಿ ಮೂರು ಬಾರಿ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಮಾತ್ರ ಇದ್ದಾರೆ. ಎಸ್.ಡಿ.ಜಯರಾಂ, ನನ್ನೂರಿನ ಕೆ.ಕೃಷ್ಣ, ಕ್ಯಾತನಹಳ್ಳಿ ಪುಟ್ಟಣ್ಣಯ್ಯ,ವಳಗೇರಹಳ್ಳಿಯ ಅಶೋಕ, ಬೆಸಗರಹಳ್ಳಿಯ ನನ್ನ ಹೈಸ್ಕೂಲ್ ಸಹಪಾಠಿ ಕೋಣಸಾಲೆ‌ ನರಸರಾಜು ಈಗಿಲ್ಲ. ಈ ದಿನ ಹೆಚ್. ಶ್ರೀನಿವಾಸ್ ಅಣ್ಣ ಕೂಡಾ ಮರಳಿ ಬಾರಲಾರದ ಊರಿಗೆ ತೆರಳಿದರು.
ರಾಜ್ಯ ಮಟ್ಟದಲ್ಲಿ ಸುಂದರೇಶ್, ಪ್ರೊಫೆಸರ್,ನಂಜುಂಡಸ್ವಾಮಿ, ಹೆಚ್.ಎಸ್. ರುದ್ರಪ್ಪ, ಇಲ್ಲ. ಕಡಿದಾಳು ಶಾಮಣ್ಣನವರು ಹಾಸಿಗೆ‌ಹಿ ಡಿದಿದ್ದಾರೆ. ಶಿವಮೊಗ್ಗಕ್ಕೆ ಹೋದರೆ, ಕಡದಕಟ್ಟೆ ಗಂಗಾಧರಣ್ಣ ಸಿಗುತ್ತಾರೆ. ಹಾಸನಕ್ಕೆ ಹೋದರೆ, ದತ್ತಣ್ಣ ಮತ್ತು ವೆಂಕಟೇಶ್ ಮೂರ್ತಿ ಅಣ್ಣ ಸಿಗುತ್ತಾರೆ. ನೋವಿನ ಸಂಗತಿ ಎಂದರೆ, ನಲವತ್ತು ವರ್ಷಗಳ ಕಾಲ ರಾಮಲಕ್ಷ್ಮಣರಂತೆ ಬದುಕಿ, ಹಾಸನದಲ್ಲಿ ಜನತಾ ಮಾಧ್ಯಮ ಪತ್ರಿಕೆ ನಡೆಸಿದ ಈ ಅಣ್ಣಂದಿರು ಈಗ ಬೇರೆಯಾಗಿದ್ದಾರೆ.
ಯಾಕ್ರಣ್ಣಾ? ಏನಾಯ್ತು ನಿಮಗೆ ಎಂದು ಕೇಳುವ ದ್ಯರ್ಯ ನನಗಿಲ್ಲ.ಏಕೆಂದರೆ, ಈ ಅಣ್ಣಂದಿರಿಂದ, ನೈತಿಕತೆ ಮತ್ತು‌ನಿಷ್ಟುರತೆಯನ್ನು ಕಲಿತವನು ನಾನು
ಹಾಗಾಗಿ ಈಗ ಎಲ್ಲಾ ಸಾರ್ವಜನಿಕ ಚಳುವಳಿಗಳಿಂದ ದೂರ ಉಳಿದಿದ್ದೀನಿ.
ಧಾರವಾಡ ಕುರಿತಂತೆ ಹಿಂದೆ ಒಂದು ಜನಪ್ರಿಯ ಜೋಕ್ ಚಾಲ್ತಿಯಲ್ಲಿತ್ತು. ಧಾರವಾಡ ನೆಲದಲ್ಲಿ ನಿಂತು‌ ನೀವು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ಕವಿಯ ಮನೆ ಮೇಲೆ ಬೀಳುತ್ತದೆ ಎಂದು.
ಈಗ‌ ಕರ್ನಾಟದ ನೆಲದಲ್ಲಿ ನಿಂತು ಒಂದು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ರಾಜ್ಯ ರೈತ ಸಂಘದ ಅಧ್ಯಕ್ಷನ ಮನೆಯ ಮೇಲೆ ಅಥವಾ ರಾಜ್ಯ ದಲಿತ ಸಂಘಟನೆಯ ಅಧ್ಯಕ್ಷನ ಮನೆಯ ಮೇಲೆ ಬೀಳುತ್ತದೆ
ಊರಿಗೊಬ್ಬ ದೊಣ್ಣೆ ನಾಯಕ ಸೃಷ್ಟಿಯಾದರೆ, ಸಾರ್ವಜನಿಕ ಚಳುವಳಿಗೆ ಅರ್ಥ, ಘನತೆ ಮತ್ತು ಗಾಂಭಿರ್ಯ ಉಳಿಯುವುದಿಲ್ಲ.
ಕ್ಷಮಿಸಿ, ಅಣ್ಣನವರ ಅಗಲಿಕೆಯ ನೋವಿನಲ್ಲಿ ಇವೆಲ್ಲವನ್ನೂ ಬರೆಯಬೇಕಾಯಿತು.

ಭಾನುವಾರ, ಆಗಸ್ಟ್ 9, 2026

ಗೆಳೆಯ ಎನ್.ಕೆ. ಹನುಮಂತಯ್ಯನ ನೆನಪುಗಳು



ಕಳೆದ ಹದಿನೈದು ವರ್ಷಗಳಿಂದ ಈ ಫೇಸ್ ಬುಕ್ ನಲ್ಲಿರುವ ಕವಿಪುಂಗವರು ಮತ್ತು ಪುಂಗಿಣಿಯರ ಕಾಟದಿಂದ ನಾನು ಕವಿತೆಗಳನ್ನು ಓದುವುದನ್ನು ನಿಲ್ಲಿಸಿದ್ದೀನಿ. ವಾಸ್ತವವಾಗಿ ನಾನು ಕಾವ್ದದ ಕಡು ವ್ಯಾಮೋಹಿ. ಬೇಸರವಾದಾಗೆಲ್ಲಾ ನನ್ನ ಸಂಗ್ರಹದಲ್ಲಿರುವ ಕವಿತೆಗಳನ್ನು ಓದುವುದು ನನ್ನ ಹವ್ಯಾಸ.
ಇತ್ತೀಚೆಗಿನ ವರ್ಷಗಳಲ್ಲಿ ಸುಬ್ಬು ಹೊಲೆಯಾರ್ ಮತ್ತು ಎನ್.ಕೆ.ಹನುಮಂತಯ್ಯ ನನ್ನ ಇಷ್ಟದ ಕವಿಗಳಲ್ಲಿ ಮುಖ್ಯರಾದವರು. ಮಿತ್ರ ಮೊಗಳ್ಳಿ ಗಣೇಶ್ ಮೂಲಕ ಪರಿಚಯವಾಗಿದ್ದ ಹನುಮಂತಯ್ಯನ ಒಂದು ಪದ್ಯ ‘’ ಅವ್ವ ನಿಂತೇಯಿದ್ದಾಳೆ’’ ಎನ್ನುವ ಕವಿತೆ ನನನ್ನ ಅಲುಗಾಡಿಸಿ ಬಿಟ್ಟಿತ್ತು ಪಿ.ಲಂಕೇಶ್ ಅವರ ‘’ ನನ್ನವ್ವ ಫಲವತ್ತಾದ ಕಪ್ಪು ನೆಲ’’ ಕವಿತೆಯ ಹಾಗೆ ಹನುಮಂತಯ್ಯನ ಈ ಕವಿತೆ ಯಾವಾಗಲೂ ನನಗೆ ನೆನಪಾಗುತ್ತಿತ್ತು.
ಹನುಮಂತಯ್ಯ ಪ್ರೀತಿಸಿ, ವಿವಾಹವಾಗಿ, ನಂತರ ಇನ್ನೊಂದು ಪ್ರೇಮಪ್ರಕರಣಕ್ಕೆ ಸಿಲುಕಿ, ಪ್ರಾಪಪ್ರಜ್ಞೆ ಮತ್ತು ಅದರಿಂದ ಹೊರಬಾರದೆ ಆತ್ಮಹತ್ಯೆಗೆ ಶರಣಾಗಿದ್ದು ಕನ್ನಡ ಕಾವ್ಯಲೋಕದ ದುರಂತಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾಗ, 2010 ಎಂದು ನೆನಪು. ಬೆಳಿಗ್ಗೆ ಕಾಲೇಜಿಗೆ ಹೋದ ತಕ್ಷಣ, ಅಧ್ಯಾಪಕರ ಕೊಠಡಿಯಲ್ಲಿ ಜೇಬಿನಲ್ಲಿ ತಂದಿದ್ದ ವಿಷ ಕುಡಿದುಬಿಟ್ಟ.
ಮಧ್ಯಾಹ್ನದ ವೇಳೆಗೆ ತಿಪಟೂರಿನಿಂದ ಎಸ್. ಗಂಗಾಧರಯ್ಯ ನನಗೆ ಕರೆ ಮಾಡಿ, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿರುವ ಹನುಮಂತಯ್ಯನನ್ನು ಹೇಗಾದರು ಮಾಡಿ ಉಳಿಸಬೇಕು ಗುರುವೇ ಎಂದು ಹೇಳಿದಾಗ, ನನಗೆ ಶಾಕ್ ಆಯಿತು. ಗಂಗಾಧರಯ್ಯನವರ ಪುತ್ರಿ ಸ್ಮಿತಾ ಮಾಕಳ್ಳಿಗೆ ಧಾರವಾಡದಲ್ಲಿ ನನ್ನ ಮಕ್ಕಳು ಓದುತ್ತಿದ್ದ ಜೆ.ಎಸ್.ಎಸ್. ಕಾಲೇಜಿನಲ್ಲಿ ಸೀಟ್ ಕೊಡಿಸಿದ್ದೆ. ಹಾಗಾಗಿ ಗಂಗಾಧರಯ್ಯ ದಂಪತಿಗಳು ಧಾರವಾಡದ ಮನೆಗೆ ಬರುವುದು ಸಾಮಾನ್ಯವಾಗಿತ್ತು. ಬಂದಾಗಲೆಲ್ಲಾ , ಹನುಮಂತಯ್ಯ, ಪ್ರೀತಿಸಿ ಮದುವೆಯಾದ ನಂತರವೂ, ಇನ್ನೊಂದು ಪ್ರಕರಣದಲ್ಲಿ ಸಿಲುಕಿ ನರಳಾಡುತ್ತಿರುವುದನ್ನು ಇಬ್ಬರೂ ಸಾಮಾನ್ಯವಾಗಿ ಚರ್ಚಿಸುತ್ತಿದ್ದೆವು. ಎರಡು ಮೂರು ಬಾರಿ ಕರೆ ಮಾಡಿ ತಮ್ಮನಿಗೆ ಬುದ್ದಿವಾದ ಹೇಳುವ ಹಾಗೆ ಹನುಮಂತಯ್ಯನಿಗೆ ಹೇಳಿದ್ದೆ.
ಉಡುಪಿ ಮತ್ತು ಮಂಗಳೂರು ಈ ಎರಡು ಜಿಲ್ಲೆಗಳು ಉದಯ ಟಿ.ವಿ.ಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದಾಗ, ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಮಾತ್ರ ನನ್ನ ವ್ಯಾಪ್ತಿಯಲ್ಲಿತ್ತು. ಉಡುಪಿಯ ವರದಿಗಾರ ಗಣೇಶ್ ಮತ್ತು ಮಂಗಳೂರು ವರದಿಗಾರ ಶ್ರೀನಿವಾಸ ನಾಯಕ್ ಇಬ್ಬರೂ ನನಗೆ ಪರಿಚಿತರು ನಾನು ಅತ್ತ ಕಡೆ ಹೋದಾಗ, ಸದಾ ನನ್ನ ಜೊತೆ ಇರುತ್ತಿದ್ದರು. .
ಕೂಡಲೇ ಪೋನ್ ಮಾಡಿ ಮಾತನಾಡಿದಾಗ ಉಡುಪಿ ವರದಿಗಾರ ಗಣೇಶ್, ಆಸ್ಪತ್ರೆಗೆ ಹೋಗಿ ಬಂದು ವಿವರವಾಗಿ ಪರಿಸ್ಥಿತಿಯನ್ನು ವಿವರಿಸಿದ.ನು. ಗಣೇಶ್ ನ ಸ್ವಂತ ಸಹೋದರಿ ತ್ರಿವೇಣಿ ಎಂಬುವರು ಅಲ್ಲಿ ನರ್ಸ್ ಆಗಿ, ಕಾರ್ಯ ನಿರ್ವಹಿಸುತ್ತಾ, ಹನುಮಂತಯ್ಯನ ಚಿಕಿತ್ಸೆಯ ಜವಾಬ್ದಾರಿ ಹೊತ್ತಿದ್ದರು.
ನನಗೆ ಕರೆ ಮಾಡಿದ ಅವರು, ಇಡೀ ಬಾಟಲ್ ಪೂರ್ತಿ ವಿಷ ಕುಡಿದಿದ್ದಾರೆ ಸರ್, . ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಜೊತೆಗೆ ಉಳಿಯುವ ಸಾಧ್ಯತೆ ಇಲ್ಲ ಎಂದು ನುಡಿದುಬಿಟ್ಟರು. ನಂತರ ಆ ಇಬ್ಬರು ವರದಿಗಾರರ ಮೂಲಕ ಯಾವ ಕಾರಣಕ್ಕೂ ಇದು ಆತ್ಮಹತ್ಯೆ ಕೇಸ್ ಎಂದು ದಾಖಲಾಗದಂತೆ ನೋಡಿಕೊಂಡೆ. ಉ.ಕ. ಜಿಲ್ಲೆಯ ವರದಿಗಾರಾಗಿದ್ದ ಗಂಗಾಧರ ಹಿರೇಗುತ್ತಿ ಮೂಲಕ ಪೊಲೀಸ್ ಕೇಸ್ ನಲ್ಲಿ ಈ ಅಂಶ ದಾಖಲಾಗದಂತೆ ನೋಡಿಕೊಂಡೆ. ಗಂಗಾಧರ ಹಿರೇಗುತ್ತಿ ಕರಾವಳಿ ಮುಂಜಾವು ದಿನಪತ್ರಿಕೆ ನಡೆಸುತ್ತಿದ್ದರೂ ಸಹ, ಉದಯ ಟಿ.ವಿ. ವರದಿಗಾರಿಕೆಯನ್ನು ತಮ್ಮ ಪತ್ರಿಕೆಯ ವರದಿಗಾರರ ಮೂಲಕ ನಿರ್ವಹಿಸುತ್ತಿದ್ದರು. ಉದಯ ಟಿ.ವಿ. ವಾರ್ತೆಯು ಆರ್.ಎಸ್.ಎಸ್. ಮನೋಭಾವದ ಹವ್ಯಕ್ಯ ಬ್ರಾಹ್ಮಣ ವರದಿಗಾರರಿಗೆ ಸಿಗದಂತೆ , ನನ್ನ ಮಾತಿಗೆ ಬೆಲೆ ಕೊಟ್ಟು, ಗಂಗಾಧರ್ ನೋಡಿಕೊಳ್ಳುತ್ತಿದ್ದರು.
ಹನುಮಂತಯ್ಯ ತೀರಿಕೊಂಡ ಮೂರು ವರ್ಷಗಳ ನಂತರ ಹಾಸನದಲ್ಲಿ ನಡೆದ ನನ್ನ ಮರುಭೂಮಿಯ ಹೂ ಕೃತಿಯ ಕುರಿತ ವಿಚಾರ ಸಂಕಿರಣ ಸಮಾರಂಭದಲ್ಲಿ ಹನುಮಂತಯ್ಯನವರ ಪತ್ನಿ ಶೈಲಜಾ ಮತ್ತು ಪುತ್ರಿಯನ್ನು ಪ್ರಥಮ ಬಾರಿಗೆ ಭೇಟಿ ಮಾಡಿದೆ. ಒಡಹುಟ್ಟಿದ ಕಿರಿಯ ಸಹೋದರಿಯನ್ನು ಹರಸುವ ಹಾಗೆ ಕೈ ಹಿಡಿದು ಸಾಂತ್ವನ ಹೇಳಿ, ಮಗಳ ತಲೆಯ ಮೇಲೆ ಕೈ ಯಿಟ್ಟು ಹರಸಿ ಮಾತನಾಡಿಸಿ ಬಂದೆ.
ನಿನ್ನೆ ಸಂಜೆಯಿಂದ ಹನುಮಂತಯ್ಯನ ಕವಿತೆಗಳನ್ನು ಓದುವಾಗ, ಹಳೆಯ ನೆನಪುಗಳು ನುಗ್ಗಿಬಂದವು.
ಇಲ್ಲಿ ಮಿತ್ರನ ಎರಡು ಕವಿತೆಗಳನ್ನು ಹಾಕಿದ್ದೀನಿ. ಸುಮ್ಮನೇ ಓದಿ ಬಿಡಿ. ಮಾತುಗಳು ಬೇಡ ಎನಿಸುತ್ತಿದೆ.
ಜಗದೀಶ್ ಕೊಪ್ಪ.
ಕವಿತೆ- ಒಂದು
ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.
ಎಲ್ಲಾದರೂ
ಅಳು ಅಂಟಿಕೊಂಡಿದ್ದರೆ…
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ
*****************
ಕವಿತೆ-ಎರಡು
ಅವ್ವ ನಿಂತೇಯಿದ್ದಾಳೆ
ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲು ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ
ಅವಳ ಕಣ್ಣೀರ ಆತುಕೊಳ್ಳಲು ಹೋದೆ
ಕೈ ಸುಟ್ಟಿತು
ಮನೆ ತುಂಬಾ ಹೊಗೆಯ ಬಲೆ
ಮುರಿದ ತೀರುಗಳ ತೂರಿ ಬರುವ
ಸೂರ್ಯನಾಲಗೆ
ನಿಂತಲ್ಲೇ ಉರಿಯುವೆನು
ಯಾರಿಟ್ಟ ಕಿಚ್ಚಿಗೋ…
ಅವ್ವ ನಿಂತೇ ಇದ್ದಾಳೆ
ಕಪ್ಪು ಜಡೆ ಉದುರಿ ಒಣ ಗರಿಕೆಯಂತಾಗಿ
ಶಿಲೆಯಂತೆ
ಹತ್ತಿರ ಹೋಗಿ ಅವಳ ಕಿಟಕಿ ದಾಟಿದ
ನೋಟವನೇರಿ ನೋಡಿದರೆ
ಆಚೆ ಆ ಕೊಪ್ಪಲಲಿ ಅವನು ಮಲಗಿದ್ದಾನೆ
ನಿನ್ನೆ ಮದುವೆಯಾದ ಹೆಂಡಿರೊಡನೆ
ಮೊಲೆ ಚೆಂಡಿನೊಡನೆ
ಅವನೇ ನಾನು ನಿದ್ದೆಗಣ್ಣಲಿ ಎದ್ದಾಗ
ಸೇಬು ಕೊಟ್ಟವನು
ಅಪ್ಪನ ಹೆಣ ಬೀದಿಯಲಿ ಸಾಗುವಾಗ
ಅಳುವ ಅವ್ವನ ತುಟಿಗೆ ನಗುವ
ಬಳಿದವನು
ಹೊಲಸ ಕೆರೆ ತೊರೆದು ವಲಸೆ ಹೋದ ಹಕ್ಕಿ ನಾನು
ಮತ್ತೆ ಬಂದಿರುವೆ ಮೈ ಸುಟ್ಟು
ಅವ್ವ ನಿಂತೇಯಿದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ.

ಶನಿವಾರ, ಆಗಸ್ಟ್ 8, 2026

ಡಾ. ಮನಮೋಹನ್ ಸಿಂಗ್ ನೆನಪುಗಳು

 

 


ಭಾರತದ ಪ್ರಧಾನಿ ಹುದ್ದೆಯ ಕುರಿತಾಗಿ, ಅಸಹ್ಯ ಹಾಗೂ ಜಿಗುಪ್ಸೆ ಮೂಡಿರುವ ಈ ದಿನಗಳಲ್ಲಿ ಪದೇ ಪದೇ ನೆನಪಾಗುವ ವ್ಯಕ್ತಿಗಳಲ್ಲಿ ನೆಹರು, ಶಾಸ್ತ್ರಿ ಮತ್ತು ಮನಮೋಹನ್ ಸಿಂಗ್ ಎದ್ದು ಕಾಣುವ ಹೆಸರುಗಳು. ಓರ್ವ ಅರ್ಥಶಾಸ್ತçದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ನನ್ನ ಮೇಲೆ ಪ್ರಭಾವ ಬೀರಿದ ಅರ್ಥಶಾಸ್ತçಜ್ಞರಲ್ಲಿ ಅಮಾರ್ತ್ಯ ಸೇನ್, ಮಹಮ್ಮದ್ ಯೂನಸ್, ಜೋಸೆಪ್ ಸ್ಟಿಗ್ಲಿಟ್ ಹಾಗೂ ಮನಮೋಹನ ಸಿಂಗ್ ಮುಖ್ಯರಾದವರು.

ಕಡು ಬೂದು ಬಣ್ಣದ ಗಡ್ಡ, ನೀಲಿ ಪೇಟ ಮತ್ತು ಶ್ವೇತವರ್ಣದ ಶರ್ಟ್ ಧರಿಸುವ ಹಾಗೂ  ಕನ್ನಡಕ ಧರಿಸಿ, ಸದಾ ಜೇಬಿನಲ್ಲಿ ಪೆನ್ನು ಇರುವ ಭಾರತೀಯ ವ್ಯಕ್ತಿ ಎಂದರೆ, ಅವರು ಭಾರತದ ಅರ್ಥಶಾಸ್ತçಜ್ಞ  ಡಾ.ಮನಮೋಹನ್ ಸಿಂಗ್ ಎಂದು ಇಡೀ ಜಗತ್ತು ಸುಲಭವಾಗಿ ಗುರುತಿಸುತ್ತಿತ್ತು.  ಇಡೀ ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ  ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ನಾಯಕ ಎಂದು  ಪ್ರಸಿದ್ಧರಾಗಿದ್ದ ಭಾರತದ ಮಾಜಿ  ಪ್ರಧಾನಿ ಡಾ ಮನಮೋಹನ್  ಸಿಂಗ್  ಅವರು ಇಪ್ಪತ್ತನೇಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತೊಂದನೆಯ ಶತಮಾನದ ಆದಿ ಭಾಗದಲ್ಲಿ ಈ ಜಗತ್ತಿನಿಂದ ಶ್ರೇಷ್ಠ ಅರ್ಥಶಾಸ್ತçಜ್ಞ ಎಂದು ಗೌರವಿಸಲ್ಪಟ್ಟವರು. ಸೌಮ್ಯ ಸ್ವಭಾವದ  ಮನಮೋಹನ್  ಸಿಂಗ್ ಅವರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾಗಿದ್ದರು..  ಅವರ ಜೀವನ ಅನುಭವ ಮತ್ತು ಶಿಕ್ಷಣದ ಹಿನ್ನಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲೆಂಡಿನ ಕೇಂಬ್ರಿಡ್ಜ್  ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ.ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ನಾಗರೀಕ ಎಂಬ ಗೌರವಕ್ಕೆ  ಡಾ. ಮನಮೋಹನ್ ಸಿಂಗ್ ಪಾತ್ರರಾದರು. ಅತಿ ಕಡಿಮೆ ಮಾತುಗಳಲ್ಲಿ ಹೇಳಬೇಕಾದ ವಿಚಾರಗಳನ್ನು ಸ್ಪಷ್ಟವಾಗಿ ಹೇಳಬಲ್ಲ ಅವರನ್ನು ಭಾರತದ ಮಾಧ್ಯಮಗಳು ಇವರು ಮನಮೋಹನ್ ಸಿಂಗ್ ಅವರೋ?  ಅಥವಾ ಮನ ಮೌನಸಿಂಗರೋ? ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅಪಹಾಸ್ಯ ಮಾಡಿದ್ದುಂಟು.

 ಡಾ. ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26 ರಂದು ಸಿಖ್ ಕುಟುಂಬದಲ್ಲಿ ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳಿಗೆ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ  ಗಾಹ್ ಎಂಬ ಗ್ರಾಮದಲ್ಲಿ  ಜನಿಸಿದರು.   ಬಾಲ್ಯದಲ್ಲಿ ತಾಯಿ ತೀರಿಕೊಂಡ ಕಾರಣ, ಅಜ್ಜಿಯ (ತಂದೆಯ ತಾಯಿ) ಮೊಮ್ಮಗನನ್ನು ಕಾಳಜಿಯಿಂದ ಬೆಳೆಸಿದರು. ಇದರ ಪ್ರಭಾವದಿಂದಾಗಿ    ಅವರು ಬಾಲ್ಯದಿಂದಲೂ  ಅಜ್ಜಿಗೆ ತುಂಬಾ ಹತ್ತಿರವಾಗಿದ್ದರು.  ಮನಮೋಹನ ಸಿಂಗ್  ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು, ಈ ಕಾರಣದಿಂದಾಗಿ ಅವರು  ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ    ತಮ್ಮ  ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದುಕೊಂಡು ಮಾತನಾಡುತ್ತಿದ್ದರು.  ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿ ಲಿಪಿಯನ್ನು ಸಹ ಬಳಸುತ್ತಿದ್ದರು.

 1947 ರಲ್ಲಿ ಅಖಂಡ ಭಾರತವು ವಿಭಜನೆಯಾದ  ನಂತರ  ಅವರ ಕುಟುಂಬವು ಭಾರತದ ಹಲ್ದ್ವಾನಿಗೆ ವಲಸೆ ಬಂದು ನೆಲೆಸಿತು.  ನಂತರ ೧೯೪೮ ರಲ್ಲಿ ಕುಟುಂಬದ ಸದಸ್ಯರು ಅಮೃತಸರಕ್ಕೆ ಸ್ಥಳಾಂತರಗೊಂಡರು  ಅಲ್ಲಿ  ಸಿಂಗ್‌ರವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಪದವಿ ಅಧ್ಯಯನಕ್ಕೆ  ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿ  ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಕ್ರಮವಾಗಿ 1952 ಮತ್ತು 1954  ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು, ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಮನಮೋಹನ್ ಸಿಂಗ್   1957 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅರ್ಥಶಾಸ್ತ್ರದದಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು.  ಬ್ರಿಟಿಷ್ ಪತ್ರಕರ್ತ ಹಾಗೂ ಬಿ.ಬಿ.ಸಿ.ವರದಿಗಾರರಾಗಿದ್ದ  ಮಾರ್ಕ್ ಟುಲ್ಲಿ ಅವರೊಂದಿಗಿನ  20005 ರ ಸಂದರ್ಶನದಲ್ಲಿ  ಸಿಂಗ್ ಅವರು ತಮ್ಮ ಕೇಂಬ್ರಿಡ್ಜ್ ದಿನಗಳು ಮತ್ತು ಅರ್ಥಶಾಸ್ತçದಿಂದ ಗಳಿಸಿಕೊಂಡ ಜ್ಞಾನವನ್ನು ಹೀಗೆ ವಿವರಿಸಿದ್ದಾರೆ.

 ’ ಮಾನವ ವ್ಯವಹಾರಗಳನ್ನು ರೂಪಿಸುವಲ್ಲಿ ರಾಜಕೀಯದ ಸೃಜನಾತ್ಮಕ ಪಾತ್ರದ ಬಗ್ಗೆ ನಾನು ಮೊದಲು ಜಾಗೃತನಾಗಿದ್ದೆ. ಈ ವಿಷಯದಲ್ಲಿ  ನನ್ನ ಮಾರ್ಗದರ್ಶಕರಾಗಿದ್ದ  ಜೋನ್ ರಾಬಿನ್ಸನ್ ಮತ್ತು ನಿಕೋಲಸ್ ಕಾಲ್ಡೋರ್ ಅವರಿಗೆ ಋಣಿಯಾಗಿದ್ದೇನೆ . ಜೋನ್ ರಾಬಿನ್ಸನ್ ಒಬ್ಬ ಅದ್ಭುತ ಪ್ರಾಧ್ಯಾಪಕರಾಗಿದ್ದರು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಆಂತರಿಕ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದರು.  ಅದನ್ನು ಕೆಲವೇ ಕೆಲವರು ಸಾಧಿಸಲು ಸಾಧ್ಯವಾಯಿತು. ಅವರು ನನ್ನನ್ನು ಬಹಳವಾಗಿ ಪ್ರಶ್ನಿಸಿದರು ಮತ್ತು ಯೋಚಿಸಲಾಗದದನ್ನು ಯೋಚಿಸುವಂತೆ ಮಾಡಿದರು ಅವರು ಕೇನ್ಸ್ನ ಎಡಪಂಥೀಯ ವ್ಯಾಖ್ಯಾನವನ್ನು ಪ್ರತಿಪಾದಿಸಿದರು,  ‘ನಿಜವಾಗಿಯೂ ಸಾಮಾಜಿಕ ಸಮಾನತೆಯೊಂದಿಗೆ ಅಭಿವೃದ್ಧಿಯನ್ನು ಸಂಯೋಜಿಸಲು ಬಯಸಿದರೆ ರಾಜ್ಯವು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ’ೆ ಎಂದು ಅವರು ಹೇಳುತ್ತಿದ್ದರು. ಕಾಲ್ದೋರ್ ನನ್ನ ಮೇಲೆ ಇನ್ನಷ್ಟು ಪ್ರಭಾವ ಬೀರಿದರು;  ಜೋನ್ ರಾಬಿನ್ಸನ್ ಚೀನಾದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಒಬ್ಬ ಮಹಾನ್ ಅಭಿಮಾನಿಯಾಗಿದ್ದರು, ಆದರೆ, ಕ್ಯಾಲ್ಡೋರ್ ಕೇನ್ಸ್ನ ವಿಶ್ಲೇಷಣೆಯನ್ನು ಬಂಡವಾಳಶಾಹಿಯನ್ನು ಕೆಲಸ ಮಾಡಲು ಸಾಧ್ಯವೆಂದು ತೋರಿಸಲು ಬಳಸಿದರು.’’ ಜಗತ್ತಿನ ಶ್ರೇಷ್ಠ ಚಿಂತಕರ ಬಳಿ ಅವರು ಓರ್ವ ಪ್ರತಿಭಾವಂತ ಅರ್ಥಶಾಸ್ತçಜರಾಗಿ ರೂಪುಗೊಂಡ ನಂತರ ಡಾ.ಮನಮೋಹನ್ ಸಿಂಗ್ ಭಾರತಕ್ಕೆ ಮರಳಿದರು.

  ಭಾರತಕ್ಕೆ ಬಂದ ನಂತರ  ಅವರು 1957  ರಿಂದ 1959  ರವರೆಗೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. 1959 ಮತ್ತು  1963 ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು 1963 ರಿಂದ 1965 ರವರೆಗೆ  ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.  ನಂತರ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ .ಸಂಸ್ಥೆಗೆ  (UNCTAD) ಕೆಲಸ ಮಾಡಲು ಅಮೇರಿಕಾಕ್ಕೆ ಹೋಗಿದ್ದರು.  ಮೂರು ವರ್ಷ ಸೇವೆ ಸಲ್ಲಿಸಿ ಭಾರತಕ್ಕೆ ಮರಳಿ ಬಂದ  ಅವರನ್ನು ಲಲಿತ್ ನಾರಾಯಣ ಮಿಶ್ರಾ ಅವರು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದರ ಜೊತೆಗೆ    ೧೯೬೯ ರಿಂದ ೧೯೭೧ ರವರೆಗೆ, ಸಿಂಗ್ ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ  ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

 1972 ರಲ್ಲಿ, ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು 1976 ರ ವೇಳೆಗೆ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು 1980--1982 ರಲ್ಲಿ  ಯೋಜನಾ ಆಯೋಗದ ಸದಸ್ಯರಾಗಿ ಆಯ್ಕೆಯಾದರು.   1982ರಲ್ಲಿ  ಅವರು ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ನೇಮಕಗೊಂಡರು.  1985 ರವರೆಗೆ  ಡಾ.ಮನಮೋಹನ್ ಸಿಂಗ್ ಅವರು ಆ ಹುದ್ದೆಯಲ್ಲಿದ್ದರು. 1985 ರಿಂದ 1987 ರವರೆಗೆ ಯೋಜನಾ ಆಯೋಗದ  ಉಪಾಧ್ಯಕ್ಷರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ  1991ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು.

 ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಡಾ.ಮನಮೋಹನ್ ಸಿಂಗವರನ್ನು ತಮ್ಮ ಸಂಪುಟದಲ್ಲಿ ಹಣಕಾಸು ಅಥವಾ ಅರ್ಥ ಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದು.  ಏಕೆಂದರೆ, ಅದೇ ವರ್ಷದ ಅಂದರೆ,  1991 ರ ಮೇ ತಿಂಗಳಿನ 21 ರಿಂದ 30 ರವರೆಗೆ ಭಾರತ ಸರ್ಕಾರವು  67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ  47 ಟನ್  ಮತ್ತು ಲಂಡನ್ ನಗರದ  ಸ್ವಿಟ್ಜರ್ ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು  ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು. 1990 ರಲ್ಲಿ ಕಾಂಗ್ರೇಸ್  ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರವು  ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991 ರ ಮಾರ್ಚ್ ತಿಂಗಳಲ್ಲಿ  ಬಹುಮತ ಕಳೆದುಕೊಂಡು ಪತನಗೊಂಡಿತು. ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ  ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಹಣವು ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿಅಂಚಿಗೆ ದೂಡಿತ್ತು. 1991 ರ ಜೂನ್ ನಲ್ಲಿ ನಡೆದ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.

 1991 ರ ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆ ಮಾರಿನ ಬಹುತೇಕ ಮಂದಿಗೆ  ಗೊತ್ತಿಲ್ಲದ ವಿಷಯವಾಗಿದೆ. ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು. ಮೂಲತಃ ಸಿಂಗ್ ರವರು ಇಬ್ಬರು ವಿಭಿನ್ನ ವಿಚಾರ ಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ  ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದ ಕಾರಣದಿಂದಾಗಿ  ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 20002 ರಿಂದ 2010 ರ ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.

 ಡಾ.ಮನಮೋಹನ್ ಸಿಂಗ್ ಅವರು ಅನಿರೀಕ್ಷಿತವಾಗಿ ತಾವು ರಾಜಕೀಯ ಪ್ರವೇಶಿದ ಕ್ಷಣವನ್ನು ಬಿ.ಬಿ.ಸಿ. ರೇಡಿಯೋಗೆ ಈ ರೀತಿಯಲ್ಲಿ ವಿವರಿಸಿದ್ದಾರೆ. ‘’ಜೂನ್ 1991 ರಲ್ಲಿ ಆ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿ ಪಿವಿ ನರಸಿಂಹ ರಾವ್ ಅವರು  ನನ್ನನ್ನು  ಹಣಕಾಸು ಮಂತ್ರಿಯಾಗಿ ಆಯ್ಕೆ ಮಾಡಿದರು. ನರಸಿಂಹರಾವ್ ಅವರು ತಮ್ಮ ಕ್ಯಾಬಿನೆಟ್ ಅನ್ನು ರೂಪಿಸುವ ದಿನ,  ತಮ್ಮ ಪ್ರಧಾನ ಕಾರ್ಯದರ್ಶಿಯನ್ನು ನನ್ನ ಬಳಿಗೆ ಕಳುಹಿಸಿದರು, 'ನೀವು ಹಣಕಾಸು ಸಚಿವರಾಗಬೇಕೆಂದು ಪ್ರಧಾನಿ ಬಯಸುತ್ತಾರೆ' ಎಂದು ಕಾರ್ಯದರ್ಶಿ ನನಗೆ  ಹೇಳಿದರು. ನಾನು ಆ ಆಹ್ವಾನವನ್ನು  ಸ್ವೀಕರಿಸಲಿಲ್ಲ. ಅಂತಿಮವಾಗಿ ಮರುದಿನ ಬೆಳಿಗ್ಗೆ  ಪಿ.ವಿ. ನರಸಿಂಹರಾವ್ ನನನ ನಿವಾಸಕ್ಕೆ ಆಗಮಿಸಿದರು. ನನ್ನ ನಿರ್ಧಾರದಿಂದ ಅವರು ಕೋಪಗೊಂಡಿದ್ದರು ಮತ್ತು ಪ್ರಮಾಣ ವಚನಕ್ಕೆ ರಾಷ್ಟ್ರಪತಿ ಭವನಕ್ಕೆ ಬರಬೇಕೆಂದು ಒತ್ತಾಯಿಸಿದರು. ಹಾಗಾಗಿ ನಾನು ರಾಜಕೀಯವನ್ನು ಪ್ರವೇಶಿಸಿದೆ.’’ ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಪ್ರೊ. ಮಹಮ್ಮದ್ ಯೂನಸ್ ಇವರಿಗಿಂತ ಮುಂಚೆ ಈ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಅವರಿಗಿತ್ತು. ಇಪ್ಪತ್ತು  ಮತ್ತು ಇಪ್ಪತ್ತೊಂದನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರು ಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಅವರನ್ನು ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ.

 ಎಂದಿಗೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತವಾಗಿ ಭಾರತದ ಪ್ರಧಾನಿಯಾಗುವ  ಅದೃಷ್ಠವೂ ಒಲಿದು ಬಂತು. ೨೦೦೪ ರಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.ಎ. ಒಕ್ಕೂಟ ಸರ್ಕಾರ  ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ ( ವಿದೇಶಿ ಮಹಿಳೆ ಮತ್ತು  1984 ರ ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಡಾ. ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು. ಆ ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪ ಸಂಖ್ಯಾತ ಸಮುದಾಯದಿಂದ ಬಂದ ಅಂದರೆ, ಮುಸ್ಲಿಂ ಮತ್ತು ಸಿಖ್ ಸಮುದಾಯದ  ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಡಾ.ಅಬ್ದುಲ್ ಕಲಾಂ ಮತ್ತು ಡಾ. ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.

 20004 ರಿಂದ 20009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ನಡೆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು, ಬುಷ್ ಮತ್ತು ಬರಾಕ್ ಒಬಾಮ ರಂತಹವರು  ಆರ್ಥಿಕ ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಬಾರತದ   ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರಾಷ್ಟ್ರೀಯ ಹಣಕಾಸು ನಿಧಿ(I.M.F) ಸಾಲನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು  (Struvtural adjusments) ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.

 ಡಾ.ಮನಮೋಹನ್ ಸಿಂಗ್ ರವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ಏಕೆಂದರೆ,  ದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ಈ ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಎರಡನೇ ಅವಧಿಯಲ್ಲಿ ಸಿಂಗ್ ಅವರ ಸಚಿವ ಸಂಪುಟದಲ್ಲಿ ಸಚಿವರಾದರು. ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೇಸ್ ಪಕ್ಷದ ಭಟ್ಟಂಗಿ ನಾಯಕರು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2.ಜಿ. ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು. ಯು.ಪಿ.ಎ. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಭಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012 ರ ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆಯು ಭಾರತದ “ವಿಫಲ ನಾಯಕ” ಎಂದು ಬಣ್ಣಿಸಿತು.

 ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು, ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನುತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ) ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999 ರ ಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗ್ ರವÀರು ಸಾಲ ಪಡೆದಿದ್ದರು. ಅಸ್ಸಾಂ ನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನ ಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ವಾಪಸ್  ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಡಾ. ಮನಮೊಹನ ಸಿಂಗ್ ರವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಈ ಕಾರಣಕ್ಕಾಗಿ. ಒರ್ವ ಶಾಸಕನ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಈಗಿನ ಸಂದರ್ಭದಲ್ಲಿ  ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ  ದುರಂತ ನಾಯಕನ ಇಮೇಜಿನ ನಡುವೆಯೂ  ಗೌರವ ಮೂಡುತ್ತದೆ.

 2010 ರಲ್ಲಿ ನ್ಯೂಸ್‌ವೀಕ್ ನಿಯತಕಾಲಿಕವು ಅವರನ್ನು ಇತರ ರಾಷ್ಟ್ರಗಳ ಮುಖ್ಯಸ್ಥರು ಗೌರವಿಸುವ ವಿಶ್ವ ನಾಯಕ ಎಂದು ಗುರುತಿಸಿತು. ಅಮೇರಿಕಾದ  ಹೆನ್ರಿ ಕಿಸ್ಸಿಂಜರ್ ಮನಮೋಹನ್ ಸಿಂಗ್ ಅವರನ್ನು "ದೃಷ್ಟಿ, ನಿರಂತರತೆ ಮತ್ತು ಸಮಗ್ರತೆ ಹೊಂದಿರುವ ರಾಜನೀತಿಜ್ಞ" ಎಂದು ಬಣ್ಣಿಸಿದರು ಮತ್ತು ಅವರ "ನಾಯಕತ್ವಕ್ಕಾಗಿ, ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಪ್ರಶಂಸಿಸಿದರು. 2010ರ ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮನಮೋಹನ್ ಸಿಂಗ್ 18 ನೇ ಸ್ಥಾನದಲ್ಲಿದ್ದರು.  ಫೋರ್ಬ್ಸ್ ನಿಯತಕಾಲಿಕವು ಸಿಂಗ್ ಅವರನ್ನು "ನೆಹರೂ ನಂತರ ಭಾರತದ ಅತ್ಯುತ್ತಮ ಪ್ರಧಾನ ಮಂತ್ರಿ ಎಂದು ಸಾರ್ವತ್ರಿಕವಾಗಿ ಪ್ರಶಂಸಿಸಲಾಗಿದೆ" ಎಂದು ವಿವರಿಸಿದೆ. ಆಸ್ಟ್ರೇಲಿಯನ್ ಪತ್ರಕರ್ತ ಗ್ರೆಗ್ ಶೆರಿಡನ್ ಸಿಂಗ್ "ಏಷ್ಯನ್ ಇತಿಹಾಸದಲ್ಲಿ ಶ್ರೇಷ್ಠ ರಾಜನೀತಿಜ್ಞರಲ್ಲಿ ಒಬ್ಬರು" ಎಂದು ಹೊಗಳಿದ್ದರು. 2006 ರಲ್ಲಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಉಜ್ಬೇಕಿಸ್ತಾನ್‌ನಲ್ಲಿ ಅಂಚೆಚೀಟಿ ಬಿಡುಗಡೆಯಾಯಿತು

 ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ವಿರೋಧಿಗಳು ಸಿಂಗ್ ಅವರನ್ನು ಹೊಗಳಿದ್ದಾರೆ.   2022 ರಲ್ಲಿ, " ದೇಶಕ್ಕೆ ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಎಂದು ನಿತಿನ್ ಗಡ್ಕರಿ ಹೇಳಿದರು. ತಮ್ಮ ಇಳೀ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇದ್ದ ಈ ಹಿರಿಯ ಜೀವ ದೇಹಲಿಯಲ್ಲಿ ವಾಸವಾಗಿದ್ದುಕೊಂಡು 2024 ರಲ್ಲಿ ನಿಧನರಾಗುವ ವರೆಗೂ  ತಮ್ಮ ಬಳಿ ಸಲಹೆ ಕೇಳಿಕೊಂಡು ಬಂದವರಿಗೆ ಪಕ್ಷ ಭೆದ ಮಾಡದೆ ಸಲಹೆ ನೀಡುವ ಉದಾರತೆಯನ್ನು .ಜೀವಂತವಿರಿಸಿಕೊಡಿದ್ದರು.. ಸೌಜನ್ಯ ಮತ್ತು ಸಾಹಾರ್ಧತೆಯನ್ನು ತಮ್ಮ ಜೀವದ ಉಸಿರಿನಂತೆ ಕಾಪಾಡಿಕೊಂಡು ಬಂದ ಮನಮೋಹನ್ ಸಿಂಗ್ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ಅರ್ಥಶಾಸ್ತ್ರಜ್ಞ ಎಂಬುದನ್ನು ನಾವುಗಳು ಮರೆಯುವಂತಿಲ್ಲ.

 ಜಗದೀಶ್ ಕೊಪ್ಪ.