ಮಂಗಳವಾರ, ಜೂನ್ 30, 2026

ನೆಹರು ವ್ಯಕ್ತಿತ್ವ ಕುರಿತ ಮಹತ್ವದ ಕೃತಿ ನೆಹರು ಕಲ್ಪನೆಯ ಭಾರತ

 


 


ಕಳೆದ ಹದಿನಾಲ್ಕು ವರ್ಷಗಳಿಂದ ನೆಹರು ಅವರನ್ನು ತೆಗೆಳುವುದನ್ನೇ ಕಾಯಕ ಮಾಡಿಕೊಂಡಿರುವ ಬಿ.ಜೆ.ಪಿ. ನಾಯಕರು  ಗಾಂಧಿ ಮತ್ತು ನೆಹರು ಕುರಿತಾಗಿ  ಮಾನಸಿಕ ರೋಗಿಗಳಾಗಿದ್ದಾರೆ.  ಹಸಿ ಸುಳ್ಳುಗಳಿಂದ ಕೂಡಿದ ನಕಲಿ ಇತಿಹಾಸವನ್ನು ಸೃಷ್ಟಿ ಮಾಡುವುದು ಅವರೆಲ್ಲರ ಮುಖ್ಯ ಗುರಿಯಾಗಿದೆ. ನೆಹರು ಹೆಸರು ಹೇಳಲು ಯೋಗ್ಯತೆ ಇಲ್ಲದ ಪ್ರಧಾನಿ ನರೇಂದ್ರ ಮೋದಿಗೆ  ತನ್ನ ಆಡಳಿದ ವೈಫಲ್ಯಗಳನ್ನು ಮುಚ್ಚಿಹಾಕಲು ಜನರನ್ನು ನೆಹರು ಅವರತ್ತ ಗಮನ ಸೆಳೆಯುವುದು ದಿನನಿತ್ಯದ ಕಾಯಕವಾಗಿದೆ.   ನೆಹರು ಪ್ರಧಾನಿಯಾಗಿ ಐನೂರು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿಹೋಗಿದ್ದರೆ, ನಾನು ರಾಷ್ಟçಕ್ಕಾಗಿ ಸಾಲ ಮಾಡುವ ಸ್ಥಿತಿ ಬರುತ್ತಿರಲಿಲ್ಲ  ಎಂಬ ಮಾತುಗಳು ಮಾತ್ರ ಈ ಮಹಾಶಯನಿಂದ  ಬಾಕಿ ಉಳಿದಿದೆ.  ಇಂತಹ ಸಮಯದಲ್ಲಿ ಭಾರತದ ಶ್ರೇಷ್ಠ ಇತಿಹಾಸ ತಜ್ಞರಾದ ಆದಿತ್ಯ ಮುಖರ್ಜಿಯವರು ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ್ದ ನೆಹರು ಕಲ್ಪನೆಯ ಭಾರತ ಎಂಬ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿಯಾಗಿ ಇದೀಗ ಸೇರ್ಪಡೆಯಾಗಿದೆ. ಕೃತಿಯನ್ನು ಕನ್ನಡಕ್ಕೆ ತಂದ ಡಾ.ಬಿ.ಆರ್.ಮಂಜುನಾಥ್ ಮತ್ತು ಡಾ.ಹೆಚ್.ಕೆ.ಜಯಲಕ್ಷಿö್ಮ ಹಾಗೂ ಕೃತಿಯನ್ನು ಪ್ರಕಟಿಸಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ಅಭಿನಂದನೆಗಳು.

 ಕನ್ನಡದ ಓರ್ವ ಲೇಖಕನಾಗಿ ಹಾಗೂ ಹಿರಿಯ ಪತ್ರಕರ್ತನಾಗಿ ಆಧುನಿಕ ಭಾರತದ ಇತಿಹಾಸವನ್ನು ವಿಶೇಷವಾಗಿ ಸ್ವಾತಂತ್ರ್ಯಾನಂತರದ ಇತಿಹಾಸವನ್ನು ಗಂಭೀರವಾಗಿ ಓದಿಕೊಂಡಿರುವ ಮತ್ತು ಓದುತ್ತಿರುವ ನನಗೆ, ಇಂದಿನ ಕಲಸು ಮೇಲೋಗರ ಇತಿಹಾಸದ ಭಾರತದಲ್ಲಿ ಆದಿತ್ಯ ಮುಖರ್ಜಿ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಕೆ.ಎನ್. ಪಣಿಕ್ಕರ್ ರಂತಹ ವಾಸ್ತವ ದೃಷ್ಟಿಕೋನದ ಇತಿಹಾಸ ತಜ್ಞರು ಆಶಾಕಿರಣವಾಗಿ ಕಾಣುತ್ತಾರೆ. ಟಿಪ್ಪು ಸುಲ್ತಾನ್ ನಿಂದ ಹಿಡಿದುಗಾಂಧಿ ಮತ್ತು ನೆಹರು ಕುರಿತು ಹುಸಿ ಇತಿಹಾಸವನ್ನು ಸೃಷ್ಟಿ ಮಾಡುತ್ತಿರುವ ಬಿ.ಜೆ.ಪಿ. ಆಸ್ಥಾನದ ವಿದೂಷಕರಿಗೆ ಇವರೆಲ್ಲರೂ ಹೊಟ್ಟೆಯೊಳಗಿನ ಕರುಳು ಹುಣ್ಣುಗಳಂತೆ ಬಾಧಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ, ಆದಿತ್ಯಾ ಮುಖರ್ಜಿ ಮತ್ತು ಮೃದುಲಾ ಮುಖರ್ಜಿ ಇಬ್ಬರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ  ‘’ ಆರ್.ಎಸ್.ಎಸ್. ಸ್ಕೂಲ್ ಟೆಕ್ಸ್ಟ್ ಅಂಡ್ ಮರ್ಡರ್ ಆಫ್ ಮಹಾತ್ಮ’’ ಎಂಬ ಕೃತಿಯು ಸಂಘ ಪರಿವಾರದ ಮುಖವಾಡವನ್ನು ಕಳಚಿ ಹಾಕಿತ್ತು. ಕೇವಲ ನೂರ ಮುವತ್ತು ಪುಟಗಳಷ್ಟು ಇರುವ ಕೃತಿಯಲ್ಲಿ ನಲವತ್ತು ಪುಟಗಳಷ್ಟು ಹೆಚ್ಚುವರಿಯಾಗಿ ಇತಿಹಾಸದ ಅಧಿಕೃತ ಅಂಕಿ ಅಂಶದ ಟಿಪೊಣಿಗಳ ದಾಖಲೆಗಳನ್ನು ನೀಡಿ, ವಿ.ಡಿ. ಸಾವರ್ಕರ್, ಹುಸಿ ಸ್ವಾತಂತ್ರ ಹೋರಾಟಗಾರ ಮತ್ತು ಪೊಳ್ಳು ವ್ಯಕ್ತಿತ್ವವುಳ್ಳ ಮನುಷ್ಯ ಎಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ.

 ಗಾಂಧೀಜಿಯವರು ಹತ್ಯೆಯಾದ ನಂತರ, ನಾಥುರಾಮ್ ಗೋಡ್ಸೆ ಮತ್ತು ಸಂಗಡಿಗರ ಜೊತೆ ಸಾವರ್ಕರ್ ಕೂಡಾ ಬಂಧಿತರಾಗಿದ್ದರುದೆಹಲಿ ಕೆಂಪುಕೋಟೆ ಒಳಗೆ ಮೊಘಲ್ ದೊರೆಗಳು ಟಗರು ಪಂದ್ಯ ನಡೆಸುತ್ತಿದ್ದ ನೆಲಮಹಡಿಯಲ್ಲಿ  ಗಾಂಧಿ ಹತ್ಯೆ ಕುರಿತು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಡೆಯುತ್ತಿದ್ದ ವಿಚಾರಣೆಯ ಸಂದರ್ಭದಲ್ಲಿ   ವಿ.ಡಿ.ಸಾವರ್ಕರ್, ಎಂದಿಗೂ ಗೋಡ್ಸೆ ಮತ್ತು ಸಂಗಡಿಗರತ್ತ ತಿರುಗಿ ನೋಡಲಿಲ್ಲ ಮತ್ತು ಅವರೊಂದಿಗೆ  ಮಾತನಾಡಲಿಲ್ಲ. ನನಗೂ ಇವರಿಗೂ ಯಾವ ಸಂಬಂಧವಿಲ್ಲ, ಇವರೆಲ್ಲರೂ ನನಗೆ ಅಪರಿಚಿತರು ಎಂಬಂತೆ ನಡೆದುಕೊಂಡರು. ವಾಸ್ತವವಾಗಿ ಗಾಂಧೀಜಿಯವರ ಹತ್ಯೆಗಾಗಿ ಬಳಸಿದ ಪಿಸ್ತೂಲ್ ಅನ್ನು ಗ್ವಾಲಿಯರ್ ನಗರ ಆರ್ಯುವೇದ ವೈದ್ಯ ಡಾ.ದತ್ತಾತ್ರೇಯ ಪರ್ಚುರೆ ಎಂಬಾತನ ಮೂಲಕ  ಸಾವರ್ಕರ್ ಕೊಡಿಸಿದ್ದರು ಎಂಬುದನ್ನು ಅಂದಿನ ಬಾಂಬೆ ಪೊಲೀಸರು ಪತ್ತೆ ಹಚ್ಚಿದ್ದರು. ಬಾಂಬೆ ಪೊಲೀಸ್ ಡೈರಿ ಎಂಬ 750 ಪುಟಗಳ ಮಾಹಿತಿಯನ್ನು ಇಟ್ಟುಕೊಂಡು ಪ್ರಾನ್ಸ್ ಲೇಖಕ ಡಾಮಿನಿಕ್ಯೂ ಲೇಪಿಯರ್ ಎಂಬುವರು ಲ್ಯಾರಿ ಕೊಲಿನ್ಸ್ ಜೊತೆಗೂಡಿ ರಚಿಸಿರುವ  ‘’ಫ್ರೀಡಂ ಅಟ್ ಮಿಡ್ ನೈಟ್ ‘’ ಎಂಬ ಕೃತಿಯಲ್ಲಿ ವಿಷಯವನ್ನು ವಿವರವಾಗಿ ದಾಖಲಿಸಿದ್ದಾರೆ.

 ಸಾಕ್ಷಾಧಾರಗಳ ಕೊರತೆಯ ಆಧಾರದ ಮೇಲೆ ಗಾಂಧಿ ಹತ್ಯೆಯ ಆರೋಪಿಗಳ ಪಟ್ಟಿಯಿಂದ ವಿ.ಡಿ.ಸಾವರ್ಕರ್ ಬಿಡುಗಡೆಯಾದರು. ನಾಥುರಾಂ ಗೋಡ್ಸೆ ಮತ್ತು ನಾರಾಯಣ್ ಆಪ್ಟೆಗೆ ಮರಣದಂಡನೆಯ ಶಿಕ್ಷೆ ಹಾಗೂ  ಇತರರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಶಿಕ್ಷೆ ಪ್ರಕಟವಾದ ನಂತರ  ಗೋಡ್ಸೆ, ತನ್ನ ವಕೀಲರ ಜೊತೆ ಮಾತನಾಡುತ್ತಾ, ‘’ ಮನುಷ್ಯನನ್ನು ಹಿಂದೂ ಧರ್ಮದ ಮಹಾನ್ ರಕ್ಷಕ ಎಂದು ನಾವು ನಂಬಿದ್ದು ತಪ್ಪಾಯಿತು’’ ಎಂದು ನುಡಿದಿದ್ದ ಮಾತನ್ನು ಆದಿತ್ಯ ಮುಖರ್ಜಿಯವರು ತಮ್ಮ ಕೃತಿಯಲ್ಲಿ ವಕೀಲರ ಡೈರಿಯ ಪುಟದ ಜೊತೆಗೆ ಉಲ್ಲೇಖಿಸಿದ್ದರು. ಹಿರಿಯ ವಕೀಲರಾಗಿದ್ದ ಎಲ್.ಜಿ. ನೂರಾನಿಯವರು ಸಹ ತಮ್ಮ ಒಂದು ಕೃತಿಯಲ್ಲಿ ಪ್ರಸಂಗವನ್ನು ದಾಖಲಿಸಿದ್ದಾರೆ. ಇಂತಹ ವಸ್ತುನಿಷ್ಠ ಇತಿಹಾಸಕಾರ ಹಾಗೂ ದೆಹಲಿಯ ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಆದಿತ್ಯ ಮುಖರ್ಜಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇತಿಹಾಸ ಕುರಿತು ಗಮನ ಸೆಳೆದವರು. ನೆಹರು ಕಲ್ಪನೆಯ ಭಾರತ ಕೃತಿಯಲ್ಲಿ ಅವರು ನೀಡಿರುವ ಅಧಿಕೃತ ದಾಖಲೆಗಳು ನೆಹರು ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜೊತೆಗೆ ಅವರ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತವೆ.

 ಪೀಠಿಕೆ ಮತ್ತು ಪ್ರಸ್ತಾವನೆಯ ಅಧ್ಯಾಯಗಳಲ್ಲಿ ನೆಹರು ಅವರನ್ನು ಸಂಘ ಪರಿವಾರವು ರಾಕ್ಷಸೀಕರಿಸುವ ಕೃತ್ಯವನ್ನು ಆಧಾರಗಳ ಸಮೇತ, ನಿರಾಕರಿಸುವ ಲೇಖಕರು, ಭಾರತದಲ್ಲಿ ನೆಹರು ಕೂಡಾ ಓರ್ವ ಶ್ರೇಷ್ಠ ಇತಿಹಾಸಕಾರ ಎಂದು ಹೇಳಿರುವುದು ಗಮನಾರ್ಹ ಸಂಗತಿ. ನೆಹರು ಸೆರೆಮನೆಯಲ್ಲಿ  ಬ್ಯಾಡ್ಮಿಂಟನ್ ಆಟ ಆಡುತ್ತಾ ಕಾಲಕಳೆಯುತ್ತಿದ್ದರು ಎಂದು  ಹೇಳುವ ಸಂಘ ಪರಿವಾರದ ಮೂರ್ಖರು  ಆದಿತ್ಯ ಮುಖರ್ಜಿಯವರ ಕೃತಿಯನ್ನು  ಓದಲೇಬೇಕುಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಒಟ್ಟು ಒಂಬತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನೆಹರು, ಶಿಕ್ಷೆ ಅನುಭವಿಸುತ್ತಿದ್ದ ದಿನಗಳಲ್ಲಿ ಓದು ಮತ್ತು ಬರೆವಣಿಗೆಯಲ್ಲಿ ನಿರತರಾಗಿದ್ದರು. ಅವರು ಸಂದರ್ಭದಲ್ಲಿ ರಚಿಸಿಸುವ ಡಿಸ್ಕವರಿ ಆಫ್ ಇಂಡಿಯಾ ಎಂಬ ಕೃತಿಯು ಇಡೀ ಭಾರತದ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆತಮ್ಮ ಪುತ್ರಿ ಇಂದಿರಾ ಅವರಿಗೆ  ಸೆರೆಮನೆಯಿಂದ ಬರೆದಿರುವ ಪತ್ರಗಳ ಸಂಕಲನವಾದ ‘’ ಲೆಟರ್ಸ್ ಫ್ರಮ್ ಪಾದರ್ ಟು ಹಿಸ್ ಡಾಟರ್’’ ಎಂಬ ಕೃತಿಯನ್ನು ಓದಿದಾಗ ಮಾತ್ರ ನೆಹರು ಅವರ ಅಪರಿಮಿತ ಜ್ಞಾನದ ಬಗ್ಗೆ ನಮಗೆ ಅರಿವಾಗಬಲ್ಲದು. ಲಂಡನ್ ನಗರದಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಆಗಮಿಸಿದ ನೆಹರು, ಕಾಲ ಘಟ್ಟದ ವಕೀಲಿ ವೃತ್ತಿಯಲ್ಲಿ ಹೇರಳವಾಗಿ ಹಣ ಸಂಪಾದಿಸಬಹುದಿತ್ತು. ಆದರೆ, ಅವರು ನೇರವಾಗಿ ಸ್ವಾತಂತ್ರö್ಯ ಹೋರಾಟಕ್ಕೆ ದುಮುಕಿದರು. 1916 ರಲ್ಲಿ ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮವಾಗಿ ಗಾಂಧಿಯವರನ್ನು ಭೇಟಿ ಮಾಡಿದ ನೆಹರು ಅಂದಿನಿಂದ ಅವರ ಮಾನಸ ಪುತ್ರನಂತೆ ಬದುಕಿದರು.

 ನೆಹರು ಧರಿಸುತ್ತಿದ್ದ ಅತ್ಯಾಧುನಿಕ ವೇಷ ಭೂಷಣಗಳನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಅವರು ನೀಡಿದ್ದ ‘’ ನಾನು ಪೂರ್ವ ಮತ್ತು ಪಶ್ಚಿಮಗಳ ಸಂಸ್ಕೃತಿಯ ಸಂಗಮದಂತೆ ಕಾಣಿಸುತ್ತೇನೆ ನಿಜಆದರೆ, ನನ್ನ ಎದೆಯೊಳಗೆ ಸದಾ ಮಿಡಿಯುವುದು ಭಾರತದ ಬಹುಸಂಸ್ಕೃತಿ ಮಾತ್ರ’’ ಎಂಬ ಉತ್ತರವು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿಯಾಗಿದೆ. ವಾಸ್ತವವಾಗಿ ಧರ್ಮದ ಹೆಸರಿನಲ್ಲಿ ಭಾರತ ವಿಭಜನೆಯಾಗುವುದು ಅವರಿಗೆ ಬೇಕಿರಲಿಲ್ಲ. ಆದರೆ, ಮಹಮ್ಮದ್ ಆಲಿ ಜಿನ್ನಾ ಭಾರತೀಯ ಕಾಂಗ್ರೆಸ್ ಪಕ್ಷವನ್ನು ಹಿಂದುಗಳ ಪಕ್ಷ ಎಂಬ ಲೇಪನ ಹಚ್ಚಿ ಮುಸ್ಲಿಂರ ಮನವೊಲಿಸಲು ಹೊರಟಾಗ, ವಿಭಜನೆ  ಅವರ ಪಾಲಿಗೆ ಅನಿವಾರ್ಯವಾಯಿತು. ಸ್ವಾತಂತ್ರ್ಯಾ ನಂತರದ ಭಾರತದ ಕೋಮುವಾದ ಕುರಿತು ಅವರ ತಾಳಿದ ನಿಷ್ಠುರ ನಿಲುವು ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಆದಿತ್ಯ ಮುಖರ್ಜಿಯವರು, ಕೋಮುವಾದ ಕುರಿತಂತೆ ನೆಹರು ಅವರಿಗೆ ಇದ್ದ ಸ್ಪಷ್ಠವಾದ ಪರಿಕಲ್ಪನೆಯನ್ನು ಹೀಗೆ ವಿವರಿಸಿದ್ದಾರೆ. ‘’ ವಾಸ್ತವವಾಗಿ ನೆಹರು ಬಹುಸಂಖ್ಯಾತ ಕೋಮುವಾದದ ಬಗ್ಗೆ ಎಷ್ಟು ವಿಮರ್ಶಾತ್ಮಕವಾಗಿದ್ದರೋ, ಅಲ್ಪ ಸಂಖ್ಯಾತ ಕೋಮುವಾದದ ಬಗ್ಗೆಯೂ ಹಾಗೆಯೇ ಇದ್ದರು. ಇವೆರೆಡರ ಮಧ್ಯೆ ಯಾವುದೇ ಮುಖ್ಯ ವ್ಯೆತ್ಯಾಸವಿಲ್ಲ ಎಂದು ಅವರು ಹೇಳುತ್ತಿದ್ದರು

ಸ್ವಾತಂತ್ರ್ಯಾ ನಂತರದ ಭಾರತವನ್ನು ಮುನ್ನಡೆಸುವ ಜವಾಬ್ದಾರಿಯು ನೆಹರು ಹೆಗಲಿಗೆ ಬಿದ್ದಾಗ, ಅವರ ಮುಂದೆ ಪರ್ವತದಷ್ಟು  ಸಮಸ್ಯೆಗಳಿದ್ದವುಮುವತ್ತೇಳು ಕೋಟಿ ಜನಸಂಖ್ಯೆ ಇದ್ದ ಅಂದಿನ ಭಾರತದಲ್ಲಿ ಶೇಕಡಾ ಎಂಬತ್ತರಷ್ಟು ಮಂದಿ ಅನಕ್ಷರಸ್ಥರಿದ್ದರು. ಬಡತನ, ಹಸಿವು, ಜಾತಿಯತೆ ಆಧಾರಿತ ಶ್ರೇಣಿಕೃತ ಸಮಾಜ ಹಾಗೂ ಭೂಮಿಯ ಮೇಲಿನ ನರಕಗಳು ಎಂಬಂತಿದ್ದ ಗ್ರಾಮೀಣ ಪ್ರದೇಶದ ಹಳ್ಳಿಗಳು, ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸ್ಥಿತಿ ಇಂತಹ ಸಮಸ್ಯೆಗಳು ಅವರ ಮುಂದಿದ್ದವುಇಡೀ ದೇಶಾದ್ಯಂತ ಬರಡು ಹಾಗೂ ಮಳೆಯಾಶ್ರಿತ ಭೂಮಿ, ಆಹಾರ ಧಾನ್ಯಗಳ ಕೊರತೆಯ ಜೊತೆಗೆ ಜನಸಾಮಾನ್ಯರನ್ನು ಶಿಕ್ಷಣದತ್ತ ಕರೆದೊಯ್ಯುವ ಜವಾಬ್ದಾರಿಗಳಿದ್ದವುಇವೆಲ್ಲವುಗಳಿಗೆ ಅವರು ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಗಾಂಧಿಯವರ ಚಿಂತನೆಗಳಿಗೆ ವಿರುದ್ಧವಾಗಿ ಸಮೃದ್ಧ ಭಾರತವನ್ನು ನಿರ್ಮಿಸಲು, ಮಿಶ್ರ ಆರ್ಥಿಕತೆ ಯೋಜನೆಯಡಿ, ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಅಣೆಕಟ್ಟು, ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಿದರು ಜೊತೆಗೆ ವಿಜ್ಞಾನದ ಬೆಳವಣಿಗೆ ಆದ್ಯತೆ ನೀಡಿದರು. ಅಣೆಕಟ್ಟುಗಳ ಮೂಲಕ ಏಕಕಾಲಕ್ಕೆ ಜಲವಿದ್ಯುತ್ ಉತ್ಪಾದನೆ ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸುವುದು ಅವರಿಗೆ ಮುಖ್ಯವಾಗಿತ್ತು.

 ನೆಹರು ಅವರ ಬಹುತೇಕ ಕ್ರಿಯೆಗಳು 1947 ಆಗಸ್ಟ್ 15 ರಿಂದ ಶೂನ್ಯದಿಂದ ಪ್ರಾರಂಭವಾದವು. ಭಾರತವನ್ನಾಳಿದ ಬ್ರಿಟಿಷರು ನಮಗೆ  ದೇಶದಲ್ಲಿ ಕಸವನ್ನು ಹೊರತು ಪಡಿಸಿದರೆ ಬೇರೇನೂ ಬಿಟ್ಟು ಹೋಗಿರಲಿಲ್ಲಅವರು ದೇಶವನ್ನು  ತೊರೆದ ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ ಇಪ್ಪತ್ತು ನಗರಗಳಿಗೆ ಮಾತ್ರ ವಿದ್ಯುತ್ ಲಭ್ಯವಿತ್ತುದೇಶದ ಸಂಸ್ಥಾನದ ಮಾಜಿ ದೊರೆಗಳ ಅರಮನೆಯಂತಹ ನಿವಾಸಗಳಿಗೆ  ದೂರವಾಣಿ ಸೌಲಭ್ಯವಿತ್ತು. ಯಾವುದೇ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೆಲವು ನದಿಗಳಿಗೆ ನಿರ್ಮಿಸಲಾಗಿದ್ದ ಕೃಷ್ಣರಾಜ ಸಾಗರಂತಹ  ಸಣ್ಣ ಪ್ರಮಾಣದ ಅಣೆಕಟ್ಟುಗಳು ಮಾತ್ರ ಇದ್ದವು. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯಾಗಲಿ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು  ಕಟ್ಟಡ ನಿರ್ಮಾಣಕ್ಕೆ ಅವಶ್ಯಕತೆ ಇದ್ದ ಸಿಮೆಂಟ್ ಉತ್ಪಾದಿಸುವ ಕಾರ್ಖಾನೆಗಳು ಇರಲಿಲ್ಲದೇಶದ ಎಲ್ಲೆಡೆ  ಹಸಿವು ಮತ್ತು ಅಪೌಷ್ಟಿಕತೆ ತಾಂಡವಾಡುತ್ತಿತ್ತು. ಇಡೀ ದೇಶಾದ್ಯಂತ ಬಾಣಂತಿಯರು ಹಾಗೂ ಶಿಶು ಮರಣಗಳು ಸಾಮಾನ್ಯವಾಗಿದ್ದವು.

 ಇಂತಹ ಸ್ಥಿತಿಯಲ್ಲಿ ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನೆಹರು, ದೇಶಾದ್ಯಂತ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ  ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರುಇಸ್ರೋ ಸಂಸ್ಥೆಯನ್ನು ಒಳಗೊಂಡAತೆ ನವರತ್ನ ಸಾರ್ವಜನಿಕ ಸಂಸ್ಥೆಗಳು ಹೆಸರಿನಲ್ಲಿ  ಹೆಚ್.ಎಂ.ಟಿ. ಹೆಚ್.,ಎಲ್. ಬಿ..ಎಲ್. .ಟಿ. ನಂತಹ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಿಭವ್ಯ ಭಾರತದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು. ಕೃತಿಯಲ್ಲಿ ಆದಿತ್ಯ ಮುಖರ್ಜಿಯವರು ನೆಹರು ಅವರು ಸಂಸತ್ತಿನ ಒಳಗೆ ವಿರೋಧ ಪಕ್ಷಗಳ ನಾಯಕರ ಜೊತೆ ಸಂಹವನ ನಡೆಸುತ್ತಿದ್ದ ವೈಖರಿಯ ಜೊತೆಗೆ ಅವರ ಅಪರೂಪದ ಭಾಷಣದ ತುಣುಕುಗಳನ್ನು ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ನೆಹರು ಹೇಳಿದ ‘’ ನಮಗೆ ಯಾವುದು ಇಷ್ಟವೋ ಅಂತಹ ವಿಷಯಗಳಿಗೆ ಮಾತ್ರ ಒಪ್ಪಿಗೆ ನೀಡುವುದು ಪತ್ರಿಕಾ ಸ್ವಾತಂತ್ರ್ಯ ಎನಿಸುವುದಿಲ್ಲ, ನಾಗರೀಕ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯ ಎಂದರೆ, ನಮ್ಮ ಇಷ್ಟಕ್ಕೆ ವಿರೋಧವಾಗಿ ಅಥವಾ ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ವಿಷಯಗಳಿಗೂ ಮುಕ್ತ ಸ್ವಾತಂತ್ರ್ಯವಿರಬೇಕು.’’ ವಿಷಯವನ್ನು ನೆಹರು ಕುರಿತು ಭಜನೆ ಮಾಡುವ ಇಂದಿನ ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಳ್ಳಬೇಕಿದೆ.

 ಅಪರೂಪದ ಮಾಹಿತಿಯ ಕೃತಿಯ ಜೊತೆಗೆ ಅಮೇರಿಕಾದ ಲೇಖಕಿ ಕ್ಯಾಥರಿನ್ ಪ್ರಾಂಕ್ ಇಂದಿರಾ ಗಾಂಧಿ ಕುರಿತು ‘’ ಲೈಫ್ ಆಫ್ ಇಂದಿರಾ  ಗಾಂಧಿ’’ ಎಂಬ ಐನೂರು ಪುಟಗಳ ಜೀವನ ಚರಿತ್ರೆಯನ್ನು ಎಲ್ಲರೂ ಓದಬೇಕಿದೆ. ಕೃತಿಯ ಮೊದಲ ನೂರು ಪುಟಗಳಲ್ಲಿ ನೆಹರು ಕುರಿತಂತೆ ಅಪರೂಪದ ಮಾಹಿತಿಗಳಿವೆ. ಇಂದಿರಾ ಅವರ ಪತಿ ಫಿರೋಜ್ ಗಾಂಧಿಯವರು ನೆಹರು ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದುಕೊಂಡು, ತಮ್ಮ ಮಾವನವರ ಆಳ್ವಿಕೆಯಲ್ಲಿ ನಡೆದ ಸಾರ್ವಜನಿಕರ ಹಣದ ದುರಪಯೋಗದ ಬಗ್ಗೆ ಧ್ವನಿ ಎತ್ತಿ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರನ್ನು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡುವಂತೆ ಮಾಡಿದ್ದರು. ಖಾಸಾಗಿ ಉದ್ಯಮಿ ಹರಿದಾಸ್ ಮುಂಧ್ರಾ ಎಂಬಾತನು ನಷ್ಟದಲ್ಲಿರುವ ಕೈಗಾರಿಕೆಗಳ ಶೇರು ಖರೀದಿಸಲು ಎಲ್..ಸಿ. ಸಂಸ್ಥೆ ಜೊತೆಗೆ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿದ್ದ ಹಗರಣವನ್ನು 1957 ಡಿಸಂಬರ್ ತಿಂಗಳ ಸಂಸತ್ ಅಧಿವೇಶನದಲ್ಲಿ ಫಿರೋಜ್ ಗಾಂಧಿಯವರು  ಬಯಲಿಗೆಳೆದಿದ್ದರು. ನೆಹರು ಅವರ ಇಂತಹ  ಪ್ರಾಮಾಣಿಕ ನಡುವಳಿಕೆಯನ್ನು ನಾವು ಇಂದಿನ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕಾಣಲು ಸಾಧ್ಯವೆ?

 ಕಾಂಗ್ರೆಸ್ ಕಾರ್ಯಕರ್ತರು ಎಂದರೆ, ನಾಯಕರ  ಭಜನೆ ಮಾಡುವುದು ಮತ್ತು ಸಚಿವ  ಸ್ಥಾನದ  ಹುದ್ದೆಗಾಗಿ  ರಸ್ತೆಯಲ್ಲಿ ಕುಳಿತು ಘೋಷಣೆ ಮಾಡುವುದಲ್ಲ. ಇಂತಹ  ಬೌದ್ಧಿಕ ಗುಲಾಮಗಿರಿತನವನ್ನು ದೇಶ ಸೇವೆ ಅಥವಾ ಸಮಾಜ ಸೇವೆ ಎನ್ನಲಾಗುವುದಿಲ್ಲ. ಸಂಘಪರಿವಾರದ ಕಾರ್ಯಕರ್ತರಿಗಿಂತ ಬೌದ್ಧಿಕವಾಗಿ ದಿವಾಳಿ ಎದ್ದು ಹೋಗಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇಂತಹ ಕೃತಿಯನ್ನು ಕಡ್ಡಾಯವಾಗಿ ಓದಲೇ ಬೇಕಿದೆ. ಸಂಘಪರಿವಾರದ ಟೀಕೆ ಅಥವಾ ವಿರೋಧವನ್ನು ಎದುರಿಸಬೇಕಾದರೆ, ನಮ್ಮ ಬೌದ್ಧಿಕ ಜ್ಞಾನದ ಅಡಿಪಾಯ ಗಟ್ಟಿಯಾಗಿರಬೇಕು. ಅಂಶ ಇಂದಿನ ಕಾಂಗ್ರೆಸ್ ಕಾರ್ಯಕರ್ತರ ಮೂಲ ಗುರಿಯಾಗಬೇಕಿದೆ. ಇಂದು ಸಂಘಪರಿವಾರದ ಟೀಕೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಿರುವವರು ಮತ್ತು ನೆಹರು ಅವರ ಇತಿಹಾಸವನ್ನು ಮುನ್ನೆಲೆಗೆ ತರುತ್ತಿರುವವರು ಎಡಪಂಥೀಯ ಲೇಖಕರು ಮತ್ತು ಚಿಂತಕರು ಮಾತ್ರ. ಅವರಿಗೆ ಕಾಂಗ್ರೆಸ್ ಅಥವಾ ಬಿ.ಜೆ.ಪಿ. ಪಕ್ಷಗಳ ಕುರಿತಾಗಿ ಯಾವುದೇ ಮೋಹ ಅಥವಾ ಸಿಟ್ಟುಗಳಿಲ್ಲ. ವಾಸ್ತವಿಕ ಅಂಶಗಳನ್ನು ಸಮಾಜದ ಮುಂದೆ ಇರಿಸುವುದು ಅವರ ಕರ್ತವ್ಯವಾಗಿದೆ ಅಷ್ಟೇ.

 ಡಾ.ಎನ್.ಜಗದೀಶ್ ಕೊಪ್ಪ.

 

ಶನಿವಾರ, ಜೂನ್ 27, 2026

ಒಂದು ತಿಂಗಳ ಅವಧಿಯಲ್ಲಿ ತಮಿಳು ಚಿತ್ರರಂಗದ ಪ್ರತಿಭಾವಂತ ಗುರು ಶಿಷ್ಯರ ನಿರ್ಗಮನ.



ಇಂದು ಬೆಳಿಗ್ಗೆ ತಮಿಳು ಚಿತ್ರರಂಗದಲ್ಲಿ ಶ್ರೇಷ್ಠ ಚಿತ್ರಕಥೆ ಮತ್ತು ಸಂಭಾಷಣೆ ಮೂಲಕ ಹಾಗೂ ನಟ ಮತ್ತು ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದ ಭಾರತಿರಾಜ ಅವರ ಶಿಷ್ಯ ಕೆ.ಭಾಗ್ಯರಾಜ್ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ಕೇವಲ 73 ವರ್ಷ ವಯಸ್ಸಿನ ಭಾಗ್ಯರಾಜ್ ಇತ್ತೀಚೆಗೆ ಸಿನಿಮಾ ಸಮಾರಂಭಗಳಲ್ಲಿ ಮತ್ತು ಿತ್ತೀಚೆಗೆ ನಿಧನರಾದ ಭಾರತಿರಾಜರ ಶ್ರದ್ಧಾಂಜಲಿ ಸಭೆಯಲ್ಲಿ ಲವಲವಿಕೆಯಿಂದ ಪಾಲ್ಗೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.
ಹಿರಿಯ ನಟಿ ರಾಧಿಕಾ ಅವರ ಶ್ರೇಷ್ಠ ಅಭಿನಯದ ಇತ್ತೀಚೆಗಿನ ಚಿತ್ರವಾದ ತಾಯ್ ಕಿಳವಿ ಚಿತ್ರದ ಸಮಾರಂಭದಲ್ಲಿ ನಟಿ ರಾಧಿಕಾ ಅವರು ಭಾರತಿರಾಜ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವಾಗ, ಸಹಾಯಕ ನಿರ್ದೇಶಕರಾಗಿದ್ದ ಭಾಗ್ಯರಾಜ್ ಜೊತೆ ನಡುವೆ ನಡೆಯುತ್ತಿದ್ದ ಜಗಳವನ್ನು ನೆನಪಿಸಿಕೊಂಡರು. ಒಮ್ಮೆ ಭಾರತಿರಾಜರ ಬಳಿ ರಾಧಿಕಾ ದೂರು ಸಲ್ಲಿಸಿದಾಗ, ಭಾರತೀರಾಜ ಅವರು ‘’ ಮಗಳೇ, ನೀನು ಭಾಗ್ಯರಾಜನನ್ನು ಸಾಮಾನ್ಯ ಯುವಕ ಎಂದು ಕಡೆಗಣಿಸಬೇಡ. ನಟನೆಯ ಸಂದರ್ಭದಲ್ಲಿ ತಕ್ಷಣ ಹುಟ್ಟುವ ಸಂಭಾಷಣೆಗಳನ್ನು ಸೃಷ್ಟಿಸುವಲ್ಲಿ ಅವನು ಪ್ರತಿಭಾವಂತ. ಆತನ ಮಾತನ್ನು ಶ್ರದ್ಧೆಯಿಂದ ಕೇಳು’’ ಎಂದು ಬುದ್ದಿವಾದ ಹೇಳಿದ್ದರು.

ಇಂದಿಗೂ ಸಹ ತಮಿಳುಚಿತ್ರರಂಗದಲ್ಲಿ ಶ್ರೇಷ್ಟ ಚಿತ್ರಕಥೆ ಮತ್ತು ಸಂಭಾಷಣೆಗಾರ ಎಂದು ಅವರು ಹೆಸರಾಗಿದ್ದರು. ಕೆ.ಭಾಗ್ಯರಾಜ್ ನಟಿಸಿ, ನಿರ್ದೇಶನ ಮಾಡಿದ ಇಪ್ಪತ್ತೈದಕ್ಕೂ ಹೆಚ್ಚುಸಿನಿಮಾಗಳಲ್ಲಿ ಚಿತ್ರಕಥೆ ಅವರ ಸಿನಿಮಾಗಳ ಮೂಲಬಂಡವಾಳವಾಗಿತ್ತು. ಈರೋ್ಡ್ ಜಿಲ್ಲೆಯ ಹಾಗೂ ಕರ್ನಾಟಕ ಗಡಿಭಾಗದ ಗೋಪಿನಾಥಂ ಚೆಟ್ಟಿಪಾಳ್ಯಂ ಎಂಬ ಕಾಡುಗಳ್ಳ ವೀರಪ್ಪನ್ ಊರಿನ ಸಮೀಪದ ವೆಲ್ಲನ್ ಕೋವಿಲ್ ಎಂಬ ಸಾಮಾನ್ಯ ಗ್ರಾಮದಲ್ಲಿ 1953 ರಲ್ಲಿ ಜನಿಸಿದ ಕೆ.ಭಾಗ್ಯರಾಜ್, ಬಾಲ್ಯದಿಂದಲೂ ಸಿನಿಮಾ ಮತ್ತು ನಾಟಕಗಳ ಮೇಲೆ ಮೋಹ ಇದ್ದುದರಿಂದ 1970 ರ ದಶಕದಲ್ಲಿ ಚೆನ್ನೈನಗರಕ್ಕೆ ಆಗಮಿಸಿ, ಸಿನಿಮಾಗಳಿಗೆ ಸಂಭಾಷಣೆ ಬರೆಯುವುದರ ಮೂಲಕ ಬದುಕು ಕಟ್ಟಿಕೊಂಡರು. ಭಾರತೀರಾಜರವರು ಭಾಗ್ಯರಾಜ್ ಪಾಲಿಗೆ ಗುರುವಾಗಿ ತಮಿಳು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದರು.
1976 ರಲ್ಲಿ ಸುಧಾಕರ್ ನಾಯಕನಾಗಿ ಮತ್ತು ಸುಮತಿ ನಾಯಕಿಯಾಗಿ ನಟಿಸಿದ ಸುವರಿಲ್ಲಾದ ಚಿತ್ತಿರಂಗಳ್ ಎಂಬ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಸಣ್ಣ ಪಾತ್ರದಲ್ಲಿಯೂ ಭಾಗ್ಯರಾಜ್ ನಟಿಸುವುದರ ಮೂಲಕ ತಮಿಳು ಚಿತ್ರರಂಗದ ಗಮನ ಸೆಳೆದರು. ಈ ಸಿನಿಮಾವು ತೆಲುಗು ಭಾಷೆಗೆ ರಿಮೇಕ್ ಆದಾಗ, ಸುಧಾಕರ್ ಅವರನ್ನೇ ನಾಯಕರನ್ನಾಗಿ ಮಾಡಿಕೊಂಡು ನಿರ್ದೇಶನ ಮಾಡಿದ್ದರು. ಮುಂದಾನೈ ಮುಡಿಚ್ಚು ಎಂಬ ಸಿನಿಮಾವು ಕೆ. ಭಾಗರಾಜ್ ಅವರನ್ನು ಜನಪ್ರಿಯತೆಯ ಶಿಖರಕ್ಕೇರಿಸಿತು. ಹಳ್ಳಿಮೇಷ್ಟ್ರು ಹೆಸರಿನಲ್ಲಿ ಕನ್ನಡದಲ್ಲಿಯೂ ರಿಮೇಕ್ ಆಗಿರುವ ಈ ಸಿನಿಮಾಕ್ಕೆ ನೀನೇ ನಾಯಕನಾಗಿ ನಟಿಸು ಎಂದು ಭಾರತಿರಾಜ ಸಲಹೆ ನೀಡಿದ್ದರು.

ಗ್ರಾಮೀಣ ಕಥೆಗಳನ್ನು ದೃಶ್ಯಕ್ಕೆ ಅಳವಡಿಸುವಲ್ಲಿ ಅವರ ಗುರು ಭಾರತಿರಾಜ ನಿಸ್ಸಿಮರಾದರೆ, ಸಾಮಾಜಿಕವಾಗಿ ಗಂಭೀರವಾದ ಹಾಗೂ ಕುಟುಂಬದ ಸಮಸ್ಯೆಗಳನ್ನು ಲಘು ಹಾಸ್ಯದ ದಾಟಿಯಲ್ಲಿ ಹೇಳುವುದರಲ್ಲಿ ಶಿಷ್ಯ ಭಾಗ್ಯರಾಜ್ ಹೆಸರಾದರು. ಇವರ ದಾವುಣಿ ಕನವುಗಳ್, ಚಿನ್ನವೀಡು, ಅಂದ ಏಳ್ ನಾಟಕ್ಕಳ್ , ತೊರಲ್ ನಿನ್ನು ಪೊಚ್ಚು , ಮೌನ ಗೀತಂಗಳ್ ಇಂತಹ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ಹೊಸದಾಖಲೆ ಬರೆದವು. ಎಂ.ಜಿ.ಆರ್. ಶಿವಾಜಿಗಣೇಶನ್, ಕಮಲ್ ಹಾಸನ್ , ರಜನಿಕಾಂತ್ ರಂತಹ ಜನಪ್ರಿಯ ನಟರ ಮೇಲೆ ಅವಲಂಬಿತವಾಗಿ ತಮಿಳು ಸಿನಿಮಾರಂಗಕ್ಕೆ, ನಟರಿಗಿಂತ ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಮುಖ್ಯ ಎಂದು ಕೆ.ಭಾಗ್ಯರಾಜ್ ತೋರಿಸಿಕೊಟ್ಟರು.

ಭಾಗ್ಯರಾಜ್ ಪರಂಪರೆಯನ್ನು ನಟನೆ ಮತ್ತು ನಿರ್ದೇನದ ಮೂಲಕ ಚೇರನ್ ಮತ್ತು ಆರ್. ಪಾರ್ಥಿಭನ್ ಮುಂದಿನ ದಿನಗಳಲ್ಲಿ ತೋರಿಸಿಕೊಟ್ಟರು. ಭಾಗ್ಯರಾಜ್ ಅವರಿಂದ ಪ್ರಭಾವಿತರಾಗಿ ತಮಿಳುನಾಡಿನ ಅಂದಿನ ಯಶಸ್ವಿ ನಾಟಕಕಾರ ವಿಶು ಎಂಬುವರು ಸಹ ಅನೇಕ ನಾಟಕಗಳನ್ನು ಸಿನಿಮಾಗಳನ್ನಾಗಿ ಪರಿವರ್ತಿಸಿ, ನಟಿಸಿ, ನಿರ್ದೇಶನ ಮಾಡುವುದರ ಮೂಲಕ ಯಶಸ್ವಿಯಾಗಿದ್ದರು.

ಕೆ.ಭಾಗ್ಯರಾಜ್ ತಂದೆಯಾಗಿ ನಟಿಸಿದ ಹಾಗೂ 2011 ರಲ್ಲಿ ಬಿಡುಗಡೆಯಾದ ವಾಂಗೈ ಸೂಡ ವಾ ಎಂಬ ಸಿನಿಮಾವನ್ನು ನಾನು ಕಡೆಯ ಬಾರಿಗೆ ನೊಡಿದ್ದೆ. ವಿಮಲ್ ಎಂಬ ನಟ ನಾಯಕನಾಗಿ ನಟಿಸುರುವ ಈ ಸಿನಿಮಾವು ತನ್ನ ಶ್ರೇಷ್ಠ ಕಥೆಯಿಂದಾಗಿ ಎಂಟು ಅಂತರಾಷ್ಟ್ರೀಯ ಚಿತ್ರೊತ್ಸವಗಳ ಪ್ರಶಸ್ತಿಗಳ ಜೊತೆಗೆ ಶ್ರೇಷ್ಠ ತಮಿಳು ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಮತ್ತು ನಾಲ್ಕು ಸ್ಥಳೀಯ ಫಿಲಂ ಪೇರ್ ಪ್ರಶಸ್ತಿಗಳನ್ನು ಪಡೆಯಿತು. ಕೆ.ಭಾಗ್ಯರಾಜ್ ಅವರಿಂದ ಪ್ರಭಾವಿತನಾಗಿದ್ದ ಕೆ.ಶರಕುನಮ್ ಎಂಬಾತ ನಿರ್ದೇಶಿಸಿದ ಈ ಸಿನಿಮಾದಲ್ಲಿ ಶಾಲಾಶಿಕ್ಷಕನಾಗಿ ದೂರದ ಹಳ್ಳಿಗಾಡಿನಲ್ಲಿ ಸರ್ಕಾರಿ ಹುದ್ದೆ ದೊರೆತಾಗ, ಹೋಗಲು ಹಿಂದೇಟು ಹಾಕುವ ಪುತ್ರನಿಗೆ ತಂದೆ ಬುದ್ದಿವಾದ ಹೇಳಿ ಕಳಿಸಿಕೊಡುತ್ತಾನೆ.

ಒಂದು ರೀತಿಯಲ್ಲಿ ಸ್ಮಶಾನದಂತಿರುವ ಬೆಂಗಾಡಿನಂತಹ ಆ ಊರಿನಲ್ಲಿ ಧಾಖಲೆಗಳಲ್ಲಿ ಮಾತ್ರ ಶಾಲೆ ಇರುತ್ತದೆ. ಕುಡಿಯುವ ನೀರಿಲ್ಲದೆ, ನಿಲ್ಲಲು ಹಸಿರು ಮರಗಳಿಲ್ಲದ ಅನಕ್ಷರಸ್ಥರ ಆ ಊರಿನಲ್ಲಿ ಬಹುತೇಕ ಮಂದಿ ಇಟ್ಟಿಗೆ ತಯಾರಿಸುವ ಕೂಲಿಯಾಳುಗಳಾಗಿ ಜೀವಿಸುವ ಕಾಯಕದಲ್ಲಿರುತ್ತಾರೆ. ಅವರ ಮಕ್ಕಳು ಶಾಲೆಗೆ ಹೋದರೆ, ದುಡಿಯುವ ಕೂಲಿ ಹಣ ಕಡಿಮೆಯಾಗುತ್ತೆ ಎಂಬ ಆತಂಕ. ಇಂತಹ ಊರಿನಲ್ಲಿ ಶಿಕ್ಷಕನಾಗಿ ಯಶಸ್ವಿಯಾಗುವ ಯುವಕನಿಗೆ ಸ್ಪೂರ್ತಿಯಾಗುವ ತಂದೆಯ ಪಾತ್ರದಲ್ಲಿ ಕೆ.ಭಾಗ್ಯರಾಜ್ ಅಭಿನಯಿಸಿದ್ದರು.

ಭಾಗ್ಯರಾಜ್, ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಇತರೆ ನಿರ್ದೇಶಕರ ಅಡಿಯಲ್ಲಿಯೂ ನಟಿಸಿದ್ದರು. ಭಾಗ್ಯ ಎಂಬ ವಾರಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ತಮಿಳು ನಟರ ಹುಚ್ಚು ಹವ್ಯಾಸಗಳಲ್ಲಿ ಒಂದಾದ ರಾಜಕೀಯ ರಂಗಕ್ಕೆ ಇಳಿದು ಮೊದಲಿಗೆ ಎ.ಐ.ಡಿ.ಎಂ.ಕೆ ನಂತರ ಡಿ.ಎಂ.ಕೆ. ಪಕ್ಷದಲ್ಲಿ ಗುರುತಿಸಿಕೊಂಡು, ಇದು ನನ್ನ ಕ್ಷೇತ್ರವಲ್ಲ ಎಂದು ಮನದಟ್ಟಾದ ನಂತರ ತಮಿಳು ಸಿನಿಮಾ ಚಾನಲ್ ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನೆಮ್ಮದಿಯ ಬದುಕು ಕಟ್ಟಿಕೊಂಡು, ಸಿನಿಮಾ ನಿರ್ಮಾಣದ ಬಗ್ಗೆ ಯುವ ತಲೆಮಾರಿಗೆ ಸ್ಪೂರ್ತಿಯಾಗಿದ್ದ ಭಾಗ್ಯರಾಜ್ ಅನಿರೀಕ್ಷಿತವಾಗಿ ನಮ್ಮನ್ನು ಅಗಲಿದ್ದಾರೆ
, ಎಂ.ಜಿ.ಆರ್ ಮತ್ತು ಶಿವಾಜಿಗಣೇಶನ್ ಅವರಂತಹ ಮಹಾನ್ ನಾಯಕರ ಎದುರು ಖಳನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದ ನಂಬಿಯಾರ್ ಎಂಬ ಹಿರಿಯ ನಟರನ್ನು ಮನವೊಲಿಸಿ, ದಾವುಣಿ ಕನವು ಗಳ್ ಚಿತ್ರದಲ್ಲಿ ಹಾಸ್ಯನಟನನ್ನಾಗಿ ಇವರು ಪರಿವರ್ತಿಸಿದ್ದರು.

ತಮಿಳು ಸಿನಿಮಾ ರಂಗಕ್ಕೆ ಹೊಸ ಇತಿಹಾಸದ ಅಧ್ಯಾಯ ಬರೆದ ಗುರು ಶಿಷ್ಯರನ್ನು ಕಳೆದುಕೊಂಡ ತಮಿಳುನಾಡು ಸಾಂಸ್ಕೃತಿಕ ಲೋಕ ನಿಜಕ್ಕೂ ಬಡವಾಯಿತು.

ಶುಕ್ರವಾರ, ಜೂನ್ 26, 2026

ಪತುರಕರುತ ಮುತುನ ರತುನಗಳಿಗೆ ಒಂದಿಷ್ಟು ಪ್ರಶ್ನೆಗಳು.

 


ಅಯ್ಯಾ ಕಾಮಿಡಿ ಪೀಸುಗಳಿರಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ ಪ್ರಿಯಾಂಕ ಖರ್ಗೆ ಇಬ್ಬರೂ ಆರ್.ಎಸ್.ಎಸ್. ಮೇಲೆ ಮುಗಿಬಿದ್ದ ಕಾರಣದಿಂದ ರಾಷ್ಟ್ರೀಯ ಬಿ.ಜೆ.ಪಿ. ಪದಾಧಿಕಾರಿಗಳು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.
ಖರ್ಗೆ ಕುಟುಂಬವು, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ಸರ್ಕಾರದಿಂದ ನೂರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಪಡೆದಿದೆ ಎಂಬ ಸುದ್ದಿಯನ್ನು ಅತ್ಯಂತ ಶ್ರದ್ಧೆಯಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದೀರಿ. ಅದು ಕರ್ತವ್ಯ ಕೂಡಾ ಹೌದು.
ಇದನ್ನು ಪ್ರಶ್ನಿಸಲು, ಕಾಂಗ್ರೆಸ್ ಪಕ್ಷದ ಖಾಲಿ ತಲೆಗಳಿಗೆ ಮಿದುಳು, ಬುದ್ದಿ ಎರಡೂ ಇಲ್ಲ. ಆದರೆ, ನಿಮ್ಮ ಬುದ್ದಿ ಎಲ್ಲಿ ಹೋಗಿತ್ತು? ಕತ್ತೆ ಕಾಯಲಿಕ್ಕೆ ಹೋಗಿತ್ತಾ? ಸುದ್ದಿಗೋಷ್ಟಿಯಲ್ಲಿ ಬೊಗಳಿದ್ದನ್ನು ಚಾಚೂ ತಪ್ಪದೆ ಬರೆಯುವುದು ಪತ್ರಿಕೋದ್ಯಮವೆ?
ಬಿ.ಎಸ್.ಯಡಿಯೂಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ಆಳ್ವಿಕೆಯ ಅವಧಿಯಲ್ಲಿ, ಬೆಂಗಳೂರು- ಮಾಗಡಿ ರಸ್ತೆಯ ಚನ್ನಸಂದ್ರದಲ್ಲಿ ಇರುವ ಆರ್.ಎಸ್.ಎಸ್. ವಿದ್ಯಾಸಂಸ್ಥೆಗೆ ಹೆಸರುಘಟ್ಟ ಬಳಿ ಹಾಗೂ ಧಾರವಾಡದ ಗರಗ ಬಳಿ ಇರುವ ಶಿಕ್ಷಣ ಸಂಸ್ಥೆಗೆ ಧಾರವಾಡ ಹೊರ ವಲಯದಲ್ಲಿ ನೂರಾರು ಕೋಟೆ ಬೆಲೆ ಬಾಳುವ ಭೂಮಿ ನೀಡಿದ್ದು ಅಕ್ರಮ ಅಲ್ಲವೆ? ಎಂದು ಸುದ್ದಿಗೋಷ್ಟಿಯಲ್ಲಿ ನೀವು ಪ್ರಶ್ನೆ ಕೇಳಬಹುದಿತ್ತಲ್ಲವೆ? ಅಥವಾ ವರದಿಯನ್ನು ಪ್ರಕಟಿಸುವಾಗ, ಬಿ.ಜೆ.ಪಿ. ಸರ್ಕಾರದ ಈ ಪ್ರಕರಣಗಳನ್ನು ಕೊನೆಯಲ್ಲಿ ಟಿಪ್ಪಣಿ ರೂಪದಲ್ಲಿ ಬರೆಯ ಬಹುದಿತ್ತಲ್ಲವೆ?
ಇದು ರಾಜ್ಯದ ಸುದ್ದಿಯಾಯಿತು. ರಾಷ್ಟ್ರ ಮಟ್ಟದಲ್ಲಿ ಡೋಂಗಿ ಸಾಧಕ ರಾಮದೇವ್ ಎಂಬ ಯೋಗ ಗುರುವಿಗೆ ಉತ್ತರಖಾಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಪತಾಂಜಲಿ ಎಂಬ ಗೊಬ್ಬರದ ಉತ್ಪಾದನೆಗೆ ಬಿ.ಜಿ ಪಿ.ಸರ್ಕಾರ ಇರುವ ರಾಜ್ಯಗಳು ನೀಡಿರುವುದು ತಪ್ಪಲ್ಲವೆ? ಇದು ಅಕ್ರಮವಲ್ಲವೆ? ಎಂಬ ಪ್ರಶ್ನೆಯನ್ನು ನೀವು ಕೇಳಿದ್ದರೆ, ಸುದ್ದಿಗೋಷ್ಟಿಯಲ್ಲಿದ್ದ ನಾಯಕರ ಚೆಡ್ಡಿಯೊಳಗೆ ಬೋಂಡಾ, ಸಾಂಬಾರ್ ಚೆಲ್ಲಾಡುತ್ತಿತ್ತು.
ನಿಮ್ಮ ನಿಷ್ದೆ ಮತ್ತು ದೇಶಭಕ್ತಿ ಎಲ್ಲವನ್ನೂ ಗಮನಿಸುತ್ತಿರುವ ನನಗೆ, ನಿಮಗಾಗಿ, ಹರೇ ರಾಮ, ಹರೇ ಕೃಷ್ಣ ಸಂಘದ ಮಾದರಿಯಲ್ಲಿ ಹರೇ ಮೋದಿ, ಹರೇ ಶಾ ಎಂಬ ಸಂಘವನ್ನು ಕಟ್ಟಿಕೊಡಬೇಕು ಎಂದು ಆಸೆಯಾಗುತ್ತಿದೆ.
ಭಜನೆಗೆ‌ ನಾನೇ ಹಾಡುಗಳನ್ನು ಬರೆದು, ಅವುಗಳಿಗೆ ಕಥಕ್ಕಳಿ, ಮೋಹಿನಿಯಾಟ್ಟಂ, ಭರತನಾಟ್ಯ, ಕೂಚುಪುಡಿ, ಕಥಕ್ ನೃತ್ಯವನ್ನು ಅಳವಡಿಸಿ, ನಿಮಗೆ ತರಬೇತು ನೀಡಿದರೆ, ಇಡೀ ಜಗತ್ತಿನಲ್ಲಿ ಭಾರತದ ಪತ್ರಿಕೋದ್ಯಮವನ್ನು ಮುಗಿಲೆತ್ತರಕ್ಕೆ ನೀವು ಮುಟ್ಟಿಸಬಲ್ಲಿರಿ.
ಹೌದಲ್ಲವೆ?

ಮಹಾತ್ಮನ ಭಾರತ ಮತ್ತು ಇಂದಿನ ಮೋದಿಯ ಭಾರತ

 


ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಇಬ್ಬರು ಉದ್ಯಮಿಗಳು ಮಹಾತ್ಮನ ಬೆಂಗಲಿಗರಾಗಿ, ಸೇವಕರಾಗಿ ಜೀವನ ಪೂರ್ತಿ ನಿಂತದ್ದನ್ನು ಗಮನಿಸಿದರೆ ಆಶ್ಚರ್ಯ ವಾಗುತ್ತದೆ.
ವ್ಯಾಪಾರ ಮತ್ತು ಉದ್ದಿಮೆಗಳ ಜೊತೆ ಲಾಭವನ್ನು ಗುರಿಯಾಗಿಸಿಕೊಂಡ ಈ ವ್ಯಕ್ತಿಗಳ ಮೇಲೆ ಪರಿಣಾಮ ಬೀರಿದ ಮಹಾತ್ಮನ ಪ್ರಭಾವ ಎಂತಹದ್ದು ಎಂಬುದನ್ನು ಕೊಲ್ಕತ್ತಾ ನಗರದ ಜಿ.ಡಿ. ಬಿರ್ಲಾ ಮತ್ತು ವಾರ್ಧಾ ಮೂಲದ ಜಮ್ನಾಲಾಲ್ ಬಜಾಜ್ ಅವರ ಸೇವೆಯನ್ನು ನಾವು ಗಮನಿಸಬೇಕು.
ಗುಡಿ ಕೈಗಾರಿಕೆಗಳ ತರಬೇತಿ ಕೇಂದ್ರ ಮತ್ತು ಗ್ರಾಮ ಭಾರತದ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಲು ಸೇವಾ ಗ್ರಾಮ ಸ್ಥಾಪಿಸಲು ಮಧ್ಯಭಾರತದ ನಾಗಪುರದಿಂದ ಅರವತ್ತು ಕಿಲೊಮೇಟರ್ ದೂರದ ವಾರ್ಧಾನಗರವನ್ನು ಗಾಂಧೀಜಿಯವರು ಆಯ್ಕೆ ಮಾಡಿಕೊಂಡಾಗ, ಅವರು ಕೇಳಿದಷ್ಟು ಭೂಮಿ, ಹಣ, ಮತ್ತು ಮೂಲಭೂತ ಸೌಕರ್ಯವನ್ನು ಜಮ್ನಾಲಾಲ್ ಬಜಾಜ್ ಒದಗಿಸಿಕೊಟ್ಟರು.
ಆರಂಭದಲ್ಲಿ ವಾರ್ಧಾ ನಗರದಲ್ಲಿ ಗುಡಿಕೈಗಾರಿಕೆಗಳ ತರಬೇತಿ ಕೇಂದ್ರವು ಜೆ.ಸಿ.ಕುಮಾರಪ್ಪನವರ ನೇತೃತ್ವದಲ್ಲಿ ಆರಂಭವಾಯಿತು. ನಂತರ ವಾರ್ಧಾದಿಂದ ಎಂಟು ಕಿಲೊಮೀಟರ್ ದೂರದ ಹಳ್ಳಿಯಲ್ಲಿ ಸೇವಾಗ್ರಾಮ ಮತ್ತು ನಯಾ ತಾಲೀಮ್ ಹೆಸರಿನಲ್ಲಿ ನೂತನ ಶಿಕ್ಷಣ ಶಾಲೆ ಆರಂಭವಾದವು.
ಇಂದು ದೊಡ್ಡ ನಗರ ಹಾಗೂ ಜಿಲ್ಲಾ ಕೇಂದ್ರವಾಗಿ ಬೆಳೆದಿರುವ ವಾರ್ಧಾ ನಗರದಲ್ಲಿ ರಾಷ್ಟ್ರೀಯ ಹೈನುಗಾರಿಕೆ ಕೇಂದ್ರ,ಮತ್ತು ದೆಹಲಿಯ ಐ.ಐ.ಟಿ. ಸಂಸ್ಥೆಯ ಒಡೆತನದಲ್ಲಿ ಇರುವ ಸಣ್ಣ ಮತ್ತು ಗುಡಿ ಕೈಗಾರಿಕೆಯ ಕೇಂದ್ರದ ವಿಸ್ತೀರ್ಣ ಸುಮಾರು ಅರವತ್ತು ಎಕರೆಗೂ ಮಿಗಿಲಾಗಿದೆ. ಇವೆಲ್ಲವೂ ಗಾಂಧಿ ಸ್ಥಾಪುಸಿದ ಸಂಸ್ಥೆಗಳು.
ಅದೇ ರೀತಿ ಸೇವಾಗ್ರಾಮಕ್ಕೆ ಹೋಗುವಾಗ, ಮಹಾತ್ಮಗಾಂಧಿ ಆಸ್ಪತ್ರೆ, ಕಸ್ತೂರಬಾ ನರ್ಸಿಂಗ್ ಕಾಲೇಜ್ ಮತ್ತು ಹಾಸ್ಟಲ್ ಪ್ರದೇಶ ಮುವತ್ತು ಎಕರೆಗಿಂತ ದೊಡ್ಡದಾಗಿದೆ. ಸೇವಾಗ್ರಾಮ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ನಯಾ ತಾಲೀಮ್ ಶಿಕ್ಣಣ ಹತ್ತು ಎಕರೆ ಒಳಗೊಂಡಿದೆ. ಇವೆಲ್ಲವನ್ನು ಉಚಿತವಾಗಿ ನೀಡಿದ ಜಮ್ನಾಲಾಲ್ ಬಜಾಜ್ ಅವರ ನಿವಾಸದ ಬಳಿ ಹೋಗಿ ಅವರ ಭಾವಚಿತ್ರಕ್ಕೆ ತಲೆ ಬಾಗಿ ನಮಿಸಿ ಬಂದಿದ್ದೆ.( ಟೋಪಿ ಧರಿಸಿರುವವರು) ಇವರ ಕುರಿತು ನನ್ನ ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ಸವಿವರವಾಗಿ ಒಂದು ಅಧ್ಯಾಯವನ್ನು ಬರೆದಿದ್ದೀನಿ.

ಕೊಲ್ಕತ್ತಾ ಮೂಲದ ಜಿ.ಡಿ. ಬಿರ್ಲಾರವರು ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಕಾಂಗ್ರೇಸ್ ಸಮಿತಿಗೆ ಆರ್ಥಿಕವಾಗಿ ಆಧಾರ ಸ್ಥಂಭವಾಗಿದ್ದರು ಕಾಂಗ್ರೇಸ್ ಅಧಿವೇಶನದ ವೆಚ್ಚವನ್ನು ಭರಿಸುತ್ತಿದ್ದರು.. ಶಾಂತಿ ನಿಕೇತನದಲ್ಲಿ ವಿಶ್ವ ವಿದ್ಯಾನಿಲಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ರವೀಂದ್ರನಾಥ್ ಟ್ಯಾಗೂರ್, ಒಮ್ಮೆ ಆರ್ಥಿಕವಾಗಿ ಕಷ್ಟದಲ್ಲಿದ್ದರು.
ಗಾಂಧೀಜಿಯವರು ಟ್ಯಾಗೋರ್ ಗೆ ಐದು ಸಾವಿರ ನೆರವು ನೀಡಿ ಎಂದು ಹೇಳಿದಾಕ್ಷಣ, ಜಿ.ಡಿ. ಬಿರ್ಲಾರವರು, ಟ್ಯಾಗೂರ್ ಅವರಿಗೆ ನಲವತ್ತೈದು ಸಾವಿರ ಹಣವನ್ನು ನೀಡಿ, ಇದನ್ನು ಮಹಾತ್ಮರು ಸಾರ್ವಜನಿಕವಾಗಿ ಸಂಗ್ರಹಿಸಿ, ನನ್ನ ಮುಖಾಂತರ ನಿಮಗೆ ಕಳಿಸಿಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು.
ನೌಖಾಲಿ ಪ್ರದೇಶದ ಕೋಮು ಗಲಭೆ ನಿಯಂತ್ರಿಸಲು ಗಾಂಧೀಜಿಯವರು ನಾಲ್ಕು ತಿಂಗಳ ಕಾಲ ಅಲ್ಲಿ ಪಾದಯಾತ್ರೆ ಮಾಡಿದಾಗ, ಗಾಂಧಿ ಮತ್ತು ಸಂಗಡಿಗರಿಗೆ ಪ್ರತಿ ಹಳ್ಳಿಗಳಲ್ಲಿ ನೆಲೆಸಲು ತಾತ್ಕಾಲಿಕ ಗುಡಾರಗಳು, ಆಹಾರದ ವ್ಯವಸ್ಥೆ ಮತ್ತು ಗಾಂಧೀಜಿಯವರಿಗೆ ಕಿತ್ತಲೆ, ದ್ರಾಕ್ಷಿ, ಹಾಲು, ಮೊಸರು , ಸರಬರಾಜು ಮಾಡುವುದರ ಜೊತೆಗೆ ಸಾಮಾನುಗಳನ್ನು ಹಳ್ಳಿಯಿಂದ ಹಳ್ಳಿಗೆ ಸಾಗಿಸಲು ಸೇವಕರ ವ್ಯವಸ್ಥೆ ಮಾಡಿದ್ದರು.
ಗಲಭೆಯಲ್ಲಿ ನೊಂದವರ ಕುಟುಂಬಕ್ಕೆ ನೆರವಾಗುವ ದೃಷ್ಡಿಯಿಂದ ಗಾಂಧೀಜಿಯವರು ನಿಧಿಯೊಂದನ್ನು ಸ್ಥಾಪಿಸಿದಾಗ, ತಮ್ಮ ಉದ್ದಿಮೆಗಳ ಎಲ್ಲಾ ನೌಕರರಿಂದ ಹಣವನ್ನು ಸಂಗ್ರಹಿಸಿ, ಎರಡೂವರೆ ಸಾವಿರ ಹಣವನ್ನು ನಿಧಿಗೆ ನೀಡಿದ್ದರು.
ಕೊಲ್ಕತ್ತ ನಗರದಲ್ಲಿ ತಾವು ವಾಸಿಸುತ್ತಿದ್ದ ಅರಮನೆಯಂತಹ ಬೃಹತ್ ಬಂಗಲೆಯನ್ನು ಸ್ವಾತಂತ್ರ್ಯಾನಂತರ, ಕೇಂದ್ರ ಸರ್ಕಾರಕ್ಕೆ ದಾನ ಮಾಡಿ, ಈ ಮನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮ್ಯೂಸಿಯಂ ಮಾಡಲು ನೆರವಾದರು.
ಇಂತಹ ಮಹನೀಯರು ಗಾಂಧಿ ಮಹಾತ್ಮನ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಸೇವೆ ಕೂಡ ದೇಶ ಸೇವೆ ಎಂದು ನಂಬಿಕೊಂಡಿದ್ದರು.

ಈಗ ಮೋದಿ ಮಹಾತ್ನನ ಪ್ರಭಾವದಿಂದ ಅದಾನಿ ಮತ್ತು ಅಂಬಾನಿ ಇಬ್ಬರೂ ದೇಶದ ತೈಲ ಉದ್ದಿಮೆ, ಕಲ್ಲಿದ್ದಲು ಘಟಕಗಳು ಒಳಗೊಂಡಂತೆ, ಇಡೀ ಭಾರತದ ಬಂದರು, ವಿಮಾನ ನಿಲ್ದಣಗಳನ್ನು ತಮ್ಮ ವಶಕ್ಕೆ ಪಡೆದು ದೇಶ ಸೇವೆ ಮಾಡುತ್ತಿದ್ದಾರೆ. ಈಗ ಸಧ್ಯಕ್ಕೆ ಉಳಿದಿರುವುದು ದೆಹಲಿಯ ರಾಷ್ಟ್ರಪತಿ ಭವನ ಮತ್ತು ಹಳೆಯ ಪಾರ್ಲಿಮೆಂಟ್ ಭವನಗಳು ಮಾತ್ರ.
ಇವೆರೆಡೂ ಕಟ್ಟಡಗಳು ಮೋದಿ‌ ಮಹಾತ್ಮನ ಕೃಪೆಯಿಂದ ಅದಾನಿ ಅಥವಾ ಅಂಭಾನಿ ಒಡೆತನದಲ್ಲಿ ಪಂಚತಾರಾ ಹೋಟೆಲ್ ಗಳಾಗುವ ದಿನಗಳು ದೂರವಿಲ್ಲ.
ಕೊನೆಯ ಚಿತ್ರ, ಈಗ ಮ್ಯೂಸಿಯಂ ಆಗಿರುವ ಬಿರ್ಲಾ ನಿವಾಸ.

ಗುರುವಾರ, ಜೂನ್ 11, 2026

ಅಭಿವೃದ್ಧಿಯ ಅರ್ಥಶಾಸ್ತ್ರಜ್ಞ ಜೀನ್ ಡೇಕ್ ಅವರ ಭಾರತದ ಅಸಮಾನತೆಯ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಗೌರವ.

 


ಬೆಲ್ಜಿಯಂ ಮೂಲದ ಜೀನ್ ಡೇಕ್ ಅವರು, ಅಭಿವೃದ್ಧಿಯ ಅಥವಾ ಕಲ್ಯಾಣ ಅರ್ಥಶಾಸ್ತ್ರದಲ್ಲಿ( Welfare Econamics ) ಇಂಗ್ಲೆಂಡಿನಲ್ಲಿ ಡಾಕ್ಟರೇಟ್ ಪದವಿ ಪಡೆದು, ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಚಿಂತನೆಗಳಿಂದ ಪ್ರಭಾವಿತರಾದವರು. ಹಾಗಾಗಿ 1977 ರಲ್ಲಿ ಭಾರತಕ್ಕೆ ಆಗಮಿಸಿದ ಇವರು, 2002 ರಲ್ಲಿ ಭಾರತೀಯ ಪೌರತ್ವ ಸ್ವೀಕರಿಸಿ, ಇಂದಿನ ಜಾರ್ಖಂಡ್ ರಾಜ್ಯದ ರಾಂಚಿ ನಗರದಲ್ಲಿ ವಾಸವಾಗಿದ್ದಾರೆ.
ಇಂಗ್ಲೇಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಭಾರತದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿರುವ ಜೀನ್ ಡ್ರೇಜ್ ಇದೀಗ, ರಾಂಚಿ. ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯರ ಬಡತನಕ್ಕೆ ಮೂಲ ಕಾರಣವಾದ, ಇಲ್ಲಿನ ಶ್ರೇಣಿಕೃತ ಸಮಾಜ, ಜಾತಿ ಮತ್ತು ಲಿಂಗ ಅಸಮಾನತೆ. ಆಹಾರ ಪಡಿತರ ವ್ಯವಸ್ಥೆಯ ದೋಷಗಳು ಮತ್ತು ಗ್ರಾಮೀಣ ಉದ್ಯೋಗ ಯೋಜನೆಗಳ ವೈಫಲ್ಯಗಳ ಕುರಿತು ನಿರಂತರವಾಗಿ ಅಧ್ಯಯನ ಮಾಡುತ್ತಾ, ದೇಶದ ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ.
ಪ್ರಧಾನಿಯಾಗಿದ್ದ ಡಾ. ಮನ್ ಮಹೋನ್ ಸಿಂಗ್ ಅವರ ಆಳ್ವಿಕೆಯಲ್ಲಿ ರಾಷ್ಟ್ರೀಯ ಸಲಹೆಗಾರರ ಸಮಿತಿಯ ಸದಸ್ಯರಾಗಿದ್ದ ಜೀನ್ ಡ್ರೇಜ್, ಮನೆರೇಗಾ ಎಂದು ಕರೆಯುತ್ತಿದ್ದ ಗ್ರಾಮೀಣ ಉದ್ಯೋಗ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ತಮ್ಮ ನಿಷ್ಟುರ ಚಿಂತನೆಗಳಿಂದ ಕಳೆದ ಹನ್ನೆರಡು ವರ್ಷಗಳಿಂದ ಇಂದಿನ ಕೇಂದ್ರ ಸರ್ಕಾರದ ಪಾಲಿಗೆ ದೇಶ ದ್ರೋಹಿಯಾಗಿದ್ದಾರೆ. ಅವರಿಗೆ ಭಾರತೀಯ ಪೌರತ್ವ ಇಲ್ಲದಿದ್ದರೆ, ಈ ವೇಳೆಗೆ ಅವರನ್ನು ದೇಶದಿಂದ ಹೊರದಬ್ಬಲಾಗುತ್ತಿತ್ತು.
ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿ ಮತ್ತು ಸಂಶೋಧಕನಾಗಿ ನಾನು ಕಂಡುಕೊಂಡ ಸತ್ಯವೇಂದರೆ, ಕಣ್ಣ ಮುಂದಿನ ವಾಸ್ತವ ಸಂಗತಿಗಳನ್ನು ಮರೆಮಾಚಲು ಯಾವುದೇ ಅರ್ಥಶಾಸ್ತ್ರಜ್ಞನಿಗೆ ಮರೆ ಮಾಚಲು ಸಾಧ್ಯವಾಗುವುದಿಲ್ಲ. ಹೂಸನ್ನು ಪರಿಮಳ ಎಂದು ಬಣ್ಣಿಸುವುದು ಅರ್ಥಶಾಸ್ತ್ರಜ್ಞರ ಕರ್ತವ್ಯವಲ್ಲ. ಇಂತಹ ಕೆಲಸಗಳಿಗೆ ಅವರ ಮನಸಾಕ್ಷಿ ಒಪ್ಪುವುದಿಲ್ಲ.

ಈ ಕಾರಣದಿಂದ, ದೇಶದ ಅನೇಕ ಜನಪರ ಚಳುವಳಿಗಳ ಜೊತೆ ಗುರುತಿಸಿಕೊಂಡಿರುವ ಡ್ರೇಜ್, ಆಹಾರ ಪಡಿತರ ವ್ಯವಸ್ಥೆಗೆ ಆಧಾರ್ ಕಡ್ಡಾಯ ಮಾಡಿದಾಗ ಪ್ರಭಲವಾಗಿ ವಿರೋಧಿಸಿದರು. ಹಲವಾರು ಬಾರಿ ಬಂಧನಕ್ಕೆ ಒಳಗಾಗಿದ್ದರು. ಸದಾ ಸೈಕಲ್ ನಲ್ಲಿ ಓಡಾಡುವ ಇವರು ದೂರದ ಕಾಡಂಚಿನ ಊರಿಗೆ ಮೊಟಾರ್ ಬೈಕ್ ನಲ್ಲಿ ಹೋಗುವಾಗ ರಾಂಚಿ ಪೊಲೀಸರು ಇವರ ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಬಿಡುಗಡೆಗೆ ಐನೂರು ರೂಪಾಯಿ ಲಂಚ ಕೇಳಿದಾಗ, ಜೀನ್ ಡ್ರೇಜ್ ಈ ಸಂಗತಿಯನ್ನ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು.
ಇವರು ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞ ಎಂದು ಅರಿತುಕೊಂಡಿರುವ ಜಾರ್ಖಂಡ್ ರಾಜ್ಯದ ಪೊಲೀಸರು ಈಗ ಡ್ರೇಜ್ ಹತ್ತಿರ ಸುಳಿಯುವುದಿಲ್ಲ. ಕಳೆದವಾರ ಜೂನ್ 5 ರಂದು ಪ್ರಾರಿಸ್ ಸ್ಕೂಲ್ ಆಫ್ ಎಕನಾಮಿಸ್ಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಾಗತಿಕ ಅಸಮಾನತೆಯ ಕುರಿತ ಸಮಾವೇಶದಲ್ಲಿ ಇವರಿಗೆ ಬಡತನ ಮತ್ತು ಅಸಮಾನತೆಯ ಕುರಿತು ನಡೆಸಿದ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಯಾವುದೇ ಹಣದ ಪ್ರಶಸ್ತಿಯಾಗಿರದೆ, ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞನನ್ನು ಗೌರವಿಸುವ ಸಂಪ್ರದಾಯವಾಗಿದೆ. ಆದರೆ, ನಮ್ಮ ಗೊದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ.

ಜೀನ್ ಡ್ರೇಜ್ ಅವರು ಅಮಾರ್ತ್ಯಸೇನ್ ಜೊತೆಗೂಡಿ ರಚಿಸಿರುವ ಇಂಡಿಯಾ; ಡೆವಲಪ್ ಮೆಂಟ್ ಕೃತಿಯಲ್ಲದೆ, ಸ್ವತಃ ಅಧ್ಯಯನ ಮಾಡಿರುವ ಸೆನ್ಸ್ ಅಂಡ್ ಸಾಲಿಡಾರಿಟಿ ಹಾಗೂ ಹ್ಯಾನ್ ಅನ್ ಸರ್ಟೈನ್ ಗ್ಲೋರಿ; ಇಂಡಿಯಾ ಅಟ್ ಕನ್ಟ್ರಾಡ್ರಿಕ್ಷನ್ ಈ ಮೂರು ಕೃತಿಗಳು ನಾವು ನೋಡುತ್ತಿರುವ ಭಾರತ ಮತ್ತು ಗ್ರಹಿಸಬೇಕಾದ ಭಾರತದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತವೆ.

ಸಧ್ಯದಲ್ಲೇ ಜೀನ್ ಡ್ರೇಜ್ ಅವರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಿಗಲಿದೆ ಎಂಬ ವಿಶ್ವಾಸ ನನಗಿದೆ.
ಜಗದೀಶ್ ಕೊಪ್ಪ. ಮೈಸೂರು.